01601. ಬರೆದು ಮುಗಿಯದ ಕಾವ್ಯ..


01601. ಬರೆದು ಮುಗಿಯದ ಕಾವ್ಯ..

__________________________________

ಏನೊ ಕಕ್ಕುತೈತೆ, ಕಣ್ಣಾಳದ ನೋಟ

ಬಿಕ್ಕಿ ಬಿಕ್ಕೀ ಅತ್ತಂಗೆ, ಕನ್ನೆ ಮುಖ ಪುಟ

ಕಪ್ಪು ಚುಕ್ಕಿ ಹಣೆಮ್ಯಾಗೆ, ಪೂರ್ಣಚಂದ್ರ

ಚುಕ್ಕಿಚುಕ್ಕಿ ವೇದನೆ, ಚುಚ್ಚಿಕೊಂಡ ಲಾಂದ್ರ ||

ಕಳುವಾಗೈತೇನೊ ಪಾಪ, ಕಕ್ಕುಲತೆ ಬೇನೆ

ಕಾಡೈತೆ ಬಿಡದೆ, ಹೇಳಲಾಗದ ಶೋಧನೆ

ಏನದವ್ವಾ ಬಾಯ್ಬಿಡದ, ಅನಿವಾರ್ಯ ಮೌನ ?

ಯಾಕೆ ನುಂಗಿ ಗರಳ, ನೀಲಕಂಠನ ಸದನ ? ||

ಮರೆಮಾಚಲ್ಯಾಕವ್ವ, ಹೇರಿಕೊಂಡ ಲೋಲಾಕು?

ತುಟಿಗ್ಹಚ್ಚಿ ತಂಬಾಕು, ಮೋರೆಗೆ ಬಳಿದ ಸರಕು

ಕೆಂಪು ಗಿಣಿಮೂತಿ, ಮಾವಂಥ ಚಂದದ ಮಲ್ಲಿ

ಯಾಕೀ ಸಪೂರ ದೇಹ, ಅಳುಕೈತೆ ಸಂಕಟ ಚೆಲ್ಲಿ ? ||

ಪದವೊಂದರ ಖರ್ಚಿಲ್ಲದೆ, ಕಟ್ಟಿದ್ದೀಯೆಲ್ಲ ಕಥೆಯ

ಮಾತೊಂದರ ಹಂಗಿಲ್ಲದೆ, ಬರೆದಿದ್ದೀ ಮಹಾಕಾವ್ಯ

ನೀನೇನೇನೊ ಹೇಳಿದ್ದಿ, ಇನಿತಿಷ್ಟೂ ಬಿಡಿಸಿಲ್ಲ ಒಗಟ

ಒಡಪೊಡೆದಷ್ಟು ನಿಗೂಢ, ಮತ್ತೆ ಕಾಡೊ ನಿನ್ನೀ ನೋಟ! ||

– ನಾಗೇಶ ಮೈಸೂರು

೧೩.೦೨.೨೦೧೮

(Picture source : Internet / social media – received via Madhu Smitha – thank you very much 😊👍🙏👌)

00764. ಕವಿ ಪುರಾಣ..


00764. ಕವಿ ಪುರಾಣ..
_____________________

ಕವಿಗಳದೇನಾದರೂ ಕಪಿಚೇಷ್ಟೆ ಇರಬೇಕಲ್ಲಾ ? 😜😊


ಯಾರು ಇಟ್ಟ ಹೆಸರೋ ಕವಿಗೆ
ಕವಿತೆಯವನ ಆಶಯ
ಭಾವಗಳಿಗೆ ತೇಪೆ ಹೊಲಿಗೆ
ಹಾಕುತ ದಿನದಿನ ವಿಸ್ಮಯ..

ಹೊಲಿದುದನೆ ಹೊಲಿಯುತಲಿ
ಬಡಿಸುತಡಿಗೆ ಅದನೆ
ಒಲಿದವಳನೆ ಓಲೈಸುವಂತೆ
ಪ್ರಿಯತಮೆಯ ಗೆಲ್ಲಲಡಿಗಡಿಗೆ..

ಪದಗಳಲಿಡೆ ಸಿರಿವಂತಿಕೆ
ಎದೆಯೊಳಗೆ ಭಾವದ ವಂತಿಕೆ
ಮೊಗೆದಷ್ಟೂ ಸಮೃದ್ಧ ಫಸಲು
ತೀರದ ಸ್ಪೂರ್ತಿ ಕಾವ್ಯದ ಅಸಲು..

ಹತಾಶೆ ನೋವು ಸಿಟ್ಟು ನಲಿವು
ಪದಗಳಾಗಿ ದುಡಿಯುವಾಳು
ಕವನ ಬದುಕೊ ? ಬದುಕೇ ಕವನವೊ ?
ಕವಿವಾಣಿ ದಿಟ ಅದಕೂ ಇದಕೂ ಎದಕೂ !

ಬರಲೊಲ್ಲದ ಲಕುಮಿಯ ಬದಲು
ಕೈ ಹಿಡಿದ ಶಾರದೆಯ ಕಥೆ
ಬರೆದು ಬದುಕುವರುಂಟೆ ? ನಿಜ, ಇಲ್ಲಾ
ಬರೆಯದೆ ಕವಿ ಬದುಕುವುದಿಲ್ಲ.. !

– ನಾಗೇಶ ಮೈಸೂರು

http://folhadepoesia.blogspot.com/2015/06/poet-voice.html?m=1

00481. ಎಲ್ಹುಡುಕಲಿ ಮನೋರಮೆಗೆ


00481. ಎಲ್ಹುಡುಕಲಿ ಮನೋರಮೆಗೆ
____________________

ಬರೆದು ಹೊರಹಾಕುವ ತುಡಿತಕೆ, ಖಂಡುಗ ಖಂಡುಗ ಭಟ್ಟಿಯಿಳಿಸುವ ಮನದಾಕಾಂಕ್ಷೆಗೆ ಸ್ಪೂರ್ತಿಯ ಒತ್ತಾಸೆಯಾಗಿ ನಿಲ್ಲಬಲ್ಲ ಮನೋರಮೆಯೆಲ್ಲೆಂದು ಹಲುಬುವ ಕವಿ ಮನದ ಚಿತ್ರಣ ಈ ಲಹರಿ. ಮುದ್ದಣ ಕವಿಯ ಸ್ಪೂರ್ತಿದೇವತೆಯಾದಂತೆ, ತಮಗೆ ಸ್ಪೂರ್ತಿಯ ಆಸರೆಯಾಗುವ ಆ ಮನೋರಮೆ ಯಾರೆಂಬ ಹುಡುಕಾಟ ಬಹುಶಃ ಕವಿ ಮನದ ಪ್ರತಿಯೊಬ್ಬರ ಶೋಧವೂ ಹೌದು. ಅವಳು ಸಿಗುವಳೊ, ಬಿಡುವಳೊ ಎಂಬ ತಲ್ಲಣ, ಆಶಯ, ಕಾತರಗಳೆಲ್ಲದ ಸಮ್ಮಿಶ್ರ ಭಾವದ ಈ ಹುಡುಕಾಟವು ಸಹ ಕಾವ್ಯಕ್ಕೆ ಸ್ಪೂರ್ತಿಯಾಗುವುದು ಇಲ್ಲಿನ ಸೋಜಿಗ !

  
picture source: http://tse1.mm.bing.net/th?id=OIP.Mea17707fde70e089f4abf6e710aa28a6o2&pid=15.1

ಎಲ್ಹುಡುಕಲಿ ಮನೋರಮೆಗೆ
ಮುದ್ದಣ್ಣನ ಈ ಭ್ರಮೆಗೆ
ಭ್ರಮರದಂತೆ ಹಾರಿ
ವಾತ್ಸವಕ್ಹೌಹಾರಿ
– ಮನೋಹರಿ ||

ಮಡದಿಯ ಮನದನ್ನ ಮುದ್ದಣ್ಣ
ಮನರಮೆಯೆ ಸ್ಫೂರ್ತಿ ಬಾಣ
ಮಾತರಿವಳಾ ಚತುರೆ
ಮಾತಾಟದಕುದುರೆ
– ಚಿತ್ತದಲೆ ಸೆರೆ ||

ಬರೆಯಲಿದೆ ಮಹಾಕಾವ್ಯ
ಸಂಪುಟ ಸಂಪುಟ ನವ್ಯ
ಅಖಂಡ ಮನದಾಸೆ
ಖಂಡುಗ ಒತ್ತಾಸೆ
– ಅವಳೆಲ್ಲಿ ದೆಸೆ ?||

ಮಾತಿಗೆ ಮಾತಾಗಿ ಮಣಿದು
ಸರಸ ವಿರಸದಲೆ ತಿರಿದು
ನಿರಾಳದುಸುರಿ ಹರ್ಷ
ಪ್ರೇರಣೆಯಾ ವರ್ಷ
– ಸಂಘರ್ಷ ಸ್ಪರ್ಶ ||

ದಕ್ಕುವಳೊ ದಕ್ಕಳೊ ಆ ರಮಣಿ
ಕಾವ್ಯವೇರಿಸಿದ ಮತ್ತಿನರಗಿಣಿ
ಈ ಕಡಲೊ ನದಿಯೊಡಲೊ
ಕೊಳೆಗೇರಿ ಕೊಚ್ಚೆಯಲೊ
– ಕಡೆಗೆಲ್ಲಿ ಸಿಕ್ಕುವಳೊ..? ||

– ನಾಗೇಶ ಮೈಸೂರು

00402. ಕನ್ನಡ ರಾಜ್ಯೋತ್ಸವ:ಮುದ್ದಣ್ಣನ ಗೊಂದಲ, ಮನೋರಮೆ ಸಲಹೆ


00402. ಕನ್ನಡ ರಾಜ್ಯೋತ್ಸವ:ಮುದ್ದಣ್ಣನ ಗೊಂದಲ,ಮನೋರಮೆ ಸಲಹೆ
_____________________________________________

ಕನ್ನಡ ಸಾಹಿತ್ಯ ಲೋಕದಲ್ಲಿ ಮುದ್ದಣ ಮನೋರಮೇಯರ ಸರಸ ಸಲ್ಲಾಪವನ್ನು ಕುರಿತು ಕೇಳದ ಸಾಹಿತ್ಯಾಭಿಮಾನಿಯಾದರೂ ಯಾರಿಹರು ? ತಮ್ಮ ನಡುವಿನ ಲಘು ಸಂವಾದವನ್ನೆ ಅಮರ ಮತ್ತು ಜನಪ್ರಿಯ ಸಾಹಿತ್ಯದ ದ್ಯೋತಕವಾಗಿಸಿದ ಈ ಜೋಡಿಯ ಸಂವಾದ ಕನ್ನಡ ರಸಿಕರ ಮನದಲ್ಲಿ ಆಹ್ಲಾದ ತರುವ ನಿರಂತರ ಚಿಲುಮೆ. ಆದರೆ ತುಸು ಹಳೆಯ ಪೀಳಿಗೆಯ ಪಾತ್ರಗಳಾದ ಮುದ್ದಣ ಮನೋರಮೆಯರು ಹೊಸ ಪೀಳಿಗೆಯಲ್ಲು ಪ್ರಸಿದ್ದರೆ, ಪ್ರಸ್ತುತರೆ ಎಂದು ಕೇಳಿದಾಗ ಸಿಗುವ ಉತ್ತರ ಆಶಾದಾಯಕವಾದದ್ದಲ್ಲ. ಆ ತರದವರಿಗೆ ಕನಿಷ್ಠ ಅವರಿಬ್ಬರ ಹೆಸರುಗಳನ್ನಾದರೂ ಪರಿಚಯಿಸಬೇಕೆಂಬ ಇಂಗಿತದಿಂದ, ಈ ರಾಜ್ಯೋತ್ಸವದ ಹೊತ್ತಿನಲ್ಲಿ ನನ್ನ ಊಹಾ ಜಗದ ಮುದ್ದಣ ಮನೋರಮೆಯರನ್ನು ಈ ಕಲ್ಪನಾ ಸಂಭಾಷಣೆಯ ಮೂಲಕ ಸೃಜಿಸಿದೆ – ಮೊದಲು ಕವಿತೆಯ ರೂಪದಲ್ಲಿ, ನಂತರ ಅದೇ ಕವಿತೆಯನ್ನು ಗದ್ಯ ಸಹಿತದ ಕಾವ್ಯರೂಪಕವಾಗಿಸುತ್ತ. ಆ ಎರಡರ ಫಲಿತವು ತಮ್ಮ ಮುಂದಿದೆ ಈ ಬರಹದ ರೂಪದಲ್ಲಿ – ಇದ್ದಕ್ಕೆ ಮೂಲ ಸ್ಪೂರ್ತಿಯಾದ ಆ ನೈಜ ಮುದ್ದಣ, ಮನೋರಮೆಯರಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತ 😊


(ಚಿತ್ರ ಕೃಪೆ : edited version of – http://m.prajavani.net/article/ನಾನು-ಮುದ್ದಣ್ಣನ-ಮನೋರಮೆಯ-ನೋಡಿದ್ದೆ)

ಗದ್ಯ ಸಹಿತದ ಕಾವ್ಯರೂಪಕ:

ಭಾಗ-01 : ಮುದ್ದಣ್ಣನ ಗೊಂದಲ
_______________________

ಮುದ್ದಣ್ಣ ಪ್ರಿಯ ಮನೋರಮೆ ಜಾಣೆ
ಅಂದಿರುಳು ತಡವಿ ಹೋಳಿ ಹುಣ್ಣಿಮೆ
ಚಿಗುರು ತಾಂಬೂಲದ ತಟ್ಟೆ ಪಲ್ಲಂಗ
ಜೀಕುತ ನಲ್ಲನನಪ್ಪಿದ ತೆಳು ಪ್ರಸಂಗ ||

ಮನೋಹರ ಚಂದ್ರಿಕೆಯ ಬೆಳ್ಳಿ ಬೆಳಕನ್ನು ಚೆಲ್ಲುತ್ತಾ ಬಿರಿದ ಹೂವಂತರಳುತ್ತಿದ್ದ ಸೊಗಸಾದ ಇರುಳಿನ ಸಮಯ. ಪ್ರಿಯಕರ ಮುದ್ದಣ್ಣ, ಜಾಣೆ ಪ್ರಿಯತಮೆ ಸತಿ ಮನೋರಮೆಯೊಡನೆ ಪಲ್ಲಂಗವೇರಿ ವಿಶ್ರಮಿಸಿದ ಹೊತ್ತು. ರುಚಿಯಾದ ಹೋಳಿಗೆಯೂಟದ ಜತೆಗೆ ಸವಿ ಮಾತಿನ ಔತಣವುಣಿಸಿದ ಮನದನ್ನೆ ಮನೋರಮೆ ಪಲ್ಲಂಗದಲ್ಲಿ ಕೂತು ತನ್ನ ತೊಡೆಯಮೇಲೆ ತಲೆಯಿರಿಸಿಕೊಂಡ ನಲ್ಲನ ಬಾಯಿಗೆ ಚಿಗುರೆಲೆಯ ತಾಂಬೂಲದ ರಸಗವಳವಿಕ್ಕುತ್ತ, ಹಾಗೆಯೆ ಮೆದುವಾಗಿ ಜೀಕುತ್ತ ಮಡಿಲಲಿಟ್ಟ ತಲೆ ಜಾರದಂತೆ ತೋಳಿಂದ ಅಪ್ಪಿ ಹಿಡಿದು ಅವನಿಗೆ ಹಿತವಾದ ಹಾಡೊಂದನ್ನು ಗುನುಗುತ್ತಾ ಇದ್ದಾಳೆ, ಸ್ವರ್ಗವೆ ಧರೆಗಿಳಿದು ಬಂದ ಭಾವನೆಗೆ ಇಂಬು ಕೊಡುತ್ತ…

ಮಂದಹಾಸದೆ ಮಕರಂದವೆ ಇನಿಯ
ಕಳುವಾದಂತಿರುವೆ ಎಲ್ಲಿದೆ ಹೃದಯ
ಸರಸ ಸಮಯವಿಲ್ಲಿ ತಿಂಗಳ ನೋಡಲ್ಲಿ
ಹರಿಸ್ಪುರಿಸು ಕಾವ್ಯ ಚಮತ್ಕಾರದ ವಲ್ಲಿ ||

ಆದರೂ ಯಾಕೊ ಪ್ರಪುಲ್ಲಿತವಾಗಿಲ್ಲ ಮುದ್ದಣ್ಣನ ಮನಸು. ಅದರ ಕನ್ನಡಿಯಂತಿರುವ ಮುಖದಲ್ಲಿ ಮಂದಹಾಸದ ಬದಲು ಏನೊ ಅವ್ಯಕ್ತ ಖೇದ, ವ್ಯಸನ ಮನೆ ಮಾಡಿಕೊಂಡಂತಿದೆ. ಕಳುವಾದ ಹೃದಯದಂತೆ ಮ್ಲಾನವದನದಲಿ ಕುಳಿತ ಇನಿಯನಿಗೆ ಪೂರ್ಣ ಚಂದಿರನ ಹೊಳಪಿನ ಚಮತ್ಕಾರವನ್ನು ತೋರಿಸಿ ಅದು ಖೇದದಿಂದಿರುವ ಸಮಯವಲ್ಲ, ಬದಲಿಗೆ ಸರಸ ಸಲ್ಲಾಪದ ಸಂಭಾಷಣೆಯಲ್ಲಿ ತೊಡಗಿಸಿಕೊಳ್ಳುತ್ತ ಸ್ಪುರಿಸಿದ ಸ್ಪೂರ್ತಿಯಲ್ಲೆ ಕಾವ್ಯ ಚಮತ್ಕಾರದ ವಲ್ಲಿಯನ್ನು ಹಾಸಬಾರದೆ ? ಎಂದು ಕೇಳುತ್ತಾಳೆ ಸತಿ ಮನೋಹರಿ.

ನಸುನಕ್ಕ ಮುದ್ದ ಕೊಡವಿ ಮನಗೊದ್ದ
ನಾಳೆ ಕನ್ನಡ ರಾಜ್ಯೋತ್ಸವ ದಿನ ಶುದ್ಧ
ನಾಡು ನುಡಿ ಮುಡಿಪಿಟ್ಟ ಮನ ಕದನ
ಏನು ಮಾಡಲಿ ನೆನೆದ್ಯೋಚಿಸಿಹೇ ಚಿನ್ನ ||

ಮಡದಿಯಕ್ಕರೆಯ ಮಾತಿಗೆ ಆ ಯೋಚನೆಯ ನಡುವಲ್ಲು ನಸುನಕ್ಕ ಮುದ್ದಣ್ಣ ಗೊದ್ದದಂತೆ ಕೊರೆಯುತ್ತಿದ್ದ ಆ ಆಲೋಚನೆಯನ್ನು ಕೊಡವಿ ತನ್ನನ್ನು ಕೊರೆಯುತ್ತಿರುವ ಕಾರಣವನ್ನು ಹಂಚಿಕೊಳ್ಳುತ್ತಾನೆ. ಸದಾ ಕನ್ನಡ ಕನ್ನಡವೆಂದು ತಪಿಸುವ ಕನ್ನಡ ಮನಸವನಲ್ಲವೆ ? ಮರುದಿನದ ರಾಜ್ಯೋತ್ಸವದ ದಿವಸದ ಕುರಿತೆ ಚಿಂತಿಸುತ್ತಿದೆ ಅವನ ನಾಡುನುಡಿಗಾಗಿ ಮುಡಿಪಿಟ್ಟ ಮನಸು. ತನ್ನ ನಾಡುನುಡಿ ಪ್ರೇಮದ ದ್ಯೋತಕವಾಗಿ ಆ ದಿನ ಏನು ಮಾಡಬೇಕು ಎನ್ನುವ ಕದನ ಕೋಲಾಹಲ ಕಾಡುತಿದೆಯೆಂದು ತನ್ನ ಅಳಲನ್ನು ಸತಿಮತಿಯಲ್ಲಿ ತೋಡಿಕೊಳ್ಳುತ್ತಾನೆ ಮುದ್ದಣ್ಣ.

ಅದಕೇಕೆ ಚಿಂತೆ ನಾನಿಹೆನಲ್ಲಾ ಸ್ಫೂರ್ತಿ
ನಮ್ಮಿಬ್ಬರ ಕೂಟವೆ ಸೊಗ ಕನ್ನಡದ ಆಸ್ತಿ
ತಣಿಸುವೆ ಹೃದಯನ್ಮನ ತನಿ ತಂಪೆರಚಿ
ಬರೆಸಲ್ಲೆ ಬರವಣಿಗೆ ಕಾವ್ಯದ್ಹನಿ ಎರಚಿ ||

ಎಷ್ಟಾದರೂ ಜಾಣ ಕನ್ನಡ ಸತಿಯಲ್ಲವೆ ಮನೋರಮೆ ? ಗಂಡನ ಚಿಂತನೆ, ಚಿಂತೆಯ ಅರಿವಾಗುತ್ತಿದ್ದಂತೆ ತಟ್ಟನೆ ಜಾಗೃತವಾಗುತ್ತದವಳ ಸಖಿಮನ. ಹುಡುಕತೊಡಗುತ್ತದೆ ಅದಕೇನಿರಬಹುದು ಉಪಾಯ ಎಂದು. ಆ ಹೊತ್ತಿನಲ್ಲೆ ಸಮಾನಾಂತರವಾಗಿ ಆಗಲೆ ರಮಣನನ್ನು ಸಂತೈಸುವ ದನಿಯಲ್ಲಿ ನುಡಿಯತೊಡಗಿದೆ. ತನ್ನ ಮನೋಹರವಾದ ನಗೆಯನ್ನು ಚೆಲ್ಲಿ ಅವನನ್ನು ಮಂತ್ರ ಮುಗ್ದನಾಗಿಸುತಲೆ ‘ಯಾಕದರ ಚಿಂತೆ ನಿಮಗೆ, ನಾನಿಲ್ಲವೆ ನಿಮ್ಮ ಸ್ಪೂರ್ತಿ, ಬೆನ್ನೆಲುಬಾಗಿ?’ಎಂದು ಹುರಿದುಂಬಿಸುತ್ತಾಳೆ. ತಮ್ಮಿಬ್ಬರ ಸೊಗಸಾದ ಕೂಟವೆ ಒಂದು ಬಗೆಯ ಅಪೂರ್ವ ಸಂಗಮದಂತೆ. ಆ ಸಾಂಗತ್ಯದ ಸೊಗಡೆ ಕನ್ನಡದ ಆಸ್ತಿಯಿದ್ದ ಹಾಗೆ. ‘ನಿನ್ನ ತನುಮನ ಹೃದಯಗಳನ್ನು ತಣಿಸುತ್ತ ತಂಪಾಗಿಸುತ್ತ ನೀ ನಿಂತ ಜಾಗದಲ್ಲೆ ಬರೆಯಲು ಪ್ರಚೋದಿಸುತ್ತ, ಸ್ಪೂರ್ತಿಯುಕ್ಕಿಸಿ ಕಾವ್ಯದ ಹನಿ ಚೆಲ್ಲಾಡುವಂತೆ ಮಾಡುತ್ತೇನೆ.. ಚಿಂತೆಬಿಡು ರಾಯ’ ಎಂದು ಧೈರ್ಯ, ಸ್ಪೂರ್ತಿ ತುಂಬುವ ಮಾತಾಡುತ್ತಾಳೆ.

ಉಚಿತಾಲೋಚನೆ ಗಮನಿಸೆ ಸುಲೋಚನೆ
ನಿನ್ನಂಥ ಸತಿಶಿರೋಮಣಿಪಡೆ ಧನ್ಯ ನಾನೆ
ಬರೆದಿಟ್ಟಿಹರಲ್ಲ ಕವಿ ಪುಂಗವರೆಲ್ಲ ಸಾಲ
ಕೋಟಿ ಅಕ್ಷರ ಮಧ್ಯೆ ಬರೆಯಲೇನ ಸಕಲ ||

ಆ ಮಾತು ಕೇಳಿಯೆ ಪ್ರಸನ್ನಚಿತ್ತನಾದ ಮುದ್ದಣ ಹೆಮ್ಮೆಯಿಂದ ಉಬ್ಬುತ್ತ ತನ್ನ ಕಾಡುತ್ತಿದ್ದ ಪ್ರಶ್ನೆಯಿಂದ ಹೊರಬರುತ್ತ ನುಡಿಯುತ್ತಾನೆ, ಸತಿಯ ಕುರಿತಾದ ತನ್ನ ಮೆಚ್ಚುಗೆಯನ್ನು ಮುಚ್ಚಿಡದೆ..’ಕಾಂತೆ.. ನನ್ನ ಹಾಗೆಯೆ ಆಲೋಚಿಸುವ ಮನಸುಳ್ಳ ನಿನ್ನನ್ನು ಪತ್ನಿಯಾಗಿ ಪಡೆದ ನಾನೆ ಧನ್ಯನು.. ನಿನ್ನ ಮಾತು, ಆಲೋಚನೆ ಉಚಿತವೇನೊ ಹೌದು.. ನಾನು ಕೂಡ ಅದನ್ನೆ ಆಲೋಚಿಸುತ್ತಿದ್ದೆ.. ತೊಡಕಿರುವುದು ಅದರಲ್ಲಲ್ಲ; ಬರೆಯುವುದೇನೊ ಸರಿ, ಆದರೆ ಬರೆಯುವುದಾದರು ಏನನ್ನು ? ಎನ್ನುವ ಚಿಂತೆ ಕಾಡುತ್ತಿದೆ. ಕನ್ನಡದ ದಿಗ್ಗಜರೆಲ್ಲ ಪರಂಪರೆಯಿಂದಲೂ ಬರೆಯುತ್ತಲೆ ಬಂದಿದ್ದಾರೆ, ಇನ್ನೂ ಬರೆಯುತ್ತಲೆ ಇದ್ದಾರೆ.. ಆ ಅಕ್ಷರ ಕೋಟಿ ಪಟುಗಳು ಬರೆಯದೆ ಮಿಗಿಸಿರುವುದಾದರು ತಾನೆ ಏನಿದೆ ಹೇಳು ? ಏನು ಬರೆಯ ಹೊರಟರು ಅವರಾಗಲೆ ಬರೆದುಬಿಟ್ಟಿರುವ ಕಾರಣ, ನಾನು ಹೊಸತೇನು ತಾನೆ ಬರೆದಂತಾಯ್ತು ? ಇಂತಲ್ಲಿ ನಾನು ವಿಶಿಷ್ಠವೆನ್ನುವ ಹಾಗೆ ಬರೆಯಲ್ಹೊರಡುವುದಾದರು ಏನನ್ನು ? ಎನ್ನುವ ಚಿಂತೆ ಕಂಗೆಡಿಸಿದೆ ನನ್ನ ‘ ಎಂದು ತನ್ನ ಚಿಂತೆಯ ಹಿನ್ನಲೆಯನ್ನು ಬಿಚ್ಚಿಡುತ್ತಾನೆ.

ಭಾಗ-02 : ಮನೋರಮೆ ಸಲಹೆ
______________________________________

ಜನ ಪರಂಪರೆ ನಶ್ವರ ಕ್ಷಯವಾಗಿ ನೆನಪು
ಸಾಗದ ಸಂತತಿ ಜ್ಞಾನ ವಂಶವಾಹಿ ತಲಪು
ಕನ್ನಡತನವೆ ಸಾಗಿ ಹಳೆ ನಡು ಹೊಸಗನ್ನಡ
ಬದಲಾದ ನವಯುಗ ಪೀಳಿಗೆ ಬರೆ ನೋಡ ||

ನಲ್ಲನ ಮನ ಕೊರೆಯುತ್ತಿದ್ದ ಕೀಟದ ಅನಾವರಣವಾಗುತ್ತಿದ್ದಂತೆ ಚಕಚಕನೆ ನಾಗಾಲೋಟದಲ್ಲಿ ಓಡತೊಡಗುತ್ತದೆ ಸೂಕ್ಷ್ಮಮತಿ ಮನೋರಮೆಯ ಮನಸು – ನಲ್ಲನ ಚಿಂತೆಗೆ ಪರ್ಯಾಯವಾದ ಕಾರಣ ವಾದದ ಎಳೆಯನ್ನು ಹುಡುಕುತ್ತ. ಹುಡುಕಿದ ಹಾಗೆಯೆ ಅದನ್ನು ಚಾತುರ್ಯದ ಮಾತಿನ ಸರವನ್ನಾಗಿಸುತ್ತ ನುಡಿಯುತ್ತಾಳೆ, ‘ಗೆಳೆಯ, ಇದಕೇಕಿಷ್ಟೊಂದು ಚಿಂತನೆ, ಆಲೋಚನೆ ? ಹೇಳಿ ಕೇಳಿ ಜನ ಪರಂಪರೆಯೆನ್ನುವುದು ಒಂದು ರೀತಿಯ ಹರಿಯುವ ನೀರಿನ ಹಾಗೆ. ಹೊಸ ನೀರು ಬಂದಂತೆ ಹಳತೆಲ್ಲ ಕೊಚ್ಚಿ ಹೋಗುವ ಹಾಗೆ ಪರಂಪರೆಯ ಸ್ಮೃತಿಯಲ್ಲಿ ಎಲ್ಲವೂ ನಿತ್ಯ ನಿರಂತರವಾಗಿಯೆ ಉಳಿಯುವುದೆಂದು ಹೇಳಬರುವುದಿಲ್ಲ.. ಆ ನಶ್ವರ ಕಲನದಲ್ಲಿ ಉಳಿಯುವುವು ಅದೆಷ್ಟೊ? ಕ್ಷಯವಾಗಿ ಹೋಗುವ ನೆನಪುಗಳು ಇನ್ನೆಷ್ಟೊ ? ನಮ್ಮ ಹಿರಿಯರು ಓದಿ ಗಳಿಸಿದ ಜ್ಞಾನವೇನು ನಮ್ಮ ವಂಶವಾಹಿಯಲ್ಲಿ ಹರಿದು ಬಂದುಬಿಡುವುದೇನು ? ಪ್ರತೀ ಪೀಳಿಗೆಯೂ ಅದನ್ನು ಬೇರೆ ಬೇರೆಯೆ ಗಳಿಸಿಕೊಳ್ಳಬೇಕಲ್ಲವೆ ? ಅಂದ ಮೇಲೆ ಹಳತನ್ನೆ ಬರೆದರು ಹೊಸ ಪೀಳಿಗೆ, ಸಂತತಿಯ ಸಲುವಾಗಿ ಬರೆದಂತಲ್ಲವೆ ? ಅಷ್ಟೇಕೆ ಸಖ, ಕನ್ನಡವನ್ನೆ ನೋಡು – ಇಡೀ ಕನ್ನಡತನವೆ ತಾನು ಸಾಗಿದ ಹಾದಿಯಲ್ಲಿ ಅದೆಷ್ಟು ಬದಲಾಗಿ ಹೋಗಿದೆ ? ಹಳೆಗನ್ನಡ, ನಡುಗನ್ನಡ, ಹೊಸಗನ್ನಡ ಎಂತೆಲ್ಲಾ ರೂಪಾಂತರಿಸಿಕೊಂಡಿಲ್ಲವೆ? ಹೊಸ ಪೀಳಿಗೆಗೆ ಹಳತಿನ ಸವಿಯುಣಿಸುವವರಾದರೂ ಯಾರು ? ಅದಕ್ಕಾದರು ಬರೆಯಲೆಬೇಕಲ್ಲವೆ – ಸಂತತಿಗೆ ಹೊಸ ಜೀವ, ನಾವೀನ್ಯತೆಯನ್ನು ತುಂಬುತ್ತ ?’

ಅದು ಸಮಂಜಸ ಯೋಜನೆ ಹೊಸಗನ್ನಡ
ಪುನರುಚ್ಚರಿಸಿದರು ಹೊಸತ ಮಳೆಮೋಡ
ಆದರೆ ಪ್ರಶ್ನೆಯಿನ್ನು ಬರೆವುದಾದರು ಏನನ್ನು
ವಸ್ತು ವಿಷಯವೆ ಹೊಳೆದಿಲ್ಲ ಕಸಿವಿಸಿಯಿನ್ನು ||

ಮುದ್ದಣ್ಣನಿಗು ಆ ಗಳಿಗೆಯಲ್ಲಿ ‘ ಹೌದಲ್ಲವೆ ?’ ಎನಿಸಿತು. ಯೊಚನೆಯೇನೊ ಸಮಂಜಸವೆ; ಅದರಲ್ಲು ಹಳೆಗನ್ನಡವನ್ನು ಓದಲಾಗದ ಹೊಸಗನ್ನಡದವರಿಗೆ ಹಳೆಯದರ ಪುನರಾವರ್ತನೆಯೂ ಹೊಸತೆ ತಾನೆ? ಆದರು ಮುದ್ದಣ್ಣನ ಕಸಿವಿಸಿಯಿನ್ನು ಕಡಿಮೆಯಾಗಿಲ್ಲ. ಬರೆಯುವುದಕ್ಕೇನೊ ಇದ್ದ ಅಡ್ಡಿ ಆತಂಕ ನಿವಾರಣೆಯಾಯಿತು ಎಂದರು ಏನು ಬರೆಯಬೇಕೆಂದು ಇನ್ನು ನಿಶ್ಚಿತಿತವಾಗಿ ಗೊತ್ತಾಗಿಲ್ಲವಲ್ಲ? ಯಾವ ವಸ್ತು ಆರಿಸಿಕೊಳ್ಳುವುದು ಎನ್ನುವ ಕೀಟ ಇನ್ನು ಕೊರೆಯುತ್ತಿದೆಯಲ್ಲಾ ? ಎಂದು ತನ್ನ ಮಿಕ್ಕುಳಿದಳಲನ್ನು ಸತಿಯ ಮುಂದಿಟ್ಟ ಮುದ್ದಣ್ಣ.

ನಾಡುನುಡಿಯನಾಡಿ ಪ್ರೀತಿ ಪ್ರಣಯ ಬೇಡಿ
ನಾಡ್ಹಬ್ಬ ಸಂತಸ ದುಃಖ ವಿಷಾದವೇಕೆ ಕಾಡಿ
ಲಘುವಿರಲಿ ವಸ್ತು ತೆಳು ಹಾಸ್ಯದ ಗಮ್ಮತ್ತು
ಕನ್ನಡಮ್ಮನ ನೆನೆಸುವ ವ್ಯಾಕರಣ ಸಂಪತ್ತು ||

ಪತಿದೇವನ ಮಾತು ಕೇಳುತ್ತಿದ್ದ ಹಾಗೆಯೆ ಸಕ್ರೀಯಳಾದ ಸತಿ ಚಿಂತಾಮಣಿ ಮನೋರಮೆ ಗಂಡನಿಗೆ ದಾರಿ ತೋರಿಸುವ ಕೆಲಸಕ್ಕೆ ಕೈ ಹಾಕಿದ್ದಾಳೆ ಈಗ. ಜಾಣೆಯಾದ ಅವಳಿಗೆ ಈ ಹೊತ್ತು ಪ್ರೀತಿ ಪ್ರಣಯದ ಕಾವ್ಯ ರಚಿಸುವ ಹೊತ್ತಲ್ಲವೆಂದು ಚೆನ್ನಾಗಿ ಗೊತ್ತು. ಬರೆದರೆ ಸಮಯ ಸೂಕ್ತವಾದುದನ್ನು ತಾನೆ ಬರೆಯಬೇಕು ? ನಾಡ ಹಬ್ಬ ರಾಜ್ಯೋತ್ಸವವೆನ್ನುವುದು ಸಂತಸ, ಆನಂದಗಳನ್ನು ತರುವ ವಿಷಯ. ಅಂದ ಮೇಲೆ ಅಲ್ಲಿ ದುಃಖ, ವಿಷಾದದ ಛಾಯೆಯೂ ಸಲ್ಲದು. ಹಾಗೆಂದು ತೀರಾ ಗಂಭೀರವಾಗಿ ಬರೆದರೆ ಸರಿಯೆ ? ಆ ಗಹನ ಗಂಭೀರತೆಯೆ ಓದುವ ಸಾಮಾನ್ಯರಿಗೆ ಅಡ್ಡಿಯಾಗಬಾರದಲ್ಲಾ? ಅದನ್ನೆಲ್ಲಾ ಆಲೋಚಿಸಿಕೊಂಡೆ ನುಡಿಯುತ್ತಾಳೆ – ನಾಡುನುಡಿಯ ವಸ್ತುವೆ ಆದರೂ ಲಘು ಹಾಸ್ಯದ ಛಾಯೆಯಲ್ಲಿ, ಸರಳ ರೂಪದಲ್ಲಿ ಬರೆಯಿರಿ ಎನ್ನುತ್ತಾಳೆ. ಜತೆಗೆ ಆ ಬರಹ ಹೇಗಿರಬೇಕೆಂದರೆ ಕನ್ನಡಮ್ಮನನ್ನು ಪ್ರೀತಿ, ಗೌರವ, ಆದರಗಳಿಂದ ನೆನೆಸುವ, ಅದರ ಅಪಾರ ವ್ಯಾಕರಣ ಸಂಪತ್ತನ್ನು ಸರಳವಾಗಿಯೆ ಪ್ರತಿಬಿಂಬಿಸುವ ರೀತಿಯಲ್ಲಿ ಬರೆಯಬೇಕು ಎಂದು ಪರೋಕ್ಷವಾಗಿಯೆ ಒತ್ತಾಯ ಹಾಕುತ್ತಾಳೆ..

ಏನಂಥ ಸರಕು ಹುಡುಕಲ್ಹೇಗೆ ಸರಿಯವಸರ
ತಿಳಿಯಾದ ಮನತಾಣ ಬೇಕಲ್ಲೆ ಬರಹ ಸಾರ
ಸಂತೆಗೆ ಮೂರ್ಮೋಳ ನೇಯ್ದಂತಲ್ಲವೆ ಸೀರೆ
ಆತುರಾತಂಕದ ಸಮಯಕೆ ಓಡದ ಕೈಬೇರೆ ||

ಮುದ್ದಣ್ಣನೇನು ಅದನ್ನು ಅರಿಯದ ಅಮಾಯಕನೆ ? ಅವನಿಗು ಅದು ಗೊತ್ತಿರುವಂತಾದ್ದೆ. ಅವನೂ ಅಂತದ್ದೆ ಸರಕಿಗಾಗಿ ತಾನೆ ಹುಡುಕಾಟ ನಡೆಸಿರುವುದು ? ಆದರೆ ತೊಡಕೆಂದರೆ ಇದು ಅವಸರದಲ್ಲಿ, ಕೊನೆ ಗಳಿಗೆಯಲ್ಲಿ ಕೈಗೆತ್ತಿಕೊಂಡಿರುವ ಕೆಲಸ. ಸರಿಯಾದ ವಸ್ತುವಿನ ಹುಡುಕಾಟಕ್ಕಾದರೂ ಸಮಯವಿರಬೇಕಲ್ಲ ?ಅದನ್ನೆ ಗೊಣಗಿಕೊಳ್ಳುತ್ತಾನೆ ಮುದ್ದಣ್ಣ…’ಯೋಚಿಸಿ ಬರೆಯಲು ಹೊತ್ತಿರಬೇಕು, ತಿಳಿಯಾದ ಸರಿಸೂಕ್ತ ಮನಸಿರಬೇಕು, ಪ್ರೇರೇಪಿಸುವ ಪರಿಸರದ ತಾಣವೆಲ್ಲ ಒಟ್ಟಾಗಿ ಕೂಡಿ ಬಂದರೆ ತಾನೆ ಸಾರ ಸತ್ವವುಳ್ಳ ಬರಹ ಹುಟ್ಟಿಕೊಳಲು ಸಾಧ್ಯ ? ಅವಸರದಲ್ಲಿ ಸಂತೆಗೆ ಮೂರು ಮೊಳ ನೇಯ್ದ ಸೀರೆಯಂತಲ್ಲ ಬರೆಯುವ ಕಾಯಕ. ಆ ಆತುರವುಂಟು ಮಾಡುವ ಆತಂಕದಿಂದಾಗಿ ಕೈ ಕಾಲೆ ಓಡದಂತಾಗಿಬಿಟ್ಟಿದೆ. ಇನ್ನು ಬರೆಯುವುದೇನು ಬಂತು?’

ಆಹಾ ರಮಣನೆ ನನದೊಂದಿದೆ ಉಪಾಯ
ನಮ್ಮೀ ಸಂವಾದವನೆ ಬರೆಸಲೆ ಅಭಿಪ್ರಾಯ
ವಾರೆವಾ ಹೆಣ್ಣೆ ನಿ ಅಮೋಘ ಕಳಶಪ್ರಾಯ
ನಿನ್ನಣತಿಯಂತೆ ಬರೆವೆನು ನಮ್ಮಾತಿನ ಲಯ ||

ಅವನ ಪ್ರತಿ ಮಾತನ್ನು ಎಚ್ಚರದಿಂದ ಆಲಿಸುತ್ತ ಕೇಳಿಸಿಕೊಳ್ಳುತ್ತಿದ್ದ ಸತಿ ಮನೋರಮೆ ಅವನ ಚಿಂತೆಯನೆಲ್ಲ ಪರಿಹರಿಸುವ ದಾರಿಯೊಂದನ್ನು ಹುಡುಕಿದವಳಂತೆ ತನ್ನ ಉಪಾಯವನ್ನು ಪತಿದೇವನ ಮುಂದಿಡುತ್ತಾಳೆ. ಸುಮ್ಮನೇಕೆ ಆ ವಸ್ತು, ಈ ವಸ್ತು ಎಂದೆಲ್ಲಾ ಹುಡುಕಾಡಿಕೊಂಡು ಒದ್ದಾಡುವುದು ? ನವ ನವೀನ ನಿತ್ಯ ನೂತನವಾಗಿರುವ ತಮ್ಮಿಬ್ಬರ ಸಂಭಾಷಣೆ, ಸಂವಾದವನ್ನೆ ವಸ್ತುವಾಗಿಸಿ ಬರೆದುಬಿಟ್ಟರೆ ಹೇಗೆ? ‘ ಎನ್ನುತ್ತಾಳೆ. ಅವಳ ಮಾತು ಕೇಳುತ್ತಿದ್ದಂತೆ ಜಗ್ಗನೆ ಜ್ಯೋತಿಯೊಂದುದಿಸಿದಂತಾಗುತ್ತದೆ ಮುದ್ದಣ್ಣನಿಗೆ… ‘ಅರೆ! ಹೌದಲ್ಲ ! ತಮ್ಮ ಸಂವಾದವೆ ಬರಹದ ಸರಕಾಗಬಹುದಲ್ಲ – ನಾಡು ನುಡಿಯ ಕುರಿತಾಡಿದಂತೆಯೂ ಆಯಿತು, ನಾವೀನ್ಯತೆಯ ವಿಷಯವನ್ನು ಆರಿಸಿಕೊಂಡಂತಾಯಿತು’ ಎಂದು ಖುಷಿ ಪಡುತ್ತಲೆ ಸಮಸ್ಯೆಗೆ ಪರಿಹಾರ ಕಂಡುಹಿಡಿದ ತನ್ನ ನೆಚ್ಚಿನ ಮಡದಿಯ ಮೇಲೆ ಹೊಗಳಿಕೆಯ ಹೂಮಳೆ ಸುರಿಸುತ್ತ, ‘ ವಾರೆವ್ಹಾ ! ನೀನೊಂದು ಅಮೋಘ, ಕಲಶಪ್ರಾಯ ಹೆಣ್ಣು.. ನಿನ್ನಣತಿಯಂತೆ ನಮ್ಮ ಸಂವಾದವನ್ನೆ ವಸ್ತುವಾಗಿ ಆರಿಸಿಕೊಂಡು ಒಂದು ಕಿರು ಪ್ರಹಸನವನ್ನು ಬರೆದುಬಿಡುವೆ.. ನಮ್ಮ ಮಾತಿನ ಲಯವನ್ನೆ ಅಲ್ಲು ಅನುರಣಿಸುವಂತೆ ಮಾಡುವೆ.. ನನ್ನ ಸಮಸ್ಯೆಗೆ ಇಷ್ಟು ಸರಳ ಪರಿಹಾರ ತೋರಿದ್ದಕ್ಕೆ ಧನ್ಯವಾದಗಳು.. ನೋಡು ಇದೀಗಲೆ ಬರೆಯಲು ಹೊರಟೆ’ ಎನ್ನುತ್ತ ತನ್ನ ಲೇಖನಿಯನ್ನು ಕೈಗೆತ್ತಿಕೊಂಡ ಮುದ್ದಣ್ಣ ನಿರಾಳವಾದ ಹರ್ಷ ತುಂಬಿದ ದನಿಯಲ್ಲಿ.

(ಮುದ್ದಣ್ಣ ಮನೋರಮೆಯರ ಕ್ಷಮೆ ಕೋರುತ್ತ)

– ನಾಗೇಶ ಮೈಸೂರು
ಬ್ಲಾಗ್: ಮನದಿಂಗಿತಗಳ ಸ್ವಗತ (nageshamysore.wordpress.com)

______________________________________________________________________

(ಮೇಲಿನ ಕಾವ್ಯ ರೂಪಕದ ಬರಿಯ ಪದ್ಯಗಳ ಗೊಂಚಲು ಇಲ್ಲಿದೆ – ಟಿಪ್ಪಣಿಯಿಲ್ಲದೆ ಓದಬಯಸಿದವರಿಗೆ)

ಮುದ್ದಣ್ಣನ ಗೊಂದಲ (ಭಾಗ-01)
__________________________

ಮುದ್ದಣ್ಣ ಪ್ರಿಯ ಮನೋರಮೆ ಜಾಣೆ
ಅಂದಿರುಳು ತಡವಿ ಹೋಳಿ ಹುಣ್ಣಿಮೆ
ಚಿಗುರು ತಾಂಬೂಲದ ತಟ್ಟೆ ಪಲ್ಲಂಗ
ಜೀಕುತ ನಲ್ಲನನಪ್ಪಿದ ತೆಳು ಪ್ರಸಂಗ ||

ಮಂದಹಾಸದೆ ಮಕರಂದವೆ ಇನಿಯ
ಕಳುವಾದಂತಿರುವೆ ಎಲ್ಲಿದೆ ಹೃದಯ
ಸರಸ ಸಮಯವಿಲ್ಲಿ ತಿಂಗಳ ನೋಡಲ್ಲಿ
ಹರಿಸ್ಪುರಿಸು ಕಾವ್ಯ ಚಮತ್ಕಾರದ ವಲ್ಲಿ ||

ನಸುನಕ್ಕ ಮುದ್ದ ಕೊಡವಿ ಮನಗೊದ್ದ
ನಾಳೆ ಕನ್ನಡ ರಾಜ್ಯೋತ್ಸವ ದಿನ ಶುದ್ಧ
ನಾಡು ನುಡಿ ಮುಡಿಪಿಟ್ಟ ಮನ ಕದನ
ಏನು ಮಾಡಲಿ ನೆನೆದ್ಯೋಚಿಸಿಹೇ ಚಿನ್ನ ||

ಅದಕೇಕೆ ಚಿಂತೆ ನಾನಿಹೆನಲ್ಲಾ ಸ್ಫೂರ್ತಿ
ನಮ್ಮಿಬ್ಬರ ಕೂಟವೆ ಸೊಗ ಕನ್ನಡದ ಆಸ್ತಿ
ತಣಿಸುವೆ ಹೃದಯನ್ಮನ ತನಿ ತಂಪೆರಚಿ
ಬರೆಸಲ್ಲೆ ಬರವಣಿಗೆ ಕಾವ್ಯದ್ಹನಿ ಎರಚಿ ||

ಉಚಿತಾಲೋಚನೆ ಗಮನಿಸೆ ಸುಲೋಚನೆ
ನಿನ್ನಂಥ ಸತಿಶಿರೋಮಣಿಪಡೆ ಧನ್ಯ ನಾನೆ
ಬರೆದಿಟ್ಟಿಹರಲ್ಲ ಕವಿ ಪುಂಗವರೆಲ್ಲ ಸಾಲ
ಕೋಟಿ ಅಕ್ಷರ ಮಧ್ಯೆ ಬರೆಯಲೇನ ಸಕಲ ||

ಮನೋರಮೆ ಸಲಹೆ (ಭಾಗ-02)
____________________________

ಜನ ಪರಂಪರೆ ನಶ್ವರ ಕ್ಷಯವಾಗಿ ನೆನಪು
ಸಾಗದ ಸಂತತಿ ಜ್ಞಾನ ವಂಶವಾಹಿ ತಲಪು
ಕನ್ನಡತನವೆ ಸಾಗಿ ಹಳೆ ನಡು ಹೊಸಗನ್ನಡ
ಬದಲಾದ ನವಯುಗ ಪೀಳಿಗೆ ಬರೆ ನೋಡ ||

ಅದು ಸಮಂಜಸ ಯೋಜನೆ ಹೊಸಗನ್ನಡ
ಪುನರುಚ್ಚರಿಸಿದರು ಹೊಸತ ಮಳೆಮೋಡ
ಆದರೆ ಪ್ರಶ್ನೆಯಿನ್ನು ಬರೆವುದಾದರು ಏನನ್ನು
ವಸ್ತು ವಿಷಯವೆ ಹೊಳೆದಿಲ್ಲ ಕಸಿವಿಸಿಯಿನ್ನು ||

ನಾಡುನುಡಿಯನಾಡಿ ಪ್ರೀತಿ ಪ್ರಣಯ ಬೇಡಿ
ನಾಡ್ಹಬ್ಬ ಸಂತಸ ದುಃಖ ವಿಷಾದವೇಕೆ ಕಾಡಿ
ಲಘುವಿರಲಿ ವಸ್ತು ತೆಳು ಹಾಸ್ಯದ ಗಮ್ಮತ್ತು
ಕನ್ನಡಮ್ಮನ ನೆನೆಸುವ ವ್ಯಾಕರಣ ಸಂಪತ್ತು ||

ಏನಂಥ ಸರಕು ಹುಡುಕಲ್ಹೇಗೆ ಸರಿಯವಸರ
ತಿಳಿಯಾದ ಮನತಾಣ ಬೇಕಲ್ಲೆ ಬರಹ ಸಾರ
ಸಂತೆಗೆ ಮೂರ್ಮೋಳ ನೇಯ್ದಂತಲ್ಲವೆ ಸೀರೆ
ಆತುರಾತಂಕದ ಸಮಯಕೆ ಓಡದ ಕೈಬೇರೆ ||

ಆಹಾ ರಮಣನೆ ನನದೊಂದಿದೆ ಉಪಾಯ
ನಮ್ಮೀ ಸಂವಾದವನೆ ಬರೆಸಲೆ ಅಭಿಪ್ರಾಯ
ವಾರೆವಾ ಹೆಣ್ಣೆ ನಿ ಅಮೋಘ ಕಳಶಪ್ರಾಯ
ನಿನ್ನಣತಿಯಂತೆ ಬರೆವೆನು ನಮ್ಮಾತಿನ ಲಯ ||

(ಮುದ್ದಣ್ಣ ಮನೋರಮೆಯರ ಕ್ಷಮೆ ಕೋರುತ್ತ)

– ನಾಗೇಶ ಮೈಸೂರು
ಬ್ಲಾಗ್: ಮನದಿಂಗಿತಗಳ ಸ್ವಗತ (nageshamysore.wordpress.com)

00381.ಜನಸಾಮಾನ್ಯರಿಗಾಗಿ ಕಾವ್ಯ ಮತ್ತು ಕಾವ್ಯದಲ್ಲಿ ಸರಳತೆ


00381.ಜನಸಾಮಾನ್ಯರಿಗಾಗಿ ಕಾವ್ಯ ಮತ್ತು ಕಾವ್ಯದಲ್ಲಿ ಸರಳತೆ
____________________________________________
(published in nilume.net on 24.10.2015)

ಕೆಲವೊಮ್ಮೆ ನನಗನಿಸುತ್ತದೆ – ಚಲನಚಿತ್ರ ಗೀತೆಗಳಿಗೆ ಸಿಕ್ಕಷ್ಟು ಹೆಸರು, ಪ್ರಾಮುಖ್ಯತೆ ಒಳ್ಳೆಯ ಕಾವ್ಯ- ಕವಿತೆಗಳಿಗೆ ದೊರಕುತ್ತಿಲ್ಲವೆಂದು. ಎಲ್ಲಾ ಸ್ತರಗಳ ಹೆಚ್ಚು ಮನಸುಗಳನ್ನು ಚಲನಚಿತ್ರ ಗೀತೆಗಳು ತಲುಪುತ್ತದೆ ಎನ್ನುವುದು ನಿರ್ವಿವಾದ. ಆದರೆ ಅವುಗಳ ರೀತಿಯಲ್ಲೆ ಕವನಗಳ ಶ್ರೇಷ್ಠತೆ ಮುಖ್ಯವಾಹಿನಿಗೆ ಮುಟ್ಟುತ್ತಿಲ್ಲ ಅನ್ನುವುದು ಕೂಡ ಅಷ್ಟೇ ಸತ್ಯ.

ಕಾವ್ಯಕ್ಕು ಭಾವಕ್ಕು ಅವಿನಾಭಾವ ಸಂಬಂಧ. ಭಾವ ಜೀವಿಯೊಬ್ಬ ಬರಹಗಾರನಾಗಿರಲಿ, ಬಿಡಲಿ – ಅಂತರಂಗದ ಬಡಿತ ಝೇಂಕರಿಸಿದಾಗ ಸ್ಪುರಿಸುವ ಭಾವನೆ ಪದಗಳಾಗಿ ಹೊರಬಿದ್ದಾಗ ಕಾವ್ಯ ರೂಪದಲ್ಲಿರುವುದೆ ಹೆಚ್ಚು. ಭಾವನೆಯ ನವಿರು ಮತ್ತು ನಾವೀನ್ಯತೆಯನ್ನು ಪರಿಗಣಿಸಿ ಹೇಳುವುದಾದರೆ ಅದು ಕಾವ್ಯ ರೂಪದಲ್ಲಿರುವುದೆ ಸಹಜ ಗುಣ ಧರ್ಮ. ಈ ಭಾವ ಕೆಲವರಲ್ಲಿ ಕ್ಲಿಷ್ಠ ಕವನದ ರೂಪತಾಳಿದರೆ ಮತ್ತೆ ಕೆಲವರಿಗೆ ಸರಳ ಪದ ಕುಣಿತದ ಹಾಡಾಗಬಹುದು. ಮತ್ತಿತರರಿಗೆ ಎರಡು ಅಲ್ಲದ ನಡುವಿನ ಗಡಿಯ ತ್ರಿಶಂಕುವೂ ಆಗಬಹುದು. ಭಾವ ಗಣಿತದಲ್ಲಿ ಗಣನೆಗೆ ಬರುವುದು ಅದು ಆ ಗಳಿಗೆಯಲ್ಲಿರುವ ಮನಸ್ಥಿತಿಗನುಸಾರವಾಗಿ ಅಂಕೆಗಿಲ್ಲದೆ ಪ್ರಸ್ತಾವಗೊಳ್ಳುವ ರೀತಿಯೆ ಹೊರತು ಯಾವುದೆ ನೀತಿ ನಿಯಮಾವಳಿಗೊಳಪಟ್ಟ ನಿರ್ಬಂಧಿತ ಸರಕಲ್ಲ. ಹೀಗಾಗಿ ಅದು ಅದ್ಬುತವೂ ಆಗಿಬಡಿಬಹುದು, ಅನಾಥವೂ ಅನಿಸಿಬಿಡಬಹುದು.

ಇಷ್ಟಾದರೂ ಇಲ್ಲೊಂದು ವಿಲಕ್ಷಣ ವಿಪರ್ಯಾಸವಿದೆ. ಮೇಲ್ನೋಟಕ್ಕೆ ಇದು ಎದ್ದು ಕಾಣಿಸದಿದ್ದರು, ಸ್ವಲ್ಪ ಒಳಹೊಕ್ಕು ಆಳ ನೋಡಿ ಈಜಲು ಬಯಸಿದವರಿಗೆ ಇದು ಚಿರಪರಿಚಿತವೇ ಎನ್ನಬಹುದು. ಇದನ್ನು ಅರ್ಥ ಮಾಡಿಕೊಳ್ಳಲ್ಲು ಒಂದು ಉದಾಹರಣೆಯ ಮುಖೇನ ಯತ್ನಿಸುವುದು ಸೂಕ್ತವೆನಿಸುತ್ತದೆ. ಉತ್ತಮವಾಗಿಯೆ ಬರೆಯುವ ಸಾಮರ್ಥ್ಯವಿರುವ ಉದಯೋನ್ಮುಖ ಕವಿಯೊಬ್ಬ, ತಾನು ಬರೆದುದು ಹೆಚ್ಚು ಜನರಲ್ಲಿ ತಲುಪಲಿ ಎಂಬ ಅಶೆಯಿಂದ ಒಂದು ಪುಸ್ತಕವಾಗಿ ಪ್ರಕಟಿಸಲು ಬಯಸುತ್ತಾನೆ ಎಂದಿಟ್ಟುಕೊಳ್ಳೋಣ. ಅಲ್ಲಿಂದಲೆ ಆರಂಭ ತೊಂದರೆ. ಮೊದಲಿಗೆ ಅದನ್ನು ಪ್ರಕಟಿಸುವ ಇಚ್ಛೆಯಿರುವ ಪ್ರಕಾಶಕ ದೊರಕುವುದೆ ಕಷ್ಟ. ಸಿಗುವವರೆಲ್ಲ ಆ ಕ್ಷೇತ್ರದಲ್ಲಿ ಹೆಸರು ಮಾಡಿರುವವರ ಮೇಲಷ್ಟೆ ಬಂಡವಾಳ ಹಾಕಲು ಸಿದ್ದರಿರುತ್ತಾರೆಯೆ ಹೊರತು, ಹೊಸಬರ ಮೇಲಲ್ಲ. ಎಷ್ಟೊ ಸಲ ಬರೆದವರ ಪ್ರಕಟಿಸಬೇಕೆಂಬ ಹಂಬಲ, ಸ್ವಂತವಾಗಿ ಎಲ್ಲಾ ವೆಚ್ಚ ಭರಿಸಿ ಪುಸ್ತಕವಾಗಿಸುವುದರಲ್ಲಿ ಪರ್ಯಾವಸಾನವಾಗುವ ಪ್ರಕರಣಗಳು ಕಡಿಮೆಯೇನಲ್ಲ. ಆದರೆ ಅಲ್ಲಿಯೂ ಹೆಚ್ಚು ಜನರನ್ನು ತಲುಪೀತೆಂಬ ಆಶಯ ಕೈಗೂಡುವುದೆಂದು ಹೇಳುವಂತಿಲ್ಲ – ಮಾರುಕಟ್ಟೆಗೆ ತಲುಪಿಸುವ ರೀತಿ, ನೀತಿ, ವಿಧಾನಗಳ ಕೊರತೆಯಿಂದಾಗಿ. ಜತೆಗೆ ಕಥೆಯೊ, ಕಾದಂಬರಿಯೊ ಆದರೆ ಪ್ರಕಟಿಸಲು ಯಾರಾದರೂ ಸಿಕ್ಕಿದರೂ ಸಿಗಬಹುದು ; ಆದರೆ ಕಾವ್ಯವೆಂದ ತಕ್ಷಣ ಅರ್ಧಕರ್ಧ ಆಸಕ್ತಿಯೆ ತಗ್ಗಿ ಹೋಗುತ್ತದೆ. ಆ ಕಡಯಿಂದ ಫಕ್ಕನೆ ಬರುವ ಉತ್ತರ – ‘ಈ ದಿನಗಳಲ್ಲಿ ಕಾವ್ಯ, ಕವನ ಕೊಂಡು ಓದುವವರು ಕಮ್ಮಿ’ ಎಂಬುದಾಗಿ.

ನಿಜ ಹೇಳುವುದಾದರೆ ಆ ಮಾತಿನಲ್ಲಿ ಹುರುಳಿಲ್ಲದಿಲ್ಲ. ಕೊಂಡು ಓದುವವರಿಲ್ಲದಾಗ ಮುದ್ರಿಸಿ ತಾನೆ ಏನುಪಯೋಗ? ಹೇಳಿ ಕೇಳಿ ವಾಣಿಜ್ಯದ ದೃಷ್ಟಿಯಿಂದ ಲಾಭ ತರುವಂತಿರದಿದ್ದರು, ನಷ್ಟವಾಗಿಸದ ಮಟ್ಟಿಗಾದರೂ ಇರಬೇಕಲ್ಲವೆ? ಆದರೆ ಇಲ್ಲಿ ಪ್ರಶ್ನೆ ಅದಲ್ಲ – ಯಾಕೆ ಕಾವ್ಯ, ಕವನಗಳಿಗೆ ಈ ರೀತಿಯ ಪಾಡು, ಅನಾದರ? ಅದರದೊಂದು ವಿಶ್ಲೇಷಣಾತ್ಮಕ ಯತ್ನವನ್ನು ಮಾಡಿ ಕಾರಣ ಹುಡುಕ ಹೊರಟರೆ ಕೆಲವು ಅಚ್ಚರಿಯ ಸಂಗತಿಗಳು ಹೊಳೆಯದೇ ಇರದು.

ಮೊದಲನೆಯದಾಗಿ ಕಾವ್ಯ ಪ್ರಕಾರದ ಹಿನ್ನಲೆಯನ್ನು ಗಮನಿಸಿದರೆ ಎರಡು ಸ್ಪಷ್ಟ ಹಾಗು ವಿಭಿನ್ನ ಮಾರ್ಗಗಳು ಗೋಚರಿಸುತ್ತವೆ. ಮೊದಲನೆಯದು ಉನ್ನತ ಸ್ತರದ ಕಾವ್ಯ ಸಾಮಗ್ರಿ. ಇದು ಸಾಮಾನ್ಯರಿಗೆ ಸುಲಭದಲ್ಲಿ ನಿಲುಕದ ಸ್ತರ. ಇದರ ಗ್ರಾಹಕರು ತುಸು ಹೆಚ್ಚಿನ ಕಾಠಿಣ್ಯತೆಯ ಸ್ತರದಲ್ಲಿ, ಕಬ್ಬಿಣದ ಕಡಲೆಯಾದರೂ ಅಗಿದು ಅರಗಿಸಿಕೊಂಡು ಆಸ್ವಾದಿಸುವವರು. ಆ ಕಠಿಣತೆಯ ಬೀಜವನ್ನು ಮುರಿದು ಒಡಪನ್ನರಿಯುವ ಪ್ರಕ್ರಿಯೆಯಲ್ಲೆ ಆನಂದವನ್ನನುಭವಿಸುವವರು. ಆದರೆ ಈ ರೀತಿಯ ಉನ್ನತ ಸ್ತರದ ಕಾವ್ಯ ರಸಿಕರ ಸಂಖ್ಯೆ ಸಣ್ಣದು ಮತ್ತು ಸೀಮಿತ ಪ್ರಯೋಗಕಷ್ಟೆ ನಿಲುಕುವಂತಾದ್ದು. ಹಳೆಗನ್ನಡ-ನಡುಗನ್ನಡ ಶ್ರೇಣಿಯ ಕವನಗಳಾಗಲಿ, ಹೊಸಗನ್ನಡದ ಸಾಲುಗಳ ಅಂತರಾರ್ಥ, ಪ್ರತಿಮೆ, ಇಂಗಿತಗಳನ್ನು ಮಥಿಸಿ ಅರಿಯಬೇಕಾದ ಕಾವ್ಯಗಳಾಗಲಿ, ತೀರಾ ಹೆಚ್ಚಿನ ಗೋಜಿಲ್ಲದೆ ಅರ್ಥಗ್ರಹಿಸಿ ಆಸ್ವಾದಿಸಬಯಸುವ ಓದುಗ ಸಮೂಹಕ್ಕೆ ಸುಲಭ ಗ್ರಹಿಕೆಗೆ ನಿಲುಕುವುದಿಲ್ಲ. ಹೀಗಾಗಿ, ಅದನ್ನು ಮತ್ತಷ್ಟು ಪ್ರಯತ್ನಿಸಿ ಅರಿಯುವ ಯತ್ನಕ್ಕಿಂತ, ಪಕ್ಕಕ್ಕಿಟ್ಟು ಮತ್ತೇನಕ್ಕೊ ಗಮನ ಹರಿಸುವುದು ಸಾಧಾರಣ ಪ್ರತಿಕ್ರಿಯೆಯಾಗಿಬಿಡುತ್ತದೆ.

ಈ ಸಂಕೀರ್ಣತೆಯ ಸಂಪೂರ್ಣ ವಿರುದ್ಧ ದಿಕ್ಕಿನ ಮತ್ತೊಂದು ಆಯಾಮವಾದ ಸರಳತೆಯೆನ್ನುವ ಮತ್ತೊಂದು ತುದಿಯನ್ನು ನೋಡಿದಾಗ ಕಾಣಬರುವ ಗುಂಪು – ಜನಸಾಮಾನ್ಯರಿಗೂ ಯಾವುದೆ ತಿಣುಕಾಟವಿಲ್ಲದೆ ನೇರವಾಗಿ ಸುಲಭವಾಗಿ ಅರ್ಥವಾಗುವ ಸರಳ ಬರಹಗಳು. ಸರಳ ಪದ್ಯಗಳಿಂದ ಹಿಡಿದು, ಭಕ್ತಿಗೀತೆ, ಕೆಲವು ಭಾವಗೀತೆ , ಅಷ್ಟೆ ಏಕೆ – ಈ ಗುಂಪಿನವರಿಗೆ ಹೆಚ್ಚಿನ ಶ್ರಮವಿಲ್ಲದೆ ಅರ್ಥವಾಗುವ ಚಲನ ಚಿತ್ರದ ಹಾಡುಗಳು ಸಹ ಸೇರಿಕೊಳ್ಳುತ್ತವೆ. ಈ ಗುಂಪು ಪಡೆಯುವ ಪ್ರಚಾರ, ಗಳಿಸುವ ಹಣ, ಪ್ರಖ್ಯಾತಿಗಳನ್ನೆಲ್ಲ ಗಮನಿಸಿದರೆ ‘ಯಾಕೆ ಇಲ್ಲಿಂದ ಮೇಲ್ಮಟ್ಟಕ್ಕೆ ಹೋದರೆ ಪರಿಸ್ಥಿತಿಯೆ ತಿರುವು ಮುರುವಾಗಿ ಹೋಗುತ್ತದಲ್ಲ ?’ ಅನಿಸದಿರದು.

ನನಗನಿಸುವಂತೆ ಈ ಎರಡು ತುದಿಗಳ ವಿಪರೀತ ವಿಪರ್ಯಾಸಕ್ಕೆ ಕಾರಣ – ಈ ಎರಡು ಕೊನೆಗಳ ನಡುವಿನಲ್ಲಿರುವ ಅಗಾಧ ವ್ಯಾಪ್ತಿಯನ್ನು ಸಮರ್ಥವಾಗಿ ಮತ್ತು ಹಂತ ಹಂತವಾಗಿ ತುಂಬಬಲ್ಲ ಸರಕು ಹೆಚ್ಚಾಗಿ ಇಲ್ಲದಿರುವುದು ಅಥವ ಇದ್ದರೂ ಅದಕ್ಕೆ ಸಿಗಬೇಕಾದ ಪ್ರಾಮುಖ್ಯತೆ ದೊರಕದೆ ಇರುವುದು. ಹೀಗಾಗಿ ಸಿನಿಮಾ ಹಾಡಿಗೆ ಆನಂದಿಸುವ ರಸಿಕನೊಬ್ಬ ಅಲ್ಲಿಂದಾಚೆಗೆ ದಾಟಿ ತುಸು ಎತ್ತರದ ಸ್ತರವನ್ನು ಅವಲೋಕಿಸಿದರೆ ಅವನ ಕೈಗೆ ಸಿಗುವುದು ನೇರ ಕಬ್ಬಿಣದ ಕಡಲೆಯ ಸರಕು. ಅದಕ್ಕೆ ಇನ್ನು ಸಿದ್ದನಿರದವನಿಗೆ ಆ ಸ್ತರವನ್ನು ನೋಡಿಯೆ ನಿರಾಸೆಯುಂಟಾಗಿ ಮುಟ್ಟುವ ಯತ್ನವನ್ನೆ ಕೈಬಿಟ್ಟು ಮತ್ತೆ ತನ್ನ ‘ಸುಲಭದ ದಾರಿಯ’ ಪ್ರಪಂಚಕ್ಕೆ ವಾಪಸಾಗಿಬಿಡಬಹುದು. ಹೀಗಾಗಿ ಹೊಸ ಬಳಗವನ್ನು ತಯಾರು ಮಾಡಿ ಮೇಲಿನ ಹಂತಕ್ಕೆ ಮುಟ್ಟಿಸುವ ಪ್ರಕ್ರಿಯೆಗೆ ಚಾಲನೆಯೆ ಸಿಕ್ಕುವುದಿಲ್ಲ. ಸಿಕ್ಕಿದರು ಅದಕ್ಕೆ ಬೇಕಾದ ಸಲಕರಣೆ, ಸಾಮಾಗ್ರಿಗಳಿಲ್ಲದೆ, ಎಲ್ಲಿ ಹಾಸಿದ್ದು ಅಲ್ಲೆ ಬಿದ್ದಂತಹ ಸ್ಥಿತಿಯಾಗಿಬಿಡುತ್ತದೆ. ಪ್ರಾಯಶಃ ಇವೆರಡು ಅತೀವ ಅಂತಿಮಗಳ ನಡುವೆ ಮೆಟ್ಟಿಲು ಮೆಟ್ಟಿಲಾಗಿ ಸಾಗಿಸಬಲ್ಲ ಮತ್ತಷ್ಟು ಕಾವ್ಯ ಪ್ರಕಾರಗಳಿದ್ದರೆ ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಜಿಗಿಸಲು ಸಾಧ್ಯವಾಗುತ್ತಿತ್ತೊ ಏನೊ?

ಅದಕ್ಕೆ ಸ್ಥೂಲವಾಗಿ – ಸರಳದಿಂದ ಹಿಡಿದು ಕಠಿಣತೆಯ ಹಂತದಿಂದ ತುಸು ಕೆಳಮಟ್ಟದಲ್ಲಿರುವ ವಿಸ್ತಾರದಲ್ಲಿ ಹೆಚ್ಚು ಹೆಚ್ಚು ಕಾವ್ಯ ಕೃಷಿ ನಡೆದರೆ ಈ ಅಗಾಧ ಅಂತರ ತುಂಬಲು ಸಾಧ್ಯವಾಗುತ್ತದೆ. ಅಂತೆಯೆ , ಈ ಕೃಷಿಯಲ್ಲಿ ಸಾಮಾನ್ಯ ಬದುಕಿನ ಸಾಮಾನ್ಯ ಘಟನೆಗಳಿಗೂ ಕಾವ್ಯದ ಅಂತಃಸತ್ವ ತುಂಬಿ ಬೆಳೆಸುತ್ತಾ ಬಂದರೆ ಆರಂಭಿಕ ಆಸಕ್ತಿಯನ್ನು ಹುಟ್ಟಿಸಲು ಸಾಧ್ಯವಾಗುತ್ತದೆ. ಆ ಆಸಕ್ತಿ ಹುಟ್ಟಿದಾಗ ಕೊಳ್ಳುವ, ಕೊಂಡು ಓದುವ ಬಳಗವು ಬೆಳೆಯಲು ಸಾಧ್ಯವಾಗುತ್ತದೆ – ಆ ಸಾಮಾನ್ಯ ಸ್ತರದಲ್ಲಿ ತಮ್ಮ ಬದುಕನ್ನೆ ಸುಲಭವಾಗಿ ಗುರುತಿಸಿಕೊಳ್ಳಬಲ್ಲ ಸರಳತೆಯಿಂದಾಗಿ. ಇದು ತೀರಾ ಬಾಲಿಶ ಉಪಾಯ ಎಂದು ಪಕ್ಕಕ್ಕೆ ಸರಿಸಿಬಿಡಿವ ಅಪಾಯವೂ ಇಲ್ಲದಿಲ್ಲ. ಆದರೆ ಕೆಳ ಪ್ರಕಾರದ ಜನಪ್ರಿಯತೆ ಗಮನಿಸಿದರೆ ಸೂಕ್ತ ಪ್ರಯತ್ನ, ಸರಿಯಾದ ರೂಪುರೇಷೆಗಳಿಂದ ಬೆಂಬಿಡದೆ ಯತ್ನಿಸಿದರೆ ಇದು ಖಂಡಿತಾ ಸಾಧ್ಯವೆಂದು ನನ್ನ ನಂಬಿಕೆ.

ನಾನಂತೂ ಆ ಕಾರಣದಿಂದಲೆ ಹೆಚ್ಚೆಚ್ಚು ಸರಳ ಕವಿತೆಗಳನ್ನು ಬರೆಯಲು ಪ್ರಯತ್ನಿಸುತ್ತಲೆ ಇದ್ದೇನೆ – ಈ ಅಗಾಧ ಅಂತರದ ನಡುವಿನ ಏಣಿಗೆ ಕೆಲ ಮೆಟ್ಟಿಲುಗಳಾದರೂ ಆಗುವ ಆಶಯದಿಂದ. ಅನಿಸಿಕೆ ನಿಜವೊ ಸುಳ್ಳೊ, ಆಶಯ ಕೈಗೂಡುವುದೊ ಬಿಡುವುದೊ ಎನ್ನುವುದು ಕಾಲ ಪುರುಷನ ಬಸಿರಲಿ ಅಡಗಿರುವ ರಹಸ್ಯವಾದರು, ಕೊನೆಗೆ ಸುಳ್ಳೆ ಆಗುವುದಾದರೂ ಯತ್ನ ಮಾಡಿ ನೋಡುವುದರಲ್ಲಿ ತಪ್ಪೇನು ಇಲ್ಲವೆಂದು ನನ್ನ ಅನಿಸಿಕೆ. ಯಾಕೆಂದರೆ ಸರಳತೆ ಸಾಮಾನ್ಯರ ಮನದ ಕದ ತಟ್ಟಲು ಹೆಚ್ಚಿನ ಶ್ರಮ ಬೇಕಾಗುವುದಿಲ್ಲ. ಅಂತೆಯೆ ಸರಳ ಸ್ತರದಲ್ಲಿ ಬರೆದು ನಿಭಾಯಿಸುವುದು ಆ ಮಟ್ಟದ ಒಡನಾಟದಲ್ಲಿ ತೊಳಲಾಡಿ ಬಂದವರ ಹೊರತು ಎಲ್ಲರಿಗು ಸುಲಭ ಸಾಧ್ಯವೂ ಅಲ್ಲ.

‘ಸತ್ಯಂ ಶಿವಂ ಸುಂದರಂ’ ಅನ್ನುವ ಹಾಗೆ ‘ಸರಳಂ ಶಿವಂ ಸುಂದರಂ’ ಈ ಪ್ರಯತ್ನದ ಮೂಲಮಂತ್ರವಾಗಬೇಕು ಎನ್ನೋಣವೆ?

(ಚಿತ್ರಕೃಪೆ: ಸ್ವಯಂಕೃತಾಪರಾಧ)  

 

00153. ಕಚ’ಗುಳಿಗೆ’ – ೦೬


00153. ಕಚ’ಗುಳಿಗೆ’ – ೦೬

ಈ ಕಂತಿನ ಚಿನಕುರುಳಿಗಳು : ಪ್ರೇಯಸಿ, ಭಾವ-ವಾಸ್ತವ, ಅಂಟು ರೋಗ, ಸಂದೇಹ, ಪವಿತ್ರ ಜಲ , ಹೊಗಳಿಕೆ. ಎಲ್ಲಾ ಬೇರೆ ಬೇರೆ ಥೀಮುಗಳ ಕಲಸುಮೇಲೋಗರ. ಟುಸ್ ಪಟಾಕಿಯೊ, ಇಲ್ಲ ಕುದುರೆ ಪಟಾಕಿಯೊ ನೋಡುವ (ಕಡೆಗೆ ಚಿನಕುರುಳಿಯಾದರೂ ಆದೀತಾ?) 🙂

https://nageshamysore.wordpress.com/00153-%e0%b2%95%e0%b2%9a%e0%b2%97%e0%b3%81%e0%b2%b3%e0%b2%bf%e0%b2%97%e0%b3%86-%e0%b3%a6%e0%b3%ac/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00000. ಮನದಿಂಗಿತಗಳ ಸ್ವಗತ – ಪರಿವಿಡಿ ಮತ್ತು ಇತರೆ ವಿವರ


______________________________________________________________________________

00000. ಮನದಿಂಗಿತಗಳ ಸ್ವಗತ – ಪರಿವಿಡಿ ಮತ್ತು ಇತರೆ ವಿವರ
______________________________________________________________________________

00140. ಶುಮಾಕರನೆಂಬ ವೇಗದ ವಿಪರ್ಯಾಸ (ಕಿರು ಬರಹ + ಕವನ)

00138. ಎರಡು ದೋಣಿಯ ಮೇಲೆ ಕಾಲಿಟ್ಟ ಬದುಕು…(ಅನುಭವ + ಕಿರು ಪ್ರಬಂಧ)

00139. ಕಾಲದ ಗಡಿಯಾರ . (ಕಿರು ಬರಹ + ಕವನ)

00137. ಮಳೆಯಾಗವ್ಳೆ ಚೌಡಿ.. (ಕಿರು ಬರಹ + ಕವನ)

00136. ಹೋಗ್ಲಿ ಬಿಡಿ, ಹಾಳಾಗ್ಲಿ ಬಿಡ್ರಿ..(ಹೊಸದ ತಂದು ಹಳತ ಮರೆತುಬಿಡಿ..)

00135. ಸುದ್ದಿ ಮುಟ್ಟಿ ಮನ ಸೂತಕ…(ಕಳಚಿದ ಕೊಂಡಿ) (ಕಿರು ಬರಹ + ಕವನ)

00134. ದೇವರು ನಮಗೆ ಹಾಕಿದ ಟೋಪಿ (ಮಕ್ಕಳ ಪದ್ಯ) (ಕಿರು ಬರಹ + ಕವನ)

00133. ಚಿತ್ರಗುಪ್ತನಿಗೊಂದು ಸಲಹೆ (ಸರಿ ತಪ್ಪುಗಳ ಲೆಕ್ಕ) (ಕಿರು ಬರಹ + ಕವನ)

00132. ಅಂಗಜನ ಅಂಗದ ಸದ್ದು … (ಕಿರು ಬರಹ + ಕವನ)

00131. ಮಳೆಯಾಗುತ ಸಾಂಗತ್ಯ…. (ಕಿರು ಬರಹ + ಕವನ).

00130. ರಾಜರತ್ನಂ ನೆನಪಿಗೆ (ಕಿರು ಬರಹ + ಕವನ)

00129. ಪುಸ್ತಕ ವಿಮರ್ಶೆ: ಕಣ್ಣೀರಜ್ಜ ಮತ್ತು ಇತರ ಕಥೆಗಳು (ಪುಸ್ತಕ ವಿಮರ್ಶೆ)

00128. “ಬೀರ” ದೇವರು ಒಳಗಿಳಿದರೆ ಶುರು! (ಕಿರು ಬರಹ + ಕವನ)

00127. ಮುರಿದು ಬಿದ್ದ ಪಿಎಸ್ಪಿ (ಬರಹ + ಕವನ)

00126. ನೂರು ಶತಕಗಳ ಸರದಾರ (ಕಿರು ಬರಹ + ಕವನ)

00125. ಶ್ರೀ ಸತ್ಯನಾರಾಯಣ ವ್ರತದಿ ಪೂಜಾಂಗವಾಗಿಹ ಕಥನ (ಸರಳ ಕಾವ್ಯರೂಪದಲ್ಲಿ)

00124. ಈ ಕೆಮ್ಮೊಣಕೆಮ್ಮು… (ಕಿರು ಬರಹ + ಕವನ)

00123. ತುಳಸಿಗಿಂದು ಸಂಭ್ರಮ (ಕಿರು ಬರಹ + ಕವನ)

00122. ಈ ಸಂಪದ (ಕಿರು ಬರಹ + ಕವನ)

00121. ಮಂಗಳಗ್ರಹಕ್ಕೊಂದು ಗ್ರಹಕೊಂದು ಕಲ್ಲು (ಕಿರು ಬರಹ + ಕವನ)

00120. ಹುಡುಗಾಟ ಆಡಿದ್ರೆ, ಪಟಾಕಿ ಸುಮ್ನೆ ಬಿಡುತ್ತ? (ಕಿರು ಬರಹ + ಕವನ) (04.11.2013)

00119. ದೀಪೋತ್ಸಾಹಂ ಭುವಂಗತೆ.. (ಬರಹ + 2 ಕವನ) (02.11.2013)

00118. ರಾಜ್ಯೋತ್ಸವದ ಮನವಿ : ಪದಗಳಿಗಾಗುತ ದನಿ (ಕವನ + ಕಿರು ಬರಹ) (01.11.2013)

00117. ಗುಜರಾತಿನ ಮೋಡಿ, ಪಟೇಲರ ಹಾಡಿ (ಕವನ + ಕಿರು ಬರಹ)

00116. ‘ಐ’ಗಳ ಪುರಾಣ – 03 …’ಐ’-ಪೋನು, ಪಾಡು, ಪ್ಯಾಡುಗಳ ಪಾಡಿನ ಹರಟೆ, (ಪ್ರಬಂಧ + ಲೇಖನ + ಕಥನ + ಹರಟೆ + ಅನುಭವ)

00115. ಮಂಡೋದರಿ, ನಿನಗ್ಯಾಕಿ ಪರಿ ಕಿರಿಕಿರಿ..? (ಕವನ + ಬರಹ) (WIP)

00114. 00114. ಸಮಾನಾಂತರ ಚಿಂತನಾ ಚಿತ್ತ (ಕವನ + ಕಿರು ಬರಹ)

00113. ಹಾಸ್ಯದಲೆ ಕೊಲ್ಲೆ ಪೂರ್ತಿ, ಸಿದ್ದಹಸ್ತ ನರಸಿಂಹಮೂರ್ತಿ (ಕವನ + ಕಿರು ಬರಹ)

00112. ಪೌರ್ಣಿಮೆ ಚಂದ್ರನ ಕಾಲೆಳೆಯುತ್ತ….(ಕವನ + ಕಿರು ಬರಹ)

00111. ಖೈರುದ್ದೀನನಿಗೆ ಹಬ್ಬದ ಶುಭಾಶಯ ಹೇಳಿ…(ಕವನ + ಕಿರು ಬರಹ)

00110. ಸಿಂಗಪುರ್ ಈಸ್ ಏ ಫೈನ್ ಸಿಟಿ…(ಕವನ + ಕಿರು ಬರಹ)

00109. ಆಯುಧ ಪೂಜೆ, ವಿಜಯದಶಮಿ (2) (ಕವನ + ಕಿರು ಬರಹ)

00108. ಮಹಾಲಯ ಅಮಾವಾಸೆ (ಮಹಾನವಮಿ) (01) (ಕವನ + ಕಿರು ಬರಹ)

00107. ಪಾತ್ರಗಳೆ ರಾಯರಿಗೆ ಸಲ್ಲಿಸಿವೆ ವಂದನ ! (ಕವನ + ಕಿರು ಬರಹ)

00106. …..ನಿನ್ನ ನೆನಸುತ್ತೇನೆ ! (ಕವನ + ಕಿರು ಬರಹ)

00105. ಯಾರದು ಮುಂದಿನ ಪಾಳಿ? (ಕವನ + ಕಿರು ಬರಹ)

00104. ಕೂರ್ಮಾವತಾರ : ಸಾಮಾನ್ಯ ಪ್ರೇಕ್ಷಕನೊಬ್ಬನ ಅನುಭವ, ವಿಮರ್ಶೆಯ ಒಳನೋಟ (ಅನುಭವ + ವಿಮರ್ಶೆ + ಬರಹ)

00103. ಯಾರ ಗೆಲುವು – ‘ಛಿಧ್ರವೋ, ಸಮಗ್ರವೋ? (ಕವನ + ಕಿರು ಬರಹ)

00102. ಪಂಚ್ಲೈನ್ ‘ಪಂಚೆ’ ಸಿದ್ರಾಮಣ್ಣ.. (ಕವನ + ಕಿರು ಬರಹ)

00101. ಯಾರು..? (ಚಿಣ್ಣರ ಹಾಡು) (ಕವನ + ಕಿರು ಬರಹ)

00100. ನಮ್ಮ ಬಾಲ್ಯದ ‘ಶರ್ಲಾಕ್ ಹೋಂ’ “ಎನ್. ನರಸಿಂಹಯ್ಯ” ನೆನಪಲಿ ..(ಕವನ + ಕಿರು ಬರಹ)

00099. ಕೆಂಪೇಗೌಡರೆ ಬನ್ನಿ ಹೀಗೆ ……(ಕವನ + ಕಿರು ಬರಹ)

00098. “ಮುದ್ದಣ್ಣ ಮನೋರಮೆ ಕಲಿತ ಚೀನಿ ಭಾಷೆ – 02” (ಭಾಗ – 02) (ಹಾಸ್ಯಬರಹ + ಹರಟೆ + ವ್ಯಂಗ್ಯ)

00097. ತೊಡಕುಗಳನು ಬಿಡಿಸಲು “ತೊಡಕಿನ ಸಿದ್ದಾಂತ – 04” – (ತೊಡಕು ಸಿದ್ದಾಂತ) (ತಾಂತ್ರಿಕ + ಮ್ಯಾನೇಜ್ಮೆಂಟು + ವ್ಯವಸ್ಥೆ )

00096. ತೊಡಕುಗಳನು ಬಿಡಿಸಲು “ತೊಡಕಿನ ಸಿದ್ದಾಂತ – 03” – (ತೊಡಕು ಸಿದ್ದಾಂತ) (ತಾಂತ್ರಿಕ + ಮ್ಯಾನೇಜ್ಮೆಂಟು + ವ್ಯವಸ್ಥೆ )

00095. ತೊಡಕುಗಳನು ಬಿಡಿಸಲು “ತೊಡಕಿನ ಸಿದ್ದಾಂತ – 02” – (ತೊಡಕು ಸಿದ್ದಾಂತ) (ತಾಂತ್ರಿಕ + ಮ್ಯಾನೇಜ್ಮೆಂಟು + ವ್ಯವಸ್ಥೆ )

00094. ‘ಐ’ಗಳ ಪುರಾಣ – 02 …’ಐ’-ಪೋನು, ಪಾಡು, ಪ್ಯಾಡುಗಳ ಪಾಡಿನ ಹರಟೆ, (ಪ್ರಬಂಧ + ಲೇಖನ + ಕಥನ + ಹರಟೆ + ಅನುಭವ)

00093. ಅಲ್ಲಿರೋದು ನಮ್ಮನೆ, ಇಲ್ಲಿರೋದು ಸುಮ್ಮನೆ…(ಕವನ + ಕಿರು ಬರಹ)

00092. ಗಜಾನನ ಗಜ-ಮೂಷಿಕಾಸುರ ಕಥೆ (ಕವನ + ಕಿರು ಬರಹ)

00091. ಹುಟ್ಟುಹಬ್ಬದ ನಮಸ್ತೆ..(ಪೂಚಂತೆ ಯಾರಂತೆ?) (ಕವನ + ಕಿರು ಬರಹ)

00090. ಅವರಿತ್ತ ಜೀವನ ಭಿಕ್ಷೆ (ಕವನ + ಕಿರು ಬರಹ)

00089. ಶ್ರಾವಣ (ಕವನ + ಕಿರು ಬರಹ)

00088. ಮಿನುಗುತಾರೆ, ಗುನುಗುತ್ತಾರೆ… (ಕವನ + ಕಿರು ಬರಹ)

00087. ಡಾಲರ ರೂಪಾಯಿ ಲೆಕ್ಕಾಚಾರ (ಕವನ + ಕಿರು ಬರಹ)

00086. ಗೋಕುಲದಲಿ ಅಷ್ಟಮಿ , ಗೋಕುಲಾಷ್ಟಮಿ.. (ಕವನ + ಕಿರು ಬರಹ)

00085. ಜಲಚಕ್ರ (ಕವನ + ಕಿರು ಬರಹ)

00084. ವರಮಹಾಲಕ್ಷ್ಮಿ ವ್ರತ (ಕವನ + ಕಿರು ಬರಹ)

00083. ಅಷ್ಟಲಕ್ಷ್ಮಿಯರ ವರ (ಕವನ + ಕಿರು ಬರಹ)

00082. ಭಾರತಿಮನ, ಭಾರತಿತನ! (ಕವನ)

00081. ಮತ್ತೊಂದು ಸ್ವಾತಂತ್ರದ ದಿನ…. (ಕವನ + ಕಿರು ಬರಹ)

00080. ನಿಯತಿಯ ಶಿರ (ಕವನ)

00079. ಬದಲಾಗಬೇಕಾಗಿದ್ದು ನಾವು-ನೀವಾ ಅಥವಾ ಈ ವ್ಯವಸ್ಥೆಯಾ? (ಚಿಂತನೆ + ಲೇಖನ + ವಾಸ್ತವ )

00078. ಕಟ್ಟುವ ಬನ್ನಿ ಕನ್ನಡ ಉಳಿಸಿ ಬೆಳೆಸುವ ಪೀಳಿಗೆ (ಚಿಂತನೆ + ಅಂಕಣ: ಚಿಂತಕರ ಚಾವಡಿ (ಕನ್ನಡ ಸಂಘ)+ ಲೇಖನ + ಸಿಂಚನ)

00077. ಮೋಡ ಚುಂಬನ..ಗಾಢಾಲಿಂಗನ.. (ಕವನ + ಕಿರು ಬರಹ)

00076. ಎರಡು ಆಷಾಡ ಗೀತೆಗಳು (ಕವನ + ಕಿರು ಬರಹ)

00075. ಪುಟ್ಟನ ಅಳಲು .. (ಕವನ + ಕಿರು ಬರಹ)

00074. ಕಲಿಯಲು ಎಲ್ಲಿದೆ ಬಿಡುವು? (ಕವನ + ಕಿರು ಬರಹ)

00073. ದೆವ್ವ ಭೂತದ ಭೀತಿ! (ಕವನ)

00072. ಆಧ್ಯಾತ್ಮಿಕ ಕರ ಬಾಡಿಗೆ ತರ..! (ಕವನ + ಕಿರು ಬರಹ)

00071. ಅಸಂಗತ..! (ಕವನ + ಕಿರು ಬರಹ)

00070. ಹೆಣ್ಮನದ ಹವಾಗುಣ….! (ಕವನ + ಕಿರು ಬರಹ)

00069. ಬಿಟ್ಟುಬಿಡಿ ಸಿಗರೇಟು…! (ಬಿಟ್ಟು ಬೀಡಿ ಸಿಗರೇಟು..) (ಕವನ + ವಾಸ್ತವ)

00068. ಚಿಲ್ಲರೆ ಅಂಗಡಿ ಕಾಕ , ರೀಟೇಲಲಿ ಅಕ್ಕಿ..! ( ಕವನ + ವಾಸ್ತವ)

00067. ಧೂಮಸ್ನಾನ….! (ಕವನ + ವಾಸ್ತವ)

00066. ಧೂಮ-ಸಾಹಿತ್ಯ…! (ಕವನ + ವಾಸ್ತವ)

00065. ಸರಿ ತಪ್ಪುಗಳ ಲೆಕ್ಕ (ಚಿತ್ರಗುಪ್ತ ವಾಗ್ವಾದ – ಪೂರ್ವಾರ್ಧ: ಲಘು ಹಾಸ್ಯದ ಧಾಟಿ) (ಕವನ + ಕಿರು ಬರಹ)

00064. ಗಂಗಾವತಾರಣ (ಗಂಗಾ + ಅವತಾರ + ರಣ) (ಕವನ + ಬರಹ + ವಾಸ್ತವ + ಪೌರಾಣಿಕ)

00063. ಗಂಗಾವತರಣ…! (ಕವನ + ಕಿರು ಬರಹ)

00062. ಪಾಂಚಾಲಿಯ ಹಾಡು (ಕವನ + ಕಿರು ಬರಹ)

00061. ಈ ಅಪ್ಪಗಳು (ಕವನ + ಕಿರು ಬರಹ)

00060. ಸಾವೆಂಬ ಸಕಲೇಶಪುರದಲ್ಲಿ….!

00059. ನಿರಂತರ ಕುಣಿತ! (ಕವನ)

00058. ಗುಂಪಿನೊಳಗವಿತಿದೆಯೆ ವರ್ಣ? (ಕವನ + ಕಿರು ಬರಹ)

00057. ಈ ದಿನ ತನು ಮನ ಭಾವ….! (ಕವನ)

00056. ಹಿತ್ತಲ ಗಿಡದ ಮದ್ದು (ಕವನ + ಕಿರು ಬರಹ)

00055. ಏಕಾಂತದ ಏಕಾಂತ…! (ಕವನ + ಕಿರು ಬರಹ)

00054. ಈ ಅಮ್ಮಗಳು (ಕವನ + ಕಿರು ಬರಹ)

00053. ಚುನಾವಣಾ ಫಲಿತಾಂಶ ! (ಕವನ)

00052. ಸೃಷ್ಟಿ ರಹಸ್ಯ..! (ಈ ಅಂಡ ಪಿಂಡ ಬ್ರಹ್ಮಾಂಡದ ಸಶೇಷ ಭಾಗ) (ಕವನ + ಕಿರು ಬರಹ)

00051. ಈ ಅಂಡ ಪಿಂಡ ಬ್ರಹ್ಮಾಂಡ …(ಕವನ + ಕಿರು ಬರಹ)

00050. ಈ ಏಪ್ರಿಲ್ಲಿಗೇಕೊ ಮುನಿಸು…(ಕವನ + ಕಿರು ಬರಹ)

00049. ಯುಗಾದಿಯಾಗಲಿ ಜಾಗತಿಕ…! (ಕವನ)

00048. ಒತ್ತಡಗಳ ಬೆತ್ತ ! (ಕವನ)

00047. ಸುಖಕಿರುವ ಅವಸರ….! (ಕವನ)

00046. ತ್ಸುನಾಮಿ ಹೊತ್ತಲಿ…(ಕವನ)

00045. ಗುಬ್ಬಣ್ಣನ ಸ್ವಗತಗಳು (ಚುಟುಕಗಳು)

00044. ಮುಗಿದರೆ ಇಹ ವ್ಯಾಪಾರ…..(ಕವನ)

00043. ಮಾತಿಗೊಬ್ಬರ ….(ಕವನ)

00042. ವಚನದಲ್ಲಿ ನಾಮಾಮೃತ ತುಂಬಿದ ವಚನಾಂಜಲಿ ಕಾರ್ಯಕ್ರಮ (ವರದಿ) (ಕನ್ನಡ ಸಂಘ + ವರದಿ + ಲೇಖನ)

00041. ‘ಕನ್ನಡ ಪ್ರಭ’ದ ಕಬ್ಬಿಗ ತೋಟದಲ್ಲರಳಿದ ಡಬ್ಲ್ಯು. ಬಿ. ಏಟ್ಸನ ಕವನ : ನನ್ನ ಮೊದಲ ಅನುವಾದದ ಯತ್ನ..(ಕವನ + ಬರಹ)

00040. ಆಗ್ನೇಯೇಷ್ಯಾದ ಹಣ್ಣಿನ ರಾಣಿ – ‘ಮಾಂಗಸ್ಟೀನ್’! (ಹಣ್ಣುಗಳ ಪರಿಚಯ + ಲಘು ಹಾಸ್ಯ)

00039. “ಮುದ್ದಣ್ಣ ಮನೋರಮೆ ಕಲಿತ ಚೀನಿ ಭಾಷೆ – 01!” (ಹಾಸ್ಯಬರಹ + ಹರಟೆ + ವ್ಯಂಗ್ಯ)

00038 – ಹೊಸ (ಹಳೆ) ರುಚಿ: “ಹಸಿ-ಹುಳಿ” (ಹೊಸ ರುಚಿ + ಲಘು ಹಾಸ್ಯ)

00037 – ರುಚಿಗೆ ರಾಜಾ, ವಾಸನೆಯೆ ಗಾರ್ಬೇಜಾ! (ಹಣ್ಣುಗಳ ಪರಿಚಯ + ಲಘು ಹಾಸ್ಯ)

00036 – ಈ ಕೆಂಪಮ್ಮನ ಹೆಸರೆ ಡ್ರಾಗನ್ ಫ್ರೂಟು, ನೋಡಲೆ ಸೊಗಸು ಅವಳಾಕಿದ ಸೂಟು! (ಹಣ್ಣುಗಳ ಪರಿಚಯ + ಲಘು ಹಾಸ್ಯ)

00035 – ಜುಟ್ಟಿನ ಬಟ್ಟೆ ಹೊದ್ದ ‘ಕೇಶೀರಾಜ’, ಮುತ್ತಿನ ಬಣ್ಣದ ‘ರಂಬೂತಾನ್’ ಹಣ್ಣೆ ಖನಿಜ! (ಹಣ್ಣುಗಳ ಪರಿಚಯ + ಲಘು ಹಾಸ್ಯ)

00034 – ವಿಷಾಪಹಾರಿ ‘ಡ್ರಾಗನ್ನಿನ ಕಣ್ಣು’, ಈ ರುಜಾಪಹಾರಿ ‘ಲೊಂಗನ್’ ಹಣ್ಣು! (ಹಣ್ಣುಗಳ ಪರಿಚಯ + ಲಘು ಹಾಸ್ಯ)

033A – ಸಿಂಗಾಪುರದ “ಹಾವ್ ಪಾರ ವಿಲ್ಲಾ” ದೃಶ್ಯ ಕಲಾ ತೋಟ! (photos) (ಪ್ರವಾಸಿ ತಾಣ ಪರಿಚಯ + ಪ್ರವಾಸ ಅನುಭವ)

033 – ಸಿಂಗಪುರದಲ್ಲಿನ ಚೀಣಿ ದೃಶ್ಯ ಕಾವ್ಯ “ಹಾವ್ ಪಾರ್ ವಿಲ್ಲಾ” ( ಪ್ರವಾಸಿ ತಾಣ ಪರಿಚಯ + ಪ್ರವಾಸ ಅನುಭವ + ಲಘು ಹಾಸ್ಯ)

00032 – ಸಂಪತ್ತಿನ ಬೀಜ, ಸಸಿ ಮತ್ತು ವೃಕ್ಷಗಳ ನೀತಿ ಭೋಧಕ ಕಥೆ (ಆಧುನಿಕ ಪುರಾಣ ಕಥಾ ಕಾಲಕ್ಷೇಪ)! (ಆಧುನಿಕ ನೀತಿ ಭೋಧೆ + ವಿಡಂಬನೆ + ವ್ಯಂಗ್ಯ)

00031 – ಅಪೂರ್ವ ಕವನದ ಕುರಿತು ಹಿರಿಯ ಕವಿಯೊಬ್ಬರ ಮಾತು (ಲೇಖನ + ಬರಹ + ಪ್ರಬಂಧ + ಕವನ + ವ್ಯಕ್ತಿತ್ವ )

00030 – ಪುಸ್ತಕ ವಿಮರ್ಶೆ: ಮಾವೋನ ಕೊನೆಯ ನರ್ತಕ (ಪುಸ್ತಕ ವಿಮರ್ಶೆ)

00029. ಇರುವೆ ಮತ್ತು ಒಂದು ತುಂಡು ರೊಟ್ಟಿಯ ಕಥೆ! (ಆಧುನಿಕ ನೀತಿ ಭೋಧೆ + ವಿಡಂಬನೆ + ವ್ಯಂಗ್ಯ)

00028. ಸಿಂಗನ್ನಡಿಗರಿಂದ ಸಿಂಗನ್ನಡಿಗರಿಗಾಗಿ! – ಸಿಂಗಾರ ಉತ್ಸವ 2013 (ಕನ್ನಡ ಸಂಘ + ವರದಿ + ಲೇಖನ )

00027. ಗುಬ್ಬಣ್ಣನ ಯೂನಿವೆರ್ಸಲ್ ಸ್ಟುಡಿಯೊ ದಂಡಯಾತ್ರೆ ! (ಭಾಗ – 02) (ಹಾಸ್ಯಬರಹ + ಹರಟೆ)

00026. ಗುಬ್ಬಣ್ಣನ ಯೂನಿವೆರ್ಸಲ್ ಸ್ಟುಡಿಯೊ ದಂಡಯಾತ್ರೆ ! (ಭಾಗ – 01) (ಹಾಸ್ಯಬರಹ + ಹರಟೆ)

00025. ಸರಿಯಪ್ಪಾ ಸಾಕು ಬಿಡು ಕಲಿಸಿದ್ದು ಸುಗ್ಗಿ, ಉರು ಹೊಡೆದೇ ಕಲಿವೆ ನಾ ಕನ್ನಡದ ಮಗ್ಗಿ! ( ಲಘು ಹಾಸ್ಯ + ಕಥನ + ಅನುಭವ)

00024. ಜತೆ ನೀ ಕಾಡಿಗೆ , ಹೋಗಲಿಲ್ಲವೇಕೆ ಊರ್ಮಿಳೆ? (ಬರಹ + ಕಾವ್ಯಬರಹ + ಪೌರಾಣಿಕ + ವ್ಯಕ್ತಿತ್ವ + ಪಾತ್ರ)

00023. ಶೂರ್ಪನಖಿ, ಆಹಾ! ಎಂಥಾ ಸುಖಿ! (ಬರಹ + ಕಾವ್ಯಬರಹ + ಪೌರಾಣಿಕ + ವ್ಯಕ್ತಿತ್ವ + ಪಾತ್ರ)

00022. ದುರಂತ ನಾಯಕಿ ಸೀತೆಯ ಬದುಕು………! (ಬರಹ + ಕಾವ್ಯಬರಹ + ಪೌರಾಣಿಕ + ವ್ಯಕ್ತಿತ್ವ + ಪಾತ್ರ)

00021. ಶ್ರೀ ರಾಮನಿಗೇನಿತ್ತನಿವಾರ್ಯ….? (ಬರಹ + ಕವನ + ಪೌರಾಣಿಕ + ವ್ಯಕ್ತಿತ್ವ + ಪಾತ್ರ)

00020. ಈ ದಿನ ಜನುಮದಿನಾ…..! (ಬರಹ + ಕವನ + ನೆನಪು + ಭಾವನೆ)

00019. ‘ಐ’ಗಳ ಪುರಾಣ – 01….’ಐ’-ಪೋನು, ಪಾಡು, ಪ್ಯಾಡುಗಳ ಪಾಡಿನ ಹರಟೆ, (ಪ್ರಬಂಧ + ಲೇಖನ + ಕಥನ + ಹರಟೆ + ಅನುಭವ)

00018. ಸಿಂಗಪೂರ ಸುತ್ತಾಟ, ಊಟ – ಸಿಕ್ಕಿತ ಕನಿಷ್ಟ ರೋಟಿ, ಪರಾಟ..? (ಪ್ರವಾಸದ ಅನುಭವ + ಕವನ + ಲಘು ಹಾಸ್ಯ )

00017. ಹುಡುಕೂ, ವರ್ಷದ್ಹುಡುಕು ..! (ಹಬ್ಬ + ಹರಿದಿನ + ಸಂಪ್ರದಾಯ + ಬರಹ + ಲೇಖನ)

00016. ಅಂತರಂಗದಂತಃಪುರದ ಕದಪದ ಮನದನ್ನೆಯರು…! (ಬರಹ + ಕವನ + ಅನುಭವ + ಆಡಳಿತಾತ್ಮಕ + ಲಘು ಹಾಸ್ಯ)

00015 – ತರ ತರ ಋತು ಸಂವತ್ಸರ……ಹಳತೊಸತು ಮೇಳೈಸಿತೊ ಬೆರೆತು! (ಹಬ್ಬ + ಹರಿದಿನ + ಸಂಪ್ರದಾಯ + ಬರಹ + ಕವನ)

00014 – ಉಚ್ಚೈಶ್ರವಸ್ಸಿನ ಕಪ್ಪು ಬಾಲದಮಚ್ಚೆ….! (ನೀಳ್ಗಾವ್ಯ + ಕಾವ್ಯ + ಪೌರಾಣಿಕ)

00013 – ಹಾರುತ ದೂರಾದೂರ…..! (ಅನುಭವ + ಪ್ರಬಂಧ + ಹಾಸ್ಯಲೇಖನ + ಲಘು ಹಾಸ್ಯ)

00012. ಹೆಚ್ಚು ಬೆಲೆಯೆಂದರೆ ಶ್ರೇಷ್ಟ ಗುಣಮಟ್ಟವಿರಬೇಕೆಂದೇನಿಲ್ಲ, ಗೊತ್ತಾ! (ಆಡಳಿತಾತ್ಮಕ + ಮ್ಯಾನೇಜ್ಮೆಂಟು + ವ್ಯವಸ್ಥೆ + ವಾಸ್ತವ)

00011. ಲಘು ಪ್ರಬಂಧ: ನನ್ನ ಪ್ರಧಾನ ಸಂಪಾದಕ ಹುದ್ದೆ…! (ಅನುಭವ + ಪ್ರಬಂಧ + ಹಾಸ್ಯಲೇಖನ + ಲಘು ಹಾಸ್ಯ)

00010. ವಿಮರ್ಶೆ : ಕವನ ಸಂಕಲನ: “ಅಂತರ ಹಾಗು ಇತರ ಕವನಗಳು” ಕವಿ: ವಸಂತ ಕುಲಕರ್ಣಿ

00009. ತೊಡಕುಗಳನು ಬಿಡಿಸಲು “ತೊಡಕಿನ ಸಿದ್ದಾಂತ – 01” – (ತೊಡಕು ಸಿದ್ದಾಂತ) (ತಾಂತ್ರಿಕ + ಮ್ಯಾನೇಜ್ಮೆಂಟು + ವ್ಯವಸ್ಥೆ )

00008. ಆ “ಸ್ವಾಭಿಮಾನದ ನಲ್ಲೆ” ಯರ ನೆನೆನೆನೆದು…..(03) (ಬರಹ + ವಿಡಂಬನೆ + ಲೇಖನ)

00007. ಆ “ಸ್ವಾಭಿಮಾನದ ನಲ್ಲೆ” ಯರ ನೆನೆನೆನೆದು…..(02) (ಬರಹ + ವಿಡಂಬನೆ + ಲೇಖನ)

00006. ಆ “ಸ್ವಾಭಿಮಾನದ ನಲ್ಲೆ” ಯರ ನೆನೆನೆನೆದು…..(01) (ಬರಹ + ವಿಡಂಬನೆ + ಲೇಖನ)

00005. ಮೆಲ್ಲುಸಿರೆ ಸವಿಗಾನ….! (ಬರಹ + ಭಾವನೆ + ವಿಮರ್ಶೆ)

00004. ಗಮನೇಶ್ವರಿಯ ಗಮಕ, ವಯಸ್ಸಿನಾ ಮಯಕ…! (ಬರಹ + ಅನುಭವ)

00003. ನೀನೋದಿದ ವಿದ್ಯೆಗೆಲ್ಲಿಡುವೆ ನೈವೇದ್ಯ? (ಲೇಖನ)

00002. ಏನಾಗಿದೀದಿನಗಳಿಗೆ? (ಲೇಖನ)

00001. ಮೊದಲ ಬ್ಲಾಗ್ – ಮನದಿಂಗಿತಗಳ ಸ್ವಗತ! (ಬರಹ + ಕವನ)