00856. ತಾತನ ಕಾಲದ ಆರಾಮ ಕುರ್ಚಿ


00856. ತಾತನ ಕಾಲದ ಆರಾಮ ಕುರ್ಚಿ
____________________________

Satya HG ಸಾರ್ ಅವರ ಹತ್ರ ಇರೋ ಒಂದು ಆರಾಮ ಚೇರಿನ ಚಿತ್ರದ ಜೊತೆಗೊಂದು ಪೋಸ್ಟ್ ಹಾಕಿದ್ರು (FB). ಅದರ ಜತೆಗೆ ನನಗು ಸ್ವಲ್ಪ ಹಳೆ ನೆನಪು ಕೆದಕಿದಂತಾಗಿ ಆರಾಮ ಕುರ್ಚಿ ಮೇಲೊಂದು ಪದ ಕಟ್ಟಿಸಿಬಿಡ್ತು. ಅದು ಇಲ್ಲಿದೆ – ಸತ್ಯ ಸಾರ್ ಪ್ರೇರಣೆಯಾಗಿದ್ದಕ್ಕೆ ಥ್ಯಾಂಕ್ಸ್ 🙏😊 !


ಆರಾಮ ಚೇರು
ನೆನಪುಗಳದೇ ತೇರು
ತಾತನ ಕಾಲದ ಆಸ್ತಿ
ಮೊಮ್ಮಕ್ಕಳಾಡಿದ್ದೆ ಜಾಸ್ತಿ ! ||

ಹಳೆ ಮರದ ಫ್ರೇಮು
ಆಯತದ ಉದ್ದನೆ ರಿಮ್ಮು
ಮೂರನೆ ಒಂದಳತೆ ತುದಿಗೆ
ಮತ್ತೊಂದಾಯುತ ಕಟ್ಟಿತ್ತೆ ಕೆಳಗೆ ! ||

ಅದರಾ ಹಿಂದಿನ ತುದಿಗೆ
ಚಕ್ಕೆ ಮೆಟ್ಟಿಲು ಕೆತ್ತಿದ ಹಾಗೆ
ಮೂರನೆ ಒಂದುದ್ದದ ಮೇಲಿಂದ
ಮೂರ್ಕಡ್ಡಿಯ ಆಯತ ಕೆಳ ಬಂದ ! ||

ಮೊದಲ ಮೆಟ್ಟಿಲ ಮೇಲೆ ಕೂತ
ನಡು ಮೆಟ್ಟಿಲಿಗೆ ಜಾರಿ ಒರಗುತ್ತಾ
ಮೂರನೆ ಮೆಟ್ಟಿಲಿಗರ್ಧ ಮಲಗುತ್ತಾ
ಕೊನೆ ಮೆಟ್ಟಿಲಿಗಿಡೆ ನಿದಿರಾ ಚಕ್ಕಂದ ! ||

ಹಾಸಿದ ಬಟ್ಟೆ ಸೊಗ ತೂಗಾಟ
ತೂಕಡಿಕೆ ತೊಟ್ಟಿಲ ಮಗುವಾಟ
ತುದಿ ಮಡಚಿ ಹೊಲಿಗೆ ಕೊಳವೆ ತೂಬು
ದುಂಡುದ್ದನೆ ದೊಣ್ಣೆ ತುರುಕೊ ತೂತಿನ ಜೇಬು ! ||

ನೆನಪಲ್ಲಿದೆ ಮಕ್ಕಳದೊಂದೇ ಆಟ
ಕಳಚವಿತಿಟ್ಟು ದೊಣ್ಣೆ ಬಟ್ಟೆಯ ಹಾಸಿಟ್ಟ
ಕೂತವರಲ್ಲೆ ದೊಪ್ಪನೆ ಕುಸಿದು ಅಂಡು
ಸದ್ದಾಗುತ ಲಬಲಬ ಕೂಗೆ ಸೈನ್ಯವೆ ದೌಡು ! ||

ಇತಿಹಾಸ ಚರಿತೆ ಪರಿಕರವಿದ್ದು ದಹ್ಯ
ರಂಗಿನ ಹಂಗಿಲ್ಲದೆ ಹಳೆಬೇರಿನ ಸಾಹಿತ್ಯ
ಹೊಸ ಚಿಗುರುಗಳರಿತಾವೆ ಅಗ್ಗದ ಈ ಸೌಖ್ಯ ?
ಹಳತು ಹೊಸತಿಗೆ ಸೇತುವೆಯಾಗೋ ಸಾಂಗತ್ಯ ! ||

– ನಾಗೇಶ ಮೈಸೂರು