00437. ಬದುಕಿನ ಬಟ್ಟೆ ಸರಿಯೊಗೆಯದೆ ಕೆಟ್ಟೆ…


00437. ಬದುಕಿನ ಬಟ್ಟೆ ಸರಿಯೊಗೆಯದೆ ಕೆಟ್ಟೆ…
__________________________________

ಬೇಸಿಗೆಯಲೊಗೆದು ಒಣಗಿ ಹಾಕು ಬದುಕು
ನಡುಗೊಣದ ಚಳಿಗಾಲದಲಲ್ಲ
ಗೊಣಗಾಡಿ ಮುದುರಿ ಬೆಚ್ಚಗಾಗಲೂ ಬೇಕು
ಹರಿದಿದ್ದರು ಒಣಗಿದ ಕಂಬಳಿ ಚಾದರ ||

ಚಳಿಗಾಲದಲಾಗಲೆ ಶೀತಲ ಮಥನ
ಮತ್ತದನೇಕೆ ಪದೇಪದೇ ಒಗೆವಾಟ ?
ಎಚ್ಚರವಿರಬೇಕಲ್ಲಿ ಒಗೆಯಲೇಕೆಲ್ಲ ಒಮ್ಮೆಗೆ
ಇದ್ದೂ ಒಣಗದ ಶುದ್ಧ ಧರಿಸಲೆಂತು ಒಳಗೆ ? ||

ಬೆವರಿಸಿ ಕೊಳೆಸಿ ಹೊಲಸಾಗಿಸುವ ಬೇಸಿಗೆ
ಯಾಕಲ್ಲಿ ಒಗೆಯುವುದಿಲ್ಲ ಆಗೀಗೊಮ್ಮೆ?
ಒಗೆದರು ಸುಲಭ ಒಣಗಿ ದಿರುಸು ಬಿಸಿಲಲ್ಲೆ
ಕಾಯುವುದೇಕೆ ಚಳಿಗೆ ಬೇಡದಿದ್ದರು ಭುಗಿಲೆ ||

ಬೇಕಿದ್ದೊಂದು ಇರುವುದು ಹತ್ತಾದರು ಬಾಳು
ಕೊಟ್ಟ ಆಯ್ಕೆಯನಾಯ್ದು ಹೆಕ್ಕಬೇಕು ಹರಳು
ಒಗೆದದ್ದೊಂದು ಒಣಗಿಸಿದ್ದಿನ್ನೊಂದು ಬಗಲೊಂದು
ಕಲಸುಮೇಲೋಗರವಾಗೆ ಇದ್ದು ಇಲ್ಲದ ಬಡತನ ||

ನಡುವಲುಂಟು ಮಳೆಗಾಲ ವಸಂತ ತರ ತುಂಟ
ಮಡಿಯುಡದೆ ಮನ ಶುಭ್ರವಾದೀತೆ ಬದುಕಲು ?
ಒಗೆದೊಣಗಿಸಿ ಮಡಿಸಿ ಒತ್ತಿ ನಯವಾಗಿಸಿಡೆ ಜತನ
ಕಾಲಾಕಾಲದಣತಿ ಮೀರಿ ಎದೆಯೆತ್ತಿ ನಿಲ್ಲುವ ಸುಗಮ ||