00833. ಕುಂಚದ ಸಾಂಗತ್ಯದಲ್ಲಿ ಲೇಖನಿಯ ಕೊಸರಾಟ..


00833. ಕುಂಚದ ಸಾಂಗತ್ಯದಲ್ಲಿ ಲೇಖನಿಯ ಕೊಸರಾಟ.. 
___________________________________________

ಅದ್ಭುತ ಕುಂಚ ಕಲೆ ಏನೆಲ್ಲಾ ತರದ ಪ್ರೇರಣೆಯಾಗಬಹುದು ಎನ್ನುವುದು ಕಲ್ಪನಾತೀತ ಲಹರಿ. ನೋಡುವವರ ಗ್ರಹಿಕೆ, ಭಾವಕ್ಕೆ ತಕ್ಕಂತೆ ಅನಾವರಣವಾಗುವ ಮನೋಭಾವ ಅದರದು. ಹೀಗಾಗಿಯೆ ಕಲಾಕೃತಿಗೊಂದು ಚೌಕಟ್ಟು ಹಾಕಿ ಹೀಗೆಯೆ, ಇಷ್ಟೇ ಎಂದು ಪರಿಮಿತಿ ಹಾಕಲು ಸಾಧ್ಯವಿಲ್ಲ. ಇನ್ನು ಆ ಕುಂಚಕ್ಕೊಂದು ಕಾವ್ಯದ ಕುಪ್ಪಸ ತೊಡಿಸಹೊರಟರೆ ಹೇಳುವ ಹಾಗೆ ಇಲ್ಲ. ಎರಡು ಅಪರಿಮಿತಗಳ ಪರಿಧಿ ಕಲೆತು, ಮೇಳೈಸುವ ವಿಶಿಷ್ಠ ಸನ್ನಿವೇಶವದು.

ಇಂತದ್ದೊಂದು ಸನ್ನಿವೇಶ ಸೃಷ್ಟಿಯಾಗಿದ್ದು ಸುಶ್ಮಿತಾ ಸಪ್ತರ್ಷಿಯವರ ಕೈ ಚಳಕದಲ್ಲಿ ಹೊರಹೊಮ್ಮಿದ ಈ ಚಿತ್ರವನ್ನು ಕಂಡಾಗ. ಎರಡು ಕವನಗಳಾಗಿ ಮತ್ತೊಂದು ಕಿರುಗವನವಾಗಿ ಹರಿದಿತ್ತು ಕುಂಚ ಮತ್ತು ಲೇಖನಿಯ ಸ್ನೇಹದ ‘ಜುಗಲ್ಬಂದಿ’. ಅದೀಗ ನಿಮ್ಮೆದುರಿಗೆ – ಚಿತ್ರ ಬಳಸಿಕೊಳ್ಳಲು ಅನುಮತಿಸಿದ ಸುಶ್ಮಿತರಿಗೆ ( Sushmitha Saptharshi ) ಕೃತಜ್ಞತೆ ಹೇಳುತ್ತಾ 🙏😊


(ಚಿತ್ರ / ಕುಂಚ ಕೃಪೆ : ಸುಶ್ಮಿತಾ ಸಪ್ತರ್ಷಿ Sushmitha Saptharshi)

1. ನಡೆ ಬದುಕಿಗೆ ಹಿಮ್ಮೆಟ್ಟದೆ..
________________________

ಯಾಕೀ ಚಡಪಡಿಕೆ ?
ಅಂತರಾತ್ಮದ ಪರಬ್ರಹ್ಮ
ಮಿಸುಕಾಡದೆ ಬರಬಾರದೆ ಹೊರಗೆ
ನಾದವೋ ನಿನಾದವೋ ಸ್ವರವಾಗಿ..
ಸುಮ್ಮನೇಕಿ ವಿಲಾಪ ಒಳಗೊಳಗೆ
ಹೇಳಲಾಗದ ತೆವಲು, ಬೇನೆ, ಪ್ರಲಾಪ..

ನಿಜ ಗೊಂದಲ ಗಡಿಬಿಡಿ ನಿಲುವು
ಯಾರೂ ಅರ್ಥೈಸದ ನೋವು
ಯಾರು ತಾನೇ ಅರ್ಥೈಸಬೇಕು ?
ಎಲ್ಲ ಅವರವರ ಭಾವ ಭಕುತಿಯ ಧೂರ್ತ
ಬೇಳೆ ಬೇಯಿಸಿಕೊಳ್ಳುವ ಸ್ವಾರ್ಥ..
ನಕ್ಕು ಹಗುರಾಗದೆ ಹೀಗೆ ಬಿಕ್ಕಲೇಕೆ ?

ಗೂಡು ಕಟ್ಟಿದಂತೆಲ್ಲ ಹುತ್ತ
ದಿನದಿನ ಕ್ಷಣ ಕ್ಷಣ ಕೊರಗಿತ್ತ
ಸೊರಗುತ್ತಾ ಮರುಗುತ್ತ ಶಪಿಸುತ್ತ
ದೂರಾಗುತ್ತಾ ಸರಿದೊಳಗೊಳಗೊಳಗೆ
ಕುಸಿದು ಪ್ರತಿಗಳಿಗೆಯಲು
ಹಚ್ಚಿ ಕೀಳರಿಮೆಯ ದೀವಟಿಗೆ..

ಅದೇ ಅಚ್ಚರಿಯ ಗಳಿಗೆ
ದೀಪದ ಕಣ್ಣೀರಲೂ ಮಿಂಚು, ಬೆಳಕು
ಕೈ ಬಿಡಲಿಲ್ಲ ಕಾಣಿಸುತೇನೋ ಹೊಸತ
ಅಂತರ್ಯಾನದ ಗುನುಗು, ಸಂಗೀತ
ಪಿಸುಗುಟ್ಟುವ ನನ್ನತನ, ಏನೋ ಆತ್ಮಸ್ಥೈರ್ಯ
ಬರೆಯುತಿದೆ ಹೊಸ ಬದುಕ !

2. ಅಸಹಾಯಕ’ಗಳಿಗೆ’…
_____________________

ಅಸಹಾಯಕತೆಗಳೇ ಹೀಗೆ..
ಉಸಿರುಗಟ್ಟಿ ನಿಗುರಿಕೊಂಡುಬಿಡುತ್ತವೆ
ಒಳಗೊಳಗೆ.
ಅಡಗಿಕೊಂಡು ಅಂತರಾಳದ ಪೆಟ್ಟಿಗೆ
ಅರಚಿದರೂ ಇಲ್ಲ, ಕಿರುಚಿದರೂ ಇಲ್ಲ
ಮಿಸುಕಿ ವಿಲವಿಲ ಒದ್ದಾಡುವ ಭ್ರೂಣದ ಹಾಗೆ..

ಮಾಡಿದ ಸದ್ದೆಲ್ಲಾ ಶಬ್ದಾತೀತ
ಆಟಕ್ಕುಂಟು ಲೆಕ್ಕಕ್ಕಿಲ್ಲದ ಗಣಿತ ;
ಎಷ್ಟೊಂದು ಚೆಂದದ ಮುಖವಾಡ ?!
ಭ್ರೂಣಕ್ಕೆ ಹೊದಿಸಿದ ಹಿರಿಭ್ರೂಣ
ಊನವಾಗದಂತೇನೊ ಹೊರದೇಹದ ಭ್ರಮೆ..

ಬಚ್ಚಿಟ್ಟು ಮುಚ್ಚಿಟ್ಟ ಆರ್ತನಾದ
ಸದ್ದಡಗಿಸಿದರು ಮಸುಕಾಗಿಸಿದರು
ಬಡಪೆಟ್ಟಿಗೆ ಬಗ್ಗದ ಚೇತನ..
ಚಾಚಿದ ಕೈಯಲ್ಲಿ ಹಿಡಿಸುತಿದೆ ಕೋವಿ
ಸಿಡಿಸಿ ನೆತ್ತರಾಗಿಸುವ ಅನುಭೂತಿ, ಅನುಭಾವ
ಯಾಕೊ ಚೆಲ್ಲಿದರು ಸದ್ದೇ ಇಲ್ಲ !
ಮತ್ತದೇ ಸ್ವರ ಹೊರಡದ ಅಸಹಾಯಕ ಕೂಗು..
ಪರಾ ಪಶ್ಯಂತಿ ಮಧ್ಯಮಾ ವೈಖರಿ ಶಬ್ದಬ್ರಹ್ಮ ..

ಚಡಪಡಿಸುತ ಜಾಡಿಸಿದ ಗುರುತು ತೆರೆಯೀಚೆಗೆ
ಹನಿಸುತಿದೆ ತುದಿ ಬೆರಳು, ತೋಳಿನ ನರಳು
ಕಸು ಸೋತು ಜಾರುವ ಮುನ್ನ..
ಜಾರುತಿದೆ ಬಿಗಿ ಹಿಡಿತ
ಮಂಜಿನಡಿಯ ಗಾಜ ಹಲಗೆಯೂ ಚಾಣಾಕ್ಷ
ಬಚ್ಚಿಡುತೆಲ್ಲವ ಏನೋ ಹುನ್ನಾರದೆ.

ಕೊನೆಗೂ ನಿಡಿದಾದ ನಿಟ್ಟುಸಿರಿಗೆ
ಆಸರೆಯಾದದ್ದೊಂದು ಸೀಸದಕಡ್ಡಿ
ಬಳಲಿ ಕಳುವಾಗುವ ಮೊದಲೆ
ಕುಂಚವಾಗಿ ಮನ ಕೋವಿಯ
ಚಿತ್ತಾರ ಬಿಡಿಸಿಟ್ಟಿತ್ತು –
ತಗ್ಗಿಸಿದ ತಲೆಯೆತ್ತಬಿಡದ
ಕುಸಿದು ಕೂತು ಹೋಗಲು ಎಡೆಗೊಡದ
ಅಸಹಾಯಕ ಗಳಿಗೆ..

3. ಮರಗಟ್ಟಿದ ತೋಳಲು
ಬಳಲಿ ಕುಸಿಯುತಿಹ ದೇಹದಲೂ
ನರ ನಾಡಿಗಳಿನ್ನು ಜೀವಂತ –
ಹರಿದ ನೆತ್ತರಿನ ಕುರುಹಲಿ..
– ಜೀವಂತಿಕೆಯ ಬಸಿರು.

– ನಾಗೇಶ ಮೈಸೂರು