02180. ಗೆಳತಿ ನಿನ್ನ ಮನದಲಿ..


02180. ಗೆಳತಿ ನಿನ್ನ ಮನದಲಿ..

______________________________

ನಿನ್ನ ಮನದ ಕೊಳದಲಿ

ಸಿಕ್ಕಿಬಿದ್ದ ಮೀನೂ ನಾನು

ತೆಗೆದೆಸೆದೀಯಾ ಹೊರಗೆ ಜೋಪಾನ,

ಅಲ್ಲೆ ಕೊನೆಯುಸಿರು ಎಳೆದೇನು !

ನಿನ್ನ ಮನದಲ್ಲೇನಿದೆ ಎಂದು

ಬಿಡು ನೀನೇನು ಬಲ್ಲೆ, ಮರುಳೆ ?

ಈಜುತಿರುವೆನಲ್ಲೆ ಹಗಲಿರುಳು ಸತತ

ನಾ ತಾನೆ ನಿನ್ನೊಳಗೆಲ್ಲವ ಕಾಣಬಲ್ಲೆ !

ನಿನ್ನ ಚಂಚಲತೆ ಗೊಂದಲವೆಲ್ಲ

ಕಣ್ಣಿಗೆ ಕಟ್ಟಿದ ಚಿತ್ರಪಟವೆ ನಿನ್ನಾಣೆ

ಹೇಳದಿದ್ದರು ತಡಕಾಡಿಸೊ ತವಕ

ಕಾಣುತಿರುವೆನೆ ಹೇಳಿದೆ ನಿನ್ನ ಒಳಗಣ್ಣೆ !

ನಿಜವೆ ಅರಿತವರಿಲ್ಲ ಹೆಣ್ಣಿನ ಮನಸ

ಅಂತೇ ಅರಿತವರಿಲ್ಲ ಮೀನಿನ ಹೆಜ್ಜೆ

ನಾನೇ ಮೀನಾಗಿ ನಿನ್ನ ಮನದಲ್ಲೀಜೇ

ಅರಿಯದಿಹೆವೇನೆ, ನಮ್ಮಿಬ್ಬರದೆ ಗೋಜೆ !

ಬದುಕುವೆನಲ್ಲೆ ಕುಡಿದು ನಿನ್ನಂತರ್ಜಲವ

ಜೀವಂತಿಕೆಯಲಿಡುತ ನಿನ್ನ ಮನದ ಭಾವ

ಅಲ್ಲಿದ್ದರಿತರೆ ಗೆಳತಿ ನಿನ್ನಾ ಮನೋಭಾವ

ನೆರಳಂತನುಕರಿಸೆ ಸುಲಭ ನೀಡುತ್ತ ಮುದವ !

– ನಾಗೇಶ ಮೈಸೂರು

(Picture credit : Yamunab Bsy)

01142. ಗೆಳತಿ – ಮೇಷ್ಟ್ರು – ತಪಸ್ಸು – ಚಿಲಿಪಿಲಿ


01142. ಗೆಳತಿ – ಮೇಷ್ಟ್ರು – ತಪಸ್ಸು – ಚಿಲಿಪಿಲಿ

(https://www.facebook.com/groups/1560329694270739/permalink/1643288342641540/)


ಬಾಲ್ಯದ ಗೆಳತಿ ಬಾಳಿಗೆ, ಸಿಕ್ಕದ ದುಃಖ ಅಳಲು
ಮರೆಯೆ ಹೊಟ್ಟೆಪಾಡಿನ ನೆಪದೆ, ಉದ್ಯೋಗ ಮೇಷ್ಟ್ರು
ಬಿಡದ ನೆನಪಾಗಿ ತಪಸ್ಸು, ಉರುಳಿತ್ತು ಬಾಳ ಬಂಡಿ
ಬಂದಳು ಮಕ್ಕಳನಲ್ಲೆ ಹಾಕೆ, ಒಳಗೇನೋ ಚಿಲಿಪಿಲಿ !

– ನಾಗೇಶ ಮೈಸೂರು
(Picture source : internet / Creative Commons)

00758. ಹಚ್ಚಿ ವಿದಾಯದಲೊಂದು ಹಣತೆ..


00758. ಹಚ್ಚಿ ವಿದಾಯದಲೊಂದು ಹಣತೆ..
___________________________


ಹಚ್ಚಿಬಿಡು ಬೆಳಕೊಂದನು ಗೆಳತಿ
ಆದರೂ ಸರಿ ಕೊಟ್ಟ ಕೊನೆಯ ಬಾರಿ
ಬಿಟ್ಟುಹೋದರು ದೂರ ನಕ್ಷತ್ರವಾಗಿ
ಹಚ್ಚಿಟ್ಟ ಬೆಳಕ ಗೆರೆ ಮಿಂಚಲಿ ಕತ್ತಲಲಿ

ಯಾಕೆ ಬೇಕು ದೂರು? ದುಗುಡ ದುಮ್ಮಾನ
ಹಚ್ಚಿಕೊಂಡೆವು ನಾವು, ನಮಗೆಂಥ ಬಿಗುಮಾನ ?
ಅನುಮಾನ ಬಿಡು ಗೆಳತಿ ಸರಿ ತಪ್ಪು ಬೇಕೆ ?
ನಮ್ಮಭಿಮಾನದ ಕೂಸು ನಮ್ಮತನ ಸೊಗಸೇ..

ನೋಡು ದಿಗಿಲಿಲ್ಲಾ ಇನಿತು ನಮ್ಮ ಸಖ್ಯ
ಅರಿಸಿತಲ್ಲವೆ ನಂಟು ನಮ್ಮಂತರಾಳಗಳ
ಅರಿತ ಮೇಲರಿತರೂ, ಅರೆಕೊರೆಗಳ ಹೊರೆ
ಕುಗ್ಗಬೇಕೆ ಗೌರವ ? ಪರಿಪಕ್ವ ತಾನೆ ಯಾರೆ ?

ನನಗದೆ ಹೆಮ್ಮೆ ಗರ್ವ ಇದ್ದಷ್ಟೆ ಜತೆಗೆ
ಎಷ್ಟು ಸಂತಸ ಕನಸ ಹಂಚಿತೆ ಆ ಗಳಿಗೆ ?
ಹುರಿದುಂಬಿಸಿದ ಮಾತು, ಕಾದ ಆತಂಕದ ಹೊತ್ತು
ಸುಳ್ಳಾಗಿಬಿಡುವುದೇನು ? ದೂರವಾದ ಇ ದಿನದೆ…

ಇರಲಿ ಬಿಡು ಅಲಿಖಿತದೆ, ಒಪ್ಪಂದ ನಮ್ಮ ನಡುವೆ
ಕೆಸರೆರಚುವಿಕೆ ಬೇಡ, ಗೌರವವಿರಲಿ ಬಿಡದೆ
ಹಾರೈಸಲಿ ಮನಸು, ಸುಂದರ ಭವಿತದ ಕನಸು
ನನಸಾಗಲೆಂದು ಜೊತೆ, ಹಚ್ಚಿಬಿಡುವ ಹೊಸ ಹಣತೆ..

– ನಾಗೇಶ ಮೈಸೂರು

(Picture source : http://m.wikihow.com/Break-up-With-a-Guy-Nicely)

00665. ಅರ್ಥವಾಗುವುದೇ ಇಲ್ಲ !


00665. ಅರ್ಥವಾಗುವುದೇ ಇಲ್ಲ ! (2 poems)
__________________________________

ಮನಗಳ ನಡುವಿನ ಸಂವಹನದಲ್ಲಿ, ಪರಸ್ಪರರ ನಿರೀಕ್ಷೆಗಳ ಸುತ್ತ ಸುಳಿದಾಡುವ ಪರಿಯಿಂದಾಗಿ ಅದು ಗೆಳೆಯ – ಗೆಳತಿಯರ ಸಖ್ಯದಲ್ಲಿ ತಂದೊಡ್ಡುವ ಸಂಕಷ್ಟ – ಸಂದಿಗ್ದಗಳ ಪರಿಸ್ಥಿತಿ ಕೆಲವೊಮ್ಮೆ ವಿವರಣೆಯ ಎಟುಕಿಗೆ ನಿಲುಕದ್ದು. ಏನೇನೊ ಚದುರಂಗವಾಡಿಸಿ, ಏನೆಲ್ಲಾ ತಪ್ಪೆಣಿಕೆಗಳ ಸುತ್ತ ಸುತ್ತಾಡಿಸಿ, ಹೊಂದಾಣಿಸಿ- ಮುರಿಸಿ , ಮತ್ತದನೆ ಮರುಕಳಿಸಿ, ಯಾತನೆ ಒತ್ತಡಗಳಲಿ ತಡಕಾಡಿಸಿ ಸುಸ್ತು ಮಾಡಿ ‘ಯಾಕಪ್ಪ ಬೇಕೀ ನಂಟು ?’ ಎಂದು ನಿಟ್ಟುಸಿರಿಡುವಂತೆ ಮಾಡಿಸುವ ಅದರ ಸಹವಾಸ ಎಲ್ಲರಿಗೂ ಪರಿಚಿತವೇ. ಅದರಲ್ಲೂ ಹಳಸಿದ ಸಂಬಂಧದ ಪರಿಧಿಯಾಗಿಬಿಟ್ಟರೆ ತಾವಾಗಿಯೇ ಕಟ್ಟಿಕೊಂಡ ಮೌನದ ಬೇಲಿ ದಾಟಲಾಗದೆ, ಏನೇನೊ ಸ್ವಯಂಕಲ್ಪಿತ ಸಂಕೋಲೆಗಳಡಿ ಕೊರಗುತ್ತ, ಪರಸ್ಪರರಿಗೆ ಅರ್ಥವಾಗದವರಾಗುವ ಸಂಬಂಧದ ಸಂಕೀರ್ಣತೆಯ ಒಂದು ಮುಖ – ‘ಅರ್ಥವಾಗದ ಗೆಳೆಯ’ ಕವಿತೆ; ಅದರ ಮತ್ತೊಂದು ಮುಖ ‘ಅರ್ಥವಾಗದ ಗೆಳತಿ’. ಇವೆರಡು ಕವಿತೆಗಳ ಒಟ್ಟಾರೆ ಮಥಿತಾರ್ಥವನ್ನು ಸಾರದಲ್ಲಿ ಹೇಳುವುದಾದರೆ – ಇದೊಂದು ಪರಸ್ಪರರಿಗೆ ಮತ್ತು ಸ್ವತಃ ತಮಗೂ ಸಹ ತಾವೇನೆಂದು ಅರ್ಥವಾಗದವರ ಆಲಾಪ, ಗೋಳು!

  
01. ಗೆಳತಿ, ನಿನಗಿದೆಲ್ಲ ಅರ್ಥವಾಗುವುದೇ ಇಲ್ಲ !
________________________________

ಗೆಳತಿ,
ನಿನಗಿದೆಲ್ಲಾ
ಅರ್ಥವಾಗುವುದಿಲ್ಲ !
ಕಾಲಗರ್ಭದ ಆಳದಲೆಲ್ಲೋ
ಹುದುಗಿದ
ನೋವಿನ ಸೆಲೆ
ಬಸಿರಾಗದ ಸಂಕಟಕ್ಕೆ
ಬಿಕ್ಕಳಿಸುತ್ತಿದೆ ;
ಹರವಾದ ಎದೆಗಿತ್ತ
ಗುದ್ದನ್ನೆಲ್ಲಾ ಸಹಿಸಿ –
ನಿಟ್ಟುಸಿರು ನುಂಗುತ್ತ,
ಸಾಯಲಾಗದೆ
ಬದುಕಿದೆ
ಆಗ..
ನೀನಾದರೂ
ಸಂತೈಸಿ
ಜೀವ ಕೊಡುವೆಯೆಂದರೆ –
ಗೆಳತಿ, ನಿನಗಿದೆಲ್ಲ ಅರ್ಥವಾಗುವುದೇ ಇಲ್ಲ ||

ವೇದನೆಯ ಮಡು
ಇರುಳಾಗಿ ಕಾಡುತಿದೆ
ಕೆಸರಿನಡಿ ಸಿಲುಕಿ
ಕನಸು ಕಣ್ಮರೆಯಾಗಿದೆ..
ಆಳ ಹೊಕ್ಕು ನೋಡಲೆಂದರೆ
ಹೂತು ಹೋಗುವ ಭಯ !
ಸುಮ್ಮನೆ
ಮೌನದ ಸೆರಗ್ಹಿಡಿದೆ..
ನೀ
ಮತ್ತೆ ಮತ್ತೆ ಕಾಡಿದೆ –
‘ಏನಾಗಿದೆ ನಿನಗೆ ?’
ನಾ ಮೌನದಲೇ ಉಸುರಿದೆ
ಗೆಳತಿ, ನಿನಗಿದೆಲ್ಲ ಅರ್ಥವಾಗುವುದೇ ಇಲ್ಲ ||

– ನಾಗೇಶ ಮೈಸೂರು

02. ಗೆಳೆಯಾ, ನೀ ನನಗರ್ಥವಾಗುವುದೇ ಇಲ್ಲ!
__________________________________

ಸಂಬಂಧಗಳು
ಹುಟ್ಟುತ್ತವೆ, ಸಾಯುತ್ತವೆ
ಭಾವನೆಗಳಂತೆ !
ಭಾವನೆಗಳು
ಅರಳುತ್ತವೆ – ಕಮರುತ್ತವೆ
ಆಸೆಗಳಂತೆ !
ಆಗೊಮ್ಮೊಮ್ಮೆ
ಗಪ್ಪನೆಯ ಏಕಾಂತ
ನೀರವತೆ ಆವರಿಸಿದಾಗ
ಮುಸುಕಿನೊಳಗಿನ
ಸೆಖೆಗೆ ಬೇಸತ್ತು
ಮೆತ್ತನೆಯ ಮಡಿಲನರಸಿ
ನಿನ್ನತ್ತ ನೋಡುತ್ತೇನೆ,
ಕಣ್ಣರಳಿಸುತ್ತೇನೆ,
ಯಾಚಿಸುತ್ತೇನೆ ಗೆಳೆಯಾ ;
ಇದೆಲ್ಲ – ನಿನಗರ್ಥವಾಗುವುದೇ ಇಲ್ಲಾ ||

ಏಕೆ ಇಲ್ಲದ ಚಿಂತೆ-
ಕೊನೆ ಮುಟ್ಟದ ರಗಳೆ?
ಅನಿಸಿ,
ತೆರೆ ಸರಿಸಲೆಣೆಸುತ್ತೇನೆ ;
ನಿನಗರ್ಥವಾಗದ
ನನ್ನತನವ
ತೊರೆಯಲೆತ್ನಿಸುತ್ತೇನೆ
ಭೂತದ ಛಾಯೆಯಡಿ,
ಭವಿತದ ಮಾಯೆಯ
ಹೊದರನೆಲ್ಲಾ ಮುದುರಿ,
ನಿನ್ನ –
ವರ್ತಮಾನದ ಜತೆಗೆ
ನಡೆಯಲೆತ್ನಿಸುತ್ತೇನೆ
ಆಗ ನೀ
ವಿಚಿತ್ರವಾಗಿ ನೋಡುವೆ !
ನಾ ಬೇಸರದಲಿ ನುಡಿವೆ –
‘ಗೆಳೆಯ, ನೀ ನನಗೆ ಅರ್ಥವಾಗುವುದೇ ಇಲ್ಲ!’ ||

– ನಾಗೇಶ ಮೈಸೂರು

(picture source from:
http://cdn.tinybuddha.com/wp-content/uploads/2015/03/Toxic-Relationship.jpg)

00375.ಅತ್ತು ಬಿಡಬಾರದೆ ಗೆಳತಿ ?


00375. ಅತ್ತು ಬಿಡಬಾರದೆ ಗೆಳತಿ ? (suragi 22.10.2015)

________________________________

ಅದು ಯಾವ ಜನುಮದ ನಂಟೊ ? ಬಾಲ್ಯದ ಕನಸು ಚಿತ್ತಾರ ಬಿಡಿಸಿಕೊಂಡು ಮೊಗ್ಗಾಗಿ ಚಿಗುರೊಡೆದು ಹಿಗ್ಗಾಗಿ ಅರಳಿಕೊಂಡ ದಿನಗಳವು. ಬಾಲ್ಯದ ಎಳೆತನದ ಹೊಸಿಲು ದಾಟಿ ಟೀನೇಜಿನ ಬಾಗಿಲು ತಟ್ಟುತ್ತಿದ್ದ ಗೊಂದಲ ಸಂಭ್ರಮಗಳ ಸಮ್ಮಿಶ್ರ ಸಮಯ. ಆ ದಿನಗಳಲ್ಲೆ ಹೊಸದಾಗಿ ಬಂದು ನೆರೆಮನೆಯವರಾದ ಕುಟುಂಬವೊಂದರ ಪರಿಚಯವಾಗಿದ್ದು… ಮಕ್ಕಳ ಓದಿನ ಸಲುವಾಗಿ ಊರಿನಲ್ಲಿದ್ದ ಎಸ್ಟೇಟನ್ನು ಬಿಟ್ಟು ನಗರದ ಬೆಂಕಿಪೆಟ್ಟಿಗೆಯಂತಹ ಗೂಡಿಗೆ ಬಂದು ಸೇರಿಕೊಂಡಿದ್ದರಂತೆ. ಅವರ ನಡುವಳಿಕೆ, ಸಂಸ್ಕಾರದ ರೀತಿ ನೋಡಿದರೆ ನಮ್ಮಂತಹವರ ಜತೆ ಅವರು ಬೇರೆಯುವ ಜನರಲ್ಲವೇನೊ ಅಂದುಕೊಂಡಾಗಲೆ ಇದ್ದಕ್ಕಿದ್ದಂತೆ ಪರಿಚಯ ಬೆಳೆದಿತ್ತು – ನನ್ನದೇ ವಯಸಿನ ಮಗಳನ್ನು ಸ್ಕೂಲಿಗೆ ಹಾಕುವ ವಿಷಯ ಬಂದಾಗ. ಹೀಗೆ ಒಂದೆ ಕ್ಲಾಸಿನಲ್ಲಿ ಬಂದು ಸೇರಿಕೊಂಡು ಜತೆಯಾದವಳು, ಹೊಸ ಊರಿನ ಪರಿಸರದಲ್ಲಿ ಹತ್ತಿರದ ಗೆಳತಿಯೂ ಆದದ್ದು ಗೊತ್ತೆ ಆಗದಂತೆ ಸಹಜವಾಗಿ ನಡೆದುಹೋಗಿದ್ದು.  

ಆ ನಂಟು ಅದಾವ ವ್ಯಾಖ್ಯೆಯ ಹಣೆಪಟ್ಟಿಗೆ ಹೊಂದಿಕೊಂಡು ವಿಕಸಿಸುತ್ತಿತ್ತೊ ಗೊತ್ತಾಗದಿದ್ದರು, ಆ ಸುತ್ತಲ ಪರಿಸರದಲ್ಲೆ ಇರದ ವಿಶಿಷ್ಠ ಸಂಸ್ಕಾರಯುತ ನಡೆನುಡಿ ಅವಳಲ್ಲೇನೊ ಆರಾಧನಾ ಭಾವದ ಆಕರ್ಷಣೆಯನ್ನು ಮೂಡಿಸಿಬಿಟ್ಟಿತ್ತು. ಅದಕ್ಕೆ ಪೂರಕವಾಗಿ ಅವರ ಮನೆಯವರಲ್ಲೊಬ್ಬನಂತೆ ಬೆರೆತು ಹೋದ ಹೆಮ್ಮೆ ಕಾಣದ ಮತ್ತಾವುದೊ ವಿಸ್ಮಯ ಲೋಕದ ಕದ ತೆರೆಸಿ ಪ್ರಾಯದ ಹೊತ್ತಿನ ಏನೇನೊ ಕನಸು, ಕನವರಿಕೆಗಳಿಗೆ ಮುನ್ನುಡಿ ಹಾಡಿಬಿಟ್ಟಿತ್ತು – ತನಗೆ ತಾನೆ ಹಾಡಿಕೊಳ್ಳುವ ಹಕ್ಕಿಯ ಮೌನದಲ್ಲಿ. ಅವಳಲ್ಲು ಅದೇ ಭಾವವಿತ್ತೆನ್ನುವ ಇಂಗಿತ ಅವ್ಯಕ್ತವಾಗಿ ಗೋಚರವಾಗುತ್ತಿದ್ದರು ಯಾಕೊ ಅದು ಸೌಜನ್ಯದ ಎಲ್ಲೆ ಮೀರಿ ಪ್ರಕಟವಾಗುವ ಮಟ್ಟಕ್ಕೆ ಬೆಳೆಯಲೆ ಇಲ್ಲ. ಇದ್ದದ್ದು ಕಳುವಾಗಿಬಿಟ್ಟರೆನ್ನುವ ಭೀತಿಯ ಜತೆಗೆ ವಿರುದ್ಧ ಪ್ರಪಂಚಗಳಲ್ಲಿರುವ ಎರಡು ತುದಿಗಳ ನಡುವಿನ ಅಂತರ ಕಡೆಗಣಿಸಲಾಗದ ಕೀಳರಿಮೆ, ಅಸಾಧ್ಯವಾದುದಕ್ಕೆ ಭ್ರಮಿಸುತ್ತಿರಬಹುದೆನ್ನುವ ವಿವೇಚನೆ ಎಲ್ಲವನ್ನು ಸ್ತಂಭಿತವಾಗಿಸಿ ಕಾಲವೊಂದರ ಬಿಂದುವಿಗೆ ಕಟ್ಟಿಹಾಕಿಬಿಟ್ಟಿತ್ತು. ಆ ಕಾಲ ಬದಲಾಗಿ ಮುಂದೆ ನಡೆದರು, ಕಟ್ಟಿದ್ದ ಗಂಟು ಮಾತ್ರ ಬಿಚ್ಚಿಕೊಳ್ಳದೆ ಹಾಗೆ ನಿಂತುಬಿಟ್ಟಿತ್ತು ಮಧುರಾನುಭೂತಿಯನ್ನು ಕಳೆದುಕೊಳ್ಳಲಿಚ್ಚಿಸದೆ ಜತನ ಕಾದಿರಿಸಿಕೊಂಡಂತೆ. ಕಾಲದ ಜಪ್ತಿಯಲ್ಲಿ ಚಲಿಸದೆ ಕೂತ ಅಚರ ಸ್ಥಿತಿಯೂ ಕೊಳೆಸಿ ಹಾಕಿಬಿಡುವ ಕುತಂತ್ರಿಯೆಂದು ಹೇಳುವರಾದರೂ ಯಾರಿದ್ದರಲ್ಲಿ ?

ಅನುದಿನವೂ ಭೇಟಿ, ಕ್ಷಣಕ್ಷಣವೂ ಮಾತು, ಬೆನ್ನಲ್ಲೆ ಏನೊ ಧನ್ಯತೆಯ ಭಾವ. ನಕ್ಕರೆ ಸ್ವರ್ಗಲೋಕದ ಪಾರಿಜಾತ ಕೈ ಸೇರಿದ ಅನುಭೂತಿ, ಖೇದದಿಂದಿದ್ದರೆ ಆಕಾಶ ತಲೆಯ ಮೇಲೆ ಬಿದ್ದ ಸಂಗತಿ. ಆದರೆ ಒಂದು ಬಾರಿಯೂ ಆ ಭಾವ ಲಹರಿ ಎದೆಯ ಕದ ತೆರೆದು ಮನಸ ಬಿಚ್ಚಿಡುವ ಧೈರ್ಯ ಮಾಡಲಿಲ್ಲ. ಯಾರೊ ಯಾವಾಗಲೂ ನೋಡುತ್ತಿರುವರೆಂಬ ಸ್ವಯಂಪ್ರೇರಿತ ಭೀತಿಯ ಜತೆ, ಯಾರೂ ಹಾಕದ ಲಕ್ಷ್ಮಣ ರೇಖೆಯೊಂದು ಸದಾ ಅಡ್ಡ ಹಾಕಿದಂತೆ ಅಳುಕು. ಬಹುಶಃ ಹೇಳಿಕೊಂಡು ಕಳಪೆಯಾದರೆ? ಎನ್ನುವ ಭೀತಿಯೂ ಇತ್ತೇನೊ; ಅಥವಾ ಹೇಳಿಕೊಳ್ಳದ ಅಸ್ಪಷ್ಟ ಸಂಕೇತ, ಅನಿಶ್ಚಿತತೆಗಳಲ್ಲೆ ಏನೊ ಸೊಗಡಿರುವುದೆಂಬ ಮತ್ತೊಂದು ಆಯಾಮವೂ ಇದ್ದೀತು… ನೋಡನೋಡುತ್ತಲೆ ದಿನಗಳು ವಾರಗಳಾಗಿ, ತಿಂಗಳುಗಳು ವರ್ಷಗಳಾಗಿ ಉರುಳಿ ಹೋದವು – ಒಂದಿನಿತೂ ಬದಲಾಗದ ಅದೆ ದಿನಚರಿ, ಅದೆ ಮನಸತ್ವದಲ್ಲಿ. 

ಅಂದೊಂದು ದಿನ ಮನೇಗದಾರೊ ಬಂದರಂತೆ ಹೆಣ್ಣು ನೋಡುವವರು… ಆಮೇಲಿನದೆಲ್ಲ ಕನಸಿನಂತೆ ನಡೆದು ಹೋದ ವ್ಯಾಪಾರ. ಅತ್ತೆಯ ಮನೆಗೆ ಹೋಗುವ ಮುನ್ನ ಬಂದು ಹೋದವಳು ಏನೂ ಮಾತಾಡದೆ ಯಾಕೊ ಬರಿ ಬಿಕ್ಕಿಬಿಕ್ಕಿ ಅತ್ತು ಓಡಿಹೋಗಿದ್ದಳು, ಎಂದೊ ಕೊಡಿಸಿದ್ದ ಎರಡು ಕೈ ಬಳೆಗಳಲ್ಲಿ ಒಂದನ್ನು  ಅಲ್ಲೆ ಬಿಟ್ಟು – ನೆನಪಿನ ಅರ್ಧ ಭಾಗವನ್ನು ಕಿತ್ತು ಕೈಗಿತ್ತು ಹೋದಂತೆ. ಅವಳುಡಿಸಿ ಹೋದ ಸಂಕೋಲೆಯಂತೆ ಅದು ಸದಾ ಉಳಿದುಕೊಂಡುಬಿಟ್ಟಿತ್ತು ಪೆಟ್ಟಿಗೆಯ ಮೂಲೆಯೊಂದರಲ್ಲಿ ಕೊಳೆಯದೆ, ಭದ್ರವಾಗಿ..

ಕಾಲವುರುಳಿ ಕಾಲಯಾನದ ಹಾದಿ ಎಲ್ಲೆಲ್ಲೊ ಗಾಲಿಯುರುಳಿಸಿ ಕೊನೆಗೊಂದು ಊರಲ್ಲಿ ನೆಲೆ ನಿಲ್ಲಿಸಿದಾಗಲೂ ಅವಳಿನ್ನು ಮರೆಯಾಗಿರಲಿಲ್ಲ ಮನಃ ಪಟಲದಿಂದ. ಹೇಗೊ ಜೀವನ ಸಾಗುತ್ತಿದೆಯೆನ್ನುತ್ತಿರುವಾಗಲೆ ಅದೆ ಊರಿನ ಆಧುನಿಕ ಸಂತೆಯೊಂದರಲ್ಲಿ ಕಣ್ಣಿಗೆ ಬಿದ್ದಿದ್ದಳು – ಹೆಚ್ಚು ಕಡಿಮೆ ಜೀವಂತ ಶವದ ಸಂಕೇತವಾಗಿ. ಕಣ್ಣಿಗೆ ಬಿದ್ದವಳ ಕಣ್ಣಲ್ಲಿ ಚಕ್ಕನೆ ಅದೇ ಮಿಂಚು, ಅದಮ್ಯ ಮಾತಿನ ಉತ್ಸಾಹ ಮತ್ತೆ ಮೂಡಿದ್ದು ಕಂಡಾಗ – ಯಾಕೆ ಕಾಡುವುದೊ ವಿಧಿ, ಸುಖದ ಬೆನ್ನಟ್ಟಿ ಹೊಡೆದೋಡಿಸುವ ತಪನೆಯಲ್ಲಿ ಅನಿಸಿದ್ದು ಸುಳ್ಳಲ್ಲ.. ಮಾತಾಡದೆ ಹೊರಡುವಳೆಂದು ಅವಿತುಕೊಂಡೆ ಜಾರಿಕೊಳುತ್ತಿದ್ದವನನ್ನು ಎಳೆದು ನಿಲ್ಲಿಸಿದ್ದು ಅದೇ ಮಾತಿನ ಸೆಳೆತವಲ್ಲವೆ..?

ಈಗ ಅಲ್ಲಿ ತಾಳಲಾಗದ ಯಾತನೆಗೆ ನೊಂದು ಬೇಯುವಂತಾದಾಗ, ಬೇಗುದಿ ಸಹನೆಯ ಕಟ್ಟೆಯೊಡಿಸಿದಾಗ ಹೇಗೊ ಓಡಿ ಬರುತ್ತಾಳೆ.. ಆದರೆ ಮಾತಿಲ್ಲ, ಕಥೆಯಿಲ್ಲ. ಏನೆಲ್ಲ ಹೇಳಬೇಕೆಂದಿದ್ದರು, ಏನೂ ಹೇಳಬಾರದೆಂದು ಅವಡುಗಚ್ಚಿ ಭೂತ ಹಿಡಿದಂತೆ ಮೌನದಲ್ಲಿ ಕೂತು ಹೋಗುತ್ತಾಳೆ. ಒಂದು ಹನಿ ನೀರು ಮುಟ್ಟದೆ, ಅತ್ತು ಕಣ್ಣೀರಾಗಿ ಹಗುರವೂ ಆಗದೆ ಮತ್ತೆ ಓಡಿ ಹೋಗುತ್ತಾಳೆ. ಅದೇನು, ‘ನೋಡು ನಿನ್ನಿಂದಲೆ ಆದದ್ದು ಎಲ್ಲಾ.. ನೀನೆ ಇದಕ್ಕೆ ಕಾರಣ, ಹೊಣೆ’ ಎಂದು ಮುಖಕ್ಕೆ ಹೊಡೆದಂತೆ ಹೇಳಿ ಹೋಗುವ ಉದ್ದೇಶಕ್ಕೆ ಹಾಗೆ ಮಾಡುತ್ತಾಳೊ, ಅಥವಾ ‘ನನಗಾದುದಕ್ಕೆ ನಾನೆ ಹೊಣೆ, ಇನ್ನಾರಿಗು ನೋವು ಕೊಡುವುದಿಲ್ಲ, ನಾನೆ ಅನುಭವಿಸುತ್ತೇನೆ..’ ಎನ್ನುವ ಹಠವಾದಿ ಧೋರಣೆಯೊ.. ಆದರೂ ಬೇರೆಲ್ಲು ಹೋಗದೆ ಇಲ್ಲಿಗೆ ಬರುತ್ತಾಳಲ್ಲ ಎಂಬುದೆ ಸಮಾಧಾನ.

ಆದರೆ ಬಂದು ಹಗುರವಾಗಿ ಹೋಗುತ್ತಾಳೆಂಬ ನೆಮ್ಮದಿಯ ಭಾವವನ್ನು ಬಿಟ್ಟು ಹೋಗುವುದಿಲ್ಲ.. ಒಂದು ಚೂರು ವೇದನೆಯನ್ನು ತೋರಗೊಡುವುದಿಲ್ಲ, ಒಮ್ಮೆಯೂ ಬಿಕ್ಕುವುದಿಲ್ಲ.. ಬಿಮ್ಮನೆ ಕುಳಿತ ಮೌನದ ಹೊರತು ಅಲ್ಲಿ ಮತ್ತೇನೂ ಇರುವುದಿಲ್ಲ.. ಅವಳು ಅತ್ತಾದರು ಹಗುರಾಗಲೆಂದು ಆಸೆ.. ಆದರೆ ಅವಳ್ಯಾಕೊ ಅಳಳು.. ಬಂದ ಹೊತ್ತೆಲ್ಲ ಹಿತ್ತಲ ಹಿರಿ ಗಾತ್ರದ ಮರದ ಪೊಟರೆಯ ಬದಿಯಲ್ಲಿ ನೇತು ಹಾಕಿದ ಜೋಕಾಲಿಯಲ್ಲಿ ಸುಮ್ಮನೆ ಕೂತು ಜೋಲಿಯಾಡಿ ಹೋಗುತ್ತಾಳೆ – ಆ ಜೀಕಿನಲ್ಲೆ ನೋವೆಲ್ಲ ಕರಗಿಸುವವಳಂತೆ. ಅಲ್ಲೆ ಕಾದು ಕುಳಿತ ಎಷ್ಟೊ ದಿನ ಅನಿಸಿದ್ದು ನಿಜವೆ – ಹೆಪ್ಪಾಗಿ ಮಡುಗಟ್ಟಿದ್ದು ಅತ್ತು ಕಣ್ಣೀರಾಗಿ ಹರಿದರೆ ಅವಳ ಭಾರ ತುಸುವಾದರು ಹಗುರವಾದೀತೇನೊ ಎಂದು. ಅದು ಎಂದಾಗುವುದೊ ಅರಿಯದೆ ಕಾಯುವುದೆ ಯಜ್ಞವಾದ ಈ ಪರಿಯಲ್ಲಿ ಉದಿಸುವ ಒಂದೆ ಪ್ರಶ್ನೆ – ‘ಅತ್ತು ಬಿಡಬಾರದೆ ಗೆಳತಿ ?’ ಎಂದು….

ಅತ್ತು ಬಿಡಬಾರದೆ ಗೆಳತಿ ?
______________________

ಬಂದಳೂ ಮತ್ತೆ ಅವಳು
ಪೂರ್ವಾಶ್ರಮದ ಗೆಳತಿ
ಸುರಿದಿತ್ತೆ ಮಳೆ ಮುಸಲ
ನೆನೆದವಳಲಿ ಕೊಡೆಯಿಲ್ಲ ||

ಹಾಳು ಗುಡುಗು ಸಿಡಿಲು
ಬಿಕ್ಕಿದ್ದಳೇನೊ ಕೇಳಿಸದೆ..
ಮಿಂಚಿನ ಬೆಳಕಲಿ ಹೆಣ್ಣು
ಕರಗಿ ಹರಿದಿತ್ತೇನು ಕಣ್ಣು ? ||

ಮರದಡಿಯ ಪೊಟರೆಗೆ
ಒರಗಿದವಳ ಒದ್ದೆ ಕೇಶ
ಮೈಗಂಟಿದ ಸೆರಗು ಬಿಡು
ಅತ್ತಂತಿದೆಯೆ ಇಡಿ ದೇಹ ||

ಹಿಡಿಯಂತಾಗಿ ನಡುಕದೆ
ತುಟಿ ಚಳಿಗದುರದಿರದೆ ?
ಸಖನಪ್ಪುಗೆ ಕನಸ ಬಾಹು
ತನ್ನನೆ ಅಪ್ಪಿ ಮುದುಡಿತೇಕೊ ? ||

ಕಟ್ಟೆಯೊಡೆದ ಮೌನ ದನಿ
ಮಾತಾಗದೆ ಕೆಸರಾಗ್ಹರಿದು
ಕಳುವಾಗಿ ಹೋಗುವ ಹೊತ್ತು
ಜಾರಿ ಒಡೆದು ಹೋದ ಮುತ್ತು ||

ಬಿಡು ಅವಿತಿರಲದೆಷ್ಟು ಕಾಲ ?
ಪೊಟರೆಯಿಂದಿಣುಕಿತೆ ಜೀವಾ
ಮಾತಿಲ್ಲದೆ ಹೊದಿಸಿ ಹೊದಿಕೆ
ಅಪ್ಪುಗೆ ಕಾಪಿಡುವ ತೊದಲಿಕೆ ||

ಯಾಕೊ ಸದ್ದಾದಳು ಹುಡುಗಿ
ನಿಗಿನಿಗಿ ಕೆಂಡದ ಕಣ್ಣಾದಳು
ಅತ್ತುಬಿಡೆ ಮಳೆಯಲೆ ಸಖಿ –
ಹೊತ್ತು ಮೂಡುವ ಮೊದಲೆ ||

ಎಚ್ಚರವಿತ್ತೆಲ್ಲಿ ಸಮಯದಲಿ ?
ನಿಂತ ಮಳೆ ನಿಶ್ಯಬ್ದಕು ಸ್ಥಬ್ದತೆ
ಅಂಟಿಕೊಂಡೊಣಗಿ ಮೇಲುಡುಗೆ
ಮಾಡಿತೇನೊ ಒಳಗೆ ಅಡಿಗಡಿಗೆ ||

ಹೊತ್ತಾಯಿತು ಹೊರಟು ಚಿತ್ತ
ಮುತ್ತ ಬಸಿದು ಬಡಿಸೊ ಹೊತ್ತ
ತಗ್ಗಿದ ತಲೆಯೆತ್ತದೆ ನಡೆದಳೆ
ಕಂಬನಿ ಕುರುಹು ಇನಿತಿಲ್ಲದೆಲೆ ||

—————————————
ನಾಗೇಶ ಮೈಸೂರು
—————————————

ಪೂರ್ವಾಶ್ರಮ, ಗೆಳತಿ, ಅತ್ತು, ಬಿಡಬಾರದೆ, ನಾಗೇಶ, ಮೈಸೂರು, ನಾಗೇಶಮೈಸೂರು, nagesha, nageshamysore, nagesha mysore