01742. ನಿಮಗೇನಾದರೂ ಗೊತ್ತಾ?


01742. ನಿಮಗೇನಾದರೂ ಗೊತ್ತಾ?

______________________________

ನನಗೇನು ಬೇಕಿದೆ ಅಂತ

ನಿಮಗೇನಾದರೂ ಗೊತ್ತಾ?

ಗೊತ್ತಾದರೆ ಹೇಳಿಬಿಡಿ ಸ್ವಾಮಿ

ಹಾಳು ಕೀಟ ದಿನನಿತ್ಯ ಕೊರೆತ ||

ಮೂರ್ಹೊತ್ತಿನ ಕೂಳ ಮಾತಲ್ಲ

ಮತ್ತೇನದೇನೇನೊ ಸಮಾಚಾರ

ಉಣ್ಣುಡುವುದಲ್ಲ ಸಣ್ಣ ವಿಷಯ

ದೊಡ್ಡದಿದೆ ಸರಿ ಗೊತ್ತಾಗುತ್ತಿಲ್ಲ ||

ಕೆಲಸವಿದೆ ಸಂಬಳ ಸಿಗುತಿದೆ

ಸಮಯವೆಲ್ಲ ಮುಗಿದಲ್ಲೆ ಚಿತ್ತ

ಹನಿಹನಿಗೂಡಿ ಹಳ್ಳವೆ ಹೊಂಡ

ಬೇಕೇನಿದೆ ಯಾಕೊ ಅರಿವಿಲ್ಲ ||

ಕಸುವೆಲ್ಲ ಅಲ್ಲಿ ತುಂಬಿಟ್ಟ ನೀರು

ತೋಳ ಕಸು ಬುದ್ಧಿಗೆ ತಕರಾರು

ತುತ್ತನ್ನಕಿಲ್ಲ ತತ್ವಾರ, ಮನಸಿಲ್ಲ

ಬಹುದು ಬಾರದು ಗೊಂದಲಕರ ||

ದಾಟಾಯ್ತು ಆ ದಿನಗಳ ಸಮರ

ಯಾಕೊ ಮುಂದಿದೆ ಖಾಲಿ ನೆಲ

ಅದೇ ಸಂಸಾರ ಮನೆ ಮಕ್ಕಳಾಟ

ಮನಕೇನೊ ಬೇಕಿದೆ ಗೊತ್ತಾಗುತ್ತಿಲ್ಲ ||

– ನಾಗೇಶ ಮೈಸೂರು

೨೮.೦೫.೨೦೧೮

(Picture source : https://goo.gl/images/tEU7KC)

01031. ಗೊತ್ತಾ ನೇತ್ರ ?


01031. ಗೊತ್ತಾ ನೇತ್ರ ?
___________________


ಗೊತ್ತಾ ನೇತ್ರ ?
ತೆರೆಯಬೇಕಿದೆ ಸುಸೂತ್ರ
ತನುಮನ ತಿಕ್ಕಾಟದ ಕೋಲ
ನಿವಾರಿಸೊ ಅಂತರಂಗದ ಜಾಲ..

ಗೊತ್ತಾ ನೇತ್ರ ?
ಕಾಣುವುದೆಲ್ಲಾ ಭೌತಿಕ ಪಾತ್ರ
ಒಳಗಿಂದೊಳಗೆ ಕುಹುಕ ಹುನ್ನಾರ
ಸಂಚ ಮುಚ್ಚುವ ಮುಗುಳ್ನಗೆ ಬಿತ್ತರ..

ಗೊತ್ತಾ ನೇತ್ರಾ ?
ಬಂಧು ಬಳಗ ಕೃತಕ ಹತ್ತಿರ
ಕೆಳೆಯೊಂದೆ ಸಲಿಗೆ ನೀಡೊ ಮದ್ದು
ಆತ್ಮೀಯ ಸಖ್ಯ ನಿವಾರಿಸುವ ಬರಿ ಸದ್ದು..

ಗೊತ್ತಾ ನೇತ್ರ ?
ಪ್ರಾಯದ ವಯಸೇ ಅತಂತ್ರ
ಏಕಾಂತ ಬಯಸೊ ಹುಚ್ಚು ಮನ
ಜತೆ ಬಯಸಿ ಸೂಕ್ತ ಸಂಗಾತಿಯ ಧ್ಯಾನ..

ಗೊತ್ತಾ ನೇತ್ರ ?
ಬದುಕೇ ಅರ್ಥವಾಗದ ಪ್ರವರ
ಅರ್ಥ ಮಾಡಿಕೊಂಡ ಹೊತ್ತಲಿಬ್ಬರು
ಸಿಕ್ಕಿದ್ದಷ್ಟು ಹೊತ್ತ ಅನುಭವಿಸೆ ಜಾಣರು..

– ನಾಗೇಶ ಮೈಸೂರು
೧೩.೧೨.೨೦೧೬
(Picture from Creative Commons)

00949. ಯಾರಿದು ಗೊತ್ತಾ ?


00949. ಯಾರಿದು ಗೊತ್ತಾ ?
________________


ಎಂಥಾ ಅದ್ಬುತ ಕಲ್ಪನೆ !
ಅವನೂ ಅಲ್ಲ
ಅವಳೂ ಅಲ್ಲದ
ಸಮಾನತೆ ‘ಅದು’

ಸಾಕಾರವು ಹೌದಂತೆ
ನಿರಾಕಾರವು ನಿಜವೆ
ಸ್ವರೂಪದ ದ್ವಂದ್ವ ಅದ್ವೈತ
ಅರಿವಾದವ ಅಪರಾಜಿತ !

ನಿರ್ಗುಣವೆಂದರೂ ಅದೆ
ಸಗುಣವು ಅದುವೆ
ಗುಣಾವಗುಣಗಳಿಗತೀತ
ಪರಿಗಣಿಸದವ ಶ್ರೇಷ್ಠ !

ಸುಡದಂತೆ ಬೆಂಕಿ
ತೋಯಿಸದಂತೆ ನೀರು
ವಾಯುವಿಗತೀತ ವಾಯು
ಭೂಮ್ಯಾಕಾಶ ಮೀರಿದನಂತ..

ನಿಲುಕದು ಇಂದ್ರಿಯಕೆ
ಆಗೋಚರ ಬಾಹ್ಯ ಪ್ರಜ್ಞೆಗೆ
ಸೂಕ್ಶ್ಮಾತಿಸೂಕ್ಷ್ಮ ಅಂತರ್ಗತ
ಅಣು ರೇಣು ಕಾಷ್ಠ ಬೃಹತ್ ವ್ಯಕ್ತ..

ಪಾರದರ್ಶಕ ಇಹುದಂತೆ
ಅಪಾರದರ್ಶಕವು ಅದುವೆ
ಅಂತೆ ಕಂತೆ ಎಲ್ಲವು ಸರಿ
ಅದುವೆ ಪರಬ್ರಹ್ಮದ ಕುಸುರಿ

ಹಲವು ಒಂದಾಗಿ ಏಕತ್ವ
ಬಹುವಾಗಿ ಅನೇಕತ್ವ
ದ್ವೈತ ಅದ್ವೈತ ದಾನವ ದೈವ
ಎಲ್ಲವೂ ತಾನೆಂದ ವಿಸ್ಮಯ

ಧರ್ಮವೆಂದರೆ ಧರ್ಮ
ಜೀವನ ಕ್ರಮವು ಒಪ್ಪಿತ
ಸ್ವೀಕರಿಸಬೇಕಿಲ್ಲ ಅನುಸರಿಸು
ಬೇಡದಿರೆ ವರ್ಜಿಸು ಸಮ್ಮತ !

ನಮಿಸುವೆ ಕಲ್ಪನೆಗೆ
ಊಹಿಸಲಾಗದ ವ್ಯಾಪ್ತಿಗೆ
ಗೋಚರಿಸಲಿ ಬಿಡಲಿ ಉದ್ದಗಲ
ಪ್ರತಿ ಪ್ರಶ್ನೆಗೂ ಉತ್ತರ ಸಕಲ !

ಅದುವೆ ಪರಬ್ರಹ್ಮದ ವ್ಯಾಖ್ಯೆ
ಎಲ್ಲಾ ಧರ್ಮವು ಸರಿಯೆಂದ !
ಹೇಗಾದರೂ ಕರಿ ಅದೊಂದೆ
ನಾಮರೂಪ ಹಲವಾಗಿ ಅವ್ಯಕ್ತ !!

– ನಾಗೇಶ ಮೈಸೂರು
(Picture from Internet Creative Commons)

00818. ಪ್ರಗತಿಯೆಂದರೆ ಏನು ಗೊತ್ತಾ ?


00818. ಪ್ರಗತಿಯೆಂದರೆ ಏನು ಗೊತ್ತಾ ?
______________________________


ಸ್ವಚ್ಚಂದ ನಿಸರ್ಗದಲ್ಲಿ ಈಜುವ ಮೀನ
ಬಲೆ ಬೀಸಿ ಬಲವಂತ ಹಿಡಿದೆತ್ತಿ
ಉಸಿರುಗಟ್ಟುವ ಮೊದಲೇ
ಮೀನಿನ ಪೆಟ್ಟಿಗೆಗೆ ರವಾನಿಸುವಾಟ ;
ದೀಪ ಹಚ್ಚಿ ಕಾರಂಜಿ ಚಿಮ್ಮಿಸಿ
ಕೃತಕ ಕಲ್ಲು ಮರಳು ಕಪ್ಪೆ ಚಿಪ್ಪೆಗಳಿಡುವಾಟ..
ವಿಶಾಲವಿದ್ದ ಬಿಚ್ಚಿಟ್ಟ ಬಯಲಿಂದ
ಇಕ್ಕಟ್ಟಿನ ಗೋಡೆ ಛಾವಣಿಗಳಡಿ ತೂರಿಸಿ
ಉಸಿರಾಡುವ ಗವಾಕ್ಷಿಗಳ ವೈಭವದಾಟ..;
ಸಹಜ ಸಿಗದ ತುತ್ತಿನ ಬುತ್ತಿಯ
ಹಿಡಿಸಲಿ ಬಿಡಲಿ ರುಚಿ ವೈವಿಧ್ಯ ಗಣಿಸದೆ
ಉಂಡುಂಡೆಗಳಾಗಿ ಉದುರಿಸಿ ಸೆಣೆಸಾಟ..
ತಿನ್ನಾಟ ಚೆನ್ನಾಟ ಕಣ್ಣಿಗೆ ರಸದೂಟ..
ಅಂದಚಂದ ಚಮಕು ಸುಣ್ಣ ಬಣ್ಣಗಳ
ಪ್ರಗತಿಯ ತೋರಿಸಿ ಜಗಕೆ ಮೆರೆಯುವಾಟ.

ಆಮೇಲೆಲ್ಲ ಸುಲಭ ನಿತ್ಯದ ಮಜ್ಜನ
ಮೀನಿಗೆಂತ ಸ್ನಾನ ? ಮೂಗು ಮುರಿಯಬೇಡಿ
ಸಾಬೂನು ಶಾಂಪೂ ಹಾಕಿ ತಿಕ್ಕಿ
ಹೊಸ ನೀರಲಿ ತೊಳೆದು ಫಳಫಳ
ದಿನಕೊಂದು ದಿರುಸುಟ್ಟು ಮೆರೆಯುತ್ತ
ಫ್ಯಾಷನ್ನಿನ ಓಣಿಯಲಿ ಮಿಂಚುತ
ವಿಶ್ವ ಸುಂದರಿಯಾಗಿ ನಿಲಬಹುದು
ತೊಟ್ಟರೆಬರೆ ನಾಚಿಸಬಹುದು
ಬಾರದ ಹಳೆ ನೀರಿನ ಮೀನುಗಳ
ನಿಂತು ಅಣಕಿಸುತ ಪ್ರಗತಿಯೆತ್ತರದಲಿ..
ಕಸಿವಿಸಿಯಾಗಿಸಿ ನಾಚಿಸಿ
ಅವರಲೂ ಆಸೆಯುಟ್ಟಿಸಿ ಹೊಸತಿಗೆ
ಹಳತಾಗುತ ಇದ್ದಕಿದ್ದಂತೆ ಅ-ಸಹ್ಯ..!


ಮೀನಿನ ತೊಟ್ಟಿ ದಿರುಸು ದೀಪ ಕಾರಂಜಿ
ಎಲ್ಲವೂ ತುಟ್ಟಿ ಅದೇ ಪ್ರಗತಿಯ ತೆರಿಗೆ
ಕೆರೆ ಕಾಲುವೆ ಹೊಳೆ ನದಿ ಕಡಲು ಬಿಟ್ಟಿ
ಗೋಡೆ ಸೀಮೆಗಳಿಲ್ಲದ ಮುಕ್ತ ಒಡಲು
ಸ್ವೇಚ್ಛೆ ಸ್ವಾತಂತ್ರದ ಆಡಂಬರವಿಲ್ಲದ ಬಾಳು
ಸರಳ ಸರಾಗ ನಿರಾಳ ಬದುಕೇನು ಚೆನ್ನ ?

ಬನ್ನಿ ಬನ್ನಿರೆಲ್ಲ ಮೀನಿನ ತೊಟ್ಟಿಗೆ
ಪ್ರಗತಿಯ ತೆರೆಯೇರಿ ನಡೆಯೋಣ
ತುಯ್ದತ್ತ ಒಯ್ದತ್ತ ಚೌಕಟ್ಟಿನೊಳಗೆ
ಮಿತಿ ಮೀರಿದ ಗತಿಯ ನೆರಳಾಗಿ..
ಯಾಕೆಂದರೀಗ ವಿಶಾಲ ಭೂಮಂಡಲವೇ
ದೊಡ್ಡ ಮೀನಿನ ತೊಟ್ಟಿ..
ಹೊಳೆ ನದಿ ಕೆರೆ ಕಾಲುವೆ ಸಾಗರಗಳೆಲ್ಲ
ಈಗ ಅದರೊಳಗೆ !

– ಮೈಸೂರು ನಾಗೇಶ

Picture source 01: http://zeenews.india.com/news/eco-news/iconic-indian-fish-on-verge-of-extinction-study_1595637.html

Picture source 02: http://iowpetcentre.com

00528. ಏನು ಗೊತ್ತಾ, ವಿಷಯ..?


00528. ಏನು ಗೊತ್ತಾ, ವಿಷಯ..? 
___________________________

   
(photo source wikipedia – https://en.m.wikipedia.org/wiki/File:Leonid_Pasternak_-_The_Passion_of_creation.jpg)

ನಿನಗೊಂದು ವಿಷಯಾ ಗೊತ್ತಾ ..
ಈಚೆಗ್ಯಾಕೊ ಏನೂ, ಸರಿ ಬರೀತಿಲ್ಲಾ ಚಿತ್ತ.
ಬುಳಬುಳ ಜೊಂಪೆ ಬರ್ತಿತ್ತಲ್ಲ ಎಲ್ಲಾ..?
ಯಾಕೊ ಕಣಿ-ಧರಣಿ, ಕೂತಲ್ಲೆ ತಟ್ಟಿ ಬೆರಣಿ..

ಒಂದಲ್ಲ ಹತ್ತಲ್ಲ ನೂರಾರು ವಸ್ತು !
ಸಾಲುಸಾಲು ಸೀಮೆಣ್ಣೆ, ರೇಷನ್ನಿನ ಹಾಗೆ..
ನಿಂತಿತ್ತಲ್ಲ ಕೂಗಾಡಿ, ಜಗಳಕೆ ಬಿದ್ದ ತರ ?
ತಾ ನಾ ಮುಂದು, ಗುದ್ದಾಡಿದ್ದೆಲ್ಲಾ ನಿಶ್ಯಬ್ದ…

ಹುಟ್ಟುತ್ತೇನೊ ಚಿಲುಮೆ, ಅಕ್ಷರ ಮಣಿಯೊಡವೆ
ಪದಪದವಾಗೊ ಮೊದಲೆ, ಯಾಕೊ ಒಲ್ಲದ ಮದುವೆ.
ತಟ್ಟಂತೇನೊ ಬೆಟ್ಟ, ಕುಸಿದಂತೆ ಮನೆ ಮಾಡು
ಪದಗಳವಕವಕೆ ಜಗಳ, ಹುಟ್ಟೊ ಮೊದಲೆ ಹಾಡು..

ಹುಟ್ಟಿದ್ದೂ ಹಸುಗೂಸು, ಮೀರಲೊಲ್ಲ ಬಾಲ್ಯ
ಬೆಳೆಯೊ ಕೂಸಿಗು ಹುಟ್ಟಲೆ, ಏನೊ ಅಂಗವೈಕಲ್ಯ..
ಹೆತ್ತ ಹೆಗ್ಗಣ ಮುದ್ದಿಗೆ, ಕಟ್ಟಿದರು ತೋರಣ ಬಳಗ
ತಡವಿ ಮೇಲೆತ್ತಿ ಆದರಿಸೋಕಿಲ್ಲ, ಪುರುಸೊತ್ತಿನ ಜಗ ..

ಆದರು ಬರೆಯೊದಂತು ತಾನು, ನಿಲಿಸಿರಲಿಲ್ಲ ಚಿತ್ತ
ಯಾಕೊ ಇದ್ದಕಿದ್ದಂತೆ, ಅನಿಸಿಬಿಡುತೆಲ್ಲ ಬರಿ ವ್ಯರ್ಥ
ಹಠದಿ ಸಂಪು ಕೂತಿವೆ, ಹಾಕೆಲ್ಲ ಭಾವಕೆ ಬಿಗಿ ಬೀಗ
ಮನ ಕಳವಳ ಮಾತ್ರ ಹುಡುಕಿದೆ, ಕೀಲಿ ಸಿಕ್ಕೊ ಜಾಗ..

– ನಾಗೇಶಮೈಸೂರು

00459.ವಿವೇಕಾನಂದ ಗೊತ್ತ ?


00459.ವಿವೇಕಾನಂದ ಗೊತ್ತ ?
___________________

  
ಚಿತ್ರಕೃಪೆ : ವಿಕೀಪೀಡಿಯಾ :https://en.m.wikipedia.org/wiki/File:Swami_Vivekananda-1893-09-signed.jpg

ಅವಿವೇಕದೊಳಗು ವಿವೇಕ
ವಿವೇಕಾನಂದ ಗೊತ್ತಾ?
ವಿವೇಕದೊಳಗೆ ಆನಂದ
ಹೆಸರಿನೊಳಗಿಟ್ಟ ಚಂದ ||

ಹುಡುಕಿದ್ದೆ ಹುಡುಗ ಸತ್ಯ
ನರೇಂದ್ರನಾಗಿ ಸುತ್ತುತ್ತ
ರಾಮಕೃಷ್ಣ ಪರಮಹಂಸ
ಶಾರದೆ ಮಾತೆಯ ಚಿತ್ತ ||

ಕಂಡಾಗ ಗುರುವ ಗುರಿಗೆ
ಮೋಕ್ಷ ಸಿಕ್ಕಿ ಅಲೆದ ಪರಿಗೆ
ಕಟ್ಟಿದ್ದೆಲ್ಲ ಜ್ಞಾನದ ಸಾಧನೆ
ನರನಾಡಿ ಭಾರತ ಸಂವೇದನೆ ||

ಮಣಿಸಿ ಭೋರ್ಗರೆವ ಕನ್ಯಾಕುಮಾರಿ
ಉಟ್ಟ ಬಟ್ಟೆಯಲೆ ಈಜಿದ ಬ್ರಹ್ಮಚಾರಿ
ಬಂಡೆಯ ಹತ್ತಿ ಕುಳಿತ ಧೀಮಂತಿಕೆ
ದಿಟ್ಟ ನಿಂತ ಭಾರತದ ಶ್ರೀಮಂತಿಕೆ ||

ಧರ್ಮದ ಬಲ ಮೇಲಲ್ಲಾ ಕೆಳಗೆ
ಅಡಿಯಲಿಟ್ಟ ಭಗವದ್ಗೀತೆ ಬುನಾದಿ
ಹೊತ್ತೆಲ್ಲಾ ಜಗದ ಧರ್ಮಸಾರ ಶುದ್ಧ
ಹಿಂದು ಧರ್ಮ ಧ್ವಜ ಹಿಡಿದನೀ ಬುದ್ಧ ||

00432. ನಾನೇನು ಗೊತ್ತಾ? (01), ತೊಳಲಾಟ.. (02), ನನ್ನ ಪಾಡಿಗೆ ನಾನು ..(03)


(01. ನಾನೇನು ಗೊತ್ತಾ?    02. ತೊಳಲಾಟ..   03. ನನ್ನ ಪಾಡಿಗೆ ನಾನು..)

01. ನಾನೇನು ಗೊತ್ತಾ?
___________________________

ನಾ ಕೊತ ಕೊತ
ಒಳಗೇ ಕುದಿಯುತ
ಏನೀ ಬಿಸಿ ಹಬೆಯೊ ?
ಜೀವಕೆ ಬರಿ ಧಗೆಯೊ.. ||

ನಾ ಕುಳು ಕುಳು
ಶೀತಲತೆಯ ಹುಳು
ಏಕೊ ಕೊರೆವಾಗ ಚಳಿ ?
ಎದೆ ಮರಗಟ್ಟಿಸೊ ತಳಿ ||

ನಾ ಹನಿ ಹನಿ
ತುಂತುರು ಕಂಬನಿ
ಏಕೊ ಬೆರೆತು ಲವಣ
ಉರಿಗಾಯದ ಗತಪ್ರಾಣ ||

ನಾ ಋತು ಕಾಲ
ಮತಿ ಕ್ಷಣಿಕ ವಿಕಲ
ಕ್ಷಣಕೊಂದು ಋತು ಚಿತ್ತ
ಕ್ಷಣ ಪಿತ್ತವೆ ದುಡುಕುತ್ತಾ ||

ನಾ ನಿಶ್ಚಲ ಅಚಲ
ಮುಸುಕಲಡಗೊ ಛಲ
ಬರಿ ನಾಟಕದ ಬದುಕು
ಪ್ರತಿ ಗಳಿಗೆಗೊಂದು ತದುಕು ||

02. ತೊಳಲಾಟ..
___________________________

ಕೊಂದೇ ಸರಿ
ತಿಂದೇ ಸರಿ
ಜೀವ ತೆಗೆಯದೆ
ಕೊಲ್ಲುವ ಪರಿ… ||

ನಂದೇ ಸರಿ
ನಿಂದೇ ಸರಿ
ಯಾರು ಗೆದ್ದರೂ
ಸೋಲುವ ಪರಿ.. ||

ಸ್ನೇಹಕು ಸರಿ
ದ್ವೇಷಕು ಸರಿ
ಸೇಡು ತೀಡಿದರೆ
ಬದುಕೇ ಬುಗುರಿ ||

ಪಾಪವು ಸರಿ
ಪುಣ್ಯವೂ ಸರಿ
ಹೊಂದೋ ಬಯಕೆ
ನೀತಿ ನೇಮ ಬಜಾರಿ ||

ಸರಿಯೂ ಸರಿ
ತಪ್ಪೂ ಸರಿ
ಭಾವಕೆಲ್ಲಿ ತರ್ಕ ?
ಭಯ ಭೀತಿ ಸೋರಿ ||

03. ನನ್ನ ಪಾಡಿಗೆ ನಾನು ..
___________________________

ನನ್ನ ಪಾಡಿಗೆ ನಾನು
ಇರುವುದೆ ಕಾನೂನು
ಇರಲು ಬಿಡದು ಬದುಕು
ತಲೆ ಹಾಕಿಸದೆ ಬಿಡದು ||

ಯಾಕೋ ಕಂಗೆಡಿಸುವುದು
ಬಿಡದೆ ನಿದ್ದೆಗೆಡಿಸುವುದು
ಸುಮ್ಮನಿರಲಾರದೆ ಇರುವೆ
ಬಿಟ್ಟುಕೊಂಡು ಕಡಿದ ಹಾಗೆ ||

ಯಾರದೋ ತಾಪತ್ರಯ
ನಮದಾಗೊ ವಿಸ್ಮಯ
ನಮದಾಗಿ ನೋವಿಗೆ ದಾರಿ
ನೊಂದಷ್ಟೂ ಪರಾರಿ ನಗೆ ||

ನಮದೇ ವ್ಯಾಖ್ಯೆ ನಿಯಮ
ನಾವೆ ಮುರಿಯೊ ಕರ್ಮ
ಲೆಕ್ಕಾಚಾರ ಬದುಕಿನಗತ್ಯ
ಲೆಕ್ಕವಿಟ್ಟೆ ಮಾಯ ಉಲ್ಲಾಸ ||

ಭೂತ ಭವಿತ ನೋಡದೆಲೆ
ವರ್ತಮಾನದೆ ಬದುಕಲೆ
ಯಾಕೋ ಹಿಂಜರಿಯುವೆ ..
ಎಂದರಿವೆ ಮತ್ತೆ ಸಿಗದೆಂದು ? ||