01211. ಬಾರಾ ಬಾರಾ ಚಂದ್ರಮ..


01211. ಬಾರಾ ಬಾರಾ ಚಂದ್ರಮ..
___________________________


ತೇಲುತ್ತ ಹುಣ್ಣಿಮೆ ಶ್ವೇತ ಚಂದಿರ
ಮಿಂದು ಬಂದನೆ ಫಳಫಳಿಸುತ
ಯಾರಿಟ್ಟರೊ ಕಾಣೆ ಪುರುಷಾಕಾರ ?
ಇದ್ದರು ಹೆಣ್ಣಿನ ಪೌರ್ಣಿಮೆ ವದನ..

ಮಿನುಗುನುಗುತ್ತ ಹಾಲ್ನೊರೆಯಲ್ಲಿ
ಒದ್ದೆ ಕಾಲಿಂದೊದ್ದು ಚೆಲ್ಲಾಡಿದ ಕುರುಹು
ಚೆಲ್ಲಾಟವಾಡಿದನೆ ? ಚಕ್ಕಂದವಾಡಿದನೆ ?
ಮುಕ್ಕರಿದು ಮುಲುಗಿದನೆ ಮಲಗೋ ಹೊತ್ತಲ್ಲಿ ?

ನಿಶೆ ಚಾದರ ಹೊದ್ದು ಮಲಗೊ ಹೊತ್ತಲ್ಲಿ
ದೀಪ ಆರಿಸಿ ಹೊದೆವ ಮಸುಕು ಮಬ್ಬಲ್ಲಿ
ಕಿಂಡಿ ಮಾಡಿ ಬಂಡಿ ಬಂಡಿ ಬೆಳಕ ಸಾಲ
ಸೊನ್ನೆ ಬಡ್ಡಿಯಲಿ ಬಡಿಸುವ ಕಿಲಾಡಿ ವ್ಯಾಪಾರಿ..

ಬಿಟ್ಟರಿಲ್ಲ ಮತ್ತೆ ಕಾಯುವ ಗೋಳು ತಿಂಗಳು
ಮಿಕ್ಕ ದಿನವೆಲ್ಲ ತಂಗಳು ಉಣಿಸುವ ಕ್ಷಯಿಸುತ್ತ
ಇಂದು ಮಾತ್ರ ಸುಂದರ ಬೆಳದಿಂಗಳ ಕೈತುತ್ತು
ತಾರಸಿ ಚಾಪೆಯ ಹಾಸಿ ತುತ್ತಿಕ್ಕುವವಳ ಜಾದೂ..

ಕಳವಳ ತಳಮಳ ನಿದಿರೆಗೆ ಬಿಡದೆ ಬಡಿದೆಬ್ಬಿಸಿ
ತುಂಬುವ ಚಪಲ ಚಂಚಲ ಎಳೆಯುವ ಕಣ್ಣಗಲಿಸುತ
ಚಂದ್ರ ಚಕೋರಿಯರಾಗಿಸಿ ‘ಬಾರಾಬಾರೆ’ ಅನಿಸುತ
ಕೆಡವಿ ಮಿಲನದೆ ಕಡೆಗೆ, ಕ್ಷಯಿಸುವ ವಿರಹದುರಿಗೆ..

– ನಾಗೇಶ ಮೈಸೂರು
೧೨.೦೪.೨೦೧೭
(Picture source – Creative Commons..)

00168. ನಸುಕಲಿ ಚಂದ್ರಮನ …..


00168. ನಸುಕಲಿ ಚಂದ್ರಮನ …..
____________________

ಎಂದಿನಂತೆ ಆಫೀಸಿಗೆ ಹೊರಡುವ ದಾರಿಯಲ್ಲಿ ಇಂದೂ ನಡೆದಿದ್ದೆ. ಈಚಿನ ದಿನಗಳಲ್ಲಿ ತುಸು ಬಿಸಿಲು ಹೆಚ್ಚು; ಹೀಗಾಗಿ ಬೆಳಗಿನ ಹೊತ್ತಲೆ ಸೂರ್ಯ ಆಗಲೆ ಪ್ರಖರನಾಗಿ ಬೆವರಿಳಿಸುವ ದಿನಗಳು. ಆದರೆ ಇಂದೇಕೊ ಸ್ವಲ್ಪ ಕನಿಕರ ತೋರುತ್ತ ತುಸುವೆ ತಂಪಾಗಿರುವಂತೆ ಕಂಡಿತು. ಹಾಗೆ ತಲೆಯೆತ್ತಿ ನೋಡಿದಾಗ ಅಪರೂಪಕ್ಕೆ ಹಗಲಲಿ ಕಣ್ಣಿಗೆ ಬೀಳುವ….

https://nageshamysore.wordpress.com/00168-%e0%b2%a8%e0%b2%b8%e0%b3%81%e0%b2%95%e0%b2%b2%e0%b2%bf-%e0%b2%9a%e0%b2%82%e0%b2%a6%e0%b3%8d%e0%b2%b0%e0%b2%ae%e0%b2%a8/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com