01490. ಎಟುಕದೇಕೆ ಅವನ ಚಿತ್ರ?


01490. ಎಟುಕದೇಕೆ ಅವನ ಚಿತ್ರ?

________________________________

ಯಾಕೊ ಮತ್ತೆ ಮತ್ತೆ ಮರೆತು

ಹೋಗುತಿರುವುದವನ ಮುಖ

ನೆನೆದು ನೆನಪಲಿಟ್ಟರು ಚಹರೆ

ಯಾಕೊ ಕಾಣೆ ಮಸುಕು ಕಣೆ ||

ನೋಡಿದ್ದೆ ಗೊತ್ತಾ ಕದ್ದು ಕದ್ದೂ

ಮೂಗು ಕಣ್ಣು ಬಾಯಿ ಕಿವಿ ಗಲ್ಲ

ಒಂದಾದರು ಎಟುಕಿಗೆ ನಿಲುಕೆ

ಮೊಗದ ಚಿತ್ರ ಬರೆದೀತು ಮನ ||

ಏನೋ ಅಸ್ಪಷ್ಟ ಆಕಾರ ರೂಪ

ಆಜಾನುಬಾಹು ಸಾಕಾರ ಘನ

ಭುಜದ ಮೇಲಿಟ್ಟ ಶಿರವೇ ಗೌಣ

ಕಲಸುತೆಲ್ಲ ಮರೆಮಾಚಿ ಅವನನು ||

ಮೆಚ್ಚಿ ನೆಚ್ಚಿ ಹತ್ತಿರವಾದ ಸಖನೆ

ಅದೆಷ್ಟೊ ಬಾರಿ ಮಾತಾಡಿ ಜೊತೆ

ಕಳೆದ ಕಾಲ ಪರಿಚಿತ ಅನವರತ

ಅಪರಿಚಿತನಂತೆ ಯಾಕೆ ಕಾಡುವ ? ||

ಬಯಸಿ ಪಡೆದ ಪ್ರೀತಿಯ ಪರಿಯೆ ?

ಸಾಲದೆನುವ ಅದಮ್ಯತೆ ಕುರುಹೆ ?

ಅಪರಿಮಿತತೆ ಅವನಾದನೆ ಅಮೇಯ?

ಮೇಯವಾಗದೆ ಮನ ಚಡಪಡಿಕೆ ಪ್ರಾಯ ||

– ನಾಗೇಶ ಮೈಸೂರು

(Nagesha Mn)

(Picture source : Internet / social media – received via one of the FB friend some time before – sorry forgotten the name 😊🙏👌)

00654. ಅಪ್ಪನಿಲ್ಲದ ಚಿತ್ರಗಳು..


00654. ಅಪ್ಪನಿಲ್ಲದ ಚಿತ್ರಗಳು..
________________________

  
(Picture from: http://www.prajavani.net )

ನಮ್ಮ ಬಾಲ್ಯವೆಲ್ಲ ಬರಿ ನೆನಪು
ಸ್ಮೃತಿಗಷ್ಟೆ ದಾಖಲೆ ಅರೆಬರೆ ಮಸುಕು
ಅವ್ವಾ ಅಪ್ಪಾ ಅಜ್ಜಿ ತಾತಾ ಬಳಗ
ಹೇಳುವ ಕಥೆಗಳ ತಳುಕು
ಬಾಲ್ಯದ ಪೋಟೊ ವೈಭವಾ..

ಎಲ್ಲಿತ್ತು ಟೀವಿ, ವಿಡಿಯೊ ಪುಟಗೋಸಿ
ಸೈಕಲ್ಲು ರೇಡಿಯೊಗಳೆ ಜೂರತ್ತು
ಬಿದ್ದು ಬೀದಿಗೆ ಹಾಡಿದ್ದೆ ಲಗೋರಿ
ಗೋಲಿ ಬುಗುರಿ ಚಿನ್ನಿದಾಂಡು ಕ್ರಿಕೆಟ್ಟು
ಅವಲಕ್ಕಿ ಪವಲಕ್ಕಿ ಅಳಿಗುಳ್ಳಿ ಕವಡೆ
ನೆನಪಷ್ಟೆ ಮೊತ್ತದೆ..

ಇಂದು ವಿಡಿಯೊ ಕ್ಯಾಮರ ಪೋನಲಿ
ಕಂದಮ್ಮಗಳಾಟವೆಲ್ಲ ಸೆರೆಯಾಗಿ
ಹೆಜ್ಜೆಹೆಜ್ಜೆಗೂ ದಾಖಲೆ ಪುರುಸೊತ್ತಿಲ್ಲ
ನೋಡಿದರೋ ಬಿಟ್ಟರೊ ಡಿಜಿಟಲ್ಲಲಿ
ಸೇರಿತ್ತ ಸರಕು ಧೂಳು ಹಿಡಿದ
ಅಲ್ಬಮ್ಮುಗಳ ಜತೆಯಲ್ಲಿ..

ಧೂಳು ಬಡಿಯುತ ಮೊನ್ನೆ ಸಿಕ್ಕಾಗ
ಎಳೆದು ಕೂರಿಸಿದೆ ಮಗನ
ನೋಡೆನ್ನುತ್ತ ನಿನ್ನದೇ ಪುರಾಣ;
ವಾಚಿಸಿ ಅಚ್ಚರಿ ‘ಬರಿ ಅಮ್ಮ ನಾನು !’
ಉದ್ಗಾರ ಮುಗಿವ ಮೊದಲೇ ನುಡಿದೆ
‘ಹೌದು ವಿಡಿಯೊ ತೆಗೆದಿದ್ದು ನಾನು!’

ಅಪ್ಪಗಳೆಲ್ಲ ಹಾಗೆ ಹಿನ್ನಲೆಗೆ
ಸರಿವುದೇನು ಪ್ರಕೃತಿ ನಿಯಮ ?
ನೇಪಥ್ಯದಲಿ ಮಾಡಿಟ್ಟು ಪೆಚ್ಚಾಗಿ
ನಗುತ ಮೂಲೆ ಹಿಡಿಯುವ ಕರ್ಮ ?
ಅಂದುಕೊಂಡೆ ತೆರೆದೇ ಮನದ ಅಲ್ಬಮ್ಮು
ಕಂಡಿತ್ತಲ್ಯಾಕೊ ಬರಿ ಅಪ್ಪನಿಲ್ಲದ ಚಿತ್ರಗಳು..

– ನಾಗೇಶ ಮೈಸೂರು