00914. ಅನುಪಮ ಚೆಲುವಿಗೊಂದು ಕವನ


00914. ಅನುಪಮ ಚೆಲುವಿಗೊಂದು ಕವನ
_________________________________


ಕವಿ ಬಾಯ ಕಟ್ಟುವ ಅನುಪಮ ಸೌಂದರ್ಯ ನಿನದು
ಮಾತು ಬಾರದ ಮೂಕ ಕರುಣಾಜನಕ ಸ್ಥಿತಿ ನನದು
ಹೇಗೆ ವರ್ಣಿಪುದೊ ವದನ ಅಧರ ತನು ಅಣು ಚದರ
ಚದುರೊ ಚಂಚಲ ಮನಕೆ ನಿಲುಕದೊಂದು ಪೂರಾ ||

ನಖಶಿಖಾಂತದ ನೋಟ ಅಡಿಯಿಂದ ಮುಡಿಗೆ
ಶಿಲ್ಪಿ ಜಕ್ಕಣನೆ ಉಳಿಯನೆತ್ತಿ ಕೆತ್ತಿದ ಸೊಗ ಸೊಬಗೆ
ಶಿಲೆಯಾದರು ಸುಲಭ ಮುಗಿಯಿತೊಮ್ಮೆ ಕೆತ್ತಲು
ನೀನೆಂತು ಜೀವಲತೆ ಸುಸ್ಥಿರ ಕೆತ್ತಿ ಮುಗಿದ ಮೇಲೂ! ||

ಬ್ರಹ್ಮದೇವನ ಮಮತೆ ನಿನಗಿರಬೇಕು ಅಪಾರ
ಮರೆತುಹೋಗಿರಬೇಕವನಿಗೆ ದಿನನಿತ್ಯದ ವ್ಯಾಪಾರ
ಮಣ್ಣಿನ ಹದವ ತಿದ್ದಿ ತೀಡುತ ಮೈ ಮರೆತಾ ಗಳಿಗೆ
ಮಿಕ್ಕೆಲ್ಲವನ್ನು ಬದಿಗಿಟ್ಟು ನಿನ್ನ ಸೃಜಿಸಿದನೋ ಹೇಗೆ ? ||

ನಾಚಿದರು ಬೆದರಿದರು ಬೆಚ್ಚಿ ಅಪ್ಸರೆಯರ ಗುಂಪು
ದೇವಲೋಕದ ಸ್ಪರ್ಧೆಗ್ಯಾರೀ ಹೊಸ ಸುಂದರಿ ಕಂಪು ?
ಬೇಡಿದರೆಲ್ಲ ಒಮ್ಮೆಗೆ ಪಿತಾಮಹನೆ ಉಳಿಸೊ ನಮ್ಮ
ನಸುನಗೆ ನಕ್ಕ ಬ್ರಹ್ಮ ಭುವಿಗೆ ನಿನ್ನ ಕಳಿಸಿದನಮ್ಮ ||

ಮಿಕ್ಕೆಲ್ಲ ಬಿನ್ನಹ ಗಣನೆ ಪರಿಗಣನೆ ಬಿಡು ಅನುಮಾನ
ವರ್ಣನೆ ಮಾಡುವ ಯತ್ನವೆ ನಿನ್ನ ಸೌಂದರ್ಯಕಪಮಾನ
ಉಪಮೆಗಳಿಗುಪಮೆ ಉಪಮಾನವಾದವಳಿಲ್ಲಿ ನೀನು
ಅಂದವಧಿಗಮಿಸೊ ರೂಪಾಲಂಕಾರ ಶೋಧ-ನಿರತ ನಾನು ! ||


– ನಾಗೇಶ ಮೈಸೂರು
19.09.2016

(Pictures from internet / Facebook)