01354. ಸರ್ವಜ್ಞನ ವಚನ ೦೦೧೪: ಜಡೆಯ ಕಟ್ಟಲುಬಹುದು


01354. ಸರ್ವಜ್ಞನ ವಚನ ೦೦೧೪: ಜಡೆಯ ಕಟ್ಟಲುಬಹುದು
______________________________________


ಜಡೆಯ ಕಟ್ಟಲುಬಹುದು | ಕಡವಸವನುಡಬಹುದು |
ಬಿಡದೆ ದೇಗುಲದೊಳಿರಬಹುದು ಕರಣವನು |
ತಡೆಯುವದೆ ಕಷ್ಟ || ಸರ್ವಜ್ಞ ||

ಕಡವಸ : ತೊಗಲು, ಚರ್ಮ, ಅದರಿಂದಾದ ವಸ್ತ್ರ (ಕೃಷ್ಣಾಜಿನ)
ಕರಣ: ಇಂದ್ರೀಯಗಳು (ಜ್ಞಾನೇಂದ್ರಿಯಗಳು, ಕರ್ಮೇಂದ್ರಿಯಗಳು, ಅಂತಃಕರಣ)

ಸರಳ ಸಾರಾಂಶ:
ಸನ್ಯಾಸಿ/ಯೋಗಿಯಾಗ ಹೊರಟವನು ತನ್ನ ಬಾಹ್ಯದವತಾರವನ್ನು ಅದಕ್ಕೆ ತಕ್ಕಂತೆ ಬದಲಿಸಿಕೊಳ್ಳುವುದು ಸುಲಭ. ಆದರೆ ಮುಖ್ಯವಾಗಿ ಬೇಕಾದ ಇಂದ್ರಿಯ ನಿಗ್ರಹವನ್ನು ಸಾಧಿಸುವುದು ಕಷ್ಟಸಾಧ್ಯವೆನ್ನುವುದು ಈ ವಚನದ ಸಾರ.

ವಿಸ್ತೃತ ಟಿಪ್ಪಣಿ:
ಇದೊಂದು ಸುಂದರ ಸರಳ ವಚನ. ಬಾಹ್ಯದಾಚರಣೆಗು ಮತ್ತು ಅಂತರಂಗದ ನೈಜ ಸ್ಥಿತಿಗು ಇರುವ ವ್ಯತ್ಯಾಸವನ್ನು ಎತ್ತಿ ತೋರಿಸುವುದೊಂದು ಅಂಶವಾದರೆ, ಅವುಗಳ ಅನುಷ್ಠಾನದಲ್ಲಿರುವ ಕಾಠಿಣ್ಯತೆಯ ಮಟ್ಟವನ್ನು ಹೋಲಿಸಿ ತೋರಿಸುವುದು ಮತ್ತೊಂದು ಆಯಾಮ. ಈ ಹಿನ್ನಲೆಯಲ್ಲಿ ಈ ವಚನವನ್ನು ಅರ್ಥ ಮಾಡಿಕೊಳ್ಳಲು ಯತ್ನಿಸೋಣ.

ಸಾಮಾನ್ಯವಾಗಿ ಯಾರು ಬೇಕಾದರೂ ತಮ್ಮ ಸಾಂಸಾರಿಕ ಬಂಧಗಳನ್ನು ತ್ಯಜಿಸಿ , ಸನ್ಯಾಸಿ-ಋಷಿ-ಮುನಿಗಳಾಗಲು ಬಯಸಬಹುದು. ಹಾಗೆ ಬಯಸಲು ಕಾರಣ, ಹಿನ್ನಲೆ ಏನೇ ಇರಲಿ – ಹಾಗೆ ಎಲ್ಲಾ ಬಿಟ್ಟು ದೃಢ ಮನಸಿನಿಂದ ಹೊರಡುವವರ ಸಂಖ್ಯೆಯೆ ಬೆರಳೆಣಿಕೆಯಷ್ಟಿದ್ದೀತು. ಹಾಗೆ ಹೊರಟ ಮಾತ್ರಕ್ಕೆ ಅವರು ನಿಜಾರ್ಥದಲ್ಲಿ ಸನ್ಯಾಸಿ-ಋಷಿ-ಮುನಿಗಳಾಗಿಬಿಡುತ್ತಾರೆಯೆ? ಎನ್ನುವುದು ಇಲ್ಲಿನ ಮೂಲ ಪ್ರಶ್ನೆ.

ಬಾಹ್ಯದ ರೂಪದಲ್ಲೇನೊ ಅಗತ್ಯಕ್ಕನುಸಾರ ಅವರು ಸುಲಭದಲ್ಲಿ ಬದಲಾವಣೆ ಮಾಡಿಕೊಂಡುಬಿಡಬಹುದು. ಅವಶ್ಯಕತೆಗೆ ತಕ್ಕಂತಹ ವೇಷಭೂಷಣಗಳನ್ನು, ರೀತಿನೀತಿಗಳನ್ನು ಅಳವಡಿಸಿಕೊಳ್ಳಬಹುದು. ಸನ್ಯಾಸಿಯಾಗಲು ಬೇಕಾದ ಉದ್ದ ಜಡೆಯನ್ನು ಬೆಳೆಸಿ ಜಡೆ ಕಟ್ಟಬಹುದು; ಅಥವಾ ಋಷಿಮುನಿಗಳಂತೆ ಜಟೆಯನ್ನೂ ಮಾಡಿಕೊಳ್ಳಬಹುದು. ಕೃಷ್ಣಾಜಿನದಂತಹ ಕಡವಸದ (ತೊಗಲಿನ) ವಸ್ತ್ರ ಧರಿಸುತ್ತ ತನ್ನ ಬಾಹ್ಯಸ್ವರೂಪವನ್ನು ಮಾರ್ಪಾಡಿಸಿಕೊಳ್ಳಬಹುದು (ಅದೇ ಸನ್ಯಾಸಿಗಳಾದರೆ ಕಾವಿಯುಡುಗೆ ತೊಡಬಹುದು). ಇನ್ನು ಈ ಹಾದಿ ಹಿಡಿದ ಮೇಲೆ ಭಗವಂತನ ಸಾನಿಧ್ಯದಲ್ಲಿ ತಾನೇ ಇರಬೇಕು ? ಯಾವುದಾದರೊಂದು ಇಷ್ಟದೈವದ ದೇಗುಲಕ್ಕೆ ಹೋಗಿ ದಿನವೆಲ್ಲ ಅಲ್ಲೆ ಕೂತು ಕಾಲ ಕಳೆಯುವುದೇನೂ ಕಷ್ಟವಲ್ಲ. ಹೀಗೆ ಹೊರಗಿನವರ ದೃಷ್ಟಿಯಲ್ಲಿ ಯೋಗಿಯೆಂದೆನಿಸಿಕೊಳ್ಳಲು ಏನೆಲ್ಲಾ ಬೇಕೊ, ಏನೆಲ್ಲ ಸಂಪ್ರದಾಯ ಆಚರಿಸಬೇಕೊ ಅವೆಲ್ಲವನ್ನು ಮಾಡಿಬಿಡಬಹುದು. ಆದರೆ ನಿಜಾರ್ಥದಲ್ಲಿ ಬರಿಯ ಬಾಹ್ಯದ ತೋರಿಕೆಯ ಸ್ವರೂಪ ಮಾತ್ರದಿಂದಲೆ ಯೋಗಿಗಳಾಗಿಬಿಡಲು ಸಾಧ್ಯವೆ?

ಖಂಡಿತ ಇಲ್ಲ ! ಯೋಗಿಯಾಗಲು ಬಾಹ್ಯಕ್ಕಿಂತ ಮುಖ್ಯವಾಗಿ ಬೇಕಾದ್ದು ಅಂತರಂಗಿಕ ಸಿದ್ದತೆ. ಅರ್ಥಾತ್ ಕರಣಗಳ (ಇಂದ್ರೀಯಗಳ) ನಿಯಂತ್ರಣ. ಅವುಗಳ ಮೂಲಕ ಉಂಟಾಗುವ ಪ್ರಚೋದನೆ, ಪ್ರಲೋಭನೆಗಳನ್ನು ಗೆದ್ದು ನಿಭಾಯಿಸಿಕೊಂಡು ಅವುಗಳ ಹುಚ್ಚಾಟಕ್ಕೆ ತಡೆಹಾಕಲು ಸಾಧ್ಯವಾಗದಿದ್ದರೆ, ಬಾಹ್ಯ ತೋರಿಕೆಯ ಪೋಷಾಕುಗಳೆಲ್ಲ ಬರಿ ವ್ಯರ್ಥ, ಬೂಟಾಟಿಕೆ ಮಾತ್ರವಾಗುತ್ತದೆ. ಆ ಕರಣಗಳ ನಿಯಂತ್ರಣವನ್ನು ಸಾಧಿಸುವುದೇ ಕಷ್ಟಕರ, ಅವುಗಳ ಪ್ರಭಾವದಿಂದ ಪಾರಾಗುವುದೇ ಕಠಿಣ ಎನ್ನುವ ಮಾರ್ಮಿಕ ಸತ್ಯವನ್ನು ಬಿತ್ತರಿಸುತ್ತಿದೆ ವಚನದ ಕೊನೆಯ ಸಾಲು.

ಒಟ್ಟಾರೆ, ಯೋಗಿಯಾಗ ಹೊರಟವನು ಮೊದಲು ಸಾಧಿಸಬೇಕಾದ್ದು ಮಾನಸಿಕ ಸಿದ್ಧತೆ ಮತ್ತು ಇಂದ್ರೀಯ ನಿಗ್ರಹ ಶಕ್ತಿ. ಅದಿದ್ದರೆ ಮಿಕ್ಕಿದ್ದೆಲ್ಲ ಬಾಹ್ಯಸ್ವರೂಪವನ್ನು ಸುಲಭದಲ್ಲಿ ಹೊಂದಿಸಿಕೊಳ್ಳಬಹುದು ಎನ್ನುವುದು ಇಲ್ಲಿನ ಮೂಲ ಸಂದೇಶ.

– ನಾಗೇಶ ಮೈಸೂರು
(Nagesha Mn)
#ಸರ್ವಜ್ಞ_ವಚನ
(ನನ್ನರಿವಿಗೆಟುಕಿದಂತೆ ಬರೆದ ಟಿಪ್ಪಣಿ – ತಪ್ಪಿದ್ದರೆ ತಿದ್ದಿ)
(Picture source : Wikipedia)