02112. ಚೆಲ್ಲಾಪಿಲ್ಲಿ ತುಣುಕು


02112. ಚೆಲ್ಲಾಪಿಲ್ಲಿ ತುಣುಕು
_____________________

(೦೧)
ಊರ ದಾರಿಯ ತುಂಬಾ
ಕನಸುಗಳ ಜಾತ್ರೆ
ಪಟ್ಟಣಕೆ ಹೋಗೋ ದಾರಿ
ಹೆಜ್ಜೆಗೊಂದೊಂದು ಮಾತ್ರೆ

(೦೨)
ಕನಸ ಬೆನ್ನಟ್ಟಿ ಹೊರಟು
ಊರಾಚೆ ನಡಿಗೆ
ಊರನ್ನಲ್ಲಿ ಹುಡುಕುತ
ತೊಳಲಾಟ ಬೆಡಗೆ

(೦೩)
ಊರೆಂದರೆ ಊರಗಲ
ಹಳ್ಳ ಕೊಳ್ಳ ಬಾವಿ ಕೆರೆ ನದಿ
ಪಟ್ಟಣ ಇಕ್ಕಟ್ಟ ಬಿಕ್ಕಟ್ಟ ಸುಖ
ಬೆಂಕಿಪೊಟ್ಟಣ ಕಡ್ಡಿ ಹುಡುಕಾಟ

(೦೪)
ಬೆಂಕಿ ಕಡ್ಡಿ ಗೀರಿ
ಬೆಚ್ಚಗಾಗುವ ಪಟ್ಟಣ ಸುಖ
ಕಂಬಳಿಯೊದ್ದು ಬೆಂಕಿಯಲಿ
ಚಳಿ ಕಾಯಿಸೊ ಹಳ್ಳಿ ಸಖ

(೦೫)
ಬೇಸತ್ತು ಪಟ್ಟಣ ಪಾಡು
ಊರಿನ ಮಡಿಲಿಗೆ ಓಡು
ಮೂರು ದಿನದ ಪೆರೇಡು
ಮತ್ತೇಕೋ ಪಟ್ಟಣ ಕಾಡು

(೦೬)
ಇಲ್ಲಿ ಸಿಗದುದನಲ್ಲಿ
ಅಲ್ಲಿ ಸಿಗದುದನಿಲ್ಲಿ
ಹುಡುಕುತ್ತ ಜೀವನ
ಮುಗಿವಾಗ ಹುಡುಕಿದ್ದೇನ?

(೦೭)
ಅಂದಿಗೂ ಇಂದಿಗೂ
ಅವಳೇ ಬುದ್ಧಿವಂತೆ
ಅವಳಿಂದಲೆ ಏಳಿಗೆ ವಿನಾಶ
ಹಿನ್ನಲೆ ಇದ್ದೆ ತಾನಾಡುವಳು

– ನಾಗೇಶ ಮೈಸೂರು
೧೨.೦೭.೨೦೧೭

02094. ತುಣುಕುಗಳ ತುಳುಕಾಟ..


02094. ತುಣುಕುಗಳ ತುಳುಕಾಟ..
__________________________

(೦೧)
ನನ್ನ ಕನಸೆಲ್ಲ ಖಾಲಿ ಖಾಲಿ
– ಜೋಳಿಗೆ ಹಾಳೆ ಶಾಯಿ
ಬರೆದುಕೊಳ್ಳಲೆನ್ನದೆ ಕಥೆ ಕವಿತೆ
ಎಚ್ಚರಿಸುವಳೊಮ್ಮೊಮ್ಮೆ ತಾಯಿ !

(೦೨)
ಹಂಚಿಕೊಳದೂ ಭಾವ
ತಂತಾನೇ ಏನನು
ಹಂಚಿಕೆಯಿರಬೇಕೊಂದು
ಮೆಚ್ಚುವ ಮನಸು ಸಕಾರಣ !

(೦೩)
ವಾಸ್ತವ ಜಗ ಜಾಗರಣೆ
ಹಗಲಿರುಳು ತನ್ನಂತಾನೆ ಸ್ವಗತ
ಆಗು ಹೋಗು ಮೂಕಸಾಕ್ಷಿ
ರಟ್ಟಾಗಿಸದೆ ಮೌನದ ಸೊಲ್ಲಲಿ .

(೦೪)
ತನ್ನಂತಾನೆ ಹಾಡಿಕೊಳುವ
– ಹಕ್ಕಿಗೆ
ಯಾರು ತಾನೇ ಅಡೆತಡೆ ?
ಜನ್ಮಸಿದ್ಧ ಹಕ್ಕೆ ಹಾಗೆ
ತಾನಾಗುವ ಅಧಿಕಾರ .

(೦೫)
ತಮಾಷೆ
ಬಿಡಿಯಾಗಿದ್ದರೆ ಚಂದ
ಇಡಿಯಾದರೆ ನಗು
ಹೊಟ್ಟೆ ಹುಣ್ಣಾಗುವ ಮಗು 😛

(೦೬)
ಲಹರಿಯಲ್ಲಿದೆ ಹೃದಯ
ಹರಿವ ನದಿ ಪ್ರಳಯ
ಸುಗಮ ಭಾವಕೆ ಗೀತೆ
ಪ್ರಕ್ಷುಬ್ದತೆಗೆ ನೋವು ಜೊತೆ .

(೦೭)
ಅವಳೆಬ್ಬಿಸಿದ ಪುಳಕ
ಎಂಥದೋ ಪುಳು ಪುಳು ಜಳಕ
ಹುಲುಸಾಗಿ ಕೃಷಿ ಕಾವ್ಯ ಆಹ್ಲಾದ
ಮನಸು ಮನಸಾಗಿ ಪ್ರಪುಲ್ಲತೆ ರಮ್ಯಾ .

– ನಾಗೇಶ ಮೈಸೂರು
೦೪.೦೭.೨೦೧೭

01024. ಮತ್ತಷ್ಟು ತುಣುಕು


01024. ಮತ್ತಷ್ಟು ತುಣುಕು
_____________________

(೦೧)
ಐವತ್ತರಲಿ
ಹತ್ತು ಐದು ಐದ್ಹತ್ತು
ಎರಡೈವತ್ತು ?

(೦೨)
ಆಯಸ್ಸು ನೂರು
ಶತಮಾನಂ ಭವತಿ
ಅಪರೂಪಕೆ

(೦೩)
ಆಳಿದ ರಾಜ್ಯ
ಅಮರಾವತಿ ಭಸ್ಮ
ಪಳೆಯುಳಿಕೆ

(೦೪)
ಬದುಕುವಾಗ
ಬೀಜ ಸಸಿ ಮರವೆ
ಬೀಜದ ಮೂಲ

(೦೫)
ಮುದ್ದು ಮಕ್ಕಳು
ಪರಿಚಿತ ಹೆಮ್ಮರ
ಅಪರಿಚಿತ

(೦೬)
ನಿದ್ರಾ ನಡಿಗೆ
ಬದುಕಿರೋವರೆಗೂ
ಸಾವಲೆಚ್ಚರ

(೦೭)
ತುಪ್ಪದ ಅನ್ನ
ಬೊಜ್ಜಲಿ ಪ್ರದರ್ಶನ
ಭಾರದ ಹೆಣ

(೦೮)
ಪರಾಗ ಸ್ಪರ್ಶ
ಸಂತಾನ ಪ್ರಸರಣ
ಧೂರ್ತ ನಿಸರ್ಗ

(೦೯)
ಎಲ್ಲಾ ಮುಗಿಸೊ
ಅವಸರ ಆಯಸ್ಸು
ದಿಕ್ಕು ತಪ್ಪುತ

(೧೦)
ನಾನೆಂಬ ದೂರ
ಅಳೆಯಲು ಸುಸೂತ್ರ
ಯಾರದೊ ಬಿಂಬ

– ನಾಗೇಶ ಮೈಸೂರು
೧೦.೧೨.೨೦೧೬

(Pictures: these works are licensed under a Creative Commons Attribution-NonCommercial-ShareAlike 3.0 Unported License)

00749. ನಂಟಿನ ವ್ಯಾಖ್ಯೆ (ಹಾಯ್ಕು ಮಾದರಿ)


00749. ನಂಟಿನ ವ್ಯಾಖ್ಯೆ (ಹಾಯ್ಕು ಮಾದರಿ)
_______________________________

ಪ್ರತಿ ನಂಟಿಗು ಅವರವರದೇ ವ್ಯಾಖ್ಯೆ, ವಿಮರ್ಶೆ, ಅರ್ಥ – ಮನದ ಗುಣಿತಕನುಸಾರವಾಗಿ. ಹಾಯ್ಕು ಮಾದರಿಯ ಈ ಹನಿಗಳಲ್ಲಿ ಕೆಲವೊಂದನ್ನು ಕಟ್ಟಿಡುವ ಅರೆ-ಸಫಲ ಯತ್ನ.. 😊


(೦೧)
ನಂಟಿನ ಮನ
ಅವರವರ ವ್ಯಾಖ್ಯೆ
– ಮನದ ಗಂಟೆ.

(೦೨)
ನಂಟಿಗೆ ಬೇಕು
ಬೇವು ಬೆಲ್ಲದ ಕಾಲ
– ಅರಿಸುವಾಟ.

(೦೩)
ನಂಟಸ್ತಿಕೆಗೆ
ಅಂತಸ್ತೈಶ್ವರ್ಯ ಲೆಕ್ಕ
– ಮಿಕ್ಕಿದ್ದಾಮೇಲೆ.

(೦೪)
ನಂಟಿನ ಗಂಟು
ಅಂದುಕೊಂಡಿದ್ದೆ ಹೆಚ್ಚು
– ಆಗದೆ ಕಿಚ್ಚು.

(೦೫)
ಗೀಳಾಗಿ ನಂಟು
ಕಾಡುವ ಅನುಪಾತ
– ವಿಲೋಮ ದೂರ.

(೦೬)
ನಂಟಿಗರ್ಥವೆ
ನನದೆನ್ನುವ ಸ್ವಾರ್ಥ
– ಉಬ್ಬರವಿಳಿತ

(೦೭)
ಗಂಟು ಹಾಕಿದ್ದು
ನಂಟೇ ಆದರು ಮೊತ್ತ
– ಗೌರವ ಸೂಕ್ತ.

(೦೮)
ತಪಿಸಿ ನಂಟ
ಹುಡುಕಾಡಿಸೊ ಚಿತ್ತ
– ಸಿಕ್ಕಾಗ ಧೂರ್ತ.

(೦೯)
ನಂಟಿನ ಹಿತ
ಮುದದಷ್ಟೆ ಬೇಸರ
– ಇರಲಿ ನಿಗಾ.

(೧೦)
ನಂಟಿಗೆ ಗುಟ್ಟ
ರಟ್ಟಾಗಿಸೊ ನಂಬಿಕೆ
– ಗುಟ್ಟಾಗಿರಲಿ.

– ನಾಗೇಶ ಮೈಸೂರು

00748. ಬಂಧಕೊಂದಷ್ಟು ತುಣುಕುಗಳು..


00748. ಬಂಧಕೊಂದಷ್ಟು ತುಣುಕುಗಳು..
_______________________________

(೦೧)
ನೀ ದೂರಾಗಿ
ಕರ್ಕಶ ಸದ್ದಾದ ಮಾತು
ಎಷ್ಟೊ ವಾಸಿಯಿತ್ತು;
ಭೀಕರವೀಗ ಅದ ಮೀರಿಸೊ
ಕೊಲ್ಲುವ ಮೌನದ ಮೌನ.

(೦೨)
ಒಪ್ಪಿಕೊಳ್ಳುವ
ಮೊದಲಿತ್ತೆಲ್ಲಿ ಅರಿವೆ ?
ಅರಿವಾದರೇನೀಗ ಬೆತ್ತಲೆ
ಮುಚ್ಚಲೊಲ್ಲದ ಅರಿವೆ
ಮೈ ಮರೆವೆ..

(೦೩)
ಎಲ್ಲಿತ್ತು ಬೇಧ ?
ಅರ್ಧನಾರೀಶ್ವರರಂತೆ
ನಮ್ಮಿಬ್ಬರ ನಡುವೆ ಸೀಮೆ ;
ನಾರಿ ಈಶ್ವರರ ಛೇಧಿಸಿ
ವಿಭಜಿಸಿದ್ದು ಮಾತ್ರ
ಸ್ತ್ರೀಲಿಂಗ ಪುಲ್ಲಿಂಗದ ಮಹಿಮೆ..

(೦೪)
ಹತ್ತಿರವಾಗುತ್ತ ಪರಸ್ಪರ
ಹೊಕ್ಕುತಿಬ್ಬರ ಆವರಣ ಸಂಭ್ರಮ
ಅಸಾಧಾರಣ ಮಿಲನ ;
ಉಸಿರುಗಟ್ಟಿಸೊ ಮೊದಲೆ
ಹಿಂದೆತ್ತಿಕ್ಕದೆ ಒಂದಡಿ ಹೆಜ್ಜೆ ನಡಿಗೆ
ದೂರಾಗಿ ವಿದಾಯಕೆ ಕಾರಣ..

(೦೫)
ಅವರವರ
ಪರ್ಸನಲ್ ಸ್ಪೇಸ್
ಅವರವರಿಗೆ ಅಪ್ಯಾಯ…
ಬಿಟ್ಟುಕೊಂಡರು ಪ್ರೀತಿಗೆ ಒಳಗೆ
ಬೇಲಿಯಾಚೆಯೆ ಸುಳಿದಾಡುತಿರು
ಕಾಯುತ ಆಗಾಗಿಣುಕುವ ಸರಿ ಗಳಿಗೆಗೆ..

– ನಾಗೇಶ ಮೈಸೂರು

00681. ತುಣುಕುಗಳು (30.04.2016)


00681. ತುಣುಕುಗಳು (30.04.2016)
___________________________

ರಾಜಕೀಯದ ಹೊಲಸು ಸಾಕಪ್ಪ ಸಾಕು
ನಾಯಿ ಬಾಲದ ಡೊಂಕು ನಮಗ್ಯಾಕೆ ಬೇಕು ?
ಅಂದುಕೊಂಡು ಕೂತೆ ಗಬ್ಬೆದ್ದು ಹೋಯ್ತು ದೇಶ
ತೊಳೆಯಿನ್ನು ಹೊಲಸ ಎಣಿಸದೆ ಮೀನಾಮೇಷ ! ||

ಭ್ರಮ ನಿರಸನ ಜನತೆ ದಾರಿ ಕಾಣದೆ ಹತಾಶೆ
ಕೂತ ಹೊತ್ತಲೆ ಕಡೆಗೂ ದಾರಿದೀಪದ ನಿರೀಕ್ಷೆ
ಕಣ್ಮುಚ್ಚಿ ನಂಬೆ ಮಾತಿನವೀರರ ಪಡೆ ಮೋಸ
ತೋರುತಿಹ ನೀಲನಕ್ಷೆ ನಂಬಿ ನಡೆಯೆ ಲೇಸ ! ||

ತಿಂದು ತೇಗಿದರಂತೆ ಹೆಲಿಕಾಪ್ಟರಲು ಹೊಲಸು
ಅಧಿಕಾರದಲಿ ಮೇಯ್ದು ಪಕ್ಕಾ ಪುಲ್ ಮೀಲ್ಸು
ಇಂಧನ ತುಂಬಿ ಹಾರಿ, ಭಾರಿ ಮಳ್ಳಿಯ ನಗು
ರಟ್ಟಾಗೆ ಬಯಲಾಟ, ಕತ್ತರಿ ಕಡತದ ಹೆಸರಿಗೂ ! ||

– ನಾಗೇಶ ಮೈಸೂರು

00317. ಹೊಸ ಜಾಗ..


00317. ಹೊಸ ಜಾಗ..
_________________

ಹೊಸ ಜಾಗದಲಿ ಬಂದು ಹೊಂದಿಕೊಳ್ಳುವ ತಾಕಲಾಟ ಎಲ್ಲರಿಗು ಪರಿಚಿತವೆ. ಅಂತದ್ದೊಂದು ಸ್ಥಿತ್ಯಂತರ ಸ್ಥಿತಿಯಲ್ಲಿ ಎದುರಾಗುವ ಪಲುಕುಗಳನ್ಬೆ ಪದಗಳಾಗಿಸಿದ ಕೆಲವು ತುಣುಕುಗಳಿವು. ಜಾಗ ಯಾವುದೆ ಆದರು ಪ್ರತಿಯೊಬ್ಬರ ದಿಗಿಲು, ಅವಶ್ಯಕತೆ, ಸಡಗರ, ಆತಂಕಗಳು ಮಾತ್ರ ಅವವೆ ಆಗಿರುವುದರಿಂದ ಹೋದಲೆಲ್ಲ ಅವುಗಳಿಗೆ ಹುಡುಕಾಟ ನಡೆಸುವುದು ಸಹಜ ಪ್ರಕ್ರಿಯೆ. ಬೇಕಾದ್ದು ಸಿಗದಿದ್ದರು ಅದಕ್ಕೆ ಸಮೀಪದ ಸ್ಥಿತಿ ಕಂಡರು ಅದನ್ನೆ ಅಪ್ಪಿಕೊಳ್ಳುವ ಅನಿವಾರ್ಯ ಆನಂದದ ಸ್ಥಿತಿ. ಆ ಕಲಸು ಮೇಲೋಗರಗಳ ನಡುವೆಯೂ ಬದಲಾಗದ ಒಂದೆ ಸ್ಥಿತಿ ಒಳಗಿನ ಭಾವನೆ, ತುಡಿತ – ಈ ಕೆಳಗಿನ ಪಲುಕುಗಳೆ ಹೇಳುವಂತೆ 🙂

ಅಪರಿಚಿತ
ಮುಖಗಳಲು
ಅದೇ ಪರಿಚಿತ ನಗೆ ! ||

(click this page link to read the rest : https://nageshamysore.wordpress.com/00317-%e0%b2%b9%e0%b3%8a%e0%b2%b8-%e0%b2%9c%e0%b2%be%e0%b2%97/)

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha MN
WeBlog site: nageshamysore.wordpress.com