01631. *ಕುಡಿದ ಕವಿ ತೊದಲಾಟ…*


01631. *ಕುಡಿದ ಕವಿ ತೊದಲಾಟ…*

*ಕುಡಿದ ಕವಿ ತೊದಲಾಟ…*

_________________________

(ಉದಾಸ ಮನಕ್ಕೊಂದು ‘ಶಾಶ್ವತ’ ತಾತ್ಕಾಲಿಕ ಪರಿಹಾರ..)

ಕುಡಿದು ಮರೆಯುವ ಸೊಗಸು

ಭ್ರಮೆ ಲೋಕದಡಿ ಗುಣುಗುಣಿಸು

ಮೈ ಮರೆಸೆಲ್ಲ ತರ ಮುನಿಸು

ತೊದಲು ಮಾತಾಗಿ ಸ್ಪುರಿಸು.. ||

ಕವನೆ ತಾನೆ ಮತ್ತಿನ ಮದಿರೆ

ಜತೆ ನೀಡೆ ಬೇಡವೆ ಮದಿರೆ ?

ಗುಟುಕರಿಸೆ ಹನಿ ಮುಖ ಕಿವುಚಿ

ಹುಳಿ ಕಹಿ ಒಳಗೇನೊ ತಿರುಚಿ..||

ಹೊಕ್ಕಂತೇನೊ ಬಿಸಿ ಬುಗ್ಗೆ

ಉಕ್ಕಿದಂತೆ ಸುಡುಬೆಂಕಿ ನುಗ್ಗೆ

ಬೆಚ್ಚನೆಯಾಟದಲೇನೊ ಹಗುರ

ಹೂವಾಗಿ ಮೇಲೆದ್ದಂತೆಲ್ಲ ಭಾರ..||

ಅದು ಭೌತ ಶಾಸ್ತ್ರದ ನಿಯಮ

ಎರಡಕಿಲ್ಲ ಒಂದೆ ತಾಣದ ಕರ್ಮ

ಒಳಗಿಳಿದಂತೆ ಮದಿರೆಯ ತಳ್ಳಾಟ

ಕವಿತೆಯಾಗಿ ಹೊರಬೀಳೊ ಕಳ್ಳಾಟ..||

ಮದಿರೆಗು ಕಾವ್ಯಕು ಅವಿನಾಭಾವ

ನಂಟೇನೊ ಗಂಟು ಹಾಕಿ ಸುಶ್ರಾವ

ಬಿಸಿರಕ್ತಸ್ರಾವ ಹನಿಯಾಗುತ ಪದ

ಕೊರೆದೊ ಕುಡಿದೊ ನೀಡುತ ಮುದ..||

– ನಾಗೇಶ ಮೈಸೂರು

(Nagesha Mn)

(Picture source : Internet / social media)