02040. ಲೆಕ್ಕವಿಡಲೊಂದು ಅಮ್ಮನ ದಿನ..


02040. ಲೆಕ್ಕವಿಡಲೊಂದು ಅಮ್ಮನ ದಿನ..
_________________________________


ಯಾಕೋ, ಅಮ್ಮನ ದಿನ ಗುಮ್ಮನ ಗುಸುಕ ಮನಸು ?
ಅಮ್ಮನ ನೆನೆಯಲೊಂದೇ ದಿನವಾದಾಗ ಇದೆ ಕೇಸು.

ಅಮ್ಮನ ನೆನೆದಿಲ್ಲವೇ ಅನವರತ, ನೆನೆವಂತೆ ಭಗವಂತನ ?
ಊದುಗಡ್ಡಿ ದೀಪ ಮಂಗಳಾರತಿ, ಬಿಟ್ಟೇನು ಕೇಳನವನ.

ಮಾಡಿಲ್ಲವೆ ಕರೆ ದೂರವಾಣಿ, ದಿನ ಬಿಟ್ಟು ದಿನ – ವಾರ ?
ಮಾತಿಗೂ ಮೀರಿದ ಸಾಮೀಪ್ಯ, ಬೇಡಿಕೆ ಪಟ್ಟಿ ಅಪಾರ.

ಬದುಕಿನ ಸಂತೆಯ ಜೂಜಲಿ ಹೆಣಗಿರೆ, ಸಿಕ್ಕಲೆಲ್ಲಿ ಬಿಡುವು ?
ಅವಳಾ ಬದುಕಿನ ಸಂತೆಯ ತುಂಬ, ಮೌನ ಸಿಟ್ಟು ಸೆಡವು.

ಬಡಿದು-ಚಚ್ಚಿ-ಬೆಳೆಸಿ, ಕಳಿಸಿದ್ದವಳಲ್ಲವೇ ಈ ಬದುಕಿಗೆ ?
ಬದುಕಿನ ಆಯ್ಕೆಯ ಹೊತ್ತು, ನಿನ್ನದೆ ಸ್ವಾತಂತ್ರವಿತ್ತು ನಿನಗೆ.

ಅವಳಾಶೆಗೆ ತಾನೇ ಓದಿ ಬರೆದು, ಹಿಡಿದದ್ದೀ ಕೆಲಸ, ಮೊತ್ತ ?
ನೀ ವಂಚಿಸುತಿರುವೆ ನಿನಗೆ, ಅಲ್ಲಿದ್ದುದ್ದು ನಿನದೇ ಸ್ವಾರ್ಥ.

ಸರಿ ಹೋಗಲಿ ಬಿಡು ವಿವಾದ, ಮಾಡಲಾದರೂ ಏನೀಗ ?
ಮಾಡುವುದೇನು ಬೇಡ, ಹೋಗಿ ನೋಡು ಅವಳಿಹ ಜಾಗ.

ದೇಶಾಂತರ ಎತ್ತಲೊ ಮೂಲೆಯಲಿರುವೆ, ಹೋಗಲೆಂತು ?
ಮೂರು ಗಳಿಗೇ ಮಾತಲಿ, ಮುಗಿಯದು ಕರ್ತವ್ಯದ ಗಂಟು.

ಕೊಲದೆ ಬಿಡುವೆಯ ಸಾಕಿನ್ನು, ಚುಚ್ಚುವ ಮಾತನು ಬೆರೆಸಿ ?
ನಾನಲ್ಲ ನಿನ್ನಂತರಾತ್ಮ ಸರತಿ, ಚುಚ್ಚುತಿದೆ ನಿನ್ನಾತ್ಮಸಾಕ್ಷಿ.

– ನಾಗೇಶ ಮೈಸೂರು
೧೩.೦೫.೨೦೧೭
(ಮೇ ೧೪: ಅಮ್ಮಂದಿರ ದಿನ)

(Picture source : Creative Commons)

01182. ಜಲ ದಿನ ಮನ…


01182. ಜಲ ದಿನ ಮನ…
____________________


(೦೧)
ಜಲಲ ಜಲ
ಸುಲಲಿತ ಅಮಲ
– ಅಮೃತ ಧಾರೆ

(೦೨)
ಜಲ ದೇವತೆ
ಜನನಿ ಜನ್ಮ ಭೂಮಿ
– ತುಂಬಿದ ಕೊಡ

(೦೩)
ಧರಣಿ ಪಾತ್ರೆ
ಹಿಡಿದಿಟ್ಟಿಹ ನೀರೆ
– ಪ್ರಕೃತಿ ಸೀರೆ

(೦೪)
ನೆಲ ಬಿರುಕು
ಬಿಕ್ಕಳಿಕೆ ಕುರುಹು
– ಬರ ಸಿಡಿಲು

(೦೫)
ಬರ ಬಾರದು
ಬಂದರೆ ಗಂಗಾಜಲ
– ಪುಣ್ಯದ ನೆಲ

(೦೬)
ತಿಕ್ಕಲು ಹನಿ
ಮಗ್ಗಲು ಬದಲಿಸಿ
– ತಬ್ಬಿ ಸ್ಖಲನ

(೦೭)
ಬೆವರ ಹನಿ
ಲವಣ ನೆಲ ಗರ್ಭ
– ಅಂತರ್ಜಲದೆ

(೦೮)
ನೀರಿಲ್ಲದಿರೆ
ನಿರ್ವೀರ್ಯ ಪುರುಷತ್ವ
– ಪ್ರಕೃತಿ ಬಂಜೆ

(೦೯)
ಜಲ ದಿನದೆ
ಮಲಿನವಾಗಿಸದೆ
– ಬಳಸೆ ಹಿತ

(೧೦)
ನಾಗರೀಕತೆ
ಹುಟ್ಟಿ ಬೆಳೆಯೆ ಜಲ
– ಅನಾಗರೀಕ

– ನಾಗೇಶ ಮೈಸೂರು
೨೨.೦೩.೨೦೧೭
(Picture source: Creative Commons)

00666. ಹನುಮ-ಭುವನ


00666. ಹನುಮ-ಭುವನ
_________________

 

ಧಾರಿಣಿ ದಿನ ಸಂಭ್ರಮಣ
ಹನುಮೋತ್ಸವ ಸಮ್ಮಿಲನ
ಸಂಜೀವಿನಿ ಹೊತ್ತವನ ಗುಣ
ಪೃಥ್ವಿಯಲ್ಲು ಅನುರಣ ದಿನ ||

ಅಪರಿಮಿತವಿಹ ಸ್ವಾಮಿ ಭಕ್ತಿ
ಬಿಡದೆ ಜಪಿಸೋ ರಾಮನುಕ್ತಿ
ಅದೇ ಅಪಾರ ತಾಳ್ಮೆ ವಸುಧೆ
ಸಹನೆಯಿಂದ ಸಹಿಸೋ ಶ್ರದ್ಧೆ ||

ಬಿಡನಾರನು ದೂಷಿಸೆ ಪ್ರಭುವ
ಹವಣಿಸಿದವರ ಹಣಿಸೊ ಭಾವ
ಮೀರಿಸಿ ಇಳೆ ಪೊರೆದಿಹಳು
ಮನ್ನಿಸಿ ಮಕ್ಕಳ ಅಟ್ಟಹಾಸಗಳು ||

ಮಾತೆಗಿತ್ತ ಮಾತಿಗೆ ಮಾರುತಿ
ಪ್ರಭುವೆದುರೆ ಕದನದ ಕೀರ್ತಿ
ಅಂಥ ಮಾತೆಯರ ಮಾತೆ ಭೂಮಿ
ಅವಳನಳಿಸೊ ಮಾನವ ಕಾಮಿ ||

ಅಖಂಡ ಶ್ರದ್ಧೆ ಭಕ್ತಿ ಭಾವ ಗಡವ
ಹೃದಯದೊಳಗೆ ಬಚ್ಚಿಟ್ಟ ರೂಪವ
ಬಗೆದು ತೋರದಿದ್ದರೂ ಸರಿ ಮರುಳೆ
ಭುವಿಯುಳಿಸೆ ಕರುಣೆ ತೋರುವಳೆ ||

– ನಾಗೇಶ ಮೈಸೂರು

(Picture source: http://www.indianastrology.com/festival/2016/hanuman-jayanti-20)

00605. ಇಂದಾದರು ಬಿಡಿ ಜಗವ…!


00605. ಇಂದಾದರು ಬಿಡಿ ಜಗವ…!
_______________________

(UNESCO identified March 21st as world poetry day – https://en.m.wikipedia.org/wiki/World_Poetry_Day. This poem is to celebrate the same – as a response to the call in 3K)


ಕವಿ, ಕವಿಯಿತ್ರಿಗಳಿಗೆಲ್ಲ
ಒಕ್ಕೊರಲ ಮನವಿ
ಬೇಡ ಬಿಟ್ಟುಬಿಡಿ ಇದೊಂದು ದಿನ..
ಕಾಡಬೇಡಿ ಬರೆದು ಮತ್ತವೇ ಕವನ !

ವಿಶ್ವ ಕವನ ದಿನವೆಂದು
ಜಾಗತಿಕ ಸಾರ್ವತ್ರಿಕ ರಜೆ
ಕೊಟ್ಟಿದೆ ಜಗದೆಲ್ಲ ಕವಿ ಜಾಣರಿಗೆ
ಕೊರೆಯದಿರಿದೊಂದು ದಿನ ತಪ್ಪಲಿ ಬೇಗೆ !

ನೋಡಿರಿ ಸುತ್ತಮುತ್ತ
ಇಂದೊಂದು ದಿನವಾದರೂ
ಜನಜಂಗುಳಿ ಜಾತ್ರೆ ಅಳುನಗು ಸುಖದುಃಖ
ಮಾಡಿರಿಂದಾದರು ಅಡಿಗೆಮನೆಯತ್ತ ಒಮ್ಮೆ ಮುಖ !

ಹೊರಟುಬಿಡಿ ಕೈಲ್ಹಿಡಿದು
ಚೀಲ ಮಾರುಕಟ್ಟೆ ದಿನಸಿಯಂಗಡಿ
ಕೊಳ್ಳಿ ಮರೆವಿಲ್ಲದೆ ಚೀಟಿ ಹಂಗಿಲ್ಲದೆ ಕೂಡ..
ಮನೆಯಾಕೆ ಬೆರಗಾಗಿ ನಕ್ಕು ಮೂಗಿಗೆ ಬೆರಳಿಡ !

ನಾನಂತು ಬರೆಯೆ ಕವನ
ಇಂದು ಬರೆದುದೂ ಬರಿ ಕಥನ !
ಓದದಿರಿ ಓದಿದರೂ ಆದಂತೆ ದೇವರ ಪೂಜೆ
ಮತ್ತೇನನು ಓದದಿರಿ ಇಂದು ಹಾಕಿಬಿಡಿ ಪೂರ್ತಿ ರಜೆ !

– ನಾಗೇಶ ಮೈಸೂರು

https://www.facebook.com/l.php?u=https%3A%2F%2Fen.wikipedia.org%2Fwiki%2FWorld_Poetry_Day&h=pAQFXksc7AQF3atJrH7ZlKfAjx_EVQq4XG0rnr6Vk9DjqtA&enc=AZP27LWM21VBtC3vMXzgX4c_03ZHWWaNlYCDtR795LEJ0M92eOwFw5BE-8ILEHDK2QBRPFI6dS8M4SRQKCCmlqOXGvA3v_s80mDo_f4_r5ntjwk8vrmbwr4ZXGp7-ZH1J4HPZGoJKQZRzaK0A1KPJieob8B3cysSX523hgvtbJKGjZCavT13Tz2bX01zdh4Dv4o&s=1

00558. ವಿಶ್ವ ವನಿತೆಗೊಂದು ಪದ…


00558. ವಿಶ್ವ ವನಿತೆಗೊಂದು ಪದ…
_________________________

  
ನಿನಗನಿಸಿದ್ದೆಲ್ಲಾ ಮಾಡು
ಯಾರಿಟ್ಟವರಿಲ್ಲಿ ಕಟ್ಟುಪಾಡು ?
ಯಾರು ಹೇಳಬೇಕೇಕೆ ಹಿಡಿವ ಜಾಡು
ಹೆಣ್ಣೇ ನೀನಿಲ್ಲದೆ ಯಾವುದಿದೆ ನಾಡು ?

ನೀತಿ ನಿಯಮ ಸಂಹಿತೆ.
ಇಟ್ಟವರಿಗೇನು ಬದುಕಿ ಗೊತ್ತೆ ?
ಹೆಣ್ಣೊಳಗಿನಾಳ ಭ್ರೂಣದಾ ಪಾತಾಳ
ಬಂದರಲ್ಲೆ ಹುಟ್ಟಿ – ಶಾಸ್ತ್ರ ಬರೆದೇನು ಬಹಳ !

ಕಿತ್ತೊಗೆಯಬೇಡ ಸಂಕೋಲೆ
ಬಂಧ ಬಿಗಿದದ್ದು ನಂಟಿನ ಮಾಲೆ
ಬೇಡಿಯಾಗಿಸಿದರೆ ಹೊಡಿ ಗೋಲಿ ನಡೆದು
ಮುಟ್ಟಲೆನಿತಿದೆ ಗಮ್ಯ ದಾಟಿದರೆ ಸರಹದ್ದು !

ಪಾತ್ರಗಳವು ಸರಿ ನೂರಾರು
ಸರಿತಪ್ಪ ಲೆಕ್ಕ ಬಾಳಿಗಿಟ್ಟವರಾರು ?
ನಿನಗೊಂದು ಸತ್ಯ ತಿಳಿದಿರಲಿ ಶ್ರೀವನಿತೆ
ನೀ ಹಿಡಿದ ಜ್ಯೋತಿಯಲಿ ಹಚ್ಚುವುದೇ ಹಣತೆ..

ಕಿರುಚಿ ಕೂಗಾಟ ವಾದಬೇಧ ಮಾತು
ಯಾಕೆ ಬೇಕು ಎಲ್ಲರ ದೋಸೆಯು ತೂತು
ಹಮ್ಮುಬಿಮ್ಮುಗಳ ಬಿಟ್ಟು ನಡೆಯೋಣ ಒಟ್ಟು
ದಾರಿ ತಪ್ಪದಂತೆ ಪರಸ್ಪರ ಹಿಡಿದು ಸಡಿಲ ಜುಟ್ಟು..

– ನಾಗೇಶ ಮೈಸೂರು
೦೬. ಮಾರ್ಚ್. ೨೦೧೬

(Picture from kannada wikipedia : https://kn.m.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:Frauentag_1914_Heraus_mit_dem_Frauenwahlrecht.jpg)

00522. ಎಳೆ ಪ್ರಾಯದ ದಿನಗಳು…. (ಭಾಗ 02)


00522. ಎಳೆ ಪ್ರಾಯದ ದಿನಗಳು…. (ಭಾಗ 02)
—————————————————-

  
(Picture from – https://www.ric.edu/educationalstudies/images/youthDev.jpg)

ಕಾಲೇಜಿನ ಕನ್ಯೆಯರ್ಹಿಂದೆ
ಓಡಾಟ ತೆರೆಸಿದ ವಿಶ್ವ ಮುಗುದೆ
ಗೆಳೆಯ ಗೆಳತಿಯಾಗುತ ಮುಂದೆ
ಬೆಳೆಸಿದ ಫ್ರೌಡಿಮೆ ಕಾಡದೆ! ||

ಕಾಡಿ ಕೆಲಸದ ಹೆಣ್ಣೈಕಳ
ಮನೆ ಮುಸುರೆ-ಗಿಸುರೆ ತಿಕ್ಕುವವಳ
ಹಳ್ಳಿ ಭಾಷೆಗಣಕಿಸಿ ಕೋಪಕೆ ತಾಳ
ಮಿತಿ ಮಿರದಂತವಹೇಳ! ||

ಟೈಪಿಂಗು ಇನ್ಸ್ಟಿಟ್ಯೂಟಿನ
ಲಲನೆಯರನು ಕಲಿಯೆ ಹೋದನ
ಬೆರಳಚ್ಚುವಿಕೆಗೆ ಕಲಿತನ ಮರೆತನ
ಪ್ರೇಮಪತ್ರವನ್ನೆ ಬರೆದನ! ||

ಟ್ಯೂಶನ್ನಿನ ಫ್ಯಾಷನ್ನಿನಲಿಳಿ
ಪಾಠಕೆ ಬರಹ ತಾರುಣ್ಯ ಹಾವಳಿ
ಬಾವಲಿಯ ತರುಣಿ ದಂಡೆ ಬವಳಿ
ಭೂತಭವಿತ ಮರೆಸವಕಳಿ! ||

ಮಾಗಿದನುಭವ ವಯಸೆಂದೆ
ಸೇರ್ಯಾವುದೋ ಕೆಲಸದ ಮಂದೆ
ಅಲ್ಸಿಕ್ಕುವ ಮಾಗಿದ ಹೆಣ್ಣ್ಗಳ ಹಿಂದೆ
ಪಕ್ವವಾಗಿಸಿ ಮಾಗುವ ಹಂದೆ! ||

———————————————————————
ನಾಗೇಶ ಮೈಸೂರು
———————————————————————

00521. ಎಳೆ ಪ್ರಾಯದ ದಿನಗಳು…. (ಭಾಗ – 01)


00521. ಎಳೆ ಪ್ರಾಯದ ದಿನಗಳು…. (ಭಾಗ – 01)
_______________________________

  
(Picture source : Kannadamoviesinfo.wordpress.com)

ಹುಡುಗೈಕಳ ಕಾಡಿಸುತ
ರೊಚ್ಚಿಗೆಬ್ಬಿಸಿದ್ದೆ ಹುಸಿ ಛೇಡಿಸುತ
ಹುಡುಗಿಯರನೆ ಹಿಂಬಾಲಿಸುತ
ಕಾಲ ಕಳೆದ ಎಳೆ ಪ್ರಾಯ! ||

ಖಾಲಿ ಕೂತ ಗಳಿಗೆಗಳು
ಕಾಲೇಜು ಮನೆ ಚಹದಂಗಡಿಗಳು
ಕಾಲಯಾಪನೆ ಬಿಡುವ್ಹಗಲುಗಳು
ಅಕ್ಕಪಕ್ಕದ ಹಸುಗೂಸಲು! ||

ಸ್ಕೂಲ್ಹೋಗುವ ಮಕ್ಕಳಿಗೆ
ಚಾಕೊಲೇಟು ಕೊಡಿಸಿ ಮಾತಾಗೆ
ಕಾಡಿಸಿ ಛೇಡಿಸಿ ಅಳಿಸಿದ ಹಾಗೆ
ತಡಕಾಡಿ ಕಾಟ ಕೊಟ್ಟ ಬಗೆ! ||

ಚಹದಂಗಡಿ ಮಾಣಿ ಕಣಿ
ತಂದಿತ್ತ ಚಾ ಹಿಡಿದು ರೇಗಿಸಲಣಿ
ಶಾಲೆಗ್ಹೋಗದ ಬಾಲನ ಪುರವಣಿ
ಕಾಲೆಳೆದು ಹಾಸ್ಯದೇಣಿ! ||

ತುಂಡು ಸಮವಸ್ತ್ರ ತೊಟ್ಟು
ಗೆಳತಿಗೆ ಪಿಸುಗುಟ್ಟು ಗುಸುಗುಟ್ಟು
ಹೈಸ್ಕೂಲ್ಬೆಡಗಿಯದೇನಿದೆ ಸೊಟ್ಟು ?
ಹುಡುಕಲೆ ಹಿಂದೆ ಹೊರಟು! ||

———————————————————————
ನಾಗೇಶ ಮೈಸೂರು
———————————————————————