00810. ಮಾತಿಲ್ಲ ಕತೆಯಿಲ್ಲ ಬರಿ ದೂರ..


00810. ಮಾತಿಲ್ಲ ಕತೆಯಿಲ್ಲ ಬರಿ ದೂರ..
_____________________________


ಮಾತಿಲ್ಲ ಕತೆಯಿಲ್ಲ ಬರಿ ಮೌನದ ಸೊಲ್ಲು
ಮೆಲ್ಲ ಮೆಲ್ಲನೆ ಯಾಕೋ ದೂರವಾದ ಗಜಲ್ಲು
ನೆನಪೊಂದೇ ಸಮ ಯಾತನೆ ಮನದೆ ಕಾಡ್ಗಿಚ್ಚು
ಹೊತ್ತಿಸಿ ಹೋದಳೇಕೋ ನಿಟ್ಟುಸಿರ ಕಲಗಚ್ಚಿಟ್ಟು..

ನುಚ್ಚುನೂರಾಗಿ ಮನಸೆ ಹುಡುಕುತ್ತ ಸೊಗಸೆ
ತಡವಿ ತಡಕಿ ಬಚ್ಚಿಟ್ಟಿದ್ದೇನಾದರೂ ಕನವರಿಸೆ
ಹುಡುಕಿಯೂ ಸಿಗದಲ್ಲ ಬರಿ ನಿನ್ನ ಮಾತಷ್ಟೇ
ಬೊಗಸೆ ಕಣ್ಣಿನ ಮಿಂಚು ಮಿಕ್ಕಿದ್ದೆಲ್ಲ ಕನಸೇ… 

ಮಾತು ಮಾತಾಗಿ ಮಾತಾಡಿದ್ದೆಲ್ಲ ಸಮಯ
ಅರ್ಥವೊ ವ್ಯರ್ಥವೊ ಎಲ್ಲ ತಾನಾಗಿ ವಿನಿಮಯ
ಆರ್ತತೆಯಾಗಿತ್ತೆ ದನಿ ಯಾಚನೆಯ ಬೇಲಿ
ದಾಟಿ ಬೇಡಿದ್ದರು ಲೆಕ್ಕಿಸದ ನಿನ ಮನ ಖೋಲಿ..

ಇರದಿರಲೇನು ಸಂವಹನ ? ನೆನಪುಗಳ ಗಡಿಗೆ
ನೋಡಿಸುತ್ತದೆ ಮತ್ತೆ ಅವುಗಳನೆ ಅಡಿಗಡಿಗೆ
ಬಿಡದೊಂದು ಸುಳಿವನ್ನು ಕದ್ದು ಇಣುಕಿ ಹೆಜ್ಜೆಯ
ಗುರುತ ಕಂಡೊ ಕಾಣದೆಯೊ ಚಡಪಡಿಸೊ ಹೃದಯ..

ಮರೆತಿಲ್ಲ ಮರೆತಂತೆ ನಟಿಸುವ ನಟರಲ್ಲವೆ ನಾವು ?
ನಟಿಸುವ ಭರದಲು ಬಿಡದೆ ಕಾಡುವ ಅದೇ ಹಳೆ ನೋವು
ಅನುಕ್ಷಣದ ಚಿತ್ರಹಿಂಸೆ ಅಣುವಣುವಾಗಿ ಕೊಲ್ಲುತ್ತಿಲ್ಲವೀಗ
ಕಣಕಣದಲ್ಲೆಲ್ಲೆಡೆ ಬೆರೆತು ಬದುಕುತಿದೆ ಬಿಟ್ಟುಕೊಡದೆ ಜಾಗ..


– ನಾಗೇಶ ಮೈಸೂರು

(Picture source: http://m.wikihow.com/Get-Over-a-Break-Up)

00768. ದೂರದಿರು, ಮಾತು ಮರೆತವಳ


00768. ದೂರದಿರು, ಮಾತು ಮರೆತವಳ
___________________________

ಕೊಟ್ಟ ಮಾತು ಮರೆತವಳ
ದೂರಲೆಂತು ಮುನಿಯುತ ?
ಪ್ರೇಮಿಸಿ ಬಿರುಸಲಿ ಕೊಟ್ಟ ಮಾತು
ಮತ್ತಾವುದೊ ಪ್ರೀತಿ ಕಟ್ಟಿ ಹಾಕಿತ್ತು..

ಕೊಡುವೆನೆಂದಳು ಜೀವವನೆ..
ಕಟ್ಟಿದ ಕನಸು ಕಣ್ಣ ತೇವವನೆ,
ಮರಳಿಸುತಿದೆ ನೆನೆದಡಿಗಡಿಗೆ
ಎಲ್ಲಿ ಹೋದಳು ಬರದೆ ಕಡೆಗೆ ?

ಕಿತ್ತು ಬರುವೆನೆಂದಳು ಬಂಧ
ಕಟ್ಟೆ ಹೊಸತು ಜೀವ ಸಂಬಂಧ
ಯಾಕೋ ಪಾಶ ಕೊರಳ ಸುತ್ತಿತ್ತ
ಅಸಹಾಯಕತೆಗೆ ಕಣ್ಣೀರೆ ಬತ್ತಿತ್ತ..

ಸ್ವಾರ್ಥ ಗೆದ್ದ ತ್ಯಾಗದ ರಣಹದ್ದು
ಕುಕ್ಕಿತ್ತವಳ ಹೃದಯದೊಳ ಸದ್ದು
ಬಿಕ್ಕುವ ಮೌನ ಬದುಕಾದವಳನು
ದೂರಲೆಂತು ತಾನೆ ನೋವಾದವಳನ್ನು ?

ಅದೆ ಒಂಟಿ ಮರದ ಕೆಳಗೆ ಕೂತು
ಜಂಟಿ ಗಳಿಗೆಯ ನೆನಪಲ್ಲಿ ಹೂತು
ಮುನಿಯುತಿರುವೆ, ಶಪಿಸಿರುವೆನು
ನಿನಗಲ್ಲ ವಿಧಿಗೆ, ಬೇರಾಗಿಸಿದವನು..!

– ನಾಗೇಶ ಮೈಸೂರು
(Picture source : http://www.youtube.com)

00434. ಸರಿ ದೂರ ಸರಿ..


00434. ಸರಿ ದೂರ ಸರಿ..
__________________________

ಸರಿ ದೂರ ಸರಿ ದೂರ
ಯಾವುದು ಸರಿ ದೂರ ?
ದೂರ ಸರಿ ದೂರ ಸರಿ
ಯಾವುದು ಇದರಲ್ಲಿ ಸರಿ? ||

ಸರಿದೂರದಾಚೆಗುಂಟೆ ಬೆಲೆ ?
ಸರಿದು ಹೋಗೆ, ಸಿಕ್ಕೀತೆ ನೆಲೆ ?
ಊರಿಂದೂರಿಗಲೆದಾದೀತೆ ಶಾಸ್ತಿ ?
ಸರಿ-ದೂರದೂರಲ್ಲಿ ಸಿಕ್ಕೀತೆ ಶಾಂತಿ ? ||

ಸರಿ ದೂರ ಬೇಕು ನಂಟಿಗೆಂದೆ
ಸರಿದು ನಿಂತಾ ದೂರ ಸಾಲದೆಂದೆ
ದೂರಿದರು ಸರಿ ದೂರು ಕಾಣದಲ್ಲಿ
ದೂರಾಗೊ ಹವಣಿಕೆ ಮೌನದಲ್ಲಿ ||

ಸರಿ ಸರಿ ಪಕ್ಕಕ್ಕೆ ಸರಿ ಹೇಳಲಿಲ್ಲ
ಸರಿದು ಪಕ್ಕದೆ ನಿಂತೂ ಕಾಣಲಿಲ್ಲ
ಸರಿಯಿತ್ತಲ್ಲಾ ಎಲ್ಲಾ, ಯಾಕೀಗ ಇಲ್ಲ ?
ಸರಿದು ಹೋಗುವ ಹಾಗೆ ಮಾಡಿತಲ್ಲ ||

ಸರಿಬಿಡು ಸರಿವೆ ಸಾರಿ ಹೇಳದೆಲೆ
ಸಾರಿದರು ಜಗಕೆಲ್ಲಿ ಸರಿದ ಗೊಡವೆ ?
ಸರಿ ತಪ್ಪು ಸರಿದಾಗ ಬರಿಯ ಲೆಕ್ಕ
ಸರಿಯಾದ ಸತ್ಯವದು ಖಾಲಿ ಪಕ್ಕ ||

00429. ಹಾರುತ ದೂರಾದೂರ…..!


00429. ಹಾರುತ ದೂರಾದೂರ…..!

https://prabuddategekenidde.wordpress.com/2015/12/06/00012-%e0%b2%b9%e0%b2%be%e0%b2%b0%e0%b3%81%e0%b2%a4-%e0%b2%a6%e0%b3%82%e0%b2%b0%e0%b2%be%e0%b2%a6%e0%b3%82%e0%b2%b0/

(https://prabuddategekenidde.wordpress.com/)

ಹಿನ್ನಲೆ
_____________________________
ನನ್ನ ಗದ್ಯಮುಖಿ ಬರಹಗಳಿಗೊಂದು ಬೇರ್ಪಡಿಸಿದ ಬ್ಲಾಗು..!

ಈಚೆಗೆ ಗಮನಿಸಿದಂತೆ ನನ್ನ ಬ್ಲಾಗಿನಲ್ಲಿ 400ಕ್ಕು ಮೀರಿ ಬರಹಗಳು ಸೇರಿಕೊಂಡುಬಿಟ್ಟಿವೆ – ಸಣ್ಣಕಥೆ, ಪ್ರಬಂಧ, ಕಾವ್ಯ ಬರಹ, ಲೇಕನ, ಕವನ, ಹರಟೆ, ಹಾಸ್ಯ ಇತ್ಯಾದಿ. ಎಲ್ಲವು ಕಲಸು ಮೇಲೋಗರವಾಗಿರುವುದು ಒಂದಾದರೆ ನನ್ನ ಸಮಯಾಭಾವ ಮತ್ತು ಸೋಮಾರಿತನದಿಂದ ಅದಕ್ಕೊಂದು ವ್ಯವಸ್ಥಿತ ರೂಪ ನೀಡಲು ಸಾಧ್ಯವಾಗಿಲ್ಲವೆನ್ನುವುದು ನಿಜವೆ. ಇದರ ಜತೆಗೆ ಮೊದಲಿಗೆ ಸುಮಾರು ಬರಹಗಳು ಪೋಸ್ಟ್ ಆಗಿ ಹಾಕದೆ ಪೇಜಿನಲ್ಲಿ ಹಾಕಿದ ಕಾರಣ ಅವು ಓದುಗರಿಗೆ ಇ ಮೇಲ್ ಮೂಲಕ ಪ್ರಕಟವಾಗಲೆ ಇಲ್ಲ ಮತ್ತು ಸರ್ಚ್ ಎಂಜಿನ್ನಿನಲ್ಲು ಸುಲಭದಲ್ಲಿ ಸಿಗುವುದಿಲ್ಲ. ಇದನ್ನೆಲ್ಲ ಪರಿಗಣಿಸಿ ಕನಿಷ್ಠ ಗದ್ಯ ಇರುವ ಬರಹಗಳನ್ನೆಲ್ಲ ಒಗ್ಗೂಡಿಸಿ ಒಂದು ಬ್ಲಾಗಿನಲ್ಲಿ ಹಾಕಿ, ಸರಿಯಾಗಿ ವಿಂಗಡಿಸಿದರೆ ಸೂಕ್ತ ಅನಿಸಿತು – ಪೋಸ್ಟ್ ರೂಪದಲ್ಲಿ. ನಂತರ ಕವನಗಳನ್ನು ಮತ್ತೊಂದು ಬ್ಲಾಗಿಗೆ ಸೇರಿಸಬಹುದು ಮತ್ತು ಪರಿಭ್ರಮಣದಂತಹ ಕಾದಂಬರಿಯನ್ನೆ ಬೇರೆ ಬ್ಲಾಗಿನಲ್ಲಿ ಹಾಕಿಬಿಡಬಹುದು ಮತ್ತೇನನ್ನು ಮಿಶ್ರ ಮಾಡದೆ (ಮಂಕುತಿಮ್ಮನ ಕಗ್ಗದ ಟಿಪ್ಪಣಿಯ ಹಾಗೆ). ಅದೆಲ್ಲಕ್ಕು ಸಾಮಾನ್ಯ ಕೊಂಡಿಯಾಗಿ ಈ ಮನದಿಂಗಿತಗಳ ಸ್ವಗತದ ಬ್ಲಾಗ್ ಸಂಪರ್ಕ ಸೇತುವೆಯಾಗಿ ಎಲ್ಲವನ್ನು ಸಮಷ್ಟಿಯಲ್ಲಿ ಹಿಡಿದಿಡುವ ಕೆಲಸ ನಿಭಾಯಿಸಬಹುದು.. ಈ ಆಲೋಚನೆ ಬಂದದ್ದೆ ಅದನ್ನು ಕಾರ್ಯ ರೂಪಕ್ಕೆ ತರಲು ನಿರ್ಧರಿಸಿ ತಕ್ಷಣದಿಂದಲೆ ಆರಂಭಿಸಿಬಿಟ್ಟೆ, ಒಂದೊಂದಾಗಿ ಲೇಖನಗಳನ್ನು, ಬರಹಗಳನ್ನು ವರ್ಗಾಯಿಸಲು. ಪ್ರತಿ ಬಾರಿ ವರ್ಗಾಯಿಸಿ ಪೋಸ್ಟ್ ಮಾಡಿದಾಗಲೂ ಇಲ್ಲಿ ಅಪ್ಡೇಟ್ ಮಾಡಿ ಬರಹದ ಲಿಂಕು ಕೊಡುತ್ತೇನೆ ಒಂದೊಂದಾಗಿ ಎಲ್ಲಾ ವರ್ಗಾವಣೆ ಆಗುವ ತನಕ. ನನ್ನ ಹಳೆ ಬರಹ ನೋಡಿರದಿದ್ದರೆ ಅದನ್ನು ನೋಡುವ ಅವಕಾಶದ ಈ ಮುಖೇನ 😀

ಅಂದ ಹಾಗೆ ಇವೆಲ್ಲಾ ಬಹುತೇಕ ಒಂದಲ್ಲಾ ಒಂದು ಪ್ರಕಟವಾಗಿರುವಂತದ್ದೆ – ಹೆಚ್ಚಿನವು ಸಂಪದದಲ್ಲಿ ಪ್ರಕಟಿಸಿಕೊಂಡಂತವು. ಪೋಸ್ಟ್ ಮಾಡಿದ ಹಾಗೆ ಬರಹದ ಹೆಸರನ್ನ ಈ ಕೆಳಗೆ ಸೇರಿಸುತ್ತಾ ಹೋಗುತ್ತೇನೆ 😊
(https://prabuddategekenidde.wordpress.com/)

0012. ಹಾರುತ ದೂರಾದೂರ…..!
0011. ಹೆಚ್ಚು ಬೆಲೆಯೆಂದರೆ ಶ್ರೇಷ್ಟ ಗುಣಮಟ್ಟವಿರಬೇಕೆಂದೇನಿಲ್ಲ, ಗೊತ್ತಾ!
0010. ಲಘು ಪ್ರಬಂಧ: ನನ್ನ ಪ್ರಧಾನ ಸಂಪಾದಕ ಹುದ್ದೆ…!
0009. ಕವನ ಸಂಕಲನ: “ಅಂತರ ಹಾಗು ಇತರ ಕವನಗಳು” ಕವಿ: ವಸಂತ ಕುಲಕರ್ಣಿ
0008. ತೊಡಕುಗಳನು ಬಿಡಿಸಲು “ತೊಡಕಿನ ಸಿದ್ದಾಂತ – 01″(ತೊಡಕು ಸಿದ್ದಾಂತ)
0007. ಆ “ಸ್ವಾಭಿಮಾನದ ನಲ್ಲೆ” ಯರ ನೆನೆನೆನೆದು…..(03)
0006. ಆ “ಸ್ವಾಭಿಮಾನದ ನಲ್ಲೆ” ಯರ ನೆನೆನೆನೆದು…..(02)
0005. ಆ “ಸ್ವಾಭಿಮಾನದ ನಲ್ಲೆ” ಯರ ನೆನೆನೆನೆದು…..(01)
0004.ಮೆಲ್ಲುಸಿರೆ ಸವಿಗಾನ….!
0003. ಗಮನೇಶ್ವರಿಯ ಗಮಕ, ವಯಸ್ಸಿನಾ ಮಯಕ…!
0002. ನೀನೋದಿದ ವಿದ್ಯೆಗೆಲ್ಲಿಡುವೆ ನೈವೇದ್ಯ?
0001. ಏನಾಗಿದೀದಿನಗಳಿಗೆ