01719. ಚೋರಾಗ್ರೇಸರ ಕವಿ! (ವೃತ್ತಿ ಧರ್ಮ)


01719. ಚೋರಾಗ್ರೇಸರ ಕವಿ! (ವೃತ್ತಿ ಧರ್ಮ)

_______________________________________

ಕವಿಯ ಮೀರಿಸಿದ ಚೋರರಿನ್ನಾರಿಹರು?

ತನ್ನ ಮನಸನೂ ಬಿಡದ ಚೋರಾಗ್ರೇಸರ

ಅಕ್ಕನ ಸರವನು ಬಿಡದಕ್ಕಸಾಲಿ ಹಾಗೆ

ಆಳದಲೊಕ್ಕು ಪದ ಕದಿವ ವೃತ್ತಿಧರ್ಮ ! ||

ನೋಡಲಾಗದ ತನ್ನಾಳವ ಬಿಡದೆ ಸೋಸಿ

ತನ್ನದೇ ಸಿದ್ದಾಂತ ತತ್ವಗಳ ಕಸಿಯೆರಚಿ

ತೆಗಳಿಯೊ ಹೊಗಳಿಯೊ ರಗಳೆ ರಂಪಾಟ

ಪದದರಿವೆ ಹೊದಿಸಿ ಕೈತೊಳೆದುಬಿಡುವ ! ||

ತನ್ನದೆ ಮಾಲು ಬೇಸತ್ತಾಗ ಪರದಾಟ ಕಾಲ

ಚಡಪಡಿಸುತಾ ಹುಡುಕಿ ಸ್ಪೂರ್ತಿಗೆ ಮೂಲ

ಇಣುಕಲ್ಲಿಲ್ಲಿ ಅವರಿವರ ಅಂತರಾಳದ ಬಣ್ಣ

ಅವರಿಗೂ ಕಾಣದ್ದ ಕದ್ದು ಕವಿತೆಯಾಗಿಸಿಬಿಟ್ಟ ! ||

ಪ್ರೇಮಿ ಮನಸ ಕದಿವ ತಾತ್ಕಲಿಕ ಕವಿ ನೂರು

ಕವಿಗಳಂತೆ ಭಾವದ ಮೇನೆ ಕದಿವಾ ಜರೂರು

ಯಾರದಿಲ್ಲ ತಕರಾರು ಕದ್ದದ್ದನೆ ಕದಿಯೆ ಮತ್ತೆ

ಮತ್ತೆ ಬರೆವದೆ ಸರಕು ಹಳೆಮದ್ಯ ಹೊಸಶೀಷೆ ! ||

ಕವಿ ಸಂಭಾವಿತ ಕಳ್ಳ ಕದ್ದು ನಗಿಸೆ ಒಮ್ಮೊಮ್ಮೆ

ಕಣ್ಣೀರ ಹಾಕಿಸುವ ಗೋಳ ಸರದಾರನ ಜಾಣ್ಮೆ

ಕಲಿವ ಕಲಿಸುವ ಸಭ್ಯ, ಹಗರಣಕೆಳೆವ ಅವಜ್ಞ

ಕದ್ದಾದ ಬುದ್ಧಿಗೆ ಭಾವಿಸದಿರಲಿ ಕವಿ ಸರ್ವಜ್ಞ ||

– ನಾಗೇಶ ಮೈಸೂರು

೧೦.೦೫.೨೦೧೮

(Picture source: internet / social media)

01353. ಮೌನ ಧರ್ಮ..


01353. ಮೌನ ಧರ್ಮ..
___________________

(ನಂದಾ ದೀಪಾ ಅವರ ಪೋಸ್ಟಿನಲ್ಲೊಂದು ಪ್ರಶ್ನೆಯಿತ್ತು ‘ಮೌನವು ವಂಚನೆಯಾದೀತೆ ?’ ಅದನ್ನೋದಿದಾಗ ಅನಿಸಿದ ಬಗೆ ಪದವಾದದ್ದು ಹೀಗೆ)

ಮೌನ ಧರ್ಮ..
_______________________


ಭೀಷ್ಮ ದ್ರೋಣಾದಿ ಸಜ್ಜನ ಗಣ
ದ್ರೌಪದಿ ವಸ್ತ್ರಾಪಹರಣದೆ ಘನ
ತಲೆ ತಗ್ಗಿಸಿ ಕುಳಿತಾ ಮೌನ
ವಂಚನೆಯಾದೀತೆ?

ಕುಂತಿಯೆಂಬಾ ವನಿತೆ
ಕರ್ಣನ ಹೆತ್ತಾ ಒಗಟೆ
ತುಟಿ ಕಚ್ಚಿ ಹಿಡಿದಾ ಮೌನ
ವಂಚನೆಯಾದೀತೆ?

ಕುಂತಿಯೆಂಬಾ ಮಾತೆ
ಯುದ್ಧಕೆ ಮೊದಲು ಗುಟ್ಟೆ
ಮುರಿದ ಮೌನ, ಪಡೆದ ವಚನ
ವಂಚನೆಯಾದೀತೆ ?

ಯಾಚಿಸಿ ಪೀಡಿಸೊ ಪ್ರೇಮದಾಟ
ಸರಿ-ತಪ್ಪು ಎನ್ನಲಾಗದ ಧರ್ಮ ಸಂಕಟ
ಹೌದು ಇಲ್ಲಗಳ ನಡುವೆ ಮೌನವಾಗಿರೆ ಮೌನ
ವಂಚನೆಯಾದೀತೆ ?

ಸಮಯ ಸಂಧರ್ಭ ಅನಿವಾರ್ಯ
ಕಟ್ಟು ಹಾಕಿ ಕಟ್ಟಿಡುವ ಬಗೆ ಅನಾರ್ಯ
ವಂಚನೆಯೊ ಉಪಕಾರವೊ ಮೊತ್ತ
ಭವಿತದ ಬುತ್ತಿಯಲಷ್ಟೆ ವಿದಿತ !

– ನಾಗೇಶ ಮೈಸೂರು
(Nagesha Mn)

(Picture / Question Courtesy / thanks to : ನಂದಾ ದೀಪಾ)