01660. ಘಜಲ್ (ನಮ್ಮಿಬ್ಬರ ನಡುವಿನ ಗುಟ್ಟು )


01660. ಘಜಲ್

____________________________

(ನಮ್ಮಿಬ್ಬರ ನಡುವಿನ ಗುಟ್ಟು )

ಎದೆಯ ಗೋದಾಮಿನಲಿ ಬಚ್ಚಿಟ್ಟೆ

ನಮ್ಮಿಬ್ಬರ ನಡುವಿನ ಗುಟ್ಟು

ನನ್ನ ಕನಸಿನಲಿ ಮಾತ್ರ ಬಿಚ್ಚಿಟ್ಟೆ

ನಮ್ಮಿಬ್ಬರ ನಡುವಿನ ಗುಟ್ಟು || ೦೧ ||

ಬೆದರದಿರೆ ಹೇಳೆನು ಯಾರಿಗು

ನನ್ನ ನಿನ್ನ ನಡುವಿನ ಪ್ರೇಮ ಗುಟ್ಟೆ

ನಮ್ಮಿಬ್ಬರ ನಡುವಿನ ಗುಟ್ಟು || ೦೨ ||

ಬಚ್ಚಿಡಲೆಂತೆ ತುಂಬಿ ತುಳುಕಿ ಚೀಲ

ಕಟ್ಟಿದರು ಬಿಚ್ಚಿ ಹಾರಿ ಮನ ಚಿಟ್ಟೆ

ನಮ್ಮಿಬ್ಬರ ನಡುವಿನ ಗುಟ್ಟು || ೦೩ ||

ಬಿಡು ಚಿಂತೆ ಹಾರಿದರು ಗಾಳಿಪಟವ

ಬಾನ ಖಾಲಿ ಬಯಲು ಇಲ್ಲ ತಂಟೆ

ನಮ್ಮಿಬ್ಬರ ನಡುವಿನ ಗುಟ್ಟು || ೦೪ ||

ಬಿಡು ಭೀತಿ ಹುಚ್ಚು ಮನ ರಟ್ಟು ಮಾಡೆ

ಹಾಡಾಗಿ ಗುನುಗಿ ಗುಟ್ಟ ಮುಚ್ಚಿಟ್ಟೆ

ನಮ್ಮಿಬ್ಬರ ನಡುವಿನ ಗುಟ್ಟು || ೦೫ ||

ಗುಬ್ಬಿಗದು ಮುತ್ತೆ ಕಾವಲೆ ಹೃದಯ

ಜತನ ಕಾಪಿಟ್ಟು ತೋರುವ ಮುಚ್ಚಟೆ

ನಮ್ಮಿಬ್ಬರ ನಡುವಿನ ಗುಟ್ಟು || ೦೬ ||

– ನಾಗೇಶ ಮೈಸೂರು

೧೯.೦೩.೨೦೧೮

(Picture source : Internet / social media)

01578. ನಮ್ಮ ನಿಮ್ಮ ನಡುವಿನ ಕಥನ


01578. ನಮ್ಮ ನಿಮ್ಮ ನಡುವಿನ ಕಥನ

_____________________________________

ಎಲೆ ಮರೆಯಲ್ಲೊಂದು ಕಾಯಿ

ಕೈ ಬೆರಳನದ್ದೆ ಭಾವನೆ ಶಾಯಿ

ಬರೆದವೆಷ್ಟೊ ಮನಗಳ ತಪನ

ನಮ್ಮಾ ನಿಮ್ಮ ನಡುವಿನ ಕಥನ ||

ಬರೆವೆನೆಂಬ ತುಡಿತದ ಬಾಲ

ಬರವಣಿಗೆ ಭಟ್ಟಿ ಇಳಿಸೊ ಕಾಲ

ಮೂಡಿಸದೆ ಮೂಡಣದ ಸಾಲು

ಪದವಾಗುತ ಕುಣಿಸುವ ತೆವಲು ||

ಸಂಕೋಚ ಬಿಗಿ ಕೋಶದ ಭಿತ್ತಿ

ಗೊತ್ತಾಗದಂತೆ ಹೊದಿಕೆ ಸುತ್ತಿ

ಒಳಗೊಳಗೇನೊ ಭೀತಿ ಪ್ರವೃತ್ತ

ಮೀರಿಸಲದ ಪದವಾಗ ನಿವೃತ್ತ ||

ಹೆಸರಾಗಿಬಿಡೊ ಕನಸುಗಳ ಆಸೆ

ಆಗದು ಹೋಗದು ತಡೆದ ನಿರಾಸೆ

ಕುಗ್ಗಿಸಿ ಜಗ್ಗಿಸಿ ತಗ್ಗಿದುತ್ಸಾಹ ಶೂನ್ಯ

ಮತ್ತೆಲ್ಲಿಂದಲೊ ಬಡಿದೆಬ್ಬಿಸಿ ಕ್ರಿಯಾ! ||

ಎಲ್ಲರ ಕಥೆಯ ಪಲುಕಿದೆ ಪಲ್ಲವಿ

ಅಲ್ಲಿಲ್ಲೊಂದು ಹಣ್ಣಾಗುತಲಿ ಸವಿ

ಹೂವೊ ಹಣ್ಣೊ ಪಾಲಿನಲಿಹ ಭಾಗ್ಯ

ನಿನ್ನ ಪಾಡಿಗೆ ನಿನ್ನ ಕರ್ಮವಿರೆ ಸೌಖ್ಯ ||

– ನಾಗೇಶ ಮೈಸೂರು

(Nagesha Mn)

(Picture source : Internet / social media)

01454. ನಮ್ಮ ನಡುವಿನ ಪುಳಕ


01454. ನಮ್ಮ ನಡುವಿನ ಪುಳಕ
__________________________


ಎಲ್ಲಿ ಮಾಯವಾಯ್ತೆ ಸಖಿ
ನಮ್ಮ ನಡುವಿನ ಪುಳಕ ?
ಪ್ರತಿ ಗಳಿಗೆ ರೋಮಾಂಚನ
ಹೇಗಾಯ್ತೀಗ ಭ್ರಮಾಲೋಕ? || ಎಲ್ಲಿ ||

ಸ್ಪರ್ಶದಲಿತ್ತಲ್ಲೆ ಮಿಂಚಿನಾಟ
ವಿದ್ಯುಲ್ಲತೆ ನೀ ವಿದ್ಯುತ್ಪ್ರವಾಹ
ಮಿಂಚಂತೆ ನೀನೆಂದು ಅರಿವ ಮುನ್ನ
ಮಾಯವಾದೆ ನೀಡಿ ವಿದ್ಯುದಾಘಾತ || ಎಲ್ಲಿ ||

ಎಷ್ಟಿತ್ತು ಕಾತರ ಕಾಣುವ ತವಕ !
ಎಷ್ಟೊಂದು ಮುನಿಸು ವಿನಾಕಾರಣ !
ಯಾಕೆಲ್ಲಾ ಕದನ ಮೌನದ ಸೆರಗಲ್ಲಿ ?
ಕಾಡುತ್ತಿದ್ದ ನಿನ್ನಾ ಕಂಗಳ ಬೆರಗೆಲ್ಲಿ ? || ಎಲ್ಲಿ ||

ಭ್ರಮ ನಿರಸನ ನಿಜವಿರಬಹುದು
ಮನ ನಿರಶನ ಆದೀತೆ ಸರಹದ್ದು ?
ಎಲ್ಲೊ ಬಿದ್ದ ಗಳಿಗೆ ಹೆಕ್ಕಿ ಹುಡುಕದೆ
ಸದ್ದಿಲ್ಲದೆ ಬಿಕ್ಕಿ ಬಾಳಲೆಷ್ಟು ದಿನವೆ ? || ಎಲ್ಲಿ ||

ಯಾಕೀತರ ಕ್ಷಣಕ್ಷಣವು ಯುಗವೆ
ನೆಪ ಹುಡುಕಿ ದೂರಾಗುವ ಪರಿವೆ
ಹುಡುಕಿಕೊಟ್ಟವಳು ಏನೆಲ್ಲಾ ನೀನೆ
ನೀನೆ ಕಳುವಾಗೆ ಎಲ್ಲೆಂದು ಹುಡುಕಲಿ ? || ಎಲ್ಲಿ ||

– ನಾಗೇಶ ಮೈಸೂರು
(Nagesha Mn)
(Picture source internet / social media)