01607. ನನ್ನ ಜಗದೆ ನಾನೆ..


01607. ನನ್ನ ಜಗದೆ ನಾನೆ..

__________________________________

ಮಳೆಯಾಗುದುರಿವೆ ಕನಸೆಲ್ಲ ಹನಿದು

ನನಸಾಗಿಸುವಾಸೆಗೆ ಬಾಳೆಲೆ ನೆರಳು

ಕಾದು ಕೂತಿರುವೆ ಮೀನಂತೆ ಹಿಡಿದು

ಬಿದಿರು ಬುಟ್ಟಿ ತುಂಬ ತುಂಬಿಸಿಕೊಳ್ಳೆ || ೦೧ ||

ನೆನೆದೊದ್ದೆಮುದ್ದೆ ನಾನಾದೇನು ಸೊಗ

ಮುಗ್ಧ ಕುತೂಹಲ ಜಗ ನಗುವಲಡಗಿದೆ

ಕಾಪಿಡಬೇಕು ಬುಟ್ಟಿ ಜಾರದಂತೆ ತಬ್ಬುತ

ಕಾಲಾಟ ನೀರಲಿರೆ ಉಲ್ಲಾಸ ಸುಖಿಸುತ || ೦೨ ||

ಹೊನ್ನಕಿರಣದ ವರ್ಷಧಾರೆ ಪುಳಕಿಸುತ

ಬೆರೆಸಿದ ಕಾಂತಿ ತೆರೆ ಹೊನ್ನಾಗಿಸಿ ನೀರ

ಅಲ್ಲೆಲ್ಲೊ ಹೊಳಪು ಸುಮವೆಲ್ಲಕು ಜಳಕ

ಮಂದಹಾಸ ತೆರೆಸಿ ಮುದ ಬಾಲೆ ಭಾವ || ೦೩ ||

ಮರದ ಬೊಡ್ಡೆ ಕಲ್ಲಬಂಡೆ ದಡ ನಿಲುಕು

ಮೆಲುಕು ದಿನನಿತ್ಯವದದೆ ಕಾಯಕದಲಿ

ಮೈ ಮರೆವ ಜಗವೆನ್ನ ಜಗವಾಗಿ ಬದುಕು

ನಿಸರ್ಗದೊಡ ಪಯಣ ಸತ್ಯದನಾವರಣ || ೦೪ ||

ನನಗಿದೇ ಶಾಲೆ ಕಲಿಸುತಿದೆ ಬದುಕೆಲ್ಲ

ಬಿಸಿಲುಗಾಳಿಮಳೆ ಎಲ್ಲ ಎದುರಿಸಿ ಬಲ್ಲೆ

ತುತ್ತೆರಡು ಹೊತ್ತು ವಿರಮಿಸೆ ಗುಡಿಸಲು

ತೊಡಲಿಷ್ಟು ವಸ್ತ್ರ ವಿನೋದ ಸಾಕಾಗದೆ ? || ೦೫ ||

– ನಾಗೇಶ ಮೈಸೂರು

೧೫.೦೨.೨೦೧೮

(Nagesha Mn)

(Picture source : Internet / social media – received via Muddu Dear – thank you madam 🙏👍😊)

01473. ನನ್ನ ಪಾಡಿಗೆ ನಾನು


01473. ನನ್ನ ಪಾಡಿಗೆ ನಾನು

_______________________

ನಾ ಕಾದು ಕೂತಿಲ್ಲ ಯಾರಿಗು

ಕವಿ ಬರೆಯಬೇಡವೊ ಹುಸಿಗವನ

ನಾನು ನಾನಾಗಿ ಕೂತ ಹೊತ್ತು

ಬಿಟ್ಟುಬಿಡು ನನ ಪಾಡಿಗೆ ನನ್ನ ! ||

ಸಾಕು ಬಣ್ಣನೆ ಹಸಿರು ಸಿರಿ ಪ್ರಕೃತಿ

ನಿಸರ್ಗವೆ ಅವಳೆಂದಾ ಭ್ರಮಾಲೋಕ

ನಯನ ನಾಸಿಕ ಹಣೆ ಗಲ್ಲ ಕುರುಳ

ಬಣ್ಣಿಸಿ ನಿಜದ ನನ್ನೆ ಮರೆಸುವೀ ಕುಹಕ ||

ನಾನೆತ್ತಲೊ ನೆಟ್ಟ ನೋಟ ಅವನಲ್ಲ

ಒಳಗೊಳಗಿನ ಕಾರಣ ಎಟುಕುವುದಿಲ್ಲ

ನಾನಲ್ಲಿಹೆ ಪ್ರಪುಲ್ಲೆ ವಿಚಲಿತೆ ಚಕಿತೆ

ನನ್ನನರಿವ ಗೊಂದಲ ಬಿಡೆನಗಿರಲಿ ಎಲ್ಲ ||

ಬಯಸಿದೇಕಾಂತ ಕಾನನ ಪ್ರಕ್ಷುಬ್ಧ

ನಿಶ್ಯಬ್ಧದಲೆ ಹುಡುಕಿರುವೆ ಮೌನದ ಸದ್ದ

ಜಗದಾಚೆಯೆಲ್ಲೊ ಬ್ರಹ್ಮಾಂಡ ಮೂಲೆ

ಅಲೆದಲೆದು ಚಂಚಲ ಮನವಾಗಿಲ್ಲ ಸನ್ನದ್ಧ ||

ನೋಡೀ ಬೇಡಿಯು ಮತ್ತದೆ ಮಾಯಾಜಾಲ

ಬಿಡದೆ ಕಾಡುವ ಲೌಕಿಕ ಐಹಿಕ ಬರಿ ಗದ್ದಲಗಳು

ನಾ ಹುಡುಕಿಲ್ಲ ಪರಮಾರ್ಥ ಅಂತಿಮ ಸತ್ಯ

ಕೇವಲ ನಾನಾಗೆ ಕುಳಿತಿರುವೆ ಕವನವಾಗಿಸದಿರು ||

– ನಾಗೇಶ ಮೈಸೂರು

(Nagesha Mn)

(pictrue source internet / social media received via Muddu Dear – thanks madam 😍👌🙏👍😊)

01346. ನನ್ನ ತನು ಕಣ ಕಣದಿ..


01346. ನನ್ನ ತನು ಕಣ ಕಣದಿ..
____________________________


ನನ್ನ ತನು ಕಣಕಣದಿ
ಜಿಗಿದಾಡುತಿಹ ಸೂಕ್ಷ್ಮಾಶ್ವ
ದೇಕದಿರು ದಣಿಯದಿರು ಕೊನೆಯವರೆಗೆ..
ಅಡಿಗಡಿಗೆ ಪುಟಿಪುಟಿದು
ಖುರಪುಟದ ದನಿ ತೆರೆದು
ನಡೆಸೆನ್ನ ಸ್ಥೂಲಕಾಯವನು ಅವನೆಡೆಗೆ ||

ಸೂಕ್ಷ್ಮಗಳ ಪೇರಿಸುತ ಕಟ್ಟಿದಾ ಕೋಟೆಯಿದು
ಸ್ಥೂಲದನಾವರಣದಲಿ ಕಾಡಿ ಫಲಿತ
ನೀನಾಗೆ ಸಮಚಿತ್ತ ಕಣ
ವಿಸ್ತರಿಸುತದನೆ ಅನುರಣ
ಒಂದಾಗಬಹುದಾಗ ಸೂಕ್ಷ್ಮ ಸ್ಥೂಲದ ಸೂತ್ರ
ಒಳಗು ಹೊರಗೆಲ್ಲ ಪರಿಣಮಿಸುತೊಂದೆ ಪಾತ್ರ || ನನ್ನ ||

ಹೆಸರನಿಡಲೇನು ಪ್ರತಿಯೊಂದು ಅಂಗಾಂಗಕು
ಕಣದೊಗಟನೊಡೆಯಲದು ಅದದೆ ವಿನ್ಯಾಸ
ಇಂದ್ರೀಯ ಕರ್ಮೇಂದ್ರಿಯ ಭೌತಿಕತೆ ತೊಗಲು
ಅಂತಃಕರಣದ ಮೇಳ ಅಲೌಕಿಕತೆ ಬಗಲು
ಎಲ್ಲದರೊಳಗೊಂದಾಗು ಏಕರೂಪ
ಕಾಡುವಾ ಮಾಯೆಗು ಸ್ಪುರಿಸಿ ಸಂತಾಪ || ನನ್ನ ||

ನಿಲ್ಲದಿರು ಓಡುತಿರು ಚದುರಾಶ್ವ ನಿರಂತರ
ಪಾರದರ್ಶಕ ನಡಿಗೆ ನನದಾಗಿಸುವವಸರ
ಇಹವಿರಲಿ ಪರವಿರಲಿ ಗುರಿ
ನೈತಿಕತೆ ನಿಜಾಯತಿ ದಾರಿ
ಸಾರ ಸೃಷ್ಟಿಯ ಕುಸುರಿಯದ್ಭುತದ ನಿದರ್ಶನ
ಅದರೊಂದು ತುಣುಕು ನಾನಾಗುತದರ ಭ್ರೂಣ || ನನ್ನ ||

– ನಾಗೇಶ ಮೈಸೂರು
(Nagesha Mn)

(Picture source: This work is licensed under a Creative Commons Attribution 3.0 Unported License)

01163. ನನ್ನ ನೆರಳಿನ ವೃತ್ತಾಂತ


01163. ನನ್ನ ನೆರಳಿನ ವೃತ್ತಾಂತ
_____________________

ನನ್ನ ನೆರಳಿನ ಸುತ್ತ
ನನ್ನದೇ ಬದುಕಿನ ವೃತ್ತ
ಬೆಂಬಿಡದೆ ಹಿಂಬಾಲಿಸೋ ವೃಥಾ
ಬಚ್ಚಿ ಬಿಚ್ಚಿಟ್ಟು ಹಗಲಿರುಳಿನ ಹುತ್ತ..

ನನದೇ ವೃತ್ತಾಂತ
ಬಣ್ಣಬಣ್ಣದ ಸವಿ ನೆನಪಿತ್ತ
ಕಪ್ಪು ಬಿಳಿ ಡಬ್ಬದಲಿಟ್ಟು ಬೀಗ
ನೆರಳಾಗಿ ಅನುಕರಿಸೋ ಜಗ..

ಬ್ರಹ್ಮದಂತೆ ನೆರಳಂತೆ
ಶೂನ್ಯಾತಿಶೂನ್ಯದ ಕಂತೆ
ಕಾಣಿಸಲಿರಬೇಕು ಬೆಳಕಿನ ಗಡಿಕಿಡಿ
ಕಂಡರೂ ಹಿಡಿಯಲಾಗದ ಗಡಿಬಿಡಿ..!

ಹೆತ್ತ ಕೂಸಂತೆ ಕಂಕುಳಿಗಿಲ್ಲ
ಅಂತೆಂದು ಬಿಟ್ಟು ಹೋಗುವುದಿಲ್ಲ
ನಂಟಿದು ಕರ್ಮದ ಹಾಗೆ ದೇಹಕಂಟಿ
ತಾವರೆಗಂಟಿದ ನೀರಂತೆ ನಿರ್ಲಿಪ್ತದ ತುಂಟಿ..

ಧುತ್ತನೆ ಮಾಯ, ಪ್ರತ್ಯಕ್ಷ
ಇದ್ದು ಇರದವನಂತೆ ದೀಕ್ಷಾ
ಬೆಳಕಿನ ಕುದುರೆಯ ಬೆನ್ನೇರಿ ಸವಾರಿ
ತನ್ನಿಚ್ಛೆ ಬಂದಂತೆ ನೋಟ, ಸಿಕ್ಕದೆ ಪರಾರಿ !

– ನಾಗೇಶ ಮೈಸೂರು
೦೪.೦೩.೨೦೧೭
(Picture by my phone camera)

00811. ನನ್ನ ನಿನ್ನ ನಡುವೆ


00811. ನನ್ನ ನಿನ್ನ ನಡುವೆ
________________________________


ನನ್ನ ನಿನ್ನ ನಡುವಿನ ತರಂಗ ದೂರ
ಅಳತೆ ಪಟ್ಟಿ ಹಿಡಿದು ಅಳೆದು ನೋಡಿದವರಾರು ?
ನನ್ನ ನಿನ್ನ ಮನಸುಗಳ ನೂರು ಬರಹ
ತರತರ ಸರಸ ವಿರಸ ರಸ ಓದಿದವರಾರು ?

ನನ್ನ ನಿನ್ನ ಕೈಗಳ ಹಿಡಿತದಲ್ಲಿ
ಗುರಿ ಬದುಕ ತುಡಿತ ಛಲ ಕಂಡವರಾರು ?
ನನ್ನ ನಿನ್ನ ಹೆಜ್ಜೆಯ ಜತೆ ಸಪ್ಪಳದಲ್ಲಿ
ಗಜ ಯೋಜನೆ ಯೋಚನೆ ಸುಳಿವ ಹಿಡಿದವರಾರು ?

ನನ್ನ ನಿನ್ನ ಬೌತಿಕ ದೂರದಲ್ಲಿ
ನಮ್ಮ ಪರಸ್ಪರ ಪ್ರೀತಿ ನೋಡಿದವರಾರು ?
ನನ್ನ ನಿನ್ನ ವೈಯಕ್ತಿಕ ಅವಕಾಶದಲಿ
ನಾವಿಬ್ಬರು ಬೆಳೆವುದ ಗಣಿಸಿದವರಾರು ?

ನನ್ನ ನಿನ್ನ ನಡುವಿನ ಮಾತಿನಲ್ಲಿ
ಗೌರವಾದರ ಗಮನ ಪರಿಗಣಿಸಿದವರಾರು ?
ನನ್ನ ನಿನ್ನ ಜೋರು ಮಾತ ಜಗಳದಲ್ಲಿ
ನಮ್ಮ ಸರಿ ತಪ್ಪುಗಳ ಅರಿಮೆ ಹುಡುಕಿದವರಾರು ?

ನನ್ನ ನಿನ್ನ ನಡುವೆ ಯಾರಿಲ್ಲ ಬಿಡು
ನಾನು ನೀನು ತಾನೆ ನಮ್ಮ ಮನದ ಕೂಗು
ಯಾರೇನಂದುಕೊಳುವರೆಂದು ನಾವು
ಚಿಂತಿಸದೆ ನಡೆವ ಬದುಕ ಗಾಲಿಯ ತುಳಿದು..

– ನಾಗೇಶ ಮೈಸೂರು

(Picture source: http://urmylyf.blogspot.in/2012/08/45-things-girl-want-but-wont-ask-for.html)

00574. ನಾನು ನನ್ನ ಕವಿತೆ…


00574. ನಾನು ನನ್ನ ಕವಿತೆ…
_________________________

  
ಜತೆಯಲಿ ಯಾರಿಲ್ಲದ ಗುಟ್ಟು
ನೋವ ಮರೆಸಲು ಯಾರುಂಟು ?
ಎಂದೆಲ್ಲೆಲ್ಲೊ ಅರಸುತ ನಾ ಅವಿತೆ
ಕೊನೆಗುಳಿದಿದ್ದು ನಾನು ನನ್ನ ಕವಿತೆ ||

ಯಾರೊ ಬಂದರು ಹೋದರು ಪಿಚ್ಚೆ
ದೀವಿಗೆಯಿತ್ತರು ಹೊಸಲಿಗೆ ಹಚ್ಚೆ
ಪೆಚ್ಚಾಗಿ ಖೇದ ಬರಿ ಮನದ ಹುಚ್ಚೆ
ನೋವಿಂದಲೆ ಬರೆ ಹಾಕಿದಂತೆ ಹಚ್ಚೆ ||

ಕ್ಷುದ್ರ ಯಾತನೆ ಘೋರದ ಅಪಾರ
ತುಂಬಿದೆದೆಯಲಿ ತುಳುಕಿ ಸಪೂರ
ಕಂಬನಿಯಾಗಲು ಸಂಕಟ ವ್ಯಾಪಾರ
ಬಾಹ್ಯದ ಪರಿವೆ ನಾಚಿಸೊ ಅವತಾರ ||

ಚಡಪಡಿಸುತ್ತಿರೆ ಇದ್ದೂ ಇಲ್ಲದ ಅನಾಥ
ಯಾವುದು ಕೆಳೆ ? ಬಂಧಕು ಸ್ವಾರ್ಥದ ಗಣಿತ
ಬಿಕ್ಕಳಿಸುವ ನಿಶ್ಯಬ್ದ ಸದ್ದಾಗದೆ ಚೀತ್ಕಾರ
ನೀಗಿಸಲೆಂತೊ ತೀರದ ಬವಣೆ ಎದೆಭಾರ ||

ತಟ್ಟನವತರಿಸಿದ ಅಂತರಂಗದ ಕೂರ್ಮ
ಬೇಡವೆಂದರೂ ಸಖ, ಬೆನ್ನಿಗಂಟಿದ ಕರ್ಮ
ಕಂಬನಿಗು ಜಾರಬಿಡದೆ ಬೆರೆತು ಹರಿಸುತೆ
ರಮಿಸುಳಿದಿದ್ದು ಕೊನೆಗೆ ನಾನು, ನನ್ನ ಕವಿತೆ ||

– ನಾಗೇಶ ಮೈಸೂರು

(Picture source wikipedia : https://en.m.wikipedia.org/wiki/File:Visual_poetry.jpg)