01504. ನಮಿಸಿ ಮುಂಜಾವಲಿ..


01504. ನಮಿಸಿ ಮುಂಜಾವಲಿ..

_______________________________

ಮಂದ ಮಾರುತ ಸಗಾಳಿ

ಮುಂಜಾವಿನ ಮಂಜಿನಲಿ

ನಸುಕನೆಬ್ಬಿಸುತ ದೇಗುಲ

ಅರುಣರಾಗ ಹಾಡುವ ಕಾಲ ||

ಢಣಢಣ ಘಂಟಾನಾದದೆ

ಪೂಜಾರತಿ ಬೆಳಕ ಸುಧೆ

ನಾದಸ್ವರ ವಾದನ ಜೋಡಿ

ಜತೆಜತೆ ಸುಪ್ರಭಾತ ಹಾಡಿ ||

ಆ ಹೊನ್ನ ಕಲಶದ ಮೇರು

ಗೋಪುರದೆ ನಿತ್ಯದ ತೇರು

ಚುಂಬಕ ತುದಿ ಸೆಳೆಸೆಳೆದು

ಪರಿಸರ ಶಕ್ತಿ ಪೀಠಕೆ ಸುರಿದು ||

ಸಂಧ್ಯೆ ದೈವಿಕ ಸಂಗಮದೆ

ಉಷೆ ಕಿರಣ ಹಾಲೂಡಿಸಿದೆ

ಮುಟ್ಟಿ ಪಾದಧೂಳಿ ನಮಿಸಿ

ದೈನಂದಿನ ಯಾತ್ರೆ ದ್ಯುತಿಸಿ ||

ನಕ್ಕಳಾ ತಾಯಿ ಬೆಳದಿಂಗಳು

ತಟ್ಟನೆ ಬೆಳಗಾಯ್ತು ಜಗದಲು

ಹಕ್ಕಿಗಳುಲಿದು ಮಂತ್ರಘೋಷ

ಜಗ ಕೊಡವಿ ಮೇಲೆದ್ದ ನಿಮಿಷ ||

– ನಾಗೇಶ ಮೈಸೂರು

(Nagesha Mn)