01578. ನಮ್ಮ ನಿಮ್ಮ ನಡುವಿನ ಕಥನ


01578. ನಮ್ಮ ನಿಮ್ಮ ನಡುವಿನ ಕಥನ

_____________________________________

ಎಲೆ ಮರೆಯಲ್ಲೊಂದು ಕಾಯಿ

ಕೈ ಬೆರಳನದ್ದೆ ಭಾವನೆ ಶಾಯಿ

ಬರೆದವೆಷ್ಟೊ ಮನಗಳ ತಪನ

ನಮ್ಮಾ ನಿಮ್ಮ ನಡುವಿನ ಕಥನ ||

ಬರೆವೆನೆಂಬ ತುಡಿತದ ಬಾಲ

ಬರವಣಿಗೆ ಭಟ್ಟಿ ಇಳಿಸೊ ಕಾಲ

ಮೂಡಿಸದೆ ಮೂಡಣದ ಸಾಲು

ಪದವಾಗುತ ಕುಣಿಸುವ ತೆವಲು ||

ಸಂಕೋಚ ಬಿಗಿ ಕೋಶದ ಭಿತ್ತಿ

ಗೊತ್ತಾಗದಂತೆ ಹೊದಿಕೆ ಸುತ್ತಿ

ಒಳಗೊಳಗೇನೊ ಭೀತಿ ಪ್ರವೃತ್ತ

ಮೀರಿಸಲದ ಪದವಾಗ ನಿವೃತ್ತ ||

ಹೆಸರಾಗಿಬಿಡೊ ಕನಸುಗಳ ಆಸೆ

ಆಗದು ಹೋಗದು ತಡೆದ ನಿರಾಸೆ

ಕುಗ್ಗಿಸಿ ಜಗ್ಗಿಸಿ ತಗ್ಗಿದುತ್ಸಾಹ ಶೂನ್ಯ

ಮತ್ತೆಲ್ಲಿಂದಲೊ ಬಡಿದೆಬ್ಬಿಸಿ ಕ್ರಿಯಾ! ||

ಎಲ್ಲರ ಕಥೆಯ ಪಲುಕಿದೆ ಪಲ್ಲವಿ

ಅಲ್ಲಿಲ್ಲೊಂದು ಹಣ್ಣಾಗುತಲಿ ಸವಿ

ಹೂವೊ ಹಣ್ಣೊ ಪಾಲಿನಲಿಹ ಭಾಗ್ಯ

ನಿನ್ನ ಪಾಡಿಗೆ ನಿನ್ನ ಕರ್ಮವಿರೆ ಸೌಖ್ಯ ||

– ನಾಗೇಶ ಮೈಸೂರು

(Nagesha Mn)

(Picture source : Internet / social media)

01454. ನಮ್ಮ ನಡುವಿನ ಪುಳಕ


01454. ನಮ್ಮ ನಡುವಿನ ಪುಳಕ
__________________________


ಎಲ್ಲಿ ಮಾಯವಾಯ್ತೆ ಸಖಿ
ನಮ್ಮ ನಡುವಿನ ಪುಳಕ ?
ಪ್ರತಿ ಗಳಿಗೆ ರೋಮಾಂಚನ
ಹೇಗಾಯ್ತೀಗ ಭ್ರಮಾಲೋಕ? || ಎಲ್ಲಿ ||

ಸ್ಪರ್ಶದಲಿತ್ತಲ್ಲೆ ಮಿಂಚಿನಾಟ
ವಿದ್ಯುಲ್ಲತೆ ನೀ ವಿದ್ಯುತ್ಪ್ರವಾಹ
ಮಿಂಚಂತೆ ನೀನೆಂದು ಅರಿವ ಮುನ್ನ
ಮಾಯವಾದೆ ನೀಡಿ ವಿದ್ಯುದಾಘಾತ || ಎಲ್ಲಿ ||

ಎಷ್ಟಿತ್ತು ಕಾತರ ಕಾಣುವ ತವಕ !
ಎಷ್ಟೊಂದು ಮುನಿಸು ವಿನಾಕಾರಣ !
ಯಾಕೆಲ್ಲಾ ಕದನ ಮೌನದ ಸೆರಗಲ್ಲಿ ?
ಕಾಡುತ್ತಿದ್ದ ನಿನ್ನಾ ಕಂಗಳ ಬೆರಗೆಲ್ಲಿ ? || ಎಲ್ಲಿ ||

ಭ್ರಮ ನಿರಸನ ನಿಜವಿರಬಹುದು
ಮನ ನಿರಶನ ಆದೀತೆ ಸರಹದ್ದು ?
ಎಲ್ಲೊ ಬಿದ್ದ ಗಳಿಗೆ ಹೆಕ್ಕಿ ಹುಡುಕದೆ
ಸದ್ದಿಲ್ಲದೆ ಬಿಕ್ಕಿ ಬಾಳಲೆಷ್ಟು ದಿನವೆ ? || ಎಲ್ಲಿ ||

ಯಾಕೀತರ ಕ್ಷಣಕ್ಷಣವು ಯುಗವೆ
ನೆಪ ಹುಡುಕಿ ದೂರಾಗುವ ಪರಿವೆ
ಹುಡುಕಿಕೊಟ್ಟವಳು ಏನೆಲ್ಲಾ ನೀನೆ
ನೀನೆ ಕಳುವಾಗೆ ಎಲ್ಲೆಂದು ಹುಡುಕಲಿ ? || ಎಲ್ಲಿ ||

– ನಾಗೇಶ ಮೈಸೂರು
(Nagesha Mn)
(Picture source internet / social media)

02194. ನಮ್ಮ ಬಿಡದಾ ‘ನಾನು’


02194. ನಮ್ಮ ಬಿಡದಾ ‘ನಾನು’
________________________


ಮುನಿಸ ಸೆರಗಲಿ ಇಣುಕಿ ನೋಡುತಿದೆ
ನಾನೆಂಬ ಹಮ್ಮು ಅಹಂಕಾರ
ಬಡಿದೆಬ್ಬಿಸೇನೊ ಕ್ಷುಲ್ಲಕಾ ಪರಿಗಣನೆ
ಬಾಯಿ ಕಟ್ಟಿಹಾಕಿ ಕರಿ ಮೌನ.. ||

ಸಾಗರಾ ಸೇರಿದ ನದಿ ಬಾಳಲೆಲ್ಲಿ ಸಿಹಿ
ಮುಕ್ಕಿದೆಲ್ಲೆಡೆಯೂ ಉಪ್ಪುಪ್ಪು.
ಯಾರಾರು ಬಂದರೊ? ಹೇಗೆ ಸಂದರೊ ?
ಯಾರ ತೆರೆಯೇರಿ, ಯಾವ ಅಲೆಯೊ ? ||

ಅಪ್ಪಳಿಸಿತೆಲ್ಲ ಸಪ್ಪಳದ ಖೂಳ ಖಳ
ಸುರುಳಿ ಸುತ್ತಿ ಬಸವಳಿಸಿ ಎಸೆದಾಟ
ಯಾವ ಘೋರ ಗಳಿಗೆ ಮಾತಾಗೊ ಕ್ರೂರ
ವಿಷ ಜಲಚರಗಳಾಗಿ ಆಕ್ರಮಣ ||

ವಿಫಲ ಸಕಲಾಸ್ತ್ರ ಕಂಬನಿ ದುರಾಚಾರ
ಬಿಕ್ಕಿಬಿಕ್ಕಿ ಬುಸುಗುಟ್ಟೊ ಭಾವ
ಒಣ ಸ್ವಾಭಿಮಾನ ನುಂಗೆಲ್ಲ ಆಪೋಶನ
ಅಗಸ್ತ್ಯನೆದುರ ಲೋಪಾಮುದ್ರೆ ||

ಯಾವ ಚಿಂತನೆಯ ಬಿತ್ತನೆ ಮುನಿಸು
ಮುಗಿದ ಗಳಿಗೆ ಪರವಶವೆ;
ಯಾವ ಕುರುಹು ಲವಲೇಶವಿರದ ನಗು
ಅಬ್ಬಬ್ಬಾ! ಹೆಣ್ತನದ ಸೊಗವೆ ! ||


– ನಾಗೇಶ ಮೈಸೂರು
(Nagesha Mn)

(picture source: internet / social media)

01052. ನಮ್ಮ ಸಂಸ್ಕೃತಿ


01052. ನಮ್ಮ ಸಂಸ್ಕೃತಿ
_______________

(೦೧)
ನಮ್ಮ ‘ಸಂ’ ಕೃತಿ
ನಮ್ಮರಿವಿಲ್ಲದೆಯೆ
– ನಮ್ಮ ಸಂಸ್ಕೃತಿ

(೦೨)
‘ಸಂ’ಸ್’ ಕೃತಿಗೆ
ಹೊಣೆ ಹೊರೆ ಸಮಾಜ
– ವಿಕೃತ ಜನ

(೦೩)
ಗುಂಪು ಗದ್ದಲ
ಮದುವೆ ಮುಂಜಿ ಸಭೆ
– ಘನ ಸಂಸ್ಕೃತಿ

(೦೪)
ಸುಪ್ತ ಕಾಮನೆ
ಸುಸಂಸ್ಕೃತ ಮದಿರೆ
– ಗುಪ್ತ ಗಾಮಿನಿ

(೦೫)
ನರನಾಡಿಗೆ
ಮದಿರಾ ಲಾಸ್ಯ ಬೇಡಿ
– ಧೂರ್ತ ಸಂಸ್ಕೃತಿ

(೦೬)
ಮದ ಮೋಜಿಗೆ
ಹದ ತಪ್ಪುವ ಬಗೆ
– ಸಂಸ್ಕೃತಿಯಲ್ಲ

(೦೭)
ಯಾರದೋ ವರ್ಷ
ಯಾರದೋ ಆಚರಣೆ
– ಮುಸುಕ ಗುದ್ದು

(೦೮)
ತಪ್ಪು ವಿಳಾಸ
ಹುಡುಕುತ್ತ ಆವೇಶ
– ವಿಧಿ ವಿಲಾಸ

(೦೯)
ಜನ ಸಾಗರ
ಕುಂಭ ಮೇಳ ಸಮ್ಮೇಳ
– ಭಕ್ತಿ ಸಂಸ್ಕೃತಿ

(೧೦)
ನಿಸರ್ಗ ತತ್ವ
ಬುಡಮೇಲಾಗಿ ಕ್ಲಿಷ್ಟ
– ವಾದ ವಿವಾದ

– ನಾಗೇಶ ಮೈಸೂರು
೦೫.೦೧.೨೦೧೭
(ಚಿತ್ರ: ವಾಟ್ಸಪ್ಪಿನಲ್ಲಿ ಸಿಕ್ಕಿದ್ದು)

00938. ನಮ್ಮ ನಿಮ್ಮೆಲ್ಲರ ಕಥೆ..


00938. ನಮ್ಮ ನಿಮ್ಮೆಲ್ಲರ ಕಥೆ..
___________________


ನಿರಂತರವಾಗಿದೆ ನಿನ್ನ
ಪರೀಕ್ಷೆಗಳ ತಕರಾರು
ನಿರೀಕ್ಷೆಗೂ ಮೀರಿದ ರಭಸ
ಕೊಚ್ಚುತೆಲ್ಲ ಕರುಣೆಯ ಗೊಲಸ..

ಕೊಡು ಕಷ್ಟಗಳ ದಣಿ ನೀನು
ಕಾಡಿಯೂ ಹೊರಡೊ ದನಿ ನಾನು
ಹೋರಾಡಿ ಹುರಿದುಂಬಿಸುತ
ಎದೆಗುಂದಿಸೊ ಮಾಯಾವಿ ತತ್ವ

ಗುಂಡಿಗೆ ಸೋಲದು ಬಿಡದು
ಕಲ್ಲ ಗುದ್ದಿ ನೀರ ತೆಗೆಯುತ
ಛಲದಿಂದೆದುರಿಸುತ ನಡೆದೂ
ಇಂದೇಕೊ ಕುಸಿವ ಭೀತಿ ಸಡ್ಡು

ನಿನ್ನದದಲ್ಲವೆ ಮರ್ಮ ಸಾರ
ತಾನೆ ನಶಿಸುವಂತೆ ಅಹಂಕಾರ
ಪೆಟ್ಟಿನ ಮೇಲುಳಿ ಪೆಟ್ಟು ಮೊತ್ತ
ಅರಿವಾಗೊ ಹೊತ್ತಿಗೆಲ್ಲ ಮುಗಿದು..

ನೋಡೀ ವಿಭ್ರಾಮಕ ಮನಸ್ಥಿತಿ
ಕಾಣದು ಕಷ್ಟದಿ ನೇಯ್ದ ಸುಖದೆಳೆ
ಬಿದ್ದ ಹೊಡೆತಕೆ ಧರಾಶಾಯಿ ಮನ
ಸ್ತಂಭೀಭೂತ ನಿಂತಿದೆ ತಡಕಾಡುತ್ತಾ..

– ನಾಗೇಶ ಮೈಸೂರು
15.10.2016
(Picture source Creative Commons)

00904. ನಮ್ಮ ನಾರಿಯರು


00904. ನಮ್ಮ ನಾರಿಯರು 
______________________


ನೇತ್ರಾವತಿಗೆ
ಕಂಬನಿ ಬರಲೆಂತು
– ನೀರೆಲ್ಲ ಖಾಲಿ 😰

ಕಾವೇರಿ ನೀರು
ಕೊಡದೆ ಮಾಡಿದ್ದೊಂದೆ
– ಕಾವೇರಿ’ಸಿದ್ದು’ !😷

ಕಪಿಲೆ ಬಾವಿ
ಹುಡುಕುತ್ತಿಹ ಸುದ್ಧಿ
– ಅವಿತುಕೊಳ್ಳೆ !👀

ಹಾರಂಗಿ ಜಲಾ
ಶಯನ ನೆಲವಾಗೆ
– ಬಿಡ ಬೇಡಿರೊ..😳

ತುಂಗಾ ಚರಿತ್ರೆ
ಇತಿಹಾಸ ಮಾಡದೆ
– ಭವಿಷ್ಯ ಕಟ್ಟಿ ⚖

ಭಧ್ರವಾಗಿರು
ಎಂದು ಬಿಟ್ಟೀರಾ ಜೋಕೆ
– ಕಾವಲಿಗಿರಿ 🤔

– ನಾಗೇಶ ಮೈಸೂರು
11.09.2016

(Picture source Creative Commons)

00299. ನಮ್ಮ ಪಾಡು, ಜಾಡು..


00299. ನಮ್ಮ ಪಾಡು, ಜಾಡು..
____________________

ಎಷ್ಟೊ ಬಾರಿ ಕಣ್ಣ ಮುಂದಿನ ಸರಳ ಸತ್ಯವನ್ನು ಒಪ್ಪಿಕೊಂಡು ಸ್ವೀಕರಿಸಲು ಅದರ ಸರಳತೆಯೆ ಅಡ್ಡಿಯಾಗಿಬಿಡುತ್ತದೆ – ಅಷ್ಟು ಸರಳ ಇರಲಿಕ್ಕೆ ಸಾಧ್ಯವೆ ಇಲ್ಲವೆಂಬ ಹುಂಬ ಅನಿಸಿಕೆಯಲ್ಲಿ. ಸಂಕೀರ್ಣತೆಗಳ ನಡುವೆ ಬದುಕಿ ಜಡ್ಡುಗಟ್ಟಿ ಹೋದ ಮನಸ್ಥಿತಿಗೆ, ನೈಜ ಸತ್ಯಗಳು ಸರಳವಾಗೆ ಸಾಕ್ಷಾತ್ಕರಿಸುತ್ತವೆಂಬ ಸಿದ್ದಾಂತ ನಂಬಲಸಾಧ್ಯವಾಗಿ ಕಾಣುವುದು ಅಚ್ಚರಿಯೇನಲ್ಲ. ಹೀಗಾಗಿ ಇರದ ಸಂಕೀರ್ಣವನ್ನರಸಿ, ಗೋಜು, ಗದ್ದಲ, ಗೊಂದಲಗಳ ಸಿಕ್ಕಿನಡಿ ಹುಡುಕಿ, ತಡಕಾಡಿ ಅದೇನೆಲ್ಲಾ ಸತ್ಯವಿದೆಯೊ ಎಂದು ಅಗೆದಗೆದು ಹೆಣಗಿ ಬಳಲುವುದು ಬದುಕಿನ ಯಾತ್ರೆಯಲ್ಲಿ ಸಹಜವಾಗಿ ಕಾಣುವ ಚಿತ್ರಣ…..(click on the link and scroll down to read the full article..)

…. https://nageshamysore.wordpress.com/00299-%e0%b2%a8%e0%b2%ae%e0%b3%8d%e0%b2%ae-%e0%b2%aa%e0%b2%be%e0%b2%a1%e0%b3%81-%e0%b2%9c%e0%b2%be%e0%b2%a1%e0%b3%81/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha MN
WeBlog site: nageshamysore.wordpress.com