00970. ನವೆಂಬರ 1 – ರಾಜ್ಯೋತ್ಸವ


00970. ನವೆಂಬರ 1 – ರಾಜ್ಯೋತ್ಸವ
_________________________________

ಕಳೆದ ಒಂದು ತಿಂಗಳಿನಿಂದ ರಾಜ್ಯೋತ್ಸವಕ್ಕೆ ದಿನಕ್ಕೊಂದರಂತೆ ಪ್ರತಿದಿನ ಒಂದೊಂದು ಚೌಪದಿ ಬರೆಯುತ್ತಾ ಬಂದಿದ್ದೆ. ಅದನ್ನೆಲ್ಲ ಸಂಗ್ರಹಿಸಿ ಒಂದು ಕಡೆ ಹಾಕುತ್ತಿದ್ದೇನೆ ಈ ಪೋಸ್ಟಿನಲ್ಲಿ. ಎಲ್ಲರಿಗು ರಾಜ್ಯೋತ್ಸವದ ಮುಂಗಡ ಶುಭಾಶಯಗಳನ್ನು ಕೋರುತ್ತಾ


(00) ರಾಜ್ಯೋತ್ಸವ – ಮಂಗಳಾರತಿ (01.11.2016)

ಆರತಿ ಎತ್ತಿರೆ ನಾರಿಯರೆಲ್ಲ, ಸಿರಿಮಾತೆ ಶ್ರೀ ಭುವನೇಶ್ವರಿಗೆ
ಕೊಂಡಾಡಿ ನಲಿದು, ಸುಂದರ ಪದಸೀರೆ ಉಡಿಸಿ ಕೊಡುಗೆ
ಜತೆಗರಿಶಿನ ಕುಂಕುಮ ಧೂಪ, ಹಾಕಿ ಕನ್ನಡಮ್ಮನ ಗುಡಿಗೆ
ಮಲ್ಲೆ ಜಾಜಿ ಸಂಪಿಗೆ ಸೇವಂತಿಗೆ, ಬಗೆ ಹೂವೇರಿಸಿ ಮುಡಿಗೆ ||

(30) ರಾಜ್ಯೋತ್ಸವ – ಒಂದು ದಿನ ಬಾಕಿ (31.10.2016)

ಬಲಿಯುದ್ದದ ಕಲಿ, ವಾಮನ ಗಿಡ್ಡನೆ ಪುತ್ಥಳಿ
ಅಳೆದುಬಿಟ್ಟನಲ್ಲ ಜಗ ಬ್ರಹ್ಮಾಂಡವನೇ ಕಾಲಲಿ !
ಕೀಳರಿಮೆಯೇಕೆ ಬೇಕು? ಬಾಹ್ಯದವತಾರ ನಿಮಿತ್ತ
ಕನ್ನಡತನ ಕನ್ನಡಮನ ಹೆಮ್ಮೆಯಿರೆ ವಿಶ್ವಮಾನವ ಖಚಿತ ||

(29) ರಾಜ್ಯೋತ್ಸವ – ಎರಡು ದಿನ ಬಾಕಿ (30.10.2016)

ನರಕಾಸುರನ ಕೊಂದು ಗೆದ್ದ ಹದಿನಾರು ಸಾವಿರ
ಯಾರಿಗುಂಟು ಯಾರಿಗಿಲ್ಲ ಕೃಷ್ಣನಾಮವೆ ಅಮರ
ನರಕಚತುರ್ದಶಿ ದಿನ ನಮಿಸುತಲೇ ಗೋವಿಂದನ
ಕನ್ನಡ ನರಕಾಸುರ ಮತಿಗಳಿಗೆ ಸನ್ಮತಿ ಬೇಡೋಣ ||

(28) ರಾಜ್ಯೋತ್ಸವ – ಮೂರು ದಿನ ಬಾಕಿ (29.10.2016)

ದೀಪಾವಳಿ ಹೊತ್ತಲಿ ಮಗಳು ಅಳಿಯ ಭೇಟಿ
ಆಗುತ್ತೆ ಹೇಗೂ ಬಟ್ಟೆ ಬರೆ ಒಡವೆ ಹಣ ಲೂಟಿ
ಮೃಷ್ಟಾನ್ನ ಭೋಜನ ಗಟ್ಟಿ ಹಬ್ಬಕಿರಲಿ ಪಾಯಸ
ಮಾಡಿಬಿಡಿ ರಾಜ್ಯೋತ್ಸವ ಹಬ್ಬದ ಕೊನೆ ದಿವಸ! ||

(27) ರಾಜ್ಯೋತ್ಸವ – ನಾಲ್ಕು ದಿನ ಬಾಕಿ (28.10.2016)

ಸದ್ದುಗದ್ದಲವೆಲ್ಲ ದೀಪಾವಳಿ ಮಧ್ಯೆ ಕರಗಿ
ಮರೆಯಾಗದಿರಲಿ ರಾಜ್ಯೋತ್ಸವದ ಬೆಡಗಿ
ಹೋಳಿಗೆಯೂಟ ಮೆಲ್ಲುತ ಮಾತಿನಲೇ ಚಟಾಕಿ
ಅರಿಶಿನ ಕುಂಕುಮ ರಂಗಿನ ದಿರುಸುಟ್ಟು ಪಟಾಕಿ ||

(26) ರಾಜ್ಯೋತ್ಸವ – ಐದು ದಿನ ಬಾಕಿ (27.10.2016)

ಹೈದರೆಲ್ಲ ಬನ್ನಿ, ಐದೆ ದಿನದಲ್ಲಿ ಸಂಭ್ರಮ
ಕನ್ನಡಮ್ಮನ ತೇರ ಮೆರವಣಿಗೆ, ಕಾರಣ ಜನ್ಮ
ಕೊಡುವಾ ಹೆಗಲು, ಚಕ್ರವಾಗಬಾರದು ಚೌಕ
ತೊಲಗಿಸಿ ದಿಗಿಲು, ಮುಗಿಲಿಗೆ ಕನ್ನಡ ಪುಳಕ !

(25) ರಾಜ್ಯೋತ್ಸವ – ಆರು ದಿನ ಬಾಕಿ (26.10.2016)

ಆರು ಅರಿಷಡ್ವರ್ಗ ಆರು ಮುಖ ಸುಬ್ರಮಣ್ಯ
ಒಂದಾರು ಗೆದ್ದರೆ ಬಲ ಮತ್ತೊಂದಾರು ಒಲಿಯೆ
ಆರಕ್ಕೇರದೆ ಮೂರಕ್ಕಿಳಿಯದೆ ಸುಖಿಯೆನಬೇಡ
ಆರಬಿಡದೆ ಅಭಿಮಾನವ ಕನ್ನಡ ಜೀವಂತವಾಗಿಡ ||

(24) ರಾಜ್ಯೋತ್ಸವ – ಏಳು ದಿನ ಬಾಕಿ (25.10.2016)

ಏಳು, ಎದ್ದೇಳು, ಏಳೇ ದಿನಗಳಷ್ಟೇ ಬಾಕಿ !
ಸರಸರನೆ ಹುಡುಕು ಕನ್ನಡ ತುತ್ತೂರಿ ಗಿಲಕಿ
ಕಟ್ಟು ತಲೆಗೆ ಕೆಂಪು ಹಳದಿ ಬಣ್ಣದ ರುಮಾಲು
ನೋಡಿಕೊ ಆಗದಂತದ ಬರಿ ವಾರ್ಷಿಕ ತೆವಲು !

(23) ರಾಜ್ಯೋತ್ಸವ – ಎಂಟು ದಿನ ಬಾಕಿ (24.10.2016)

ತನು ಕನ್ನಡ ಮನ ಕನ್ನಡ ಮಾತಾಗಲಿ ಘನ ಜನನಿಭಿಡ
ಎಲ್ಲಿದ್ದರೆ ತಾನೇ ಏನು? ಆಲೋಚನೆ ಕನ್ನಡದಲಿ ಮಾಡ
ಮಾಡು ಕಟ್ಟುವ ಮೊದಲು ಮನಸನಿಡು ಮಹಲೊಳಗೆ
ಸಿಂಗರಿಸಲದ ನಾಡುನುಡಿ ಸಂಸ್ಕೃತಿ ಸುಖ ಸಂತಸ ನಗೆ ||

(22) ರಾಜ್ಯೋತ್ಸವ – ಒಂಭತ್ತು ದಿನ ಬಾಕಿ (23.10.2016)

ಸೀಮೋಲ್ಲಂಘನವಾಗಲಿ ಮನ ಮನಗಳ ಕದ ತೆರೆದು
ಪ್ರವಹಿಸಲಿ ಅಮೃತವಾಹಿನಿ ಹೃದಯಗಳಾಗಿ ಖುದ್ಧು
ಬೇಲಿ ಹರಿಯಲಿ ಬೀಸಲಿ ಮಾರುತ ತೊಳೆದೆಲ್ಲ ಕಶ್ಮಲ
ಧಾಳಿಯಿಕ್ಕಲಿ ಕನ್ನಡದ ಸುಸ್ವರ ತುಂಬಲಿ ಶುದ್ಧ ಅಮಲ ||

(21) ರಾಜ್ಯೋತ್ಸವ – ಹತ್ತು ದಿನ ಬಾಕಿ (22.10.2016)

ಹಾಸಲುಂಟು ಹೊದೆಯಲುಂಟು ನಿತ್ಯ ನಮ್ಮದೇ ನಮಗೆ
ದಿನವೂ ಉಂಡುಣ್ಣುವ ಚಿಂತೆ ಸಮಯವೆಲ್ಲಿ ನಾಡುನುಡಿಗೆ
ಮಾಡದಿದ್ದರೆ ಬೇಡ ವ್ರತ ಉಪವಾಸ ಹಬ್ಬದಡಿಗೆ ಅಬ್ಬರ
ರಾಜ್ಯೋತ್ಸವದ ಹೊತ್ತಲಾದರೂ ನಮಿಸಲೆತ್ತಿ ಕನ್ನಡ ಸ್ವರ ||

(20) ರಾಜ್ಯೋತ್ಸವ – ಹನ್ನೊಂದು ದಿನ ಬಾಕಿ (21.10.2016)

ಹೆತ್ತು ಹೊತ್ತು ಸಾಕಿದ ಹೆತ್ತಮ್ಮಗಳ ಪೋಷಣೆ
ಒಡಹುಟ್ಟಿದವರೊಡನೆ ವಿಕಸನ ವ್ಯಕ್ತಿತ್ವ ತಾನೆ
ಬೀಜ ಸಸಿಯದಕೆ ನೀರೆರೆದು ಬೆಳೆಸಿ ಹೆಮ್ಮರ
ಕಾಲ ಮೇಲೆ ನಿಲ್ಲಿಸಿದ ಕನ್ನಡಮ್ಮಗೆ ನಮಸ್ಕಾರ ||

(19) ರಾಜ್ಯೋತ್ಸವ – ಹನ್ನೆರಡು ದಿನ ಬಾಕಿ (20.10.2016)

ತುಟಿಯ ಮೇಲೆ ತುಂಟ ಕಿರುನಗೆ ಸೊಗ
ನಕ್ಕಾಗ ಹಾಲು ಬೆಳದಿಂಗಳಿಗೆ ಜಾಗ
ಹೊರಡಿಸಲದೆ ಸ್ವರ ಸಂಗೀತ ಕೊರಳೆ
ಕನ್ನಡ ಮಾತಾಗೆ ಹಾಲುಜೇನಿನ ಹೊಳೆ

(18) ರಾಜ್ಯೋತ್ಸವ – ಹದಿಮೂರು ದಿನ ಬಾಕಿ (19.10.2016)

ಅಕ್ಷರಕೆ ಲಕ್ಷವದು, ಕವಿ ಕಾಳಿದಾಸನ ಸ್ಪರ್ಶ
ಇರದಿದ್ದರೇನಂತೆ ಭೋಜರಾಜನ ಸಾಂಗತ್ಯ
ಕನ್ನಡದ ಮೇಲಕ್ಕರೆ ಇದ್ದರದೆ ಕೋಟಿ ಕೋಟಿ
ಮಾತು ಬರಹಗಳಾಗಿ ವಿಜೃಂಬಿಸಲದೆ ಸ್ಫೂರ್ತಿ !

(17) ರಾಜ್ಯೋತ್ಸವ – ಹದಿನಾಲ್ಕು ದಿನ ಬಾಕಿ (18.10.2016)

ವ್ಯಾಧಿಗಳು ನೂರಾರು, ಪರಿಹಾರಗಳು ಹಲವು
ಶಮನವಾಗಿಸೆ ವೈದ್ಯ, ಔಷಧಿಗಳ ಸಾಲು ಸಾಲು
ಕನ್ನಡ ಅಭಿಮಾನ ಶೂನ್ಯತೆಗೆಲ್ಲಿದೆ ಮದ್ದು ತಿಳಿಯೆ
ನೀಡಬಹುದು ಜನಕೆ ಜ್ವರ ನೆಗಡಿಯಂತೆ ಸುಧಾರಿಸೆ ||

(16) ರಾಜ್ಯೋತ್ಸವ – ಹದಿನೈದು ದಿನ ಬಾಕಿ (17.10.2016)

ಬಂಧು ಬಾಂಧವ ಸಜ್ಜನ ಸಂಗ, ಮಿಲನಗಳ ಸಮ್ಮೇಳನ
ಮದುವೆ ಮುಂಜಿ ನಾಮಕರಣ, ಏನಾದರೊಂದು ಕಾರಣ
ಆಡಂಬರ ವೈಭವ ಪ್ರದರ್ಶನ, ಬೆಳ್ಳಿ ಬಂಗಾರ ರೇಷ್ಮೆಸೀರೆ
ಮಾತಲೆಲ್ಲಿ ಸಂಸ್ಕೃತಿ ದರ್ಶನ, ಕನ್ನಡವನೆ ಬಿಟ್ಟು ಬಿಡುವರೆ ||

(15) ರಾಜ್ಯೋತ್ಸವ – ಹದಿನಾರು ದಿನ ಬಾಕಿ (16.10.2016)

ಮುದ್ದಣ್ಣ ಮುನಿದು ಕೂತ, ಅಪರೂಪದ ರಾತ್ರಿ ಹೊತ್ತು
ತಾಂಬೂಲ ಸಹಿತ ಮನೋರಮೆ, ರಮಿಸುತ್ತಾ ತುರ್ತು
ಯಾಕೆ ಕಳವಳ ಕೋಪ ಹೇಳಬಾರದೆ ರಮಣ? ಎನ್ನಲು
ನೊಂದ ದನಿ ನುಡಿದಿತ್ತ – ಕೇಳರಲ್ಲ ಕನ್ನಡವ ತವರಲ್ಲೂ ||

(14) ರಾಜ್ಯೋತ್ಸವ – ಹದಿನೇಳು ದಿನ ಬಾಕಿ (15.10.2016)

ನವೆಂಬರಿನ ಚಳಿಗಾಲ ಬೆಚ್ಚಗಾಗಿಸಲು ಕಂಬಳಿ
ಹೊದ್ದು ಮಲಗಿದವರ ಬಡಿದೆಬ್ಬಿಸಲೆಂದೆ ಧಾಳಿ
ಕನ್ನಡ ರಾಜ್ಯೋತ್ಸವ ನೆನಪಾಗೆದ್ದುಬಿಡುವ ಕನ್ನಡಿಗ
ಧುತ್ತೆಂದು ಜಾಗೃತ ಘೋಷವಾಕ್ಯಗಳೊಡನೆ ಕರಗ !

(13) ರಾಜ್ಯೋತ್ಸವ – ಹದಿನೆಂಟು ದಿನ ಬಾಕಿ (14.10.2016)

ಕನ್ನಡದಲಾಡೇ ಮಾತು ಹಾಕುವರಂತೆ ದಂಡ
ಹೇಳ-ಕೇಳುವರಿಲ್ಲದೆ ಆಗಿದೆ ಶಾಲೆಗಳದೀ ಕರ್ಮಕಾಂಡ
ಯಾಕಪ್ಪ ಕನ್ನಡಿಗ ಇಷ್ಟೊಂದು ಸಹನೆ ಒಳ್ಳೆತನ
ಪೋಷಕ ಪೋಷಾಕಲಾದರೂ ಇರಬೇಡವೆ ಅಭಿಮಾನ ? ||

(12) ರಾಜ್ಯೋತ್ಸವ – ಹತ್ತೊಂಭತ್ತು ದಿನ ಬಾಕಿ (13.10.2016)

ನಿತ್ಯ ಮಾತುಗಳಾಡುತ, ಆಂಗ್ಲದ ನಡುವೆ ಕನ್ನಡ
ಆಡುವಂತಾಗಿ ಹೋಗಿದೆ, ಜಾಡೇ ಸಿಗದು ನೋಡ
ಮರಳಲಿ ಕನ್ನಡ ಮತ್ತೆ, ಪದಗಳ ನಡುವೆ ಇತರೆ
ಹುಡುಕಿ ತಡುಕಿ ಬಳಸೆ, ಕಸ್ತೂರಿ ಕನ್ನಡಕೆ ದಸರೆ ||

(11) ರಾಜ್ಯೋತ್ಸವ – ಇಪ್ಪತ್ತು ದಿನ ಬಾಕಿ (12.10.2016)

ಕನ್ನಡಕ್ಕೊಬ್ಬನೆ ರಾಜಕುಮಾರ ಪ್ರತಿಮೆ ತಾನೆ
ಕನ್ನಡಕ್ಕವನೆ ನಿಜ ಪರ್ಯಾಯ ಪದವಾದನೆ
ಅಂತೆ ಅದೆಷ್ಟೊ ಮಹನೀಯರುಗಳ ಸಾಧನೆ
ಹೆಸರಿನುದ್ದ ಪಟ್ಟಿಗೆಲ್ಲಿದೆ – ಮೊದಲು ಕೊನೆ !?

(11) ರಾಜ್ಯೋತ್ಸವ – ಇಪ್ಪತ್ತೊಂದು ದಿನ ಬಾಕಿ (11.10.2016)

ನಿರಭಿಮಾನ ಕಳಂಕ, ದುರಭಿಮಾನ ಕೆಸರು
ನಡುವಿನ ಅಭಿಮಾನ, ಪಚ್ಚೆ ತೋರಣ ತಳಿರು
ಯಾರಿದ್ದರೂ ಇಲ್ಲಿ, ಬರಲಿ ಕನಿಷ್ಠ ನಾಡಿನ ಭಕ್ತಿ
ಎಲ್ಲಿದ್ದರೂ ಸರಿ ಕನ್ನಡಿಗ, ನೀನಾಗು ಕನ್ನಡದ ಶಕ್ತಿ ||

(10) ರಾಜ್ಯೋತ್ಸವ – ಇಪ್ಪತ್ತೆರಡು ದಿನ ಬಾಕಿ (10.10.2016)

ಗೊಂದಲದಲಿ ಚಿತ್ತ, ನಿಜ ಜಾಗತಿಕ ಗೋಮಾಳ
ಸಂದೇಹ ಸಹಜವೇ, ನಾಡು ನುಡಿಗೆಲ್ಲಿದೆ ಕಾಲ ?
ಅರೆ! ತಂತ್ರಜ್ಞಾನವದೆ ಪ್ರಗತಿಯ ಹಾಡಿಗೆ ಮೆಟ್ಟಿಲು
ಏಣಿಯಾಗಲೊಲ್ಲದೆ ಕನ್ನಡ ಜೊತೆಜೊತೆಗೆ ಹತ್ತಲು !

(09) ರಾಜ್ಯೋತ್ಸವ – ಇಪ್ಪತ್ಮೂರು ದಿನ ಬಾಕಿ (09.10.2016)

ಮಲ್ಲಿಗೆ ದಂಡೆ ಪೋಣಿಸಿ ಜಡೆಗೆ ಮುಡಿಸಿದಂತೆ ಕನ್ನಡದಕ್ಷರ
ಹರಳು ಮಲ್ಲಿಗೆ ಮೊಗ್ಗು ಸಾಲಾಗಿಟ್ಟಂತೆ ಬಿಡಿ ಬಿಡಿಯಕ್ಷರ
ಅಂದ ಚೆಂದದ ಬರಹ ಲಾವಣ್ಯ ಕ್ರಮಬದ್ಧ ಶಿಸ್ತು ವ್ಯಾಕರಣ
ಲಿಪಿಗಳ ರಾಜ ಕನ್ನಡ ಗರ್ವದೆ ಎದೆಯುಬ್ಬಿಸಿ ನುಡಿಯೋಣ !

(08) ರಾಜ್ಯೋತ್ಸವ – ಇಪ್ಪತ್ನಾಲ್ಕು ದಿನ ಬಾಕಿ (08.10.2016)

ಅತಲ ವಿತಲ ಸುತಲ ರಸಾತಳ ಪಾತಾಳ
ಸಪ್ತಲೋಕಾದಿ ಚರಾಚರ ಬ್ರಹ್ಮಾಂಡದಾಳ
ಅಮೃತವಾಹಿನಿಯಾಗಿ ಹರಿಯುತಿದೆ ಸತತ
ಕನ್ನಡ ಮಾತೆಯ ಸ್ತುತಿಘೋಷ ರಥ ಅವಿರತ !

(07) ರಾಜ್ಯೋತ್ಸವ – ಇಪ್ಪತ್ತೈದು ದಿನ ಬಾಕಿ (07.10.201)

ತಲ್ಲಣಿಸದಿರು ಕಂಡ್ಯಾ ತಾಳು ಮನವೆ
ಕನ್ನಡವನು ಸಲಹುವನು ಇದಕೆ ಸಂಶಯವಿಲ್ಲ
ನೋಡೀಗ ಸಾಕ್ಷ್ಯ, ಅಂತರ್ಜಾಲದೆ ಸುಭೀಕ್ಷಾ
ಹರಿದಾಮೃತವಾಣಿ ಅಂತರ್ಜಲದಂತೆ ಪ್ರಸರಿತ ||

(06) ರಾಜ್ಯೋತ್ಸವ – ಇಪ್ಪತ್ತಾರು ದಿನ ಬಾಕಿ (06.10.2016)

ಯಾರ್ಯಾರೋ ಹಾಡುವರು, ಕನ್ನಡದ ಹಾಡು
ಕನ್ನಡ ಬರದವರ, ಬಾಯಲ್ಲೂ ಮಾತಿನ ಜಾಡು
ಏನಾಗಿದೆಯಪ್ಪಾ ನಿನಗೆ, ಅಚ್ಚ ಕನ್ನಡತಿ ಹೆತ್ತಾ ಮಗ
ಹೋರಾಡದಿದ್ದರೆ ಬೇಡ, ಬರಿ ಮಾತಾಡಲೇನು ರೋಗ ? ||

(05) ರಾಜ್ಯೋತ್ಸವ – ಇಪ್ಪತ್ತೇಳು ದಿನ ಬಾಕಿ (05.10.2016)

ಹಳದಿ ಕೆಂಪು ಕನ್ನಡ ಬಾವುಟದೆರಡು ಬಣ್ಣ
ಅರಿಶಿನ ಕುಂಕುಮ ಸಾಂಕೇತಿಸುವ ಕಾರಣ
ತಾಯಿ ಭುವನೇಶ್ವರಿ ಪೂಜಾರ್ಚನೆ ಸರಕದೆ
ನಾಡು ನುಡಿಯಲ್ಲವಳ ಕಾಣುವ ಬಗೆ ಇದೇ ! ||

(04) ರಾಜ್ಯೋತ್ಸವ – ಇಪ್ಪತೆಂಟು ದಿನ ಬಾಕಿ (04.10.2016)

ಕವಿ ಪುಂಗವ ದಾಸರೆಲ್ಲ, ಎತ್ತಿ ಆಡಿಸಿದ ಕೂಸು
ಕಟ್ಟಿದರು ಲಕ್ಷ ಲಕ್ಷ, ಪದಗಳಲೆ ಕನ್ನಡ ಕನಸು
ಕಾಲಮಾನಗಳ ಕಸುವಲ್ಲಿಯದು, ಘನ ಬಿತ್ತನೆ ಬೆರಗೆ
ಎಂಟೇನು? ಎಪ್ಪತ್ತೆಂಟು, ಜ್ಞಾನಪೀಠ ಕನ್ನಡದ ಮಡಿಲಿಗೆ ||

(03) ರಾಜ್ಯೋತ್ಸವ – ಇಪ್ಪತ್ತೊಂಭತ್ತು ದಿನ ಬಾಕಿ (03.10.2016)

ಏನು ರಾಜ್ಯೋತ್ಸವವೋ, ಸುಡುಗಾಡು ಮೌನ
ಕಾವೇರಮ್ಮ ಅಳುತಿರೆ, ಕನ್ನಡಮ್ಮನಿಗೆ ತಲ್ಲಣ
ಆಚರಣೆ ಹೊತ್ತಿಗೆ ಬಿಡಿ, ಅಲ್ಲಿ ಇರದಲ್ಲಾ ಕಣ್ಣೀರು
ಬಿಕ್ಕಿದ ಸದ್ದಷ್ಟೆ, ಬತ್ತಿ ಹೋಗಷ್ಟೊತ್ತಿಗೆ ಪೂರ್ತಿ ನೀರು ||

(02) ರಾಜ್ಯೋತ್ಸವ – 30 ದಿನ ಬಾಕಿ ! (02.10.2016)

ದೇಶ ವಿದೇಶಗಳಲಿಹರು ನಮ್ಮ ಕನ್ನಡ ಜನರು
ಬಿಡದೆ ಆಚರಿಸುವರು ಹಬ್ಬ ಹರಿದಿನ ನವೆಂಬರು
ಹಾಕಿದ್ದೇನೋ ಸರಿ ಕನ್ನಡ ಮಾತೆಗೆ ಜಯಜಯಕಾರ
ಮಕ್ಕಳ ಜೊತೆಗಾಡಬೇಕು ಮರೆಯದೆ ಮನೆಭಾಷೆ ತವರ ||

(01) ರಾಜ್ಯೋತ್ಸವ – 31 ದಿನ ಬಾಕಿ ! (01.10.2016)

ಒಂದೇ ತಿಂಗಳ ದೂರ ಕನ್ನಡ ಮಾಸ ನವೆಂಬರ
ಕೆಂಪು ಹಳದಿ ಬಾವುಟ ತೆಗೆಯಿರಿ ಅವಸರವಸರ
ಘೋಷಣೆ ಶೋಷಣೆ ಭಾಷಣ ಬರಿ ಬಾಗಿಲಿನಲಂಕರಣ
ದಿನನಿತ್ಯದಲ್ಲಾಗಲಿ ಕನ್ನಡ ಮಾತೆ ಗರ್ಭಗುಡಿಯಾಭರಣ ||


– ನಾಗೇಶ ಮೈಸೂರು
#ನವೆಂಬರ 1
#ರಾಜ್ಯೋತ್ಸವ
(Picture from internet)