01731. ನಿದಿರೆ


01731. ನಿದಿರೆ

_________________

ವರವೋ? ಶಾಪವೊ? ನಿದಿರೆ

ಯಾಕೊ ಬೇಕೆಂದಾಗ ಬಳಿ ಬರದೆ

ಕಾಡಿಸುವ ಬಗೆ ಬಗೆ ನೂರಾಟ

ಅರೆಬರೆಯಾಗೆ ಮನದಾ ಹಾರಾಟ ||

ಮುಂಜಾವಿಂದ ಮುಸ್ಸಂಜೆತನಕ

ಸಾಲುಗಟ್ಟಿ ಕೂತಿವೆ ಮಾಡದ ಲೆಕ್ಕ

ಸರಿ ನಿದಿರೆಯಾಗದಿರೆ ಚಡಪಡಿಕೆ

ಮಾಡಿದ್ದೆಲ್ಲಾ ಅರೆಬರೆ ಬುಡುಬುಡಿಕೆ ||

ಕಾಡುವ ಯಾತನೆ ಚಿಂತೆ ನೂರು

ಮಾಡುವುದೇನೇನೆಲ್ಲ ತರ ತಕರಾರು

ಮಲಗಬಿಡದಲ್ಲ ತನುವಾ ನಿದಿರೆಗೆ

ನೆಮ್ಮದಿಯಿರದೆಡೆ ಮನ ಕುದುರೆ ಲಗ್ಗೆ ||

ಮಾಡಲಿ ಬಿಡಲಿ ಕೆಲವರಿಗುಂಟು

ಕೂತಲ್ಲೆ ಮಲಗಿಬಿಡಬಲ್ಲ ಇಡುಗಂಟು

ಸಂತೆಯಲು ನಿದಿರಿಸುವ ಧೀರರು

ಮಿಕ್ಕಿದ್ದೆಲ್ಲ ಗಣಿಸದೆ ಪಟ್ಟಾಗಿ ಮಲಗುವರು! ||

ಸಾಧಿಸಲೇನೇನೊ ಇದ್ದವರಿಗೆ ನಿದ್ರೆ

ವರವೂ ಹೌದು ಶಾಪವೂ ಅದುವೆ ದೊರೆ

ಇರದಿದ್ದರು ಕರ್ಮದ ಬೆನ್ನಟ್ಟಿ ಓಡುವರೆ

ಸಮತೋಲಿಸಿದರೆ ಬದುಕಲೊತ್ತೊ ಮುದ್ರೆ! ||

– ನಾಗೇಶ ಮೈಸೂರು

೨೦.೦೫.೨೦೧೮

(Picture source: https://goo.gl/images/ygfD75)

01470. ನೆಮ್ಮದಿಯ ನಿದಿರೆ..


01470. ನೆಮ್ಮದಿಯ ನಿದಿರೆ..

_________________________

ತಾವರೆಯೆಲೆ ಹಾಸಿಗೆ

ಕಟ್ಟಿದ ಕನಸಿನ ಜೋಳಿಗೆ

ತೂಗುತಿದೆ ಜಲದಲೆ ತರಂಗ

ಮೈಮರೆತ ಲಲನೆ ನಿದಿರೆ ಪ್ರಸಂಗ ||

ಕಾವಲಿವೆ ತಾವರೆ ಸುತ್ತ

ತಾರೆ ಮೊಗದವಳ ಕಾಯುತ್ತ

ತೂಗಿ ಮುಟ್ಟಲವಳ ಮೊಗದಾವರೆ

ನಾಚಿದವಳ ಮೊಗವಾಗಿದೆ ಕೆಂದಾವರೆ ||

ಪಡೆಯುತ ಸ್ವಪ್ನದೆ ಆಸರೆ

ಹಡೆಯುತ ಜೀವದ ಜಗಧಾರೆ

ಜಲದಿಂದುದ್ಭವಿಸಿದ ಜೀವ ವಿಕಾಸ

ಪ್ರಕೃತಿ ಪುರುಷಗಳೆರಡು ಅವಳದೆ ಖಾಸ ||

ಜಲಚರ ಪತಂಗವಿಟ್ಟ ಕಚಗುಳಿ

ಕೈಕಟ್ಟಿದ ತಲ್ಲೀನತೆ ಬಿಡಿಸಿ ಮೈಚಳಿ

ಕನಸಿನೊಳಗೊಂದು ಕನಸಾಗುತ ಸಾಕಾರ

ಜಗ ನೆಮ್ಮದಿ ನಿದಿರೆಯಲಿ ಲಲನೆಯ ಸಂಸ್ಕಾರ ||

ಮಲಗು ಮಲಗು ಜಗದಾ ಸೃಷ್ಟಿ

ತುಸು ವಿಶ್ರಮಿಸು ಕಾಯಲಿ ಸಮಷ್ಟಿ

ನಿನ್ನೊಡಲಲೊಡಮೂಡಲಿ ಕಲ್ಪನೆ ಮೂರ್ತ

ನಮಗರಿವಾಗಲಿ ಬಿಡಲಿ ಪಾಲಿಸುವ ಅನವರತ ||

– ನಾಗೇಶ ಮೈಸೂರು

(Nagesha Mn)

(Picture source from Internet / social media , received via Uma Odayar – thanks madam 😍🙏👌👍😊)

01076. ಮಾನಿನಿ ಮದಿರೆ ನಿದಿರೆ ಪ್ರಲಾಪ ….


01076. ಮಾನಿನಿ ಮದಿರೆ ನಿದಿರೆ ಪ್ರಲಾಪ ….
__________________________________

ನಿದಿರೆ ಬಾರದ ಹೊತ್ತು
ಮದಿರೆ ಬಾ ಎಂದಿತ್ತು
ನಿದಿರೆ ಮತ್ತೇರುವ ಬದಲು
ಮದಿರೆ ಮತ್ತಾಗಿಸಿ ಚಿತ್ತು..

ಬೇಕಿತ್ತಾರಿಗೆ ಮದಿರೆ ?
ಮಾನಿನಿಯವಳು ಜತೆಗಿರೆ
ಮತ್ತಲಿ ಕೆಡುವೊ ಮಾದಕತೆ
ನಿದ್ದೆ ಕನಸಲ್ಲೂ ಕೈ ಚಳಕವಿತ್ತೆ ..!


ನಿದ್ದೆಯಿಲ್ಲ ಕನಸ ಕಾಣಲೆಲ್ಲಿ ?
ಕನಸಿಲ್ಲದೆಡೆ ಕಾಲಿಡದ ಮಳ್ಳಿ
ಮತ್ತೇನು ವಿಧಿಯಿಲ್ಲ ಶರಣು ಜೀವ
ಮದಿರಾದೇವಿಯ ಮಡಿಲಲ್ಲಿ ಕಾವ..


ಮದಿರೆ ಮಾನಿನಿ ಮಡಿಲ ನಿದಿರೆ
ಜತೆಗಿದ್ದರೆ ಮೌನದ ಮತ್ತೆ ಕುದುರೆ
ಹಾಳು ಮದಿರೆಯೊಡನೆ ಸಹವಾಸ
ಬರಿ ಮಾತಲೆ ಕೆಡವುತ್ತಿದೆ ಉಪವಾಸ..


ಆದರೂ ಕೈ ಬಿಡದಿರು ಮದಿರೆ
ತರಿಸು ಹೇಗಾದರೂ ತುಸು ನಿದಿರೆ
ಮತ್ತಿನ ಜೊಂಪಿನ ಮಂಪರಲೆಲ್ಲಾ ಸ್ತಬ್ಧ
ಕಾಡುವ ಮಾನಿನಿ ನೆನಪಿಗೂ ನಿಶ್ಯಬ್ದ !

– ನಾಗೇಶ ಮೈಸೂರು
19.01.2017
(Pictures : Creative Commons)