01649. ಘಜಲ್ (ಹೇಗೆ ಸೇರಲೆ ನಿನ್ನ ?)


01649. ಘಜಲ್ (ಹೇಗೆ ಸೇರಲೆ ನಿನ್ನ ?)

______________________________________

ಪಡಖಾನೆ ಬೀದಿ ತುಂಬಾ ಕುಡುಕರದೇ ಕಾಟ..

ಹೇಗೆ ಸೇರಲೆ ನಿನ್ನ ?

ಪಡ್ಡೆ ಹುಡುಗರ ಮಧ್ಯೆ ಸರಿ ನಡಿಗೆಯೆ ತೂರಾಟ..

ಹೇಗೆ ಸೇರಲೆ ನಿನ್ನ ? ||

ಕೊಟ್ಟ ಮಾತಿಗೆ ತಪ್ಪದೆಲೆ ಹೊತ್ತು ಮೀರದ ಹಾಗೆ

ಸೇರಲೆಂತೆ ನಿನ್ನ ತಡವರಿಸೊ ಕಾಲ ಚೆಲ್ಲಾಟ..

ಹೇಗೆ ಸೇರಲೆ ನಿನ್ನ ? ||

ಹೇಗೆ ಹುಡುಕಲೆ ಮಬ್ಬು ಕತ್ತಲಲಿ ನಿನ್ನಯ ಮಹಲು

ಮದಿರೆ ಮತ್ತಲಿ ಮಂಕು ದೀಪಕು ಅಮಲು ಪರದಾಟ..

ಹೇಗೆ ಸೇರಲೆ ನಿನ್ನ ? ||

ದಾರಿ ಕೊಡದು ಹಾಳು ಮಳೆ ಕೆಸರ ರಾಡಿ ಕೊಚ್ಚೆ

ರಚ್ಚೆ ಮನದುಪಶಮನಕೆ ನಿನ್ನ ತುಟಿ ಮದ್ದೇ ಉತ್ಕೃಷ್ಟ..

ಹೇಗೆ ಸೇರಲೆ ನಿನ್ನ ? ||

ಸೇರಿ ನಿನ್ನ ಬೆಚ್ಚನೆ ಮಡಿಲು ಮಳೆಯಾಗುವಾಸೆ

ಗುಬ್ಬಿ ಗೂಡಿಗೆ ಕಾತರಿಸಿ ಬೆರೆಸೆ ಉಸಿರಾಟ..

ಹೇಗೆ ಸೇರಲೆ ನಿನ್ನ ? ||

– ನಾಗೇಶ ಮೈಸೂರು

೧೪.೦೩.೨೦೧೮

(Picture source : Internet / social media)

01536. ನಿನ್ನ ನೀ ನೋಡಿಕೊ ಮೊದಲು


01536. ನಿನ್ನ ನೀ ನೋಡಿಕೊ ಮೊದಲು

___________________________________

ನಿನ್ನ ನೀ ನೋಡಿಕೊ ಮೊದಲು

ನಿನ್ನ ಮನದ ಕನ್ನಡಿಯಲ್ಲಿ

ಬಿಡು ಅಲ್ಲಿಲ್ಲಿ ಇಣುಕುವಾಟ

ನಿನ್ನಂತೆ ಇಣುಕುವರು ನಿನ್ನಲಿ ||

ನಿನ್ನದಿದೆ ಎಲೆ ನಿನದೆ ಊಟ

ನಿನ್ನ ಜಗದಗಲ ವಿಸ್ತಾರ

ಸುತ್ತ ಚಿಮುಕಿಸು ನೀರ ಬೇಲಿ

ನಮಿಸಿ ಭುಜಿಸು ನಿನ್ನಾಹಾರ ||

ನಿನ್ನದಿದೆ ನೂರೆಂಟು ತಪನೆ

ನಿನದೆ ಕಗ್ಗಂಟು ತಾಪತ್ರಯ

ನಿನದೆ ಸೂಜಿ ನಿನದೆ ದಾರ

ಹಚ್ಚೆ ತೇಪೆಯಾಗಿ ಅಲಂಕಾರ ||

ನೀ ಕಾಣದ ನಿನ್ನದೆ ಬೆನ್ನು

ಕಾಣುವರೆಲ್ಲ ಜಗದ ಮಂದಿ

ಹೊದಿಕೆಯೊ ಬಯಲಾಟವೊ

ಬೆನ್ನ ಬಿಟ್ಟುಬಿಡು ಅವರಿವರ ||

ನಿನ್ನೊಳಗನರಿಯದ ಹಸುಳೆ

ನೀನಾಗಲೆಂತು ಬೋಧಕ ?

ನೀನಾಗದೆ ಹುಸಿ ಬೊಗಳೆ

ನೀನಾಗು ನಿನ್ನೊಳಗೆ ಸಾಧಕ ||

– ನಾಗೇಶ ಮೈಸೂರು

೩೧.೧೨.೨೦೧೭

(ಚಿತ್ರಕೃಪೆ : ಅಂತರ್ಜಾಲ / ಸೋಶಿಯಲ್ ಮೀಡಿಯಾ ಗೆಳೆಯರಿಂದ ಸಂಗ್ರಹಿತ/ರವಾನಿತ ; ಮೊದಲನೆಯ ಚಿತ್ರ ಶ್ರೀಧರ ಬಂಡ್ರಿಯವರ ಲಲಿತಸಹಸ್ರನಾಮ ಪೋಸ್ಟಿನಿಂದ ಎರವಲು ಪಡೆದಿದ್ದು)

01458. ನಿನ್ನ ನೆನೆಯೆ..


01458. ನಿನ್ನ ನೆನೆಯೆ.. 
__________________________

ನಿತ್ಯ ಕುಡುಕರ ಕವನವೂ ಸೇರಿದಂತೆ ಏನೇನೊ ಬಡಬಡಿಸುತ್ತ, ಕವನ ಬರೆಯುತ್ತ ಅದೆಷ್ಟು ಪಾಪ ಜಮೆಯಾಗುತ್ತದೆಯೊ ಗೊತ್ತಿಲ್ಲ. ಅದಕ್ಕೆ ಪಾಪ ಪರಿಹಾರಾರ್ಥ ಅಂತ ಆಗೊಂದು, ಹೀಗೊಂದು ದೇವ/ದೇವಿ ಕವನ ಬರೆಯೋದು ಹೌದು. ಅಂತದ್ದೊಂದು ಸರಳ ಪದ್ಯ – ದೇವಿ ಸ್ತುತಿ ಇದು. ಯಥಾರೀತಿ ಲಲಿತಾಸಹಸ್ರನಾಮದ ಶ್ರೀಧರಬಂಡ್ರಿಯವರ ದೆಸೆಯಿಂದ ದೇವಿ ಚಿತ್ರಕ್ಕೆ ಕೊರತೆಯೆ? ಅವರಿಗೊಂದು ನಮನದೊಡನೆ ದೇವಿಯ ನೆನಕೆ.

ನಿನ್ನ ನೆನೆಯೆ..
__________________________


ಹೊತ್ತೇನು ಗೊತ್ತೇನು ?
ನಿನ್ನ ಸುತ್ತ ಸುತ್ತೇನು
ತಾಯಿ, ನೀನಲ್ಲವೆ ಜಗಜ್ಜನನಿ ?
ಮನಸ ನಿಲಿಸೆ ಮನಸಾ ಹಾಡಲಿ ||

ಬೇಡಲೇನೆ? ನೀಡೆ ನೀನೆ
ನಿನಗರಿವಿಲ್ಲವೆ ಒಳಿತು ಕೆಡಕು
ಬೇಡೆ ನಾನು ಬೇಟೆಗಾರ
ಬೇಡೆನ್ನದೆ ಎಲ್ಲ ಬೇಕೆನ್ನುವ ಹುಂಬ ||

ಹಗಲಿದ್ದರೇನೆ ರವಿ ದೀಪ
ನೆರಳು ತಾಯೆ ನಿನ್ನಯ ಕರುಣೆ
ಇರುಳಿದ್ದರೇನು ತಮ ತತ್ತರ
ನೀನಿಹೆ ಬೆಳಕಾಗಿ ಜಗದುದ್ದಗಲಕು ||

ಮಾಡಿದ್ದರೇನೆ ಲೌಕಿಕ ಕರ್ಮ
ನೆನೆಯಲೆಂದೇ ಮನ ಸಮಾಂತರ
ಮಾಡೆ ಸ್ಮರಣೆ ಅಪರಿಪೂರ್ಣ
ಮನ್ನಿಸಮ್ಮ ತಾಯೆ ನಿಕೃಷ್ಟ ಸಹಜ ||

ಇಟ್ಟಾಗ ಗಳಿಗೆ ಪೂಜೆಗೆ ಹೊತ್ತು
ಕೈ ಬಿಡಬೇಡವೆ ಮನ ಮರ್ಕಟ ಶುದ್ಧ
ಆ ಹೊತ್ತಾಗಲಿ ನಿನದೇ ಪೂರ್ತಿ
ತಪ್ಪಿಲ್ಲದಂತೆ ಜಪಿಸಲಿ ಮನ ಏಕಾಗ್ರ ||


– ನಾಗೇಶ ಮೈಸೂರು
(Nagesha Mn)
(Picture source internet / social media : taken from one of the lalitha sahasra naama post of Sridhar Bandri – thank you 😍🙏😊)

01375. ನಿನ್ನ ಮುಂಗುರುಳಾಟ..


01375. ನಿನ್ನ ಮುಂಗುರುಳಾಟ..
__________________________


ನಿನ್ನ ಮುಂಗುರುಳಾಟ
ನೋಡೆಲ್ಲೆಲ್ಲೊ ಉರುಳಾಟ
ಹಿಂದೆ ಸರಿಸಿದರು ಬಿಡದೆ
ಅತಿಕ್ರಮಣ ಮರಳಿ ಧಾಳಿ ||

ಎಷ್ಟು ಧೈರ್ಯ ರಪರಪನೆ
ಬಡಿಯುವ ಪದೇಪದೇ ಅತ್ತೆ
ಮಂದ ಮಾರುತನಾ ನೆಪದಿ
ಕೆನ್ನೆ ಮುತ್ತಿಕ್ಕುತ ಮತ್ತೆ ಮತ್ತೆ ||

ಎಂಥಾ ನಯವಂಚಕನವ !
ನಯವ ಬಳಸೇ ಜಾರುವ
ಕಟ್ಟಿದ ಬಂಧ ಬದಿ ಸರಿಸಿ
ಅವಳ ಸುತ್ತೆ ಹಾರಾಡುವ ||

ಚಿಗುರು ಬೆರಳೊಡನೆ ಸ್ಪರ್ಧೆ
ಎಳೆದಾಟ ಸರಿದಾಟ ಸತತ
ಯಾರು ಗೆದ್ದರೂ ಕೊನೆಗವಳೆ
ಗೆಲ್ಲುವಾ ಕ್ರೀಡೆ ಸುಖಾನುಭವ ||

ಗಾಳಿ ಜೋರಾಗಿ ಬೀಸಿದರೆ
ವದನ ಪೊರೆವ ನೆಪದಲಿ
ಸುತ್ತುವರಿದು ಮುತ್ತಿಬಿಡುವ
ಕೇಶರಾಶಿ ಕಂಡಾಗ ಅಸೂಯೆ ||

– ನಾಗೇಶ ಮೈಸೂರು
(Nagesha Mn)

(picture from http://tinazone.wordpress.com/category/ಪಡಖಾನೆಯ-ಕವಿತೆಗಳು/page/2/)

02180. ಗೆಳತಿ ನಿನ್ನ ಮನದಲಿ..


02180. ಗೆಳತಿ ನಿನ್ನ ಮನದಲಿ..

______________________________

ನಿನ್ನ ಮನದ ಕೊಳದಲಿ

ಸಿಕ್ಕಿಬಿದ್ದ ಮೀನೂ ನಾನು

ತೆಗೆದೆಸೆದೀಯಾ ಹೊರಗೆ ಜೋಪಾನ,

ಅಲ್ಲೆ ಕೊನೆಯುಸಿರು ಎಳೆದೇನು !

ನಿನ್ನ ಮನದಲ್ಲೇನಿದೆ ಎಂದು

ಬಿಡು ನೀನೇನು ಬಲ್ಲೆ, ಮರುಳೆ ?

ಈಜುತಿರುವೆನಲ್ಲೆ ಹಗಲಿರುಳು ಸತತ

ನಾ ತಾನೆ ನಿನ್ನೊಳಗೆಲ್ಲವ ಕಾಣಬಲ್ಲೆ !

ನಿನ್ನ ಚಂಚಲತೆ ಗೊಂದಲವೆಲ್ಲ

ಕಣ್ಣಿಗೆ ಕಟ್ಟಿದ ಚಿತ್ರಪಟವೆ ನಿನ್ನಾಣೆ

ಹೇಳದಿದ್ದರು ತಡಕಾಡಿಸೊ ತವಕ

ಕಾಣುತಿರುವೆನೆ ಹೇಳಿದೆ ನಿನ್ನ ಒಳಗಣ್ಣೆ !

ನಿಜವೆ ಅರಿತವರಿಲ್ಲ ಹೆಣ್ಣಿನ ಮನಸ

ಅಂತೇ ಅರಿತವರಿಲ್ಲ ಮೀನಿನ ಹೆಜ್ಜೆ

ನಾನೇ ಮೀನಾಗಿ ನಿನ್ನ ಮನದಲ್ಲೀಜೇ

ಅರಿಯದಿಹೆವೇನೆ, ನಮ್ಮಿಬ್ಬರದೆ ಗೋಜೆ !

ಬದುಕುವೆನಲ್ಲೆ ಕುಡಿದು ನಿನ್ನಂತರ್ಜಲವ

ಜೀವಂತಿಕೆಯಲಿಡುತ ನಿನ್ನ ಮನದ ಭಾವ

ಅಲ್ಲಿದ್ದರಿತರೆ ಗೆಳತಿ ನಿನ್ನಾ ಮನೋಭಾವ

ನೆರಳಂತನುಕರಿಸೆ ಸುಲಭ ನೀಡುತ್ತ ಮುದವ !

– ನಾಗೇಶ ಮೈಸೂರು

(Picture credit : Yamunab Bsy)

01003. ದೂರಲೆಂತು ನಿನ್ನ..


01003. ದೂರಲೆಂತು ನಿನ್ನ..
________________________


ನಾ ದೂರುವುದಿಲ್ಲ, ದೂರಲು ಹಕ್ಕಿಲ್ಲ
ಆಣೆ ಪ್ರಮಾಣ, ಬಿಡು ನೀ ಮಾಡಿರಲಿಲ್ಲ
ಕೊಟ್ಟಿರಲಿಲ್ಲ ವಚನ, ಹೊಣೆ ಹೊತ್ತಿರಲಿಲ್ಲ
ನಾನಂದುಕೊಂಡ, ಅನಿಸಿಕೆಯಷ್ಟೆ ಬೇರಿಲ್ಲ..

ನೀ ನಕ್ಕಾಗ ಬಿದ್ದ, ಗುಳಿ ಗಲ್ಲದ ಮೊಹರು
ಬೆಳದಿಂಗಳು ಚೆಲ್ಲಾಡಿ, ಬರೆದಿತ್ತೆ ನಿನ್ಹೆಸರು
ಕದ್ದು ಎದೆಯೊಳಗೆತ್ತಿ, ಕಟ್ಟಿಕೊಂಡೆ ಕನಸು
ತಪ್ಪೇನಿದೆ ನಿನದಲ್ಲಿ, ಎಲ್ಲ ನನ್ನದೆ ಹೊಲಸು..

ಮನದ ಹೊಲದ ತುಂಬ, ಬಿತ್ತನೆ ಬೀಜ ನಾಟಿ
ಫಲವತ್ತಿನ ಫಸಲು, ತೆಗೆವ ಹುನ್ನಾರದ ಚಾಟಿ
ಬೀಸಿ ತಿರುಗಿಸಿ ಬುಗುರಿ, ಆಡಿಸಿದ್ದೆ ಗೆದ್ದ ಹಾಗೆ
ತಪ್ಪೇನಿದೆ ನಿನದಲ್ಲಿ, ನೀನಲ್ಲ ಗೊಬ್ಬರ ಫಸಲಿಗೆ..

ಒಡ್ಡು ಕಟ್ಟಲ್ಹೊರಟೆ ಅಡ್ಡ, ನಿಲ್ಲದೆ ಹರಿವ ನೀರೆ
ತುಂತುರು ನೀರಾವರಿ, ಭಾವ ಸಿಂಚನದ ಸೀರೆ
ಉಣಿಸಿ ಉಡಿಸಿ ನಿನ್ನ, ಆರೈಕೆಗೆ ಯಜಮಾನಿಕೆ
ನನದೆಂದುಕೊಂಡರೆ ನಿನ್ನ, ತಪ್ಪೇನಿದೆ ತಪ್ಪೆಣಿಕೆ

ಶಿರದಿಂದಂಗುಷ್ಟದತನಕ, ಕಟ್ಟಿಕೊಂಡ ಕಲ್ಪನೆಗೆ
ನೀರೆರೆದು ಪೋಷಿಸಿಕೊಂಡೆ, ಒಂಟಿಕೈ ಚಪ್ಪಾಳೆಗೆ
ಇಂದೆಂತು ದೂರಲಿ, ನೀ ದೂರ ನಡೆದ ಮಾತ್ರಕೆ ?
ನಿನದೆ ತಪ್ಪಿದ್ದರು ಸರಿ, ನನದೆನ್ನೊ ಜೀವದ ತುಣುಕೆ !

– ನಾಗೇಶ ಮೈಸೂರು
೧೨.೧೧.೨೦೧೬
(Picture from Creative Commons)

00811. ನನ್ನ ನಿನ್ನ ನಡುವೆ


00811. ನನ್ನ ನಿನ್ನ ನಡುವೆ
________________________________


ನನ್ನ ನಿನ್ನ ನಡುವಿನ ತರಂಗ ದೂರ
ಅಳತೆ ಪಟ್ಟಿ ಹಿಡಿದು ಅಳೆದು ನೋಡಿದವರಾರು ?
ನನ್ನ ನಿನ್ನ ಮನಸುಗಳ ನೂರು ಬರಹ
ತರತರ ಸರಸ ವಿರಸ ರಸ ಓದಿದವರಾರು ?

ನನ್ನ ನಿನ್ನ ಕೈಗಳ ಹಿಡಿತದಲ್ಲಿ
ಗುರಿ ಬದುಕ ತುಡಿತ ಛಲ ಕಂಡವರಾರು ?
ನನ್ನ ನಿನ್ನ ಹೆಜ್ಜೆಯ ಜತೆ ಸಪ್ಪಳದಲ್ಲಿ
ಗಜ ಯೋಜನೆ ಯೋಚನೆ ಸುಳಿವ ಹಿಡಿದವರಾರು ?

ನನ್ನ ನಿನ್ನ ಬೌತಿಕ ದೂರದಲ್ಲಿ
ನಮ್ಮ ಪರಸ್ಪರ ಪ್ರೀತಿ ನೋಡಿದವರಾರು ?
ನನ್ನ ನಿನ್ನ ವೈಯಕ್ತಿಕ ಅವಕಾಶದಲಿ
ನಾವಿಬ್ಬರು ಬೆಳೆವುದ ಗಣಿಸಿದವರಾರು ?

ನನ್ನ ನಿನ್ನ ನಡುವಿನ ಮಾತಿನಲ್ಲಿ
ಗೌರವಾದರ ಗಮನ ಪರಿಗಣಿಸಿದವರಾರು ?
ನನ್ನ ನಿನ್ನ ಜೋರು ಮಾತ ಜಗಳದಲ್ಲಿ
ನಮ್ಮ ಸರಿ ತಪ್ಪುಗಳ ಅರಿಮೆ ಹುಡುಕಿದವರಾರು ?

ನನ್ನ ನಿನ್ನ ನಡುವೆ ಯಾರಿಲ್ಲ ಬಿಡು
ನಾನು ನೀನು ತಾನೆ ನಮ್ಮ ಮನದ ಕೂಗು
ಯಾರೇನಂದುಕೊಳುವರೆಂದು ನಾವು
ಚಿಂತಿಸದೆ ನಡೆವ ಬದುಕ ಗಾಲಿಯ ತುಳಿದು..

– ನಾಗೇಶ ಮೈಸೂರು

(Picture source: http://urmylyf.blogspot.in/2012/08/45-things-girl-want-but-wont-ask-for.html)