01721. ನೀ ಚಾಟಿ, ನಾ ಬುಗುರಿ..


01721. ನೀ ಚಾಟಿ, ನಾ ಬುಗುರಿ..

__________________________________________

ನಗಿಸಿ ಮರೆಸಯ್ಯ ದುಃಖ

ಅಳಿಸುವುದೇ ನಿನ್ನ ಹಕ್ಕಾ?

ಅಳಿಸಿದರೇನು ಅತ್ತೇನೆ ?

ಜಿಗಿದೇಳುವೆ ನನಗೆ ನಾನೆ ! ||

ನೀ ಸುರಿಸೋ ಮಳೆಯಲ್ಲು

ಕಾಮನ ಬಿಲ್ಲಿನ ಕಮಾನು

ತೋಯುವೆ ಜಳಕದ ಹಾಗೆ

ಕೊಚ್ಚಿಹೋಗುವ ಹುಚ್ಚ ನಾನಲ್ಲ ||

ಚಾಟಿಯಿದೆಯಂದು ನಿನ ಕೈಲಿ

ಬುಗುರಿ ನನ್ನಾಡಿಸುವೆ ಕುಣಿಸಿ

ತಲೆ ಸುತ್ತಿ ಬೀಳುವತನಕ ಬಿಡೆ

ಸುತ್ತುವೆ ನಿನ್ನಾಜ್ಞೆ ಧಿಕ್ಕರಿಸುತ್ತ ||

ಸೋತು ಬಿದ್ದರು ಬಿಡದೆ ಎತ್ತಿ

ಮತ್ತೆ ಸುತ್ತಿ ಆಡಿಸುವೆ ಹೊಸತು

ಸೊರಗಿದರು ಬಿಡದೆ ಸೊರಗಿಸೊ

ನಿನ್ನಾಟವನರಿತೂ ಸುತ್ತುವೆನು ||

ನಗುವೆ ನಿನ್ನಂತೆ ಆಡಿ ಬಿದ್ದರು

ಸಂತಸವೆ ಅತ್ತು ಕೊರಗಿದರು ?

ಗೊತ್ತಾಗದೊ ನಿನ್ನಾ ಹವಣಿಕೆ

ಎಣಿಸದೆ ಗಣಿಸದೆ ನಾ ಸುತ್ತಿರುವೆ ! ||

– ನಾಗೇಶ ಮೈಸೂರು

೧೦.೦೫.೨೦೧೮

(Picture source: wiktionary)

01706. ಪ್ರಿಯವೆ ನೀ ನನಗೆ…!


01706. ಪ್ರಿಯವೆ ನೀ ನನಗೆ…!

________________________________________

ತುಂಬಿಕೊಳಲೆಂತೆ ನಿನ್ನ ಕಣ್ತುಂಬಾ ?

ನೋಟವಾ ಮರೆಸಿ ಎಡವಿಸಿ ಬೀಳಿಸೆ ನನ್ನ

ಬಿದ್ದಾಗ ನೋಯುವೆ ನೀನೆಂಬ ಭೀತಿ ನನಗೆ ! ||

ತುಟಿಯಲೆಂತಿರಿಸಲಿ ಸದಾ ನಿನ್ನ ಹೆಸರ ?

ಮಾತಿನ ಭರದೆ ಜಾರಿ ಸಿಕ್ಕರೆ ದಂತದಡಿ

ಹೆಸರು ಚೂರಾಗಿಬಿಡುವ ಆತಂಕವೆ ನನಗೆ ! ||

ಮನದ ತುಂಬ ನಾ ತುಂಬಿಕೊಳಲೆಂತೆ ನಿನ್ನ ?

ನೀ ತುಂಬಿ ತುಳುಕಿ ಹೊರದೂಡೆ ನನ್ನ ಮನಸಾ

ನಿನ್ನೊಬ್ಬಂಟಿ ಮನಸ ಕಾಯಲಾಗದ ದುಃಖ ನನಗೆ ||

ಮೀಸಲಿಡಲೆಂತೆ ನನ್ನೆಲ್ಲ ಪ್ರೀತಿ ನಿನಗೊಬ್ಬಳಿಗೆ?

ನಿನ್ನ ಹೆತ್ತವರು ಸುತ್ತವರು ಭವಿತ ಸಂತತಿ ತಕರಾರು

ಸ್ವಾರ್ಥಿ ನೀನೆಂದು ದೂರುವರೆಂಬ ಚಿಂತೆಯೆ ನನಗೆ !||

ಅದಕೆ ನೀ ನೀನಾಗಿರು ಸಾಕು ಇದ್ದರು ಬರಿ ಜತೆಗೆ

ಆವರಣವಿರಲಿ ಸಡಿಲ ತಂಗಾಳಿ ಆಹ್ಲಾದದ ಹಾಗೆ

ಬೇಕೆಂದಾಗ ಸುಳಿದಾಡೆ ಸಾಕು, ಪ್ರಿಯವೆ ನೀನೆನಗೆ! ||

– ನಾಗೇಶ ಮೈಸೂರು

೨೨.೦೪.೨೦೧೮

(Picture source : Internet / Social media)

01671. ನೀ ನನಗಂಟಿದ ವ್ಯಾಧಿ..! (ಲಘು ಹಾಸ್ಯ)


01671. ನೀ ನನಗಂಟಿದ ವ್ಯಾಧಿ..! (ಲಘು ಹಾಸ್ಯ)

______________________________________________

ಹೇಗಿದಿಯಾ ನನ್ನ ಪ್ರೀತಿಯ ತಲೆ ನೋವೆ?

ಅಂದರೇಕೆ ಹೀಗೆ ಸಿಡುಕು ಮೋರೆ, ತರವೆ ?||

ನನಗೆ ನೀ ನಿಜಕು ತಲೆನೋವೆ ನಿರಂತರ

ನೆನಪಿಸಲದೆ ನಿನ್ನ ಮರೆಯಬಿಡದ ಸಹಚರ ! ||

ನೀ ನನ್ನ ಬಾಳಿಗಂಟಿದ ನೆಗಡಿ ನಿನ್ನಾಣೆಗು

ಸೀನಿದರು ಸಿಡಿಸಿ ಸುತ್ತೆಲ್ಲ ನಿನದೆ ಗುನುಗು ||

ಎಡಬಿಡದೆ ಕಾಡುವ ವಿಷಮಶೀತ ಜ್ವರ ನೀನೆ

ಸೊರಗಿ ಬೆವರಿ ತನು ಚಂಚಲ ಚಿತ್ತ ನಿನದೇನೆ ||

ಬಿಡು ಬೇರೆ ಮಾತೇಕೆ, ಸತ್ಯ ನೀ ಜೀವಕಂಟಿದ ಅರ್ಬುಧ

ಬಿಡದೆ ಕಾಡುತಿದ್ದರೆ ತಾನೆ ನಿತ್ಯ ಸ್ಮರಣೆ, ಗಟ್ಟಿ ಸಂಬಂಧ ? ||

– ನಾಗೇಶ ಮೈಸೂರು

೨೮.೦೩.೨೦೧೮

(Picture source: internet / social media)

01536. ನಿನ್ನ ನೀ ನೋಡಿಕೊ ಮೊದಲು


01536. ನಿನ್ನ ನೀ ನೋಡಿಕೊ ಮೊದಲು

___________________________________

ನಿನ್ನ ನೀ ನೋಡಿಕೊ ಮೊದಲು

ನಿನ್ನ ಮನದ ಕನ್ನಡಿಯಲ್ಲಿ

ಬಿಡು ಅಲ್ಲಿಲ್ಲಿ ಇಣುಕುವಾಟ

ನಿನ್ನಂತೆ ಇಣುಕುವರು ನಿನ್ನಲಿ ||

ನಿನ್ನದಿದೆ ಎಲೆ ನಿನದೆ ಊಟ

ನಿನ್ನ ಜಗದಗಲ ವಿಸ್ತಾರ

ಸುತ್ತ ಚಿಮುಕಿಸು ನೀರ ಬೇಲಿ

ನಮಿಸಿ ಭುಜಿಸು ನಿನ್ನಾಹಾರ ||

ನಿನ್ನದಿದೆ ನೂರೆಂಟು ತಪನೆ

ನಿನದೆ ಕಗ್ಗಂಟು ತಾಪತ್ರಯ

ನಿನದೆ ಸೂಜಿ ನಿನದೆ ದಾರ

ಹಚ್ಚೆ ತೇಪೆಯಾಗಿ ಅಲಂಕಾರ ||

ನೀ ಕಾಣದ ನಿನ್ನದೆ ಬೆನ್ನು

ಕಾಣುವರೆಲ್ಲ ಜಗದ ಮಂದಿ

ಹೊದಿಕೆಯೊ ಬಯಲಾಟವೊ

ಬೆನ್ನ ಬಿಟ್ಟುಬಿಡು ಅವರಿವರ ||

ನಿನ್ನೊಳಗನರಿಯದ ಹಸುಳೆ

ನೀನಾಗಲೆಂತು ಬೋಧಕ ?

ನೀನಾಗದೆ ಹುಸಿ ಬೊಗಳೆ

ನೀನಾಗು ನಿನ್ನೊಳಗೆ ಸಾಧಕ ||

– ನಾಗೇಶ ಮೈಸೂರು

೩೧.೧೨.೨೦೧೭

(ಚಿತ್ರಕೃಪೆ : ಅಂತರ್ಜಾಲ / ಸೋಶಿಯಲ್ ಮೀಡಿಯಾ ಗೆಳೆಯರಿಂದ ಸಂಗ್ರಹಿತ/ರವಾನಿತ ; ಮೊದಲನೆಯ ಚಿತ್ರ ಶ್ರೀಧರ ಬಂಡ್ರಿಯವರ ಲಲಿತಸಹಸ್ರನಾಮ ಪೋಸ್ಟಿನಿಂದ ಎರವಲು ಪಡೆದಿದ್ದು)

01518. ನೀ ನನಗೆ, ನಾ ನಿನಗೆ


01518. ನೀ ನನಗೆ, ನಾ ನಿನಗೆ

______________________________

ಇದು ಹೊಂದಾಣಿಕೆ ಬದುಕಕ್ಕ

ನೀ ಕೇರು ಮೊರದಲ್ಲಿ ಅಕ್ಕಿ

ಜೋಪಾನ ಚೆಲ್ಲೀಯೇ ನೆಲಕೆ

ಬಿದ್ದರು ನಾ ಆಯುವೆ ಮೇಯ್ವೆ ||

ಗೊತ್ತಕ್ಕ ತುತ್ತಿನ ಕೂಳು ತತ್ವಾರ

ಬದುಕಲ್ಲ ಸಾಹುಕಾರ ಮೊತ್ತ

ಕೊಡಲಿದ್ದು ಬಡವನ ಭಂಡಾಟ

ಮೊಂಡಾಟ ದೋಚುವ ಕೊಡದೆ ||

ಹೌದಕ್ಕ ನಿನ ನೆರಳಲ್ಲಿದೆ ಕೂಸು

ಪ್ರತಿ ಹೊಟ್ಟೆ ಸಂಭಾಳಿಸಬೇಕು

ನನಗು ನೆರಳಿದೆ ಮನೆಗೊಡೆಯ

ಚಿಳ್ಳೆಪಿಳ್ಳೆ ಹಸಿದು ಕಾಯೆ ದಾರಿಯ ||

ಬಿಡೆ ಚಿಂತೆ ಅಕ್ಕ ನನ್ನವಳು ಕಾವು

ಇಡುತಾಳೆ ಮೊಟ್ಟೆ ತಪ್ಪದೆ ದಿನದಿ

ಹಸಿದ ಕಂದಮ್ಮನಿಗುಣಿಸು ಅದನೆ

ಮಿಕ್ಕುಳಿದವು ಮರಿ ದಾರಿ ಸರಿಯೆ? ||

ನೀನುಂಡು ಮಿಕ್ಕಿದ್ದೆ ಸಾಕೆ ನನ್ನೊಡತಿ

ನಾನುಂಡು ನೀಡುವೆ ಮತ್ತೆ ನಿನಗೆ

ನಾನಾಗೆ ಬಾಡೂಟದ ಸರಕು ನಡುವೆ

ನನ್ನ ವಂಶಾವಳಿ ಮತ್ತದೆ ಹೊಂದಾಣಿಕೆಗೆ ||

– ನಾಗೇಶ ಮೈಸೂರು

(Nagesha Mn)

(Picture source – internet / social media received via FB friends – thanks!)

01343. ನೀ ಹುಬ್ಬು ಗಂಟಿಕ್ಕಿ..


01343. ನೀ ಹುಬ್ಬು ಗಂಟಿಕ್ಕಿ..
_______________________


ನೀ ಹುಬ್ಬು ಗಂಟಿಕ್ಕಿ ಕೂತರೆ ಹೀಗೆ
ಯಾರಲ್ಲಿ ಹೇಳಲೆ ಎದೆಯೊಳಗಿನಾ ಬೇಗೆ ?
ಒಳಗೇನೋ ತಳಮಳ ನಾ ಹೇಳಲೆಂತೆ ?
ಬಿಗುಮಾನ ಬಿಡದು, ಬಿಟ್ಟು ನಗಬಾರದೆ ? ||

ನುಡಿದದ್ದು ನಿಜವೆ ನೀ ಚಂದ ಕೋಪದೆ
ಅದಕ್ಹೀಗೆ ಚಂದಾ ಕಟ್ಟಿಸುವುದು ತರವೆ ?
ಹುಸಿಮುನಿಸು ಸೊಗಸು ಮರೆಯ ತುಂಟಾಟ
ತರವಲ್ಲ ಒಲವ ಕಡೆಗಣಿಸೊ ಹುಡುಗಾಟ ||

ಅಹುದು ಇದೆ ‘ನಾನು’ ಎಲ್ಲದರ ಹಿಂದೆ
ಬಿಡು ಸುಲಭವಲ್ಲ ‘ನೀನೆಂಬ’ ಶರಣಾಗತಿ
ಮುಟ್ಟುವುದು ಬೇಡ ನಾನೆಂಬ ಅಹಮಿಕೆ
ನಾವಾದರೇ ನಾನು ಸಾಗಬಹುದು ದೂರಕೆ ||

ಮಾತಿಲ್ಲದೆ ಮೌನ ಕಟ್ಟುತಿದೆ ಕಟಕಟೆ
ಬರಿ ಪಾತ್ರೆ ಸದ್ದಿನ ವಕಾಲತ್ತಿನಲಿ ವಿಚಾರಣೆ
ಯಾರಿಲ್ಲ ವಕೀಲಿ, ವಶೀಲಿ ಮಾಡುವ ಛಾತಿ
ನಿನ್ನ ಹೃದಯದ ಕೋರ್ಟದು ಅನ್ಯಥಾ ನಾಸ್ತಿ! ||

ಸಡಿಲಿಸು ಬಿಗಿ ಮುಖವ ಸಾಕಿನ್ನು ಶಿಕ್ಷೆ
ನಿನ್ನವನ ಹೀಗೆ ಬೇಡಿಸಲೇಕೆ ಪದೆಪದೆ ಭಿಕ್ಷೆ ?
ಸುಮ್ಮನೆಸೆದುಬಿಡು, ಮುಗುಳು ನಗೆಯೊಂದ
ಹುಸಿಯಾದರೂ ಸರಿ, ಸೋತೆನೆನ್ನುವೆ ನಾನೆ ||

– ನಾಗೇಶ ಮೈಸೂರು
(Nagesha Mn)

(Picture source: This work is licensed under a Creative Commons Attribution 3.0 Unported License)

01210. ಹನ್ನೆರಡು, ನೀ ಸರಿಯಿಲ್ಲ ಬಿಡು…


01210. ಹನ್ನೆರಡು, ನೀ ಸರಿಯಿಲ್ಲ ಬಿಡು…
________________________________


ಹಾಳು ಹನ್ನೆರಡು
ಕಾಯಬೇಕಿತ್ತು ಇನ್ನೊಂದೆರಡು ನೂರು
ಯಾಕವಸರಿಸಿದ್ದು ಹೊರಡು ಹೊರಡೆಂದು ?
ಹೊರೆಯಾಗಿತ್ತೆ ವರನಟನೊಂದು ಗುಲಗಂಜಿ ?

ಗಡಿಯಾರದ ಸುತ್ತಿನ
ಕೊನೆಯಂಕಿಯಾಟ ನಿನದು ಹೌದಪ್ಪ
ಮತ್ತೆ ಸುತ್ತುವುದಿಲ್ಲವೆ ಒಂದರಿಂದೆಣಿಸುತ್ತ ?
ಸುತ್ತಲಿಲ್ಲೇಕೆ ಸುತ್ತ ಅಣ್ಣನ ಉಸಿರ ತುಂಬುತ್ತ..?

ಮಾಸಗಳನ್ನೆರಡು ನಿಜವೇ
ಕೊನೆ ಮಾಸವದೆಂತಾಗುವುದು ಅಂತಿಮ ?
ತುಂಬಿಸುತೊಂದು ವರ್ಷ ಉರುಳುತ್ತ ಮರುವರ್ಷ
ಯಾಕುರುಳಿಸಲಿಲ್ಲ ದಾಳ, ಕಾಲವೆಂಬ ಮನೆಹಾಳ ?

ಮತ್ಹನ್ನೆರಡೇ ದಿನವಿತ್ತು ಬಾಕಿ
ಮತ್ತೊಂದು ಜನುಮದಿನದ ಪಟಾಕಿ
ಹೊತ್ತಿಸಬಿಡದೆ ಹೊತ್ತಿಸಿದೆ ದೊಂಬಿ ಗಲಭೆ
ಒದರಿ ಹೊರಡುವುದೇನು ಅಷ್ಟು ಸುಲಭದ ಮಾತೆ ?

ಹುಟ್ಟು ಸಾವು ಒಂದೇ ಮಾಸದಿ
ಕನ್ನಡದೇಕೀಕರಣ ಅಲ್ಲೂ ಮಾತಾಡಿತ್ತಾ ?
ಮೊದಲತ್ತು ಸಾವಿಗೆ ಕಂಬನಿ ಸುರಿಸಿ ಋಣಮುಕ್ತ
ತದನಂತರ ಜನುಮದ ಉತ್ಸವ ಮಾಡಿಸೊ ಕಸರತ್ತಾ ?

– ನಾಗೇಶ ಮೈಸೂರು
(Picture source : internet / multimedia)