01458. ನಿನ್ನ ನೆನೆಯೆ..


01458. ನಿನ್ನ ನೆನೆಯೆ.. 
__________________________

ನಿತ್ಯ ಕುಡುಕರ ಕವನವೂ ಸೇರಿದಂತೆ ಏನೇನೊ ಬಡಬಡಿಸುತ್ತ, ಕವನ ಬರೆಯುತ್ತ ಅದೆಷ್ಟು ಪಾಪ ಜಮೆಯಾಗುತ್ತದೆಯೊ ಗೊತ್ತಿಲ್ಲ. ಅದಕ್ಕೆ ಪಾಪ ಪರಿಹಾರಾರ್ಥ ಅಂತ ಆಗೊಂದು, ಹೀಗೊಂದು ದೇವ/ದೇವಿ ಕವನ ಬರೆಯೋದು ಹೌದು. ಅಂತದ್ದೊಂದು ಸರಳ ಪದ್ಯ – ದೇವಿ ಸ್ತುತಿ ಇದು. ಯಥಾರೀತಿ ಲಲಿತಾಸಹಸ್ರನಾಮದ ಶ್ರೀಧರಬಂಡ್ರಿಯವರ ದೆಸೆಯಿಂದ ದೇವಿ ಚಿತ್ರಕ್ಕೆ ಕೊರತೆಯೆ? ಅವರಿಗೊಂದು ನಮನದೊಡನೆ ದೇವಿಯ ನೆನಕೆ.

ನಿನ್ನ ನೆನೆಯೆ..
__________________________


ಹೊತ್ತೇನು ಗೊತ್ತೇನು ?
ನಿನ್ನ ಸುತ್ತ ಸುತ್ತೇನು
ತಾಯಿ, ನೀನಲ್ಲವೆ ಜಗಜ್ಜನನಿ ?
ಮನಸ ನಿಲಿಸೆ ಮನಸಾ ಹಾಡಲಿ ||

ಬೇಡಲೇನೆ? ನೀಡೆ ನೀನೆ
ನಿನಗರಿವಿಲ್ಲವೆ ಒಳಿತು ಕೆಡಕು
ಬೇಡೆ ನಾನು ಬೇಟೆಗಾರ
ಬೇಡೆನ್ನದೆ ಎಲ್ಲ ಬೇಕೆನ್ನುವ ಹುಂಬ ||

ಹಗಲಿದ್ದರೇನೆ ರವಿ ದೀಪ
ನೆರಳು ತಾಯೆ ನಿನ್ನಯ ಕರುಣೆ
ಇರುಳಿದ್ದರೇನು ತಮ ತತ್ತರ
ನೀನಿಹೆ ಬೆಳಕಾಗಿ ಜಗದುದ್ದಗಲಕು ||

ಮಾಡಿದ್ದರೇನೆ ಲೌಕಿಕ ಕರ್ಮ
ನೆನೆಯಲೆಂದೇ ಮನ ಸಮಾಂತರ
ಮಾಡೆ ಸ್ಮರಣೆ ಅಪರಿಪೂರ್ಣ
ಮನ್ನಿಸಮ್ಮ ತಾಯೆ ನಿಕೃಷ್ಟ ಸಹಜ ||

ಇಟ್ಟಾಗ ಗಳಿಗೆ ಪೂಜೆಗೆ ಹೊತ್ತು
ಕೈ ಬಿಡಬೇಡವೆ ಮನ ಮರ್ಕಟ ಶುದ್ಧ
ಆ ಹೊತ್ತಾಗಲಿ ನಿನದೇ ಪೂರ್ತಿ
ತಪ್ಪಿಲ್ಲದಂತೆ ಜಪಿಸಲಿ ಮನ ಏಕಾಗ್ರ ||


– ನಾಗೇಶ ಮೈಸೂರು
(Nagesha Mn)
(Picture source internet / social media : taken from one of the lalitha sahasra naama post of Sridhar Bandri – thank you 😍🙏😊)