01179. ಕಾದವರ ಪರಿತಪನೆ…


01179. ಕಾದವರ ಪರಿತಪನೆ…
________________________

ಭೃಂಗವೊಂದು ಹಾರುತ
ಹುಡುಕಾಡಿತ್ತು ಮಧುವ
ಹೀರುವ ಬಯಕೆಯ ಬಟ್ಟಲು
ಹಿಡಿದು ಹೊರಟಿತ್ತು ಔತಣಕೆ..

ಸಿರಿ ಸಿಂಗಾರ ಅನುಚಿತ
ಪಾದರಕ್ಷೆಗೂ ಬಿಡಲೊಲ್ಲ
ಪಾದದಡಿಗಂಟಿ ಪರಾಗ ರೇಣು
ಯಾವ ಹೂವಿನ ಮಡಿಲ ಸ್ವತ್ತೊ..?


ದಾರಿಯಲಿದ್ದಳಲ್ಲ ಯಾಮಿನಿ
ನಲ್ಲನ ಕಾದು ಕುಳಿತ ವಿರಾಗಿಣಿ
ಚಂಚಲೆ ಸುನಯನ ಕಾಣುತಲೇ
ಭೃಂಗರಾಣಿಯ ನೆನಪಾಗಿತ್ತು…!

ಜೊಂಪೆ ಜೋತಾಡಿ ಮುಂಗುರುಳು
ದಾರಿ ತಪ್ಪಿಸಿತ್ತಲ್ಲ ದುಂಬಿಗೂ
ಮನದುಯ್ಯಾಲೆ ಜೋತಾಡಿಸಿ ಮತ್ತು
ಸುತ್ತು ಸುತ್ತತೊಡಗಿ ಝೇಂಕರಿಸಿ..

ಗಾಬರಿಯಲವಳ ತುಟಿ ಬಿರಿದು
ಸುಕೋಮಲಾಕ್ರಂದನ ಹೂ ನಗೆಯಾಗೆ
ಮುತ್ತಿನಾಧರ ದಳವೆಂದು ಸಂಭ್ರಮಿಸಿ
ಮುತ್ತಿಟ್ಟು ಹೀರಿತ್ತು ಸಿಹಿ ಜೇನ ಸಂತೃಪ್ತ..

ತುಂಟ ಹೆಜ್ಜೆಯೂರಿ ಚೆಲ್ಲಿಟ್ಟ ಪರಾಗ ರೇಣು
ಕೆಂದುಟಿಯ ತುಂಬ ಅರಿಶಿನದ ಕಾನನ
ಕದ್ದೋಡಿದ ದುಂಬಿ ಸುಳಿವ ಕಾಣದ ನಲ್ಲ
ಹೊಸದೇನು ರಂಗೆನಲು ನಾಚಿ ಕೆಂಪಾದಳು..

ದುಂಬಿ ಮುಟ್ಟದ ಹೂವು ಕಾದು ಬಳಲಿ
ಪರಿತಪಿಸಿತ್ತು ಕೊರಗಿ ಖಾಲಿ ಮಧುಪಾತ್ರೆ
ದಾರಿಗಡ್ಡ ಕಾದವಳ ಶಪಿಸುತ್ತಲೆ ಮುನಿದು
ಮುಡಿಗೇರಿತ್ತವಳ ನಲ್ಲನೊಲುಮೆಯ ಕುರುಹಾಗಿ..


– ನಾಗೇಶ ಮೈಸೂರು
೧೮.೦೩.೨೦೧೭
(Pictures : internet, social media and wikshanari)