01688. ಪಿಸುಮಾತು..


01688. ಪಿಸುಮಾತು..

________________________

ಪಿಸುಮಾತಿದು ಗುಟ್ಟಲ್ಲ

ರಟ್ಟಾಗಿಸೊ ಮನಸಿಲ್ಲ

ಮೆಲುದನಿಸುತ್ತ ಹಾಡಾಗುತಿದೆ

ಹಾಡಿನ ಭಾವ ಮನದೆ ಕುದುರೆ ||

ಮೆಲುಕು ಹಾಕುತ ಮಾತು

ಒಳಗೇನೇನೊ ಅನುರಣಿಸಿತ್ತು

ಅರಿವಾಗುತಿದೆಯೆ ಏನೊ ತಿಲ್ಲಾನ ?

ಬಡಿದೆಬ್ಬಿಸಿದಂತೆ ಏನೇನೊ ತಲ್ಲಣ ||

ಏನಿದು ಪದ, ಶಬ್ಧದಾ ಶಕ್ತಿ ?!

ಕೃತಿಗು ಮುನ್ನವೆ ಫಲಿತ ರೀತಿ

ಯಾರಿಗೂ ಸೋಲದ ಭೀಮಕಾಯ

ಕಣ್ಮುಚ್ಚಿ ಹಾಲು ಮಾರ್ಜಾಲ ನ್ಯಾಯ ||

ಮಾತಿದು, ಮಾತಲ್ಲ ಸಂವಹನ

ಹೇಳಲಾಗದ್ದು, ತಾನಾಗುತ ಕವನ

ಬಿಟ್ಟಪದಗಳ ತುಂಬಿಕೊಳುವೆ ತಾನೆ ?

ಅನುಮಾನವಿಲ್ಲ, ನಾ ಬಲ್ಲೆ ನೀ ಜಾಣೆ ||

ನೀನಾಡದ ಮಾತು, ಮೌನ ಸೊಗಡು

ಪಿಸುಮಾತಿನ ಬದಲಿ ಕಿರುನಗೆ ಕಾಡು

ಬಿಡಿಸಿಒಗಟ, ಇರಲಿ ಬಿಡಲಿ ಮೊತ್ತ

ಬಿಟ್ಟುಬಿಡು ಹಠ, ನಿನ್ನಾಗಿಸುವೆ ನನ್ನ ಚಟ ||

– ನಾಗೇಶ ಮೈಸೂರು

೧೩.೦೪.೨೦೧೮

(Picture source: Internet / social media)

01505. ಕುಸುಮಗಳದೀ ಪಿಸುಮಾತು..


01505. ಕುಸುಮಗಳದೀ ಪಿಸುಮಾತು..

____________________________

ಜೋಡಿ ಕುಸುಮ ಸಮಾಗಮ

ಕಾದಂತಿದೆ ಯಾರಪ್ಪಣೆಗೊ?

ವಿರಹ ಧೂರ್ತ ವಿಹಾರ ಸ್ವಸ್ಥ

ಪರಾಗ ಸ್ಪರ್ಶ ಚೆಲ್ಲಾಟಕೆ ಬಾ ! ||

ಕುಸುಮ ಜಗದಲೆಲ್ಲಿದೆ ಅಸಮ?

ವಂಶಾಭಿವೃದ್ಧಿ ನಿರಂತರ ಸಮರ

ಇದ್ದರಾಯ್ತು ಪುರುಷ ಶಲಾಕಾಗ್ರ

ಪ್ರಕೃತಿ ಅಂಡಾಶಯ ಅಮೂಲಾಗ್ರ ||

ಯಾರಿಲ್ಲಿ ಪುರುಷಾ ಪ್ರಕೃತಿ ?

ಆಕೃತಿಯಲಷ್ಟೆ ಸಾಕಾರ ತನ

ನೆರೆ ಹೊರೆಯಲಿದ್ದೂ ಅಂತರ

ಅಭ್ಯಂತರವಿರದಿದ್ದರು ದೂರ! ||

ಬರಲೇಳು, ಯಾರೊ ಹಾರುತ

ಚಿಟ್ಟೆ ಪತಂಗ ದುಂಬಿಯ ತರ

ಸಾಕಲ್ಲ ಬೀಸೊ ತಂಗಾಳಿ ಸ್ಪರ್ಶ

ಪರಾಗರೇಣು ಪ್ರೋಕ್ಷಿಸೆ ಸಂಗಮ ||

ಏಕಾಂತವಲ್ಲ ಸಮರ್ಪಣ ಭಾವ

ಸಭ್ಯತೆ ಮೀರಿ ಸಂಗಮದಾತುರ

ಅದಕೆಂದೆ ಜಗದ ಚೆಲುವೆಲ್ಲ ಇಲ್ಲೆ

ಆಸ್ವಾದಿಸು ಒಣಗಿ ಬಾಡುವ ಮುನ್ನ ||

ಪಿಸುಗುಟ್ಟಿ ಕುಸುಮಗಳೆರಡು

ತಡಕಾಡಿಕೊಂಡಂತಿವೆ ತಮ್ಮೆ

ಪಿಸುಮಾತುಲಿ ಪಸರಿಸಿ ನಶೆ

ಮತ್ತೇರಿಯೂ ಸುಮ್ಮ ಕೂತಿವೆ ||

– ನಾಗೇಶ ಮೈಸೂರು

೨೪.೧೨.೨೦೧೭