01651. ಜರಾಸಂಧ ಪ್ರೀತಿ..


01651. ಜರಾಸಂಧ ಪ್ರೀತಿ..

____________________________

ಎದೆ ಮುಟ್ಟಿ ಹೇಳುವೆ ಸತ್ಯ

ನೀನಷ್ಟೇ ಅಲ್ಲಿ ಅನಂತ

ಬೆರಳ್ಹಾಕಿದೆ ಎದೆಗೂ ಗೀಟು

ದಾಟಲಿಲ್ಲ ಮನ ಲಕ್ಷ್ಮಣ ರೇಖೆ ||

ಎದೆ ತಟ್ಟಿ ಹೇಳುವೆ ಸತ್ಯ

ನಿನ್ನ ಬಿಟ್ಟರಾರಿಲ್ಲವಲ್ಲಿ

ನಿನಗಷ್ಟೆ ನುಡಿದ ಬಿದಿರ ಕೊಳಲು

ನೀನಷ್ಟೆ ಕೇಳೊ ಮೋಹನ ರಾಗ ||

ಯಾಕೊ ಮಾತಷ್ಟೆ ಭಾಗ್ಯ

ಬರಿದಾಗಿ ಸದ್ದಿನೊಡಲು

ಎದೆಯೊಳಗೊತ್ತರಿಸಿ ಕೂತೇನು

ತುಂಬಲಿಲ್ಲ ಮಡಿಲು ಪ್ರೀತಿ ಕಡಲು ||

ತತ್ತರಿಸಿಯು ಉತ್ತರವಿಲ್ಲ

ಒತ್ತರಿಸಿ ಮಾತಿಗು ಮೌನ

ನಿನಗಿತ್ತರು ಅಪಾರ ಸಾಗರ

ಕ್ಷಮಿಸೆ ಸುತ್ತಾ ಲವಣದ ಕಡಲು ! ||

ಸಾಗರ ಸರೋವರವೆ

ಎದುರು ಬದುರಿನ ಪಥವೆ

ಸೀಳಿ ಜರಾಸಂಧ ಪ್ರೀತಿ ಗೌಣ

ಕಡಿದರು ಭಾಗ ಸೇರದ ಕರ್ಮ ||

– ನಾಗೇಶ ಮೈಸೂರು

೧೪.೦೩.೨೦೧೮

(Pic: from a FB post of Shylaja Ramesh – thanks madam 🙏👍😊)

01394. ಪ್ರೀತಿ ಕುಲುಮೆಯಲಿ..


01394. ಪ್ರೀತಿ ಕುಲುಮೆಯಲಿ..
____________________________


ಬದುಕಿನಾ ಕುಲುಮೆ
ಹೊತ್ತಿಸಿದ ಒಲುಮೆ
ಇನ್ನೂ ಬತ್ತದ ಚಿಲುಮೆ
ಉರುವಲು ಪ್ರೀತಿ ಕಾವಲು ||

ಬಾಳಿನಲದೆ ಹೊಡೆತ
ನಮ್ಮನ್ನೂ ತಟ್ಟುತ್ತ
ಕಾಡಲ್ಹೊರಟ ಹೊತ್ತು
ನಮ್ಮ ಪ್ರೀತಿಯದೆ ಕಾಯ್ದಿತ್ತು ||

ಅಡೆತಡೆ ಕಷ್ಟ ಕಾರ್ಪಣ್ಯ
ಕಾದ ಕಬ್ಬಿಣ ತಾರುಣ್ಯ
ಒಂದರ ಮೇಲೊಂದು ಹೊಡೆತ
ನಮ್ಮ ಮೊನೆಚಾಗಿಸಿ ಸಲಹಿತ್ತ ||

ಇಂದು ನೆಮ್ಮದಿ ಬದುಕು
ನಮ್ಮ ಲಹರಿಯ ಪಲುಕು
ನೆಲೆಗೆ ಊರು ತಲೆಗೆ ಸೂರು
ಹೇಳು ನಮ್ಮ ಹಿಡಿವವರಾರು ? ||

ಸುಖದ ಅರ್ಥ ಹುಡುಕದೆ
ಸುಖಿಸುವ ಬಾಳುವೆ ನಮದೆ
ಯಾರಿಗುಂಟು ಯಾರಿಗಿಲ್ಲ ?
ನಮ್ಮ ಭಾಗ್ಯಕಂತೂ ಎಣೆಯಿಲ್ಲಾ! ||

– ನಾಗೇಶ ಮೈಸೂರು
(Nagesha Mn)
(Picture from Internet / social media , sent by Mohan Kumar D M 😍🙏😊 thanks a lot again Mohan sir🙏👍)

02102. ಪ್ರೀತಿ


02102. ಪ್ರೀತಿ
______________

ಸಿಂಪಡಿಸಿದರೆ
ತುಂತುರು
ಅಪ್ಪಳಿಸಿದರೆ
ಪ್ರವಾಹ
ಬಿಡದೆ ಸುರಿದರೆ
ಮುಸಲಧಾರೆ
ಸರಿ ಸುರಿಯದಿದ್ದರೆ
ನೆಲದ ಹಾತೊರೆ
– ಪ್ರೀತಿ !

– ನಾಗೇಶ ಮೈಸೂರು
೦೭.೦೭.೨೦೧೭

00798. ಕೇಳದ ಕರೆ, ಹೇಳದ ಹೊರೆ…


00798. ಕೇಳದ ಕರೆ, ಹೇಳದ ಹೊರೆ…
______________________________

ಯಾವಾಗಲೊ ತುಂಬಾ ಹಿಂದೆ ಬರೆದಿದ್ದ ಸಾಲುಗಳು; ಭಾವನೆಗಳು ಫ್ರೆಷ್ ಆಗಿರುವುದರಿಂದ ಕೆಲವು ಯುವ ಗೆಳೆಯರ ಬಳಗಕ್ಕೆ ಹಿಡಿಸೀತೆಂದು ಹಾಕುತ್ತಿದ್ದೇನೆ 😊


ಕಳೆದು ಹೋದರು, ಎಷ್ಟೊ ವರ್ಷಗಳೆ
ಕಿವಿಗಿನ್ನು ಹಸಿರೇ, ನಿನ್ನ ಹೃದಯ ಕರೆ || ೦೧ ||

ನೀ ಚಂಡೆ ಮದ್ದಳೆ, ನಾ ಬಂದೆ ಸದ್ದಲೆ
ಎದೆ ಬಡಿತ ಖಾತ, ಸತತ ತೆರೆದಿಟ್ಟಿತ್ತ || ೦೨ ||

ನಿನ್ನ ಕುಡಿ ನೋಟ, ಅದುರೆ ಮಿಂಚಿನಲುಗಾಟ
ಚಕೋರಿ ಚಂದ್ರಮ, ಹಿಂಬಾಲಿಸೊ ಸಂಭ್ರಮ || ೦೩ ||

ನೀ ಬಾಯ್ಬಿಡದೆ ಕರೆದೆ, ನಾನೇಕೊ ಹಿಂಜರಿದೆ
ಎದೆಗಾರಿಕೆ ಸಾಲದೆ, ದೂರ ದೂರವೆ ಉಳಿದೆ || ೦೪ ||

ನೀ ಕೊಟ್ಟ ಸಂಜ್ಞೆಗೆ, ನಾ ನಕ್ಕ ಪೆಚ್ಚು ನಗೆ ಬಗೆ
ಅರಿವಾಗದ ಮೌಢ್ಯದೆ, ಅರಿತೂ ದೂರಕೆ ಸರಿದೆ || ೦೫ ||


ಬರೆದೆ ಪತ್ರವ ರಾಶಿ, ಸೃಷ್ಟಿಸಿ ಪ್ರೇಮ ಕಾಶಿ
ಕೊಡದೆ ಎಲ್ಲ ಕೊಳಚೆ, ಹುಳಿದ್ರಾಕ್ಷಿಯ ಪೇಚೆ || ೦೬ ||

ನೀ ಕರೆದೆ ಜತೆಗೋದೆ, ಕಲಿತೂ ಕಲಿಯದಾದೆ
ಮೌನದ ಭಾಷೆ ಬರದೆ, ಬೆಪ್ಪನ ಹಾಗೆ ತಿರಿದೆ || ೦೭ ||

ಇರಬೇಕಿತ್ತು ಧೈರ್ಯ, ಹೇಳುವ ಮನಸ್ಥೈರ್ಯ
ಆದದ್ದಾಗಲಿ ಛಲದಲಿ, ಹೇಳಿರೆ ನಿನ್ನೊಲವಲ್ಲಿ || ೦೮ ||

ಈಗ ಯಾವುದೊ ತೀರ, ಕುಡಿದು ಬೇಡದ ನೀರ
ದಿನ ದೂಡುತ ಹುನ್ನಾರ, ಕಡಿದಿದ್ದೇನು ಅಗೋಚರ || ೦೯ ||

ನನ ತಪ್ಪೊ ನಮ ತಪ್ಪೊ, ನಿನ್ನ ಸಿರಿ ಸುಖ ಬೆಪ್ಪೊ
ಈಗಲೂ ಕರೆದಿದೆ ಮುರಳಿ, ಕಿವಿಯೆದೆಯಲಿ ಮರಳಿ || ೧೦ ||


– ನಾಗೇಶ ಮೈಸೂರು

(Picture source 1,2 : http://m.wikihow.com/Express-Your-Feelings)

(Picture source 3: http://quotesgram.com/express-your-feelings-quotes/)

00783. ಮರೆತೇ ಹೋಗಿತ್ತು..(Sunday Green – Like Monday Blues😜)


00783. ಮರೆತೇ ಹೋಗಿತ್ತು…
_____________________
(Sunday Green – Like Monday Blues😜)


ಹೇಗಿತ್ತು ಗೊತ್ತಾ..
ಕರ ಹಿಡಿದಾ ಹೊತ್ತು
ಯಾರ ಹಸ್ತ ಯಾರದು ?
ಮರೆತೇ ಹೋಗಿತ್ತು !

ಹೇಗಿತ್ತು ಗೊತ್ತಾ..
ಬೆಸೆದ ಬೆರಳ ಸಾಹಿತ್ಯ
ಯಾವುದ್ಯಾರು ಬರೆದ ಕವಿತೆ
ಮರೆತೇ ಹೋಗಿತ್ತು !

ಹೇಗಿತ್ತು ಗೊತ್ತಾ..
ತಬ್ಬಿ ಹಿಡಿದಾ ಬಿರುಸು
ನಾವು ಅರ್ಧನಾರಿ-ನಾರೀಶ್ವರರಲ್ಲ
ಮರೆತೇ ಹೋಗಿತ್ತು !

ಹೇಗಿತ್ತು ಗೊತ್ತಾ..
ತುಟಿ ಬೆರೆಸಿದ ಲಾಲಿತ್ಯ
ಮಾತಿಗೆ ಬಿಡದು ಚುಂಬನ
ಮರೆತೇ ಹೋಗಿತ್ತು !

ಹೇಗಿತ್ತು ಗೊತ್ತಾ..
ನೀ ಜತೆಯಾಗಿದ್ದಾ ಹೊತ್ತು
ಅವರಾರದೊ ಭೇಟಿಯ ಹೊತ್ತು
ಮರೆತೇ ಹೋಗಿತ್ತು !

– ನಾಗೇಶ ಮೈಸೂರು

(Picture source : http://favim.com/image/2617767/)

00777. ಎಲ್ಲ ಮೀರಿದ ಗೆಳತಿ ನೀ…


00777. ಎಲ್ಲ ಮೀರಿದ ಗೆಳತಿ ನೀ…
________________________________

ಪ್ರಕೃತಿಗೆ ಪುರುಷ ಬರೆದ ಪುರವಣಿ, ವಿಶ್ವಸೃಷ್ಟಿಯ ನಿತ್ಯೋತ್ಸವದ ಉರವಣಿ…ಪ್ರಕೃತಿ ಹೆಣ್ಣೊ, ಹೆಣ್ಣೆ ಪ್ರಕೃತಿಯೊ ? ಪುರುಷನ ಆರಾಧನೆ ಮಾತ್ರ ಅವಿರತ..

ಎಲ್ಲ ಮೀರಿದ ಗೆಳತಿ ನೀ…
________________________________


ನೀನೆ ಭುವಿಯಾಗಿರುವೆ ಗೆಳತಿ, ಭುವನ ಸುಂದರಿ ಸಖಿ
ಧರಣಿ ಮಿಡುಕಿದಳೇಕೊ, ಗಣಿಸುತಲಿ ನಿನ್ನನೆ ಸವತಿ
ಚಂದ್ರಮನ ಮೊಗದಲದೇನೊ, ಅಸಹನೆ ಸಿಡುಕು
ಚಂದ್ರಮುಖಿ ನಿನ್ನ ವದನ, ತಂದಂತೇನೊ ಕೀಳರಿಮೆ !

ಕ್ಷಮಯಾ ಧರಿತ್ರಿ ನೀ, ಕ್ಷಮಿಸಿಬಿಡು ಅವನೀ ಪಾಡು
ಸಿಕ್ಕಸಿಕ್ಕವರೆಲ್ಲ ಮಾಡಿಟ್ಟವಳ, ಬೆತ್ತಲೆ ಸಹಜ ಸಿಟ್ಟು
ವರ್ಷಾಂತರಗಳ ವಯೋವೃದ್ಧೆ, ನಿನ್ನಂತಹ ತರುಣಿ
ಕಣ್ಣಿಗೆ ಬಿದ್ದಾಗ ಸಹಜ, ನೆನಪಾಗದಿಹುದೇ ಪ್ರಾಯ…?

ಇನ್ನು ಶಶಿಯ ಮಾತು ಬಿಡು, ಮೊದಲೇ ಮಂಕಾಗಿ
ಎರವಲು ದ್ಯುತಿಗೆ ಕಾದು, ಕ್ಷಯವೃದ್ಧಿ ಹಗಲಿರುಳು
ಮಾಸಕೊಮ್ಮೆ ಹುಣ್ಣಿಮೆ, ಪೂರ್ಣಚಂದ್ರನಾಗುವ ಭಾಗ್ಯ
ನಿತ್ಯ ಪೌರ್ಣಿಮೆ ಮೊಗದ, ನಿನ್ನ ಕಂಡಾಗ ಅಸೂಯೆಯೆ..!

ಇನ್ನು ನಿನ್ನ ನಗೆಯ ಕಾಂತಿಗೆ, ಸೋತು ಸುಸ್ತಾಗಿ ರವಿ
ನಗುವನ್ನೇ ಮರೆತ ಮಂಕು, ದೀಪವಾಗಿ ಮೋಡದಲಿ
ಮರೆಯಲಡಗಿ ತನ್ನನ್ನೇ, ಬಚ್ಚಿಟ್ಟುಕೊಂಡು ಮಾನವನು
ಉಳಿಸಿಕೊಳ್ಳುವ ವಿಫಲ, ಯತ್ನದಲಿ ಇಣುಕಿ ನಿರಾಶೆ..

ಮಿಕ್ಕೆಲ್ಲ ಗ್ರಹ ತಾರೆ ನೀಹಾರಿಕೆ, ನೆರೆದಿವೆ ಕುತೂಹಲ
ಏನೀ ಸೃಷ್ಟಿಯ ಅದ್ಭುತ? ಎಂದೆನ್ನುತ ಬಣ್ಣಿಸಿ ನಿನ್ನನ್ನೆ
ಚಲನೆಯ ಮರೆತಂತೆ, ನಿನ್ನ ರೆಪ್ಪೆಯ ಅದುರಲಿ ಕರಗಿ
ನಿನ್ನೆ ವಿಶ್ವದ ಸೃಷ್ಟಿಯ, ಮೂಲಬೀಜವೆಂದು ಅರಾಧಿಸಿವೆ..

– ನಾಗೇಶ ಮೈಸೂರು

(Picture source: http://www.freestockphotos.name/wallpaper/2120/woman-with-painted-birds-and-butterflies-images-photography.html)

00774. ಸಜ್ಜನಿಕೆಯ ಮುಸಕಲಿಟ್ಟ ಪ್ರೀತಿ ಕಥೆ..


00774. ಸಜ್ಜನಿಕೆಯ ಮುಸಕಲಿಟ್ಟ ಪ್ರೀತಿ ಕಥೆ..
_________________________________

ಪ್ರೀತಿಯಲಿರೆ ನಾ ಸಜ್ಜನ ಪ್ರಾಮಾಣಿಕ
ದಿಟ್ಟಿಸಲೆಂತೆ ? ಹಾರಿಸೆ ಸೆರಗ ಮಾರುತ
ತಲೆ ತಗ್ಗಿಸಿ ಎತ್ತಲೊ ನೋಡಿದೆ ದಿಟ್ಟಿಸಿ
ಯಾಕೊ ಮನದಲೆಂತದೊ ನಿರಾಶೆ ಕಸಿವಿಸಿ..

ಮಾಡಲೇನೆ ಪ್ರೀತಿ ಪ್ರೇಮದಲಿ ಮೊದಲ
ಪಾಠವದೆ ತಾನೇ ತೋರಬೇಕು ಸದ್ಗುಣಗಳ
ಒಳಗೇನಲ್ಲಾ ಸಂತ, ಆಸೆಬುರುಕ-ದುರ್ಬಲ
ಕಟ್ಟುಬಿದ್ದ ಸಂಹಿತೆ, ನಿನ್ನ ಕಣ್ಣಲಾಗದಿರೆ ಖೂಳ

ಎಷ್ಟೊಂದು ಸುಳ್ಳು ! ಕಟ್ಟೆ ಸಂಭಾವಿತನ ವೇಷ
ನಂಬಿಸೆ ಸಜ್ಜನಿಕೆ ಸರಿ ಸೂಕ್ತತೆ ಸ್ಪರ್ಧಾತ್ಮಕ
ಗೊತ್ತಿದ್ದೂ ಹಲವು, ಮೆಚ್ಚಿದ್ದದನೆ ತಾನೇ ನೀನು ?
ಇಂದೆಂತು ದಾಟಲಿ, ಸೀಮಾರೇಖೆಯ ತಡೆಗೋಡೆ..

ಬಿಡದಲ್ಲ ಖೂಳ ಮನ, ಕದ್ದು ದಿಟ್ಟಿಸುವ ಹುನ್ನಾರ
ಹಾರುವ ಮುಂಗುರುಳ, ನೋಡೊ ನೆಪದಲ್ಲಿ ಜಾಲ
ಎಲ್ಲೊ ನೋಡುತೆಲ್ಲೊ ನೋಡಲೆಷ್ಟು ಕಠಿಣ ಪ್ರಭುವೇ
ಮುಜುಗರ ನಾಚಿಕೆ, ತಪ್ಪು ಮಾಡಿಸುತಿಹ ಕುತೂಹಲ

ಸದರವದು ಬಿಡದು ತೂಗುಯ್ಯಾಲೆ ಮನಸಾಗಿ ಬಗೆ
ನಾಟಕವಾಡಿದರು ನಿಜದೆ ನೀನೊಂದು ಅದ್ಭುತ ಬೆರಗೆ
ನಿನ್ನೆಲ್ಲ ವಿಸ್ಮಯ ಬಿಡಿಸಿ, ಆವರಣದೊಳಗನಾವರಣ
ನಿನ್ನೊಳಗೆ ನಾನಾಗುವ, ಚೈತ್ರಯಾತ್ರೆ ನೈಜ ಹಂಬಲ..

– ನಾಗೇಶ ಮೈಸೂರು

(picture source : http://www.indiebazaar.com/product/22430/pure-georgette-crochet-saree-with-crochet-sleeves)

ನಲ್ಲೆ, ನೀ ನೋವಿನಲಿ ಕೈ ಹಿಡಿದ ಹೊತ್ತು …..!


ನಲ್ಲೆ, ನೀ ನೋವಿನಲಿ ಕೈ ಹಿಡಿದ ಹೊತ್ತು …..!
____________________________________

(ಹಿನ್ನಲೆ : ಇಂದು ‘ಮೊದಲ ಸ್ಪರ್ಶ’ ಕವನದ ದ ಪೋಸ್ಟ್ ಹಾಕಿದಾಗ ಗೆಳೆಯ ದೀಪಕ್ ರವರು ಕಾಮೆಂಟಿನಲ್ಲಿ ಸುಮಾರು ೧೯೯೦ ರ ಆಸುಪಾಸಿನಲ್ಲಿ ಬರೆದಿದ್ದ ಅದೇ ತರಹದ – ‘ನಲ್ಲೆ ನೀ ನೋವಿನಲ್ಲಿ ಕೈ ಹಿಡಿದ ಹೊತ್ತು’ ಕವನವನ್ನು ನೆನಪಿಸಿದರು – ಜತೆಗೆ ಎರಡರ ಹೋಲಿಕೆ, ತುಲನೆ ಮಾಡಿದರೆ ಚೆನ್ನ ಎಂದರು. ಆ ಕವನವನ್ನು ಇಲ್ಲಿ ಹಾಕುತ್ತಿದ್ದೇನೆ – ಆಸಕ್ತಿಯಿದ್ದವರು ಎರಡನ್ನು ಹೋಲಿಸಿ ನೋಡಲು ಸಾಧ್ಯವಾಗುವಂತೆ)

ನಲ್ಲೆಯೊಬ್ಬಳು ಮೊಟ್ಟ ಮೊದಲ ಬಾರಿಗೆ ಕೈ ಹಿಡಿದಾಗ ಆಗುವ ಅನುಭವ, ಅನುಭೂತಿ, ಉದ್ವೇಗ, ಉಲ್ಲಾಸ, ಕಳವಳ, ಭೀತಿಗಳೆಲ್ಲದರ ಸಂಗಮಿಸಿದ ಅನುಭವ ಈ ಕವನದ ಆಶಯ. ಕೈ ಹಿಡಿಯಲು ಯಾವುದೊ ನೋವೆ ಕಾರಣವಾದರೂ, ಆ ನೆಪದ ಸ್ಪರ್ಶವೆ ಹುಟ್ಟಿಸುವ ಭಾವೋನ್ಮಾದದ ಉತ್ಕರ್ಷ ಇಲ್ಲಿ ವ್ಯಕ್ತವಾಗಿದೆ.

ನಲ್ಲೆ, ನೀ ನೋವಿನಲಿ ಕೈ ಹಿಡಿದ ಹೊತ್ತು …..!
————————————————————————————————


ಹೆಪ್ಪುಗಟ್ಟಿದ ಮೋಡ ಭೋರ್ಗರೆದು ಸುರಿದಂತೆ
ಎದೆಯೊಳಗೆ ನೂರು ನದಿ ತಡೆ ಕಿತ್ತು ಹರಿದಂತೆ
ಕನಸೊ? ನನಸೋ? ಬೆರಗು ಮೂಡಿತ್ತು
ನಲ್ಲೆ, ನೀ ನೋವಿನಲಿ ಕೈ ಹಿಡಿದ ಹೊತ್ತು…II

ಕಾಲ ಚಕ್ರದ ಚಲನೆ ಸ್ತಬ್ದವಾದಂತೆ
ಹೃದಯ ಕೋಶವೇ ದಹಿಸಿ ದಗ್ದವಾದಂತೆ
ಭಾವದಾಭಾವದಲಿ ಮನವು ಮುಳುಗಿತ್ತು
ನಲ್ಲೆ, ನೀ ನೋವಿನಲಿ ಕೈ ಹಿಡಿದ ಹೊತ್ತು …II

ಮನದ ಮಾತುಗಳನ್ನು ಮೌನ ಮರೆಸಿತ್ತು
ನೂರೆಂಟು ಆಸೆಗಳ ಕಣ್ಣು ಅರಸಿತ್ತು
ಮೈ ಪೂರ ‘ಜುಂ’ ಎನಿಸಿ ಪುಳಕದಾ ಮತ್ತು
ನಲ್ಲೆ, ನೀ ನೋವಿನಲಿ ಕೈ ಹಿಡಿದ ಹೊತ್ತು …..II

ಅಪ್ಪಿದಾ ಕೈಗಳಲದೇನು ಸಂಚಲನೆ
ಅನುಭಾವದಾ ಝರಿಯ ಮಿಂಚಿನಾ ಚಲನೆ
ಪದ ಹಿಡಿಯಲಾಗದಾ ಅನುಭೂತಿಯಿತ್ತು
ನಲ್ಲೆ, ನೀ ನೋವಿನಲಿ ಕೈ ಹಿಡಿದ ಹೊತ್ತು…….II

ಯಾವ ಯಾತನೆ ನಿನ್ನ ಹಾಗೆ ಕಾಡಿತ್ತೋ?
ಯಾವ ನೋವಿನ ಚಿತ್ರ ಕರುಳ ಹಿಂಡಿತ್ತೊ?
ಆಸರೆಯ ಬಯಸಿ ಲತೆ ಬಳಸಿದಂತಿತ್ತು
ನಲ್ಲೆ, ನೀ ನೋವಿನಲಿ ಕೈ ಹಿಡಿದ ಹೊತ್ತು…….II

ತೆರೆದ ಬಾಹುಗಳೊಳಗೆ ಅಪ್ಪಿ ನಿನ್ನನು ಹಿಡಿದು
ಮೆತ್ತನೆಯ ಮಡಿಲಲ್ಲಿ ನೋವುಗಳ ತಡೆತಡೆದು
ಸಂತೈಸುವ ತುಡಿತ ಮನದಿ ಮೂಡಿತ್ತು
ನಲ್ಲೆ, ನೀ ನೋವಿನಲಿ ಕೈ ಹಿಡಿದ ಹೊತ್ತು……..II

– ನಾಗೇಶ ಮೈಸೂರು

(Picture from : http://m.wikihow.com/Hold-Hands)

00769. ಏನು ಮಾತು, ಏನು ಕತೆ ?


00769. ಏನು ಮಾತು, ಏನು ಕತೆ ?
__________________________


ಯಾರೆ ಮಧುರ ನೆನಪುಗಳ ಯಾತ್ರೆಗೆ ಹೊರಟರು, ಅದರ ಪ್ರಮುಖ ಅಂಗವಾಗಿ ಎದ್ದು ಕಾಣುವುದು ಮಾತು.. ಮಾತು ಕಟ್ಟಿಕೊಟ್ಟ ಬಂಧ, ಮುರಿದ ಸಖ್ಯ, ಬೆಸೆದ ಅಂತರ, ತೆರೆದಿಟ್ಟ ವ್ಯಕ್ತಿತ್ವ – ಎಲ್ಲವು ಯಾವುದೊ ರೂಪುರೇಷೆಗೆ ಆವರಣ ಹೊದಿಸುತ್ತಾ ಅವರವರ ಕಲ್ಪನೆಯ ಲೋಕ ತೆರೆದಿಡುತ್ತಾ ಹೋಗುತ್ತದೆ. ಕಲ್ಪನೆಗೂ ನೈಜತೆಗು ಇರುವ ಅಂತರವನ್ನು ಎತ್ತಿ ತೋರಿಸುವುದೂ ಸಹ ಇದೇ ಮಾತೆ ಆದರು, ಮೊದಲ ಬುನಾದಿ ಬೀಳುವುದು ಕಲ್ಪನಾಲೋಕದ ಸರಹದ್ದಿನಲ್ಲೆ; ಹೀಗಾಗಿ ಆ ಮಾತಿನ ಪಸೆ ಮುಂದೊಂದೊ ಹಿಂಗಿ ಹೋಗಿ ನಿಸ್ತೇಜವಾಗಿಬಿಡುವ ಕಥೆಯೂ ಉಂಟು. ಅರ್ಥರಾಹಿತ್ಯದ ಮಾತಿನ ಹೆಗಲೇರಿಸಿ, ಕಾಲಯಾನದೊಂದಿಗೆ ಪಕ್ವತೆಯ ಜಗುಲಿಯೆಡೆಗೆ ನೆಗೆಸುತ್ತ ಪರಿಪೂರ್ಣತೆಯತ್ತ ಹೆಜ್ಜೆಯಿಕ್ಕಿಸುವ ಅಪರೂಪದ ಸಂಘಟನೆಗಳೂ ಉಂಟು. ಎರಡರ ನಡುವಿನ ಯಾವುದೊ ಶೂನ್ಯಾಶೂನ್ಯ ಅತಂತ್ರದಲಿ ಸಿಲುಕಿ ಕಳುವಾಗಿ ಹೋಗಿ ತತ್ತರಿಸುವವರ ನಿದರ್ಶನಗಳೂ ಅಪಾರವೆ. ಬದಲಾವಣೆ ಜಗದ ನಿಯಮ ಎನ್ನುವ ಹಾಗೆ ಮಾತಿನ ಜಗದಲ್ಲೂ ಪಕ್ವತೆಯ ರೂಪದಲ್ಲಿ ಬದಲಾವಣೆ ಬರುತ್ತಿರಬೇಕು. ಬಂಧದ ಗಂಟು ಭಧ್ರವಾದಂತೆಲ್ಲ ಮಾತಿನ ಸ್ತರ ತನ್ನ ಮೂಲ ಮುಗ್ದತೆ, ಪ್ರಾಮಾಣಿಕತೆಯನ್ನು ಕಳೆದುಕೊಳ್ಳದ ಹಾಗೆ ಪ್ರಬುದ್ಧತೆಯತ್ತ ತನ್ನ ವಿಸ್ತಾರವನ್ನು ಹರವಿಕೊಳ್ಳುತ್ತಾ ಹೋದರೆ ನಿಸ್ತೇಜತೆ, ನಿರ್ಲಿಪ್ತತೆಯ ಬದಲು ಉತ್ಸುಕತೆ, ಪ್ರೇರಣೆಗಳನ್ನು ತುಂಬುವ ಅದ್ಬುತ ಸಾಧನವಾಗಿಬಿಡುತ್ತದೆ ಮಾತೆಂಬ ಮಹಾ ಶಕ್ತಿ. ಅಂತಹವರ ಮಾತು ಇತರರ ಬದುಕಿಗೂ ಪ್ರಭಾವ ಬೀರಬಲ್ಲ ತಾಕತ್ತಿರುವುದು ತಂತಾನೆ ಗೋಚರವಾಗುತ್ತದೆ – ಒಂದು ರೀತಿಯ ವಿಸ್ತರಿಸಿದ ಪ್ರಭಾವಲಯದ ಹಾಗೆ..

ಅದೇನೆ ಇದ್ದರು ಮೊದಮೊದಲ ಮಾತುಗಳ ಎಳಸುತನ, ಕಾತರ, ಆವೇಗ, ಅಪಕ್ವತೆ ಹುಟ್ಟಿಸುವ ನಿರೀಕ್ಷೆ, ನೋವು, ನಲಿವುಗಳಿಗೆ ಸಮನಾಗಲಾರದು ಪ್ರಬುದ್ಧತೆಯ ಹಾದಿ ಹಿಡಿದ ಪಕ್ವ ಮಾತು. ಆ ಹೊತ್ತಲ್ಲಿ ಅರ್ಥಕ್ಕಿಂತ ಖಾಲಿ ಮಾತೆ ಮುಖ್ಯ – ತರ್ಕ, ಸಹಜಾಸಹಜತೆ, ಅರ್ಥರಾಹಿತ್ಯತೆ ಅಲ್ಲಿನ ಪ್ರಶ್ನೆಯೆ ಅಲ್ಲ. ಆದರೆ ಅಲ್ಲಿ ಹರಿದಾಡುವ ಮಾತುಗಳ ಮೊತ್ತ ಮಾತ್ರ ಅಗಾಧ – ಸದಾಸರ್ವದಾ ಅಷ್ಟು ಮಾತಾಡಲಾದರೂ ಏನಿರುತ್ತದೆ ಎಂದು ಸೋಜಿಗಪಡುವಷ್ಟು.. ಅದೆ ಪ್ರಬುದ್ಧ ಜಗದಲ್ಲಿ ಮಾತಿಗೆ ಸಮಯದ ಕಾಲಾವಧಿ ನಿಗದಿಪಡಿಸುತ್ತ ಮಾರುಕಟ್ಟೆಯ ಸರಕಿನ ಪೋಷಾಕು ಹಾಕಿಸಿಬಿಡುತ್ತೇವೆ…!

ಈ ಕೆಳಗಿನ ಎಳಸು ಕವನ ಮೊದಮೊದಲ ಮಾತುಗಳ ಸೋಜಿಗಕ್ಕೆ ಬರೆದ ವ್ಯಾಖ್ಯೆ.. ಆ ಮಾತುಗಳಷ್ಟೇ ಅರ್ಥರಾಹಿತ್ಯತೆ, ಕುತೂಹಲ, ಕನಸು, ಕಲ್ಪನೆಗಳ ಕಲಸುಮೇಲೊಗರದಲ್ಲಿ ಮೂಡಿದ ಲಹರಿ. ಅದನ್ನು ಬರೆಯುವಾಗನಿಸಿದ ಭಾವ ಕೂಡ ಆ ಸ್ತರದ ಮಾತಿನ ಧಾಟಿಯಲ್ಲೇ ಕಾಡಿದ್ದು ನಿಜ – ಆಗ ಆಡಲದೆಷ್ಟೊಂದು ಮಾತಿರುವಂತೆ, ಅದನ್ನು ಹೇಳಲದೆಷ್ಟೊಂದು ಸಾಲುಗಳಿವೆಯಲ್ಲ ? ಎಂದು. ಆದರೆ ಅದು ಹೇಳಿ ಮುಗಿಸಲಾಗದ ಸರಕು ಎಂಬ ಸತ್ಯದರ್ಶನವೂ ಇದ್ದ ಕಾರಣಕ್ಕೆ ಚುಟುಕಲ್ಲೆ ಮುಗಿದಿದೆ. ಹೇಳಬೇಕಾದ್ದಕ್ಕಿಂತ ಹೇಳದೆ ಉಳಿದ ಮಾತುಗಳ ಹಾಗೆ – ಎದುರಿಲ್ಲದಾಗ ಧುತ್ತನೆ ಬಂದು ಕಾಡುತ್ತವೆ, ಎದುರಿದ್ದಾಗ ಅರ್ಧಕ್ಕರ್ಧ
ಹೊರಬರದೆ ಮಾಯವಾಗಿಬಿಡುತ್ತವೆ.. ಅಲ್ಲಿನ ಅಗತ್ಯ, ಅವಶ್ಯಕತೆ ಮಾತನ್ನು ಹೇಳುವುದಾಗಿತ್ತೊ ಅಥವಾ ಒಡನಾಟದ ನಡುವಿನ ಮೌನವನ್ನು ಮುಚ್ಚಲು ಬೇಕಾದ ಸರಕು, ಉರುವಲನ್ನು ಮಾತಿನ ನೆಪದಲ್ಲಿ ಸೇರಿಸುವುದಾಗಿತ್ತೊ ಎನ್ನುವ ಗೊಂದಲ ಮೂಡಿಸುತ್ತ.

ಆ ಗೊಂದಲ, ಗದ್ದಲ, ಪಿಸುಮಾತಿನ ಸೀಕರಣೆ ಈ ಸಾಲುಗಳಲ್ಲೀಗ..

ಎಲ್ಲಿಯದೋ ಆ ಮಾತುಗಳು..?
___________________________

ಏನು ಮಾತು, ಏನು ಕತೆ ?
ಗಂಟೆ ದಿನಗಟ್ಟಲೆಯ ಕವಿತೆ
ಎಲ್ಲಿದ್ದವದೆ ಮಾತು ಪದೆಪದೆ ?
ಆಡಿದ್ದ ಹೊತ್ತು ಜಗ ಮಲಗಿದೆ..

ಹೊತ್ತು ಗೊತ್ತಿಲ್ಲದ ಜಗದಲಿ
ಕಾವಲಿದ್ದವು ಹಗಲಿರುಳು
ಸೇರುತ ಕೂರುತ ಏನೆಲ್ಲಾ
ಮಾತಾಗೆ ಹವಣಿಸಿ ಕಾಯುತ..

ಮಾತಿಗೆ ಜತೆ ಕೂತಾ ಗಳಿಗೆ
ಪರಿವೆಯಿಲ್ಲದೆ ಪರಿಸರಕೆ
ಕನಸ ಹಂಚಿದ್ದು ತುಣುಕಾಗಿ
ಸಂಯಮವಿತ್ತು ಸಾನಿಧ್ಯದಲಿ..

ಸರಿ, ಮಿಕ್ಕ ಮಾತಿಗದೇನರ್ಥ ?
ವ್ಯರ್ಥ ಹುಡುಕಬೇಕೇಕೆ, ಬಿಡು
ಗುಟ್ಟಲ್ಹೇಳಿದೆ ಮಾತಲ್ಲ ಮುಖ್ಯ
ಕುಂಟುನೆಪ ಒಡನಾಟ, ಸಖ್ಯಕೆ..

ಅಚ್ಚರಿಯ ಅರ್ಥಕೋಶ ನಮದು
ಹುಡುಕಲಿಲ್ಲ ಮಾತಲಿ ಜಾಡು
ಮುನಿಸು ಮುದ ಹದ ಮೀರುತಲೆ
ಬೆಸೆದ ಬಗೆಗದಾವ ಕಾವ್ಯ ಸಮವೆ ?

– ನಾಗೇಶ ಮೈಸೂರು
(Picture source:http://m.wikihow.com/)

00768. ದೂರದಿರು, ಮಾತು ಮರೆತವಳ


00768. ದೂರದಿರು, ಮಾತು ಮರೆತವಳ
___________________________

ಕೊಟ್ಟ ಮಾತು ಮರೆತವಳ
ದೂರಲೆಂತು ಮುನಿಯುತ ?
ಪ್ರೇಮಿಸಿ ಬಿರುಸಲಿ ಕೊಟ್ಟ ಮಾತು
ಮತ್ತಾವುದೊ ಪ್ರೀತಿ ಕಟ್ಟಿ ಹಾಕಿತ್ತು..

ಕೊಡುವೆನೆಂದಳು ಜೀವವನೆ..
ಕಟ್ಟಿದ ಕನಸು ಕಣ್ಣ ತೇವವನೆ,
ಮರಳಿಸುತಿದೆ ನೆನೆದಡಿಗಡಿಗೆ
ಎಲ್ಲಿ ಹೋದಳು ಬರದೆ ಕಡೆಗೆ ?

ಕಿತ್ತು ಬರುವೆನೆಂದಳು ಬಂಧ
ಕಟ್ಟೆ ಹೊಸತು ಜೀವ ಸಂಬಂಧ
ಯಾಕೋ ಪಾಶ ಕೊರಳ ಸುತ್ತಿತ್ತ
ಅಸಹಾಯಕತೆಗೆ ಕಣ್ಣೀರೆ ಬತ್ತಿತ್ತ..

ಸ್ವಾರ್ಥ ಗೆದ್ದ ತ್ಯಾಗದ ರಣಹದ್ದು
ಕುಕ್ಕಿತ್ತವಳ ಹೃದಯದೊಳ ಸದ್ದು
ಬಿಕ್ಕುವ ಮೌನ ಬದುಕಾದವಳನು
ದೂರಲೆಂತು ತಾನೆ ನೋವಾದವಳನ್ನು ?

ಅದೆ ಒಂಟಿ ಮರದ ಕೆಳಗೆ ಕೂತು
ಜಂಟಿ ಗಳಿಗೆಯ ನೆನಪಲ್ಲಿ ಹೂತು
ಮುನಿಯುತಿರುವೆ, ಶಪಿಸಿರುವೆನು
ನಿನಗಲ್ಲ ವಿಧಿಗೆ, ಬೇರಾಗಿಸಿದವನು..!

– ನಾಗೇಶ ಮೈಸೂರು
(Picture source : http://www.youtube.com)

00665. ಅರ್ಥವಾಗುವುದೇ ಇಲ್ಲ !


00665. ಅರ್ಥವಾಗುವುದೇ ಇಲ್ಲ ! (2 poems)
__________________________________

ಮನಗಳ ನಡುವಿನ ಸಂವಹನದಲ್ಲಿ, ಪರಸ್ಪರರ ನಿರೀಕ್ಷೆಗಳ ಸುತ್ತ ಸುಳಿದಾಡುವ ಪರಿಯಿಂದಾಗಿ ಅದು ಗೆಳೆಯ – ಗೆಳತಿಯರ ಸಖ್ಯದಲ್ಲಿ ತಂದೊಡ್ಡುವ ಸಂಕಷ್ಟ – ಸಂದಿಗ್ದಗಳ ಪರಿಸ್ಥಿತಿ ಕೆಲವೊಮ್ಮೆ ವಿವರಣೆಯ ಎಟುಕಿಗೆ ನಿಲುಕದ್ದು. ಏನೇನೊ ಚದುರಂಗವಾಡಿಸಿ, ಏನೆಲ್ಲಾ ತಪ್ಪೆಣಿಕೆಗಳ ಸುತ್ತ ಸುತ್ತಾಡಿಸಿ, ಹೊಂದಾಣಿಸಿ- ಮುರಿಸಿ , ಮತ್ತದನೆ ಮರುಕಳಿಸಿ, ಯಾತನೆ ಒತ್ತಡಗಳಲಿ ತಡಕಾಡಿಸಿ ಸುಸ್ತು ಮಾಡಿ ‘ಯಾಕಪ್ಪ ಬೇಕೀ ನಂಟು ?’ ಎಂದು ನಿಟ್ಟುಸಿರಿಡುವಂತೆ ಮಾಡಿಸುವ ಅದರ ಸಹವಾಸ ಎಲ್ಲರಿಗೂ ಪರಿಚಿತವೇ. ಅದರಲ್ಲೂ ಹಳಸಿದ ಸಂಬಂಧದ ಪರಿಧಿಯಾಗಿಬಿಟ್ಟರೆ ತಾವಾಗಿಯೇ ಕಟ್ಟಿಕೊಂಡ ಮೌನದ ಬೇಲಿ ದಾಟಲಾಗದೆ, ಏನೇನೊ ಸ್ವಯಂಕಲ್ಪಿತ ಸಂಕೋಲೆಗಳಡಿ ಕೊರಗುತ್ತ, ಪರಸ್ಪರರಿಗೆ ಅರ್ಥವಾಗದವರಾಗುವ ಸಂಬಂಧದ ಸಂಕೀರ್ಣತೆಯ ಒಂದು ಮುಖ – ‘ಅರ್ಥವಾಗದ ಗೆಳೆಯ’ ಕವಿತೆ; ಅದರ ಮತ್ತೊಂದು ಮುಖ ‘ಅರ್ಥವಾಗದ ಗೆಳತಿ’. ಇವೆರಡು ಕವಿತೆಗಳ ಒಟ್ಟಾರೆ ಮಥಿತಾರ್ಥವನ್ನು ಸಾರದಲ್ಲಿ ಹೇಳುವುದಾದರೆ – ಇದೊಂದು ಪರಸ್ಪರರಿಗೆ ಮತ್ತು ಸ್ವತಃ ತಮಗೂ ಸಹ ತಾವೇನೆಂದು ಅರ್ಥವಾಗದವರ ಆಲಾಪ, ಗೋಳು!

  
01. ಗೆಳತಿ, ನಿನಗಿದೆಲ್ಲ ಅರ್ಥವಾಗುವುದೇ ಇಲ್ಲ !
________________________________

ಗೆಳತಿ,
ನಿನಗಿದೆಲ್ಲಾ
ಅರ್ಥವಾಗುವುದಿಲ್ಲ !
ಕಾಲಗರ್ಭದ ಆಳದಲೆಲ್ಲೋ
ಹುದುಗಿದ
ನೋವಿನ ಸೆಲೆ
ಬಸಿರಾಗದ ಸಂಕಟಕ್ಕೆ
ಬಿಕ್ಕಳಿಸುತ್ತಿದೆ ;
ಹರವಾದ ಎದೆಗಿತ್ತ
ಗುದ್ದನ್ನೆಲ್ಲಾ ಸಹಿಸಿ –
ನಿಟ್ಟುಸಿರು ನುಂಗುತ್ತ,
ಸಾಯಲಾಗದೆ
ಬದುಕಿದೆ
ಆಗ..
ನೀನಾದರೂ
ಸಂತೈಸಿ
ಜೀವ ಕೊಡುವೆಯೆಂದರೆ –
ಗೆಳತಿ, ನಿನಗಿದೆಲ್ಲ ಅರ್ಥವಾಗುವುದೇ ಇಲ್ಲ ||

ವೇದನೆಯ ಮಡು
ಇರುಳಾಗಿ ಕಾಡುತಿದೆ
ಕೆಸರಿನಡಿ ಸಿಲುಕಿ
ಕನಸು ಕಣ್ಮರೆಯಾಗಿದೆ..
ಆಳ ಹೊಕ್ಕು ನೋಡಲೆಂದರೆ
ಹೂತು ಹೋಗುವ ಭಯ !
ಸುಮ್ಮನೆ
ಮೌನದ ಸೆರಗ್ಹಿಡಿದೆ..
ನೀ
ಮತ್ತೆ ಮತ್ತೆ ಕಾಡಿದೆ –
‘ಏನಾಗಿದೆ ನಿನಗೆ ?’
ನಾ ಮೌನದಲೇ ಉಸುರಿದೆ
ಗೆಳತಿ, ನಿನಗಿದೆಲ್ಲ ಅರ್ಥವಾಗುವುದೇ ಇಲ್ಲ ||

– ನಾಗೇಶ ಮೈಸೂರು

02. ಗೆಳೆಯಾ, ನೀ ನನಗರ್ಥವಾಗುವುದೇ ಇಲ್ಲ!
__________________________________

ಸಂಬಂಧಗಳು
ಹುಟ್ಟುತ್ತವೆ, ಸಾಯುತ್ತವೆ
ಭಾವನೆಗಳಂತೆ !
ಭಾವನೆಗಳು
ಅರಳುತ್ತವೆ – ಕಮರುತ್ತವೆ
ಆಸೆಗಳಂತೆ !
ಆಗೊಮ್ಮೊಮ್ಮೆ
ಗಪ್ಪನೆಯ ಏಕಾಂತ
ನೀರವತೆ ಆವರಿಸಿದಾಗ
ಮುಸುಕಿನೊಳಗಿನ
ಸೆಖೆಗೆ ಬೇಸತ್ತು
ಮೆತ್ತನೆಯ ಮಡಿಲನರಸಿ
ನಿನ್ನತ್ತ ನೋಡುತ್ತೇನೆ,
ಕಣ್ಣರಳಿಸುತ್ತೇನೆ,
ಯಾಚಿಸುತ್ತೇನೆ ಗೆಳೆಯಾ ;
ಇದೆಲ್ಲ – ನಿನಗರ್ಥವಾಗುವುದೇ ಇಲ್ಲಾ ||

ಏಕೆ ಇಲ್ಲದ ಚಿಂತೆ-
ಕೊನೆ ಮುಟ್ಟದ ರಗಳೆ?
ಅನಿಸಿ,
ತೆರೆ ಸರಿಸಲೆಣೆಸುತ್ತೇನೆ ;
ನಿನಗರ್ಥವಾಗದ
ನನ್ನತನವ
ತೊರೆಯಲೆತ್ನಿಸುತ್ತೇನೆ
ಭೂತದ ಛಾಯೆಯಡಿ,
ಭವಿತದ ಮಾಯೆಯ
ಹೊದರನೆಲ್ಲಾ ಮುದುರಿ,
ನಿನ್ನ –
ವರ್ತಮಾನದ ಜತೆಗೆ
ನಡೆಯಲೆತ್ನಿಸುತ್ತೇನೆ
ಆಗ ನೀ
ವಿಚಿತ್ರವಾಗಿ ನೋಡುವೆ !
ನಾ ಬೇಸರದಲಿ ನುಡಿವೆ –
‘ಗೆಳೆಯ, ನೀ ನನಗೆ ಅರ್ಥವಾಗುವುದೇ ಇಲ್ಲ!’ ||

– ನಾಗೇಶ ಮೈಸೂರು

(picture source from:
http://cdn.tinybuddha.com/wp-content/uploads/2015/03/Toxic-Relationship.jpg)

00630. ಇದೊಂತರ ಪ್ರೀತಿ ಜಗಳ…


00630. ಇದೊಂತರ ಪ್ರೀತಿ ಜಗಳ…
__________________________   

 
ಯಾಕೆ ಸುಮ್ನೆ ಫೈಟು ?
ನೀನೇನಲ್ಲ ಸ್ನೋ ವೈಟೂ
ಸುಂದ್ರಿ ಚಂದ್ರಿ ಎಲ್ಲಾ ಡೌಟು
ಬಾ ಕುಡಿಯೋಣ ಕಾಫಿ ಬೈಟು !

ನಿಂಜೊತೆಗೆಂತಾ ಫೈಟು
ಸೆಗಣಿ ಸರಸದ ರೂಟು
ಗುದ್ದಾಡಿದ್ರೂ ಗಂಧಾನೆ ಲೇಸು
ನಾನಾಗೋಲ್ಲ ನಿಂಜೊತೆ ಕ್ಲೋಸು !

ಬಾರಮ್ಮಾ ಸಾಕು ಬಿಂಕ
ನಾನೇನಲ್ಲ ಬುದ್ಧಿಲಿ ಮಂಕ
ನಂದೇನಲ್ಲ ಬಿಕನಾಸಿ ಶಂಖ
ಹೊಲಗದ್ದೆ ಆಸ್ತಿ ಪಾಸ್ತಿಗಿಲ್ಲ ಲೆಕ್ಕಾ !

ಬಿಡು ಸಾಕು ರಾಜಕುಮಾರ
ಹತ್ತರಲ್ಲನ್ನೊಂದಾಗಿ ಪ್ರವರ
ಇರೋ ಆಸ್ತಿ ಹಂಚೆ ಮಕ್ಕಳ ಪಾಲ
ತಲೆಗೊಂದೊಂದಿಷ್ಟು ಮಿಕ್ಕುತ್ತೆ ಸಾಲ !

ತೆಗಿಬೇಡ್ವೆ ಮಾನ ಮನೆಹಾಳಿ
ದುಡುದ್ಹಾಕ್ತೀನಿ ಗಟ್ಟಿ ರಟ್ಟೆ ಶಕ್ತೀಲಿ !
ಹಂಗನ್ನೊ ಮೂಳ ಜೊತೆಯಾಗ್ತೀನಿ
ಮಿಕ್ಕುಳ್ದಿರೊ ಬಾಳ ಬೆಳಕಾಗ್ತೀನಿ !!

– ನಾಗೇಶ ಮೈಸೂರು
(picture: http://baltimorepostexaminer.com/wp-content/uploads/CoupleFight-630×310.jpg)

00511. ಪ್ರೇಮಾವತಾರ….


00511. ಪ್ರೇಮಾವತಾರ….
_______________________________

ಪ್ರೀತಿ ಪ್ರೇಮದ ಯಾವುದೊ ಮಜಲನ್ನು ದಿಟ್ಟಿಸಿದರು ಬರಿ ಅದೆ ಅವತಾರದ ವಿವಿಧ ಆಯಾಮಗಳು.. ಹುಚ್ಚೆಬ್ಬಿಸಿ ಕುಣಿಸೊ ಆನಂದ ಲಹರಿ, ರೊಚ್ಚಿಗೆಬ್ಬಿಸೊ ಕ್ರೋಧದ ನಗಾರಿ, ನೋವಿನ ಅಚ್ಚೆ ಹಾಕಿ ಮಿಡುಕಾಡಿಸೊ ಯಾತನೆಯ ದಾರಿ, ನಿರ್ಲಿಪ್ತತೆಯಲಿ ಕವಚದೊಳಕ್ಕೆ ಮುದುಡಿಸಿ ಅಂತರ್ಮುಖಿಯಾಗಿಸೊ ಸವಾರಿ – ಅಥವಾ ಇವೆಲ್ಲದರ ಮಿಶ್ರಣವನ್ನು ಗಳಿಗೆಗೊಂದರಂತೆ ಕಟ್ಟಿಕೊಡುತ ಸದಾ ಅನಿಶ್ಚಯತೆಯ ತೊಟ್ಟಿಲಲಿ ತೂಗಾಡಿಸಿ ದಿಗ್ಭ್ರಮೆ ಹಿಡಿಸುವ ಮಾಯಾಲಹರಿ. ಅದರ ಹಲವಾರು ಮುಖಗಳನ್ನು ಹಿಡಿದಿಡುವ ಸಂಧರ್ಭ, ಸಂಘಟನೆಗಳು ಅಸಂಖ್ಯಾತವಾದರು, ಮೂಲದ ತಪನೆಯ ಬೇರು ಮಾತ್ರ ಒಂದೆ. ಪ್ರೀತಿಯೆಂಬ ಸಂವೇದನೆಯ ಪ್ರಬಲ ಶಕ್ತಿಯನ್ನು ಎತ್ತಿ ತೋರಿದಷ್ಟೆ ಸಹಜವಾಗಿ ಅದರ ಆ ಶಕ್ತಿಯೆ ಕುಗ್ಗಿಸುವ ದೌರ್ಬಲ್ಯದ ಪ್ರತೀಕವಾಗುವ ವಿಪರ್ಯಾಸವಾದರು, ಅದೇ ಪ್ರೀತಿಯ ಜಗವನ್ನಾಳುವ ಮಾಯಶಕ್ತಿಯೆನ್ನುವುದಂತು ನಿಜ.

ಅಂತದ್ದೊಂದು ಆಯಾಮ, ಅವತಾರದ ಅಗಣಿತ ಸಂಗ್ರಹಕ್ಕೆ ಮತ್ತೊಂದು ಸೇರ್ಪಡೆ ಈ ಪ್ರೇಮ ಪದ 😊

ಸಹಿಸುತ್ತಾಳಷ್ಟೆ, ಸಹಿ ಮಾಡದ ಅವಳ ರೀತಿ
ಬಲವಂತಕೆ ನಟಿಸುತ, ನಿರಾಳ ಕೊಡದೆ ಪ್ರೀತಿ
ಅವನೆದೆಯಲ್ಲಿ ಮಿಡಿದು, ಕಾಡುತ ತಡಕಾಡಿಸಿ
ತುಂಬಿ ತುಳುಕಿದರು, ದೂರದೆ ನಿಂತ ಮನದರಸಿ ||

ಬರಿದೆ ಭೀತಿಯದಷ್ಟೆ, ಕಳೆದುಹೋಗುವ ಸಖ್ಯ
ಗೊತ್ತವನಿಗೆ ಬೇಕು ಭರ್ತಿ, ಪ್ರೀತಿಯ ಸಾಂಗತ್ಯ
ಕೊಡುವಾಸೆಗೆ ನೂರು, ಅಡೆತಡೆ ವಾಸ್ತವ ಗೋಡೆ
ಕೊಡಲಾರೆನೆಂದು ಕಳಚೇ, ಬಿಡದ ಮನದ ಗೂಡೆ ||

ಅವನದೇನೊ ಅವಸರ, ಕಳುವಾಗಿ ಕಾಲದ ಸಂಚಿ
ಹುಡುಕಾಟದ ಬಳ್ಳಿ, ತೊಡರಿದ್ದೆ ತಡವಾಗಿ ತರಚಿ
ಹುಟ್ಟಿದ ಕಾಲಕೆ, ತಪ್ಪಿನ ಆರೋಪ ವಿಧಿಗೆ ಶಾಪ
ಆದರು ಬಿಡದ ಮೋಹ, ಬಿಡದಲ್ಲ ಅವಳದೆ ಜಪ ||

ಮುನಿಸಿ ದಣಿಸಿ ಕಂಗೆಡಿಸಿ, ಓಗೊಟ್ಟ ಗಳಿಗೆಗಳು
ತೇಪೆ ಹಾಕಿದರೇನು, ಮೂಲ ಪ್ರೀತಿಗಲ್ಲಿಲ್ಲ ಒಕ್ಕಲು
ಬರಿ ಸಹಿಸುವ ಬಂಧ, ನಿಜ ಪ್ರೀತಿಯಾಗದ ನೋವು
ಒಂದು ಕೈ ಚಪ್ಪಾಳೆಯೆಲ್ಲಿ, ಚಿಟುಕಿಯದೆ ಕಲರವವು ||

ನೋಯಿಸೆ ಮನಬಾರದು, ನೋಯಿಸದೆ ಬಿಡದು ಪ್ರೀತಿ
ಪ್ರತಿ ಕ್ಷಣ ಮನ ವಿಹ್ವಲ, ಕೈತುತ್ತು ಬಾಯಿಗಿಲ್ಲದ ಮಿತಿ
ಪ್ರತಿ ನಿರೀಕ್ಷೆಗು ಸೋಲು, ಪರೀಕ್ಷೆಯಾಗಿ ಶೂನ್ಯದ ಪ್ರವರ
ಸಹಿಸಿ ನಟಿಸುವ ನೋವ, ತೆರವಾಗಿಸೊ ಸರಿಯವತಾರ ||

– ನಾಗೇಶ ಮೈಸೂರು

00506. ವಿರಹ…


00506. ವಿರಹ…
________________

ಪ್ರಾಯ / ವಿರಹದ ಸಹಸ್ರಾಕ್ಷನ ಕಬಂಧ ಬಾಹುವಿನಲಿ ಸಿಕ್ಕ ಜೀವದ ವಿಲವಿಲ ವದ್ದಾಟ ಮಾತಾಗಿ ಹೊರಬಿದ್ದ ತರಹ. ದೈಹಿಕ ಕಾಮನೆ, ಮಾನಸಿಕ ಭಾವನೆ ಹಾಗೂ ಇವೆರಡರ ನಡುವಿನ ಒದ್ದಾಟ, ತಲ್ಲಣ, ತುಮುಲಗಳ ಚಿತ್ರಣ..

ಬೆಂಕಿಯ ಅಲೆ ಮೈ ತಟ್ಟಿದೆ
ನಿಮಿರಿ ನಿಂತ ರೋಮ
ಪ್ರಜ್ವಲಿಸುವ ಸಲೆಯಾಗಿದೆ
ಒಡಲೊಳಗಿನ ಕಾಮ ||

ಒಳಗುಟ್ಟಿದೆ ಹೊರಗುಟ್ಟಿದೆ
ವೇದನೆ – ನಗು ಒಸಗೆ
ಒಣ ಮೌನದಲೇ ಘೀಳಿಟ್ಟಿದೆ
ಮರೆತ ಮನದ ಬೆಸುಗೆ… ||

ತುಟಿ ಮುತ್ತಿನ ಹನಿ ಹನಿಯಲಿ
ಬಿಸಿಯೇರಿದ ಬಯಕೆ
ಬಳಲಿ ಬೆಂದು ಬಿರುಕಾಗಿದೆ
ಕಾದು ನಿನ್ನಾ ಮನಕೆ…||

ಕೋಲಾಟದ ಬಡಿತಕ್ಕೆದೆ
ಏರಿಳಿದಿದೆ ಕಾವು
ಹದಿ ಹರೆಯಕೆ ಮುಪ್ಪಡರಿದೆ
ನೀನುಡಿಸಿದ ನೋವು…||

ನೆನಪಾಗದೆ ಬಿಸಿಯುಸಿರಲಿ
ಹೆದೆಯೇರಿದ ಇರುಳು
ಮತ್ತೇರಿಸಿ ಮನದಣಿಸಿದ
ಪರಿವಿಲ್ಲದ ಹಗಲೂ ? ||

ಸಾಕಾಗಿದೆ ಈ ವಿರಹದ
ದಳ್ಳುರಿಯಲಿ ನೋವು..
ಮರೆತೆಲ್ಲವ ಬರಬಾರದೇ
ನೀಗಿ ಮನದ ಬಾವು…||

– ನಾಗೇಶ ಮೈಸೂರು

00505. ವಿಷಾದಗಳು


00505. ವಿಷಾದಗಳು
_________________

ವಿಷಾದಗಳ ಹಲವು ವಿಶ್ವ ರೂಪಗಳಲ್ಲಿ, ಕೆಲವು ವಿಷಾದವ್ಹುಟ್ಟಿಸಿದ ಪ್ರತಿಕ್ರಿಯೆಗಳು ಮತ್ತೊಂದು ತರದ ವಿಷಾದವಾಗಿಯೆ ಹೊರಹೊಮ್ಮುವ ವ್ಯಂಗ್ಯ, ಈ ಸಾಲುಗಳಲ್ಲಿ ಅಡಕ. ಹೊರಬರುವ ಯತ್ನವೆ ಹೋರಾಟದ ದನಿಯಾದರು ಅದನ್ನಡಗಿಸುವ ವಾಸ್ತವಗಳ ಗುದ್ದಿನ ಶಕ್ತಿ, ಈ ಕವಿತೆಯ ಮತ್ತೊಂದು ಭಾವ. ವಿಷಾದಗಳನೆ ಬಿತ್ತಿ ವಿಷಾದಗಳನೆ ಬೆಳೆವ ವಿಷಾದವೆ ಇದರ ಸಂಗ್ರಹ ಸಾರ.

  
(Picture source wikipedia : https://en.m.wikipedia.org/wiki/File:Maud-Muller-Brown.jpeg)

ನಿನ್ನ ನೆನಪಲ್ಲಿ ಅರಳುತ್ತವೆ
ನೂರೆಂಟು ಕವನ, ಚಿತ್ರ …
ಅಂಚೆಯಲ್ಲಿ
ಸಂಪಾದಕರ ವಿಷಾದ ಪತ್ರ ||

ಮುಗ್ದ ನಗುವಲ್ಲಿ ಆಸೆಯ
ಚಿಮ್ಮಿಸಿದ್ದು ಇತಿಹಾಸ..
ನಿನ್ನ ಪ್ರತಿಕ್ರಿಯೆ –
ಅರ್ಥವಾಗದ ಮಂದಹಾಸ ||

ಅಪ್ಪಿ ಬಿಸಿಯಾಗಲೆ ಬಯಸಿ
ಪಡೆದದ್ದು ನಿನ್ನ ಸಂಗ..
ಆಗಿದ್ದು ಬೆಂಕಿ ಮುಟ್ಟಿದ
ಸುಟ್ಟ ರೆಕ್ಕೆಯ ಪತಂಗ ||

ಕನಸ ಕಣ್ಣಲ್ಲಿ ನೋವ
ಮರೆಸಿದ್ದು ನಿನ್ನ ಪ್ರೀತಿ ;
ಯಾರ ಬಯಕೆಗೋ ಬಿರಿದ
ಹೂವಾಗಿ ಬರಿಯ ಭ್ರಾಂತಿ…||

ಸಂಕ್ರಾಂತಿ ನೋವ ಮನದಿ
ಹಂಚಿದ್ದು ಹಚ್ಚ ಹಸಿರು..
ಆ ನೋವ ಬಿತ್ತಿ ದಿಗ್ಭ್ರಮೆಯ
ಬೆಳೆದಿದೆ ಕ್ಷೀಣ ಉಸಿರು…||

– ನಾಗೇಶ ಮೈಸೂರು

00363. ಪ್ರೀತಿ ಪ್ರೀತಿ ಪ್ರೀತಿ..!


00363. ಪ್ರೀತಿ ಪ್ರೀತಿ ಪ್ರೀತಿ..!
__________________________________  

   
ಚಿತ್ರ ಕೃಪೆ: ಸ್ವಯಂಕೃತಾಪರಾಧ

ಹಗಲ ಪ್ರೀತಿ ಇರುಳ ಪ್ರೀತಿ
ಸಂಧ್ಯೆಯ ಸೆರಗೂ ಪ್ರೀತಿ
ಜಗಳ ಪ್ರೀತಿ ಮುನಿಸು ಪ್ರೀತಿ
ಕೆಣಕಾಡುವತೀ ಮಾತು ಪ್ರೀತಿ ||

ಮೌನ ಪ್ರೀತಿ ಬೇಸರ ಪ್ರೀತಿ
ವೇದನೆ ಶೋಧನೆಯೂ ಪ್ರೀತಿ
ರೋಧನ ಪ್ರೀತಿ ಸಂಕಟವು ಪ್ರೀತಿ
ಹೊಟ್ಟೆಕಿಚ್ಚು ಪ್ರೀತಿ ಅಸೂಯೆಯ ರೀತಿ ||

ಸಲಿಗೆ ಪ್ರೀತಿ ಹಂಬಲಿಕೆ ಪ್ರೀತಿ
ಆದರವು ಪ್ರೀತಿ ಅನಾದರ ರೀತಿ
ಹೊಡೆಯೆ ಪ್ರೀತಿ ತಡೆಯೆ ಪ್ರೀತಿ
ಆತಂಕ ಪ್ರೀತಿ ಅಡೆತಡೆ ರೀತಿ ||

ದ್ವೇಷವು ಪ್ರೀತಿ ಕಡೆಗಣಿಸೆ ಪ್ರೀತಿ
ಹುಚ್ಚದು ಪ್ರೀತಿ ಹಚ್ಚಿರೆ ಜ್ಯೋತಿ
ಮೆಚ್ಚುಗೆ ಪ್ರೀತಿ ಅಪ್ಪುಗೆ ಪ್ರೀತಿ
ಚುಂಬನ ಪ್ರೀತಿ ಮುತ್ತಿಕ್ಕುವ ರೀತಿ ||

ಪ್ರೀತಿಯು ಪ್ರೀತಿ ಪ್ರೇಮವು ಪ್ರೀತಿ
ಪ್ರಣಯ ಪ್ರೀತಿ ಪರಿಣಯ ಪ್ರೀತಿ
ಯಾವುದಿಲ್ಲ ಪ್ರೀತಿ ಜಗ ರೀತಿಯಲ್ಲಿ
ಕಂಡವರಿಗದೆ ಮಾಯೆಯ ಶಕ್ತಿ||

Thanks and best regards,
Nagesha MN
ನಾಗೇಶಮೈಸೂರು,Nagesha,ನಾಗೇಶ,nageshamysore,ಮೈಸೂರು,ಬಂಧ,ಪ್ರೀತಿ

00150. ನಲ್ಲೆ, ನೀ ನೋವಿನಲಿ ಕೈ ಹಿಡಿದ ಹೊತ್ತು …..!


00150. ನಲ್ಲೆ, ನೀ ನೋವಿನಲಿ ಕೈ ಹಿಡಿದ ಹೊತ್ತು …..!
____________________________________

ನಲ್ಲೆಯೊಬ್ಬಳು ಮೊಟ್ಟ ಮೊದಲ ಬಾರಿಗೆ ಕೈ ಹಿಡಿದಾಗ ಆಗುವ ಅನುಭವ, ಅನುಭೂತಿ, ಉದ್ವೇಗ, ಉಲ್ಲಾಸ, ಕಳವಳ, ಭೀತಿಗಳೆಲ್ಲದರ ಸಂಗಮಿಸಿದ ಅನುಭವ ಈ ಕವನದ ಆಶಯ. ಕೈ ಹಿಡಿಯಲು ಯಾವುದೊ ನೋವೆ ಕಾರಣವಾದರೂ, ಆ ನೆಪದ ಸ್ಪರ್ಶವೆ ಹುಟ್ಟಿಸುವ ಭಾವೋನ್ಮಾದದ ಉತ್ಕರ್ಷ ಇಲ್ಲಿ ವ್ಯಕ್ತವಾಗಿದೆ.

https://nageshamysore.wordpress.com/00150-%e0%b2%a8%e0%b2%b2%e0%b3%8d%e0%b2%b2%e0%b3%86-%e0%b2%a8%e0%b3%80-%e0%b2%a8%e0%b3%8b%e0%b2%b5%e0%b2%bf%e0%b2%a8%e0%b2%b2%e0%b2%bf-%e0%b2%95%e0%b3%88-%e0%b2%b9%e0%b2%bf%e0%b2%a1%e0%b2%bf/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

ಮನದಿಂಗಿತಗಳ ಸ್ವಗತ!


ಇಲ್ಲಿರುವ ಬರಹ, ಅಭಿಪ್ರಾಯಗಳೆಲ್ಲ ನನ್ನ ಸ್ವಂತದವು. ಯಾರಿಗಾದರೂ, ಏನಾದರೂ, ಏನಕ್ಕಾದರು ಹೋಲಿಕೆಯಿದ್ದಲ್ಲಿ ಅದು ಕೇವಲ ಕಾಕತಾಳೀಯ. ಅಲ್ಲದೆ ಇದರಲ್ಲಿ ಬರುವ ಅಭಿಪ್ರಾಯಗಳು ಸಮಗ್ರತೆಯ ದೃಷ್ಟಿಯಿಂದ ಪರಿಗಣಿತವೆ ಹೊರತು, ಬೇರ್ಪಡಿಸಲ್ಪಟ್ಟ ಅಥವಾ ತಿರುಚಿದ ತೀರ್ಮಾನಗಳ ಪರಿಧಿಯಲ್ಲಿ ಊರ್ಜಿತವಲ್ಲ. ಬರಹದಲ್ಲಿ ಎಷ್ಟೊ ವಿಷಯಗಳು ಹೇಳದೆ ಬಿಟ್ಟ ಸಾಧ್ಯತೆಗಳಿರುವುದರಿಂದ, ಅಸಂಪೂರ್ಣತೆಯಿಂದಾಗಿ ತಪ್ಪು ಕಲ್ಪನೆ, ತೀರ್ಮಾನಗಳನ್ನು ಮಾಡುವ ಸಾಧ್ಯತೆಗಳಿರಬಹುದು. ಆ ರೀತಿಯ ಗೊಂದಲ ಕಂಡುಬಂದಲ್ಲಿ, ಸ್ವತಃ ಸಂಪರ್ಕಿಸಿ ಸರಿಯಾದ ಹಿನ್ನಲೆಯನರಿತು ಅರ್ಥೈಸಬೇಕೆಂದು ಕೋರಿಕೆ (ಅಂಥಹ ವಸ್ತು ವಿಷಯಗಳೇನಾದರೂ ಇದ್ದಲ್ಲಿ).