01734. ಅವಳಾದ ಬಗೆ..


01734. ಅವಳಾದ ಬಗೆ..

________________________________________

ಗಗನದ ಬಿಲ್ಲಿಂದ ಬಿಟ್ಟ ಬಾಣಗಳೆ ಮಿಂಚಾಗಿ

ನಿನ್ನ ಕಣ್ಣಂಚ ಸೇರಿ ಮಿನುಗುವ ಹೂವಾಯ್ತಲ್ಲೆ

ಜಾರಿ ತುದಿಯಿಂದ ಬಿದ್ದ ಬಿಂದು ತುಟಿ ಸೇರಿ

ತೇವದೆ ತೆರೆದಧರದ ಕದ ಬೆಳ್ಳಿ ನಗುವಾಯ್ತಲ್ಲೆ ||

ಜಲಪಾತಗಳಾದವೆ ಕೆನ್ನೆ ಪರ್ವತದ ನುಣುಪಲಿ

ಕೆಂಪಾಗಿಸಿದ ಕದಪ ಕನ್ನೆತನ ರಂಗಿನ ಹಂಗಲಿ

ಹೆದರಿಸಲೆಂಬಂತೆ ಗಗನ ಗುಡುಗಿನ ಸದ್ದಾದರು

ಪರವಶ ಗಾನ ಕೊರಳಲಿ ಹೊರಟಿತಲ್ಲ ಜೋರು ||

ಮುತ್ತಿನ ಮಳೆ ಹನಿ ಸರದಿ ಸುರಿಯಿತಲ್ಲ ಭರದೆ

ತಟ್ಟುತ ನೆತ್ತಿಯ ದಾಟಿ ಹಣೆ ಧಾರೆ ಸಂಭ್ರಮದೆ

ಸೇರುತ ನಯನ ಕೊಳ ತುಂಬಿಸಿ ಕಂಬನಿ ನೌಕೆ

ಅಳಿಸಿದರು ಹರ್ಷದ ನೀರು ಕುಸಿಯದ ಹೆಣ್ಣಾಕೆ ||

ಸೋತವಲ್ಲ ಹೆದರಿಸಿ ಬೆದರಿಸಿ ಕಾಡೆ ಪ್ರಕೃತಿಯ

ಗೆಲ್ಲುವ ಸುಲಭದ ಹಾದಿ ಶರಣಾಗುವ ಸಮಯ

ಅವಿರ್ಭವಿಸುತವಳಲ್ಲೆ ಭಾವದ ಝರಿ ತಾವಾಗಿ

ಅವಳಾ ಚಂಚಲ ಪ್ರವೃತ್ತಿಗೆ ಮುನ್ನುಡಿ ಸರಕಾಗಿ ||

ಅದಕವಳಲಿದೆ ಮೋಡ ಮಿಂಚು ಮಳೆ ನಿಗೂಢ

ಅವಳ ವರ್ತನೆ ಪ್ರವರ್ತನೆ ಊಹೆಗೆಟುಕದ ಜಾಡ

ಅರಿಯಲೆಲ್ಲಿ ಅಳೆಯಲೆಲ್ಲಿ ಅಮೇಯದ ವಿಸ್ಮೃತಿ

ಸರಿಯರಿತರೆ ತಹಳಂತೆ ದಿಕ್ಕೆಟ್ಟ ಮನಕು ಜಾಗೃತಿ ||

– ನಾಗೇಶ ಮೈಸೂರು

೨೨.೦೫.೨೦೧೮

(Picture source : Internet / social media received via FB friends like Madhu Smitha – thank you !!😍😊🙏🙏💐🌷)

01146. ನಗು ಬಗೆ….


01146. ನಗು ಬಗೆ….
___________________

(೦೧)
ಮುಗುಳ್ನಕ್ಕಳು
ಬಾಡದ ಹೂ ನಕ್ಕಿತು
– ಕವಿ ಕನ್ನಡಿ

(೦೨)
ಮುನ್ನುಡಿ ಬರಿ
ಮಾತಿಲ್ಲ ಕಥೆಯಿಲ್ಲ
– ಮಂದಹಾಸದೆ

(೦೩)
ಕದ್ದು ನೋಡುತ
ತುಟಿಯಂಚು ನಗೆಯ
– ಗೂಢ ರವಾನೆ

(೦೪)
ಹುಬ್ಬೇರಿಸುತ
ಮಾತೆಲ್ಲೋ ಮನಸೆಲ್ಲೊ
– ಮಂದ ಗಮನ

(೦೫)
ನೂರಾರು ಅರ್ಥ
ಅವಳ ನಗೆ ನಿಗೂಢ
– ಅನಂತ ಯಾನ

(೦೬)
ಕಣ್ಣು ಕಣ್ಣಲಿ
ಕಲೆತು ನಿಷೇಧಾಜ್ಞೆ
– ಬಿರುಸು ತುಟಿ

(೦೭)
ನಕ್ಕಳಾ ಮಾತೆ
ಬಿಕ್ಕಿ ಬಿಕ್ಕಿ ಅಳುತ್ತ
– ವಿಷಾದದಲ್ಲಿ

(೦೮)
ಗಹಗಹಿಸೆ
ಅಪಹಾಸ್ಯದ ನಗೆ
– ಅಬ್ಬರವಷ್ಟೇ

(೦೯)
ಕಿಲಕಿಲನೆ
ಜುಳುಜುಳು ಸದ್ದಲ್ಲಿ
– ಮಂಜುಳ ಹನಿ

(೧೦)
ಮರೆಯೆ ಹೇಗೆ
ನಗಿಸು ನನ್ನ ಹೂವೇ
– ನಗೆ ನೆನಪು

– ನಾಗೇಶ ಮೈಸೂರು
೧೮.೦೨.೨೦೧೭

(Pictures : wikihow & Creative Commons)