01097. ಬದುಕು, ನೀ ಕಂಡಂತೆ


01097. ಬದುಕು, ನೀ ಕಂಡಂತೆ
__________________________


ಅವರವರು ಕಂಡಂತೆ
ಅವರ ಜೀವನ ಸಂತೆ
ಅವರಿವರು ಕಂಡಂತೆ
ಬಾಳುವುದೇಕೊ ಮತ್ತೆ ?

ಅವರ ಕಣ್ಣಿನ ಸೊಗಸು
ಅವರ ಕನಸಿನ ಕೂಸು
ನೀನಾಗಲೇಕೆ ನನಸು –
ಆದೀತೆಂದು ಮುನಿಸು ?

ಅವರಾಗದ ಅವರ
ನಿನಗೆ ಆರೋಪಿಸುವರ
ನೀನಪ್ಪುವುದೇಕೊ ಸುಮ್ಮ
ನೀನಾಗಿಹೆ ನಿನಗೆ ಬೊಮ್ಮ !

ಯಾಕಿಂಥ ಒಳ ದಂತಕುಳಿ
ನೀನೆ ಶಿಲ್ಪಿ ಕೈಗೆತ್ತಿಕೊ ಉಳಿ
ಉಳಿಗಾಲವಿಲ್ಲ ಯಾರೋ ಕೆತ್ತೆ
ಅರಿವ ಮೊದಲೆ ಪೂರ್ತಿ ಕೆಟ್ಟೆ..!

ಬದುಕು ನೀನು ಕಂಡ ಹಾಗೆ
ಮಡಿಲ ಕೆಂಡ ಸುಡುವ ಬಗೆ
ನೀರುಣಿಸೆ ಇದ್ದಿಲು ತುಂಡು
ನೀರಾದೆಯೊ ಕೊಲುವ ಗುಂಡು..!

– ನಾಗೇಶ ಮೈಸೂರು
೨೪.೦೧.೨೦೧೭
(Picture source: Creative Commons)

01019. ಹುಟ್ಟು ಸಾವು ಬದುಕು ಬವಣೆ..


01019. ಹುಟ್ಟು ಸಾವು ಬದುಕು ಬವಣೆ..
___________________________

(೦೧)
ಬಿಡುವುದಿಲ್ಲ
ಬದುಕು ಹೇಗಾದರೂ
ಸಾವು ಮುಕ್ತಾಯ

(೦೨)
ನರಳಿಸಿದೆ
ಎಂದು ಮೆರೆಯದಿರು
ಮರು ಪಾವತಿ

(೦೩)
ಎಷ್ಟೆಲ್ಲಾ ಕೊಟ್ಟು
ಹೆಸರಾದ ಭ್ರಮೆಗೂ
ಅನಾಥ ಪ್ರಜ್ಞೆ

(೦೪)
ಅಟ್ಟಹಾಸದ
ಹುಚ್ಚು ನಗೆಯ ಮೆಟ್ಟಿ
ನಗಬಲ್ಲೆಯ

(೦೫)
ಕೇಕೆ ಹಾಕುತ್ತ
ನಕ್ಕರೇನು ಗೆಲುವೆ
ತಾಳು ಸೋಲುವೆ

(೦೬)
ತಪಿಸಿದರು
ಶಪಿಸಿದರು ನೊಂದು
ತುದಿ ಮೊನೆಚು

(೦೭)
ಬಿಟ್ಟಿರಲಾರೆ
ಅನುವಷ್ಟು ಹತ್ತಿರ
ದೂರ ತರಲು

(೦೮)
ಚಂಚಲ ಚಿತ್ತೆ
ಯಾರು ಹಿತ ನಿನಗೆ
ಚಿಟ್ಟೆ ಮನಸು

(೦೯)
ಸಾವು ಗೆದ್ದರೂ
ಸೋತ ಹಾಗೆ ನಟನೆ
ಮೂಢ ಜಗತ್ತು

(೧೦)
ಸತ್ತದ್ದು ನಿಜ
ನೀ ಹೊಗಳು ತೆಗಳು
ಪಟದ ಬಾರಿ

– ನಾಗೇಶ ಮೈಸೂರು
೦೬.೧೨.೨೦೧೬

00812. ಬದಲಾಗಿ ಕಾಲ ದೇಶ ಜನ..


00812. ಬದಲಾಗಿ ಕಾಲ ದೇಶ ಜನ..
___________________________


ಏರುವ ಬೆಲೆ ದೈನಂದಿನ ಜೀವನ ಸಾಗಿಸುವ ಪ್ರಕ್ರಿಯೆಯೆ ಮುಗ್ಗುರಿಸಿಕೊಂಡು ಹೋಗುವಂತೆ ಮಾಡಿ ಎಲ್ಲಾ ಸ್ತರದ ಜನಗಳೆಲ್ಲರ ಬದುಕಲ್ಲಿ ಉಂಟುಮಾಡುವ ತಳಮಳ, ಕಳವಳಗಳ ಕೆಲವು ತುಣುಕು ಈ ಪದ್ಯ. ಕೆಲವು ವರ್ಷಗಳ ಹಿಂದೆ ಬರೆದಿದ್ದು ಹೆಚ್ಚುಕಡಿಮೆ ಈಗಲೂ ಪ್ರಸ್ತುತ ಅನಿಸಿತು.

ನನಗನಿಸುವುದು – ನಮ್ಮಲ್ಲಿ ಬೆಲೆ ಕಡಿಮೆಯಾಗುವ ಸಾಧ್ಯತೆಗಿಂತ ಕೊಳ್ಳುವ ಶಕ್ತಿ, ಸಾಮರ್ಥ್ಯ ಹೆಚ್ಚುವುದು ಚಾಲ್ತಿಯಲ್ಲಿರುವ ಪ್ರಕ್ರಿಯೆ ( ಉದಾಹರಣೆಗೆ ಸಂಬಳಗಳ ದರ ಹೆಚ್ಚುವೆ ಮುಲಕ) . ಆದರೆ ಬೆಲೆಗಳ ಹೆಚ್ಚಳ ಎಲ್ಲರಿಗೂ ಏಕರೂಪಿಯಾಗಿ, ಒಂದೇ ಮಟ್ಟದಲ್ಲಿದ್ದರು ಸಂಬಳ , ಸವಲತ್ತುಗಳ ಮಟ್ಟದ ಏರಿಕೆ ಎಲ್ಲರದು ಒಂದೇ ರೀತಿ ಇರುವುದಿಲ್ಲ. ಇನ್ನು ನಿಯಮಿತ ನೌಕರಿಯಿಲ್ಲದ ಜನರ ಮಾತಂತೂ ಹೇಳುವ ಹಾಗೆಯೇ ಇಲ್ಲ. ಹೀಗಾಗಿ ಬೆಲೆ ಏರಿಕೆಯೆನ್ನುವುದು ಸದಾ ಕಾಣುವ, ಕಾಡುವ ಅಂಶ. ಅದು ಕಾಣಿಸಿದರು ಕಾಡಿಸದ ಮಟ್ಟ ಮುಟ್ಟುವುದು ‘ಪ್ರಗತಿ’. ಭಾರತದಂತಹ ದೇಶದಲ್ಲಿ ಆ ಮಟ್ಟ ಮುಟ್ಟಲು ಕ್ರಮಿಸಬೇಕಾದ ದೂರ, ಸಾಗಬೇಕಾದ ಹಾದಿ ಮತ್ತು ಪರಿಶ್ರಮ ಅಗಾಧ. ಆ ಗಳಿಕೆಯ ಹಾದಿಯಲ್ಲಿ ಇನ್ನೇನೋ ಕಳೆದುಕೊಳ್ಳುವ ಬಿಹೀತಿ ಸದಾ ಜತೆಯಲ್ಲಿರುವುದು ಅನಿವಾರ್ಯ.

ಅದೆಲ್ಲ ಒತ್ತಟ್ಟಿಗಿಟ್ಟು ಬರಿ ಬೆಲೆ ಏರಿಕೆಯ ಬಿಸಿಯನ್ನೆ ಗಮನದಲ್ಲಿಟ್ಟು ಬರೆದ ಹಳೆಯ ಕವನ ಇಲ್ಲಿದೆ ನೋಡಿ.

ಬದಲಾಗಿ ಕಾಲ ದೇಶ ಜನ..
____________________________

ನಾವ್ತಿನ್ನುವ ಅನ್ನ, ಆಗುತಿದೆ ಚಿನ್ನ
ಕೆಜಿ ನಲವತ್ತೈದು, ತಿನ್ನುವುದು ಏನನ್ನ
ಹಣ್ಣು ತರಕಾರಿ ಸಿಹಿ, ತಿಂಡಿ ತಿನ್ನೆ ದರ ಕಹಿ
ಬೆಲೆ ಕೇಳೆ ಧರಾಶಾಹಿ, ತಲೆ ಗಿರಗಿರ ತಿರುಹಿ ||

ಓಡಾಡುವ ಬಸ್ಸು, ವೇಗವೆ ಬುಸುಬುಸು
ಏದುಸಿರು ಕೆಮ್ಮಿದರು, ದಮ್ಮಿಗು ಕಾಸು ತೆರು
ಟ್ರಾಫಿಕ್ಕ ಸಾಲು ಸಾಲ, ಕಾದೆ ತೀರಿಸುವ ಕಾಲ
ಬರುವುದ್ಯಾವಾಗ ಭಲಾ, ಸುಯ್ದಾಡೆ ಬಲ ಜಾಲ ||

ಐನೂರರ ನೋಟು ಗತ್ತು, ಐದತ್ತು ಪೈಸೆ ಕಿಮ್ಮತ್ತು
ಬರದು ಒಂದೂ ಸುತ್ತು, ಕಟ್ಟುಗಳೆ ಖಾಲಿ ಮತ್ತು
ದೇವರ ಪೂಜೆಗೂ ಸುಸ್ತು, ದೇವತೆಗಳು ತುಟ್ಟಿ ಬಾಬ್ತು
ಹರಕೆ ಹೋಮಕು ತುರ್ತು, ಐನೂರು ಸಾವಿರದ ಚಾರ್ಟು ||

ಬಟ್ಟೆ ಬರೆ ಕೊಳ್ಳೊ ಹೊರೆ, ಮಕ್ಕಳ ಚಿಂದಿಗು ಐನೂರೆ
ರೆಡಿಮೇಡು ಬ್ರಾಂಡು ಬೇರೆ, ಕೊಡಲೆಲ್ಲಾ ವೆಚ್ಚ ಗ್ರಾಹಕರೆ
ಪಾದರಕ್ಷೆಗಳ ಸರಿ ಸಂತೆ, ಗಟ್ಟಿಯಿರದಿದ್ದರು ಕಾಸಂತೆ
ಕಿತ್ತೋಗುವುದೆಂಬ ಚಿಂತೆ, ವಾರ ತಿಂಗಳಿಗೊಂದರಂತೆ ||

ಬಂಗಾರದ ಬೆಲೆ ಬವಣೆ, ಏರುತಲೆ ಇರೊ ಹಸೆಮಣೆ
ಏರೋ ಸಂಬಳ ಜಿಗಣೆ, ಸಾಲದು ಹೊಸಕಲು ತಿಗಣೆ
ತಲೆ ಬಾಲವೆಲ್ಲ ಚಿಂತೆ ಚಿತೆ, ತರ ಏನಾದರು ಇರುವಂತೆ
ಬದುಕು ಹೇಗಪ್ಪ ಅನಿಸಿತೆ, ಭವಿಷ್ಯವೆ ಗುದ್ದಿ ಕುಕ್ಕರಿಸಿತೆ ||

—————————————————————————-
ನಾಗೇಶ ಮೈಸೂರು
—————————————————————————-

(Picture source: http://www.insurancejournal.com/news/international/2015/07/02/373959.htm)

00665. ಜಿದ್ದಿನ ಜಿಡ್ಡು ದೇಹದ ಜಡ್ಡು – 02/02


00665. ಜಿದ್ದಿನ ಜಿಡ್ಡು ದೇಹದ ಜಡ್ಡು – 02/02
__________________________________

ಬಾಯೃಚಿಯನ್ನು ಗೆಲ್ಲಬಲ್ಲ ಸಂತರು, ಜಿಹ್ವಾ ಚಾಪಲ್ಯವನ್ನು ನಿಯಂತ್ರಿಸಬಲ್ಲ ಅಸಾಧಾರಣ ಶೂರರು ಎಲ್ಲೆಡೆಯೂ ಕಾಣಸಿಗದ ಅಪರೂಪದ ಸರಕೆಂದೆ ಹೇಳಬಹುದು. ರುಚಿಯಾಗಿದೆಯೆಂದೊ, ಯಾರೊ ಬಲವಂತಿಸಿದರೆಂದೊ, ಇದೊಂದೆ ಬಾರಿ ತಿಂದು ನಾಳೆಯಿಂದ ನಿಯಮ ಪಾಲಿಸುವುದೆಂದೊ, ಆಸೆ ತಡೆಯಲಾಗದೆಂದೊ – ಒಟ್ಟಾರೆ ಒಂದಲ್ಲ ಒಂದು ಕಾರಣಕ್ಕೆ ಜಿಹ್ವಾಚಪಲದ ಸೆಳೆತಕ್ಕೆ ಬಲಿಯಾಗುವವರೆ ಎಲ್ಲ. ಅದರ ವಿಶ್ವರೂಪದ ತುಣುಕನ್ನು ಪರಿಚಯಿಸುವ ಮೊದಲ ಭಾಗ ‘ಚಿತ್ತ ಜಿಹ್ವಾ ಚಪಲ !’ ಕವನ.

ಹೀಗೆ ಚೂರು ಚೂರೆ ಒಳಸೇರುವ ಖಳ, ದಿನಗಳೆದಂತೆಲ್ಲ ಒಟ್ಟುಗೂಡುತ್ತ ದಿನೆ ದಿನೆ ನಿಧಾನವಾಗಿ, ವಿಧವಿಧಾನವಾಗಿ ತರತರದ ತೊಡಕು, ತೊಂದರೆಗಳ ಬಲೆಗೆ ಸಿಲುಕುವ ಪರಿ ಎರಡನೆ ಭಾಗದ ಸಾರ. ಕೆಡುತ್ತ ಹೋಗುವ ದೇಹದ ಆರೋಗ್ಯ, ಉಬ್ಬುತ್ತ ಹೋಗುವ ಉದರ ವಿನ್ಯಾಸ, ಕುಗ್ಗುತ್ತ ಹೋಗುವ ಚಟುವಟಿಕೆಯ ದಾಯ, ಮುಗ್ಗುಲಿಡಿದಂತೆ ಅನಿಸಿಬಿಡುವ ಇಡಿ ದೈಹಿಕ ವ್ಯವಸ್ಥೆ – ಹೀಗೆ ಇದೆಲ್ಲದರತ್ತ ನೋಡುವ ಇಣುಕು ನೋಟ ಈ ದ್ವಿತೀಯಾರ್ಧದ ಸಾರಾಂಶ.

  
(picture source: https://encrypted-tbn0.gstatic.com/images?q=tbn:ANd9GcSxOZ7rDNsTEKuOTftFA9wZfjG4ihGlOsePdaXcWdoPd4zTagL8VA)

ಅಜೀರ್ಣ ಖಳ ಬೊಜ್ಜಿನ ಗಾಳ!
___________________________

ಚೂರುಚೂರು ವೈವಿಧ್ಯ
ಒಟ್ಟಾಗಿ ಸೇರಿ ದುರ್ವಿದ್ಯ
ಹೊಟ್ಟೆ ಸೇರೆ ಕೆಟ್ಟು ಅಮೇಧ್ಯ
ಸಂಭಾಳಿಸಲು ಬೇಕು ಧನುರ್ವಿಧ್ಯ ||

ಕಷ್ಟ ಕಷ್ಟ ವೈವಿಧ್ಯತೆ
ಅನಿಯಂತ್ರಣದ ಸಾಧ್ಯತೆ
ನಾಲಿಗೆ ಚಪಲ ತಡೆಯೆ ಸಫಲ
ಆದವ ಮಾತ್ರ ಗೆಲ್ಲುವ ಹಾಲಾಹಲ ||

ತಕತಕ ದಿನಕುಹಕ
ಆಕರ್ಷಣೆ ಮನ ಸೋಲುತ
ಸಡಿಲ ಬಿಡುವರು ಒಮ್ಮೆಗೆನುತ
ಒಮ್ಮೆಯಾಗಿ ನಾಳೆ ಪಾಳಿಯ ಸತತ ||

ವ್ಯಾಸ ವ್ಯಾಸ ಸನ್ಯಾಸ
ಗುಡ್ಹಾಣ ಹೊಟ್ಟೆ ವಿನ್ಯಾಸ
ಭೂಮಿ ಸುತ್ತುವಂತೆ ವರುಷ
ಇಳಿಸಲಿಕ್ಕೆ ನೂರಾರು ಪುರುಷ ||

ಬೊಜ್ಜುಬೊಜ್ಜು ಮೈಗೊಜ್ಜು
ದಿನ ಓಡದಿದ್ದರೆ ನುಜ್ಜುಗುಜ್ಜು
ಮೈ ಚಳಿ ಬಿಡದಿರೆ ದೇಹ ಪೂರ್ಣ
ವಾಸಿಯಾಗಲು ಬೇಕು ವೈದ್ಯ ಚೂರ್ಣ ||

– ನಾಗೇಶ ಮೈಸೂರು

00664. ಜಿದ್ದಿನ ಜಿಡ್ಡು ದೇಹದ ಜಡ್ಡು – 01/02


00664. ಜಿದ್ದಿನ ಜಿಡ್ಡು ದೇಹದ ಜಡ್ಡು – 01/02
_________________________

ಬಾಯೃಚಿಯನ್ನು ಗೆಲ್ಲಬಲ್ಲ ಸಂತರು, ಜಿಹ್ವಾ ಚಾಪಲ್ಯವನ್ನು ನಿಯಂತ್ರಿಸಬಲ್ಲ ಅಸಾಧಾರಣ ಶೂರರು ಎಲ್ಲೆಡೆಯೂ ಕಾಣಸಿಗದ ಅಪರೂಪದ ಸರಕೆಂದೆ ಹೇಳಬಹುದು. ರುಚಿಯಾಗಿದೆಯೆಂದೊ, ಯಾರೊ ಬಲವಂತಿಸಿದರೆಂದೊ, ಇದೊಂದೆ ಬಾರಿ ತಿಂದು ನಾಳೆಯಿಂದ ನಿಯಮ ಪಾಲಿಸುವುದೆಂದೊ, ಆಸೆ ತಡೆಯಲಾಗದೆಂದೊ – ಒಟ್ಟಾರೆ ಒಂದಲ್ಲ ಒಂದು ಕಾರಣಕ್ಕೆ ಜಿಹ್ವಾಚಪಲದ ಸೆಳೆತಕ್ಕೆ ಬಲಿಯಾಗುವವರೆ ಎಲ್ಲ. ಅದರ ವಿಶ್ವರೂಪದ ತುಣುಕನ್ನು ಪರಿಚಯಿಸುವ ಮೊದಲ ಭಾಗ ಈ ಕವನ.

  

(Picture source: http://www.missindia.menu/wp-content/uploads/2014/10/home-panel-11-1.jpg

ಚಿತ್ತ ಜಿಹ್ವಾ ಚಪಲ !
___________________

ಜಿಡ್ಡುಜಿಡ್ದಾಗಿದೆ ಕೈ
ಬಲು ಜಡ್ದಾಗಿದೆ ಮೈ
ಲಡ್ಡು ಹಿಡಿದ್ಹೋಗಿದೆ ಮೂಳೆ
ಇನ್ನಷ್ಟು ಕಳೆಯೋದಿದೆ ನಾಳೆ ||

ರುಚಿರುಚಿಯಾಗಿದೆ
ಬಲು ಶುಚಿಯಾಗಿದೆ
ತೇಲಿದೆ ಎಣ್ಣೆ ಮುಚ್ಚು ಕಣ್ಣೆ
ಬಾಯೃಚಿ ಮುಂದೆ ಗಂಡು ಹೆಣ್ಣೆ ||

ಗರಿಗರಿಯಾಗಿದೆ
ಕರಿ ಸರಿ ಕರಿದಾಗಿದೆ
ಹೀರಿಬಿಟ್ಟು ಜೀವಸತ್ವ ಗುಟ್ಟು
ಬಣ್ಣ ಮೈಮಾಟವೆ ನೀರೂರಿಸಿಟ್ಟು ||

ನಳ ನಳಪಾಕ
ಮಾಡುವರ ಪುಳಕ
ಬಾಯ್ಮಾತಿಗೆ ಸಾಕ ಜಳಕ
ಖುಷಿಯಾಗುವಂತೆ ತಿನ್ನಬೇಕ ||

ಬಗೆ ಬಗೆ ತಿಂಡಿ
ತಿನ್ನಲು ಜೀವಹಿಂಡಿ
ಮುಂದಿಟ್ಟು ನಂಟು ನಲ್ಮೆ
ಒತ್ತಾಯಿಸಿ ಬಲು ಕೆಳೆ ಬಲ್ಮೆ ||

– ನಾಗೇಶ ಮೈಸೂರು

00545. ಕವಡೆ ಪಗಡೆ ಬದುಕು


00545. ಕವಡೆ ಪಗಡೆ ಬದುಕು
____________________________________

   
 
ಬೆಲೆಯಿಲ್ಲದ ಕಡೆ ಬದುಕೇ ದುಸ್ತರ
ಪಗಡೆಯಾಟದಾ ದಾಳ ಕವಡೆ ತರ
ಎಸೆದರು ಬಿದ್ದರೆ ಸರಿ, ಗರ ಅವರ ತರ
ಬರದಿದ್ದರೆ ಸರಿಯಂಕೆ, ಹೀಗಳೆದು ಬೈದರ ||

ಎಸೆದಾಗ ಒರಟು, ಬಿದ್ದಾಗ ನೋವು
ಗಟ್ಟಿ ನೆಲವು ಕುಟ್ಟಿ, ತರಚುವ ಬಾವು
ನಡೆಸೊ ಕಾಯಿಗೂ ಉಂಟು, ಮೆತ್ತೆ ಹಾಸಿನ ಭಾಗ್ಯ
ಪಗಡೆ ಕವಡೆಗೆ ಯಾಕೊ, ನೋವಿನ ದೌರ್ಭಾಗ್ಯ ||

ಹಸ್ತದಲ್ಲಿ ಕೂರಬಿಡದೆ ಸ್ವಸ್ಥ, ಉರುಳಿಸುತ ಸತತ
ಮತ್ತೊಂದು ಮುಚ್ಚಿ ಸುತ್ತ, ನಡುವೆ ಉಸಿರುಗಟ್ಟಿಸುತ
ಕುಲುಕಿಸಿ, ತಿರುವಿ, ರುಬ್ಬಿ, ದಬ್ಬಿ – ಎಸೆವಾಟ ಗೊತ್ತಾ?
ನೂರಾಟ ಆಡಿದರೂ ಯಾರು ಕೇಳರು – ಸುಸ್ತಾಯ್ತಾ ? ||

ಆದರೂ ದಾಳದ ಬದುಕು, ಅಂಕಿಯಲೆ ನಗಬೇಕು
ಸವೆದರು ಸಹಿಸುತ ಜನರ, ಸಂತಸಕೆ ಕುಣಿಯಬೇಕು
ವಿಧಿಯಾಟದ ಹೆಸರಲಿ ಯಾರೊ, ಆಡಿಸುವರು ಆಟ
ಗರ ಬೀಳದ ಹೊತ್ತಲ್ಲಿ ಮಾತ್ರ, ದಾಳಕಷ್ಟೆ ಬೈದಾಟ ||

ಚೌಕಾಭಾರ ಪಗಡೆಯಾಟ, ಮನರಂಜನೆ ವಕ್ತಾರ
ಯಾಕೊ ದಾಳವಾಗಿ ಹೋದೆ ? ಎಲ್ಲರಿಗು ಸದರ
ಬೆಲೆಯಿಲ್ಲದ ಕವಡೆಯ ಬದುಕು, ನಿಕೃಷ್ಟವಾಗಿ ನಿಸ್ಸಾರ
ಏಕಿಂತ ಜನ್ಮವೊ ಶ್ರೀ ಹರಿಯೇ, ದುರಿತವಿತ್ತೇನು ಅಪಾರ ? ||

– ನಾಗೇಶಮೈಸೂರು

(first picture from Kannada Wikipedia : https://kn.m.wikipedia.org/wiki/%E0%B2%9A%E0%B2%BF%E0%B2%A4%E0%B3%8D%E0%B2%B0:Cypraeamoneta.jpg;
Dice picture from wikipedia: https://en.m.wikipedia.org/wiki/File:6sided_dice.jpg)

00504. ಸಂಕ್ಷಿಪ್ತದಲಿ…ಬದುಕು


00504. ಸಂಕ್ಷಿಪ್ತದಲಿ…ಬದುಕು
_________________________

ಕೆಲವು ತುಣುಕುಗಳನ್ನು ಪುಟ್ಟ ಸಂಕ್ಷಿಪ್ತ ಪದ್ಯ ಪಂಕ್ತಿಗಳಾಗಿ ಹೆಣೆದ ಸಾಲುಗಳು – ಬದುಕು, ಶಿಕ್ಷಣ, ಬ್ರಹ್ಮಚರ್ಯ, ಮನುಜ, ಮರಣ..  

 (Picture source : https://en.m.wikipedia.org/wiki/File:Coles_Phillips2_Life.jpg)

ಬದುಕು-
ಮೆಟ್ಟಿದರೆ ಪಲುಕು;
ಹಿಮ್ಮೆಟ್ಟಿದರೆ ದಿನ ನೂಕು..
ಮುನ್ನುಗ್ಗಿದರೆ ಸಿಕ್ಕೆ ಬಿಡುವ ಪರಾಕು! |

ಶಿಕ್ಷಣ-
ಸಿಕ್ಕರೆ ಸುಲಕ್ಷಣ;
ಕೈ ತಪ್ಪಿದರೆ ಅವಲಕ್ಷಣ..
ಮೈಯಪ್ಪಿದರೆ ಅವನೆ ಬಲು ಜಾಣ ! ||

ಬ್ರಹ್ಮಚಾರಣ-
ಸಖ ದಕ್ಕದ ಕಾರಣ;
ಸಖಿ ಸಿಕ್ಕದ ಗೋಳು ಮಣ..
ಸನ್ಯಾಸ ಸಖಿ ಸಖರ ನೋವು ಭಕ್ಷಣ ! ||

ಮನುಜ-
ಮನುವಿನ ವತ್ಸಜ;
ಮನ್ವಂತರ ದಾಟಿದ ನಿಜ..
ಅರಿತರಿಯದೆ ನಿಸರ್ಗ ಬಿತ್ತಿದ ಖನಿಜ ! ||

ಮರಣ-
ಮಂಕುತಿಮ್ಮನ ಹರಣ;
ಹುಟ್ಟುಸಾವಿನ ತುಸು ಸ್ಮರಣ..
ಸುಖ ದುಃಖದ ನಡುವಿನ ತೋರಣ ! ||

——————————————————————–
ನಾಗೇಶ ಮೈಸೂರು
——————————————————————–