00849. ಬಾವ್ಟಕ್ಕೊಂದ್ಸಲಾಂ…


00849. ಬಾವ್ಟಕ್ಕೊಂದ್ಸಲಾಂ…
______________________________


ಕಟ್ಟಾಕ್ಲಿ ಬುಡಿ ಸುಟ್ಟಾಕ್ಲಿ ಬುಡಿ
ನಾಲ್ಗೆಗ್ಬರೆ ಹಾಕ್ಸಿ ಸತಾಯಿಸ್ಲಿ ಬುಡಿ
ಯಾರಪ್ಪಂದೂ ಅಲ್ಲ ನಂ ದೇಶ ನಂ ವಾಸ
ನಮ ಬಾವ್ಟಾ ಹಾರ್ಸೋಕೆ ಯಾರಪ್ಣೆ ಜಗದೀಸಾ ?

ಕೇಸ್ರೀ ಗೊತ್ತೇನಣ್ಣ ಸುರ್ದಿದ್ರಕ್ತದ್ಬಣ್ಣ
ಪರ್ತಂತ್ರ ಸ್ವಾತಂತ್ರ ಲಾಠಿ ಬಂದೂಕದ್ಪ್ರಾಣ
ಕೊಟ್ಟೋನ್ಕೋಡಂಗಿ ಇಸ್ಕೊಂಡೋನಿರ್ಭದ್ರ ಲೆಕ್ಕ
ದೇಸಕ್ಜೀವಾ ಕೊಟ್ಟೋರ್ ಮರ್ವಾದೆ ಉಳುಸ್ರೊ ಚೊಕ್ಕ..

ಯಾವತ್ಗೂನೂ ದೇಸ ಸಾಂತಿ ಅಂತ್ಲೆ ಸಕ್ತಿ
ಬಿಳಿ ಬಾವ್ಟಾ ಹಿಡಿದೋರ್ಗೆ ಎಲ್ಲಿತ್ತಪ್ಪ ಜರೂರ್ತಿ?
ಆದ್ರೂ ವೇದಾಶಾಸ್ತ್ರ ಧರ್ಮ ಸಾಂತಿ ಮಂತ್ರದ್ವಕ್ತಾರ
ಆಗಿದ್ದೋರ್ದಿ ಭೂಮಿ ಸಹಿಸ್ತಾ ಎಲ್ಲಾರ್ ಧರ್ಮದ್ಭಾರ..

ಇನ್ಹಸಿರಿನ ಮಾತ್ಯಾಕೆ ರೈತನ್ಜೀವಾ ಫಸ್ಲು
ಮಣ್ಣಿನ್ಮಗನ ದುಡ್ಮೆ ಇಲ್ದೆ ತಿನ್ನೋದೇನು ಅಸಲು ?
ಕ್ರಾಂತಿ ಮಾಡೋಕಂತ ಹೊರಟಿದ್ದೆ ಹೊಲಕೆ ರೈತ
ಮದ್ದು ಗುಂಡಿಲ್ದೇನೆ ಹಸಿವಿನ್ಯುದ್ಧ ಗೆಲ್ಲೊ ಹಿರಿ ಸ್ವಾರ್ಥ !

ಸೈನಿಕ ಪ್ರಜೆ ರೈತ ಮೂರ್ಮೂಲೆ ಬಿಂದು
ಒಂದೇ ಅಳ್ತೇಲ್ಸುತ್ತೋಕ್ಬೇಕಲ್ಲ ಚಕ್ರದ್ಸಿಂಧು
ಗಟ್ಟಿ ಇಪ್ಪತ್ನಾಲಕ್ಕಡ್ಡಿ ಎದುರಿಸೋಕೆಲ್ಲಾ ಅಡ್ಡಿ
ಹರ್ಯೊಲ್ಲ ಸುಡೋದಲ್ಲ ಎದೆಗ್ಹಚ್ಚಿದ್ಹಚ್ಚೆ ಗಾಡಿ..

– ನಾಗೇಶ ಮೈಸೂರು

(Picture from : http://www.happywalagift.com/best-indian-flag-hd-wallpapers-images-free-download/)