01414. ಎಲ್ಲಿದೆ ಭಯ ಭಕ್ತಿ?


01414. ಎಲ್ಲಿದೆ ಭಯ ಭಕ್ತಿ?
________________________


ಹೇಳು, ಎಲ್ಲಿದೆ ಭಯ ಭಕ್ತಿ?
ಮನುಜಗೆ ಎಲ್ಲಿದೆ ಭಯಭಕ್ತಿ ?
ಇಹುದೆಂದಾವುದೊ ಕಾರಣ ಶಕ್ತಿ
ಮಾಡುತಲಿರುವ ಮತ್ತದದೇ ಕುಸ್ತಿ ! ||

ಇಹುದು ನಿಜದೆಲ್ಲೊ ಮಂತ್ರಶಕ್ತಿ
ಯಂತ್ರದಂತದನೆ ಪುನರುಚ್ಚರಿಸಿ ಸೂಕ್ತಿ
ಭಜಿಸಿದಾ ಪೂಜಿಸಿದ ಫಲಕೆ ಹಲುಬ್ಹಲುಬೆ
ಸಿಕ್ಕಿಬಿಡುವುದೇ ಪದವಿ ಗುಡಿ ಮಸೀದಿ ಶಿಲುಬೆ ? ||

ಉಪ್ಪು ಬೇಳೆ ಹುಣಸೆ ತರಕಾರಿ ಸೊಪ್ಪ
ಬೇಯಿಸಿದ ಮಾತ್ರಕೆ ಆಗಲುಂಟೆ ನಳಪಾಕ ?
ಕೈಗುಣದ ಮಾತು ನಿಜ ವರದಂತೆ ಮರುಳೆ
ಸರಿಸೂಕ್ತ ಬೆರೆಯದಿರೆ ತಿಂದಂತೆ ಒಣ ತಿರುಳೆ ||

ನಂಬಿಕೆಯ ಸೂತ್ರ ನಂಬುವರು ಪಾತ್ರ
ಅಭಿನಯಿಸಲಲ್ಲ ಋಣ ತೀರಿಸಲು ಮಾತ್ರ
ಉಳಿಯಲುಂಟೆ? ಕೆಟ್ಟೆ ಮೋಸದಾ ಫಲಿತ
ಬಿಡದೆ ಕಾಡದಿರದೆ? ನೆರಳಾಗಿ ಅನವರತ ||

ಕಲಿತಿದ್ದೂ ಅರಿಯದಿರೆ ನೀರಲ್ಲಿ ಹೋಮ
ಅನುಕರಿಸಿ ಅನುಸರಿಸೆ ತಿಳಿದಂತೆ ಧರ್ಮ
ತಿಳಿದುಕೊ ಮನುಜ ಇದೆ ಬದುಕಿನ ಮರ್ಮ
ಪರಿಪಕ್ವದೆಡೆಗೆ ನಡೆಸುತಿರಬೇಕು ಪ್ರತಿಕರ್ಮ ||

– ನಾಗೇಶ ಮೈಸೂರು
(Nagesha Mn)

02133. ಬಾ ಬಾರೆ ಭಯ ಭೀತಿಯ ತೊರೆದು


02133. ಬಾ ಬಾರೆ ಭಯ ಭೀತಿಯ ತೊರೆದು
____________________________________


ಮನದೊಳಗಡಿಯನಿಡುವವಳು, ತೊದಲು ನುಡಿಯೇಕೆ ?
ಬಿಡು ಬೆರಗು ಭಯ ಭೀತಿ, ನಿನ್ನಾವರಣವಿದು ಮರುಳೆ !

ಯಾಕಲ್ಲಿ ಬೆವರ ಹನಿ, ಹಣೆ ಸಾಲಾಗಿ ಮಣಿ ಸಂದಣಿ ?
ಸಾಲದೇ ಮುತ್ತಿನ ಹಾರ ? ಕೊರಳ ಫಳಫಳಿಸಿಹುದೆ..

ತುಸು ಲಜ್ಜೆಯಿದೆ ಮುಖದಲಿ, ಪ್ರತಿಫಲಿಸುತಿದೆ ಹೆಜ್ಜೆಯಲಿ
ಎಲ್ಲಿಂದೆಲ್ಲಿಗೆ ಕೊಂಡಿ ತರುವೆ ? ಹೆಬ್ಬೆರಳಲೇಕೆ ನೆಲ ಕೆರೆವೆ ?

ಮುಡಿದ ಮಲ್ಲಿಗೆ ದಂಡೆ ಪಾಳಿ, ಇಣುಕಿಸಿದೆ ತೂಗಾಡಿಸಿ ಗಾಳಿ
ಮುಂಗುರುಳಿಗಿಲ್ಲ ಜತೆಯಿಲ್ಲದ ಚಿಂತೆ, ನೀನೇಕೆ ಮತ್ತಲ್ಲೇ ನಿಂತೆ ?

ಕಾಲವದು ಸರಿದು ಪುರಾತನ, ಆಧುನಿಕತೆ ಕಾಲಿಟ್ಟು ಅನನ್ಯ
ಕಾಲ ಹಿಡಿದಿದೆಯೇಕೆ ನಾಚಿಕೆ ? ಉಲಿಯಬಿಡಪರೂಪಕೆ ಗೆಜ್ಜೆ!

ಹೋಯಿತೆಲ್ಲಿ ಪಾಂಡಿತ್ಯದ ಸಾಂಗತ್ಯ? ದನಿ ನಡುಗುವ ಈ ಸತ್ಯ
ಮುಚ್ಚಿಡದಲ್ಲ ಹಾಡಿನ ಏರಿಳಿತ, ನಿನದಲ್ಲ ಬಿಡು ಈ ಭಾವದ ಸಖ್ಯ..

ಬಿಡು ಬಸವಳಿಯಬಿಡದೆ ಮನಸ, ಬಿಚ್ಚಿಡುವ ಕಟ್ಟಿದ ಕನಸ
ಹಾಸಿ ಪಗಡೆ ಹಾಸು ಅಳಿಗುಳಿ, ಮಕ್ಕಳಾಗುವ ನೆಚ್ಚುವವರೆಗೆ

ಹಾವು ಏಣಿಯಾಟ ಬದುಕಂತೆ, ಏಣಿಯಾಗೋಣ ಪರಸ್ಪರ
ಬರಲೇಳು ನದಿ ಪ್ರವಾಹ, ಹುಟ್ಟಾಗು ದೋಣಿಯಾಗುವೇ ನಾ

ಸಾಕಲ್ಲವೇ ಗೆಳತೀ ವಚನ? ಬೇಕೇನು ಆಣೆ ಪ್ರಮಾಣ ?
ನಂಬಲಿ ಬಿಡಲಿ ಕಾಲ, ನಂಬಿಕೆಯನದೆ ನಡೆಸುವ ನಾಣ್ಯ


– ನಾಗೇಶ ಮೈಸೂರು
೨೭.೦೭.೨೦೧೭

(Picture Source : internet / social media)