01015. ಭಲಾ ವಿಧಾತ..!


01015. ಭಲಾ ವಿಧಾತ..!
______________________


ನಾಕೈದೇ ಗಂಟೆಯ ನಿದ್ದೆಯಷ್ಟೆ ಕಳೆದು ಇದೀಗ ತಾನೆ ಎಚ್ಚರವಾದರು ಮನಸೇಕೊ ಪ್ರಪುಲ್ಲವಾಗಿದೆ ಗೊತ್ತಾ ? ಭಾರವಾಗಿ ತೂಗುತಿರೊ ಕಣ್ಣಲ್ಲು ಏನೊ ಶಾಂತಿ, ಸಮಾಧಾನದ ಸೆಳಕು – ರಾತ್ರಿಯ ಅದೇ ಪ್ರಪುಲ್ಲತೆ ಈ ಬೆಳಗಿಗು ಕಾಲು ಚಾಚಿಕೊಂಡು ಮಲಗಿದ ಹಾಗೆ. ನಿನಗಿನ್ನು ನಿದ್ದೆಯಿರಬೇಕು – ಆದರೆ ನಿನದೂ ಅದೇ ಸಮಾಧಾನ ಭಾವದ ನಿದಿರೆ ಅಂತ ಅನಿಸುತ್ತಿದೆ, ಹೌದಾ ?

ದಿಕ್ಕೆಟ್ಟ ನಾವೆಯೊಂದರಲಿ ಧುತ್ತೆಂದೆದ್ದವರಾರೊ ಜತೆಗೂಡಿ ಚುಕ್ಕಾಣಿ ಹಿಡಿದು ತೂರಾಡದೆ ನೇರ ಸಾಗುವ ಹಾಗೆ ಜತೆಗೂಡಿ ನಿಂತ ಭಾವ ಮನಸಿಗೆ ಅದೆಷ್ಟು ಧೈರ್ಯ ಕೊಡುತ್ತದಲ್ಲವಾ? ಯಾವುದೊ ತುಡಿಯುವ ಜೀವವೊಂದು, ಎಲ್ಲೋ ಇದೆಯೆನ್ನುವ ಅನುಭೂತಿಯೆ ಅನನ್ಯವಾದದ್ದು. ಸುತ್ತಲವರೆಲ್ಲರಿದ್ದು ನಾನು ಏಕಾಂಗಿಯೆನ್ನುವ ಪಿಚ್ಚನೆಯ ಭಾವ ಆವರಿಸಿದಾಗ – ‘ನಾನಿಲ್ಲಿರುವೆ ಜತೆಗೆ’ ಎನ್ನುವ ಆ ಸದ್ದಿಲ್ಲದ ವಾರ್ತಾಪ್ರಸಾರ, ಇದ್ದಕ್ಕಿದ್ದಂತೆ ಕಸುವು ತುಂಬಿ ಕೈಹಿಡಿದು ನಡೆಸುವ ಬಗೆ ನಿಜಕ್ಕು ಅಚ್ಚರಿ. ಆದರೆ ಅದೇ ಭಾವದ ಎರಡು ಜೀವಗಳು ಪರಸ್ಪರ ಸಂಧಿಸಿ, ಪರಸ್ಪರರಿಗೆ ಆಧಾರವಾಗುವ ಬಗೆ ಮಾತ್ರ ಅತಿಶಯ… ಅದು ವಿಧಾತನ ಕೈಚಳಕವಲ್ಲದೆ ಬರಿಯ ಕಾಕತಾಳೀಯತೆಯೆಂದರೆ ನನಗೇಕೊ ನಂಬಿಕೆ ಬರದು.

ದೂರದ ಆ ಆಸೆಯದೊಂದೆ ನಾವೆಗೆ ದಿಕ್ಕಿ ತೋರಿಸುತಿದೆ. ಲೌಕಿಕದ ತೊಡಕುಗಳನ್ನೆಲ್ಲ ಅಧಿಗಮಿಸಿ, ಯಾವುದಕ್ಕೂ ಧಕ್ಕೆಯಿರದಂತಹ ರೀತಿಯಲಿ ಗಟ್ಟಿಯಾಗುವ ಅಲೌಕಿಕ ಬಂಧ ಇದೆನಿಸುತ್ತಿದೆ. ಇದು ಇಬ್ಬರಲ್ಲು ಸ್ಪೂರ್ತಿ ತುಂಬುವ, ಇಬ್ಬರ ಬವಣೆಗಳನ್ನು ನೀಗಿಸಿ ಮುನ್ನಡೆಸುವ, ಇಬ್ಬರಿಗು ಚೇತನ ತುಂಬಿ ಚೇತೊಹಾರಿಯಾಗುವ ಅಪರೂಪದ ಬಂಧ. ಇಬ್ಬರನ್ನು ನಾವೇರಲಾಗದೆತ್ತರಕ್ಕೆ ಏರಿಸಿ ಮುನ್ನಡೆಸುವ ಅಮೋಘ ಪ್ರೇರಣಾಶಕ್ತಿ ಇದಾಗುವುದೆಂಬ ಅನಿಸಿಕೆ, ಭರವಸೆ ನನಗೆ.

ಆ ನಂಬಿಕೆಯ ಅದೃಶ್ಯ ಸೂತ್ರವನ್ಹಿಡಿದು ಮುನ್ನಡೆಯೋಣಾ ಬಾ.. ಜತೆಗೆ ಹೇಗೂ ಅವನಿದ್ದೆ ಇರುವ ಹಿನ್ನಲೆಯಲ್ಲಿ..!

ಭಲಾ ವಿಧಾತ..!
__________________________________

ಅವನಾರೊ ಸೂತ್ರಧಾರಿ
ಸೂತಕದವರಂತೆ ದೂರವಿಟ್ಟು
ಕಾಣಿಸಿಕೊಳದೆ ಕಾಯುವ
ಪರೋಕ್ಷದಲೆ ನಡೆಸಿ ನಾವೆ ||

ಯಾವ ನಾವೆಗಾರೊ ದಿಕ್ಕು
ಚುಕ್ಕಾಣೆ ಹಿಡಿವವರಾರೊ
ಚೊಕ್ಕ ನಿಲಲು ಹೆಣಗಾಟವಿತ್ತು
ನಡೆವಾಗಿದೇನೀ ಸುಲಲಿತತೆ ! ||

ಮೊನ್ನೆಮೊನ್ನೆವರೆಗು ಹೊಯ್ದಾಟ
ನಿನ್ನೆಯವರೆಗು ಕಾಡೆಲ್ಲ ಸಂದಿಗ್ದ
ಇಂದೇನಿದು ಪ್ರಶಾಂತ ಬೆಳಗು
ತೆರೆದುಕೊಂಡ ಬಗೆ ಅವನ ಮಾಯೆ ||

ಮಾಯೆಯೊ ಅನಿವಾರ್ಯವೊ
ಕರುಣೆಯವನದದಕೆಣೆಯಿಲ್ಲ ಮೊತ್ತ
ಬಾಳ ಬುತ್ತಿಗಿಟ್ಟವರವರ ಪಾಲು
ಕಟ್ಟಿಕೊಟ್ಟ ಗಳಿಗೆ ಕಿರು ನೆಮ್ಮದಿ ಸಖ್ಯ ||

ಅವನಿತ್ತ ವರದ ಪರಿ ಚೆದುರಬಿಡದೆಲ್ಲ
ಒಗ್ಗೂಡಿ ನಡೆಸುವ ಸೇರಿ ಬದುಕೆಲ್ಲ
ಅವನಿತ್ತ ಹಣತೆ ಸಂಕೇತವದು ಬಿಡು
ದೀಪ ಹಚ್ಚಲಿದೆ ನೂರಾರು ಬದುಕಿಗು ||

– ನಾಗೇಶ ಮೈಸೂರು

(Picture source : Creative Commons)
03.12.2016y