02022. ಭುವನೋತ್ಸವ..


02022. ಭುವನೋತ್ಸವ..
_____________________


ಭುವನೋತ್ಸವ ಇಳೆಗುತ್ಸವ
ನಳನಳಿಸೊ ವನ ಮಹೋತ್ಸವ
ಚಿಗುರೆಲೆ ಚಿಗುಚಿಗುರಿ ಪೂರಣ
ವಸಂತ ನಮನ ಹಸಿರು ತೋರಣ..

ಜಲದುತ್ಸವ ಭುವಿ ನಿತ್ಯ ಮಜ್ಜನ
ಧರಣಿ ಭರಣಿ ಚೆಲ್ಲಾಡಿದ ಕ್ಷಣ
ಸ್ಮರಿಸಿದೆಡೆ ವರ್ಷಾಧಾರಣೆ ಕೃಷಿ
ಫಸಲಾಗಿ ವೃಕ್ಷ ಮರಳಿಸೊ ಮಹರ್ಷಿ..

ತರಂಗ ತರಂಗಿಣಿ ಪಾವನ ಪಾನ
ಜೀವ ವಾಯು ಪವನ ಸಂಧಾನ
ಸುಯ್ದಾಡುತ ಸುಳಿಗಾಳಿ ತನನ
ನಿವಾರಿಸಿ ಅವನಿ ಬವಣೆ ತಲ್ಲಣ..

ಹುಡಿಮಣ್ಣ ಸತ್ವ ಪಂಚಭೂತತ್ವ
ಬೀಜಾಂಕುರ ಗರ್ಭದುದರ ಮಹತ್ವ
ಸೃಜನ ಸೃಷ್ಟಿ ನಿರಂತರ ಸಕ್ರೀಯ
ಭೂಮಾತೆ ಆಗರ್ಭ ಖನಿಜ ಸಿರಿಯ..

ಅವಳುತ್ಸವ ನಿತ್ಯೋತ್ಸವ ನಿಯಮ
ಸತ್ಯೋತ್ಸವ ನಿಸರ್ಗದುಪಮಾಯಾಮ
ಪೊರೆಯದಿರೆ ಜತನ ನಿಸ್ಸಾರ ನಿಸ್ತೇಜ
ಸಮಷ್ಟಿಯಾಗಿ ಪಳೆಯುಳಿಕೆ ಪೂರ್ವಜ..

– ನಾಗೇಶ ಮೈಸೂರು
೨೨.೦೪.೨೦೧೭

(Picture source:http://kauaihabitat.org/tag/earth-day/)

Advertisements