01709. ಒಮ್ಮೊಮ್ಮೆ ವಿಹ್ವಲ ಮನ


01709. ಒಮ್ಮೊಮ್ಮೆ ವಿಹ್ವಲ ಮನ

__________________________

ಕೂತು ಸುಮ್ಮನೆ ಹೊಸೆದಿದೆ ಮನ

ಏನೋ ಕವಿತೆ, ಯಾವುದೋ ಗಾನ

ಯಾವ ರಾಗಕೆ ಮಿಡಿದ ಶೃತಿ ಲಯ

ಯಾರು ಬರೆದರೊ ಹೊಸ ಅಧ್ಯಾಯ ? ||

ಸದ್ದು ಗದ್ದಲ ಸುತ್ತೆಲ್ಲ ಮನಸಂತೆ

ಒಳಗೊಳಗೆ ಬಿಕ್ಕುತ ಮೌನದೊರತೆ

ಮಾತು ಬೇಸರ ಸಾಂಗತ್ಯ ನೀರಸ

ಕೂತೆಡೆ ಕೂರದ ನಿಲದ ನಿರುತ್ಸಾಹ ||

ಚಡಪಡಿಕೆಯೇನೊ ವರ್ಣನಾತೀತ

ಮೋಡ ಮುಸುಕಿದ ಬಾನ ಸಂಕೇತ

ಕಸಿವಿಸಿಯದೇಕೊ ಅದೇನೊ ಅಕಟ

ಮಾತು ಬರಹಕೆ ಸಿಗದ ಆತ್ಮಸಂಕಟ ||

ವ್ಯಕ್ತವಾಗದದೇಕೊ ಅವ್ಯಕ್ತ ಭವ ಚಿತ್ತ

ಸ್ಪರ್ಶಕೆಟುಗದಮೂರ್ತ ಕಾಡಿ ಸತತ

ಸಂಗತಾಸಂಗತ ಆಂತರ್ಯದಲಿತ್ತ

ಅಂತರಂಗಸೂತ್ರ ಪಟದಂತೆ ಗೋತ ||

ಮೇಯ ಅಮೇಯ ಪ್ರಮೇಯ ಸತ್ವ

ಕಲಬೆರಕೆ ಸಿದ್ಧಾಂತ ಸಮ್ಮಿಶ್ರ ತತ್ತ್ವ

ಏನೊ ಹುಡುಕುವ ಬವಣೆ ಅನನ್ಯತೆ

ಕಣ್ಣಿಗೆ ಪಟ್ಟಿ ಬಿಗಿದು ಕಾಡಲಿ ಬಿಟ್ಟಂತೆ ||

– ನಾಗೇಶ ಮೈಸೂರು

೦೧.೦೫.೨೦೧೮

(Picture source: internet / social media)

01630. ಉದಾಸಿ ಮನ..


01630. ಉದಾಸಿ ಮನ..

______________________

ಮನಕೇಕೊ ಉದಾಸ ಭಾವ

ತಿನ್ನುತಿದೆ ಸುಮ್ಮನೆ ಜೀವ

ಒಂದೇ ಸಮನೆ ಸುರಿತ ಸತತ

ಹೇಳಲಾಗದದೇನೊ ಮೊರೆತ ||

ಬೇಡವೆನ್ನುತ ಕೂತಾಗ ನಿಂತ

ನಿಂತ ಚಡಪಡಿಕೆ ನಡೆದಾಡಿಸುತ್ತ

ನಡೆದೆಲ್ಲಿ ಮುಗಿದೀತು ನಿಲ್ಲದೋಟ ?

ಉತ್ತರವಿಲ್ಲದ ಪ್ರಶ್ನೆ, ಗೊತ್ತು ಗುರಿಯೆತ್ತ?! ||

ಮನಸಾಗದಲ್ಲ ತಿನ್ನೆ ತಿನಿಸು

ವಿನಾಕಾರಣ ಎಲ್ಲಕು ಮುನಿಸು

ತಕ್ಕಡಿ ತಟ್ಟೆಗ್ಹಾಕಿದ ಕಪ್ಪೆ ಮನ

ಚಿಂತನೆಗೆಲ್ಲ ಚಿಂತೆಯ ಲೇಪನ ||

ಖೇದವೆಂದರೆ ಖೇದ ವಿಷಾದ

ಮೋದವೆನ್ನೆ ವಿನೋದ ಸಂಪದ

ಎರಡರ ನಡುವಿನದಲ್ಲದ ತ್ರಿಶಂಕು

ಯಾವುದಲ್ಲದಾ ಎಡಬಿಡಂಗಿ ತುಕ್ಕುq ||

ಉದಾಸವಾಗೆ ಉಲ್ಲಾಸ ಒಳಿತು

ಆಗುವ ಬಗೆ ಅರಿವಾಗದ ವಸ್ತು

ಸುಸ್ತಾದರು ಕಾಯೆ ಮೌನ ಹೊತ್ತು

ಬೇಡಿಕೊಳ್ಳುತ ಆಗಲೆಂದು ತುರ್ತು ! ||

– ನಾಗೇಶ ಮೈಸೂರು

Nagesha Mn

(Picture source: Internet / social media)

01593. ನಿರಾಳವಾಗಲಿ ಮನ…


01593. ನಿರಾಳವಾಗಲಿ ಮನ…

_______________________________

ಹಚ್ಚಿಬಿಡು ಕಿಚ್ಚು

ಸುಟ್ಟುಹೋಗಲಿ ಒಮ್ಮೆಗೆ

ಸಿಟ್ಟು ಸೆಡವು ರೋಷ

ಅಸಹಾಯಕತೆ ಕೊರಗು… || ೦೧ ||

ಹೆಚ್ಚಿಬಿಡು ಗೋಳ

ಹೋಳಾಗಿ ಹೋಗಲಿ ಎಲ್ಲಾ

ಚೆಂಡು ಪುಟಿಯದ ತುಂಡು

ಚದುರಿ ಚೆಲ್ಲಾಪಿಲ್ಲಿ ದುರ್ಬಲ.. || ೦೨ ||

ಸೋಲಿನಾ ಮುತ್ತಿಗೆಗೆ

ಎದೆ ಸೆಟೆಸುತ ನಿಲ್ಲು ಬೆಚ್ಚದೆ

ಮೆಟ್ಟಲು ಮೆಟ್ಟಿಲದರಲ್ಲೆ

ಮುತ್ತಿಗೆ ಮುತ್ತಾಗಿ ಜಯಮಾಲೆ || ೦೩ ||

ಮತ್ತಿಗಿಡು ಅಂಕುಶ

ನಿರಂಕುಶ ಪಾತಾಳ ಸ್ವಾರ್ಥ

ಅಹಮಿಕೆ ಗತ್ತಿನ ಸುತ್ತ

ವಿನಯದ ಕೋಟೆ ಪರುಷ || ೦೪ ||

ಚಿಂತೆಗಾಗಲಿ ಚಿತೆ

ಚಿಂತನೆಯ ಉರುವಲಲಿ

ಮಥನ ಮಂಥನ ಸತ್ವ

ಅಧಿಗಮಿಸೆ ಮೊತ್ತ ನಿರಾಳತೆ || ೦೫ ||

– ನಾಗೇಶ ಮೈಸೂರು

(Nagesha Mn)

(Picture source : Internet / social media received via FB friends)

01487. ಮಾರ್ಜಾಲ ಮನ


01487. ಮಾರ್ಜಾಲ ಮನ

_________________________

ಬೆಕ್ಕೆ ಬೆಕ್ಕೆ ಬೆಕ್ಕೆ

ಮಳ್ಳ ಮಳ್ಳ ನಗೆ ನಕ್ಕೆ

ಮನಸೆಂಬ ಕಳ್ಳ ಬೆಕ್ಕೆ

ಈ ಕಳ್ಳಾಟ ನಿನಗೇತಕ್ಕೆ ? || ಬೆಕ್ಕೆ ||

ಮೆಳ್ಳಗಣ್ಣ ನೋಟ ಸಿಕ್ಕೆ

ಸಾಧು ಸನ್ಯಾಸಿ ತರ ತೆಕ್ಕೆ

ಕ್ರೂರತೆ ದಿಟ್ಟಿಸೊ ಚೆಲುವು

ನಿನ್ನಾಟ ಮಾತ್ರ ಹಾಲಹಾಲವು! || ಬೆಕ್ಕೆ ||

ತಪದಲ್ಲಿ ಕೂತ ಜೋಗಿ

ಕಣ್ಮುಚ್ಚಿ ಮುದ್ರೆ ಹಠಯೋಗಿ

ಮಾರ್ಜಾಲ ಮನಸೆ ನೀ ಠಕ್ಕಗುರು

ಬಿಡು ನಿನ್ನಾಟದೆ ನಿನ್ನ ಗೆಲ್ಲುವರಾರು || ಬೆಕ್ಕೆ ||

ಕಣ್ಮುಚ್ಚಿ ಕುಡಿದೆ ಹಾಲು

ಇನಿತಾಗಲಿಲ್ಲವೆ ಕಂಗಾಲು

ನೋಡಲಿ ಬಿಡು ನೋಡೊ ಜಗ

ನೀ ಕುಡಿದು ಖಾಲಿ ಮಾಡುತ ಜಾಗ || ಬೆಕ್ಕೆ ||

ಅಂಥ ಬೆಕ್ಕೊಂದು ಮನದೆ

ಕೂತಾಗಿದೆ ಜನುಮಜನುಮದೆ

ಕುಣಿದಾಡಲೇನು ಕುಣಿತ ನೂರಾಟ

ಕುಣಿಕೆಯವನದೆ ಕೊನೆ ಗಂಟ ಹಾಕುತ || ಬೆಕ್ಕೆ ||

– ನಾಗೇಶ ಮೈಸೂರು

(Nagesha Mn)

(Photos: received via friend)

02135. ಅನಂತಕೆ ಜಾರಿದ ಮನ..


02135. ಅನಂತಕೆ ಜಾರಿದ ಮನ..
______________________________________


ತೊಟ್ಟಿಕ್ಕುತ್ತಿದೆ ಹನಿ, ಮಾಡಿಂದ ಜಾರಿ
ಮಳೆಯೋ? ಹನಿಯೊ? ನೆನಪೊ? ಕಂಬನಿಯೊ ?
ಕಿಟಕಿಯ ಹಿಂದೆ ನಿಂತು ಸರಳ ಹಿಡಿದು
ನೋಡುತ ನಿಂತವಳ ಮನ ಭೂಪಠದ ಚಿತ್ರಣವೋ ?

ಸದ್ದಿಲ್ಲದೇ ಸುರಿವ ಮಳೆ ಸದ್ದಷ್ಟೇ ಪ್ರಸ್ತುತ
ಸಡ್ಡು ಹೊಡೆದು ಸುತ್ತ, ನೀರವತೆ ನಿರಾಯಾಸ
ವರ್ಷಿಣಿ ಗಾಯನ ಮಾತ್ರ ಮೌನದ ಸದ್ದಂತೆ
ಪ್ರಕ್ಷೇಪಿಸಿ ತಲ್ಲಣ ಸೂತ್ರ ಚಂಚಲ ಮನಸಂತೆ !

ನಿರೀಕ್ಷಿಸಿಹಳೇನೋ ಅಸ್ಪಷ್ಟ ತನ್ನರಿವಿಲ್ಲದೆ
ನಿಲ್ಲಬಾರದು ಸುರಿತವೆನ್ನೋ ಆಸೆ ಮಾತ್ರ ಖಚಿತ
ಕನಸುಗಳ ಚೆಲ್ಲಾಟ ಬಹನೋ ಬಾರನೋ ಅವ ?
ಲೆಕ್ಕಿಸದೇ ಮುಸಲಧಾರೆ ಕುದುರೆಯೇರಿ ರಾಜಕುವರ !

ಮುಸಿಮುಸಿ ನಗೆ ಚೆಲ್ಲಿ ಹುಸಿ ಮುಗ್ದತೆ ಸ್ತಬ್ಧ
ಧುತ್ತೆಂದೆಲ್ಲಿಂದಲೋ ಆಗಮ ಪಕ್ವತೆ ಪ್ರಬುದ್ಧ
ತಂಗಾಳಿಗಾಡೋ ಮುಂಗುರುಳು ಮುಚ್ಚುತ ಕಣ್ಣ
ನೆಟ್ಟ ನೋಟ ಎತ್ತಲೋ ಸರಿದಾಟವನೂ ಗಮನಿಸದಲ್ಲ !

ನೆನೆದಿಹಳೆನೋ ಕಾಣದು ಜತೆ ನೆನೆಯುತ್ತಿದೆ ಧರಣಿ
ನೆನಪಿನ ಕೋಟೆಗೆ ಲಗ್ಗೆ ಭಾವವೊ? ಕಲ್ಪನೆಯೋ? ಸ್ಮೃತಿಯೊ?
ಅಯೋಮಯವೆಲ್ಲಾ ಪುಳಕ ಮಳೆ ಹೊತ್ತಿನ ಕೈಚಳಕ
ನೋಡಿಹಳು ತಲ್ಲೀನ ಅನಂತ ನಿಲ್ಲದಿರಲೆಂದು ಬೇಡುತ!

– ನಾಗೇಶ ಮೈಸೂರು
೩೦.೦೭.೨೦೧೭

(Picture source: http://onedio.co/content/21-problems-to-relate-if-you-hate-winter-10292)

01182. ಜಲ ದಿನ ಮನ…


01182. ಜಲ ದಿನ ಮನ…
____________________


(೦೧)
ಜಲಲ ಜಲ
ಸುಲಲಿತ ಅಮಲ
– ಅಮೃತ ಧಾರೆ

(೦೨)
ಜಲ ದೇವತೆ
ಜನನಿ ಜನ್ಮ ಭೂಮಿ
– ತುಂಬಿದ ಕೊಡ

(೦೩)
ಧರಣಿ ಪಾತ್ರೆ
ಹಿಡಿದಿಟ್ಟಿಹ ನೀರೆ
– ಪ್ರಕೃತಿ ಸೀರೆ

(೦೪)
ನೆಲ ಬಿರುಕು
ಬಿಕ್ಕಳಿಕೆ ಕುರುಹು
– ಬರ ಸಿಡಿಲು

(೦೫)
ಬರ ಬಾರದು
ಬಂದರೆ ಗಂಗಾಜಲ
– ಪುಣ್ಯದ ನೆಲ

(೦೬)
ತಿಕ್ಕಲು ಹನಿ
ಮಗ್ಗಲು ಬದಲಿಸಿ
– ತಬ್ಬಿ ಸ್ಖಲನ

(೦೭)
ಬೆವರ ಹನಿ
ಲವಣ ನೆಲ ಗರ್ಭ
– ಅಂತರ್ಜಲದೆ

(೦೮)
ನೀರಿಲ್ಲದಿರೆ
ನಿರ್ವೀರ್ಯ ಪುರುಷತ್ವ
– ಪ್ರಕೃತಿ ಬಂಜೆ

(೦೯)
ಜಲ ದಿನದೆ
ಮಲಿನವಾಗಿಸದೆ
– ಬಳಸೆ ಹಿತ

(೧೦)
ನಾಗರೀಕತೆ
ಹುಟ್ಟಿ ಬೆಳೆಯೆ ಜಲ
– ಅನಾಗರೀಕ

– ನಾಗೇಶ ಮೈಸೂರು
೨೨.೦೩.೨೦೧೭
(Picture source: Creative Commons)

00786. ಮನ ಮನ ಲಗ್ಗೆ


00786. ಮನ ಮನ ಲಗ್ಗೆ
_________________

ಮನಸೇಕೊ ಉದಾಸ, ಬರೆಯಿತೀಗೊಂದು ಪದ ಧೀಂಕಿಟ..


ಮನಸಿಗೆ ಮನಸು ಒಗ್ಗೆ
ಭಾವಕೆ ಹಾಕು ಲಗ್ಗೆ
ಪ್ರಾಮಾಣಿಕ ಇಂಗಿತ ನುಡಿಗೆ
ದಕ್ಕುತ ಭಾವೋತ್ಕರ್ಷದ ಅಡಿಗೆ..

ಮನಸಿಗೆ ಮನಸಿನ ಲಗ್ಗೆ
ಹಾಕೆ ಹರ್ಷದ ಬುಗ್ಗೆ
ಹಾಲುಕ್ಕಬೇಕಿರೆ ಒಲೆಯಾ ಮೇಲೆ
ಕಾಯಬೇಕು ಸರಿ ಪಾತ್ರೆಯ ಜ್ವಾಲೆ..

ಮುಗ್ದ ಮನಕೇನೊ ಮಗ್ಗಿ
ಚಂಚಲತೆ ಚಪಲತೆ ಸುಗ್ಗಿ
ಅರಿಯಲೆಷ್ಟು ಜಟಾಪಟಿ ಹುನ್ನಾರ
ಅರಿತವರಿಲ್ಲ ಮೋಸದ ವ್ಯಾಪಾರ..

ಸರಳವಲ್ಲ ಮನ ಗಣಿತ
ಸಂಕೀರ್ಣ ಲೆಕ್ಕ ಅಗಣಿತ
ಅದೃಶ್ಯದಲೆ ತರಂಗ ನಿಸ್ತಂತು ಸ್ತರ
ಅವರವರ ಮಿಡಿತ ಅವರದೇ ಸಾರ..

ಮನಕಿಲ್ಲ ನಿಶ್ಚಿತ ಮನ
ಮನಸೇ ಮನಸಧೀನ
ನೀಡೆ ನಿರೀಕ್ಷಿಸದೆ ಮನಸ ಪರಭಾರೆ
ಮರಳಿಸಬಹುದು ಮನಸ ಮನಸಾರೆ..

– ನಾಗೇಶ ಮೈಸೂರು

(Picture source:http://www.kannadaprabha.com/astrology/ನಾನು-ನನ್ನ-ಮನಸು/136258.html)