01366. ಮಳೆಯ ಸದ್ದಲಿ ಮೌನ ಹೊದ್ದು..


01366. ಮಳೆಯ ಸದ್ದಲಿ ಮೌನ ಹೊದ್ದು..
_________________________________


ಮಾತಿನ ಲಹರಿಗೆ
ಮಳೆ ಹೊದಿಸಿದೆ ಮೌನದ ಹೊದಿಕೆ
ಮಾತಾಡಲು ಬಿಡು ಮಳೆಗೆ
ಮಿಕ್ಕ ಮಾತೆಲ್ಲ ಅರ್ಥಹೀನ ಚಡಪಡಿಕೆ… ||

ಮಳೆ ಮಾತೆ ಲಯಬದ್ಧ
ತುಂತುರು ಚೌಕಾಸಿ ಹನಿಯುವ ಜಿಪುಣ
ಕೆಣಕದಿರು ತಿಣುಕಾಡಿಸಿಬಿಡುವ
ಮುಸಲಧಾರೆ ಕೊಚ್ಚಿಬಿಡುವ ನಿಪುಣ ! ||

ಹೇಳದಾವುದಿದೆ ಮಾತು ?
ಮಳೆ ನುಡಿಯಲಾಗದೆ, ಹೇಳದೆ ಮರೆತದ್ದು ?
ಬಿಚ್ಚಲ್ಹೊರಡೆ ತಡವರಿಕೆ ಮುರುಕು ನಿಘಂಟು
ಸುಮ್ಮನಾಲಿಸು ಕಲಿಸುತ್ತದೆ ಪ್ರತಿಹನಿ ಸದ್ದು ! ||

ಗೊತ್ತಾಗದದರ ಲೆಕ್ಕಾಚಾರ
ಮೋಡ ಮಿಂಚು ಗುಡುಗು ಸಹಚರ ಏನೆಲ್ಲಾ !
ಬಿತ್ತಿದ ಫಸಲಿಗಾಸರೆ ನಿಶ್ಯೇಷ ಕೊಚ್ಚಿದರೆ
ಮಾತು ಮನೆ ಕೆಡಿಸಿತು, ಮಳೆ ಮಾತೇನು ಕಮ್ಮಿ ? ||

ಮಳೆಯ ಮಾತಿನ ಮನೆಯಲಿ
ಎದೆಯ ಮಾತಾಗಬೇಕು ಮೌನದ ದೋಣಿ
ಹನಿದು ತೊರೆಯಾದ ನೀರಲಿ
ಮುಳುಗಡೆಯಾಗದಂತೆ ಮಾತಿನ ಲಾವಣಿ ||


– ನಾಗೇಶ ಮೈಸೂರು
(Nagesha Mn)
(Picture source 2 : internet / social media)