02166. ಬಾ ಕೂತ್ಕೊಂಡು ಮಾತಾಡೋಣಾ!


02166. ಬಾ ಕೂತ್ಕೊಂಡು ಮಾತಾಡೋಣಾ!

_____________________________________

ಯಾಕೆ ಸುಳ್ಳಾಡ್ತಿ ಗೆಳತಿ ಯಾಕೆ ಸುಳ್ಳಾಡ್ತಿ ?

ಕರೆಯೊಕ್ಮುಂಚೆ ಓಡ್ಬರ್ತಿನಂತ ಯಾಕೆ ಸುಳ್ಳಾಡ್ತಿ ?

ಊರಾಚೆ ತೋಪಲ್ ಮುಸ್ಸಂಜೆಲಿ

ಮಬ್ಬಾಗೋ ಹೊತ್ತು ಕೆರೆದಂಡೆಲಿ

ಕಾಯ್ತಾ ಕೂತಿದ್ಗೊತ್ತಿದ್ರೂನು

ಬರಿ ಮನೆಬಾಗಿಲ ಕಾಯ್ತಿ, ಹೇಳು ಯಾಕೆ ಸುಳ್ಳಾಡ್ತಿ ? || ಯಾಕೆ ||

ನಾನೇನೊ ನಿನ್ ಬಲ್ ಜಾಣಾಂತಿದ್ದೆ

ಎದೆಯೊಳ್ಗಿಟ್ಕೊಂಡ್ ಪಂಚ ಪ್ರಾಣಾಂತಿದ್ದೆ

ಗೊತ್ತಿದ್ದೂ ಗೊತ್ತಿಲ್ದ್ ಪೆದ್ರಾಮ್ನಂಗೆ ಯಾಕೆ ಹಿಂಗಾಡ್ತಿ ?

ನನ್ ಗೆಳೆಯಾ ನೀನ್ಯಾಕೆ ಹಿಂಗ್ಮಾಡ್ತಿ ?

ಬಿತ್ನೆ ಇಲ್ಲ ಕೊಯ್ಲು ಇಲ್ಲ ಮೂರ್ಹೊತ್ತು ಮನೇಲೆ ಎಲ್ಲಾ

ಮಳೆ ಹಿಡ್ದು ಬಾಗ್ಲಲ್ಲೆ ಅಪ್ಪ, ಕಣ್ಣೆಂಗೆ ಮರೆ ಮಾಚ್ತಿ ? || ಯಾಕೆ ||

ನಾ ಹೆಂಗ್ಹೇಳ್ಲೆ ಸಂಕ್ಟ, ಬುಡಲೆಂಗೆ ಬಾಯಿ?

ನಿನ್ಸಂಗಕ್ ಮುಂಚೆ, ನಾ ಶಿಸ್ತಿನ್ ಸಿಪಾಯಿ

ಕೂತಲ್ಕೂರೊಲ್ಲ ಮನ್ಸು, ನಿನ್ ಬೆನ್ಹಿಂದೆ ಬಸ್ಕಿ

ಜಡಿ ಮಳೆಯಲ್ಲು ಬಿಸಿ, ನೆನಪಾಗಿ ನೀ ಕಾಡ್ತಿ

ಒದ್ದಾಡೋ ಮನ್ಸಿಗೆ ಶಾಂತಿ ಸಿಗ್ದೆ, ಓಡಿದ್ನಲ್ಲೆ ತೋಪ್ಗೆ

ನೀನೆಷ್ಟೊ ಸಾರಿ ಕಾದಿದ್ದಾಗ, ನಾ ಬಂದಿರ್ಲಿಲ್ವೆ ಕರೀದೇ ? || ಯಾಕೆ ||

ನಂಗರ್ಥ ಆಗುತ್ತೆಲ್ಲಾ ಹುಡ್ಗ, ಎದೆಯೊಳಗೆ ಕೂತಿಲ್ವಾ ?

ಹೆಣ್ಣುಡುಗಿ ನಾನು ಹೇಳ್ದೆ ಕೇಳ್ದೆ, ಎಲ್ಗೂ ಹೋಗಂಗಿಲ್ಲಾ

ಮಳೆ ಜಾರ್ದಂಗೆ ನೆಪ್ಪೆಲ್ಲಾ ನಿಂದೆ, ನೆಂದೊಗಿದ್ದೆ ಒಳಗೊಳ್ಗೆ

ನೆನ್ಕೊಂಡೆ ಬರಕ್ಹೊರ್ಟಿದ್ದೆ, ಲಂಗ ದಾವಣಿ ಛತ್ರಿ ಹೋಳ್ಗೆ !

ಹಾಳ್ ಮಳೆರಾಯ ಬಿರ್ಸಾಗ್ಬಿಟ್ಟ, ಅಪ್ಪನ್ಕಣ್ತುಂಬಾ ಕೆಂಪು

ಸೆರಗ್ಹೊದ್ಕೊಂಡು ಒಳಗೋಗ್ಬಿಟ್ಟೆ, ಚಳಿಯಿಲ್ದೇನೆ ನಡ್ಕ ಬೆಪ್ಪು || ಯಾಕೆ ||

ಹಾಳಾಗ್ಲಿ ಬಿಡೂ ಬಂದ್ಯಲ್ಲಾ ಈಗ್ಲಾದ್ರು, ಪುಸ್ತಕ ಕೈಲಿ ಹಿಡ್ದು

ಮಳೆ ನಿಲ್ತು ಕೊಟ್ಬರ್ತಿನಿ ಕಥೆ ಪುಸ್ಕಾ, ಅಂತೇಳಿ ಬಂದ್ನೊ ಪೆದ್ದು !

ತೋಪಿಂದ ಮನೆ ಹೋಗ್ದೇನೆ ನೇರ, ಇಲ್ಲೆಂಗೆ ಬಂದ್ಯೊ ಗೆಣೆಯಾ?

ಮಳೆ ನಿಲ್ತೊ ಇದೇ ನಮ್ಜಾಗ ತಾನೆ, ನಮ್ದೇವ್ರ ಸತ್ಯ ನಂಗೊತ್ತಿಲ್ವಾ?

ಹೋಗ್ಲಿ ಬಿಡು ಹೆಂಗೆಂಗೊ ಆದ್ರು, ಸಿಕ್ಬುಟ್ಯಲ್ಲ ಕೊನೆಗು ನಿರಾಳ

ಬಾವಿಕಟ್ಟೆ ಹಿಂದೆ ಪಾಳ್ಗುಡಿ ಮುಂದೆ, ಬಾ ಕೂತ್ಕೊಂಡು ಮಾತಾಡೋಣಾ! || ಯಾಕೆ ||

– ನಾಗೇಶ ಮೈಸೂರು

೧೮.೦೮.೨೦೧೭

(picture source: internet / social media)