01572. ಮೊಗ್ಗೆರಡರ ಮಾತುಕಥೆ…


01572. ಮೊಗ್ಗೆರಡರ ಮಾತುಕಥೆ…

____________________________

ನಾನು ಕಮಲೆ ನೀನು ಕಮಲೆ

ನಮ್ಮಿಬ್ಬರದು ಒಂದೇ ಅಮಲೆ

ನೀ ಕೋಮಲೆ ನಾನೂ ಕೋಮಲೆ

ನೀ ರವಿಯತ್ತ ರವಿ ನನ್ನತ್ತ ಕೊರಳೆ! ||

ನೀ ನಳಿನಿ ಬಳುಕಾಟ ನಿಂತಲ್ಲೆ

ನಾ ಧಾರಿಣಿ ಪಸರಿಸುವ ನೈದಿಲೆ

ನೀನಿರುವೆ ನೀರೊಳಗಿನ ಕುಸುಮ

ನೀರೆ ನಾನಾಗಿಹೆ ಸುಮ ಸಂಗಮ ||

ನೀ ಬಳ್ಳಿಯ ತುದಿಗಿಟ್ಟಿಹ ಕಿರೀಟ

ನನ್ನಂದ ಸೊಬಗೊದ್ದಿಹ ಮುಕುಟ

ನೀ ಕಮಲದೆಲೆ ನಡುವಿನ ಕುಸುರಿ

ನಾ ಬಳ್ಳಿ ಬಳುಕು ನಡುವ ವೈಯಾರಿ ||

ಬಿಡೆಂತ ಹೋಲಿಕೆ ನಮ್ಮಿಬ್ಬರ ಮಧ್ಯೆ

ಬೇಕಿಲ್ಲ ನಮಗೆ ವಿಶ್ವ ಸುಂದರಿ ಸ್ಪರ್ಧೆ

ನೀನು ನಾನು ಆನು ತಾನು ಸೃಷ್ಟಿ ಕುಣಿಕೆ

ಸಿರಿಯೆಮ್ಮ ಸೊಗಡು ಚಂದ ಯೌವನಕೆ ||

ನಿನ್ನೊಡನಿಂದು ಬರೆವೆ ನಾ ಹೊಸ ಭಾಷ್ಯ

ನಿನ್ನ ಮುಡಿದು ಮೇಲೇರಿಸುತ ಸಾಂಗತ್ಯ

ಖಾಲಿ ಕೇಶದೊಡವೆ ನೀನಾಗು ಮೆರುಗು

ಮಿಕ್ಕಿದೊಡವೆ ಜತೆ ನಾವಾಗಿ ಜಗದ ಬೆರಗು ||

– ನಾಗೇಶ ಮೈಸೂರು

೨೪.೦೧.೨೦೧೮

(ಚಿತ್ರ ಪಟ ರಾಜ್ ಆಚಾರ್ಯ ರ ಕವನದ ಪೋಸ್ಟಿನಿಂದ ಎರವಲು ಪಡೆದಿದ್ದು – ಧನ್ಯವಾದ ರಾಜ್ ಸಾರ್🙏👍😊)