01736. ಯಾಕೊ ಮಾಧವ ಮೌನ?


01736. ಯಾಕೊ ಮಾಧವ ಮೌನ?

_________________________________

ಯಾಕೊ ಮುನಿದೆ ಮಾಧವ ?

ಮಾತಾಡದೆ ಕಾಡುವೆ ಯಾದವ ?

ಮರೆಯಲೆಂತೊ ನೀ ವಿನೋದ

ಕಂಡು ಗೋರಾಜನು ಮೂಕಾದ ! ||

ನೋಡಿಲ್ಲಿ ಸುತ್ತಮುತ್ತಲ ನಿಸರ್ಗ

ಮಾಡಿದೆಯಲ್ಲಾ ನಂದನ ಸ್ವರ್ಗ

ನಂದ ಕಿಶೋರ ಇನ್ನೇನು ದೂರು ?

ಹೇಳಬಾರದೆ ಅದೇನಿದೆ ತಕರಾರು ? ||

ಮುನಿಸಲೇಕೆ ಕೂತೆ ತುಟಿ ಬಿಗಿದು ?

ರಾಧೆ ನಾ ಒರಗಿದರು ಅಪ್ಪುತ ಖುದ್ಧು

ಎಂದಿನಂತೆ ಮೀರೆಯೇಕೊ ಸರಹದ್ದು ?

ಹುಸಿ ಬೇಡೆನ್ನುತ ಕಾದ ಮನ ರಣಹದ್ದು ! ||

ಸಿಂಗರಿಸಿಕೊಂಡು ಬಂದೆ ನಿನಗೆಂದೆ

ನೀನಿಂತು ಕೂರೆ ನನಗೇನಿದೆ ದಂಧೆ ?

ಮೌನ ಸಲ್ಲದೊ ನೀ ಮಾತಾಡೆ ಚಂದ

ಮರೆತುಹೋಯ್ತೇನು ನಮ್ಮಾ ಚಕ್ಕಂದ ? ||

ಭಾವದ ಲಹರಿಯಡಿ ತೆರೆದಿಟ್ಟೆ ನನ್ನನೆ

ನಿನ್ನ ಹಿರಿಯಾಕೆ ಅನುಭವಿ ಜ್ಞಾನಿ ನಾನೆ

ನನ್ನೊಳಗೆ ನಿನಗೆಂದೆ ಮೀಸಲು ಕೋಣೆ

ಬೆಳಗುವ ಜ್ಯೋತಿ ನೀ ಮಂಕಾಗೆ ಬೇನೆ ||

– ನಾಗೇಶ ಮೈಸೂರು

೨೩.೦೫.೨೦೧೮

(Picture source : internet / social media received via Manasa Mahadev Govardhan – thank you 🙏👍😊💐)

01563. ಮೀರಲಾರೆನೊ ಮಾಧವ..


01563. ಮೀರಲಾರೆನೊ ಮಾಧವ..

________________________________

ಮೀರಲೆಂತೊ ನಿನ್ನಾಣತಿ ಘನ ಚೋರ

ನಾನಲ್ಲವೆ ನಿನಗೆ ಮೀಸಲಿಟ್ಟ ಮೀರಾ?

ನೋಡಿಲ್ಲಿ ನಾ ಕಲಿಯುಗದಲಿಹ ರಾಧೆ

ಜತೆಯಲ್ಲಿ ತಂದ ದ್ವಾಪರದ ನೆರಳಿದೆ ! ||

ನೋಡೊ ಮಾಧವ ಸಾಕೊಂದು ಪಿಂಛ

ಕಾಣಿಸಲದೆ ನಿನ್ನ ಜತೆ ಬ್ರಹ್ಮಾಂಡದಂಚ

ನೀನಿಲ್ಲದಿರಲೇನು ನಿನ್ನ ನೆರಳು ಸತತ

ಜತೆಗಿದೆ ನಿರಂತರ ನನ್ನೊಳು ನಿನ್ನ ಚಿತ್ತ ||

ಕಾಣೆಯ ಗೋಪಾಲ ನನ್ನೀ ತನ್ಮಯತೆ

ನುಡಿಸಿಹ ಬೆರಳಲ್ಲಿ ನಿನ್ನ ಹೆಸರಿನ ಗೀತೆ

ತಲ್ಲೀನ ಮುಚ್ಚಿದ ಕಣ್ಣ ತುಂಬ ನಿನ ಬಿಂಬ

ಅಮಲ ಧಾರಾಕಾರ ಹರಿದ ಭಕ್ತಿ ಸೌರಭ ||

ನಾನು ನಾನಲ್ಲ ನೀನು, ನೀನಾಗಿ ನಾನು

ನೋಡು ನೀನಿಲ್ಲದೆಡೆಯಿಲ್ಲದ ಕಾನೂನು

ಪರವಶತೆಯಲ್ಲ ಪರಕಾಯ ಪ್ರವೇಶವಿದು

ರಾಧೆಯೆ ಮೀರ ಅದೆ ಕೃಷ್ಣನ ಕೊಳಲಿದು ||

ಮೀರದಿರಲು ನಿಯಮ ನಿಯತಿಯ ಧರ್ಮ

ನೀ ದೊರಕದಿದ್ದರು ನಿನ್ನೆ ನೆನೆದು ಸರಿಗಮ

ನಿನ್ನಿಚ್ಚೆಯಂತೆ ಬಡಿಸಿ ಸ್ವಚ್ಚ ಪ್ರೇಮ ಜಗಕೆಲ್ಲ

ಸಾರುತಲೆ ಕಾಯ್ವೆ ಬಹತನಕ ನೀ ಬಹ ಕಾಲ ||

– ನಾಗೇಶ ಮೈಸೂರು

(Nagesha Mn)

(Picture source from Internet / social media received via Tejaswini Kesari – thank you ! 🙏👍😊)

1442. ಜೀಕೋಣ ಮಾಧವ..


1442. ಜೀಕೋಣ ಮಾಧವ..
_______________________________


ಜೀಕೋಣ ಮಾಧವ
ಬಾ ಜೀಕೋಣ ಯಾದವ
ತೂಗೋಣಾ ಉಲ್ಲಾಸ
ತೂಗುಯ್ಯಾಲೆ ಮಂದಹಾಸ ! || ಜೀಕೋಣ ||

ಉಯ್ಯಾಲೆ ತೂಗೇ ಸಖಿ
ಮನದುಯ್ಯಾಲೆ ಜೀಕಿ ಜೀಕಿ
ನಿನ್ನುಲ್ಲಾಸ ಜೀವ ನಾನಾಗುತ
ನನ್ನಾಹ್ಲಾದ ಭಾವ ನೀನಾಗುತ ! || ಜೀಕೋಣ ||

ತೂಗಲೆಬೇಕೊ ಮುಕುಂದ
ನಿನ್ನೊಡನಾಟ ಅಷ್ಟು ಚಂದ
ಗೋವಿನ ಪಾಲಿಗು ಗೋವಿಂದ
ನಿನ್ನೊಲುಮೆ ಭಾಗ್ಯ ಮಕರಂದ ! || ಜೀಕೋಣ ||

ಬಾರೆ ಬಾರೆ ಮೇಲೇರುವ ಸಖಿ
ಮರೆತೆಲ್ಲ ಜೀಕಿ ಗಗನಮುಖಿ
ಸಿಕ್ಕರೆಗಳಿಗೆ ನಾವಾಡುವ ಹೀಗೆ
ತಲ್ಲೀನತೆ ನಾವಾಗುವ ಬಗೆ ! || ಜೀಕೋಣ ||

ಬೇಡೆನ್ನಲೆಂತೊ ಮುರಳಿಧರ
ಕ್ಷಣಿಕವಿದ್ದರು ಅತಿ ಸುಂದರ
ಕೈಗೂಡಲೆಂತೊ ಸ್ವೈರ ವಿಹಾರ
ಭುವಿಗಿಳಿಸಿದರು ತರು ನಿಕರ ! || ಜೀಕೋಣ ||

ನೋಡೆಂತ ಚಂದ ಜಗವಿಲ್ಲಿ
ಭೂಮಿ ಗಗನ ಒಂದಾದವಲ್ಲಿ
ಮುಟ್ಟೇಬಿಟ್ಟ ಮೋಡದ ಕೊಡ
ಬಣ್ಣ ಬಣ್ಣದ ಬೆಳಕಿನ ಸಂಗಡ ! || ಜೀಕೋಣ ||

ಸರಿ ಮುರಾರಿ ಚಿತ್ತಾಪಹಾರಿ
ನಿನ್ನೊಡನಿರೆ ನಿನದೆ ಲಹರಿ
ನಿನಗಿತ್ತಾಗಿ ಮನ ಪ್ರೇಮದ ಪರಿ
ಮುದವಾಗಿಸು ಪಿಸುಮಾತುಸುರಿ ! || ಜೀಕೋಣ ||

ತೂಗುವ ಹೊತ್ತು ತೂಕದ ಮಾತು
ಬೇಡ ಸಖಿ ಹಾರೀ ಹೋದೀತು
ಸದ್ಯಕಿಷ್ಟೆ ಸಾಕು ಗಾಳಿ ತೇಲಾಟ
ಇಳೆಗಿಳಿದಾಗ ಮಿಕ್ಕ ಮಾತಾಟ ! || ಜೀಕೋಣ ||

ಸರಿ ಮಾಧವ ನಡೆ ನಡೆ ಯಾದವ
ಮಧುಸೂಧನ ನಿನ್ನದೆ ಅನುಭಾವ
ಸಂಭವಿಸಲಿ ಯುಗೇಯುಗೇ ಪ್ರೇಮ
ನಾನಾಗೆ ಸಾಕು ನಿನ ರಾಧೆ ಸಂಭ್ರಮ ! || ಜೀಕೋಣ ||

– ನಾಗೇಶ ಮೈಸೂರು
(Nagesha Mn)

(Photo source: from the Facebook profile of ಶಾಂತಾ ಪಾಟೀಲ್. – thanks a lot madam 😊🙏👍👌😍)

01420. ರಾಧೆ, ಬಂದನಲ್ಲ ಮಾಧವ, ಇನ್ನೇಕೆ ಹೆದರಿಕೆ ಭಾವ ?


01420. ರಾಧೆ, ಬಂದನಲ್ಲ ಮಾಧವ, ಇನ್ನೇಕೆ ಹೆದರಿಕೆ ಭಾವ ?
_____________________________________________

ಗೆಳೆಯ ರವಿಶಂಕರ್ ಮತ್ತು ನಳಿನಿಯವರ ಪುತ್ರಿ ಕ್ರಿಷಾ ರಚಿಸಿರುವ ಅಮೋಘ ಕೃತಿ ಇದು. ಆರು ತಿಂಗಳಲ್ಲಿ ಅರವತ್ತು ಗಂಟೆಗಳನ್ನು ವ್ಯಯಿಸಿ ರೂಪಿಸಿದ ಅದ್ಭುತ ಕೃತಿ. ಕಾಕತಾಳೀಯವಾಗಿ ಮಕ್ಕಳ ದಿನಾಚರಣೆಯ ಹೊತ್ತಲ್ಲಿ ಬಂದ ಈ ಪೇಂಟಿಂಗಿಗೆ ನಾನು ಅವಸರದಲ್ಲೆ ಹೊಸೆದ ಕವನವೂ ಜತೆಗಿದೆ. ಅಭಿನಂದನೆಗಳು ಕ್ರಿಷಾ !!

ರಾಧೆ, ಬಂದನಲ್ಲ ಮಾಧವ, ಇನ್ನೇಕೆ ಹೆದರಿಕೆ ಭಾವ ?
_____________________________________________


ಯಾಕ್ಹೀಗೆ ಬೆದರಿದೆ ರಾಧೆ ?
ಕಂಡಿತೇನು? ನೀರಲೇನು ಬಾಧೆ?
ಬೆಚ್ಚದಿರು ಬಿಡು ಹೆದರಿಕೆ ಭಾವ
ಇನ್ನೇಕೆ ಭೀತಿ ಜತೆಗಿಹನಲ್ಲಾ ಮಾಧವ ! ||

ಬರುವೆ ನಾ ಜತೆಗೆ ನಡೆನಡೆ
ಬಳಸಿ ಹಿಡಿದಿರುವೆ ಭಯ ಬಿಡೆ
ಹೆದರಿದ ಹುಲ್ಲೆಯಂತೆ ನಡುಗಬೇಡ
ಜಾರಿಬಿದ್ದೀತು ಕೈಯಲಿರುವಾ ಕೊಡ ||

ಬಿಡು ಅಲ್ಲಿಲ್ಲ ಬ್ರಹ್ಮರಾಕ್ಷಸ
ಜೀವಜಂತು ನೀರ ಸಹವಾಸ
ಹುಳುಹುಪ್ಪಟೆ ಹರಿದಾಡಿರಬೇಕು
ನವಿರು ಬೆರಳ ಮುಟ್ಟಿ ಓಡಿರಬೇಕು ||

ನೀರಂತೆ ನೀರೆ ಚಲನ ದ್ರವ
ಬಾ ಜೊತೆಗೆ ನೀರ ತುಂಬುವ
ಯಾಕೊ ತನು ಕಂಪನವಿನ್ನು ನಿಂತಿಲ್ಲ
ವಚನವೀಯುವೆ ಬಿಟ್ಟು ಹೋಗುವುದಿಲ್ಲ ||

ನಡೆ ಏನಾದರಾಗಲಿ ಮಾಧವ
ಕರಗಬಿಡಬೇಡ ಈ ಹಿತದನುಭವ
ಬೇಕೀ ಬಂಧ ಅನುಬಂಧ ಅನುಭಾವ
ಅದಕೆ ಕಾಡಲಿ ನಿತ್ಯ ಮತ್ತದೆ ಭೀತ ಭಾವ! ||

– ನಾಗೇಶ ಮೈಸೂರು
೧೩.೧೧.೨೦೧೭

(A small tribute to the beautiful painting work by Krishaa 🙏👍😊👌)