01477. ಕಾಲದ ಮುಖವಾಡ ಮಾಯೆ


01477. ಕಾಲದ ಮುಖವಾಡ ಮಾಯೆ

__________________________________

ತಲೆಯಲಿ ಹೊತ್ತವಳೊಬ್ಬಳು

ಹೆಗಲಲಿ ಇಟ್ಟವಳಿನ್ನೊಬ್ಬಳು

ಎದೆ ಕಲಶವಾಗಿಸಿ ಮತ್ತೊಬ್ಬಳು

ಯಾವುದವಳ ನಿಜರೂಪ ಸ್ವರೂಪ ? ||

ಕೊಡಪಾನ ಹಾಲೂಡಿಸಿದವಳು

ಹೆಗಲಲೆತ್ತಿ ಕುಣಿದಾಡಿಸಿದವಳು

ಮುದ್ದಲಿ ಕೆಡಿಸಿ ತಲೆಗೇರಿಸಿದವಳು

ಮೂವರಲ್ಲ ಅವಳೊಬ್ಬಳೆ ತಾಳು! ||

ರಮಣನಿಗದೆ ಕೊಡವಿತ್ತಾ ಮಹಿಳೆ

ಹೆಗಲಿಗ್ಹೆಗಲು ಕೊಡ ಹೊತ್ತಾಗಲೆ

ಶಿರದೆ ಹೊತ್ತು ನಿಭಾಯಿಸಿ ಒಬ್ಬಳೆ

ನೋಡು ಮೂವರಲ್ಲ ಅವಳೊಬ್ಬಳೆ! ||

ಮುಂದಾಲೋಚನೆ ನೋಟದೆ ಸಾಕಾರ

ಹಿನ್ನಲೆಯ ಇತಿಹಾಸ ಕೆದಕುವ ಕೊಸರ

ಪಾರ್ಶ್ವ ನೋಟದೆ ಗಮನಿಸುತ ಪರಿಸರ

ಮೂರಲ್ಲ ಒಂದೆ ಕೊಡದಾಚಾರ ವಿಚಾರ ! ||

ಬದುಕ ಕೊಡವೊಂದೆ ಪಾತ್ರಗಳ್ಹಲವು

ಪಾತ್ರೆಯ ನೀರಾಗಿ ಪಸರಿಸುವ ಸೊಗವು

ಭೂತ ಭವಿತ ಪ್ರಸ್ತುತ ಏಕೀಕೃತ ಸ್ತ್ರೀ ಕಲಶ

ಕಾಲದ ಮುಖವಾಡ ತೊಟ್ಟ ಮಾಯೆಯ ವೇಷ ||

– ನಾಗೇಶ ಮೈಸೂರು

(Nagesha Mn)

(Picture source from Internet / social media – received via Suma B R – thank you madam !!😍👌🙏👍😊)

01396. ಪ್ರಾಯದ ಮಾಯೆ..


01396. ಪ್ರಾಯದ ಮಾಯೆ..
____________________________


ತುಂಬಿದ ಕೊಡ
ತುಂಬಿ ತುಳುಕಿದ ಯೌವನ
ತನ್ನೊಳಗೆ ತಾನೆ ಮುಳುಗಿ ಬಾಲೆ
ತನ್ನಂದಕೆ ತಾನೆ ಬೆರಗಾದ ಪರವಶತೆ ||

ಮುಗ್ದತೆ ಚೆಲ್ಲಾಡಿ
ಹರಿದಿದೆ ನಖಶಿಖಾಂತ
ತೊಳೆಯಲದ ತಾರುಣ್ಯದ ಮಳೆ
ತುಂತುರು ಹನಿಯಾಗಿ ಮುಸಲಧಾರೆ ||

ಒದ್ದೆ ಮೈಗಂಟಿದ ವಸ್ತ್ರ
ನೀರೆಯ ಹೀರಲಾಗದೆ ಸೋತಿದೆ
ತುಳುಕಿದ್ದೆಲ್ಲಾ ಅರಳಿದಂತೆ ಮೊಗ್ಗು
ಹಿಗ್ಗುತ ಯೌವನ ನಿವಾಳಿಸಿದೆ ಸಿಗ್ಗನು ||

ಕಂಡವರಿಲ್ಲ ಒಳಗು
ಬೆರಗಿಸಿ ಹೊರಗ ಸೊಗಡು
ಬೆಚ್ಚಿ ಹಾತೊರೆದ ದನಿ ಸಾಲಾಗಿ
ಪ್ರತಿ ಎದೆಯಲು ಕವನದ ಗೊಂಚಲು ! ||

ನೋಡುವವರ ನೋಟ
ಗ್ರಹಿಸುತ ಅವರವರ ಭಾವ
ಕವಿಗಿದು ಬರೆದು ಮುಗಿಯದ ಕಥೆ
ಅವಳ ಯೌವನವೆ ಅವಳನುಟ್ಟು ತೊಟ್ಟಂತೆ ||

– ನಾಗೇಶ ಮೈಸೂರು
(Nagesha Mn)

(ಸಂಗೀತ ಕಲ್ಮನೆಯವರ ಫೆಸ್ಬುಕ್ ಪೋಸ್ಟೊಂದರ ಚಿತ್ರ ನೋಡಿ ಬರೆದ ಸಾಲುಗಳಿವು. ಅವರೂ ಅವರ ಫ್ರೆಂಡ್ ಲಿಸ್ಟಿನಿಂದ ಆಯ್ದುಕೊಂಡ ಚಿತ್ರ – ಧನ್ಯವಾದಗಳು Geeta G. Hegde 🙏👍😊)

00648. ನೀ ಮಾಯೆಯೊಳಗೊ? ನಿನ್ನೊಳು ಮಾಯೆಯೊ ?


00648. ನೀ ಮಾಯೆಯೊಳಗೊ? ನಿನ್ನೊಳು ಮಾಯೆಯೊ ?
__________________________________________

  
(Picture source: https://upload.wikimedia.org/wikipedia/commons/2/26/Blood_1.svg)

ನೀ ಮಾಯೆಯೊಳಗೊ? ನಿನ್ನೊಳು ಮಾಯೆಯೊ ?
ಬಗೆಹರಿಯದ ಜಿಜ್ಞಾಸೆ ಗೊಂದಲ ಮಡುಗಟ್ಟಿ
ಬಿಚ್ಚಿದೆ ಪದರ ಪದರ ಕಾಯದ ಚದರ ಚದರ ಅಡಿಗೆ
ಕಂಡಂತಾಗಿಸಿ ಕಾಣದೆ ಮಾಯವಾಗೋ ಒಗಟು..

ಏನಿದರರ್ಥ ಮರುಳೆ ನೀ ಮಾಯೆಯೊಳಗೊ ?
ಸಿಕ್ಕಿಬಿದ್ದ ಜೀವ ಜೀವನ ಜಂಜಾಟದ ಬಂಧದೆ
ಆಡಿಸಿದಂತೆ ಆಡುತ ಮಾಯೆಯ ಮೋಹದಲಿ
ಕುಣಿಸಿದಂತೆ ಕುಣಿತ ಮದ ಮತ್ಸರ ಪಾಶ ಕುಣಿಕೆ..

ನಿನ್ನೊಳು ಮಾಯೆಯೆಂದೊಡೆ ಗೆದ್ದಂತೇನವಳ ?
ಮುಷ್ಟಿಯಲ್ಹಿಡಿದಿಟ್ಟಂತೆ ಆಡಿಸುವ ಬೆರಗೇನು ?
ನುಂಗಿದರೇನು ಅವಳ ಶಿವಲಿಂಗದಂತೆ ಆತ್ಮೈಕ್ಯ
ಆಡಿಸುತಾಳೆ ಕೂತೊಳಗೆ ತೊಡಿಸಜ್ಞಾನದ ಬಲೆಯ..

ಶರಣಾಗತ ಭಾವವದು ನೀ ಮಾಯೆಯೊಳಗಾದರೆ
ಇಹಪರ ಒಪ್ಪಿಸಿ ಕರ್ಮಕೆ ಮುನ್ನಡೆಯುವ ಸೊಗಡೆ
ನಿನ್ನೊಳಿದ್ದರೆ ಮಾಯೆ ತಾನಾಗುತ ಅಜ್ಞಾನ ಅಹಮಿಕೆ
ಕೊಬ್ಬಿದ ಕುರಿಯಾಗಿಸುವಳು ಬಲಿತಷ್ಟು ಅವಳ ಲಾಭ..

ಬಿಡು ಒಳಗೊ ಹೊರಗೋ ಸಾಪೇಕ್ಷ ಸಿದ್ಧಾಂತ ಬರಿದೆ
ಒಳಗ್ಹೊರಗೆಲ್ಲ ಅವಳದೆ ಹಾಸು ಅಂದ ಮೇಲೆ ಮತ್ತೇನು ?
ಅವಳೊಳಗಿರೆ ಗರ್ಭದ ಕೂಸು ನೀನ್ಹೊರಗಿರೆ ಸೃಷ್ಟಿ ನಕಾಶೆ
ಒಳಗ್ಹೊರಗೆಲ್ಲೆಡೆ ಪೋಷಿಸೋ ಒಂದೇ ಮಾಯಿ ಮಾಯೆಯಂತೆ !

– ನಾಗೇಶ ಮೈಸೂರು