01601. ಬರೆದು ಮುಗಿಯದ ಕಾವ್ಯ..


01601. ಬರೆದು ಮುಗಿಯದ ಕಾವ್ಯ..

__________________________________

ಏನೊ ಕಕ್ಕುತೈತೆ, ಕಣ್ಣಾಳದ ನೋಟ

ಬಿಕ್ಕಿ ಬಿಕ್ಕೀ ಅತ್ತಂಗೆ, ಕನ್ನೆ ಮುಖ ಪುಟ

ಕಪ್ಪು ಚುಕ್ಕಿ ಹಣೆಮ್ಯಾಗೆ, ಪೂರ್ಣಚಂದ್ರ

ಚುಕ್ಕಿಚುಕ್ಕಿ ವೇದನೆ, ಚುಚ್ಚಿಕೊಂಡ ಲಾಂದ್ರ ||

ಕಳುವಾಗೈತೇನೊ ಪಾಪ, ಕಕ್ಕುಲತೆ ಬೇನೆ

ಕಾಡೈತೆ ಬಿಡದೆ, ಹೇಳಲಾಗದ ಶೋಧನೆ

ಏನದವ್ವಾ ಬಾಯ್ಬಿಡದ, ಅನಿವಾರ್ಯ ಮೌನ ?

ಯಾಕೆ ನುಂಗಿ ಗರಳ, ನೀಲಕಂಠನ ಸದನ ? ||

ಮರೆಮಾಚಲ್ಯಾಕವ್ವ, ಹೇರಿಕೊಂಡ ಲೋಲಾಕು?

ತುಟಿಗ್ಹಚ್ಚಿ ತಂಬಾಕು, ಮೋರೆಗೆ ಬಳಿದ ಸರಕು

ಕೆಂಪು ಗಿಣಿಮೂತಿ, ಮಾವಂಥ ಚಂದದ ಮಲ್ಲಿ

ಯಾಕೀ ಸಪೂರ ದೇಹ, ಅಳುಕೈತೆ ಸಂಕಟ ಚೆಲ್ಲಿ ? ||

ಪದವೊಂದರ ಖರ್ಚಿಲ್ಲದೆ, ಕಟ್ಟಿದ್ದೀಯೆಲ್ಲ ಕಥೆಯ

ಮಾತೊಂದರ ಹಂಗಿಲ್ಲದೆ, ಬರೆದಿದ್ದೀ ಮಹಾಕಾವ್ಯ

ನೀನೇನೇನೊ ಹೇಳಿದ್ದಿ, ಇನಿತಿಷ್ಟೂ ಬಿಡಿಸಿಲ್ಲ ಒಗಟ

ಒಡಪೊಡೆದಷ್ಟು ನಿಗೂಢ, ಮತ್ತೆ ಕಾಡೊ ನಿನ್ನೀ ನೋಟ! ||

– ನಾಗೇಶ ಮೈಸೂರು

೧೩.೦೨.೨೦೧೮

(Picture source : Internet / social media – received via Madhu Smitha – thank you very much 😊👍🙏👌)

00905. ಮುಗಿಯದ ಕಥೆ…


00905. ಮುಗಿಯದ ಕಥೆ…
_____________________


ನೀರೆಯ ಜತೆಗ್ಹೋರಾಟ
ಹನಿ ನೀರಿಗೆ ಪರದಾಟ
ಬೇಕಾ ಮುಸುಕ ಗುದ್ದಾಟ ..
ಕೂತರೆ ಮಾತಾಗದೆ ಅಕ್ಕಪಕ್ಕ ?

ಮಳೆಯಾದಾಗ ಪುಷ್ಕಳ
ಸುಳಿವೇ ಇಲ್ಲ ತಳಮಳ
ಮುನಿಸಿಕೊಂಡಾಗ ರೋಷ
ಭುಗಿಲೇಳೊ ಜನದಾಕ್ರೋಶ..

ರಾಜ್ಯದ ಮಂತ್ರಿಗಳಿಗೇನು ದಾಡಿ ?
ಯಾವ ದೆವ್ವ ಪಿಶಾಚಿ ಮೋಡಿ
ನನ್ನ ರೈತ, ನಿನ್ನ ರೈತ ಲೆಕ್ಕ
‘ನಮ್ಮಾ’ ರೈತರ ಕಷ್ಟ, ಸುಖದುಃಖ..

ಕುಡಿಯೊ ನೀರಿಗೂ ಬಾಟಲಿ
ತಂಪು ಪಾನೀಯದ ನಲ್ಲಿ
ಯಾಕೆಲ್ಲಾ ಕಡೆ ವಾಣಿಜ್ಯ
ಬದುಕಲಾಗದೆ ಇಲ್ಲದೆ ವ್ಯಾಜ್ಯ ?

ಆಯ್ಕೆಯಾದ ತಲೆಗಳು ಅದೃಶ್ಯ
ನಾಡುನುಡಿ ಗಣ್ಯಜೀವಿಗಳ ಜಾಣ ಮೌನ
ಹೊಡೆದಾಡಿಕೊಳಲಿ ಬಿಡಿ ಸಾಮಾನ್ಯ
ಸುಸ್ತೆದ್ದು ಸೊರಗೆ ತಾನಾಗೆ ಆಗುವ ಸ್ತಬ್ಧ 😡

ಪಾಪದವರ ಬದಲು ನೀವುಗಳು
ಸಾಲು ರಾಜೀನಾಮೆ ನೀಡೆಲ್ಲರ ಸೊಲ್ಲು
ಮೆರೆಸಿದ್ದರೆ ಪಕ್ಷಾತೀತ ಒಗ್ಗಟ್ಟು
ನಿಜ ಕಾಳಜಿಯ ತುಣುಕಿರುತ್ತಿತ್ತು..😔

– ನಾಗೇಶ ಮೈಸೂರು
12.09.2016