02044. ತುತ್ತಿನ ಚೀಲದಲಿತ್ತು ಮುತ್ತು..


02044. ತುತ್ತಿನ ಚೀಲದಲಿತ್ತು ಮುತ್ತು..
______________________________


ತುತ್ತಿನ ಚೀಲದಲಷ್ಟು, ಮುತ್ತುಗಳದೇಕಿದೆಯೋ ?
ಮುತ್ತ ಕಂಡಾದರು, ತುತ್ತಿನ ಬೆಲೆ ಕಾಣಲೆಂದು.

ಬೆಲೆಯೇನೋ ಬಂತು ಮುತ್ತಿಗೆ, ತುತ್ತಿನ ಕಥೆಯೇನು ?
ಕಿತ್ತು ಬಿಸುಡುವ ಗೊಂಚಲು, ಕೊಟ್ಟಷ್ಟು ಕೇಳಿದ ಬೆಲೆ.

ಇದೆಂತ ಘೋರ ಅನ್ಯಾಯ, ಹೆತ್ತೊಡಲಿಗೆ ಕಲ್ಲೆಸೆತ ?
ಉದರದೆ ಕಿತ್ತು ತಿನ್ನುವ ಕೂಸು, ಕರುಳ ಬಳ್ಳಿಗಳದದೆ ಕಥೆ.

ಕೆತ್ತಲಾಗದಲ್ಲ ಜತನದೇ, ಮುತ್ತಿನಾಸೆಗೆ ಮಾತೆಗೆ ಗುದ್ದೆ ?
ಕೆತ್ತಿದ್ದು ಮಾತೆಯಲ್ಲ, ಕೆತ್ತನೆ ಮಾತ್ರ ಅವಳಾ ಕುಶಲತೆ.

ಕೆತ್ತಿ ಕಟ್ಟಿದ ಮುತ್ತು, ಕೊಟ್ಟುಬಿಡುವಳೇಕೋ ಸುಲಭದಲ್ಲಿ ?
ಕೊಡಲಿಲ್ಲವವಳು ಬಿಡದೆ, ಚಿಪ್ಪನೇ ಕೆತ್ತಿದರು ಲಾಲಸಿಗರು.

ಪ್ರಸವದಂತಲ್ಲ ವೇದನೆ, ಅಪರಿಮಿತ ಯಾತನೆ ಹೌದಲ್ಲಾ?
ಕತ್ತರಿಸುವ ಕರವೆ ಸೋಲುವ ಜಿಗುಟು, ಬಿಡದ ಸ್ವಾರ್ಥ ಒಗಟು.

ಪೋಣಿಸಿದ ಮುತ್ತಾಗಿ ಹಾರ, ಪ್ರಕಟಿಸದಲ್ಲ ಯಾತನೆ ಸಾರ ?
ಬಿಡುಗಡೆ ಹರ್ಷದೆ ಮಗ್ನ, ಮನವರಿಕೆಯಾಗದೆ ಹೋಯ್ತೆ ಬಂಧನ.

ರಕ್ಷಣೆಯ ಬಂಧವ ತೊರೆದು, ಪಡೆಯಿತಾದರೂ ಏನನು ಮುತ್ತು ?
ಸ್ವೇಚ್ಛೆಯ ಹವಣಿಸಿ ನಡೆದಿತ್ತು, ಸಿಕ್ಕಿತು ಶಿಸ್ತಲ್ಲಿ ನಲುಗುವ ಚಾಕರಿ.

ಕವಚ ಮುರಿದು, ಮಾಂಸ ಹರಿದು, ಲಕ್ಷಣರೇಖೆ ದಾಟಿದ್ದು ತಪ್ಪೇನು ?
ಬಿಡು ಯಾರು ತಪ್ಪು-ಸರಿ, ಛಿಧ್ರ ಕವಚ ಮಾಂಸ ಮುತ್ತಿನ ವಂಶ.

– ನಾಗೇಶ ಮೈಸೂರು

(Picture source : internet / social media)

01094. ಚಿನ್ನಾರಿ – ಮುತ್ತು – ಗಡಗಡ – ಕನ್ನಡ


01094. ಚಿನ್ನಾರಿ – ಮುತ್ತು – ಗಡಗಡ – ಕನ್ನಡ

ಚೆಂದದ ಚಿನ್ನಾರಿ ಹೆಂಡತಿಗೆ, ಬೇಕಂತೆ ಬರಿ ಚಿನ್ನದ ಒಡವೆಗಳೆ
ತುಟಿಮುತ್ತು ಸಾಲದು ಆಮಿಷ, ಕೇಳುತ್ತಾಳೆ ಮುತ್ತಿನ ಮಾಲೆ
ಯಾಕಪ್ಪ ನಡುಗುವೆ ಗಡಗಡ, ಪತಿರಾಯ ತಂದುಕೊ ಧೈರ್ಯ
ಹೊಗಳಿ ಓಲೈಸೆ ಕನ್ನಡ ಸತಿ, ಕರಗುವಳು ಸಡಿಲಿಸಿ ಪಟ್ಟಿಯ!

– ನಾಗೇಶ ಮೈಸೂರು
೨೩.೦೧.೨೦೧೭
chouchoupadi

(ಚಿನ್ನಾರಿ – ಮುತ್ತು – ಗಡಗಡ – ಕನ್ನಡ) (೨)

ಕೊಳ್ಳೋಣ ಅಪ್ಪಟ್ಟ ಚಿನ್ನಾರಿ, ಅಗ್ಗವಾಗಿದೆಯಂತೆ ರೇಟು !
ಮುತ್ತು ರತ್ನ ಹವಳ ವಜ್ರದಂತೆ ಏರಿಲ್ಲ ಬೆಲೆ ಸಗಟು 😻😍
ಗಡಗಡ ನಡುಗಿದ ಗಂಡ ಚಿಂತಿಸುತ ಪಾರಾಗೆ ಈ ಕುತ್ತು 😧
ಕನ್ನಡಕದೆ ನುಡಿದ ‘ಚಿಂತೆ ಬಿಡೀಗಲ್ಲ ನಮ್ಚಿನ್ನ ಮಾರೊ ಹೊತ್ತು!’

– ನಾಗೇಶ ಮೈಸೂರು
೨೩.೦೧.೨೦೧೭