00402. ಕನ್ನಡ ರಾಜ್ಯೋತ್ಸವ:ಮುದ್ದಣ್ಣನ ಗೊಂದಲ, ಮನೋರಮೆ ಸಲಹೆ


00402. ಕನ್ನಡ ರಾಜ್ಯೋತ್ಸವ:ಮುದ್ದಣ್ಣನ ಗೊಂದಲ,ಮನೋರಮೆ ಸಲಹೆ
_____________________________________________

ಕನ್ನಡ ಸಾಹಿತ್ಯ ಲೋಕದಲ್ಲಿ ಮುದ್ದಣ ಮನೋರಮೇಯರ ಸರಸ ಸಲ್ಲಾಪವನ್ನು ಕುರಿತು ಕೇಳದ ಸಾಹಿತ್ಯಾಭಿಮಾನಿಯಾದರೂ ಯಾರಿಹರು ? ತಮ್ಮ ನಡುವಿನ ಲಘು ಸಂವಾದವನ್ನೆ ಅಮರ ಮತ್ತು ಜನಪ್ರಿಯ ಸಾಹಿತ್ಯದ ದ್ಯೋತಕವಾಗಿಸಿದ ಈ ಜೋಡಿಯ ಸಂವಾದ ಕನ್ನಡ ರಸಿಕರ ಮನದಲ್ಲಿ ಆಹ್ಲಾದ ತರುವ ನಿರಂತರ ಚಿಲುಮೆ. ಆದರೆ ತುಸು ಹಳೆಯ ಪೀಳಿಗೆಯ ಪಾತ್ರಗಳಾದ ಮುದ್ದಣ ಮನೋರಮೆಯರು ಹೊಸ ಪೀಳಿಗೆಯಲ್ಲು ಪ್ರಸಿದ್ದರೆ, ಪ್ರಸ್ತುತರೆ ಎಂದು ಕೇಳಿದಾಗ ಸಿಗುವ ಉತ್ತರ ಆಶಾದಾಯಕವಾದದ್ದಲ್ಲ. ಆ ತರದವರಿಗೆ ಕನಿಷ್ಠ ಅವರಿಬ್ಬರ ಹೆಸರುಗಳನ್ನಾದರೂ ಪರಿಚಯಿಸಬೇಕೆಂಬ ಇಂಗಿತದಿಂದ, ಈ ರಾಜ್ಯೋತ್ಸವದ ಹೊತ್ತಿನಲ್ಲಿ ನನ್ನ ಊಹಾ ಜಗದ ಮುದ್ದಣ ಮನೋರಮೆಯರನ್ನು ಈ ಕಲ್ಪನಾ ಸಂಭಾಷಣೆಯ ಮೂಲಕ ಸೃಜಿಸಿದೆ – ಮೊದಲು ಕವಿತೆಯ ರೂಪದಲ್ಲಿ, ನಂತರ ಅದೇ ಕವಿತೆಯನ್ನು ಗದ್ಯ ಸಹಿತದ ಕಾವ್ಯರೂಪಕವಾಗಿಸುತ್ತ. ಆ ಎರಡರ ಫಲಿತವು ತಮ್ಮ ಮುಂದಿದೆ ಈ ಬರಹದ ರೂಪದಲ್ಲಿ – ಇದ್ದಕ್ಕೆ ಮೂಲ ಸ್ಪೂರ್ತಿಯಾದ ಆ ನೈಜ ಮುದ್ದಣ, ಮನೋರಮೆಯರಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತ 😊


(ಚಿತ್ರ ಕೃಪೆ : edited version of – http://m.prajavani.net/article/ನಾನು-ಮುದ್ದಣ್ಣನ-ಮನೋರಮೆಯ-ನೋಡಿದ್ದೆ)

ಗದ್ಯ ಸಹಿತದ ಕಾವ್ಯರೂಪಕ:

ಭಾಗ-01 : ಮುದ್ದಣ್ಣನ ಗೊಂದಲ
_______________________

ಮುದ್ದಣ್ಣ ಪ್ರಿಯ ಮನೋರಮೆ ಜಾಣೆ
ಅಂದಿರುಳು ತಡವಿ ಹೋಳಿ ಹುಣ್ಣಿಮೆ
ಚಿಗುರು ತಾಂಬೂಲದ ತಟ್ಟೆ ಪಲ್ಲಂಗ
ಜೀಕುತ ನಲ್ಲನನಪ್ಪಿದ ತೆಳು ಪ್ರಸಂಗ ||

ಮನೋಹರ ಚಂದ್ರಿಕೆಯ ಬೆಳ್ಳಿ ಬೆಳಕನ್ನು ಚೆಲ್ಲುತ್ತಾ ಬಿರಿದ ಹೂವಂತರಳುತ್ತಿದ್ದ ಸೊಗಸಾದ ಇರುಳಿನ ಸಮಯ. ಪ್ರಿಯಕರ ಮುದ್ದಣ್ಣ, ಜಾಣೆ ಪ್ರಿಯತಮೆ ಸತಿ ಮನೋರಮೆಯೊಡನೆ ಪಲ್ಲಂಗವೇರಿ ವಿಶ್ರಮಿಸಿದ ಹೊತ್ತು. ರುಚಿಯಾದ ಹೋಳಿಗೆಯೂಟದ ಜತೆಗೆ ಸವಿ ಮಾತಿನ ಔತಣವುಣಿಸಿದ ಮನದನ್ನೆ ಮನೋರಮೆ ಪಲ್ಲಂಗದಲ್ಲಿ ಕೂತು ತನ್ನ ತೊಡೆಯಮೇಲೆ ತಲೆಯಿರಿಸಿಕೊಂಡ ನಲ್ಲನ ಬಾಯಿಗೆ ಚಿಗುರೆಲೆಯ ತಾಂಬೂಲದ ರಸಗವಳವಿಕ್ಕುತ್ತ, ಹಾಗೆಯೆ ಮೆದುವಾಗಿ ಜೀಕುತ್ತ ಮಡಿಲಲಿಟ್ಟ ತಲೆ ಜಾರದಂತೆ ತೋಳಿಂದ ಅಪ್ಪಿ ಹಿಡಿದು ಅವನಿಗೆ ಹಿತವಾದ ಹಾಡೊಂದನ್ನು ಗುನುಗುತ್ತಾ ಇದ್ದಾಳೆ, ಸ್ವರ್ಗವೆ ಧರೆಗಿಳಿದು ಬಂದ ಭಾವನೆಗೆ ಇಂಬು ಕೊಡುತ್ತ…

ಮಂದಹಾಸದೆ ಮಕರಂದವೆ ಇನಿಯ
ಕಳುವಾದಂತಿರುವೆ ಎಲ್ಲಿದೆ ಹೃದಯ
ಸರಸ ಸಮಯವಿಲ್ಲಿ ತಿಂಗಳ ನೋಡಲ್ಲಿ
ಹರಿಸ್ಪುರಿಸು ಕಾವ್ಯ ಚಮತ್ಕಾರದ ವಲ್ಲಿ ||

ಆದರೂ ಯಾಕೊ ಪ್ರಪುಲ್ಲಿತವಾಗಿಲ್ಲ ಮುದ್ದಣ್ಣನ ಮನಸು. ಅದರ ಕನ್ನಡಿಯಂತಿರುವ ಮುಖದಲ್ಲಿ ಮಂದಹಾಸದ ಬದಲು ಏನೊ ಅವ್ಯಕ್ತ ಖೇದ, ವ್ಯಸನ ಮನೆ ಮಾಡಿಕೊಂಡಂತಿದೆ. ಕಳುವಾದ ಹೃದಯದಂತೆ ಮ್ಲಾನವದನದಲಿ ಕುಳಿತ ಇನಿಯನಿಗೆ ಪೂರ್ಣ ಚಂದಿರನ ಹೊಳಪಿನ ಚಮತ್ಕಾರವನ್ನು ತೋರಿಸಿ ಅದು ಖೇದದಿಂದಿರುವ ಸಮಯವಲ್ಲ, ಬದಲಿಗೆ ಸರಸ ಸಲ್ಲಾಪದ ಸಂಭಾಷಣೆಯಲ್ಲಿ ತೊಡಗಿಸಿಕೊಳ್ಳುತ್ತ ಸ್ಪುರಿಸಿದ ಸ್ಪೂರ್ತಿಯಲ್ಲೆ ಕಾವ್ಯ ಚಮತ್ಕಾರದ ವಲ್ಲಿಯನ್ನು ಹಾಸಬಾರದೆ ? ಎಂದು ಕೇಳುತ್ತಾಳೆ ಸತಿ ಮನೋಹರಿ.

ನಸುನಕ್ಕ ಮುದ್ದ ಕೊಡವಿ ಮನಗೊದ್ದ
ನಾಳೆ ಕನ್ನಡ ರಾಜ್ಯೋತ್ಸವ ದಿನ ಶುದ್ಧ
ನಾಡು ನುಡಿ ಮುಡಿಪಿಟ್ಟ ಮನ ಕದನ
ಏನು ಮಾಡಲಿ ನೆನೆದ್ಯೋಚಿಸಿಹೇ ಚಿನ್ನ ||

ಮಡದಿಯಕ್ಕರೆಯ ಮಾತಿಗೆ ಆ ಯೋಚನೆಯ ನಡುವಲ್ಲು ನಸುನಕ್ಕ ಮುದ್ದಣ್ಣ ಗೊದ್ದದಂತೆ ಕೊರೆಯುತ್ತಿದ್ದ ಆ ಆಲೋಚನೆಯನ್ನು ಕೊಡವಿ ತನ್ನನ್ನು ಕೊರೆಯುತ್ತಿರುವ ಕಾರಣವನ್ನು ಹಂಚಿಕೊಳ್ಳುತ್ತಾನೆ. ಸದಾ ಕನ್ನಡ ಕನ್ನಡವೆಂದು ತಪಿಸುವ ಕನ್ನಡ ಮನಸವನಲ್ಲವೆ ? ಮರುದಿನದ ರಾಜ್ಯೋತ್ಸವದ ದಿವಸದ ಕುರಿತೆ ಚಿಂತಿಸುತ್ತಿದೆ ಅವನ ನಾಡುನುಡಿಗಾಗಿ ಮುಡಿಪಿಟ್ಟ ಮನಸು. ತನ್ನ ನಾಡುನುಡಿ ಪ್ರೇಮದ ದ್ಯೋತಕವಾಗಿ ಆ ದಿನ ಏನು ಮಾಡಬೇಕು ಎನ್ನುವ ಕದನ ಕೋಲಾಹಲ ಕಾಡುತಿದೆಯೆಂದು ತನ್ನ ಅಳಲನ್ನು ಸತಿಮತಿಯಲ್ಲಿ ತೋಡಿಕೊಳ್ಳುತ್ತಾನೆ ಮುದ್ದಣ್ಣ.

ಅದಕೇಕೆ ಚಿಂತೆ ನಾನಿಹೆನಲ್ಲಾ ಸ್ಫೂರ್ತಿ
ನಮ್ಮಿಬ್ಬರ ಕೂಟವೆ ಸೊಗ ಕನ್ನಡದ ಆಸ್ತಿ
ತಣಿಸುವೆ ಹೃದಯನ್ಮನ ತನಿ ತಂಪೆರಚಿ
ಬರೆಸಲ್ಲೆ ಬರವಣಿಗೆ ಕಾವ್ಯದ್ಹನಿ ಎರಚಿ ||

ಎಷ್ಟಾದರೂ ಜಾಣ ಕನ್ನಡ ಸತಿಯಲ್ಲವೆ ಮನೋರಮೆ ? ಗಂಡನ ಚಿಂತನೆ, ಚಿಂತೆಯ ಅರಿವಾಗುತ್ತಿದ್ದಂತೆ ತಟ್ಟನೆ ಜಾಗೃತವಾಗುತ್ತದವಳ ಸಖಿಮನ. ಹುಡುಕತೊಡಗುತ್ತದೆ ಅದಕೇನಿರಬಹುದು ಉಪಾಯ ಎಂದು. ಆ ಹೊತ್ತಿನಲ್ಲೆ ಸಮಾನಾಂತರವಾಗಿ ಆಗಲೆ ರಮಣನನ್ನು ಸಂತೈಸುವ ದನಿಯಲ್ಲಿ ನುಡಿಯತೊಡಗಿದೆ. ತನ್ನ ಮನೋಹರವಾದ ನಗೆಯನ್ನು ಚೆಲ್ಲಿ ಅವನನ್ನು ಮಂತ್ರ ಮುಗ್ದನಾಗಿಸುತಲೆ ‘ಯಾಕದರ ಚಿಂತೆ ನಿಮಗೆ, ನಾನಿಲ್ಲವೆ ನಿಮ್ಮ ಸ್ಪೂರ್ತಿ, ಬೆನ್ನೆಲುಬಾಗಿ?’ಎಂದು ಹುರಿದುಂಬಿಸುತ್ತಾಳೆ. ತಮ್ಮಿಬ್ಬರ ಸೊಗಸಾದ ಕೂಟವೆ ಒಂದು ಬಗೆಯ ಅಪೂರ್ವ ಸಂಗಮದಂತೆ. ಆ ಸಾಂಗತ್ಯದ ಸೊಗಡೆ ಕನ್ನಡದ ಆಸ್ತಿಯಿದ್ದ ಹಾಗೆ. ‘ನಿನ್ನ ತನುಮನ ಹೃದಯಗಳನ್ನು ತಣಿಸುತ್ತ ತಂಪಾಗಿಸುತ್ತ ನೀ ನಿಂತ ಜಾಗದಲ್ಲೆ ಬರೆಯಲು ಪ್ರಚೋದಿಸುತ್ತ, ಸ್ಪೂರ್ತಿಯುಕ್ಕಿಸಿ ಕಾವ್ಯದ ಹನಿ ಚೆಲ್ಲಾಡುವಂತೆ ಮಾಡುತ್ತೇನೆ.. ಚಿಂತೆಬಿಡು ರಾಯ’ ಎಂದು ಧೈರ್ಯ, ಸ್ಪೂರ್ತಿ ತುಂಬುವ ಮಾತಾಡುತ್ತಾಳೆ.

ಉಚಿತಾಲೋಚನೆ ಗಮನಿಸೆ ಸುಲೋಚನೆ
ನಿನ್ನಂಥ ಸತಿಶಿರೋಮಣಿಪಡೆ ಧನ್ಯ ನಾನೆ
ಬರೆದಿಟ್ಟಿಹರಲ್ಲ ಕವಿ ಪುಂಗವರೆಲ್ಲ ಸಾಲ
ಕೋಟಿ ಅಕ್ಷರ ಮಧ್ಯೆ ಬರೆಯಲೇನ ಸಕಲ ||

ಆ ಮಾತು ಕೇಳಿಯೆ ಪ್ರಸನ್ನಚಿತ್ತನಾದ ಮುದ್ದಣ ಹೆಮ್ಮೆಯಿಂದ ಉಬ್ಬುತ್ತ ತನ್ನ ಕಾಡುತ್ತಿದ್ದ ಪ್ರಶ್ನೆಯಿಂದ ಹೊರಬರುತ್ತ ನುಡಿಯುತ್ತಾನೆ, ಸತಿಯ ಕುರಿತಾದ ತನ್ನ ಮೆಚ್ಚುಗೆಯನ್ನು ಮುಚ್ಚಿಡದೆ..’ಕಾಂತೆ.. ನನ್ನ ಹಾಗೆಯೆ ಆಲೋಚಿಸುವ ಮನಸುಳ್ಳ ನಿನ್ನನ್ನು ಪತ್ನಿಯಾಗಿ ಪಡೆದ ನಾನೆ ಧನ್ಯನು.. ನಿನ್ನ ಮಾತು, ಆಲೋಚನೆ ಉಚಿತವೇನೊ ಹೌದು.. ನಾನು ಕೂಡ ಅದನ್ನೆ ಆಲೋಚಿಸುತ್ತಿದ್ದೆ.. ತೊಡಕಿರುವುದು ಅದರಲ್ಲಲ್ಲ; ಬರೆಯುವುದೇನೊ ಸರಿ, ಆದರೆ ಬರೆಯುವುದಾದರು ಏನನ್ನು ? ಎನ್ನುವ ಚಿಂತೆ ಕಾಡುತ್ತಿದೆ. ಕನ್ನಡದ ದಿಗ್ಗಜರೆಲ್ಲ ಪರಂಪರೆಯಿಂದಲೂ ಬರೆಯುತ್ತಲೆ ಬಂದಿದ್ದಾರೆ, ಇನ್ನೂ ಬರೆಯುತ್ತಲೆ ಇದ್ದಾರೆ.. ಆ ಅಕ್ಷರ ಕೋಟಿ ಪಟುಗಳು ಬರೆಯದೆ ಮಿಗಿಸಿರುವುದಾದರು ತಾನೆ ಏನಿದೆ ಹೇಳು ? ಏನು ಬರೆಯ ಹೊರಟರು ಅವರಾಗಲೆ ಬರೆದುಬಿಟ್ಟಿರುವ ಕಾರಣ, ನಾನು ಹೊಸತೇನು ತಾನೆ ಬರೆದಂತಾಯ್ತು ? ಇಂತಲ್ಲಿ ನಾನು ವಿಶಿಷ್ಠವೆನ್ನುವ ಹಾಗೆ ಬರೆಯಲ್ಹೊರಡುವುದಾದರು ಏನನ್ನು ? ಎನ್ನುವ ಚಿಂತೆ ಕಂಗೆಡಿಸಿದೆ ನನ್ನ ‘ ಎಂದು ತನ್ನ ಚಿಂತೆಯ ಹಿನ್ನಲೆಯನ್ನು ಬಿಚ್ಚಿಡುತ್ತಾನೆ.

ಭಾಗ-02 : ಮನೋರಮೆ ಸಲಹೆ
______________________________________

ಜನ ಪರಂಪರೆ ನಶ್ವರ ಕ್ಷಯವಾಗಿ ನೆನಪು
ಸಾಗದ ಸಂತತಿ ಜ್ಞಾನ ವಂಶವಾಹಿ ತಲಪು
ಕನ್ನಡತನವೆ ಸಾಗಿ ಹಳೆ ನಡು ಹೊಸಗನ್ನಡ
ಬದಲಾದ ನವಯುಗ ಪೀಳಿಗೆ ಬರೆ ನೋಡ ||

ನಲ್ಲನ ಮನ ಕೊರೆಯುತ್ತಿದ್ದ ಕೀಟದ ಅನಾವರಣವಾಗುತ್ತಿದ್ದಂತೆ ಚಕಚಕನೆ ನಾಗಾಲೋಟದಲ್ಲಿ ಓಡತೊಡಗುತ್ತದೆ ಸೂಕ್ಷ್ಮಮತಿ ಮನೋರಮೆಯ ಮನಸು – ನಲ್ಲನ ಚಿಂತೆಗೆ ಪರ್ಯಾಯವಾದ ಕಾರಣ ವಾದದ ಎಳೆಯನ್ನು ಹುಡುಕುತ್ತ. ಹುಡುಕಿದ ಹಾಗೆಯೆ ಅದನ್ನು ಚಾತುರ್ಯದ ಮಾತಿನ ಸರವನ್ನಾಗಿಸುತ್ತ ನುಡಿಯುತ್ತಾಳೆ, ‘ಗೆಳೆಯ, ಇದಕೇಕಿಷ್ಟೊಂದು ಚಿಂತನೆ, ಆಲೋಚನೆ ? ಹೇಳಿ ಕೇಳಿ ಜನ ಪರಂಪರೆಯೆನ್ನುವುದು ಒಂದು ರೀತಿಯ ಹರಿಯುವ ನೀರಿನ ಹಾಗೆ. ಹೊಸ ನೀರು ಬಂದಂತೆ ಹಳತೆಲ್ಲ ಕೊಚ್ಚಿ ಹೋಗುವ ಹಾಗೆ ಪರಂಪರೆಯ ಸ್ಮೃತಿಯಲ್ಲಿ ಎಲ್ಲವೂ ನಿತ್ಯ ನಿರಂತರವಾಗಿಯೆ ಉಳಿಯುವುದೆಂದು ಹೇಳಬರುವುದಿಲ್ಲ.. ಆ ನಶ್ವರ ಕಲನದಲ್ಲಿ ಉಳಿಯುವುವು ಅದೆಷ್ಟೊ? ಕ್ಷಯವಾಗಿ ಹೋಗುವ ನೆನಪುಗಳು ಇನ್ನೆಷ್ಟೊ ? ನಮ್ಮ ಹಿರಿಯರು ಓದಿ ಗಳಿಸಿದ ಜ್ಞಾನವೇನು ನಮ್ಮ ವಂಶವಾಹಿಯಲ್ಲಿ ಹರಿದು ಬಂದುಬಿಡುವುದೇನು ? ಪ್ರತೀ ಪೀಳಿಗೆಯೂ ಅದನ್ನು ಬೇರೆ ಬೇರೆಯೆ ಗಳಿಸಿಕೊಳ್ಳಬೇಕಲ್ಲವೆ ? ಅಂದ ಮೇಲೆ ಹಳತನ್ನೆ ಬರೆದರು ಹೊಸ ಪೀಳಿಗೆ, ಸಂತತಿಯ ಸಲುವಾಗಿ ಬರೆದಂತಲ್ಲವೆ ? ಅಷ್ಟೇಕೆ ಸಖ, ಕನ್ನಡವನ್ನೆ ನೋಡು – ಇಡೀ ಕನ್ನಡತನವೆ ತಾನು ಸಾಗಿದ ಹಾದಿಯಲ್ಲಿ ಅದೆಷ್ಟು ಬದಲಾಗಿ ಹೋಗಿದೆ ? ಹಳೆಗನ್ನಡ, ನಡುಗನ್ನಡ, ಹೊಸಗನ್ನಡ ಎಂತೆಲ್ಲಾ ರೂಪಾಂತರಿಸಿಕೊಂಡಿಲ್ಲವೆ? ಹೊಸ ಪೀಳಿಗೆಗೆ ಹಳತಿನ ಸವಿಯುಣಿಸುವವರಾದರೂ ಯಾರು ? ಅದಕ್ಕಾದರು ಬರೆಯಲೆಬೇಕಲ್ಲವೆ – ಸಂತತಿಗೆ ಹೊಸ ಜೀವ, ನಾವೀನ್ಯತೆಯನ್ನು ತುಂಬುತ್ತ ?’

ಅದು ಸಮಂಜಸ ಯೋಜನೆ ಹೊಸಗನ್ನಡ
ಪುನರುಚ್ಚರಿಸಿದರು ಹೊಸತ ಮಳೆಮೋಡ
ಆದರೆ ಪ್ರಶ್ನೆಯಿನ್ನು ಬರೆವುದಾದರು ಏನನ್ನು
ವಸ್ತು ವಿಷಯವೆ ಹೊಳೆದಿಲ್ಲ ಕಸಿವಿಸಿಯಿನ್ನು ||

ಮುದ್ದಣ್ಣನಿಗು ಆ ಗಳಿಗೆಯಲ್ಲಿ ‘ ಹೌದಲ್ಲವೆ ?’ ಎನಿಸಿತು. ಯೊಚನೆಯೇನೊ ಸಮಂಜಸವೆ; ಅದರಲ್ಲು ಹಳೆಗನ್ನಡವನ್ನು ಓದಲಾಗದ ಹೊಸಗನ್ನಡದವರಿಗೆ ಹಳೆಯದರ ಪುನರಾವರ್ತನೆಯೂ ಹೊಸತೆ ತಾನೆ? ಆದರು ಮುದ್ದಣ್ಣನ ಕಸಿವಿಸಿಯಿನ್ನು ಕಡಿಮೆಯಾಗಿಲ್ಲ. ಬರೆಯುವುದಕ್ಕೇನೊ ಇದ್ದ ಅಡ್ಡಿ ಆತಂಕ ನಿವಾರಣೆಯಾಯಿತು ಎಂದರು ಏನು ಬರೆಯಬೇಕೆಂದು ಇನ್ನು ನಿಶ್ಚಿತಿತವಾಗಿ ಗೊತ್ತಾಗಿಲ್ಲವಲ್ಲ? ಯಾವ ವಸ್ತು ಆರಿಸಿಕೊಳ್ಳುವುದು ಎನ್ನುವ ಕೀಟ ಇನ್ನು ಕೊರೆಯುತ್ತಿದೆಯಲ್ಲಾ ? ಎಂದು ತನ್ನ ಮಿಕ್ಕುಳಿದಳಲನ್ನು ಸತಿಯ ಮುಂದಿಟ್ಟ ಮುದ್ದಣ್ಣ.

ನಾಡುನುಡಿಯನಾಡಿ ಪ್ರೀತಿ ಪ್ರಣಯ ಬೇಡಿ
ನಾಡ್ಹಬ್ಬ ಸಂತಸ ದುಃಖ ವಿಷಾದವೇಕೆ ಕಾಡಿ
ಲಘುವಿರಲಿ ವಸ್ತು ತೆಳು ಹಾಸ್ಯದ ಗಮ್ಮತ್ತು
ಕನ್ನಡಮ್ಮನ ನೆನೆಸುವ ವ್ಯಾಕರಣ ಸಂಪತ್ತು ||

ಪತಿದೇವನ ಮಾತು ಕೇಳುತ್ತಿದ್ದ ಹಾಗೆಯೆ ಸಕ್ರೀಯಳಾದ ಸತಿ ಚಿಂತಾಮಣಿ ಮನೋರಮೆ ಗಂಡನಿಗೆ ದಾರಿ ತೋರಿಸುವ ಕೆಲಸಕ್ಕೆ ಕೈ ಹಾಕಿದ್ದಾಳೆ ಈಗ. ಜಾಣೆಯಾದ ಅವಳಿಗೆ ಈ ಹೊತ್ತು ಪ್ರೀತಿ ಪ್ರಣಯದ ಕಾವ್ಯ ರಚಿಸುವ ಹೊತ್ತಲ್ಲವೆಂದು ಚೆನ್ನಾಗಿ ಗೊತ್ತು. ಬರೆದರೆ ಸಮಯ ಸೂಕ್ತವಾದುದನ್ನು ತಾನೆ ಬರೆಯಬೇಕು ? ನಾಡ ಹಬ್ಬ ರಾಜ್ಯೋತ್ಸವವೆನ್ನುವುದು ಸಂತಸ, ಆನಂದಗಳನ್ನು ತರುವ ವಿಷಯ. ಅಂದ ಮೇಲೆ ಅಲ್ಲಿ ದುಃಖ, ವಿಷಾದದ ಛಾಯೆಯೂ ಸಲ್ಲದು. ಹಾಗೆಂದು ತೀರಾ ಗಂಭೀರವಾಗಿ ಬರೆದರೆ ಸರಿಯೆ ? ಆ ಗಹನ ಗಂಭೀರತೆಯೆ ಓದುವ ಸಾಮಾನ್ಯರಿಗೆ ಅಡ್ಡಿಯಾಗಬಾರದಲ್ಲಾ? ಅದನ್ನೆಲ್ಲಾ ಆಲೋಚಿಸಿಕೊಂಡೆ ನುಡಿಯುತ್ತಾಳೆ – ನಾಡುನುಡಿಯ ವಸ್ತುವೆ ಆದರೂ ಲಘು ಹಾಸ್ಯದ ಛಾಯೆಯಲ್ಲಿ, ಸರಳ ರೂಪದಲ್ಲಿ ಬರೆಯಿರಿ ಎನ್ನುತ್ತಾಳೆ. ಜತೆಗೆ ಆ ಬರಹ ಹೇಗಿರಬೇಕೆಂದರೆ ಕನ್ನಡಮ್ಮನನ್ನು ಪ್ರೀತಿ, ಗೌರವ, ಆದರಗಳಿಂದ ನೆನೆಸುವ, ಅದರ ಅಪಾರ ವ್ಯಾಕರಣ ಸಂಪತ್ತನ್ನು ಸರಳವಾಗಿಯೆ ಪ್ರತಿಬಿಂಬಿಸುವ ರೀತಿಯಲ್ಲಿ ಬರೆಯಬೇಕು ಎಂದು ಪರೋಕ್ಷವಾಗಿಯೆ ಒತ್ತಾಯ ಹಾಕುತ್ತಾಳೆ..

ಏನಂಥ ಸರಕು ಹುಡುಕಲ್ಹೇಗೆ ಸರಿಯವಸರ
ತಿಳಿಯಾದ ಮನತಾಣ ಬೇಕಲ್ಲೆ ಬರಹ ಸಾರ
ಸಂತೆಗೆ ಮೂರ್ಮೋಳ ನೇಯ್ದಂತಲ್ಲವೆ ಸೀರೆ
ಆತುರಾತಂಕದ ಸಮಯಕೆ ಓಡದ ಕೈಬೇರೆ ||

ಮುದ್ದಣ್ಣನೇನು ಅದನ್ನು ಅರಿಯದ ಅಮಾಯಕನೆ ? ಅವನಿಗು ಅದು ಗೊತ್ತಿರುವಂತಾದ್ದೆ. ಅವನೂ ಅಂತದ್ದೆ ಸರಕಿಗಾಗಿ ತಾನೆ ಹುಡುಕಾಟ ನಡೆಸಿರುವುದು ? ಆದರೆ ತೊಡಕೆಂದರೆ ಇದು ಅವಸರದಲ್ಲಿ, ಕೊನೆ ಗಳಿಗೆಯಲ್ಲಿ ಕೈಗೆತ್ತಿಕೊಂಡಿರುವ ಕೆಲಸ. ಸರಿಯಾದ ವಸ್ತುವಿನ ಹುಡುಕಾಟಕ್ಕಾದರೂ ಸಮಯವಿರಬೇಕಲ್ಲ ?ಅದನ್ನೆ ಗೊಣಗಿಕೊಳ್ಳುತ್ತಾನೆ ಮುದ್ದಣ್ಣ…’ಯೋಚಿಸಿ ಬರೆಯಲು ಹೊತ್ತಿರಬೇಕು, ತಿಳಿಯಾದ ಸರಿಸೂಕ್ತ ಮನಸಿರಬೇಕು, ಪ್ರೇರೇಪಿಸುವ ಪರಿಸರದ ತಾಣವೆಲ್ಲ ಒಟ್ಟಾಗಿ ಕೂಡಿ ಬಂದರೆ ತಾನೆ ಸಾರ ಸತ್ವವುಳ್ಳ ಬರಹ ಹುಟ್ಟಿಕೊಳಲು ಸಾಧ್ಯ ? ಅವಸರದಲ್ಲಿ ಸಂತೆಗೆ ಮೂರು ಮೊಳ ನೇಯ್ದ ಸೀರೆಯಂತಲ್ಲ ಬರೆಯುವ ಕಾಯಕ. ಆ ಆತುರವುಂಟು ಮಾಡುವ ಆತಂಕದಿಂದಾಗಿ ಕೈ ಕಾಲೆ ಓಡದಂತಾಗಿಬಿಟ್ಟಿದೆ. ಇನ್ನು ಬರೆಯುವುದೇನು ಬಂತು?’

ಆಹಾ ರಮಣನೆ ನನದೊಂದಿದೆ ಉಪಾಯ
ನಮ್ಮೀ ಸಂವಾದವನೆ ಬರೆಸಲೆ ಅಭಿಪ್ರಾಯ
ವಾರೆವಾ ಹೆಣ್ಣೆ ನಿ ಅಮೋಘ ಕಳಶಪ್ರಾಯ
ನಿನ್ನಣತಿಯಂತೆ ಬರೆವೆನು ನಮ್ಮಾತಿನ ಲಯ ||

ಅವನ ಪ್ರತಿ ಮಾತನ್ನು ಎಚ್ಚರದಿಂದ ಆಲಿಸುತ್ತ ಕೇಳಿಸಿಕೊಳ್ಳುತ್ತಿದ್ದ ಸತಿ ಮನೋರಮೆ ಅವನ ಚಿಂತೆಯನೆಲ್ಲ ಪರಿಹರಿಸುವ ದಾರಿಯೊಂದನ್ನು ಹುಡುಕಿದವಳಂತೆ ತನ್ನ ಉಪಾಯವನ್ನು ಪತಿದೇವನ ಮುಂದಿಡುತ್ತಾಳೆ. ಸುಮ್ಮನೇಕೆ ಆ ವಸ್ತು, ಈ ವಸ್ತು ಎಂದೆಲ್ಲಾ ಹುಡುಕಾಡಿಕೊಂಡು ಒದ್ದಾಡುವುದು ? ನವ ನವೀನ ನಿತ್ಯ ನೂತನವಾಗಿರುವ ತಮ್ಮಿಬ್ಬರ ಸಂಭಾಷಣೆ, ಸಂವಾದವನ್ನೆ ವಸ್ತುವಾಗಿಸಿ ಬರೆದುಬಿಟ್ಟರೆ ಹೇಗೆ? ‘ ಎನ್ನುತ್ತಾಳೆ. ಅವಳ ಮಾತು ಕೇಳುತ್ತಿದ್ದಂತೆ ಜಗ್ಗನೆ ಜ್ಯೋತಿಯೊಂದುದಿಸಿದಂತಾಗುತ್ತದೆ ಮುದ್ದಣ್ಣನಿಗೆ… ‘ಅರೆ! ಹೌದಲ್ಲ ! ತಮ್ಮ ಸಂವಾದವೆ ಬರಹದ ಸರಕಾಗಬಹುದಲ್ಲ – ನಾಡು ನುಡಿಯ ಕುರಿತಾಡಿದಂತೆಯೂ ಆಯಿತು, ನಾವೀನ್ಯತೆಯ ವಿಷಯವನ್ನು ಆರಿಸಿಕೊಂಡಂತಾಯಿತು’ ಎಂದು ಖುಷಿ ಪಡುತ್ತಲೆ ಸಮಸ್ಯೆಗೆ ಪರಿಹಾರ ಕಂಡುಹಿಡಿದ ತನ್ನ ನೆಚ್ಚಿನ ಮಡದಿಯ ಮೇಲೆ ಹೊಗಳಿಕೆಯ ಹೂಮಳೆ ಸುರಿಸುತ್ತ, ‘ ವಾರೆವ್ಹಾ ! ನೀನೊಂದು ಅಮೋಘ, ಕಲಶಪ್ರಾಯ ಹೆಣ್ಣು.. ನಿನ್ನಣತಿಯಂತೆ ನಮ್ಮ ಸಂವಾದವನ್ನೆ ವಸ್ತುವಾಗಿ ಆರಿಸಿಕೊಂಡು ಒಂದು ಕಿರು ಪ್ರಹಸನವನ್ನು ಬರೆದುಬಿಡುವೆ.. ನಮ್ಮ ಮಾತಿನ ಲಯವನ್ನೆ ಅಲ್ಲು ಅನುರಣಿಸುವಂತೆ ಮಾಡುವೆ.. ನನ್ನ ಸಮಸ್ಯೆಗೆ ಇಷ್ಟು ಸರಳ ಪರಿಹಾರ ತೋರಿದ್ದಕ್ಕೆ ಧನ್ಯವಾದಗಳು.. ನೋಡು ಇದೀಗಲೆ ಬರೆಯಲು ಹೊರಟೆ’ ಎನ್ನುತ್ತ ತನ್ನ ಲೇಖನಿಯನ್ನು ಕೈಗೆತ್ತಿಕೊಂಡ ಮುದ್ದಣ್ಣ ನಿರಾಳವಾದ ಹರ್ಷ ತುಂಬಿದ ದನಿಯಲ್ಲಿ.

(ಮುದ್ದಣ್ಣ ಮನೋರಮೆಯರ ಕ್ಷಮೆ ಕೋರುತ್ತ)

– ನಾಗೇಶ ಮೈಸೂರು
ಬ್ಲಾಗ್: ಮನದಿಂಗಿತಗಳ ಸ್ವಗತ (nageshamysore.wordpress.com)

______________________________________________________________________

(ಮೇಲಿನ ಕಾವ್ಯ ರೂಪಕದ ಬರಿಯ ಪದ್ಯಗಳ ಗೊಂಚಲು ಇಲ್ಲಿದೆ – ಟಿಪ್ಪಣಿಯಿಲ್ಲದೆ ಓದಬಯಸಿದವರಿಗೆ)

ಮುದ್ದಣ್ಣನ ಗೊಂದಲ (ಭಾಗ-01)
__________________________

ಮುದ್ದಣ್ಣ ಪ್ರಿಯ ಮನೋರಮೆ ಜಾಣೆ
ಅಂದಿರುಳು ತಡವಿ ಹೋಳಿ ಹುಣ್ಣಿಮೆ
ಚಿಗುರು ತಾಂಬೂಲದ ತಟ್ಟೆ ಪಲ್ಲಂಗ
ಜೀಕುತ ನಲ್ಲನನಪ್ಪಿದ ತೆಳು ಪ್ರಸಂಗ ||

ಮಂದಹಾಸದೆ ಮಕರಂದವೆ ಇನಿಯ
ಕಳುವಾದಂತಿರುವೆ ಎಲ್ಲಿದೆ ಹೃದಯ
ಸರಸ ಸಮಯವಿಲ್ಲಿ ತಿಂಗಳ ನೋಡಲ್ಲಿ
ಹರಿಸ್ಪುರಿಸು ಕಾವ್ಯ ಚಮತ್ಕಾರದ ವಲ್ಲಿ ||

ನಸುನಕ್ಕ ಮುದ್ದ ಕೊಡವಿ ಮನಗೊದ್ದ
ನಾಳೆ ಕನ್ನಡ ರಾಜ್ಯೋತ್ಸವ ದಿನ ಶುದ್ಧ
ನಾಡು ನುಡಿ ಮುಡಿಪಿಟ್ಟ ಮನ ಕದನ
ಏನು ಮಾಡಲಿ ನೆನೆದ್ಯೋಚಿಸಿಹೇ ಚಿನ್ನ ||

ಅದಕೇಕೆ ಚಿಂತೆ ನಾನಿಹೆನಲ್ಲಾ ಸ್ಫೂರ್ತಿ
ನಮ್ಮಿಬ್ಬರ ಕೂಟವೆ ಸೊಗ ಕನ್ನಡದ ಆಸ್ತಿ
ತಣಿಸುವೆ ಹೃದಯನ್ಮನ ತನಿ ತಂಪೆರಚಿ
ಬರೆಸಲ್ಲೆ ಬರವಣಿಗೆ ಕಾವ್ಯದ್ಹನಿ ಎರಚಿ ||

ಉಚಿತಾಲೋಚನೆ ಗಮನಿಸೆ ಸುಲೋಚನೆ
ನಿನ್ನಂಥ ಸತಿಶಿರೋಮಣಿಪಡೆ ಧನ್ಯ ನಾನೆ
ಬರೆದಿಟ್ಟಿಹರಲ್ಲ ಕವಿ ಪುಂಗವರೆಲ್ಲ ಸಾಲ
ಕೋಟಿ ಅಕ್ಷರ ಮಧ್ಯೆ ಬರೆಯಲೇನ ಸಕಲ ||

ಮನೋರಮೆ ಸಲಹೆ (ಭಾಗ-02)
____________________________

ಜನ ಪರಂಪರೆ ನಶ್ವರ ಕ್ಷಯವಾಗಿ ನೆನಪು
ಸಾಗದ ಸಂತತಿ ಜ್ಞಾನ ವಂಶವಾಹಿ ತಲಪು
ಕನ್ನಡತನವೆ ಸಾಗಿ ಹಳೆ ನಡು ಹೊಸಗನ್ನಡ
ಬದಲಾದ ನವಯುಗ ಪೀಳಿಗೆ ಬರೆ ನೋಡ ||

ಅದು ಸಮಂಜಸ ಯೋಜನೆ ಹೊಸಗನ್ನಡ
ಪುನರುಚ್ಚರಿಸಿದರು ಹೊಸತ ಮಳೆಮೋಡ
ಆದರೆ ಪ್ರಶ್ನೆಯಿನ್ನು ಬರೆವುದಾದರು ಏನನ್ನು
ವಸ್ತು ವಿಷಯವೆ ಹೊಳೆದಿಲ್ಲ ಕಸಿವಿಸಿಯಿನ್ನು ||

ನಾಡುನುಡಿಯನಾಡಿ ಪ್ರೀತಿ ಪ್ರಣಯ ಬೇಡಿ
ನಾಡ್ಹಬ್ಬ ಸಂತಸ ದುಃಖ ವಿಷಾದವೇಕೆ ಕಾಡಿ
ಲಘುವಿರಲಿ ವಸ್ತು ತೆಳು ಹಾಸ್ಯದ ಗಮ್ಮತ್ತು
ಕನ್ನಡಮ್ಮನ ನೆನೆಸುವ ವ್ಯಾಕರಣ ಸಂಪತ್ತು ||

ಏನಂಥ ಸರಕು ಹುಡುಕಲ್ಹೇಗೆ ಸರಿಯವಸರ
ತಿಳಿಯಾದ ಮನತಾಣ ಬೇಕಲ್ಲೆ ಬರಹ ಸಾರ
ಸಂತೆಗೆ ಮೂರ್ಮೋಳ ನೇಯ್ದಂತಲ್ಲವೆ ಸೀರೆ
ಆತುರಾತಂಕದ ಸಮಯಕೆ ಓಡದ ಕೈಬೇರೆ ||

ಆಹಾ ರಮಣನೆ ನನದೊಂದಿದೆ ಉಪಾಯ
ನಮ್ಮೀ ಸಂವಾದವನೆ ಬರೆಸಲೆ ಅಭಿಪ್ರಾಯ
ವಾರೆವಾ ಹೆಣ್ಣೆ ನಿ ಅಮೋಘ ಕಳಶಪ್ರಾಯ
ನಿನ್ನಣತಿಯಂತೆ ಬರೆವೆನು ನಮ್ಮಾತಿನ ಲಯ ||

(ಮುದ್ದಣ್ಣ ಮನೋರಮೆಯರ ಕ್ಷಮೆ ಕೋರುತ್ತ)

– ನಾಗೇಶ ಮೈಸೂರು
ಬ್ಲಾಗ್: ಮನದಿಂಗಿತಗಳ ಸ್ವಗತ (nageshamysore.wordpress.com)

00154. ಮುದ್ದಣನೆಂಬ ಕನ್ನಡದ ಆಸ್ತಿ


00154. ಮುದ್ದಣನೆಂಬ ಕನ್ನಡದ ಆಸ್ತಿ

ನಾಳೆ ಅಂದರೆ ಇಪ್ಪತ್ನಾಲ್ಕನೆ ಜನವರಿ ಮಹಾಕವಿ ಮುದ್ದಣನ ಜನ್ಮದಿನವೆಂದು ನನ್ನ ಸಾಹಿತ್ಯಾಭಿಮಾನಿ ಕೂಟದ ಮಿಂಚಂಚೆ ನೆನಪಿಸಿದಾಗ, ಕವಿ ಮುದ್ದಣನ ಕುರಿತು ನೆಟ್ನಲ್ಲಿ ಏನಿದೆಯೆಂದು ನೋಡಲು ಯತ್ನಿಸಿದೆ. ವಿಕಿ ಕನ್ನಡ, ವಿಕಿ, ಕಣಜ ಮತ್ತಿತರ ಕಡೆ ಕೆಲವು ವಿಷಯ ಸಿಕ್ಕಿತು. ಜತೆಗೆ ಮುದ್ದಣನ ಕುರಿತಾದ ಪುಸ್ತಕ ಮತ್ತು ಎಂಪಿ 3 ಕುರಿತು ಮಾಹಿತಿ ಸಿಕ್ಕಿತು. ಅದನ್ನೆಲ್ಲ ಕಲೆ ಹಾಕಿ ಈ ಕೆಳಗಿನ ಪುಟ್ಟ ಕವನದಲ್ಲಿ ಹಿಡಿದಿಡಲು ಯತ್ನಿಸಿದ್ದೇನೆ. ಕವನದ …….

https://nageshamysore.wordpress.com/00155-%e0%b2%ae%e0%b3%81%e0%b2%a6%e0%b3%8d%e0%b2%a6%e0%b2%a3%e0%b2%a8%e0%b3%86%e0%b2%82%e0%b2%ac-%e0%b2%95%e0%b2%a8%e0%b3%8d%e0%b2%a8%e0%b2%a1%e0%b2%a6-%e0%b2%86%e0%b2%b8%e0%b3%8d%e0%b2%a4%e0%b2%bf/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com