01536. ನಿನ್ನ ನೀ ನೋಡಿಕೊ ಮೊದಲು


01536. ನಿನ್ನ ನೀ ನೋಡಿಕೊ ಮೊದಲು

___________________________________

ನಿನ್ನ ನೀ ನೋಡಿಕೊ ಮೊದಲು

ನಿನ್ನ ಮನದ ಕನ್ನಡಿಯಲ್ಲಿ

ಬಿಡು ಅಲ್ಲಿಲ್ಲಿ ಇಣುಕುವಾಟ

ನಿನ್ನಂತೆ ಇಣುಕುವರು ನಿನ್ನಲಿ ||

ನಿನ್ನದಿದೆ ಎಲೆ ನಿನದೆ ಊಟ

ನಿನ್ನ ಜಗದಗಲ ವಿಸ್ತಾರ

ಸುತ್ತ ಚಿಮುಕಿಸು ನೀರ ಬೇಲಿ

ನಮಿಸಿ ಭುಜಿಸು ನಿನ್ನಾಹಾರ ||

ನಿನ್ನದಿದೆ ನೂರೆಂಟು ತಪನೆ

ನಿನದೆ ಕಗ್ಗಂಟು ತಾಪತ್ರಯ

ನಿನದೆ ಸೂಜಿ ನಿನದೆ ದಾರ

ಹಚ್ಚೆ ತೇಪೆಯಾಗಿ ಅಲಂಕಾರ ||

ನೀ ಕಾಣದ ನಿನ್ನದೆ ಬೆನ್ನು

ಕಾಣುವರೆಲ್ಲ ಜಗದ ಮಂದಿ

ಹೊದಿಕೆಯೊ ಬಯಲಾಟವೊ

ಬೆನ್ನ ಬಿಟ್ಟುಬಿಡು ಅವರಿವರ ||

ನಿನ್ನೊಳಗನರಿಯದ ಹಸುಳೆ

ನೀನಾಗಲೆಂತು ಬೋಧಕ ?

ನೀನಾಗದೆ ಹುಸಿ ಬೊಗಳೆ

ನೀನಾಗು ನಿನ್ನೊಳಗೆ ಸಾಧಕ ||

– ನಾಗೇಶ ಮೈಸೂರು

೩೧.೧೨.೨೦೧೭

(ಚಿತ್ರಕೃಪೆ : ಅಂತರ್ಜಾಲ / ಸೋಶಿಯಲ್ ಮೀಡಿಯಾ ಗೆಳೆಯರಿಂದ ಸಂಗ್ರಹಿತ/ರವಾನಿತ ; ಮೊದಲನೆಯ ಚಿತ್ರ ಶ್ರೀಧರ ಬಂಡ್ರಿಯವರ ಲಲಿತಸಹಸ್ರನಾಮ ಪೋಸ್ಟಿನಿಂದ ಎರವಲು ಪಡೆದಿದ್ದು)