01736. ಯಾಕೊ ಮಾಧವ ಮೌನ?


01736. ಯಾಕೊ ಮಾಧವ ಮೌನ?

_________________________________

ಯಾಕೊ ಮುನಿದೆ ಮಾಧವ ?

ಮಾತಾಡದೆ ಕಾಡುವೆ ಯಾದವ ?

ಮರೆಯಲೆಂತೊ ನೀ ವಿನೋದ

ಕಂಡು ಗೋರಾಜನು ಮೂಕಾದ ! ||

ನೋಡಿಲ್ಲಿ ಸುತ್ತಮುತ್ತಲ ನಿಸರ್ಗ

ಮಾಡಿದೆಯಲ್ಲಾ ನಂದನ ಸ್ವರ್ಗ

ನಂದ ಕಿಶೋರ ಇನ್ನೇನು ದೂರು ?

ಹೇಳಬಾರದೆ ಅದೇನಿದೆ ತಕರಾರು ? ||

ಮುನಿಸಲೇಕೆ ಕೂತೆ ತುಟಿ ಬಿಗಿದು ?

ರಾಧೆ ನಾ ಒರಗಿದರು ಅಪ್ಪುತ ಖುದ್ಧು

ಎಂದಿನಂತೆ ಮೀರೆಯೇಕೊ ಸರಹದ್ದು ?

ಹುಸಿ ಬೇಡೆನ್ನುತ ಕಾದ ಮನ ರಣಹದ್ದು ! ||

ಸಿಂಗರಿಸಿಕೊಂಡು ಬಂದೆ ನಿನಗೆಂದೆ

ನೀನಿಂತು ಕೂರೆ ನನಗೇನಿದೆ ದಂಧೆ ?

ಮೌನ ಸಲ್ಲದೊ ನೀ ಮಾತಾಡೆ ಚಂದ

ಮರೆತುಹೋಯ್ತೇನು ನಮ್ಮಾ ಚಕ್ಕಂದ ? ||

ಭಾವದ ಲಹರಿಯಡಿ ತೆರೆದಿಟ್ಟೆ ನನ್ನನೆ

ನಿನ್ನ ಹಿರಿಯಾಕೆ ಅನುಭವಿ ಜ್ಞಾನಿ ನಾನೆ

ನನ್ನೊಳಗೆ ನಿನಗೆಂದೆ ಮೀಸಲು ಕೋಣೆ

ಬೆಳಗುವ ಜ್ಯೋತಿ ನೀ ಮಂಕಾಗೆ ಬೇನೆ ||

– ನಾಗೇಶ ಮೈಸೂರು

೨೩.೦೫.೨೦೧೮

(Picture source : internet / social media received via Manasa Mahadev Govardhan – thank you 🙏👍😊💐)

01602. ಮಾತು ಬೆಳ್ಳಿ ಮೌನ ಬಂಗಾರ..


01602. ಮಾತು ಬೆಳ್ಳಿ ಮೌನ ಬಂಗಾರ..

_____________________________________

ನಿಜ, ಮಾತು ಬೆಳ್ಳಿ ಮೌನ ಬಂಗಾರ

ಮಾತಿನ ಮಲ್ಲಿಗ್ಹಾಕಲೆಂತು ನಿರ್ಬಂಧ ?

ಮಾತವಳಾ ಆಕರ್ಷಣೆ ಬಂಡವಾಳ

ಪ್ರಬುದ್ಧ ಮೌನಕಿಂತ ಹುಡುಗಾಟಿಕೆ ಸೊಗ ! ||

ಮಾತವಳರಳು ಹುರಿದಂತೆ ಚಟಪಟ

ಸುಳ್ಳಾಡಿದರೂ ಸತ್ಯದ ತಲೆಗೆ ಸುತ್ತಿಗೆ ಪೆಟ್ಟು

ಕೇಳುತಲೆ ಇರುವ ಅಪೇಕ್ಷೆ ಮನದಲಿ

ಸತ್ಯಾಮಿಥ್ಯದ ಗೊಡವೆ ಬೇಕ್ಯಾರಿಗೆ ಗಣನೆ? ||

ಮೌನವಾದರವಳು ನೀರವ ಮಸಣ

ಚಡಪಡಿಕೆ ನೀರಾಚೆ ಬಿದ್ದ ಮೀನಿನೊದ್ದಾಟ

ಮಾತಾಡಿರೆ ಸರಿ ಅಸಂಬದ್ಧವೂ ಹಿತ

ದಿಟ್ಟಿಸುತ ಮೋಹಕ ಪುಳಕಿತ ಕಳುವಾಗೆ ||

ಬೆಳ್ಳಿಯಾದರು ಸರಿ ಅಗ್ಗದ ವ್ಯಾಪಾರ

ಗುಲಗಂಜಿ ಬಂಗಾರಕು ತೆರಬೇಕು ದ್ರೋಣ

ಒಡವೆಯ ಗೊಡವೆ ಮೋಹವಿರದಿರಲು

ಯಾಕೆ ಗಾಳಿ ಗುದ್ದಾಟ? ವೈಭವದ ಮಾತಾಟ ||

ಮಾತಾಡದ ಗುಮ್ಮಗು ಮಾತ ಕಲಿಸಾಳು

ಮಾತುಮಾತಲಿ ಕವಿತೆಯಾಗಿ ಹೊಮ್ಮಿಯಾಳು

ಎಳಸು ಮಾತಲು ಸೆಳೆದು ಹೃದಯಕೆ ಲಗ್ಗೆ

ಮಗುವಿನಾ ಮನಸೆಂದು ಮೆಚ್ಚುವ ಮನ ಸೋಗೆ! ||

– ನಾಗೇಶ ಮೈಸೂರು

೧೪.೦೨.೨೦೧೮

(Nagesha Mn)

(Picture source internet / social media received via Madhu Smitha – thank you madam 🙏👍😊)

01366. ಮಳೆಯ ಸದ್ದಲಿ ಮೌನ ಹೊದ್ದು..


01366. ಮಳೆಯ ಸದ್ದಲಿ ಮೌನ ಹೊದ್ದು..
_________________________________


ಮಾತಿನ ಲಹರಿಗೆ
ಮಳೆ ಹೊದಿಸಿದೆ ಮೌನದ ಹೊದಿಕೆ
ಮಾತಾಡಲು ಬಿಡು ಮಳೆಗೆ
ಮಿಕ್ಕ ಮಾತೆಲ್ಲ ಅರ್ಥಹೀನ ಚಡಪಡಿಕೆ… ||

ಮಳೆ ಮಾತೆ ಲಯಬದ್ಧ
ತುಂತುರು ಚೌಕಾಸಿ ಹನಿಯುವ ಜಿಪುಣ
ಕೆಣಕದಿರು ತಿಣುಕಾಡಿಸಿಬಿಡುವ
ಮುಸಲಧಾರೆ ಕೊಚ್ಚಿಬಿಡುವ ನಿಪುಣ ! ||

ಹೇಳದಾವುದಿದೆ ಮಾತು ?
ಮಳೆ ನುಡಿಯಲಾಗದೆ, ಹೇಳದೆ ಮರೆತದ್ದು ?
ಬಿಚ್ಚಲ್ಹೊರಡೆ ತಡವರಿಕೆ ಮುರುಕು ನಿಘಂಟು
ಸುಮ್ಮನಾಲಿಸು ಕಲಿಸುತ್ತದೆ ಪ್ರತಿಹನಿ ಸದ್ದು ! ||

ಗೊತ್ತಾಗದದರ ಲೆಕ್ಕಾಚಾರ
ಮೋಡ ಮಿಂಚು ಗುಡುಗು ಸಹಚರ ಏನೆಲ್ಲಾ !
ಬಿತ್ತಿದ ಫಸಲಿಗಾಸರೆ ನಿಶ್ಯೇಷ ಕೊಚ್ಚಿದರೆ
ಮಾತು ಮನೆ ಕೆಡಿಸಿತು, ಮಳೆ ಮಾತೇನು ಕಮ್ಮಿ ? ||

ಮಳೆಯ ಮಾತಿನ ಮನೆಯಲಿ
ಎದೆಯ ಮಾತಾಗಬೇಕು ಮೌನದ ದೋಣಿ
ಹನಿದು ತೊರೆಯಾದ ನೀರಲಿ
ಮುಳುಗಡೆಯಾಗದಂತೆ ಮಾತಿನ ಲಾವಣಿ ||


– ನಾಗೇಶ ಮೈಸೂರು
(Nagesha Mn)
(Picture source 2 : internet / social media)

01353. ಮೌನ ಧರ್ಮ..


01353. ಮೌನ ಧರ್ಮ..
___________________

(ನಂದಾ ದೀಪಾ ಅವರ ಪೋಸ್ಟಿನಲ್ಲೊಂದು ಪ್ರಶ್ನೆಯಿತ್ತು ‘ಮೌನವು ವಂಚನೆಯಾದೀತೆ ?’ ಅದನ್ನೋದಿದಾಗ ಅನಿಸಿದ ಬಗೆ ಪದವಾದದ್ದು ಹೀಗೆ)

ಮೌನ ಧರ್ಮ..
_______________________


ಭೀಷ್ಮ ದ್ರೋಣಾದಿ ಸಜ್ಜನ ಗಣ
ದ್ರೌಪದಿ ವಸ್ತ್ರಾಪಹರಣದೆ ಘನ
ತಲೆ ತಗ್ಗಿಸಿ ಕುಳಿತಾ ಮೌನ
ವಂಚನೆಯಾದೀತೆ?

ಕುಂತಿಯೆಂಬಾ ವನಿತೆ
ಕರ್ಣನ ಹೆತ್ತಾ ಒಗಟೆ
ತುಟಿ ಕಚ್ಚಿ ಹಿಡಿದಾ ಮೌನ
ವಂಚನೆಯಾದೀತೆ?

ಕುಂತಿಯೆಂಬಾ ಮಾತೆ
ಯುದ್ಧಕೆ ಮೊದಲು ಗುಟ್ಟೆ
ಮುರಿದ ಮೌನ, ಪಡೆದ ವಚನ
ವಂಚನೆಯಾದೀತೆ ?

ಯಾಚಿಸಿ ಪೀಡಿಸೊ ಪ್ರೇಮದಾಟ
ಸರಿ-ತಪ್ಪು ಎನ್ನಲಾಗದ ಧರ್ಮ ಸಂಕಟ
ಹೌದು ಇಲ್ಲಗಳ ನಡುವೆ ಮೌನವಾಗಿರೆ ಮೌನ
ವಂಚನೆಯಾದೀತೆ ?

ಸಮಯ ಸಂಧರ್ಭ ಅನಿವಾರ್ಯ
ಕಟ್ಟು ಹಾಕಿ ಕಟ್ಟಿಡುವ ಬಗೆ ಅನಾರ್ಯ
ವಂಚನೆಯೊ ಉಪಕಾರವೊ ಮೊತ್ತ
ಭವಿತದ ಬುತ್ತಿಯಲಷ್ಟೆ ವಿದಿತ !

– ನಾಗೇಶ ಮೈಸೂರು
(Nagesha Mn)

(Picture / Question Courtesy / thanks to : ನಂದಾ ದೀಪಾ)

00738.ಮೌನದ ಘರ್ಜನೆ ಸದ್ದು


00738.ಮೌನದ ಘರ್ಜನೆ ಸದ್ದು
_________________________


ಚೆಲ್ಲಿ ಮೌನ ತಬ್ಬಿದೆ ಹೆಬ್ಬುಲಿಯ ಹಾಗೆ
ಘರ್ಜಿಸುವ ಸದ್ದು ಕಾದ ಸೀಸದ ಹಾಗೆ
ಕೇಳಿಸಬಾರದು ಶುದ್ಧ ಮೌನದಾ ಸದ್ದು
ಎನ್ನದಿರೊ ಮೂರ್ಖ ಅರಿಯದದರ ದರ್ದು..

ನಿಶ್ಯಕ್ತ ಮಾತು ವ್ಯಯವಲ್ಲಿ ಚಲನ ಶಕ್ತಿ
ಅವ್ಯಕ್ತ ಮೌನ ಜಡಶಕ್ತಿಗದು ಅಭಿವ್ಯಕ್ತಿ
ಬಂಡೆಗಲ್ಲ ಹಾಗಿದ್ದ ಮಾತ್ರಕಲ್ಲಾ ದುರ್ಬಲ
ಅಂದುಕೊಂಡೆ ಬೇಸ್ತು ಸ್ಪೋಟಿಸೆ ಮಹಾಕಾಳ..

ನೋಡಲ್ಲಿ ಹೇಗೆ ಕೂತಿವೆ ಹೃದಯಗಳೆರಡು
ಆಡದಾ ಮಾತಿಲ್ಲ ಕೇಳಿದ ಜಗವೇ ಬೆರಗು
ದೂರವಿದ್ದವೆರಡು ಹತ್ತಿರಾಗುತೆ ಏನಾಯ್ತು ?
ತಬ್ಬಿದ್ದ ದಬ್ಬಿ ಹಬ್ಬಿತೇಕೆ ಮೌನದ ಸರಹದ್ದು ?

ಮೌನ ಮೌನಗಳ ನಡುವೆ ಕಡಲಿನ ಘೋರ
ತೀರದಲ್ಲಿ ಕಾದು ಕುಳಿತೆರಡು ಮನದಪಾರ
ಚಂಚಲತೆ ಶರಧಿ ಆಗಲೆಂತು ಸೇತುವೆ ನಡುವೆ
ತೇಲುವ ನೌಕೆ ಹಡಗು ಕಟ್ಟಿದ ದೂರ ತುಸುವೆ..

ಒಂದೆ ಕೋಣೆಯೊಳಗೆ ಎಷ್ಟು ವ್ಯಾಪ್ತಿಯಗಲ
ಅಳೆಯದಮೇಯ ದೂರಗಳ ತಬ್ಬಿ ಮನದಾಳ
ಬರಿ ದೂರುಗಳಲ್ಲಿ ತುಂಬಿ ಸಂದಿ ಗೊಂದಿ ಕುಟುಕೆ
ಧೂಳು ಹಿಡಿದು ಕೂತ ನಂಟಿಗೇಕೊ ಮೌನದ ತೆಕ್ಕೆ..

– ಮೈಸೂರು ನಾಗೇಶ

(Picture source from : https://en.m.wikipedia.org/wiki/File:The_Roaring_Silence.jpg . The Roaring Silence is an album released in 1976 by Manfred Mann’s Earth Band. The poem has  no relation to this song or band, but the picture is symbolically used to depict the poem’s  intent)

00585. ನಿರ್ದೋಷಿ ಕವಿತೆಗೆ..


00585. ನಿರ್ದೋಷಿ ಕವಿತೆಗೆ..
____________________________   

ಮಾತಾಡಳು ಏಕೋ ಕವಿತೆ
ಆಡದಂತೆ ಮೌನ ಸುಲಿದಿದೆ ಮನಸ
ಸುಲಿದೆಸೆದ ಸಿಪ್ಪೆ ಎಂದೋ ಆಡಿದ ಮಾತು
ಒಣಗಿ ನಲುಗಿ ಒರಟಾಗಿ ಕಂಬನಿ ಕುಯಿಲು ||

ಮಾತೆ ಆಡಿರದಿದ್ದರದು ಸರಿ
ಇಂದಿಲ್ಲ, ಎಂದೂ ಇರಲಿಲ್ಲ ಮೊತ್ತ
ಈ ಕಳವಳ ಕಸಿವಿಸಿ ಯಾಕಂತ ಗೊತ್ತಾ ?
ಬೆವರಲಿ ಬಸಿದಿಟ್ಟ ಮಾಲಿದು ಹೀಗೆ ಕಳುವಾಗಿತ್ತೆ ||

ಏನೀ, ಏಕೀ ಜರೂರತ್ತು ಶರತ್ತೂ?
ಯಾವತ್ತೂ ಇರದ ಜೂರತ್ತಿನ ದರ್ಪಣ
ಕಾರಣ ಹೇಳದೆ ಹೋಗುವ ಕಾರಣವೇನು?
ಅರಿಯದ ತೊಳಲಾಟದಲಿ ಒಗಟಾಗಿ ಕವಿತೆ ||

ಆದರು ಬರದೇಕೊ ಮುನಿಸಲ್ಲಿ
ಹುಡುಕುತಲ್ಲಿ ಕಾರ್ಯಾಕಾರಣ ಪ್ರವೃತ್ತಿ
ಹಿತವೇನನೊ ಬಯಸಿದೆ ಕವಿತೆ ಮನದಲ್ಲಿ
ದೂರುತ ದೂರಾಗುವ ಹವಣಿಕೆ ಮುಖವಾಡ ||

ಮೌನ ನಿನದು, ಮೂಕನಾಗಿದ್ದು ನಾನು
ಇದು ತಾದಾತ್ಮ್ಯಕತೆಯ ಅಚ್ಚರಿಯದ್ಭುತ
ಅರಿತೂ ಅರಿಯದ ಸೋಗಲಿ ನಡೆದಿರುವೆ ನೀ
ಹುಡುಕಿರುವೆ ಕಾರಣ ನಿನ್ನ ನಿರ್ದೋಷಿಯಾಗಿಸಲು ||

– ನಾಗೇಶ ಮೈಸೂರು

(Picture source wikipedia: https://upload.wikimedia.org/wikipedia/commons/a/a4/P_literature.gif)

00574. ನಾನು ನನ್ನ ಕವಿತೆ…


00574. ನಾನು ನನ್ನ ಕವಿತೆ…
_________________________

  
ಜತೆಯಲಿ ಯಾರಿಲ್ಲದ ಗುಟ್ಟು
ನೋವ ಮರೆಸಲು ಯಾರುಂಟು ?
ಎಂದೆಲ್ಲೆಲ್ಲೊ ಅರಸುತ ನಾ ಅವಿತೆ
ಕೊನೆಗುಳಿದಿದ್ದು ನಾನು ನನ್ನ ಕವಿತೆ ||

ಯಾರೊ ಬಂದರು ಹೋದರು ಪಿಚ್ಚೆ
ದೀವಿಗೆಯಿತ್ತರು ಹೊಸಲಿಗೆ ಹಚ್ಚೆ
ಪೆಚ್ಚಾಗಿ ಖೇದ ಬರಿ ಮನದ ಹುಚ್ಚೆ
ನೋವಿಂದಲೆ ಬರೆ ಹಾಕಿದಂತೆ ಹಚ್ಚೆ ||

ಕ್ಷುದ್ರ ಯಾತನೆ ಘೋರದ ಅಪಾರ
ತುಂಬಿದೆದೆಯಲಿ ತುಳುಕಿ ಸಪೂರ
ಕಂಬನಿಯಾಗಲು ಸಂಕಟ ವ್ಯಾಪಾರ
ಬಾಹ್ಯದ ಪರಿವೆ ನಾಚಿಸೊ ಅವತಾರ ||

ಚಡಪಡಿಸುತ್ತಿರೆ ಇದ್ದೂ ಇಲ್ಲದ ಅನಾಥ
ಯಾವುದು ಕೆಳೆ ? ಬಂಧಕು ಸ್ವಾರ್ಥದ ಗಣಿತ
ಬಿಕ್ಕಳಿಸುವ ನಿಶ್ಯಬ್ದ ಸದ್ದಾಗದೆ ಚೀತ್ಕಾರ
ನೀಗಿಸಲೆಂತೊ ತೀರದ ಬವಣೆ ಎದೆಭಾರ ||

ತಟ್ಟನವತರಿಸಿದ ಅಂತರಂಗದ ಕೂರ್ಮ
ಬೇಡವೆಂದರೂ ಸಖ, ಬೆನ್ನಿಗಂಟಿದ ಕರ್ಮ
ಕಂಬನಿಗು ಜಾರಬಿಡದೆ ಬೆರೆತು ಹರಿಸುತೆ
ರಮಿಸುಳಿದಿದ್ದು ಕೊನೆಗೆ ನಾನು, ನನ್ನ ಕವಿತೆ ||

– ನಾಗೇಶ ಮೈಸೂರು

(Picture source wikipedia : https://en.m.wikipedia.org/wiki/File:Visual_poetry.jpg)