01195. ಸರಿದ ಯುಗಾದಿ..


01195. ಸರಿದ ಯುಗಾದಿ..
___________________


(೦೧)
ಹೋಳಿ ಹುಣ್ಣಿಮೆ
ಬಣ್ಣದೋಕುಳಿಯಾಟ
– ಮೌನ ಯುಗಾದಿ

(೦೨)
ಮರೆಸುವುದು
ಮೆರೆವಬ್ಬರ ಸದ್ದು
– ಪರಂಪರೆಯ

(೦೩)
ಆಚರಣೆಯೆ
ಅರ್ಥಹೀನ ಕಪಟ
– ಮನವಿಲ್ಲದೆ

(೦೪)
ಉಗಾದಿ ಬಟ್ಟೆ
ಕಾಯುವ ಕುತೂಹಲ
– ಮಾಲಲಿ ಮಾಯ

(೦೫)
ಯಾಕೋ ನಮನ
ಭಕ್ಷೀಸಿನ ಸಂಭ್ರಮ
– ಸಂಪ್ರದಾಯಕೆ

(೦೬)
ನಮಿಸುತ್ತಿತ್ತು
ಹರಸುತಿತ್ತು ಹಸ್ತ
– ದೂರು ದೂರವ

(೦೭)
ಮಾಡಲೊಲ್ಲರು
ಹಬ್ಬದಡಿಗೆ ನಿತ್ಯ
– ಸಿದ್ದದಡಿಗೆ

(೦೮)
ಹೊರನಾಡಲಿ
ಪಾಕೇಟು ಕ್ಯಾಲೆಂಡರು
– ಹಬ್ಬದ ಲೆಕ್ಕ

(೦೯)
ಸಿಕ್ಕುವುದಿಲ್ಲ
ಹಬ್ಬಕು ಬೇವು ಬೆಲ್ಲ
– ನೀರವ ದಿನ

(೧೦)
ವಾಟ್ಸಪ್ಪಿನಲಿ
ಹಾರೈಕೆ ವಿನಿಮಯ
– ಕಾಪಿ ಪೇಸ್ಟಲಿ

– ನಾಗೇಶ ಮೈಸೂರು
೦೨.೦೪.೨೦೧೭

(Picture source : social media)

01189. ಪ್ರಕೃತಿಯವಳೇ ಯುಗಾದಿ


01189. ಪ್ರಕೃತಿಯವಳೇ ಯುಗಾದಿ
_____________________________


ಮೃದುಲ ಭಾವದ ಮಧುರ
ಅನುಭೂತಿಯದೇನೋ ಸದರ
ತೆರೆದೆದೆಯ ಪದರಪದರ
ಹುಡುಕಿದೆ ನಿನ್ನದೆ ಕೊರಳ ಸ್ವರ

ಅದು ಯುಗಾದಿ ಇದು ಉಗಾದಿ
ಉಗಮಾಗಮ ನಿನ್ನದೆ ಸನ್ನಿಧಿ
ನೀ ತೊಟ್ಟ ಬಾಣ ತೊಡದ ಮಾತು
ಕೊಡುವ ಹೊತ್ತಿಗೆ ಕಾದ ವಕಾಲತ್ತು

ನೀನರಿಯೆ ನಿನದೆ ಮೋಡಿ
ಮಾಡಿಟ್ಟ ಹಾವಳಿ ಬೇಗುದಿ
ಹೇಳಲೆಂತು? ಕೇಳುವವಳಿಲ್ಲ
ಕೇಳುವಳೊ ಬಿಡುವಳೊ ಗೊತ್ತಿಲ್ಲ !

ತಪ್ಪೆಲ್ಲಾ ನನದೇ ಮೊತ್ತ ಗೊತ್ತಾ ?
ಹೊರಿಸಲೆಂತು ನಿನ್ನ ಪಾಲಿಗೆ ಸ್ವಾರ್ಥ
ಹೊತ್ತೆಲ್ಲವ ನಾ ಕುಸಿದರು ಹರುಷ
ನೀ ಹಗುರಾದರದೆ ಜೀವಕೆ ಪರುಷ

ತಪ್ಪೋ ಸರಿಯೋ ಗೊಂದಲ ಸಂದಿಗ್ದ
ಬಿಡಿಸಲೊಗಟ ಹೆಣಗಾಡುವುದನುಚಿತ
ಅನಿಸಿದ್ದನು ಮಾತಾಗಿಸಿದ್ದು ಹೃದಯ
ತಪ್ಪೆನಿಸಿದರು ಕ್ಷಮಿಸು ದೇವರ ನ್ಯಾಯ

– ನಾಗೇಶ ಮೈಸೂರು
೩೦.೦೩.೨೦೧೭
(Picture from social media)

00645. ನೋವಿನ ಹಾಳೆಯಲಿ ನಗೆಯ ಶಾಯಿ..


00645. ನೋವಿನ ಹಾಳೆಯಲಿ ನಗೆಯ ಶಾಯಿ..
_______________________________

   
(picture source from: http://quotesberry.com/)

ನಂಬಿಕೆಗಳೆನ್ನುವ ವಿಚಿತ್ರ ಎಷ್ಟು ತರದಲ್ಲಿ ಪ್ರಭಾವ ಬೀರುತ್ತದೆ ನೋಡಿ. ನಿಜವೋ ಸುಳ್ಳೊ – ವರ್ಷದುಡುಕಿನ ದಿನ ಇಡಿ ವರ್ಷದ ಮುನ್ನೋಟದ ಪ್ರತಿಬಿಂಬ ಅನ್ನುವ ಮಾತು ನನ್ನಲ್ಲಂತೂ ಅಚ್ಚೊತ್ತಿದಂತೆ ನೆಲೆಸಿಬಿಟ್ಟಿದೆ. ಅದು ನಿಜವಾಗಿದೆಯೋ ಇಲ್ಲವೋ ಅನ್ನುವುದನ್ನು ಯಾವತ್ತೂ ತಾಳೆ ನೋಡಿರದಿದ್ದರು ಈ ದಿನ ಮಾತ್ರ ಆ ಭಾವ ಕಾಡಿಯೇ ತೀರುತ್ತದೆ.

ಅಂತಹ ಒಂದು ಗಳಿಗೆಯಲ್ಲೇ ಅನಿಸಿದ್ದು : ಇವತ್ತೊಂದು ಒಳ್ಳೆ ಕವನ ಬರೆಯಬೇಕು – ಅಂತ. ಹಾಗೆ ಬರೆದರೆ ವರ್ಷವೆಲ್ಲ ಒಳ್ಳೆ ಕವನಗಳೇ ಬರುತ್ತೆ ಅನ್ನೋ ತರ್ಕ ! ‘ಹುಚ್ಚಲ್ಲ ಬೆಪ್ಪಲ್ಲ ಇದು ಶಿವಲೀಲೆ’ ಅಂದುಕೊಂಡಿರಾ ? ನನಗೂ ಹಾಗೆ ಅನಿಸಿತು. ಕವಿತೆ ಬರೆಯೋದೇನೊ ಸರಿ – ಯಾವಾಗಲಾದರು ಬರೆಯಬಹುದು – ಆದರೆ ಒಳ್ಳೆಯ ಕವಿತೆ ? ಬರೆಯೋವಾಗ ಯಾರಿಗೆ ತಾನೇ ಗೊತ್ತಿರುತ್ತೆ ? ಅದರಲ್ಲೂ ಬರೆದವರಿಗೆ ಎಲ್ಲಾ ಮುದ್ದು – ಓದೋ ಜನರು ಮಾತ್ರ ಎಳ್ಳೋ ಜಳ್ಳೊ ಹೇಳೋಕೆ ಸಾಧ್ಯ. ಅದೆಲ್ಲಾ ನೆನೆದು ನಗೂನು ಬಂತು..

ಆದರೆ ‘ಕವಿ ಪಿತ್ತ ಕಪಿ ಚಿತ್ತ’ ಅನ್ನೋ ಹಾಗೆ ಬರೀಬೇಕು ಅಂತ ಮನಸಿಗೆ ಬಂದ್ಮೇಲೆ ಬರೀದೆ ಇದ್ರೆ ತಿಂದನ್ನ ಅರಗಲ್ಲ. ಅದಕ್ಕೆ ಆಗಿದ್ದಾಗಲಿ ಅಂತ ಒಂದು ಹೊಸೆದೆ ಬಿಟ್ಟೆ ನೋಡಿ !

ಒಳ್ಳೇದೋ ಅಲ್ವೋ ತಲೆ ಕೆಡಿಸ್ಕೊಳ್ದೆ ಹಾಕೂ ಬಿಟ್ಟೆ ಓದೋರ ಮಡಿಲಿಗೆ ! ಇನ್ನು ‘ಮಾಡುವವನದಲ್ಲ ಹಾಡು ಹಾಡುವವನದು’😊

– ನಾಗೇಶ ಮೈಸೂರು

ನೋವಿನ್ಹಾಳೆಗೆ ನಗೆಯ ಶಾಯಿ ..
_______________________________

ನೋವಿನ್ಹಾಳೆಯಲಿ ನಗೆಯ ಶಾಯಿ
ಉಕ್ಕುಕ್ಕಿ ಬರುತಲದೆ ಮನಕೆ ಹಾಯಿ
ಮಾತಾಗಿ ಅರಳಿ ಹೂ ಹಣ್ಣು ಕಾಯಿ
ಮನಸಾಗಿ ಅರಳೆ ಕಟ್ಟಿ ನೋವ ಬಾಯಿ ||

ಯಾರಿಲ್ಲಿ ಶುದ್ಧ ? ಘನವೇತ್ತ ಪ್ರಬುದ್ಧ
ಎಲ್ಲರಡಿಯ ಬುಡದೆ ಕಾಡೊ ಪ್ರಕ್ಷುಬ್ದ
ಧರಿಸಿಲ್ಲವೇನು ಮುಖವಾಡ ತೊಗಲು
ನುಂಗಿತೆಲ್ಲ ನೋವ ಹೊಣೆ ಹೊತ್ತ ಹೆಗಲು || ನೋವಿ ||

ನಕ್ಕು ನಲಿದರೆಂದು ಮೋಸ ಹೋಗಲೆಂತು
ಮುಚ್ಚಿಟ್ಟ ಭಾವ ಬಿಚ್ಚೋತನಕ ಕಾಣಿಸದು
ತೆರೆತೆರೆಗಳಾಗಿ ಮರೆ ಮಾಡಿ ಬದುಕ ಪರಿ
ಸಜ್ಜನಿಕೆ ಸೌಜನ್ಯ ದಿರುಸಾಗಿ ವೇಷ ಬರಿ || ನೋವಿ ||

ನೋವಿಂದ ತಾನೇ ಬರುವಂತೆ ನೆತ್ತರು
ಹೆದರಿಸಿದ ಗಳಿಗೆ ದಾರಿಗ್ಹುಡುಕುವರು
ಮಾಯವಾಗೆ ಭೀತಿ ಬೀಳಬೇಕು ನೀರಿಗೆ
ಈಜುತಲೆ ಅಳ ತೇಲಿಸಲದೆ ಮುಳುಗೆ || ನೋವಿ ||

ಕಲಿತದ್ದೆಲ್ಲ ಸರಿತಪ್ಪುಗಳ ಸಮೀಕ್ಷೆ
ಆಗಲೆಂದೇ ತಾನೇ ಮಾಡುವ ಪರೀಕ್ಷೆ
ನೋವಲ್ಲೂ ನಕ್ಕವರು ಗೆದ್ದೇ ತೀರುವರು
ಗೆದ್ದಾಗ ವಿನಯದಲಿ ನೋವಿಗರ್ಪಿಸುವರು || ನೋವಿ ||

– ನಾಗೇಶ ಮೈಸೂರು

00643. ಬನ್ಬುಡ್ರಪ್ಪ ಒಂದ್ಸಾರಿ – ವರ್ಷದುಡುಕು..!


00643. ಬನ್ಬುಡ್ರಪ್ಪ ಒಂದ್ಸಾರಿ – ವರ್ಷದುಡುಕು..!
________________________________

ನಾಳೆ ಸ್ವಲ್ಪ, ಜಾಸ್ತಿ ಬನ್ರಪ್ಪಾ
ವರ್ಷದುಡುಕು, ಕೈ ಕೊಡಬ್ಯಾಡ್ರಪ್ಪ
ಕಷ್ಟ ಪಟ್ಟು ಕಟ್ಟಿದ ಸೈಟ್ರಣ್ಣ
ಓದ್ದೇ ಇದ್ರೂನು, ಕಣ್ಹಾಯ್ಸಿ ಹೋಗ್ರಣ್ಣಾ..😜

ಪುಕ್ಸಟ್ಟೆ ಸರಕು ತೊಕ್ಕೊಳ್ರಣ್ಣ
ಕಥೆ ಕವಿತೆ ಲೇಖನ ನೀವ್ಕೇಳಿದ್ದಣ್ಣ
ಹಾಸ್ಯ ಅಪಹಾಸ್ಯ ಆಟಕ್ಕುಂಟು
ನೀವೋದಿದ್ರುಂಟು ಇಲ್ಲ ಲೆಕ್ಕಕ್ಕಿಲ್ಲ ! 🙏

ಮಾರ್ಕೆಟ್ಟಲಿ ವೀಕು ತಾಕತ್ತಿಲ್ರಣ್ಣ
ಕನ್ನಡ ಒಂದೆ ನಡೆಸೋ ಬಲವಣ್ಣ
ಬಂದ್ ನೋಡಿ ಸಾಕು ಮೂಗ್ಬಸವಣ್ಣ
ಖುಷಿಯಾಗಾಡ್ಸುತ್ತೆ ಕೋಲೆ ತಲೆಯನ್ನ ! 😇

ಹಾಳ್ನಂಬ್ಕೆ ವ್ಯಾಪಾರ ಹಂಗೇನ್ರಣ್ಣ
ವರ್ಷ್ದುಡುಕಲ್ಬಂದ್ರೆ ಮತ್ಬರ್ತಾರಣ್ಣ
ಹಂಗಂಕೊಂಡ್ ಬನ್ನಿ ಹೆಜ್ಜೆ ಗುರುತು 🐾
ಉಳ್ಸೋದ್ರೆ ಸಾಕು ಹೋದ್ರೂನು ಮರೆತು 😁

ಹೆಸ್ರಲ್ಲೆನಂತ ಮೂಗ್ ಮುರಿಬ್ಯಾಡ್ರಣ್ಣ
ಮನದಿಂಗಿತ ಸ್ವಗತ ಮರಿಬ್ಯಾಡ್ರಣ್ಣ
ಕಾಡಲ್ಲ ನಾಳೆ ಕಳೀತಂದ್ರಾಯ್ತು
ನಾಳಿದ್ದಿಂದ ಹೊಡ್ಯೋದೆ ನೊಣ ಕೂತು ! 💤🕸

– ನಾಗೇಶ ಮೈಸೂರು

ಮರೆತ ಮಾತು : ಸುಮ್ಮನೆ ಹಾಸ್ಯಕ್ಕೆ ಬರೆದದ್ದು , ಬಲವಂತ ಕರಿತಾನಲ್ಲ ಅಂತ ಬೇಜಾರು ಬ್ಯಾಡ.. ಆದ್ರೂ ಕುತೂಹಲಕ್ಕೆ ಏನ್ ಸೈಟು, ಎಲ್ಲಿದೆ ? ಅಂತ ಅನುಮಾನ ಬಂದ್ರೆ, ಸುಮ್ನೆ ಈ ಲಿಂಕನ್ನ ಒಂದ್ಸಲ ಜಿಗುಟಿ ನೋಡಿ 😎 (nageshamysore.wordpress.com)

00642. ಯುಗಾದಿ ಪುರುಷ – ಪ್ರಕೃತಿ


00642. ಯುಗಾದಿ ಪುರುಷ – ಪ್ರಕೃತಿ
__________________________

  
(Picture source: https://encrypted-tbn2.gstatic.com/images?q=tbn:ANd9GcShbYCz-46GKRCwefKjoUOnBUwk0pMvjcAmGT1yqr6QVGLKcGXZ5w)

ಬಾರಯ್ಯ ಯುಗಾದೀ ಪುರುಷ
ಬರಮಾಡಿಕೊಂಡೇವು ಪರುಷ
ಬಂದುಬಿಡು ಕಿಲಕಿಲ ಕಲರವ
ತುಂಬಿಕೊಳುವಂತಿಂಚರ ಕಾವ || ಬಾರಯ್ಯ ||

ಖಾಲಿ ರೆಂಬೆ ಕೊಂಬೆ ಟೊಂಗೆ ಟಿಸಿಲು
ಹರಿದು ಹಂಚಿ ರಂಗೋಲಿ ಹೊಸಿಲು
ತಳಿರು ತೋರಣ ಮಾವು ಬೇವು ಬೆಪ್ಪ
ಸುಮ್ಮನೆ ಕಟ್ಟಿದ್ದಲ್ಲ ತಾ ಬೆಲ್ಲ ಜತೆ ತುಪ್ಪ || ಬಾರಯ್ಯ ||

ನೋಡಿಲ್ಲಿ ಸಡಗರ ಮನ ಸಾಕ್ಷಾತ್ಕಾರ
ಬಿರುಸು ಬಿಸಿಲಿಗಿಹ ಚಟದಹಂಕಾರ
ಏರುಬೆಲೆ ನಿಲುಕದಿದ್ದರು ನಭದೆತ್ತರದೆ
ನೆರೆದಿಹೆವಿಲ್ಲಿ ಋತು ಬದಲಿಸೆ ಭರದೆ || ಬಾರಯ್ಯ ||

ಸುಮ್ಮನೆ ಬಿಡು ಮಾತದು ಮತ್ತೆ ಬರದು
ಕಾಲವಾದ ಕಾಲದ ನೆನಪಷ್ಟೆ ಬರಿಸದ್ದು
ವಾಸ್ತವದಲನುಭವಿಸೆ ದೂರಿದ್ದ ಮನಸತ್ತ್ವ
ಭೂತವನಾರಾಧಿಸುವ ಹಳತಿನಾ ಮಹತ್ವ || ಬಾರಯ್ಯ ||

ಮುನಿಯದಿರು ಪ್ರಕೃತಿಮಾತೆ ನೀ ಜೊತೆ
ಪುರುಷನಿದ್ದೆಡೆ ಬರುವ ಸಹಜದ ಮಾತೆ
ಬರಲೊಲ್ಲದಿರೆ ಪುರುಷದ ಮನಸಿನೋಲೈಕೆ
ಮಾಡಿ ಕರೆತರುವಾ ಹೊಣೆ ನಿನ್ನ ಹೊಣೆಗಾರಿಕೆ || ಬಾರಯ್ಯ ||

– ನಾಗೇಶ ಮೈಸೂರು

00641. ವಿದೇಶದಲಿ ಯುಗಾದಿ


00641. ವಿದೇಶದಲಿ ಯುಗಾದಿ
_______________________

ತಳಿರು ತೋರಣವಿಲ್ಲ
ಸದ್ದು ಗದ್ದಲವಿಲ್ಲ
ಸಂತೆ ಕೊಳ್ಳುವ ತರದೂದಿಲ್ಲ
ತುಟ್ಟಿ ಹೂ ಮಾವಿಗೆ ಗೊಣಗುವಂತಿಲ್ಲ
ನಮದೂ ಯುಗಾದಿ !

ಆಫೀಸಿಗೆ ರಜೆಯಿಲ್ಲ
ನೆರೆಯವಗೆ ಹಬ್ಬವೂ ಇಲ್ಲ
ಸಸ್ಯ ಮಾಂಸಾಹಾರದ ಪರಿವಿಲ್ಲ
ಪೂಜೆ ನೈವೇದ್ಯ ಮಾಡುವ ಗೋಜಿಲ್ಲ
ನಮದೂ ಯುಗಾದಿ !

ಹಬ್ಬದ ನೆನಪೂ ಇಲ್ಲ
ಹಾರೈಕೆ ಕಳಿಸಲೂ ಇಲ್ಲ
ಶುಭಾಶಯದ ವಿನಿಮಯವಿಲ್ಲ
ಬರಿ ಖಾಲಿ ಖಾಲಿ ಮನಸಿನ ವಿಲ್ಲಾ
ನಮದೂ ಯುಗಾದಿ !

ನಾವಿಲ್ಲಿ ಮನಸಿಲ್ಲಿಲ್ಲ
ನೀವಲ್ಲಿ ಮನಸಲ್ಲಿಲ್ಲ
ಯಾರಲ್ಲೂ ನಿರಾಳವೆ ಇಲ್ಲ
ಏನೋ ಎಂತೋ ಆಚರಿಸದೆ ವಿಧಿಯಿಲ್ಲ
ನಮದೂ ಯುಗಾದಿ !

ಹಬ್ಬಕೆ ಮನ ಕೇಳದಲ್ಲ
ಚಡಪಡಿಕೆ ಊರ ಕರೆಯಿತಲ್ಲ
ದೂರವಾಣಿ ಕರೆಯ ಮಾತಾಯ್ತಲ್ಲ
‘ನೀವಿಲ್ಲದೆ ನಮಗೂ ಹಬ್ಬವಿಲ್ಲ’
ನಮ್ಮೆಲ್ಲರ ಯುಗಾದಿ !

ಯುಗಯುಗಾದಿ ಬಿಡಿರಲ್ಲ
ವರುಷವರುಷ ಬಹುದಲ್ಲ
ಅದೇ ರಾಗ ಅದೇ ತಾಳ ಕಂಜರ
ಕುಸ್ತಿ ಮತ್ತದೇ ಬದುಕಿನಸ್ತಿ ಪಂಜರ
ಯುಗಾದಿ ನಮಗಿಲ್ಲ !

– ನಾಗೇಶ ಮೈಸೂರು

00639. ಯುಗಾದಿಗಿನ್ನೊಂದಷ್ಟು ಹಾಯ್ಕು (೦೩)


00639. ಯುಗಾದಿಗಿನ್ನೊಂದಷ್ಟು ಹಾಯ್ಕು (೦೩)
___________________________________

(೦೧)
ಯುಗ ಯುಗಾದಿ
ಸದ್ಯ ಬರುತಲಿದೆ
– ಕಳುವಾಗದೆ !

(೦೨)
ಅಡ್ಡ ಬೀಳುತ
ನಮಸ್ಕರಿಸೆ ಕಾಸು
– ಮಕ್ಕಳ ಆಸೆ ..

(೦೩)
ಚಪ್ಪರದಡಿ
ಹಗಲು ರಾತ್ರಿ ಹಬ್ಬ
– ಎಲೆಯಾಟಕೆ..!

(೦೪)
ಕಾಮನೆ ನೂರು
ಹೊಸ ವರ್ಷದ ಜೋರು
– ತುಟ್ಟಿಗೆ ಬೈದು..

(೦೫)
ಬಾಡೂಟ ಗುರು
ನಿನ್ನೆಗಾಯ್ತು ಹೋಳಿಗೆ
– ವರ್ಷದುಡುಕು..

– ನಾಗೇಶ ಮೈಸೂರು