02140. ಬರುವಳಿಲ್ಲಿಗೆ ಲಕುಮಿ


02140. ಬರುವಳಿಲ್ಲಿಗೆ ಲಕುಮಿ !
___________________________


ಬರುವಳಿಲ್ಲಿ ಲಕುಮಿ ವ್ರತಕೆ
ಬರುವಳಿಲ್ಲಿ ಮಾ ಲಕುಮಿ..
ತರುವಳಂತೆ ಧನ ಕನಕ ಸೌಭಾಗ್ಯ
ವರವ ನೀಡಿ ಹರಸಲು ಅವಸರದೇ !

ತಾಯ ಬರುವಿಗೆಂದು ಶ್ರಾವಣಿ
ತೊಳೆದಿಹಳು ಇಳೆಗೆ ಮಳೆ ಚೆಲ್ಲಿ
ಬಹ ಹಾದಿಗೆಲ್ಲ ಲಲನೆಯರು
ಇಡುತಿಹರು ಚುಕ್ಕೆ ರಂಗೋಲಿ ರಂಗು !

ಕಲಶ ಒಡವೆ ದೀಪ ನಾಣ್ಯಗಳೆಲ್ಲ
ನಳನಳಿಸುತ್ತಿವೆ ಫಳಫಳ ಹೊಳೆದು
ಉಡಿಸಿಟ್ಟ ರೇಷ್ಮೆ ಸೀರೆಯದೆ ಬೆಡಗು
ಕರ ಕಮಲದಲ್ಲಿ ಕಮಲದಾ ಸೊಬಗು !

ಮಾವಿನೆಲೆ ತೋರಣ ಬಾಗಿಲಲಿ ಧನ್ಯ
ಬಾಳೆಕಂಬದಲಂಕರಣ ಕಾಣುತೇ ಅನನ್ಯ
ಸಿದ್ಧವಾಗಿದೆಯೆಲ್ಲ ಸ್ವಾಗತಿಸೆ ಮಾತೆಯ
ಹೆಜ್ಜೆಯಿಕ್ಕುತ ಬಂದವಳ ಓಲೈಸೆ ವಿನಯ !

ಸಡಗರ ಸಂಭ್ರಮ ತೊಟ್ಟುಡುಗೆಯಲ್ಲಿ
ಹರ್ಷ ವೈಭವ ನಲಿವು ಹೆಂಗಳೆ ಮೊಗದಲ್ಲಿ
ಆರತಿಯನೆತ್ತಿ ಉಡುಗೊರೆ ಹಂಚುವಾ ಕಾರ್ಯ
ವರಮಹಾಲಕುಮಿವ್ರತ ನಡೆಸಿ ಬದುಕಲಿ ಜಯ !

– ನಾಗೇಶ ಮೈಸೂರು
೦೩.೦೮.೨೦೧೭
(Picture source: internet / social media)

00853. ಲಕುಮಿ ಬರಲು ಮುಕ್ಕೋಟಿ ದೈವ..!


00853. ಲಕುಮಿ ಬರಲು ಮುಕ್ಕೋಟಿ ದೈವ..!
________________________________


ಲಕುಮಿ ಬರುತ್ತಿದ್ದಾಳೆ ಬಾಗಿಲೊಳಗೆ
ಮುಚ್ಚದೆ ಕದ ತೆರೆದಿಡಿ ಮನದೊಳಗೆ
ಮುಸ್ಸಂಜೆಯ ಮುತ್ತೈದೆಯ ದಿರುಸಲಿ
ಲಾಲಿತ್ಯದ ಹೆಜ್ಜೆ ಹಾಕುತ ನಗುತಲಿ ||

ಸುಮ್ಮನೆ ಬರುವವಳಲ್ಲ ಮನೆಮನೆಗೆ
ಬಂದರು ನಿಲ್ಲುವಳಲ್ಲಾ ಕೊನೆವರೆಗೆ
ಅರಿಶಿನ ಕುಂಕುಮ ಕೊಡುವ ನೆಪದೆ
ಕಟ್ಟಿ ಹಾಕಿದ ಮುತ್ತೈದೆ ಕಥೆ ನೆನೆದೆ ||

ಬರುವ ದಾರಿಗಿಡಿ ಅಡ್ಡ ಹಾಲ್ಬಿಂದಿಗೆ
ಅಲ್ಲಾಡಲಿ ಮನೆ ತುಂಬಾ ಕಾಲಂದಿಗೆ
ಚೆಲ್ಲಾಡಿದ ಕ್ಷೀರಾ ನೆನೆಸಲಿ ಮನೆಯ
ಸಾಗರವಲ್ಲೆ ಅರಸಿ ನೆಲೆಸಿಕೊ ತಾಯ ||

ಕಟ್ಟಿಗೆ ಬಿದ್ದವಳು ಹೋಗಳು ಮಾತೆ
ಬಿಟ್ಟವಳನು ಇರಬಲ್ಲನೆ ಕರುವಂತೆ
ಹಾತೊರೆಯುತ ಬರುವ ಪತಿ ಅಲ್ಲೆ
ಸತಿಪತಿ ಇದ್ದಲ್ಲೆ ವೈಕುಂಠದ ಲೀಲೆ ||

ಲಕ್ಷ್ಮಿ ನಾರಾಯಣರಿದ್ದೆಡೆಗೆ ಮಿಕ್ಕೆಲ್ಲ
ಮುಕ್ಕೋಟಿ ದೇವತೆಗಳದೆ ಸಮ್ಮೇಳ
ಹೀಗಿದೆ ಲಕುಮಿಯ ಪೂಜಿಪ ಮಂತ್ರ
ಭಜಿಸಿ ದೇವತೆಗಳ ಒಲಿಸುವ ತಂತ್ರ ||


– ನಾಗೇಶ ಮೈಸೂರು

00852. ಕೊಟ್ಟೆ ಕೊಡುವ ಲಕುಮಿ


00852. ಕೊಟ್ಟೆ ಕೊಡುವ ಲಕುಮಿ
_______________________


ಎಲ್ಲಾ ಐಶ್ವರ್ಯ ಸಕಲ
ಅಷ್ಟಲಕ್ಷ್ಮಿ ಕೊಡುವ ಬಲ
ಕೊಡಬೇಕು ನೀ ಮೊದಲ ||

ಕೊಟ್ಟಿದ್ದಲ್ಲ ತಿರುಗಿ ಮತ್ತೆ
ನಿನ್ನಾ ದಾರಿ ಹುಡುಕುತ್ತೆ
ನಿನಗಿದ್ದರಾ ಲಭ್ಯ ಸ್ವತ್ತೆ ||

ಬರಿ ಪೂಜಿಸಲೇನು ಬಂತು
ಕೂಡಿದರೇನು ಬರಿ ಸಂಪತ್ತು
ಅನುಭವಿಸೆ ಭಾಗ್ಯದ ತುರ್ತು ||

ಹಂಚಿದವರಿಗಂಚುವಳು ಲಕ್ಷ್ಮಿ
ಯಾರಿಗೂ ಮಾಡಳೆನನು ಕಮ್ಮಿ
ಕಾಣುವ ಕಣ್ಣಿರೆ ಸ್ವರ್ಗವಿ ಭೂಮಿ ||

ನಮಿಸು ಬಯಸದೆ ಸೌಭಾಗ್ಯ
ತಾನಾಗೆ ಬರುವುದು ಯೋಗ್ಯ
ಋಣ ಕರ್ಮದಂತೆ ಸಂದಾಯ ||

– ಮೈಸೂರು ನಾಗೇಶ

00851. ವರ ಲಕುಮಿಗೆ ನಮಿಪೆ..


00851. ವರ ಲಕುಮಿಗೆ ನಮಿಪೆ..
_______________________

ವರದ ಹಸ್ತೆ, ನಮಿಪೆ ಮಾತೆ
ದಿನ ನಿತ್ಯ ಸ್ತುತೆ, ವರದಾತೆ
ನಿರಂತರ ಧನ ಕನಕ ಭಾಗ್ಯ
ನೀಡುತೆ ಪೊರೆವ ಅನ್ನದಾತೆ ||

ಹಿಡಿದ ಕೊಡ ತುಂಬಿ ಅಕ್ಷಯ
ಧಾರೆಯೆರೆದು ಸತತ ಐಶ್ವರ್ಯ
ಯಾರಿಗುಂಟು, ಯಾರಿಗಿಲ್ಲ ಸಕಲ ?
ಸೆರಗೊಡ್ಡಿ ಬೇಡೆ ಐಸಿರಿಯ ಭಾಗ್ಯ ||


ಹರಿ ಸೇವೆಗೆ ನಿಂತವಳ ಧ್ಯಾನ
ಇಂದೇಕೋ ಭುವಿಯತ್ತ ಗಮನ
ಕೋಟಿ ಕೋಟಿ ಕರೆದಿರೆ ತಾಯ
ಹಿಗ್ಗುತ ಲಕುಮಿ ಆಲಿಸಿ ಗುಣಗಾನ ||

ಅಷ್ಟಲಕ್ಷ್ಮಿಯರ ಇಷ್ಟರೂಪ ತೊಟ್ಟು
ಅರಿಶಿನ ಕುಂಕುಮ ಕಲಶ ಬೊಟ್ಟು
ಸಂಪತ್ತಲೆ ಪೂಜೆ ನಿನ್ನಡಿಗಿಟ್ಟು ಶಿರ
ನೈವೇದ್ಯ ನಿನಗೆ ನೀನೆ ಕೊಟ್ಟ ಸಗಟು ||

ವರಲಕ್ಷ್ಮಿ ವ್ರತ ಕಾಯೆ ಅನವರತ
ಆರಾಧಿಸಿಹರು ಮನ್ನಿಸಿ ಕಾಯುತ
ಪೂರೈಸುತ ನಿನ್ನ ಭಕುತರ ಮನದ
ಸರ್ವದಾ ಸುಖ ಸೌಖ್ಯದಾ ಇಂಗಿತ ||

– ನಾಗೇಶ ಮೈಸೂರು

ಚಿತ್ರಗಳು : ಅಂತರ್ಜಾಲ 

00240. ಶ್ರಾವಣದೆ ಬಲಗಾಲಿಕ್ಕುತ ಲಕುಮಿ…


00240. ಶ್ರಾವಣದೆ ಬಲಗಾಲಿಕ್ಕುತ ಲಕುಮಿ…
______________________________

ಶ್ರಾವಣದ ನಿಸರ್ಗ ಸಿರಿಯ ಜತೆಗೆ ನರ ಮನುಜರ ಸಿರಿ ಸಂಪದ ಐಶ್ವರ್ಯಗಳನ್ನು ಧಾರೆಯೆರೆದು ಕೃತಾರ್ಥರನ್ನಾಗಿಸುವ, ಮಹಾತಾಯಿ ಶ್ರೀ ಲಕ್ಷ್ಮಿಯನ್ನು ಆರಾಧಿಸಿ ಓಲೈಸುವ ಕೈಂಕರ್ಯಕ್ಕೆ ಇಂಬು ಕೊಡುವ ಶ್ರೀ ವರಮಹಾಲಕ್ಷ್ಮಿ ವ್ರತ ಮತ್ತೆ ಕಾಲಿಕ್ಕುತಿದೆ – ಇದೆ ಎಂಟನೆ ಆಗಸ್ಟ್ 2014ರ ಶುಭ ಶುಕ್ರವಾರದಂದು…..

https://nageshamysore.wordpress.com/00240-%e0%b2%b6%e0%b3%8d%e0%b2%b0%e0%b2%be%e0%b2%b5%e0%b2%a3%e0%b2%a6%e0%b3%86-%e0%b2%ac%e0%b2%b2%e0%b2%97%e0%b2%be%e0%b2%b2%e0%b2%bf%e0%b2%95%e0%b3%8d%e0%b2%95%e0%b3%81%e0%b2%a4-%e0%b2%b2%e0%b2%95/

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com