01479. ಕನಸಿನ ಲೋಕ..


01479. ಕನಸಿನ ಲೋಕ..

________________________________

ಕಾಣಬಾರದ ಚಂದ ಕನಸೊಂದ ನಾ ಕಂಡೆ

ಹೇಳಬಾರದ ಕೆಂಡದನುಭವವ ನಾನುಂಡೆ

ಮಾತಾಡಲೊಲ್ಲೆ ಮೌನದಲಿರಲೊಲ್ಲೆ ಕೇಳು

ಆ ಕಸಿವಿಸಿ ಭ್ರಾಂತಿ ಮುಚ್ಚಿಡಲೆಂತು ಹೇಳು? ||

ನಾನಿರುವೆ ನೋಡಿಲ್ಲಿ ಎಷ್ಟೊಂದು ಹಗುರ !

ನನ್ನಾಣೆ ಅರಿವಿರಲಿಲ್ಲ ಯೌವನದ ಕಡು ಭಾರ

ಹೊಸತಾದ ಪ್ರಾಯಕೆ ತತ್ತರಿಸುತಿದೆ ಕನ್ಯಾಸೆರೆ

ತಡೆಯಲೆಂತೊ ಅದರ ಮೇಲಿರಿಸೆ ಕನಸ ಹೊರೆ ? ||

ತಟ್ಟನುದಿಸಿತಲ್ಲೊ ಸುತ್ತ ನನ್ನದೇ ಪ್ರಪಂಚ

ಮರೆಸುತೆಲ್ಲ ವಾಸ್ತವ ಲಟ್ಟಿಸಿ ಕಲ್ಪನೆ ಮಂಚ

ನನ್ನ ಜಗ ಜಗಮಗ ಕುಣಿಸಿರೆ ನನ್ನಾಗಿಸುತ ರಾಣಿ

ಇಹದ ಪರಿವೆ ಮರೆಸಿ ವಯಸ ಧೂಪ ಸಾಂಭ್ರಾಣಿ ||

ಹೊಳೆಹೊಳೆವ ಬಂಗಾರದ ಬೆಳಕ ಪ್ರಭೆ ಜ್ವಾಲೆ

ಎದ್ದು ಕಾಣುವ ಹಂಬಲ ನಾ ಕತ್ತಲಿನ ಕರಿ ಶಿಲೆ

ಫಳಫಳ ಮುತ್ತು ರತ್ನ ಪಚ್ಚೆ ಹವಳ ವಜ್ರ ವೈಡೂರ್ಯ

ಗಾಜಿನ ಗೋಳದ ಮೇಳ ನಶೆ ಕೈಗೆಟುಕದ ಐಶ್ವರ್ಯ ||

ಹೇಗೊ ಕುಣಿಸಿದೆ ಕನಸು ನನಸಂತೆ ದಿರುಸುಟ್ಟು

ನಿಜವೊ ಭ್ರಮೆಯೊ ಗದ್ದಲ ಅರಿಯಬಿಡದೆ ಗುಟ್ಟು

ತಾಳಮೇಳವಿರಲಿ ಬಿಡಲಿ ಕುಣಿಸುವ ಮನ್ಮಥನಾಟ

ಕನಸನ್ಹೊಡೆದು ನನಸಲ್ಹಡೆವ ಬದುಕೇನೀ ಹುಡುಗಾಟ ||

– ನಾಗೇಶ ಮೈಸೂರು

(Nagesha Mn)

(Picture source : Internet / social media)

01395. ನಾಟ್ಯ ಲೋಕ


01395. ನಾಟ್ಯ ಲೋಕ
_______________________


ತಲ್ಲೀನ, ತನ್ಮಯ, ಪರವಶ
ಮನಗಳಾಗಿ ಅದ್ಭುತ
ಚಿತ್ತವೆಲ್ಲೊ ಕಿನ್ನರ ಲೋಕ
ಯಕ್ಷಿಣಿ ಗಂಧರ್ವ ಸಾಕ್ಷಾತ್ಕಾರ ! ||

ಕಳೆದುಹೋದಂತೆಲ್ಲೊ ಯಾನ
ಏಕೀಭವಿತ ತನುಮನ ತಿಲ್ಲಾನ
ರಾಧೆ, ಭಾಮೆ, ರುಕ್ಮಿಣಿಯೊ ?
ಕೊಳಲನ್ಹಿಡಿದ ಪಾತ್ರ ಮಾಧವನೊ ? ||

ನೊಸಲ ನೀಲಿ ವಿರಳ ಸರಳ
ಹರನ ಗರಳವಲ್ಲ ಪ್ರೀತಿಯಾಳ
ಚೆಲುವೆ ಲಲಾಟ ಹೊಳಪೊಳಪು
ಮುನಿಸಲ್ಲ ತೆರೆದ ಮನಸ ಪ್ರಕಟ ||

ನಾಟ್ಯ ಲಯ ಪ್ರಶಾಂತ ನಿಶ್ಯಬ್ಧ
ಸ್ತಬ್ಧ ತಪ ಮುದ್ರೆ ಸುಷುಪ್ತಿ ನಿದಿರೆ
ಅಂತರ್ಯಾನ ಗಾನ ಗಾಯನ
ತಾದಾತ್ಮ್ಯಕತೆ ಅದ್ವೈತ ಅದ್ಭುತ ||

ಪರಕಾಯ ಪ್ರವೇಶ ದೇವಾಯಾಮ
ಅರ್ಧನಾರೀಶ್ವರ-ನಾರೀಶ್ವರಿ ಸೂತ್ರ
ಅರ್ಪಣ ಭಾವ ಅಪರ್ಣ ಸಂತೃಪ್ತಿ
ನಟನವಾಡುತ ಲೌಕಿಕದಿಂ ವಿಮುಕ್ತಿ ||

– ನಾಗೇಶ ಮೈಸೂರು
೨೦.೧೦.೨೦೧೭
(Photo from Internet / social media sent by Mohan Kumar D M – thank you mohan sir! 😍🙏👍😊)

02189. ಈ ಲೋಕ ವ್ಯಾಪಾರ


02189. ಈ ಲೋಕ ವ್ಯಾಪಾರ
__________________________
(‘೩ಕೆ – ನಮ್ಮ ಚಿತ್ರ ನಿಮ್ಮ ಕವನ’)


ಬಂದಿದ್ದೇನೊ ? ಹೋಗಿದ್ದೇನೊ ?
ಬದುಕೆ ಓಟದ ಮೂಟೆ
ಯಾರೊ ಓಡುತ್ತಾರೆ
ಇನ್ಯಾರೊ ಓಡಿಸುತ
ಮತ್ತಾರೊ ಬೆನ್ನಾಗೊ ಮಂದಿ..

ಕೆಲ ಸಮತಟ್ಟು ರಸ್ತೆ
ಉರುಳೋ ಚಕ್ರದ ಜತೆ
ಹೊರಟಿದ್ದರೆ ಅರಸಿ ಗಮ್ಯ..
ಗೊತ್ತಿದೆಯೊ ಇಲ್ಲವೊ
ಸರಿ ಗುರಿಯಿಲ್ಲದಿರೆ ಮೊತ್ತ
ತಪ್ಪು ಜಾಗಕೆ ತಲುಪೊ ಬೇಗ !

ಹಾಸಿಕೊಂಡ ಪರಂಪರೆ
ಪೂರ್ವನಿಶ್ಚಿತ ನಿಲ್ದಾಣ
ಗೊತ್ತಿಲ್ಲದೆಯು ತಲುಪಿಸುವ;
ಇರದಿದ್ದರೇನು ಅಚ್ಚರಿ ರೋಮಾಂಚನ ?
ಸಮಷ್ಟಿಯನೊಯ್ಯುವ ದೂತ
– ತಾನಾಗದಿದ್ದರೆ ಧೂರ್ತ !

ಇದುವೆ ವಿಚಿತ್ರ ಒಂದೇ ಜಗ
ವಿಭಜಿಸಿಬಿಟ್ಟಿದೆ ಜೀವನ ಸೊಗ!
ಅವರವರವರು, ಅವರವರ ದಾರಿ
ಧನಿಕ ಶ್ರಮಿಕ ನಿರ್ಗತಿಕ ಬೀದಿ
ಹರಿಯುತೆಲ್ಲ ಸಮನಾಂತರ ಪಥ
ವಿವಿಧತೆಯಲಿ ಏಕತೆ ಸಮಗ್ರ ತತ್ತ್ವ !

ಒಗಟೊಂದು ನಿಶ್ಚಿತ ಚಿತ್ರ ಪಥ
ಹೋಗುತಿದೆಯೊ ಬರುತಿದೆಯೊ ಅನಿಶ್ಚಿತ..
ಹೋಗುತಿದೆಯೆಂದು ಹೋದವರ ಕಂಡೇ
ಬರುತಿರುವುದೆಂಬ ಭ್ರಮೆಯನೂ ಉಂಡೆ
ನಿಜದಲ್ಲಿ ಬಂದು ಹೋಗುವರ ಸಂತೆ
ಈ ಸಂತೆಯಾ ಬದುಕು ಮೂರೇ ದಿನವಂತೆ !

– ನಾಗೇಶ ಮೈಸೂರು
೨೬.೦೮.೨೦೧೭

02076. ನಾವಿರುವ ಲೋಕ ಕಸದ ತೊಟ್ಟಿ..


02076. ನಾವಿರುವ ಲೋಕ ಕಸದ ತೊಟ್ಟಿ..
__________________________________


ಜಗಸೃಷ್ಟಿಯೊಂದು ಕಸದ ತೊಟ್ಟಿ
ಬ್ರಹ್ಮಾಂಡ ತ್ಯಾಜ್ಯ ಎಸೆವ ಮುಷ್ಠಿ
ಕುಲುಮೆಯಲ್ಲಿ ತಿದಿಯೊತ್ತುವ ಹಾಗೆ
ಎಳ್ಳುಜೊಳ್ಳು ಗುಣ ಪರೀಕ್ಷೆಯ ಬಗೆ..

ಸೃಜಿಸುವಾಟ ಸುರಾಸುರ ಜನನ
ಉತ್ಕೃಷ್ಠ ಸೃಷ್ಟಿ ಗುರಿಯಿಟ್ಟ ಕಾರಣ
ತೇರ್ಗಡೆಯಾದವು ನೇರ ದೇವಲೋಕ
ಬಿದ್ದುಹೋಗಿ ಮಿಕ್ಕವು ಭೂಮಿಯ ಲೆಕ್ಕ..

ಅಸುರಭಾವ ಕ್ಷುದ್ರಗುಣ ಸಹಜವೆ
ಸೃಷ್ಟಿಯಾಗುತಿರೆ ಅಸಹನಿಯ ಜಗವೆ
ಅದಕೆಂದೇ ತೆರೆದ ಅಂಗಡಿ ಭೂಲೋಕ
ಕನಿಷ್ಠ ಗುಣಮಟ್ಟದ ಸರಕಲ್ಲೇ ಜಳಕ..

ಭೂಕುಲುಮೆಯಲೊಂದಷ್ಟು ಹೆಣಗಾಡಿ
ಪುಟಕ್ಕಿಟ್ಟ ಚಿನ್ನವಾಗಲು ಕೆಲವೇ ಗುದ್ದಾಡಿ
ಸ್ವರ್ಗಾರೋಹಣ ದೇವಲೋಕದ ಕದ ತಟ್ಟಿ
ನರಕ ಕೂಪದೆ ಮಿಕ್ಕವಕ್ಕೆ ಸಂಸಾರ ಗಟ್ಟಿ..

ಗೊತ್ತಿರದೆ ನರಳುವ ಕೂಪ ಮಂಡೂಕಗಳು
ಸ್ವರ್ಗನರಕದ ಹೆಸರಲ್ಲಿ ದೂಡುವ ದಿನಗಳು
ಕೇಳು ಮಂಕೆ ಅವರಾಟದ ಪಗಡೆ ಕಾಯಿ
ನೂರೆಂಟು ಕಥನ ಕಟ್ಟಿಹಾಕಿವೆ ನಮ್ಬಾಯಿ !


– ನಾಗೇಶ ಮೈಸೂರು
(Picture source : Creative Commons)