02173. ಸರ್ವಜ್ಞನ ವಚನಗಳು ೧೨ : ಗಾಳಿಯಿಂ ಮರನುರುಳಿ


02173. ಸರ್ವಜ್ಞನ ವಚನಗಳು ೧೨ : ಗಾಳಿಯಿಂ ಮರನುರುಳಿ

___________________________________________________

ಗಾಳಿಯಿಂ ಮರನುರುಳಿ | ಹುಲ್ಲೆಲೆಯು ಉಳಿವಂತೆ |

ಮೇಳಗಳ ಬಲದಿ ಉರಿಯುವಾ ಖಳನಳಿದು

ಕೀಳಿ ಬಾಳುವನು ಸರ್ವಜ್ಞ ||

ಇದೊಂದು ಸರಳ ಮತ್ತು ನೇರ ಅರ್ಥವಿರುವ ವಚನ. ಸಾರಾಂಶದಲ್ಲಿ ಬರಿ ಬಲ, ಶಕ್ತಿ, ಸಾಮರ್ಥ್ಯಗಳೆ ಅಸ್ತಿತ್ವ, ಉಳಿಯುವಿಕೆಯ ಮಾನದಂಡವಲ್ಲ, ಕೆಲವೊಮ್ಮೆ ಅದು ಮಾರಕವೂ ಆಗಬಹುದು ಎಂದು ಸಾರುತ್ತದೆ. ಅಂತೆಯೆ ದುರ್ಬಲ ಎಂದುಕೊಂಡಿದ್ದು ಕೂಡ ಕೆಲ ಸಂದರ್ಭದಲ್ಲಿ ವರದಾಯಕವಾಗಿ ಪರಿಣಮಿಸಬಹುದು. ಸಾಮರ್ಥ್ಯ – ದೌರ್ಬಲ್ಯಗಳ ಮಾಪನ ಸನ್ನಿವೇಶ, ಪರಿಸ್ಥಿತಿಯ ಮೇಲೆ ಅವಲಂಬಿಸಿರುತ್ತದೆಯೆ ಹೊರತು ಗಾತ್ರ, ಶಕ್ತಿಗಳ ಮೇಲಲ್ಲ ಎನ್ನುವುದು ಇದರ ಮತ್ತೊಂದು ಒಳನೋಟ. ಹೀಗಾಗಿ ಯಾರನ್ನೆ ಆದರೂ ಬಲಶಾಲಿಯೆಂದೊ, ಶಕ್ತಿಹೀನನೆಂದೊ ಏಕಾಏಕಿ ತೀರ್ಮಾನಿಸಲು ಆಗದು ಎಂಬುದು ಇಲ್ಲಿನ ತರ್ಕ.

ಗಾಳಿಯಿಂ ಮರನುರುಳಿ | ಹುಲ್ಲೆಲೆಯು ಉಳಿವಂತೆ |

ದೊಡ್ಡ ಬಿರುಗಾಳಿಯೊ, ಸುಂಟರಗಾಳಿಯೊ ಬಂದಾಗ ಅದಕ್ಕೆದುರಾದ ದೊಡ್ಡ ದೊಡ್ಡ ಮರಗಳೂ, ತರಗೆಲೆಗಳಂತೆ ಮುರಿದು , ಉರುಳಿಬೀಳುತ್ತವೆ. ಅದರ ಗಾತ್ರ, ಆಯಸ್ಸು, ಬೇರೂರಿದ ಆಳ ಯಾವುದನ್ನು ಗಣನೆಗೆ ತೆಗೆದುಕೊಳ್ಳದೆ ಬುಡಸಮೇತ ಕಿತ್ತೆಸೆದು ಬಿಡುತ್ತದೆ ಬಲವಾದ ಮಾರುತ ಶಕ್ತಿ. ಆದರೆ ಅದೇ ಮಾರುತ ಹುಲ್ಲುಗಾವಲಿನ ಮೇಲೊ, ಅಥವಾ ಸಾಧಾರಣ ಎಲೆ, ಹುಲ್ಲು ಮತ್ತಂತದ್ದೆ ಸಣ್ಣ ಗಿಡಗಳ ಮೂಲಕವೊ ಹಾದು ಹೋದಾಗ ತಮ್ಮ ಎಳೆತನದ ಕಾಯವನ್ನು ಗಾಳಿಗನುಸಾರ ಬಗ್ಗಿಸಿ ಅದು ತಮ್ಮನ್ನು ಬರಿ ಸವರಿಕೊಂಡು ಅಥವಾ ಬಾಗಿಸಿ ಮುಂದೆ ಹೋಗುವಂತೆ ಮಾಡಿಕೊಳ್ಳುತ್ತವೆ.

ಎದುರಾಳಿಯ ಬಲವರಿಯದೆ ಎದೆ ಸೆಟೆಸಿ ಹೋರಾಡಲು ನಿಂತ ಬಲವಂತ ತನ್ನ ಮೂರ್ಖತೆಯಿಂದ ಧರಾಶಾಯಿಯಾದರೆ, ದುರ್ಬಲನಾದರು ತನ್ನ ಮಿತಿ ಅರಿತ ಹುಲ್ಲಿನಂತಹವನು ಶರಣಾಗಿ ತಲೆತಗ್ಗಿಸಿ ತನ್ನ ಜೀವವುಳಿಸಿಕೊಳ್ಳುತ್ತಾನೆ. ಬರಿ ಕಸುವಿದ್ದರೆ ಸಾಲದು – ಯಾವಾಗ ಅದನ್ನು ಹೇಗೆ ಬಳಸಬೇಕೆಂಬ ಬುದ್ಧಿವಂತಿಕೆಯೂ ಇರಬೇಕೆನ್ನುತ್ತದೆ ಸಾಮಾನ್ಯ ತಿಳುವಳಿಕೆ.

ಮೇಳಗಳ ಬಲದಿ ಉರಿಯುವಾ ಖಳನಳಿದು

ಕೀಳಿ ಬಾಳುವನು ಸರ್ವಜ್ಞ ||

ಜನಬಲ, ಧನಬಲ, ಸೈನ್ಯದಬಲ ಇತ್ಯಾದಿಗಳ ಮೇಳವನ್ನೊಗ್ಗೂಡಿಸಿಕೊಂಡು ಅ ದಂಡು, ಧಾಳಿಗಳ ಬಲದೊಡನೆ ಜಗವನ್ನೆ ಗೆಲ್ಲಬೇಕೆಂದು ದಂಡೆತ್ತಿ ಹೊರಡುವ ವ್ಯಕ್ತಿಯ ಉದ್ದೇಶ ಸಕಾರಾತ್ಮಕವಾಗಿರದಿದ್ದರೆ, ಎಷ್ಟೇ ಕದನಗಳನ್ನು ಗೆದ್ದು ಮುನ್ನಡೆದರೂ ಅಂತಿಮವಾಗಿ ಅವನಾಸೆ ಕೈಗೂಡದು. ಗುರಿ ಮುಟ್ಟುವ ಮೊದಲು ಅವನೆ ಮರಣಿಸಬಹುದು. ಸೂಕ್ತ ರಕ್ಷಣೆಯಿಲ್ಲದ ಹೊತ್ತಲ್ಲಿ ಧಾಳಿಗೊಳಗಾಗಬಹುದು. ಏನಿಲ್ಲವೆಂದರು ಸಹಜ ಸಾವಿಗೀಡಾಗಿ ಅವನ ಹೆಸರೆ ಇತಿಹಾಸದಿಂದ ಅಳಿಸಿಹೋಗಿಬಿಡಬಹುದು. ಕೆಲವೊಮ್ಮೆ ತನ್ನವರಿಂದಲೆ ಧಾಳಿಗೊಳಗಾಗಿ ಅಳಿಯಬಹುದು. ಅದೇನೆ ಆದರು ಕೊನೆಗವನ ಹೆಸರು ಖಳನಾಗಿ ಉಳಿಯುವುದೇ ಹೊರತು ಜನಾನುರಾಗಿ ನಾಯಕನಾಗಿಯಲ್ಲ. ಇಂತಹ ಖಳನಾಯಕರಿಗೆ ಸಾಧಾರಣ ಅರೆ ಆಯಸ್ಸು. ಹೀಗಾಗಿ ಅವರು ತಮ್ಮ ಬಾಳನ್ನು ಸಂಪೂರ್ಣವಾಗಿ, ಪರಿಪೂರ್ಣವಾಗಿ, ಸಂತೃಪ್ತಿಯಿಂದ ಬಾಳುವ ಸಾಧ್ಯತೆಯೂ ಕಡಿಮೆಯೆ.

ಆದರೆ ಅವನಂತೆ ಉತ್ತಮ ಸ್ಥಾನಮಾನದನುಕೂಲವಿರದ ಅವನಿಗಿಂತ ಕೆಳಸ್ತರದವನೊಬ್ಬ (ಕೀಳಿ) ಅವನ ಹಾಗೆ ಯಾವ ಅನುಕೂಲವಿಲ್ಲದೆಯೂ, ಬಲ-ಸಾಮರ್ಥ್ಯವಿಲ್ಲದೆಯೂ ಸದಾಶಯಪೂರ್ಣ, ಸಂತೃಪ್ತ ಬದುಕನ್ನು ಬದುಕಿ ತನ್ನ ಸತ್ಕಾರ್ಯಗಳಿಂದಲೆ ಜನರ ಮನದಲ್ಲಿ ತನ್ನ ಹೆಸರು ಶಾಶ್ವತವಾಗಿ ನೆಲೆಸಿಬಿಡುವಂತೆ ಮಾಡಿಕೊಳ್ಳುತ್ತಾನೆ. ತನ್ನ ಕಾರ್ಯಗಳಿಂದಲೆ ತಾನು ಅಳಿದ ಮೇಲು ತನ್ನ ಹೆಸರು ಚಿರಸ್ಥಾಯಿಯಾಗುವಂತೆ ಬಾಳಿ ಹೋಗುತ್ತಾನೆ.

ಹೀಗೆ ಬಲವಿದ್ದರೂ ಯಶಸ್ವಿಯಾಗದ, ದೌರ್ಬಲ್ಯವಿದ್ದರೂ ಯಶಸ್ಸುಗಳಿಸಿದ ಅನೇಕ ನಿದರ್ಶನಗಳನ್ನು ನಾವು ಕಾಣಬಹುದು. ಅದಕ್ಕೆ ಯಾರನ್ನೂ ಸಬಲ, ದುರ್ಬಲರೆಂದು ಪರಿಗಣಿಸದೆ ಎಲ್ಲರ ಸಾಮರ್ಥ್ಯವೂ ಸೂಕ್ತ ಸಮಯದಲ್ಲಿ ಬಳಕೆಗೆ ಬರುತ್ತದೆ ಎಂದು ಪರಿಗಣಿಸಿ ಮುನ್ನಡೆಯಬೇಕು. ಮೇಲು ಕೀಳೆಂದು ಹೀಗಳೆಯದೆ ಎಲ್ಲರನ್ನು ಸಮಾನ ಸ್ವರೂಪದಲ್ಲಿ ಕಾಣಬೇಕು ಎನ್ನುತ್ತಾನಿಲ್ಲಿ ಸರ್ವಜ್ಞ.

– ನಾಗೇಶ ಮೈಸೂರು

(ಸೂಚನೆ : ನನ್ನರಿವಿಗೆಟುಕಿದಂತೆ ಈ ವಚನವನ್ನು ಅರ್ಥೈಸಲು ಯತ್ನಿಸಿದ್ದೇನೆ. ವಿವರಣೆ ಅಪರಿಪೂರ್ಣಾ, ಅಸಮರ್ಪಕ ಎನಿಸಿದರೆ ಕಾಮೆಂಟಿನ ಮೂಲಕ ತಿದ್ದಿ. ಅಂತಿಮವಾಗಿ ಸಮರ್ಪಕ ಅರ್ಥ ಒಗ್ಗೂಡಿದರೆ ಅರ್ಥೈಸಲು ಎಲ್ಲರಿಗು ಸಹಾಯವಾದಂತಾಗುತ್ತದೆ. ಕೀಳಿ ಶಬ್ದಕ್ಕೆ ಹೆಚ್ಚು ಸಮರ್ಪಕ ಅರ್ಥ ಗೊತ್ತಿರುವವರು ದಯವಿಟ್ಟು ಕಾಮೆಂಟಿನಲ್ಲಿ ಸೇರಿಸಿ)

(Picture source : Wikipedia : https://kn.m.wikipedia.org/wiki/ಸರ್ವಜ್ಞ#/media/ಚಿತ್ರ%3ASarvagna.jpg)

02129. ಸರ್ವಜ್ಞನ ವಚನಗಳು ೦೦೧೦. ತೋರುವ ಕುಲಗಿರಿಯ


02129. ಸರ್ವಜ್ಞನ ವಚನಗಳು ೦೦೧೦. ತೋರುವ ಕುಲಗಿರಿಯ
______________________________________________________

ತೋರುವ ಕುಲಗಿರಿಯ | ಮೀರಿ ತಪದೊಳಿರ್ದು |
ಬೇರೊಂದು ಮನವನೆಣಿಸಿದೆಡೆ ಬೆಳೆದ ಹೊಲ |
ಸೂರೆ ಹೋದಂತೆ ಸರ್ವಜ್ಞ ||

ಇಲ್ಲಿರುವ ಪದಗಳ ಅರ್ಥಗಳೆಲ್ಲವೂ ನೆರವಾದದ್ದೇ ಆದರೂ ಒಟ್ಟಾರೆ ಭಾವಾರ್ಥ ಒಂದೇ ಗುಟುಕಿಗೆ ಪೂರ್ತಿಯಾಗಿ ದಕ್ಕುವುದಿಲ್ಲ. ನನ್ನರಿವಿಗೆಟುಕಿದಂತೆ ಅದನ್ನು ವಿವರಿಸುವ ಯತ್ನ ಮಾಡಿದ್ದೇನೆ.

ಗುರಿಸಾಧನೆಯ ಹಾದಿಯಲ್ಲಿ ಅಡೆತಡೆಗಳು ನಿರಂತರ. ಅದರಲ್ಲೂ ಗುರಿಗೆ ಹತ್ತಿರವಿದ್ದಾಗ ಎಡವಿದರೆ ಆಗುವ ನಷ್ಟ ಅಗಾಧವಾದದ್ದು. ಕಟ್ಟೆಚ್ಚರದಿಂದ ಕಾಯ್ದುಕೊಳ್ಳದಿದ್ದರೆ ನಮ್ಮ ಶ್ರಮದ ಪ್ರತಿಫಲ ಇನ್ನಾರದೋ ಪಾಲಾಗುತ್ತದೆ ಎನ್ನುವುದು ಇದರ ಮುಖ್ಯ ಸಾರ. ಆದರೂ ಇದರ ಪೂರ್ಣಾರ್ಥ ಒಂದೇ ಗುಟುಕಿಗೆ ನೇರ ಎಟುಕದ ಕಾರಣ , ಸ್ವಲ್ಪ ವಿಸ್ತೃತ ವಿವರಣೆಯನ್ನು ಸೇರಿಸುತ್ತಿದ್ದೇನೆ.

ತೋರುವ ಕುಲಗಿರಿಯ | ಮೀರಿ ತಪದೊಳಿರ್ದು |
_______________________________________

ಎಲ್ಲವನ್ನು ಬಿಟ್ಟು ಕಾಡಿಗೆ ಹೋಗಿ ತಪಸ್ಸಿಗೆ ಕೂರುವುದೆಂದರೆ ಕಡಿಮೆಯ ಮಾತಲ್ಲ. ತಪಸ್ಸಿಗೆ ಕೂರಲು ಹೊರಟವನ ಮನೋದಾರ್ಢ್ಯ ಅದಮ್ಯವಾದದ್ದಿರಬೇಕು. ಹೋಗದಂತೆ ತಡೆಯುವ ಐಹಿಕ ಜಗದ ಕುಲಬಂಧಗಳು, ಸಿರಿಸಂಪದದ ಆಮಿಷಗಳು, ಸುಖ-ಸಂತಸದ ಅಮಲು – ಎಲ್ಲವೂ ಜಯಿಸಲಾಭೇಧ್ಯವಾದ, ಏರಲಾಗದ ಕಡಿದಾದ ಗಿರಿಯಂತೆ ಅಡೆತಡೆಯಾಗಿ ಕಾಡುವುದರಿಂದ ಅವೆಲ್ಲವನ್ನು ಕಡೆಗಣಿಸಿ ನಡೆಯುವುದು ಅಷ್ಟು ಸುಲಭವಲ್ಲ. ಅತೀವ ಮನೋಶಕ್ತಿ, ಮನೋಬಲಗಳಿಂದ ಅಂತಹ ಕಷ್ಟಸಾಧ್ಯವಾದದ್ದನ್ನು ಸಾಧಿಸಿ ಹಠ ಬಿಡದೆ ತಪಸ್ಸಿಗೆ ಕೂರುತ್ತಾರೆ ಎಷ್ಟೋ ಮಂದಿ ಸಾಧಕರು, ಋಷಿಮುನಿಗಳು.

ಬೇರೊಂದು ಮನವನೆಣಿಸಿದೆಡೆ..
_______________________________

ಆದರೆ ಈ ಮನಸೆಷ್ಟು ವಿಚಿತ್ರವೆಂದರೆ – ಅಷ್ಟೆಲ್ಲಾ ಪ್ರಲೋಭನೆಯನ್ನು ಗೆದ್ದು ಕಟ್ಟುನಿಟ್ಟಿನಲಿ ತಪಕೆ ಕೂತವನನ್ನು ಸಹ ಕಾಡದೆ ಬಿಡುವುದಿಲ್ಲ ಮಾಯೆ. ಜಿತೇಂದ್ರನಂತೆ ಎಲ್ಲವನ್ನು ನಿರ್ಲಕ್ಷಿಸಿ ಬಂದು ಮೂಗು ಹಿಡಿದು ಕೂತವನನ್ನು ತಪ ಕೆಡಿಸಲೆಂದು ಬಂದ ಅಪ್ಸರೆ ಹೆಣ್ಣಿನ ರೂಪು, ಲಾವಣ್ಯ, ಒನಪು, ವೈಯ್ಯಾರಗಳ ಪ್ರಲೋಭನೆಯ ಅವತಾರದಲ್ಲಿ ವಿಚಲಿತವಾಗಿಸಿಬಿಡುತ್ತವೆ. ಐಹಿಕ ಬದುಕಿನ ಮಿಕ್ಕೆಲ್ಲಾ ಐಷಾರಾಮಗಳಿಗೆ ಮನಸೋಲದವನು, ಆ ಹೆಣ್ಣಿನ ಸಾಂಗತ್ಯದಲ್ಲಿ ನಿಯಂತ್ರಣ ಕಳೆದುಕೊಂಡು ತನ್ನ ಮನಸ್ಸನ್ನತ್ತ ಪೂರ್ತಿ ಹರಿಯಬಿಡುತ್ತಾನೆ. ಅಲ್ಲಿಯತನಕ ಕೇವಲ ತನ್ನ ಮನಸ್ಸನ್ನು ಏಕಾಗ್ರತೆಯತ್ತ ಕೇಂದ್ರೀಕರಿಸುತ್ತಿದ್ದವನು , ಆ ಹೊತ್ತಿನಿಂದ ಅವಳ ಮನವನ್ನು ಗೆಲ್ಲುವತ್ತ ವ್ಯಯಿಸಲು ತೊಳಲಾಡಿತ್ತಾನೆ. ಮನದಲ್ಲಿ ದೇವರ ಹೆಸರನ್ನು ಮಾತ್ರ ಜಪಿಸಿ ತಪಸ್ಸು ಮಾಡುತ್ತಿದ್ದವ ಈಗ ಅಲ್ಲಿ ಕೇವಲ ಅವಳ ಮನವನ್ನು ಮಾತ್ರ ನೆನೆಯುತ್ತ (ಬೇರೆ ಮನವನೆಣಿಸುತ್ತ) ಅವಳ ನೆನಪು, ಯೋಚನೆ, ಆಲೋಚನೆಗಳಲ್ಲೇ ತಲ್ಲೀನನಾಗಿ ಅವಳಿಗೆ ಪೂರ್ತಿ ಶರಣಾಗಿಬಿಡುತ್ತಾನೆ. ಆ ಪ್ರಕ್ರಿಯೆಯಲ್ಲಿ ಅದುವರೆಗೂ ತಾನು ಗಳಿಸಿದ ತಪವೆಲ್ಲ ವ್ಯರ್ಥವಾಗಿ ಸೋರಿಹೋಗುತ್ತಿದ್ದರು ಗಮನಿಸದಷ್ಟು ಆ ಹೆಣ್ಣಿನ ಮೋಹದಲ್ಲಿ ಮೈಮರೆತು ಹೋಗುತ್ತಾನೆ. ಹೀಗೆ ಮೂಲ ಉದ್ದೇಶ ದೇವರ ಮನವನೆಣಿಸಬೇಕೆಂದಿದ್ದರು (ತಪದ ಮೂಲಕ ದೇವರ ಅಸ್ತಿತ್ವವನ್ನರಿಯುವಿಕೆ, ತಾನೇ ಅವನಾಗುವಿಕೆ) ಅದು ಬಿಟ್ಟು ಇನ್ನಾವುದೋ ಮನವನೆಣಿಸುತ್ತ ದಾರಿ ತಪ್ಪಿಬಿಡುತ್ತಾನೆ.

ಬೆಳೆದ ಹೊಲ | ಸೂರೆ ಹೋದಂತೆ ಸರ್ವಜ್ಞ ||
________________________________________

ಇದೊಂದು ರೀತಿ ಹೊಲದಲ್ಲಿ ಕಷ್ಟಪಟ್ಟು ಉತ್ತು, ಬಿತ್ತು ಫಸಲು ತೆಗೆದು ಇನ್ನೇನು ಅದರ ಫಲವನ್ನು ಉಣ್ಣಬೇಕೆನ್ನುವ ಹೊತ್ತಲ್ಲಿ ಮತ್ತಾರೋ ಆ ಫಸಲನ್ನು ಸೂರೆ ಹೊಡೆದುಕೊಂಡು ಹೋದರೆ ಹೇಗೋ ಹಾಗೆ. ಅಲ್ಲಿಯವರೆಗೆ ಅವನು ಪಟ್ಟ ಶ್ರಮವೆಲ್ಲ ಒಂದೇ ಏಟಿಗೆ ಸೋರಿಹೋದಂತೆ ವ್ಯರ್ಥವಾಗಿಹೋಗುತ್ತದೆ. ವರ್ಷಾನುಗಟ್ಟಲೆ ಕಷ್ಟ ಪಟ್ಟು ಬೆಳೆದ ಫಸಲನ್ನು ಕಳ್ಳರು ಕೇವಲ ಒಂದು ರಾತ್ರಿಯ ಶ್ರಮದಿಂದ ಕೊಳ್ಳೆ ಹೊಡೆದುಕೊಂಡು ಹೋಗುವಂತೆ, ವರ್ಷಾಂತರಗಳ ತಪದ ಸಮಷ್ಟಿತ ಶಕ್ತಿಯನ್ನೆಲ್ಲ ತನ್ನ ಮೋಹದ ಬಲೆಯಲ್ಲಿ ಕೆಡವಿಕೊಂಡ ಆ ಹೆಣ್ಣು ಒಂದೇ ಏಟಿಗೆ ಸೂರೆ ಹೊಡೆದುಕೊಂಡುಬಿಡುತ್ತಾಳೆ – ಫಸಲು ಕದ್ದ ಕಳ್ಳರ ಹಾಗೆಯೇ.

ಸಾರದಲ್ಲಿ ಹೇಳುವುದಾದರೆ ಯಾವುದೋ ಗುರಿಯನ್ನು ಬೆನ್ನಟ್ಟಿ ಏಕಾಗ್ರ ಚಿತ್ತದಿಂದ ಅದೆಷ್ಟೋ ಬಗೆಬಗೆ ಕಷ್ಟ ಕಾರ್ಪಣ್ಯಗಳನ್ನು ಸಹಿಸಿಕೊಂಡು ಮುನ್ನಡೆದಿರುತ್ತೇವೆ. ಇನ್ನೇನು ಗುರಿ ಹತ್ತಿರವಾಯ್ತು ಎನ್ನುವಾಗಲೋ ಅಥವಾ ಸರಿಯಾದ ಹಾದಿಯಲ್ಲಿ ಉತ್ತಮ ಪ್ರಗತಿ ಸಾಧಿಸಿರುವಾಗಲೋ ಯಾವುದೋ ಮಾಯಾ ಪ್ರಲೋಭನೆಯು ತಟ್ಟನೆ ಕಾಣಿಸಿಕೊಂಡು ದಿಕ್ಕು ತಪ್ಪಿಸಲೆತ್ನಿಸುತ್ತದೆ; ಗಳಿಸಿದ್ದನ್ನೆಲ್ಲ ಶೂನ್ಯವಾಗಿಸುವಂತೆ ಪ್ರಚೋದಿಸುತ್ತದೆ. ಅದಕ್ಕೆ ಮರುಳಾದರೆ ಅಲ್ಲಿಯವರೆಗೆ ಗಳಿಸಿದ್ದೆಲ್ಲ ಸರ್ವನಾಶ. ಮರುಳಾಗದೆ ಮುನ್ನಡೆದರೆ ಗುರಿಸಾಧನೆಯ ಸಾರ್ಥಕ್ಯ ಎಂಬ ಸಂದೇಶ ಇಲ್ಲಿ ಅಡಕವಾಗಿದೆ.

– ನಾಗೇಶ ಮೈಸೂರು
ಚಿತ್ರ ಕೃಪೆ : ವಿಕಿಪಿಡಿಯಾ

(ಶ್ರೀ ಅಜ್ಜಂಪುರ ಶಂಕರರ Shankar Ajjampura ಕೋರಿಕೆಯನುಸಾರ ಯತ್ನಿಸಿದ ವಚನ. ವಿವರಣೆ ಅಸಮರ್ಪಕ ಅಥವಾ ಅಪರಿಪೂರ್ಣ ಎನಿಸಿದರೆ ದಯವಿಟ್ಟು ಕ್ಷಮೆಯಿರಲಿ)

02128. ಸರ್ವಜ್ಞನ ವಚನಗಳು ೦೦೦೯. ಅಂತರವನರಿವಲ್ಲಿ


02128. ಸರ್ವಜ್ಞನ ವಚನಗಳು ೦೦೦೯. ಅಂತರವನರಿವಲ್ಲಿ
_______________________________________


ಅಂತರವನರಿವಲ್ಲಿ ಎಂತಾದರಿರಲಕ್ಕು
ದಂತಿ ಸೂಕರನು ಸರಿಯೆಂಬ ಠಾವಿನಲಿ
ಎಂತಿರಲಕ್ಕು ಸರ್ವಜ್ಞ ||

ಅಂತರವನರಿವಲ್ಲಿ : ಪಾಂಡಿತ್ಯ, ಪ್ರತಿಭೆ, ಮೇಧಾವಿತನವನ್ನು ಅರಿತು ಗುರುತಿಸಿ, ಗೌರವಿಸುವಂತಹ ಜಾಗದಲ್ಲಿ.
ದಂತಿ : ಆನೆ
ಸೂಕರ : ವರಾಹ, ಹಂದಿ
ಸರಿಯೆಂಬ : ಸಮವೆಂಬ
ಠಾವು : ಸ್ಥಳ
ಎಂತಿರಲಕ್ಕು: ಹೇಗಿರುವುದು

ಸರಳವಾಗಿ ಹೇಳುವುದಾದರೆ : ಸಾಮರ್ಥ್ಯ, ಪ್ರತಿಭೆಗಳಿದ್ದವರು ಅದನ್ನು ಗುರುತಿಸುವಂತಹ ಸ್ಥಳದಲಿದ್ದರಷ್ಟೇ ಅದಕ್ಕೆ ಮನ್ನಣೆ ಎನ್ನುವುದು ಇದರ ಸಾರ.

ಸಮಾಜದಲ್ಲಿ ನಾವು ಹೆಮ್ಮೆಯಿಂದ ಬದುಕಬೇಕಾದರೆ ಸುತ್ತಲಿನ ಜನ ನಮ್ಮ ಶಕ್ತಿ ಸಾಮರ್ಥ್ಯಗಳನ್ನೂ ಗುರುತಿಸಿ ಅದಕ್ಕೆ ತಕ್ಕ ಗೌರವ ಕೊಡುವಂತಿರಬೇಕು. ಎಲ್ಲರನ್ನು ಒಂದೇ ತಕ್ಕಡಿಯಲ್ಲಿ ತೂಗಿ ಎಲ್ಲರು ಒಂದೇ ಮೌಲ್ಯವುಳ್ಳವರು ಎನ್ನುವ ಧೋರಣೆಯಿದ್ದರೆ ನಮ್ಮ ಶಕ್ತಿ, ಸಾಮರ್ಥ್ಯಕ್ಕೆ ಮನ್ನಣೆ ಸಿಗುವುದಾದರೂ ಎಂತು ? ಸಾಧಾರಣ ವ್ಯಕ್ತಿಯೂ ಒಂದೇ, ಅದ್ಭುತ ಕಲಾವಿದನು ಒಂದೇ ಎಂದರೆ ಮೌಲ್ಯಕ್ಕೆ ತಕ್ಕ ಬೆಲೆ ದಕ್ಕಿದಂತಾಗುವುದಿಲ್ಲ. ವ್ಯಕ್ತಿ, ವ್ಯಕ್ತಿತ್ವ, ಮತ್ತವರ ಕೌಶಲ್ಯದ ಅಂತರಗಳನ್ನು ಗಮನಿಸಿ ಅದಕ್ಕೆ ತಕ್ಕ ಸ್ಥಾನಮಾನ, ಗೌರವ ಕೊಡುವ ಜಾಗದಲ್ಲಿದ್ದರೆ ಮಿಕ್ಕಿದ್ದೆಲ್ಲಾ ಇರಲಿ, ಬಿಡಲಿ – ಅಂತಹ ಕಡೆ ಹೇಗಾದರೂ ಬದುಕಬಹುದು.

ಯಾವ ಜಾಗದಲ್ಲಿ ಎಲ್ಲವೂ ಒಂದೇ ಎನ್ನುವ ಅಳತೆಗೋಲಲ್ಲಿ ನೋಡಲ್ಪಡುವುದೋ ಅಲ್ಲಿ ಮೇಧಾವಿಗಳು ಬದುಕುವುದಾದರೂ ಹೇಗೆ ಸಾಧ್ಯ ? ಪಟ್ಟದಾನೆಯ ಮಟ್ಟದ ರಾಜ ಮರ್ಯಾದೆ ಪಡೆಯುವ ಆನೆಗೂ, ಹಾದಿಬೀದಿಯಲಡ್ಡಾಡಿ ಹೊಲಸು ಸ್ವಚ್ಛಗೊಳಿಸುವ ಹಂದಿಗೂ ಒಂದೇ ಮರ್ಯಾದೆ ಎನ್ನುವ ಜಾಗದಲ್ಲಿ ಪಾಂಡಿತ್ಯ, ಸಾಮರ್ಥ್ಯ, ಪ್ರತಿಭೆಗಳಿಗೆ ತಕ್ಕ ಬೆಲೆ, ಮನ್ನಣೆ ಸಿಗುವುದಿಲ್ಲ. ಅಂತಹ ಕಡೆ ಇದ್ದರೂ ಪ್ರಯೋಜನವಿಲ್ಲ ಎನ್ನುವ ತಾತ್ಪರ್ಯ ಈ ವಚನದಲ್ಲಿದೆ. ಇಲ್ಲಿ ಯಾರನ್ನೂ ಕಡೆಗಣಿಸಬೇಕೆಂದು ಅರ್ಥವಲ್ಲ – ಏಕೆಂದರೆ ಎಲ್ಲರಿಗೂ ಅವರವರಿಗೆ ಸಲ್ಲುವ ಸ್ಥಾನಬೆಲೆ ಇದ್ದೇ ಇರುತ್ತದೆ. ಸ್ಥಾನಬೆಲೆಯ ಅಂತರವನ್ನು ಗುರುತಿಸುವ, ಅದಕ್ಕೆ ತಕ್ಕಂತೆ ಗೌರವಿಸುವ ವ್ಯವಸ್ಥೆ ಇರಬೇಕೆಂದು ಇಲ್ಲಿನ ಮುಖ್ಯ ಆಶಯ. ಹಿಂದಿನ ಕಾಲದಲ್ಲಿ ಎಷ್ಟೋ ಮೇಧಾವಿಗಳು ಸೂಕ್ತ ಆಶ್ರಯ ತಾಣ ಹುಡುಕಿಕೊಂಡು ಹೊರಡುತ್ತಿದ್ದುದು ಈ ಕಾರಣದಿಂದಲೇ ಇರಬೇಕು. ಈ ಕಾಲದಲ್ಲಿ ಕಾಣುವ ಪ್ರತಿಭಾ ಪಲಾಯನಕ್ಕೂ ಇದೇ ಹಿನ್ನಲೆಯಿರುವುದು ಗಮನಾರ್ಹ.

– ನಾಗೇಶ ಮೈಸೂರು
೨೬.೦೭.೨೦೧೭
(ಚಿತ್ರ ಕೃಪೆ : ವಿಕಿಪಿಡಿಯಾ)

(ಅಜ್ಜಂಪುರ ಶಂಕರರ Shankar Ajjampura ಕೋರಿಕೆ ಮೇರೆಗೆ ಮಾಡಿದ ಯತ್ನ; ಅಸಮರ್ಪಕ ಅಥವಾ ಅಸಂಪೂರ್ಣ ಎನಿಸಿದರೆ ಕ್ಷಮೆಯಿರಲಿ)

02123. ಸರ್ವಜ್ಞನ ವಚನಗಳು ೦೦೦೮. ಹಸುವ ಕೊಂದವನೊಬ್ಬ


02123. ಸರ್ವಜ್ಞನ ವಚನಗಳು ೦೦೦೮. ಹಸುವ ಕೊಂದವನೊಬ್ಬ
_________________________________________________


ಹಸುವ ಕೊಂದವನೊಬ್ಬ | ಶಿಶು ಕೊಂದವನೊಬ್ಬ |
ಹುಸಿ ಕರ್ಮಕಾರನವನೊಬ್ಬ ಮೂವರಿಗೆ |
ಶಶಿಧರನೊಲಿದ ಸರ್ವಜ್ಞ ||

ಹಸುವ ಕೊಂದವರಾರು? ಶಿಶುವ ಕೊಂದವರಾರು ? ಹುಸಿ ಕರ್ಮಕಾರರು ಯಾರು ? ಎನ್ನುವುದು ಗೊತ್ತಾದರೆ ಈ ವಚನದಲ್ಲಿ ಅರ್ಥ ಮಾಡಿಕೊಳ್ಳಲು ಮತ್ತಾವ ಕ್ಲಿಷ್ಟತೆಯೂ ಕಾಣುವುದಿಲ್ಲ.

ಈ ಮೂರರ ಹುಡುಕಾಟದಲ್ಲಿದ್ದಾಗ ಆಕಸ್ಮಿಕವಾಗಿ ಬಸವಣ್ಣನವರ ಈ ವಚನ ಕಣ್ಣಿಗೆ ಬಿತ್ತು. ಕಾಕತಾಳೀಯವೆಂಬಂತೆ ಮೂರರ ಉತ್ತರವೂ ಅದರಲ್ಲೇ ಕಂಡಾಗ ಅಚ್ಚರಿಯೂ ಆಯ್ತು. ಆ ಬಸವಣ್ಣನವರ ವಚನ ಇಂತಿದೆ :
________________________________________
ಹಸುವ ಕೊಂದಾತನು ನಮ್ಮ ಮಾದಾರ ಚೆನ್ನಯ್ಯ.
ಶಿಶು ವೇಧೆಗಾರನು ನಮ್ಮ ಡೋಹರ ಕಕ್ಕಯ್ಯ.
ಪಾಪಕರ್ಮಿ ನಮ್ಮ ಮಡಿವಾಳ ಮಾಚಯ್ಯ.
ಇವರಿಬ್ಬರ ಮೂವರ ಕೂಡಿಕೊಂಡಿಪ್ಪ,
ಕೊಟ್ಟುದ ಬೇಡನು ನಮ್ಮ ಕೂಡಲಸಂಗಯ್ಯ.

– ಬಸವಣ್ಣ
_________________________________________

ಇದರನುಸಾರ ಸರ್ವಜ್ಞನ ಮೇಲಿನ ವಚನವನ್ನು ವಿಶ್ಲೇಷಿಸಿದರೆ ಅನುಕ್ರಮವಾಗಿ ಶಿವಶರಣರಾದ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಮಡಿವಾಳ ಮಾಚಯ್ಯ ಇವರನ್ನು ಕುರಿತಾಗಿ ಹೇಳುತ್ತಾ ಇರುವ ವಚನವೆಂದು ಅರಿವಾಗುತ್ತದೆ. ಅವರವರ ಬಾಹ್ಯ ಕರ್ಮ ಬಾಂಧವ್ಯದ ಹೊರತಾಗಿಯೂ ಅಂತರಂಗದಲ್ಲಿ ಶುದ್ಧ ಶಿವಶರಣರಾದ ಕಾರಣ ಅವರಿಗೆ ಶಶಿಧರ (ಶಿವ) ಒಲಿದ ಎನ್ನುವ ಭಾವಾರ್ಥ ಇಲ್ಲಿದೆ. ಸಾಮಾನ್ಯ ಜನರೂ ಸಹ ಶುದ್ಧ ಭಕ್ತಿಯಿಂದ ಅವರಂತೆಯೇ ಆಗಲು ಸಾಧ್ಯ ಎನ್ನುವುದು ಇಲ್ಲಿ ಅಡಗಿರುವ ಸಂದೇಶ.

(ಸೂಚನೆ: ಈ ಮೂವರ ಹಿನ್ನಲೆ ಕಥೆಯ ವಿವರಣೆ ಈ ವಚನದ ವಿವರಣೆಯ ವ್ಯಾಪ್ತಿಗೆ ಮೀರಿದ್ದು. ಅದಕ್ಕಾಗಿ ಅದನ್ನು ಪರಿಗಣಿಸಲಿಲ್ಲ)

– ನಾಗೇಶ ಮೈಸೂರು
(Picture : Wikipedia)

(ಶಂಕರ ಅಜ್ಜಂಪುರರ Shankar Ajjampura ಕೋರಿಕೆಯ ಮೇರೆಗೆ ವಿವರಿಸಲೆತ್ನಿಸಿದ ವಚನ. ಅಸಂಪೂರ್ಣ / ಅಸಮರ್ಪಕ ವಿವರಣೆಯೆನಿಸಿದರೆ ಕ್ಷಮೆ ಇರಲಿ)

02120. ಸರ್ವಜ್ಞನ ವಚನಗಳು ೦೫. ಉತ್ತಮರು ಎಂಬುವರು


02120. ಸರ್ವಜ್ಞನ ವಚನಗಳು ೦೫. ಉತ್ತಮರು ಎಂಬುವರು
__________________________________________
(Yamunab Bsyರ ಕೋರಿಕೆಯನುಸಾರ ವಿವರಿಸುವ ಯತ್ನ)


ಉತ್ತಮರು ಎಂಬುವರು | ಸತ್ಯದಲಿ ನಡೆದಿಹರು |
ಉತ್ತಮರಧಮರೆನಬೇಡ, ಅವರೊಂದು |
ಮುತ್ತಿನಂಥವರು ಸರ್ವಜ್ಞ ||

ಉತ್ತಮರ ಮತ್ತು ಅಧಮರ ನಡುವಿನ ವ್ಯತ್ಯಾಸವನ್ನು ಹೇಳುವ ಹಲವಾರು ತ್ರಿಪದಿಗಳಲ್ಲಿ ಇದೂ ಒಂದು. ಯಾರನ್ನಾದರೂ ಉತ್ತಮರೆಂದು ಹೇಳಬೇಕಾದರೆ ಹಲವಾರು ಮಾನದಂಡಗಳನ್ನು ಬಳಸಬಹುದು. ಇಲ್ಲಿ ಉತ್ತಮರ ಅಂತದ್ದೇ ಒಂದು ಗುಣವನ್ನು ಬಳಸಿಕೊಂಡು ವ್ಯತ್ಯಾಸವನ್ನು ಹೇಳಲಾಗಿದೆ – ಅದು, ಸತ್ಯದ ಮಾರ್ಗದಲ್ಲಿ ನಡೆಯುವ ಮಾನದಂಡ.

ಈ ವಿವರಕ್ಕೆ ಬರುವ ಮೊದಲು ಉತ್ತಮರು ಎಂದರೇನು ಎಂದು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳೋಣ. ಸರಳವಾಗಿ ಹೇಳುವುದಾದರೆ ‘ಒಟ್ಟಾರೆ ಒಳ್ಳೆಯವರು’ ಎಂದು ಅರ್ಥೈಸಿಬಿಡಬಹುದಾದರೂ ಸ್ವಲ್ಪ ವಿಭಿನ್ನವಾಗಿ ಯೋಚಿಸೋಣ. ಉತ್ತಮ ಎನ್ನುವುದರರ್ಥ ಹೋಲಿಕೆಯಲ್ಲಿ ಹೆಚ್ಚು ಗುಣಮಟ್ಟದ್ದು ಎಂದು. ಹೀಗಾಗಿ ಉತ್ತಮರು ಎಂದಾಗ ಅತ್ಯುತ್ಕೃಷ್ಟರು, ಪರಿಪೂರ್ಣರು ಎಂದು ನೋಡದೆ ಪರಸ್ಪರ ಹೋಲಿಕೆಯಲ್ಲಿ ಉನ್ನತ ಸ್ತರದವರು ಎಂದು ನೋಡಬೇಕು. ಆಗ ಉತ್ತಮರಲ್ಲಿಯೇ ಹಲವು ಶ್ರೇಣಿಗಳನ್ನು ಊಹಿಸಲು ಸಾಧ್ಯವಾಗುತ್ತದೆ – ತರಗತಿಯ ವಿದ್ಯಾರ್ಥಿಗಳಿಗೆ ಕೊಡುವ ಅಂಕ ಶ್ರೇಣಿಯ ಹಾಗೆ. ಹೀಗಾಗಿ ಉತ್ತಮಿಕೆ ಪಕ್ವವಾಗುತ್ತ ಹೆಚ್ಚು ಉತ್ತಮವಾಗುತ್ತ ಹೋಗುವ ಸಾಧ್ಯತೆ ನಿರಂತರವಾಗುತ್ತದೆ. ಇದೇ ಜಾಡಿನಲ್ಲಿ ಅಧಮಿಕೆಯಲ್ಲೂ ವಿವಿಧ ಸ್ತರದ ಶ್ರೇಣಿಯನ್ನು ಊಹಿಸಿಕೊಳ್ಳಬಹುದು.

೧. ಉತ್ತಮರು ಎಂಬುವರು | ಸತ್ಯದಲಿ ನಡೆದಿಹರು |

ಉತ್ತಮರೆಂದೆನಿಸಿಕೊಂಡವರ ಒಂದು ಗುಣಧರ್ಮ – ಎಷ್ಟೇ ಕಷ್ಟವಾದರೂ ಸರಿ ಸತ್ಯದ ಮತ್ತು ನ್ಯಾಯದ ಹಾದಿಯಲ್ಲಿ ನಡೆಯುವುದು. ಆಗ ನಂಟು, ಕೆಳೆ, ಲಾಭ, ನಷ್ಟಗಳನ್ನು ನೋಡದೆ ಖಡಾಖಂಡಿತವಾಗಿ ನಡೆಯಬೇಕಾದ ಸಂಧರ್ಭಗಳು ಅನೇಕ ಬಾರಿ ಎದುರಾಗುತ್ತವೆ. ಉತ್ತಮರ ಒಂದು ಮುಖ್ಯ ಗುಣವೆಂದರೆ ಅದೇನೇ ಕಷ್ಟಬಂದರು ಬಿಡದೆ ಸತ್ಯ ಮಾರ್ಗದಲ್ಲಿ ನಡೆಯುವುದು. ಆ ಕಠೋರ ಪ್ರಜ್ಞಾಪೂರ್ವಕ ಪರಿಪಾಲನೆಯೇ ಅವರನ್ನು ನಾಯಕತ್ವದ ಮಟ್ಟಕ್ಕೆ ಏರಿಸಿಬಿಟ್ಟಿರುತ್ತದೆ. ಹೀಗಾಗಿ ಅವರು ನಡೆದುಕೊಳ್ಳಬೇಕಾದ ರೀತಿ ನೀತಿಯ ಬಗ್ಗೆಯೂ ಇತರರಲ್ಲಿ ಒಂದು ರೀತಿಯ ಪೂರ್ವಯೋಜಿತ ನಿರೀಕ್ಷೆ ಹುಟ್ಟಿಕೊಂಡಿರುತ್ತದೆ. ಅವರ ಒಳ್ಳೆಯತನದ ಕಾರಣದಿಂದಲೇ ಅವರ ಜನಪ್ರಿಯತೆಯು ಹೆಚ್ಚಿರುತ್ತದೆ.

೨. ಉತ್ತಮರಧಮರೆನಬೇಡ

ಆದರೆ ಹಾಗೆ ನಡೆಯುವುದೇನು ಸುಲಭವೇ ? ಪ್ರಚಲಿತವಿರುವ ಲೋಕವಾಣಿಯಂತೆ ‘ಖಂಡಿತವಾದಿ ಲೋಕವಿರೋಧಿ’ ಎಂಬ ನಾಣ್ಣುಡಿಯೇ ಇದೆ. ‘ಇದ್ದದ್ದು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೊದ್ದರು’ ಎನ್ನುವ ನಾಣ್ಣುಡಿ ಸತ್ಯವಂತರು ಎದುರಿಸಬೇಕಾದ ಮತ್ತೊಂದು ಬಗೆಯ ಸಂದಿಗ್ದವನ್ನು ತೋರಿಸುತ್ತದೆ. ಸತ್ಯವಂತರೆಂದಾಗ ಮುಲಾಜಿಲ್ಲದೆ ನಿಷ್ಟೂರವಾಗಿರಬೇಕಾದ ಸನ್ನಿವೇಶಗಳು ಅಸಂಖ್ಯಾತ. ಹೀಗಾಗಿ ಎಲ್ಲರು ಅವರ ಸ್ನೇಹಿತರೆಂದೇ ಹೇಳಲಾಗದು. ಮಿತ್ರರಂತೆ ಶತ್ರುಗಳು ಹುಟ್ಟಿಕೊಳ್ಳುತ್ತಾರೆ ಅನಿವಾರ್ಯವೆಂಬಂತೆ. ಇಂತಹವರು ತಮಗೆ ಬೇಕಾದ ರೀತಿಯ ವರ್ತನೆ, ತೀರ್ಮಾನ ಸಿಕ್ಕದಾದಾಗ ಅಂತಹ ಉತ್ತಮರ ಗುಣ, ನಡತೆ, ಸ್ವಭಾವವನ್ನು ಕುರಿತು ಸುಳ್ಳುಸುಳ್ಳೇ ಅಪಪ್ರಚಾರ ಮಾಡುತ್ತಾರೆ. ತಮ್ಮ ಮಾತನ್ನು ನಂಬಿಸಲೋಸುಗ ಉತ್ತಮರಿಗೆ ಅಧಮರೆಂದೇ ಹಣೆಪಟ್ಟಿ ಕಟ್ಟಲು ಹಿಂದೆಗೆಯುವುದಿಲ್ಲ. ಹಾಗೆ ಮಾಡುವುದು ತಪ್ಪು – ಉತ್ತಮರನ್ನು ಅಧಮರೆಂದು ತಿಳಿಯಬೇಡ, ಹಾಗೆಂದು ವಿನಾಕಾರಣ ಪ್ರಚಾರಿಸಬೇಡ ಎನ್ನುವ ನೀತಿಬೋಧೆ ಈ ಸಾಲಿನಲ್ಲಿದೆ.

೩. ಅವರೊಂದು | ಮುತ್ತಿನಂಥವರು ಸರ್ವಜ್ಞ ||

ಈ ಸಾಲಿನಲ್ಲಿ ಯಾಕೆ ಉತ್ತಮರನ್ನು ಅಧಮರೆನ್ನಬಾರದು? ಎನ್ನುವ ವಿವರಣೆಯಿದೆ. ಉತ್ತಮರೆಂದರೆ ಅವರೊಂದು ಮುತ್ತಿನ ಹಾಗೆ ಬೆಲೆಬಾಳುವವರು, ಮೌಲ್ಯವುಳ್ಳವರು. ಮುತ್ತೆಂದರೆ ನವರತ್ನಗಳಲ್ಲೊಂದಾದ ಕಾರಣ ಪ್ರತಿಯೊಬ್ಬರೂ ಅದರ ಮೌಲ್ಯವನ್ನರಿತು ಬೆಲೆ ಕೊಡುತ್ತಾರೆ. ಉತ್ತಮರು ಸಹ ಈ ನವರತ್ನದ ಮುತ್ತಿನ ಹಾಗೆ; ಆದ ಕಾರಣ ಅವರ ಕುರಿತು ಅಧಮರೆಂಬ ಸುಳ್ಳು ಪ್ರಚಾರ ಸಲ್ಲ ಎನ್ನುವುದು ಇಲ್ಲಿಯ ಇಂಗಿತ.

ಆದರೆ ಇಲ್ಲೊಂದು ವಿಶೇಷವಿದೆ. ನಾವು ಯಾರನ್ನಾದರೂ ಒಳ್ಳೆಯವರೆಂದು ಹೇಳಬೇಕಾದಾಗ ‘ ಮುತ್ತಿನಂತಹ ಮನುಷ್ಯ’ ಎನ್ನುತ್ತೇವೆ. ಯಾಕೆ ನಾವು ಮಿಕ್ಕ ಎಂಟು ರತ್ನಗಳನ್ನೂ ಪರಿಗಣಿಸಿ ‘ವಜ್ರದಂತಹ ಮನುಷ್ಯ’, ‘ಗೋಮೇಧಕದಂತಹ ಮನುಷ್ಯ’, ‘ಪುಷ್ಯರಾಗದಂತಹ ಮನುಷ್ಯ’ ಎಂದೆಲ್ಲಾ ಹೇಳುವುದಿಲ್ಲ ? ಯಾಕೆ ಮುತ್ತಿನಂತಹ ಮನುಷ್ಯ ಎಂದು ಮಾತ್ರ ಹೇಳುತ್ತೇವೆ ?

ಮಿಕ್ಕೆಲ್ಲ ರತ್ನಗಳು ಭೂಗರ್ಭದಲ್ಲೋ ಎಲ್ಲೋ ಅಡಗಿ ಕೂತಿದ್ದು , ಪರಿಷ್ಕರಿಸಬೇಕಾದ ಕಲ್ಲುಗಳ ರೂಪದಲ್ಲಿ ದೊರಕುತ್ತವೆ. ಅವುಗಳನ್ನು ಹುಡುಕಿ ತೆಗೆದು ಹೊಳಪು ಬರಿಸಲು ಮತ್ತಷ್ಟು ಕುಸುರಿ ಕೆಲಸ ಮಾಡಬೇಕು. ಆದರೆ ಮುತ್ತಿನ ವಿಷಯ ಹಾಗಲ್ಲ ! ಮೊದಲಿಗೆ ಅದು ಕಪ್ಪೆಚಿಪ್ಪಿನೊಳಗಾಗುವ ಜೈವಿಕ ಕ್ರಿಯೆಯ ಫಲವಾಗಿ ರೂಪುಗೊಳ್ಳುವ ನೈಸರ್ಗಿಕ ವಸ್ತು. ಜೊತೆಗೆ ಮುತ್ತು ರೂಪುಗೊಂಡ ಮೇಲೆ ಯಾವ ಹೊಳಪನ್ನಾಗಲಿ, ಕುಸುರಿಯನ್ನಾಗಲಿ ಮಾಡುವ ಅಗತ್ಯವಿಲ್ಲ. ರೂಪುಗೊಂಡ ಆಕಾರ, ಹೊಳಪು, ಗಾತ್ರವೇ ಅಂತಿಮ. ಉತ್ತಮರು ಕೂಡ ಒಂದು ರೀತಿ ಮುತ್ತಿನ ಹಾಗೆ ಸ್ವಯಂ ರೂಪುಗೊಂಡವರು. ಅವರ ಸಜ್ಜನಿಕೆಯಿಂದ ತಾವಾಗಿಯೇ ಹೊಳೆಯುವವರು. ಮುತ್ತಿನ ಗಾತ್ರದ ಹಾಗೆ ಉತ್ತಮಿಕೆಯ ಮಟ್ಟದಲ್ಲಿ ವೈವಿಧ್ಯವಿದ್ದರೂ ಪ್ರತಿಯೊಂದಕ್ಕೂ ಅದರದೇ ಬೆಲೆಯಿರುವಂತೆ ಉತಮ್ಮರು ತಮ್ಮದೇ ಆದ ವಿಶಿಷ್ಠ ಸ್ಥಾನಬೆಲೆ ಕಾಯ್ದುಕೊಂಡವರು. ಹೀಗಾಗಿ ಅವರನ್ನು ಮುತ್ತಿಗೆ ಹೋಲಿಸುವುದು ಅತ್ಯಂತ ಸಮಂಜಸ.

ಇಲ್ಲಿ ಇನ್ನೂ ಒಂದು ಅತಿಶಯವಿದೆ. ಕಪ್ಪೆ ಚಿಪ್ಪಿನ ಒಳಗೆ ಮುತ್ತಾಗುವುದು ಕೂಡ ಆ ಚಿಪ್ಪಿನ ಎರಡು ಕವಚದ ನಡುವೆ ಬೇಡದ ಹೊರಗಿನ ವಸ್ತು ಸೇರಿಕೊಂಡಾಗ. ಅದರಿಂದಾಗುವ ತೊಂದರೆಯನ್ನು ನಿವಾರಿಸಿಕೊಳ್ಳಲೆಂಬಂತೆ ಕಪ್ಪೆಚಿಪ್ಪು ಆ ಬಾಹ್ಯವಸ್ತುವಿನ ಸುತ್ತ ತಾನು ತಯಾರಿಸಿದ ರಾಸಾಯನಿಕವನ್ನು ಸ್ರವಿಸುತ್ತ ಅದನ್ನು ಸುತ್ತುವರೆಯುವುದಂತೆ. ಹೀಗೆ ಸುತ್ತಿನ ಮೇಲೆ ಸುತ್ತು ಹಾಕುತ್ತ ಹೋದಂತೆ ಆ ಮುತ್ತಿನ ಗಾತ್ರ ಹೆಚ್ಚುತ್ತಾ ಹೋಗುತ್ತದಂತೆ ಅದರ ಹೊಳಪಿನ ಜೊತೆಜೊತೆಗೆ. ಉತ್ತಮರು ಕೂಡ ತಮ್ಮ ಮೇಲೆಸೆದ ದೂಷಣೆಗಳನ್ನು, ತಮ್ಮನ್ನು ಅಧಮರೆಂದು ಆಡಿಕೊಳ್ಳುವ ಜನರ ದೌರ್ಬಲ್ಯಗಳನ್ನು ತಮ್ಮ ಸತ್ಯವಂತಿಕೆ, ನ್ಯಾಯ, ನೀತಿ, ನಿಯತ್ತುಗಳೆಂಬ ನಿರಂತರ ಸ್ರಾವದಿಂದ ಹೊಳಪಾಗಿಸುತ್ತ ಋಣಾತ್ಮಕವನ್ನೆಲ್ಲ ಧನಾತ್ಮಕವಾಗಿಸುತ್ತ ಮತ್ತಷ್ಟೂ ಉತ್ತಮರಾಗುತ್ತಾ ನಡೆಯುತ್ತಾರೆ. ಹೀಗಾಗಿ ಉತ್ತಮರ ಗುಣ ನಡತೆಯು ರೂಪುಗೊಳ್ಳುವ ಬಗ್ಗೆಯೂ ಮುತ್ತಿನ ರೂಪುಗೊಳ್ಳುವಿಕೆಯ ಬಗೆಯನ್ನೇ ಹೋಲುತ್ತದೆ. ಆ ದೃಷ್ಟಿಯಿಂದಲೂ ಮುತ್ತಿನ ಹೋಲಿಕೆ ಸರಿಸೂಕ್ತವೆನಿಸುತ್ತದೆ. (ಸೂಚನೆ: ಮುತ್ತಿನ ಬಗ್ಗೆ ಹೆಚ್ಚು ಮಾಹಿತಿಗೆ ವಿಕಿಪಿಡಿಯಾ ನೋಡಿ)

ಹೀಗೆ ಉತ್ತಮರೆಲ್ಲ ಮುತ್ತಿನಂತಹವರು ಎನ್ನುವುದರ ಹಿಂದೆ ಅಗಾಧ ಅರ್ಥವ್ಯಾಪ್ತಿಯಿರುವುದನ್ನು ನೋಡಬಹುದು.

– ನಾಗೇಶ ಮೈಸೂರು
೧೮.೦೭.೨೦೧೭
(ಚಿತ್ರಕೃಪೆ: ವಿಕಿಪಿಡಿಯಾ)

02116. ಸರ್ವಜ್ಞನ ವಚನಗಳು-೦೦೦೪ (ಎಲ್ಲ ಬಲ್ಲವರಿಲ್ಲ)


02116. ಸರ್ವಜ್ಞನ ವಚನಗಳು-೦೦೦೪ (ಎಲ್ಲ ಬಲ್ಲವರಿಲ್ಲ)
_________________________________________________


ಎಲ್ಲ ಬಲ್ಲವರಿಲ್ಲ ಬಲ್ಲವರು ಬಹಳಿಲ್ಲ|
ಬಲ್ಲಿದರು ಇದ್ದು ಬಲವಿಲ್ಲ, ಸಾಹಿತ್ಯ
ಎಲ್ಲರಿಗೆ ಇಲ್ಲ-ಸರ್ವಜ್ಞ||

ಇದೊಂದು ಸರಳ ಪದಗಳ ತ್ರಿಪದಿ. ಪದಗಳ ಅರ್ಥ ನೇರ ಮತ್ತು ಸರಳವಿರುವುದರಿಂದ ಅದರ ಸಾರಾರ್ಥ ಎಲ್ಲರ ಗ್ರಹಿಕೆಗೆ ತಟ್ಟನೆ ನಿಲುಕುತ್ತದೆ. ಒಂದೆರಡು ಪದಗಳ ಅರ್ಥ ತಿಳಿದರೆ ಸಾಕು ಮಿಕ್ಕೆಲ್ಲವೂ ಆಡುನುಡಿಗಳೇ.

ಬಲ್ಲವರು = ಅರಿತವರು, ತಿಳಿದವರು
ಬಲ್ಲಿದರು = ವಿದ್ವಾಂಸರು, ಪಂಡಿತರು, ಬಲಶಾಲಿಗಳು, ಸಾಮರ್ಥ್ಯ ಉಳ್ಳವರು, ಶ್ರೀಮಂತರು (ಬಡವ-ಬಲ್ಲಿದ ಪ್ರಯೋಗದಲ್ಲಿ)

ಎಲ್ಲ ಬಲ್ಲವರಿಲ್ಲ

ನಾವು ಬದುಕಿರುವ ಈ ಜಗದ ವೈಶಾಲ್ಯ, ಸಂಕೀರ್ಣತೆ, ಅಗಾಧತೆ ಹೇಗಿದೆಯೆಂದರೆ ಯಾರೊಬ್ಬರೂ ಎಲ್ಲವನು ಅರಿಯುವುದು ಸಾಧ್ಯವೇ ಇಲ್ಲ. ಯಾವುದೇ ಕ್ಷೇತ್ರವಾಗಲಿ, ಆರಿಸಿಕೊಂಡ ವಿಷಯದಲ್ಲಿ ಆಳಕ್ಕಿಳಿದು ಹೆಚ್ಚು ಅರಿತವರಾಗಬಹುದೇ ಹೊರತು ಎಲ್ಲಾ ವಿಷಯದಲ್ಲಿ ಒಟ್ಟಿಗೆ ಪರಿಣಿತರಾಗುವುದು ಅಸಾಧ್ಯವೇ ಸರಿ (ಉದಾಹರಣೆಗೆ ವೈದ್ಯಕ್ಷೇತ್ರದಲ್ಲಿರುವ ವಿವಿಧ ಪರಿಣಿತಿಯ ತಜ್ಞ ವೈದ್ಯರ ಹಾಗೆ). ಹೆಚ್ಚೆಚ್ಚು ಬಲ್ಲವರಿರಬಹುದೇ ಹೊರತು ಎಲ್ಲವನ್ನು ಬಲ್ಲವರಿರುವುದು ಅಸಂಭವ. ಇಲ್ಲಿ ಸರ್ವಜ್ಞ ಅದನ್ನೇ ಪೀಠಿಕೆಯನ್ನಾಗಿ ಬಳಸಿಕೊಂಡಿದ್ದಾನೆ.

ಬಲ್ಲವರು ಬಹಳಿಲ್ಲ|

ಎಲ್ಲಾ ಬಲ್ಲವರಿಲ್ಲ ಎನ್ನುವುದರ ನಡುವಲ್ಲೇ ಅಲ್ಪಸ್ವಲ್ಪ ಭಾಗಾಂಶ ಬಲ್ಲವರು ಇರುವುದಂತೂ ನಿಸ್ಸಂದೇಹ. ನಮ್ಮ ಸುತ್ತಲೇ ಕಣ್ಣಾಡಿಸಿದರೂ ಸಾಕು ಅವೆಲ್ಲದರ ಒಂದೊಂದು ತುಣುಕು ನೋಟ ನಮ್ಮ ಕಣ್ಣಿಗೆ ಬೀಳುತ್ತದೆ. ವಕೀಲರೋ, ವೈದ್ಯರೋ, ಉಪಾಧ್ಯಾಯರೊ, ನೌಕರರೋ – ಎಲ್ಲರು ಒಂದೊಂದು ಬಗೆಯಲ್ಲಿ ಪರಿಣಿತಿ, ಪಾಂಡಿತ್ಯವನ್ನು ಸಂಪಾದಿಸಿದವರೇ. ಅವರಲ್ಲೇ ಒಬ್ಬೊಬ್ಬರು ಒಂದೊಂದು ವಸ್ತು ವೈವಿಧ್ಯದಲ್ಲಿ ಪರಿಣಿತರಾಗಿ ಮತ್ತಷ್ಟು ಪರಿಣಿತಿಯ ಪ್ರಭೇಧಗಳಿಗೆ ಕಾರಣಕರ್ತರಾಗುತ್ತಾರೆ – ಉಪಾಧ್ಯಾಯರಲ್ಲೇ ವಿಜ್ಞಾನಕ್ಕೆ, ಗಣಿತಕ್ಕೆ, ಭಾಷಾವಿಷಯಕ್ಕೆ ಬೇರೆ ಬೇರೆ ಪರಿಣಿತರಿರುವ ಹಾಗೆ. ಹಾಗಾದರೆ ಇವತ್ತೆಲ್ಲರನ್ನು ಅವರವರ ಕ್ಷೇತ್ರದಲ್ಲಿ ಬಲ್ಲವರೆಂದು ಹೇಳಿಬಿಡಬಹುದೇ ?

ಆ ಪ್ರಶ್ನೆಗೆ ಉತ್ತರ ‘ಇಲ್ಲಾ’ ಎಂಬುದೇ. ಏಕೆಂದರೆ ಅಷ್ಟೊಂದು ಪರಿಣಿತರಲ್ಲಿಯೂ ಯಾರೊಬ್ಬರೂ ಸಹ ತಂತಮ್ಮ ವಿಷಯದಲ್ಲಿ ಸಂಪೂರ್ಣ ಪ್ರಭುತ್ವ ಸಾಧಿಸಿದ್ದಾರೆಂದು ಹೇಳಿಕೊಳ್ಳಲಾಗದು. ತಮಗೆ ತಿಳಿದ ಸೀಮಿತ ಕ್ಷೇತ್ರದಲ್ಲಿಯೇ ಆಳದಾಳಕ್ಕಿಳಿದು ಅದರ ಎಡಬಲಮೂಲಗಳನ್ನೆಲ್ಲ ಶೋಧಿಸಿ ಅರಿತು ‘ಬಹುತೇಕ ಪರಿಪೂರ್ಣ’ ಪಾಂಡಿತ್ಯ ಗಳಿಸಿ ವಿದ್ವಾಂಸರೆನಿಸಿಕೊಂಡವರ ಸಂಖ್ಯೆ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಅಥವಾ ಬೆರಳೆಣಿಕೆಯಷ್ಟು ಮಾತ್ರವೇ. ಅಂತಹ ನಿಜಕ್ಕೂ ಬಲ್ಲವರು ನಮ್ಮಗಳ ಮಧ್ಯೆ ಇರುವುದು ಕೂಡ ಕಡಿಮೆಯೇ. ಜ್ಞಾನಿಗಳಾಗಿ, ಯೋಗಿಗಳಾಗಿ ತಮ್ಮದೇ ಏಕಾಂತ ಜಗದಲ್ಲಿ ಮೌನವಾಗಿದ್ದುಬಿಡುವವರೇ ಹೆಚ್ಚು. ಅದನ್ನೇ ಸರ್ವಜ್ಞ ಇಲ್ಲಿ ‘ಬಲ್ಲವರು ಬಹಳಿಲ್ಲ’ ಎಂದು ಹೇಳಿರುವುದು. ತಾವು ಬಲ್ಲವರು ಎಂದುಕೊಂಡವರು ಅನೇಕರಿರಬಹುದು, ಆದರೆ ನಿಜವಾದ ಜ್ಞಾನಿಗಳು ತಮ್ಮನ್ನು ಹಾಗೆಂದು ತೋರಿಸಿಕೊಳ್ಳುವುದೇ ಇಲ್ಲ. ಇನ್ನು ಡೋಂಗಿಗಳ ವಿಷಯಕ್ಕೆ ಬಂದರೆ ಅದೇ ಮತ್ತೊಂದು ಮೋಸದ ಜಗವಾದ ಕಾರಣ ಆ ಚರ್ಚೆ ಇಲ್ಲಿ ಬೇಡ.

ಅಲ್ಲಿಗೆ ಎಲ್ಲ ಬಲ್ಲವರಿಲ್ಲ ಬಲ್ಲವರು ಬಹಳಿಲ್ಲ – ಎಂದಾಗ ಸಾರದಲ್ಲಿ ಸಕಲವನ್ನರಿತವರಾರು ಇಲ್ಲ, ಅಷ್ಟಿಷ್ಟು ಅರಿತವರಿದ್ದರು ಅಂತಹವರ ಸಂಖ್ಯೆಯು ಕಡಿಮೆಯೇ ಎಂದಾಗುತ್ತದೆ.

ಬಲ್ಲಿದರು ಇದ್ದು ಬಲವಿಲ್ಲ, ಸಾಹಿತ್ಯ

ಬಲ್ಲಿದರು ಎಂದಾಗ ಅಷ್ಟಿಷ್ಟಾದರೂ ಬಲ್ಲವರು ಅಥವಾ ಅರಿಯುವ ಸಾಮರ್ಥ್ಯ ಉಳ್ಳವರು ಎಂದು ಹೇಳಬಹುದು. ಹಿಂದಿನ ಸಾಲಲ್ಲಿ ಬಲ್ಲವರೂ ಕಡಿಮೆಯೇ ಎಂದು ಹೇಳಿದ್ದಾಯ್ತು. ಅದರರ್ಥ ಮಿಕ್ಕವರಿಗೆ ಯಾರಿಗೂ ಆ ಸಾಮರ್ಥ್ಯ ಇಲ್ಲವೆಂದಲ್ಲ. ಅವರಲ್ಲಿ ಕೆಲವರಿಗಾದರೂ ಆ ಸಾಧ್ಯತೆ ಇರುತ್ತದೆಯಾದರು ಎಷ್ಟೋ ಜನರಿಗೆ ಆ ಕುರಿತಾದ ಆಸಕ್ತಿ ಇರುವುದಿಲ್ಲ. ಹೀಗಾಗಿ ಅಷ್ಟಿಷ್ಟು ತಿಳಿದವರು ಮತ್ತು ತಿಳಿಯಬಲ್ಲ ಶಕ್ತಿ ಇರುವವರು ಇದ್ದರು ಏನು ಸುಖವಿಲ್ಲ. ಅವರು ಅದನ್ನು ಬಳಸಿಕೊಂಡು ತಾವರಿತಿದ್ದನ್ನ ಆ ಸಾಮರ್ಥ್ಯವಿರದ ಮಿಕ್ಕವರಿಗೆ ಹಂಚುವ ಕೆಲಸ ಮಾಡಬಹುದಿತ್ತು. ಅವರ ಸಾಮರ್ಥ್ಯ ಅಸಮರ್ಥರಿಗೂ ಬಲ ತುಂಬುವ ಸಲಕರಣೆಯಾಗಬಹುದಿತ್ತು. ಆದರೆ ಒಂದೋ ಅವರು ತಮ್ಮ ಬಲ ಬಳಸಿಕೊಳ್ಳುತ್ತಿಲ್ಲ ಅಥವಾ ಅದನ್ನು ತಮ್ಮ ಸ್ವಾರ್ಥಕ್ಕೆ ಮಾತ್ರ ಬಳಸಿಕೊಳ್ಳುವ ವ್ಯಾವಹಾರಿಕ ಮನೋಭಾವದವರಾಗಿದ್ದಾರೆ. ಹೀಗಾಗಿ ಅಂತಹವರಿದ್ದೂ ಮಿಕ್ಕ ಪ್ರಪಂಚಕ್ಕೆ ಯಾವ ರೀತಿಯಲ್ಲೂ ಬಲ ಸಂವರ್ಧನೆಯಾಗುತ್ತಿಲ್ಲ – ಅದರಲ್ಲೂ ಸಾಹಿತ್ಯದ ವಿಷಯದಲ್ಲಿ. ಅಂದಹಾಗೆ ಈ ತ್ರಿಪದಿ, ಸಾಹಿತ್ಯದ ಮಾತ್ರವೇ ಕುರಿತು ಬರೆದದ್ದೇ ? ಎನ್ನವುದನ್ನು ಅರಿಯಲು ಈ ‘ಸಾಹಿತ್ಯ’ ಪದವನ್ನೇ ಹೆಚ್ಚು ಒರೆಗಚ್ಚಿ ನೋಡಬೇಕು.

ಇಲ್ಲಿ ಸಾಹಿತ್ಯ ಎನ್ನುವಾಗ ಕೊಂಚ ಆಳವಾಗಿ ನೋಡಬೇಕಾಗುತ್ತದೆ – ಸಮಕಾಲೀನ ಮಾತ್ರವಲ್ಲದೆ ಪ್ರಾಚೀನ ದೃಷ್ಟಿಕೋನದಲ್ಲಿಯೂ. ಸಾಹಿತ್ಯವೆನ್ನುವುದು ಆ ಕಾಲದ ಬದುಕಿನ ಆಗುಹೋಗುಗಳ ಪ್ರತಿಬಿಂಬ. ಎಲ್ಲವನ್ನು ಎಲ್ಲರು ಅನುಭವಿಸಿಯೇ ಕಲಿಯಲಾಗದು – ಆದರೆ ಸಾಹಿತ್ಯದ ಮೂಲಕ ಅನುಭಾವಿಸಿಕೊಂಡು ಕಲಿಕೆಯನ್ನು ಸಾಧಿಸಬಹುದು. ಸಾಹಿತ್ಯದ ಮತ್ತೊಂದು ಮುಖ್ಯ ಆಯಾಮ – ಜ್ಞಾನ. ಯಾರಾದರೊಬ್ಬರು ಯಾವುದೇ ಕ್ಷೇತ್ರದಲ್ಲಿಯಾದರು ಸರಿ – ತಾವು ಸಂಪಾದಿಸಿದ ಜ್ಞಾನವನ್ನು ಸಾಹಿತ್ಯದ ರೂಪದಲ್ಲಿ ಹಿಡಿದಿಟ್ಟಿದ್ದರೆ ಅದನ್ನು ತಲತಲಾಂತರಗಳವರೆಗೆ ವರ್ಗಾಯಿಸಿಕೊಂಡು ಹೋಗಬಲ್ಲ ಸಾಮರ್ಥ್ಯ ಸಾಹಿತ್ಯಕ್ಕಿದೆ. ಆಗ ಪ್ರತಿ ಪೀಳಿಗೆ, ಪ್ರತಿ ಸಂತತಿಯು ಮತ್ತೆ ಮತ್ತೆ ಶೋಧಿಸಿದ್ದನ್ನೇ ಮರುಶೋಧಿಸಿ ಹೊಸತಾಗಿ ಕಲಿತು ಬಳಸುವ ಪ್ರಮೇಯ ಬರುವುದಿಲ್ಲ (ಉದಾಹರಣೆಗೆ ಅನ್ನ ಮಾಡುವುದು ಹೇಗೆಂದು ಜಗತ್ತು ಪ್ರತಿಬಾರಿಯೂ ಸಂಶೋಧಿಸುತ್ತಾ ಕೂತಿಲ್ಲ . ಒಮ್ಮೆ ಕಲಿತದ್ದು ವರ್ಗಾವಣೆಯಾಗುತ್ತಿದೆ ನಿರಂತರವಾಗಿ). ಆ ಸಾಹಿತ್ಯವನ್ನು ಓದಿ ಅರ್ಥೈಸಿಕೊಂಡು ಬಳಸಬಲ್ಲ ಸಾಮರ್ಥ್ಯವಷ್ಟೇ ಇದ್ದರೆ ಸಾಕು. ಹೀಗೆ ಸಾಹಿತ್ಯವೆನ್ನುವ ಪದ ಇಲ್ಲಿ ವಿಶಾಲ ವ್ಯಾಪ್ತಿಯಲ್ಲಿ ಬಳಕೆಯಾಗಿದೆ ಎನ್ನುವುದು ಮೊದಲ ಮುಖ್ಯ ಅಂಶ.

ನಮ್ಮ ಸಮಕಾಲೀನ ಜಗದಲ್ಲಿಯೂ ಸಾಹಿತ್ಯವಿದೆ, ಹಿಂದೆಯೂ ಇತ್ತು, ಮುಂದೆಯೂ ಇರುತ್ತದೆ. ಈಗಲೂ ಇರುವ ಎಷ್ಟೋ ಸಾಹಿತ್ಯದಲ್ಲಿ ಎಲ್ಲವು ಎಲ್ಲರಿಗು ಅರ್ಥವಾಗುವುದಿಲ್ಲ. ಎಲ್ಲವನ್ನು ಬಲ್ಲ ಬಲ್ಲಿದರು ಇಲ್ಲಿಯೂ ಇಲ್ಲವೆನ್ನುವುದು ನಿಜವೇ. ಹೀಗಾಗಿಯೇ ಸಾಹಿತ್ಯ ತನ್ನದೇ ಆದ ವಿಭಿನ್ನ ಮತ್ತು ಸಮಾನಾಂತರ ಹಳಿಗಳಲ್ಲಿ ಅಸ್ತಿತ್ವದಲ್ಲಿರುವುದು. ಇಲ್ಲಿ ಮಕ್ಕಳ ಸಾಹಿತ್ಯದ್ದೊಂದು ಹಳಿಯಾದರೆ, ಜನಸಾಮಾನ್ಯರದ್ದು ಮತ್ತೊಂದು; ಬುದ್ಧಿಜೀವಿಗಳದೇ ಇನ್ನೊಂದು, ವಸ್ತು ನಿರ್ದಿಷ್ಠ ವ್ಯಾಸಂಗಕಾರಣ ಹಳಿ ಮಗದೊಂದು. ಹೆಚ್ಚು ಕಠಿಣ ಸ್ತರದ ಹಳಿಯಾದಷ್ಟು ಬಲ್ಲವರು ಕಡಿಮೆಯಾಗುತ್ತಾರೆ, ಮತ್ತದನ್ನು ಅರಿತು ಹಂಚುವವರು ಇನ್ನೂ ಕಡಿಮೆಯಾಗಿರುತ್ತಾರೆ. ಹೀಗಾಗಿ ಎಷ್ಟೋಬಾರಿ ಪ್ರಶ್ನೆಗೆ ಉತ್ತರ ಅಸ್ತಿತ್ವದಲ್ಲಿದ್ದರೂ ನಮ್ಮರಿವಿನಲ್ಲಿರುವುದಿಲ್ಲ ಅಥವಾ ನಮ್ಮೆಟುಕಿನ ಗುಟುಕಿಗೆ ನಿಲುಕುವುದಿಲ್ಲ. ಈ ಪ್ರಕ್ರಿಯೆಯನ್ನು ಈಗಲೂ ನೋಡಬಹುದು, ಅನುಭವಿಸಬಹುದು.

ಇನ್ನು ತೀರಾ ಪುರಾತನ ಕಾಲಕ್ಕೆ ಅಡಿಯಿಟ್ಟರೆ ತಟ್ಟನೆ ಮನಸಿಗೆ ಬರುವ ಸಾಹಿತ್ಯ ವೇದಶಾಸ್ತ್ರಗಳಂತಹ ಆಧ್ಯಾತ್ಮಿಕ ಸ್ತರದ್ದು. ಇಲ್ಲಂತೂ ನಮಗೆ ಗೊತ್ತಿಲ್ಲದ ಅದೆಷ್ಟೋ ಸತ್ಯ, ಸತ್ವಗಳು ಅಪಾರ ಜ್ಞಾನದ ರಾಶಿಯಾಗಿ ಹರಡಿಕೊಂಡಿದೆಯೆಂಬ ನಂಬಿಕೆ ಬಲವಾಗಿದೆ. ಆದರೆ ವಿಪರ್ಯಾಸವೆಂದರೆ ಇದನ್ನೆಲ್ಲಾ ಅರಿತ , ಖಚಿತವಾಗಿ ಮತ್ತು ಸೂಕ್ತವಾಗಿ ವಿಮರ್ಶಿಸಿ ಹೇಳಬಲ್ಲ ಬಲ್ಲಿದರದೆ ಕೊರತೆ. ಸಾಲದ್ದಕ್ಕೆ ಬಳಸಿರುವ ಭಾಷೆ ಎಲ್ಲರು ತಿಳಿದ ಆಡುಭಾಷೆಯಲ್ಲ. ಹೀಗಾಗಿ ಆ ಸಾಹಿತ್ಯ ಒಂದು ರೀತಿ ಅಸ್ತಿತ್ವದಲ್ಲಿದ್ದೂ, ಅದರ ಬಲವನ್ನು ಸದುಪಯೋಗಪಡಿಸಿಕೊಳ್ಳಲಾಗದ ಅಸಹಾಯಕತೆ ನಮ್ಮದು. ಅದರ ಸಾಮರ್ಥ್ಯವನ್ನು ಸಕಲರಿಗೂ ತಲುಪುವಂತೆ ಹಂಚಲಾಗದ ವಿಚಿತ್ರ – ಇದ್ದೂ ಇಲ್ಲದ ಪರಿಸ್ಥಿತಿ. ಇದ್ದುದ್ದೆಲ್ಲ ಕೆಲವರಿಗೆ ಮಾತ್ರ ಅನ್ನುವ ವಿಚಿತ್ರ ವಾಸ್ತವ.

ಇನ್ನು ಸರ್ವಜ್ಞನ ಕಾಲದಲ್ಲಿಯೂ ಇದೇನು ಭಿನ್ನವಾಗಿರಲು ಸಾಧ್ಯವಿಲ್ಲ. ಆಗಲೂ ಸಾಹಿತ್ಯದ ಕುರಿತಾದ ಇದೇ ದ್ವಂದ್ವ ಸಮಾಜವನ್ನು ಕಾಡಿರಬೇಕು. ಅಂತೆಯೇ ಪ್ರಾಚೀನವನ್ನು ನೋಡಿದಾಗ ಮುಂದೆಯೂ ಹೀಗೆ ಇರಬಹುದೆಂದು ಊಹಿಸುವುದು ಸಹ ಕಷ್ಟವೇನಲ್ಲ. ಅದರ ಆಧಾರದ ಮೇಲೆ ಸಾಹಿತ್ಯವನ್ನು ಸಾರ್ವಕಾಲಿಕವೆನ್ನುವ ಈ ವಿಶಾಲಾರ್ಥದಲ್ಲಿ ಸರ್ವಜ್ಞನು ಬಳಸಿದ್ದಾನೆಂದು ನನ್ನ ಅನಿಸಿಕೆ. ಹೀಗಾಗಿ ಈ ವಚನದಲ್ಲಿ ಸಾಹಿತ್ಯವನ್ನು ಬರಿಯ ಬರವಣಿಗೆಯ ಜ್ಞಾನ ಎಂದು ಮಾತ್ರ ಗಣಿಸದೆ ಅದರ ಪ್ರಾಯೋಗಿಕ ಬಳಕೆ – ಉಪಯೋಗದ ಸಾರ್ವತ್ರಿಕ ಸ್ವರೂಪವವನು ಸಮೀಕರಿಸಿ ಅರ್ಥೈಸಿಕೊಳ್ಳಬೇಕು.

…, ಸಾಹಿತ್ಯ ಎಲ್ಲರಿಗೆ ಇಲ್ಲ-ಸರ್ವಜ್ಞ

ಹಿಂದಿನ ವಿವರಣೆಯನ್ನೆಲ್ಲಾ ಕ್ರೋಢೀಕರಿಸಿಕೊಂಡರೆ ಈ ಸಾಲು ತಾನಾಗಿಯೇ ಅರ್ಥವಾಗುತ್ತದೆ. ಅಂದು ಇಂದು ಮುಂದು – ಈ ಎಲ್ಲಾ ಕಾಲದಲ್ಲಿಯೂ ಅಸ್ತಿತ್ವದಲ್ಲಿರುವ ಸಾಹಿತ್ಯ ಎಲ್ಲರಿಗು ಸುಲಭದಲ್ಲಿ, ಸರಳದಲ್ಲಿ ಸಿಕ್ಕುವ ರೀತಿಯಲ್ಲಿ ಇಲ್ಲ ಅಥವಾ ವಿತರಣೆಯಾಗುತ್ತಿಲ್ಲ ಎನ್ನುವ ಇಂಗಿತವನ್ನು ಇಲ್ಲಿ ವ್ಯಕ್ತಪಡಿಸುತ್ತಿದ್ದಾನೆ ಸರ್ವಜ್ಞ. ಆ ಮಾತು ಶಾಸ್ತ್ರೋಕ್ತ ವೇದ ಪುರಾಣ ಗ್ರಂಥಗಳಿಂದ ಹಿಡಿದು ಸ್ವಯಂ ಸರ್ವಜ್ಞನ ವಚನಗಳವರೆವಿಗೆ ಎಲ್ಲೆಡೆಯೂ (ಎಲ್ಲ ತರಹದ ಸಾಹಿತ್ಯದಲ್ಲಿಯೂ) ಅನ್ವಯವಾಗುವ ಸಾರ್ವತ್ರಿಕ ಸತ್ಯ.

ಎಲ್ಲ ಬಲವರಿದ್ದು, ಹಾಗೆ ನಿಜವಾಗಿಯೂ ಬಲ್ಲವರು ಹಲವಾರು ಮಂದಿಯಿದ್ದು ಅಂತಹ ಬಲ್ಲಿದರು ತಮ್ಮ ಅರಿವಿನ ಮೂಲಕ ಗಳಿಸಿದ್ದನ್ನು ಸರಳವಾಗಿ ಹಂಚುತ್ತಾ ಮಿಕ್ಕ ಜಗತ್ತನ್ನು ಬಲಪಡಿಸಹೊರಟರೆ ಆಗ ಸಾಹಿತ್ಯವೆನ್ನುವುದು ಎಲ್ಲರನ್ನು ತಲುಪುವ ಸರಕಾಗುತ್ತದೆ. ಅದರ ನೀತಿ, ಪಾಠ, ಕಲಿಕೆಗಳು ಎಲ್ಲರೂ ಅಳವಡಿಸಿಕೊಳಬಲ್ಲ, ಬಳಸಿಕೊಳಬಲ್ಲ ಸಂಗತಿಗಳಾಗುತ್ತವೆ. ಆಗ ಅದರ ನಿಜ ಪ್ರಯೋಜನ ಎಲ್ಲರಿಗೂ ದೊರಕಿದಂತಾಗುತ್ತದೆ ಎನ್ನುವ ಆಶಯ ಈ ವಚನದ್ದು. ರಾಮಾಯಣ, ಮಹಾಭಾರತದಂತಹ ಸಾಹಿತ್ಯಗಳು ಅದರ ಮೂಲ ಭಾಷೆ ಮತ್ತು ಸಂಕೀರ್ಣತೆಯ ಹೊರತಾಗಿಯೂ ಜನಮಾನಸದಲ್ಲಿ ಹರಡಿಕೊಂಡಿರುವುದು ‘ಇದು ಸಾಧ್ಯ’ ಎನ್ನುವುದಕ್ಕೆ ಉದಾಹರಣೆಯಾದರೆ, ನಾವರಿಯದ ಅದೆಷ್ಟೋ ಸಾಹಿತ್ಯಗಳು ಅಸ್ತಿತ್ವದಲ್ಲಿದ್ದೂ ನಿಲುಕಿಗೆಟುಕದು ಎನ್ನುವುದು ಅದರ ಕಷ್ಟಸಾಧ್ಯತೆಯ ಉದಾಹರಣೆ.

ಪರಂಪರಾನುಗತವಾಗಿ ಬಂದ ಜ್ಞಾನ, ಪ್ರಗತಿ, ಫಲಶ್ರುತಿಗಳು ನಿರಂತರವಾಗಿ ಹರಿವ ನದಿಯ ನೀರಿನಂತೆ ಸತತವಾಗಿ ಎಲ್ಲಾ ಪೀಳಿಗೆಗೂ, ಸಂತತಿಗೂ ನೈಸರ್ಗಿಕವಾಗಿ ಹಂಚಿಕೆಯಾಗುತ್ತಿರಬೇಕೆನ್ನುವ ಮೂಲ ಆಶಯದ ಜೊತೆಗೆ ಅಂತಹ ಅದ್ಭುತ ಜ್ಞಾನ ಸಂಪತ್ತು ನಮ್ಮಲಿದೆ ಆದರೆ ಅದರ ನ್ಯಾಯೋಚಿತ ಸದ್ಬಳಕೆಯಾಗುತ್ತಿಲ್ಲ ಎನ್ನುವ ಇಂಗಿತವನ್ನೂ ಈ ವಚನ ಪರೋಕ್ಷವಾಗಿ ತೋರಿಸಿಕೊಡುತ್ತಿದೆ.

– ನಾಗೇಶ ಮೈಸೂರು
೧೬.೦೭.೨೦೧೭

(Picture Source : Wikipedia)

02111. ಸರ್ವಜ್ಞನ ವಚನಗಳು-೦೦೦೩


02111. ಸರ್ವಜ್ಞನ ವಚನಗಳು-೦೦೦೩
______________________________


ಊರಿಂಗೆ ದಾರಿಯನು | ಆರು ತೋರಿದಡೇನು |
ಸಾರಾಯದ ನಿಜವ ತೋರುವ , ಗುರುವು ತಾ |
ನಾರಾದಡೇನು ಸರ್ವಜ್ಞ ||

ಈ ವಚನದಲ್ಲಿಯೂ ಹೆಚ್ಚು ಕಡಿಮೆ ಎಲ್ಲಾ ಪದಗಳು ನೇರ ಅರ್ಥವನ್ನೇ ಸೂಚಿಸುತ್ತಿವೆ – ‘ಸಾರಾಯ’ ಪದದ ಹೊರತಾಗಿ. ಮೊದಲು ಈ ಪದವನ್ನು ನೋಡಿ ನಂತರ ಮಿಕ್ಕದ್ದನ್ನು ಗಮನಿಸೋಣ.

ಸಾರಾಯ – ಎನ್ನುವ ಪದಕ್ಕೆ ಹಲವಾರು ಅರ್ಥಗಳಿವೆ. ಬಹುಶಃ ಸಾರಾಯವೆನ್ನುವ ಹೆಸರಿನಲ್ಲಿ ಪ್ರಚಲಿತವಿರುವ ಹೆಂಡ, ಮದ್ಯ ಆಡುಭಾಷೆಯ ಪರಿಚಯವಿರುವವರಿಗೆಲ್ಲ ಗೊತ್ತಿರುವಂತದ್ದೇ. ಆದರೆ ಅದರ ಮಿಕ್ಕ ಅರ್ಥಗಳು ಅಷ್ಟು ಸಾಮಾನ್ಯವಾಗಿ ಪ್ರಚಾರದಲಿಲ್ಲ. ಆ ಮಿಕ್ಕ ಅರ್ಥಗಳು ಇಂತಿವೆ: “ತಿರುಳು, ಸತ್ವ ; ಜ್ಞಾನ, ಅನುಭಾವ; ನಿಜತತ್ವ; ನಿಜತತ್ವವನ್ನು ಅರಿತವನು”. ಈ ವಚನದಲ್ಲಿ ಈ ಮಿಕ್ಕ ಅರ್ಥಗಳೇ ಸೂಕ್ತವಾಗಿ ಹೊಂದಿಕೆಯಾಗುತ್ತವೆ. ಮೊದಲ ಅರ್ಥವಾದ ಮದ್ಯದ ಮೂಲಕವೂ ಕೊಂಚ ಪರೋಕ್ಷ ಅರ್ಥವನ್ನು ವಿವರಿಸಬಹುದಾದರೂ ಅದು ಕೇವಲ ಅರ್ಥ ಪ್ರೇರಿತ ಜಿಜ್ಞಾಸೆಯಾಗಬಹುದೇ ಹೊರತು, ಈ ವಚನದ ನಿಜವಾದ ಇಂಗಿತವೋ ಅಲ್ಲವೋ ಎಂದು ಖಚಿತವಾಗಿ ಹೇಳಲು ಬರುವುದಿಲ್ಲ.

೧. ಊರಿಂಗೆ ದಾರಿಯನು – ಊರಿಗೆ ದಾರಿಯನು
೨. ಆರು ತೋರಿದಡೇನು? – ಯಾರು ತೋರಿದರೇನು ?
೩. ಸಾರಾಯದ ನಿಜವ ತೋರುವ – ನಿಜತತ್ವದ ತಿರುಳನ್ನು ತೋರುವ, ಅನುಭಾವಿಸುವಂತೆ ಮಾಡಬಲ್ಲ
೪. ಗುರುವು ತಾ,ನಾರಾದಡೇನು ಸರ್ವಜ್ಞ – ಅಂತಹ ಗುರುವು ಯಾರಾದರೂ ಸರಿಯೇ

ವಿಸ್ತೃತ ವಿವರಣೆ:
________________

1) ಊರಿಂಗೆ ದಾರಿಯನು:

ಊರು ಎನ್ನುವುದು ನಾವು ಪಯಣ ಹೊರಟಾಗ ಸೇರಬಯಸುವ ಅಂತಿಮ ಜಾಗ. ಅದರಲ್ಲೂ ಹೊಸ ಊರಿಗೆ ಹೊರಟೆವೆಂದರೆ ಹೋಗುವ ದಾರಿ ಖಚಿತವಾಗಿ ತಿಳಿದಿರಬೇಕೆಂದಿಲ್ಲ. ಇಲ್ಲಿ ಊರು ಎನ್ನುವುದು ಕೇವಲ ಗ್ರಾಮ, ಪಟ್ಟಣವೆಂಬ ಅರ್ಥದಲ್ಲಿ ಬಳಕೆಯಾಗಿಲ್ಲ. ಅಂತಿಮವಾಗಿ ತಲುಪಬೇಕಾದ ಗಮ್ಯ ಎನ್ನುವ ಅರ್ಥದಲ್ಲಿ ಪ್ರಯೋಗಿಸಲ್ಪಟ್ಟಿದೆ. ಸಾಮಾನ್ಯರಾಗಲಿ, ಸಾಧನೆಯ ಹಾದಿಯಲ್ಲಿ ಹೊರಡುವ ಸಿದ್ಧ ಪುರುಷರಾಗಲಿ ಜೀವನ ಯಾತ್ರೆಯಲ್ಲಿ ಒಂದಿಲ್ಲೊಂದು ಗಮ್ಯದ ಬೆನ್ನಟ್ಟಿ ನಡೆದವರೇ. ಸಾಮಾನ್ಯರು ಐಹಿಕ ಸೌಖ್ಯದ ಬೆನ್ನಟ್ಟಿ ನಡೆದರೆ ಯೋಗಿ, ಸಿದ್ಧರು ಆಧ್ಯಾತ್ಮಿಕ ಸೌಖ್ಯವನ್ನರಸಿ ನಡೆಯುತ್ತಾರೆ. ಅವರವರ ಪ್ರಕಾರದ ಅಂತಿಮ ಸತ್ಯಾನ್ವೇಷಣೆ ಇದರ ಮುಖ್ಯ ಉದ್ದೇಶ. ಒಟ್ಟಿನಲ್ಲಿ ಯಾರ ಗಮ್ಯ (ಊರು) ಯಾವುದೇ ಆಗಲಿ ಅದಕ್ಕೆಂದೇ ಇರುವ ದಾರಿಯಲ್ಲಿ (ಮಾರ್ಗದಲ್ಲಿ) ಅವರು ಪಯಣಿಸಬೇಕಾಗುತ್ತದೆ. ಆ ದಾರಿಯ ಕಷ್ಟಾನಿಷ್ಠಗಳನ್ನರಿತು ಅದಕ್ಕೆ ತಕ್ಕ ಸಿದ್ಧತೆ ಮಾಡಿಕೊಂಡು ಹೊರಡಬೇಕಾಗುತ್ತದೆ.

2) ಆರು ತೋರಿದಡೇನು:

ಹಿಂದಿನ ಪದಗಳಲ್ಲಿ ಊರು ಅಥವಾ ಗಮ್ಯದ ದಾರಿಯ ಕುರಿತು ಪ್ರಸ್ತಾಪಿಸಿದ್ದಾಯ್ತು. ಆ ಮಾರ್ಗ ಖಚಿತವಾಗಿ ಗೊತ್ತಿರದ ಕಾರಣ ಅದರಲ್ಲಿರುವ ಅಡೆತಡೆಗಳು, ಅಪಾಯಗಳು, ಅನುಕೂಲಗಳು – ಒಂದೂ ಸರಿಯಾಗಿ ಗೊತ್ತಿರುವುದಿಲ್ಲ. ಗೊತ್ತಿಲ್ಲದ ದಾರಿಯಲ್ಲಿ ನಡೆಯಬೇಕಾದಾಗ ಒಂದೋ ಅದರ ನಕ್ಷೆಯಿರಬೇಕು ಅಥವಾ ಆ ದಾರಿ ಬಲ್ಲವರ ಸಹಚರ್ಯ ಅಥವಾ ಮಾರ್ಗದರ್ಶನವಿರಬೇಕು. ಸತ್ಯದ ಅನ್ವೇಷಣೆಗೆ ಹೊರಟಾಗಲಂತೂ ಅಪ್ಪಟ ಗುರುವಿನ ಕರುಣೆಯಿಲ್ಲದೆ ಆ ದಿಸೆಯ ರೂಪುರೇಷೆಗಳನ್ನು ಊಹಿಸುವುದು ಸಾಧ್ಯವಿಲ್ಲ. ಮೊದಲಿಗೆ ಆ ಗುರು ಯಾರೆಂದು ಹುಡುಕುವುದೇ ಒಂದು ದೊಡ್ಡ ಸಾಹಸವಾಗಿಬಿಡುತ್ತದೆ. ಇಂತಹ ಪರಿಸ್ಥಿತಿಯಿರುವಾಗ – ಯಾರು ಆ ಮುಂದಿನ ದಾರಿ ತೋರುತ್ತಾರೋ ಅವರೇ ಗುರು. ಆ ದಾರಿ ತೋರಬಲ್ಲ ಮಾರ್ಗದರ್ಶಕರು ಯಾರಾದರೇನು ? ಅವರಿಗೆ ಇಂತದ್ದೇ ಪದವಿ, ಹಣೆಪಟ್ಟಿ ಇರಬೇಕೆಂದಿದೆಯೇನು? ಮಾರ್ಗದರ್ಶಿಸಬಲ್ಲ ಸಾಮರ್ಥ್ಯ ಯಾರಲ್ಲಿದೆಯೋ ಅವರೇ ಗುರು ಎನ್ನುವರ್ಥದಲ್ಲಿ ಈ ಪದಗಳನ್ನು ಬಳಸಲಾಗಿದೆ.

3) ಸಾರಾಯದ ನಿಜವ ತೋರುವ:

ಮೊದಲೇ ಹೇಳಿದಂತೆ ಇಲ್ಲಿ ಸಾರಾಯವೆಂದರೆ ಅಂತಿಮ ಗಮ್ಯದ ಹೆಸರಲ್ಲಿ ಹುಡುಕುತ್ತಿರುವ ಸತ್ಯ. ಆ ಸತ್ಯವನ್ನರಿಯುವ, ಅದರ ತಿರುಳು-ಸತ್ವವನ್ನು ಮನಗಾಣಿಸಬಲ್ಲ, ಆ ಜ್ಞಾನವನ್ನು ನಿಸ್ವಾರ್ಥದಿಂದ ಧಾರೆಯೆರೆಯಬಲ್ಲ, ಆ ಪಥದಲ್ಲಾಗುವ ಅನುಭವವನ್ನು ಚಿಂತನೆಯಲ್ಲೇ ಗ್ರಹಿಸುವಂತಹ ಅನುಭಾವದ ಸಾಕ್ಷಾತ್ಕಾರಕ್ಕೆ ಆಸರೆಯಾಗುವ, ಆ ಮಾರ್ಗದ ನಿಜತತ್ವವನ್ನರಿತವನಾಗಿದ್ದು ಅದನ್ನು ಕಾಣುವಂತೆ ಮಾಡಬಲ್ಲ – ವ್ಯಕ್ತಿಯ ಸ್ವರೂಪ ಇಲ್ಲಿನ ಇಂಗಿತ. (ಇಲ್ಲಿ ಅನುಭಾವ ಎನ್ನುವ ಪದವನ್ನು ಅನುಭವದಷ್ಟೇ ಸಮಾನಾರ್ಥಕ ಅನುಭೂತಿ ನೀಡಬಲ್ಲಂತಹ ಭಾವನೆ ಎನ್ನುವರ್ಥದಲ್ಲಿ, ಭಾವನೆಯಲ್ಲೇ ನೈಜವನ್ನನುಭವಿಸುವಂತಹ ಸಾಮರ್ಥ್ಯ ನೀಡಬಲ್ಲ ವ್ಯಕ್ತಿ ಎನ್ನುವರ್ಥದಲ್ಲಿ ನೋಡಬೇಕು).

ಇನ್ನು ‘ಸಾರಾಯದ ನಿಜವ ತೋರುವ’ ಪದಪುಂಜದಲ್ಲಿ ಸಾರಾಯವನ್ನು ಹೆಂಡ, ಮದ್ಯ ಎಂದೇ ಪರಿಗಣಿಸಿದರೂ, ಆ ದುರ್ವ್ಯಸನದ ನಿಜವ ತೋರುವವ (ದುಷ್ಪರಿಣಾಮವನ್ನು ಮನವರಿಕೆ ಮಾಡಿಕೊಡುವವ) ಎಂದು ಅರ್ಥೈಸಬಹುದು.

4) ಗುರುವು ತಾ | ನಾರಾದಡೇನು ಸರ್ವಜ್ಞ :

ಮೇಲೆ ಹೇಳಿದ ದಾರಿಯನ್ನು ತೋರಿ, ಅದರತ್ತ ಸಮರ್ಥವಾಗಿ ನಡೆಸಬಲ್ಲ ಗುರುವು ಯಾರಾದರೇನು ? ಎಲ್ಲರು, ಎಲ್ಲವು ಸರಿಯೇ. ಅಲ್ಲಿ ಜಾತಿ-ಮತ-ಕುಲಭೇಧಗಳಾಗಲಿ, ಹಿರಿಯರು-ಕಿರಿಯರೆಂಬ ತಾರತಮ್ಯವಾಗಲಿ, ಪಂಡಿತ-ಪಾಮರರೆಂಬ ವ್ಯತ್ಯಾಸವಾಗಲಿ ಲೆಕ್ಕಕ್ಕೆ ಬರದು. ಅಷ್ಟೇಕೆ ಜೀವ-ನಿರ್ಜಿವವೆಂಬ ಅಂತರವೂ ಗಣನೆಗೆ ನಿಲುಕದು. ಆಧುನಿಕ ಜಗದಲ್ಲಿ ಇದಕ್ಕೊಂದು ಒಳ್ಳೆಯ ಉದಾಹರಣೆ – ಐಟಿ ಜಗ. ಎಷ್ಟೋ ವರ್ಷಗಳ ಅನುಭವವಿರುವ ಹಿರಿಯರೂ ತಮಗಿಂತ ಕಿರಿಯರಿಂದಲೋ, ಕಂಪ್ಯೂಟರಿನ ಸಹಾಯದಿಂದಲೋ ಹೊಸ ವಿಷಯವನ್ನು ಕಲಿಯುತ್ತಾರೆ. ಇಲ್ಲಿ ಯಾರು ಗುರು, ಯಾರು ಶಿಷ್ಯ ಎಂದು ವಯಸ್ಸಿನಿಂದ, ಅನುಭವದಿಂದ ನಿರ್ಧರಿಸಲಾಗುವುದಿಲ್ಲ.

ಒಟ್ಟಾರೆ ಕಲಿಸಿದಾತಂ ಗುರು – ಎನ್ನುವ ಒಂದು ಸರಳ ವಿವರಣೆಯಲ್ಲಿ ಈ ವಚನದ ಪೂರ್ಣಾರ್ಥವನ್ನು ಸಂಕ್ಷೇಪಿಸಿಕೊಳ್ಳಬಹುದು.


– ನಾಗೇಶ ಮೈಸೂರು
(ಚಿತ್ರ ಕೃಪೆ: ವಿಕಿಪಿಡಿಯಾ)