00837. ಅಲ್ಲಿರೋದು ನಮ್ಮನೆ……ಇಲ್ಲಿರೋದು ಸುಮ್ಮನೆ !


00837. ಅಲ್ಲಿರೋದು ನಮ್ಮನೆ……ಇಲ್ಲಿರೋದು ಸುಮ್ಮನೆ !
_________________________________________


ಅಲ್ಲಿರೋದು ನಮ್ಮನೆ……..(ಭಾಗ ೦೧)
_______________________________

ಅಲ್ಲೆಲ್ಲೊ ಇರುವ ‘ನಮ್ಮನೆ’ಯ ಅನುಷಂಗಿಕ ಅರಿವಿದ್ದೂ, ಲೌಕಿಕ ಹಾಗೂ ಐಹಿಕದ ಬೆನ್ನ ಹಿಂದೆ ಬೀಳುವ ಮನುಜ ಸ್ವಭಾವದ ಗೀಳಿನ ಕುರಿತಾದ ಲಹರಿ – ಅಲ್ಲಿರುವ ನಮ್ಮ ಮನೆಯನ್ನೆ ಕೇಂದ್ರೀಕರಿಸುತ್ತ ಗುನುಗುನಿಸಿದಾಗ.


ಅಲ್ಲಿರೋದು ನಿಜ ನಮ್ಮನೆ
ಇಲ್ಲಿರೋದು ಬರಿ ಸುಮ್ಮನೆ
ಮಾಡಿದರು ಕೆಲಸ ಗಮ್ಮನೆ
ಕಾಡುವುದು ಏಕೆ ಕೀಳರಿಮೆ ? ||

ಸುಮ್ಮನೆಗೇಕೊ ದೊಡ್ಡಮನೆ ?
ಅಲ್ಲಿರುವಾಗ ದೊಡ್ದರಮನೆ
ಹೇಗಿದ್ದರು ಬಿಟ್ಟೋಗುತಾನೆ
ಅದಕ್ಯಾಕೋ ತಡಿ ವಂಚನೆ  ||

ಎದ್ದು ಬಿದ್ದ್ಹೋಗೋ ದೇಹವೆ
ಯಾಕಿಷ್ಟು ಕಿರಿಕಿರಿ ದಾಹವೆ
ಮೂರಡಿ ಆರಡಿ ಗೊತ್ತಿರುವೆ
ಬೇಡದ್ದೆಲ್ಲವ ಮತ್ತ್ಹೊತ್ತಿರುವೆ ||

ಬ್ರಹ್ಮ ಕುಸುರಿ ಮನ ಲಹರಿ
ಹೇಳಿಸಲು ತೊಳೆ ಮುಸುರಿ
ತೊಳೆಯಲೇಗಿಲ್ಲಿ ಕರಿ ಚಹರಿ
ಹಣೆ ಬರಡತಿಗರಿ ತಪ್ಪು ಸರಿ ||

——————————————————————–
ನಾಗೇಶ ಮೈಸೂರು
——————————————————————–

…..ಇಲ್ಲಿರೋದು ಸುಮ್ಮನೆ ! (ಭಾಗ ೦೨)
________________________________

ಅಲ್ಲಿರೊದು ನಮ್ಮನೆಯಾದ್ದರಿಂದ ಇಲ್ಲಿರುವತನಕ ಇದ್ದೂ ಇಲ್ಲದಂತೆ, ಅಂಟಿಯು ಅಂಟದಂತೆ ಹೇಗೆ ಸಂಭಾಳಿಸಬೇಕೆಂಬ ಆಶಯದ ಬಿನ್ನಹ ಈ ಕವನದ ವಸ್ತು – ಇಲ್ಲಿರೋದು ಸುಮ್ಮನೆ. ಆದರೆ ಅದಕೆ ಅಡ್ಡಿಯಾಗುವ ಲೌಕಿಕಗಳ ಹುನ್ನಾರ, ಅಡಚಣೆ, ಚಂಚಲತೆಗಳ ಹೂರಣವೂ ಅಂತರ್ಗತ ಹಾಗೂ ಅನುರಣಿತ.


ಗಂಟು ಮೂಟೆಯೆ ನೂರೆಂಟು
ಇಟ್ಟಿಗೆ ಸಿಮೆಂಟು ಎಲ್ಲುಂಟು
ಸಬೂತು ಮುಚ್ಚಲು ಹೊರಟು
ಮೈಯೆಲ್ಲಾ ಆಗೊರಟೊರಟು ||

ಇಲ್ಲೆಲ್ಲ ಉಂಟು ಕನ್ನಡಿ ಗಂಟು
ಬೆನ್ನಟ್ಟಿ ಹೊರಟ ಭ್ರಮೆ ನಂಟು
ಖಾಲಿಯೆಡೆಗೂ ಊರು ಕಟ್ಟು
ಊರು ತುಂಬ ಮನೆ ಕಟ್ಟಿ ಬಿಟ್ಟು ||

ಆದರೇನು ಬಿಡುವ ಹಕ್ಕಿ ಗಣ
ಕೊಟ್ಟುಬಿಡಬೇಕು ಹಕ್ಕು ಋಣ
ಇದ್ದು ಇಲ್ಲದಂತಿರೆ ನಿಜಗುಣ
ನಗ್ಗಿ ಸೇರುವ ತನಕ ಶಿವಗಣ ||

ಶಾಶ್ವತವೆ ತಾತ್ಕಾಲಿಕವೆ ನವೆ
ಇಲ್ಲಿರುವ ತನಕ ಮೋಹಕವೆ
ಮದ ಮತ್ಸರ ಸಂವತ್ಸರ ಕಾವೆ
ವಿಶ್ರಮಿಸಲು ಆತ್ಮನ ಬಿಡುವೆ ||

ಸಂತುಲಿತ ಸಮಾನಾಂತರಕು
ಕೂತುಳಿಸಿಹ ಕುಲಧನ ಸರಕು
ಭವಿಸೋ ಭಾವಿಸೋ ಪಲುಕು
ನಮ್ಹಣೆಯಲಿ ಬರೆದಿರಬೇಕು ||

——————————————————————–
ನಾಗೇಶ ಮೈಸೂರು
——————————————————————–

ಚಿತ್ರ ಕೃಪೆ : ಅಂತರ್ಜಾಲ / ಫೇಸ್ಬುಕ್

00662…….ದಿಗಿಲುಟ್ಟಿಸಿ ಸ್ವಾಮಿ!(ಯಾರೋ ಕಟ್ಟಿದ ಭೂಮಿ ದಿಗಿಲುಟ್ಟಿಸಿ ಸ್ವಾಮಿ 2/2)


00662…….ದಿಗಿಲುಟ್ಟಿಸಿ ಸ್ವಾಮಿ!
______________________________
(ಯಾರೋ ಕಟ್ಟಿದ ಭೂಮಿ ದಿಗಿಲುಟ್ಟಿಸಿ ಸ್ವಾಮಿ 02/02)

   
Picture source from : https://en.m.wikipedia.org/wiki/File:The_Earth_seen_from_Apollo_17.jpg)

ಕೊರೆದು ಗೋರಿದಲ್ಲಿ ನೀರಾಳ
ಕೂರಲು ಬಿಡುವುದೇ ನಿರಾಳ
ಜಲ ಚಕ್ರ ಬಿಕ್ಕಳಿಸಿದ ಕವಳ
ಎಷ್ಟುಪ್ಪು ನೀರಿದ್ದೇನು ಹೇರಳ ||

ಕಾಲಗಳಿಗೆ ಅಕಾಲ ಸಂಗತಿ
ವರ್ಷಪೂರ ವರ್ಷದ ಅತಿಥಿ
ಬಿಸಿಲು ಚಳಿಗಾಲವೆ ಕೋತಿ
ಮಾಯ ಕಾಲ ಕಾಲ ಸರತಿ ||

ಸಾಲಂಕೃತ ನವೀನ ಕಟ್ಟಡ
ಎಲ್ಲೋಯ್ತು ಸುತ್ತ ಮರಗಿಡ
ಭಯವುಟ್ಟಿಸದೆ ಸುಖತಾಡ
ಐಷಾರಮ್ಯ ಕಣ್ಮುಚ್ಚಿಸಿ ಗೂಢ ||

ಎಷ್ಟು ಜತನದಿ ಕಟ್ಟಿಸಿ ಭೂಮಿ
ಬಳುವಳಿ ನಮಗಿತ್ತಾ ಆಸಾಮಿ
ಕಟ್ಟಬರದಿದ್ದರು ಹೊಸ ಭೂಮಿ
ಆಗಬಿಡದೆ ಇಳೆ ಮರುಭೂಮಿ ||

ನಾಜೂಕಾಟಿಕೆ ಮಗು ಕೈಲಿತ್ತು
ನೋಡುವಂತೆ ಆಟದ ಗಮ್ಮತ್ತು
ಆಜ್ಞಾನದಾಟ ಮುರಿದೆಸೆದ್ಹೊತ್ತು
ಕಣ್ತೆರೆದರೆ ತಪ್ಪುವುದೇ ಆಪತ್ತು ||

———————————————————————————-
ನಾಗೇಶ ಮೈಸೂರು
———————————————————————————–

=====================================================================================
ಕವಿ ಭಾವ: ಕಟ್ಟಿಸಿ ಕೈಗಿತ್ತ ಭೂಮಿಯನ್ನು ಜತನದಿ ಕಾಪಾಡಿಕೊಳ್ಳದೆ ಏನೇನೆಲ್ಲಾ ಧಾಂಧಲೆ ಮಾಡಿಕೊಂಡು ಕುಳಿತಿದ್ದೇವಲ್ಲಾ ಎಂಬ ದಿಗಿಲು ಆತಂಕಗಳ ಪದ ಸಂಕಲನ …..ದಿಗಿಲ್ಹುಟ್ಟಿಸಿ ಸ್ವಾಮಿ! ಇಲ್ಲಿ ಈಗಾಗಲೆ ಆಗಿಹೋಗಿರುವ ಅನರ್ಥಗಳನ್ನು ಎತ್ತಿ ತೋರಿಸುತ್ತ ಎಚ್ಚರಿಕೆಯ ಕರೆಗಂಟೆಯೊತ್ತುವ ಆಶಯ ಎದ್ದು ಕಾಣುತ್ತದೆ.
=====================================================================================

00659.ಯಾರೋ ಕಟ್ಟಿದ ಭೂಮಿ…….(01/02)


00659.ಯಾರೋ ಕಟ್ಟಿದ ಭೂಮಿ…….(01/02)
___________________________________
(ಯಾರೋ ಕಟ್ಟಿದ ಭೂಮಿ ದಿಗಿಲುಟ್ಟಿಸಿ ಸ್ವಾಮಿ)

  
(Picture source from : https://en.m.wikipedia.org/wiki/File:The_Earth_seen_from_Apollo_17.jpg)

ಯಾರೋ ಕಟ್ಟಿಸಿಬಿಟ್ಟ ಭೂಮಿ
ದಿಗಿಲುಟ್ಟಿಸಿ ಕಳವಳ ಸ್ವಾಮಿ
ಇರುವುದೆ ಇದ್ದಂತೆ ಆಸಾಮಿ ?
ಹೊತ್ತೋಗದೆಲೇ ತ್ಸುನಾಮಿ! ||

ಈಚೆಗೆ ಜಾಗತಿಕ ಶಾಖವಂತೆ
ಇಂಗಾಲದ ಹೆಜ್ಜೆ ಗುರುತಂತೆ
ಹಸಿರುಮನೆ ಪರಿಣಾಮ ಕಥೆ
ನಮಗೋ ದಿನ ದಿನದ ಚಿಂತೆ 😔||

ಆತಂಕವಾದಿಗಳ ಭೀತಿ ಮದ
ಎಲ್ಲಾಗುವುದೊ ಸ್ಪೋಟ ಸದಾ
ಭೀಕರತೆ ಸಂತೆ ಒಳಗಿಟ್ಟಪಾದ
ಗುಟುಕು ಗುಟುಕಾಗಿ ನುಂಗಿದ 😟||

ಪ್ಲಾಸ್ಟಿಕ್ಕುಮಯ ಜಗ ಹೃದಯ
ಆಧುನಿಕ ನಾಗರಿಕತೆ ಸಮಯ
ವಿದ್ಯುನ್ಮಾನ ತ್ಯಾಜ್ಯ ಪರಿಚಯ
ಪರಿಸರವೆ ಅಡವಿಟ್ಟಾ ವಿಷಯ😒 ||

ಎಸೆದಾಟದ ಕಸ ಕುಪ್ಪೆ ಗುಪ್ಪೆ
ಬೆಳೆಯುತಲೆ ತಟವಟ ತಪ್ಪೆ
ನಮ್ಮಾತ್ಮವಂಚನೆ ಮನ ಕಪ್ಪೆ
ಹೊಸತ ರೋಗಾಣು ಬಂದಪ್ಪೆ 😭||

– ನಾಗೇಶ ಮೈಸೂರು

ಕವಿ ಭಾವ: ಯಾರೊ ಪುಣ್ಯಾತ್ಮರು ಕಟ್ಟ್ಕೊಟ್ಟು ಹೋದ ಭೂಮಿಯಲ್ಲಿ ನಾವು ಜೀವನ ನಡೆಸಲು ಏನೆಲ್ಲ ಅಡ್ಡಿ ಆತಂಕಗಳು! ಕೆಲವು ಮಾನವ ಪ್ರೇರಿತ ಹಾಗೂ ಪೋಷಿತವಾದರೆ, ಇನ್ನು ಕೆಲವು ಪ್ರಕೃತಿ, ನಿಸರ್ಗದ ಆವೇಶದುರಿತ. ಅಂತ ಕೆಲವು ಆತಂಕಗಳ ಪಟ್ಟಿ – ಯಾರೊ ಕಟ್ಟಿಸಿದ ಭೂಮಿ….

00514. ಮರ ಅಜರಾಮರ ! (ಮಕ್ಕಳಿಗೆ)


00514. ಮರ ಅಜರಾಮರ ! (ಮಕ್ಕಳಿಗೆ)
_____________________________

ತನ್ನ ಹಣ್ಣ ತಾನೆ ತಿನ್ನದಷ್ಟು ನಿಸ್ವಾರ್ಥಿಯಾದ ಮರ ನಿಸರ್ಗ ನಿಯಮದಂತೆ ಸಂತತಿಯನ್ನು ಬೆಳೆಸುತ್ತಾ, ಮತ್ತದೆ ನಿಸ್ವಾರ್ಥತೆಯನ್ನು ಸತತ ಮುಂದುವರೆಸುತ್ತಾ ಸಾಗುತ್ತದೆ. ಅದೆ ಹೋಲಿಕೆಯಡಿ ಮನುಜಕುಲವನ್ನು ಇರಿಸಿದರೆ ನಿಸ್ವಾರ್ಥತೆ ಶೂನ್ಯದತ್ತ ನಡೆದರೆ, ಸ್ವಾರ್ಥಪರತೆ ನೂರರತ್ತ ಸಾಗುತ್ತಿರುವ ವಿಪರ್ಯಾಸ. ಇದರ ಸಂಗ್ರಹ ಭಾವ ಈ ಕವನ.
 

ತನ್ನ ಹಣ್ಣ
ತಾನೆ ತಿನ್ನದ ಮರ
ಆಗಲು ಅಜರಾಮರ |
ಹಕ್ಕಿಗೆ ಹೆಕ್ಕಿ
ತಿನ್ನೆ ಕೊಟ್ಟು ಸದರ
ಬೀಜ ಬಿದ್ದು ಬಂದು ಹೊರ ||

ಹತ್ತಿರವಿರೆ ಬೀಜ
ಮರಕೆ ಸ್ಪರ್ಧೆ ಬಹಳ
ಹುಟ್ಟಿಸಿ ದೊಂಬಿ ಗುಂಪು ಗೊಂದಲ |
ಸಹಾಯದ ಗಾಳಿ
ಹಾರಿಸಿ ತೂರಿಸಿ ಬೀಜ
ಹೊತ್ತೊಯ್ದು ಬಿಸಾಡಿ ಗೋಜ ||

ಎಲ್ಲೋ ಬಿದ್ದು
ಒದ್ದಾಡಿದ ಬೀಜ ಮಣ್ಣು
ಹೂತರೊಳಗೆ ಆಳದ ಒಳಗಣ್ಣು |
ಎಲ್ಲಿಂದಲೊ ಮಳೆ
ಕೊಚ್ಚಿ ತರುವ ನೀರು
ಕುಡಿವ ಭುವಿ ಜತೆ ಬೀಜ ಹೀರು ||

ಟಿಸಿಲು ಬಿಸಿಲು
ಮೊಳಕೆಯೊಡೆದು ಕಾಳು
ಬೇರೊಡೆದು ಸಸಿಯಾಗೆ ದಾಪುಗಾಲು |
ಬೆಳಕು ನೀರು
ಮೊಗೆಮೊಗೆದು ಗಾಳಿ
ಸರಸರ ಸಸಿ ಬೆಳೆದು ಮಹಾಕಾಳಿ ||

ಮತ್ತದೆ ಪ್ರವರ
ಹೊಸ ಹಣ್ಣು ಬೀಜ ಸಮರ
ಹೊಸ ಸಂತತಿ ಹಬ್ಬುವ ಸಂವತ್ಸರ |
ಹೀಗೆ ನಿಸ್ವಾರ್ಥಿ ಮರ
ತನ್ನ ಹಣ್ಣ ತಾನೇ ತಿನ್ನದ ತರ
ಪರರಿಗಿತ್ತು ತನ್ನ ಸಂತತಿ ಬೆಳೆಸೆ ವರ ||

ಮಾನವ ಜೀವನ ಸಾರ
ಅಲ್ಲ ಮರದ ತರ ಎಲ್ಲಕು ದರ
ಸ್ವಾರ್ಥದ ಗರ ಆದರು ಸಂತತಿ ಸ್ವರ |
ಮರ ಮನುಜ ತರ
ನಿಸ್ವಾರ್ಥಿ ಮರ ಸಂತತಿ ಅಮರ
ಸ್ವಾರ್ಥದಲಿ ಮನುಕುಲ ದಿಗಂಬರ ||

– ನಾಗೇಶ ಮೈಸೂರು

00467. ನಮ್ಮ ಸೃಜನಶೀಲತೆ ಮೂಲ (ಮಕ್ಕಳಿಗೆ)


00467. ನಮ್ಮ ಸೃಜನಶೀಲತೆ ಮೂಲ (ಮಕ್ಕಳಿಗೆ)

___________________________

ಜಗತ್ತಿನ ಎಲ್ಲೆಡೆ ಭಾರತೀಯ ಮೂಲದ ವಿದ್ಯಾವಂತ ಬಳಗ ತುಂಬ ಸೃಜನ ಶೀಲಾ, ಕ್ರಿಯಾಶೀಲಾ ಹಾಗೂ ಚಾತುರ್ಯಪೂರ್ಣ ಗುಂಪೆಂದೆ ಹೆಸರುವಾಸಿ. ಮಾಹಿತಿ ತಂತ್ರಜ್ಞಾನ, ತಂತ್ರಾಂಶ ಸಂಬಂಧಿ ಕ್ಷೇತ್ರಗಳಲ್ಲಿ ಇರುವ ನಮ್ಮ ಪ್ರತಿಭೆಗಳನ್ನು ಗಮನಿಸಿದರೆ ಇದರ ಅಗಾಧತೆಯ ಅರಿವಾಗುತ್ತದೆ. ನಮಗೆ ಇಂಥ ಸಹಜ ಚತುರತೆ, ಸೃಜನಾತ್ಮಕತೆ, ಸೃಜನಶೀಲ ಚಾಕಚಕ್ಯತೆ, ಕಲ್ಪನಾ ಚತುರತೆ – ಇವೆಲ್ಲ ಹೇಗೆ ಬಂದಿರಬಹುದು? ನಾವು ಚಿಕ್ಕಂದಿನಿಂದ ನೋಡುತ್ತ, ಕೇಳುತ್ತ ಬಂದಿರುವ ದೇವತೆಗಳ ಚಿತ್ರಣ, ಅಸಹಜವೆನಿಸದ ಅವರ ವೇಷಭೂಷಣ, ಆಕಾರ, ವಿಚಾರ – ಇತ್ಯಾದಿಗಳೆ ಇದರ ಮೂಲವಿರಬಹುದೆ ಎಂಬ ಜಿಜ್ಞಾಸೆಯ ಭಾವ ಈ ಪದ್ಯ. ನಮ್ಮ ದೇವಾನುದೇವತೆಗಳ ರೂಪಾಕಾರ ಕಥಾವೈವಿಧ್ಯ ವಿಸ್ತಾರಗಳು ತಾರ್ಕಿಕ ನೆಲೆಗಟ್ಟನ್ನು ಮೀರಿ, ಅತಿ ಕಲ್ಪನೆಯ ಭ್ರಾಮಕ ಲೋಕವೆಂಬ ಅನುಮಾನಕ್ಕೂ ಎಡೆಯಿರದಂತೆ ನೈಜ, ಸಹಜ ವಿಷಯವೆಂಬಂತೆ ನಮ್ಮ ಸ್ಮೃತಿಯಾಳದಲ್ಲಿ ದಾಖಲಾಗಿಬಿಟ್ಟಿರುವುದರಿಂದಲೊ ಏನೊ – ಅವುಗಳ ಪ್ರಭಾವ ನಮ್ಮ ಎಲ್ಲಾ ಚಿಂತನೆಯಲ್ಲಿ ನಮಗರಿವಿಲ್ಲದಂತೆ ಆಗಿಬಿಟ್ಟಿರುತ್ತದೆ. ಸೃಜನಶೀಲ ಸೃಷ್ಟಿಗೆ ಊಹಾತೀತ ಕಲ್ಪನೆಯೂ ಒಂದು ಮೂಲ ಸರಕಾದ ಕಾರಣ ಅದು ಹೆಚ್ಚಿನ ಶ್ರಮದ ಅಗತ್ಯವಿಲ್ಲದೆ ನಮ್ಮ ನಿಲುಕಿಗೆಟಕುವ ಪರಿಯಿಂದಾಗಿ, ಆ ಕ್ಷೇತ್ರಗಳಲ್ಲಿ ನಾವು ನೀರಿಗಿಳಿದ ಮೀನಿನಷ್ಟೆ ಸಹಜವಾಗಿ ಈಜಾಡಲು ಸಾಧ್ಯವಾಗಿರಬಹುದು. ಆ ಅನುಮಾನವನ್ನು ಕವನ ರೂಪದಲ್ಲಿ ನಿರೂಪಿಸಲೆತ್ನಿಸಿದ ರೂಪ ಈ ಕೆಳಗಿದೆ..

ನಮ್ಮ ಸೃಜನಶೀಲತೆ ಮೂಲ

______________________________________

ನಾವುಡೊ ಉಡುಗೆ ತೊಡುಗೆ, ದಿನ ಸಾದಾ ಸೀದ ನಡಿಗೆ
ಯಾವುದಾಗಿರಲಿ ನೆಲವಾಸ, ಹೆಚ್ಚು ಕಡಿಮೆ ಒಂದೆ ತರಹ ;
ನಮ್ಮ ದೇವರ ಕಥೆ ಹಾಗಲ್ಲ – ಉಡುಗೆ ತೊಡುಗೆಯೆ ಬಹಳ
ತರತರದಾ ವೈವಿಧ್ಯಮಯ, ನಮಗೊ ಬರಿ ಮಾಮೂಲಿ ಕಾಯ ||

ಹಲವು ಕೈ, ಹಲವು ತಲೆ ನಮ್ಮನ್ನು ಅಚ್ಚರಿಸುವುದಿಲ್ಲ
ಪ್ರತಿ ಕೈಗೊಂದು ಶಕ್ತಿ, ಕಥೆ ಕಲ್ಪನೆ ಕಟ್ಟಿ ಕೂತಿಹೆವಲ್ಲ !
ಮನುಜರಲಿ ಒಂದೇ ತಲೆ, ಎರಡು ಕೈಗಳೆ ಸರ್ವರಲು
ಒಂದು ಹೆಚ್ಚುಕಮ್ಮಿ ಆದರು, ಕರೆಯುವರೆ ಅಂಗವಿಕಲರು ||

ನಾವಿಡುವ ಟೋಪೀ ಕಿರೀಟ, ಬರಿನಾಟಕ ಪ್ರದರ್ಶನದಾಟ
ಬಿಸಿಲು-ನೆರಳು-ಚಳಿ-ಮಳೆಗೆ ತಲೆ ರಕ್ಷಿಸುವ ಸರಿ ಹೊದಿಕೆ ;
ನಮ್ಮ ದೇವರ ಕೇಸೇ ಬೇರೆ, ಕಿರೀಟಗಳ ತಲೆ ಹೊಳೆದಾಟ
ಏನಿರಲೀ ಇರದಿರಲಿ ಬೇರೆ, ಕಿರೀಟವಿಡದಿಹ ದೇವರಾರೆ ? ||

ನಮ್ಮಾಯುಧಗಳೆ ಬೇರೆ ತರ, ಪರವಾನಗಿ ಬೇಕು ಕೆಲವರ
ಚಾಕು ಚೂರಿ ಕೊಚ್ಚೆ ತರಕಾರಿ, ಆಗಬಹುದಾಗೀಗ ಸುಪಾರಿ ;
ನಮ್ಮನೆ ಕಂಡರೆ ಭೀತಿಯೊ, ನಮ್ಮ ದಂಡಿಸೊ ರೀತಿಯೊ
ಆಯುಧವಿಲ್ಲದಾ ದೇವರೆಲ್ಲಿ ? ಒಂದೊಂದ್ಹಲವತ್ತತ್ತು ಕೈಲಿ! ||

ನಮ್ಮ ದೇವರುಗಳ ಕಲ್ಪನೆ, ನಮಗೆ ಅತಿಶಯವೇನಿಲ್ಲ
ಹುಟ್ಟಿನಿಂದ ನಾವವರನೇ, ನೋಡುತಲೆ ಬಂದಿಹೆವಲ್ಲ |
ನೈಜ್ಯವೊ ಕಲ್ಪನೆಯೊ ಬಿಡಲ್ಲ, ನಂಬಿಕೆ ಪ್ರೇರೆಪಿಸಿತಲ್ಲ
ನಮ್ಮಿ ಸೃಜನಶೀಲತೆ ಮೂಲ, ನಮ್ಮ ದೇವರುಗಳೆ ಅಲ್ವಾ? ||

—————————————————————
ನಾಗೇಶ ಮೈಸೂರು
—————————————————————

ದೈವ, ಅಚ್ಚರಿ, ಸೋಜಿಗ, ತಾತ್ವಿಕ, ವಿಚಾರ, ವೈಚಾರಿಕ, ಸೃಜನಶೀಲತೆ, ಮೂಲ