00789. ಶಂಕೆ, ಅನುಮಾನ..


00789. ಶಂಕೆ, ಅನುಮಾನ..
__________________________

ಸಖ್ಯದಲಿ ಸೂಕ್ಷ್ಮ ಭಾವನೆಗಳದೆ ರಾಜ್ಯ.. 😊


ನೀ ನೋಡದಿರು ನೋಟ ಅನುಮಾನದಲಿ
ನಿನ್ನಾಣೆ ನಾ ನಿನ್ನ ಪ್ರೇಮದ ಬಲೆಯ ಮೀನು
ಯಾಕಿಂತ ಚಡಪಡಿಕೆ ? ಅನಸೂಯೆ ನೀನು
ನಿನ್ನೊಲವಿಗೆ ಬಿದ್ದ ಮೇಲೆ ಬೇರೆ ದಾರಿ ಇನ್ನೆಲ್ಲಿ ?

ಹಾದು ಹೋಗೊ ಸೊಬಗು ಮೀಟಿತೆ ಕಣ್ಣ
ಕಂಡ ಕಂಡ ಹೆಣ್ಣು ನಿನ್ನಂತಾದೀತೆ ಮನದನ್ನೆ ?
ಎದೆಯ ಪಲುಕು ಕುಲುಕಾಡಿಸೆ ಅಡ್ಡಾದಿಡ್ಡಿ
ನಿನ್ನ ಮಂದಹಾಸ ಮೊಗ ಇಳಿಸುತಲಿ ಭುವಿಗೆ..

ನೋಡೆ ಕುತೂಹಲವಲ್ಲ ಹೋಲಿಕೆಯ ಚಪಲ
ನಿನ್ನೆಲ್ಲ ಅಂದಚೆಂದ ತುಣುಕುಗಳ ಹುಡುಕಾಟ
ನಿನ್ನ ಕಣ್ಣು ಅವಳಲ್ಲಿ ಮೂಗು ಇವಳಲ್ಲಿ ಎನ್ನುತ
ತುಟಿ ಬಿಡದೆ ಹೋಲಿಕೆ ನಿನ್ನೆ ಗೆಲಿಸುತ ಸಮನೆ..

ಹಂಗಿಸದಿರೆ ಕರೆದು ಚಪಲ ಚಿತ್ತ ಚೆನ್ನಿಗರಾಯ
ಒಳಗೆಲ್ಲೊ ನೋಯುವುದು ಪರಿಹಾಸಕೂ ಸಲ್ಲ
ಕಾಣಲೆಲ್ಲೆಡೆ ನಿನ್ನ ತಡಕಾಡಿ ಮಿಡುಕೊ ಜೀವ
ಎಲ್ಲೆಲ್ಲೂ ಬರಿ ನಿನ್ನೆ ಕಂಡು ಬೆರಗಾಗುವ ಭಾವ..

ಬಲ್ಲೆ ನಿನ್ನ ಪ್ರೀತಿ ಆತಂಕದ ಮೂಲ ಪ್ರಿಯಸಖಿ
ಬರಿ ಮಾತಿದಲ್ಲ ಅಂತರಾಳ ನೀಡಿದ ವಾಗ್ದಾನ
ಎಣಿಸಿದರೇನು ಕೋಟಿ ನಕ್ಷತ್ರ ಗಗನದ ತುಂಬಾ
ಬೆಳಕಿಗೊಂದೆ ತಾರೆ ರವಿಗೆ ನೀ ಚಂದ್ರಮನಂತೆ..

– ನಾಗೇಶ ಮೈಸೂರು

(Picture source: http://goodmenproject.com/featured-content/is-your-relationship-doubt-normal-or-toxic-jnky/)